ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟನೆಯ ಬೆನ್ನಟ್ಟಿ...

Last Updated 20 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಅಭಿನಯದ ಗುಂಗಲ್ಲಿ ಒಮ್ಮೆ ಬಿದ್ದರೆಂದರೆ ಆ ಅಮಲಿನಿಂದ ಹೊರಬರುವುದು ತುಂಬಾ ಕಷ್ಟ. ಹಿರಿಯ ಕಲಾವಿದರೊಬ್ಬರು ‘ನಟನೆ ಎಂದರೆ ಜೀವಿಸುವುದು. ನಾನು ಮಾಡುವುದು ನಟನೆ, ನನ್ನಲ್ಲಿರುವ ಶ್ರೇಷ್ಠತೆಯೇ ನಟನೆ. ಒಂದು ವೇಳೆ ಇದೇ ನಟನೆಯಿಂದ ಹೆಚ್ಚಿನ ಆದಾಯ ಬರುತ್ತಿರಲಿಲ್ಲ ಎಂದಿಟ್ಟುಕೊಳ್ಳಿ, ಆದರೂ ನಾನು ನಟಿಸುತ್ತಿದ್ದೆ. ಯಾವುದೋ ಚಿಕ್ಕ ರಂಗತಂಡದಲ್ಲೊಬ್ಬನಾಗಿ’ ಎಂದಿದ್ದರು.

ಇದೇ ನಿಷ್ಠೆಯನ್ನು ಮೆರೆದು ಬದುಕಿದ, ಬದುಕುತ್ತಿರುವ ಕಲಾವಿದರು ಸಾಕಷ್ಟು ಜನರಿದ್ದಾರೆ. ಕೈತಪ್ಪಿದ ಅವಕಾಶಕ್ಕೆ ಕೊರಗಿ ಸರಿದವರು ಹಲವರಾದರೆ, ಹೊಸ ಅವಕಾಶಕ್ಕೆ ಅಡಿಪಾಯ ಹಾಕುತ್ತಾ ಬೆಳೆದವರು ಅನೇಕರು. ಅಂಥವರಲ್ಲಿ ಕನಸಿನ ಬಲೆ ಹೆಣೆಯುತ್ತಾ ಅದಕ್ಕೆ ‘ತಾಂಡವ ಕಲಾನಿಕೇತನ’ ಸಂಸ್ಥೆಯ ರೂಪು ಕೊಟ್ಟವರು ಮಂಜುನಾಥ ನಾಯ್ಕ.

ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಇವರದ್ದು ಪರಿಚಿತ ಮುಖ. ಉತ್ತರ ಕನ್ನಡದ ಕುಮಟಾದವರಾದ ಇವರಿಗೆ ಅಲ್ಲಿಯ ಪ್ರಖ್ಯಾತ ಕಲೆ ಯಕ್ಷಗಾನದಲ್ಲಿ ಚಿಕ್ಕಂದಿನಿಂದಲೂ ವಿಪರೀತ ಆಸಕ್ತಿ. ಅಮ್ಮ ಹಾಗೂ ಮಾವ ಕೂಡ ಯಕ್ಷಗಾನ ಕಲಾವಿದರು. ಹೀಗಾಗಿ ಕುಣಿತ, ಅಭಿನಯ, ಮಾತುಗಾರಿಕೆಗೆ ಮಾರುಹೋದ ಇವರನ್ನು ಮೊದಲ ಬಾರಿಗೆ ಇದೇ ಕ್ಷೇತ್ರದತ್ತ ಸೆಳೆದದ್ದು ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ಆದರ್ಶ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ ತರಬೇತಿ.

ಅಲ್ಲಿಂದ ಪ್ರಾರಂಭವಾದ ಇವರ ಪಯಣ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಮುಂದುವರಿಯಿತು. ‘ಚಪ್ಪಾಳೆ’, ‘ಪ್ರೇಮ ಖೈದಿ’, ‘ಸರ್ಕಲ್‌ ರೌಡಿ’, ‘ಮಾರ್ಕೆಟ್‌ ರೌಡಿ’, ‘ಬಾಲು’ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಹೊಸ ಹೊಸ ಸಿನಿಮಾ, ಶೂಟಿಂಗ್‌, ದಿನದಿಂದ ದಿನಕ್ಕೆ ಉನ್ನತ ಮಟ್ಟದ ಪಾತ್ರಗಳು ದಕ್ಕುತ್ತಿದ್ದುದು ಇವರನ್ನು ಖುಷಿಯಾಗಿರಿಸಿತ್ತು. ಆದರೆ ಇವರು ಎರಡನೇ ನಾಯಕ ನಟನಾಗಿ ಆಯ್ಕೆಯಾಗಿದ್ದ ಸಿನಿಮಾ ಬಿಡುಗಡೆಯ ಭಾಗ್ಯ ಕಾಣದೇ ಕಮರಿಹೋಯಿತು. ಆಗ ಎಲ್ಲಾ ಕಲಾವಿದರಂತೆ ಮಂಕಾಗಿದ್ದ ಇವರಿಗೆ ಕಲಾವಿದೆ ಶಾರದಾ ಹೊಸ ಚಿಂತನೆಯನ್ನು ಹುಟ್ಟುಹಾಕಿದರಂತೆ. ಅದರ ಪರಿಣಾಮವೇ ತಾಂಡವ ಕಲಾನಿಕೇತನ.

‘ಸಿನಿಮಾ ಸೋಲು ನನ್ನಲ್ಲಿನ ನಿರಾಸೆ ಹೆಚ್ಚಿಸಿತ್ತು. ಆದರೆ ಸಹಕಲಾವಿದೆಯಾದ ಶಾರದಾ ಅವರು ಅವಕಾಶ ಕೈತಪ್ಪಿದರೆ ಅಂಥ ನಾಲ್ಕಾರು ಕಲಾವಿದರಿಗೆ ಅವಕಾಶ ನೀಡುವ ವ್ಯಕ್ತಿಯಾಗಿ ನೀನು ಬೆಳೆಯಬೇಕು ಎಂದು ಸ್ಫೂರ್ತಿ ತುಂಬಿದರು. ಹೀಗಾಗಿ ಇಬ್ಬರೂ ಒಟ್ಟಿಗೆ ಸೇರಿ ನಾಟಕ ತಂಡ ಕಟ್ಟಿದೆವು. ಸದ್ಯ ನಮ್ಮ ತಂಡದಲ್ಲಿ 40ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಜನಪದ ನೃತ್ಯ, ನಾಟಕಗಳಿಗೆ ನಾವು ಹೆಚ್ಚು ಒತ್ತು ನೀಡುತ್ತೇವೆ. ಇಲ್ಲಿ ಕಲಿತ ಅನೇಕ ಕಲಾವಿದರಿಗೆ ಧಾರಾವಾಹಿ ಸಿನಿಮಾಗಳಲ್ಲಿ ಅವಕಾಶವೂ ಸಿಕ್ಕಿದೆ’ ಎಂದು ಮಂಜುನಾಥ್ ಖುಷಿ ಹಂಚಿಕೊಳ್ಳುತ್ತಾರೆ.

ನಗರಕ್ಕೆ ಬಂದು ‘ಕರಿಕಂಬಳಿ’, ‘ಮುಳ್ಳಿನ ಕಿರೀಟ’, ‘ಜೀವನ ಸಂಧ್ಯಾ’, ‘ಸಂತ ಕನಕದಾಸ’ ಮುಂತಾದ ಜನಪ್ರಿಯ ನಾಟಕಗಳನ್ನು ನೀಡುತ್ತಿರುವ ಈ ತಂಡ ಪ್ರತಿವರ್ಷ ಸ್ವಂತ ಊರಿನಲ್ಲಿ ‘ಕುಮಟಾ ಹಬ್ಬ’, ‘ಮಿರ್ಜಾನ್‌ ಉತ್ಸವ’, ‘ಜಾನಪದ ರಂಗೋತ್ಸವ’, ‘ತಾಂಡವೋತ್ಸವ’ಗಳನ್ನು ಹಮ್ಮಿಕೊಂಡಿತ್ತು. ಪ್ರತಿದಿನ ಹತ್ತು ಸಾವಿರಕ್ಕೂ ಹೆಚ್ಚು ವೀಕ್ಷಕರು ಬರುತ್ತಿದ್ದರು ಎಂಬುದು ಅವರಿಗೆ ಸಂತಸದ ವಿಷಯ.

ನಗರದವರಿಗಿಂತ ಹಳ್ಳಿಗರಲ್ಲಿ ಕಲಾಪ್ರೀತಿ ಜಾಸ್ತಿ ಎಂಬ ಸಮಾಧಾನ ಈ ತಂಡಕ್ಕೆ. ‘ನಟನೆಯ ಮೂಲ ರಂಗಭೂಮಿ. ಆದರೆ ರಂಗತಂಡ ಸೇರುವ ಯಾರಿಗೂ ನಾಟಕ ಕ್ಷೇತ್ರದಲ್ಲಿ ಉಳಿಯುವ, ಮಿಂಚುವ ಆಸಕ್ತಿಯೇ ಇಲ್ಲ. ನಿಮ್ಮ ಗುರಿ ಏನು ಎಂದು ಕೇಳಿದರೆ, ಧಾರಾವಾಹಿ, ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಸಿದ್ಧ ಉತ್ತರ ಬರುತ್ತದೆ. ಹೀಗಾಗಿ ರಂಗಭೂಮಿ ತರಬೇತಿ ಪಡೆಯಲು ಬಂದಿದ್ದೇನೆ ಎನ್ನುವವರೇ ಹೆಚ್ಚು. ಆದರೆ ಈವರೆಗೆ, ನಾನು ರಂಗಭೂಮಿಯಲ್ಲಿದ್ದು ಸಾಧನೆ ಮಾಡಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದವರು ಯಾರೂ ಇಲ್ಲ. ಕೆಲವೊಮ್ಮೆ ನಿರಾಸೆಯಾಗುತ್ತದೆ. ಅದೂ ಅಲ್ಲದೆ ನಾಟಕ ವೀಕ್ಷಿಸಲು ಬರುವವರ ಸಂಖ್ಯೆ ಕಡಿಮೆ ಇದೆ’ ಎಂಬ ನೋವು ಮಂಜುನಾಥ ಅವರಿಗೆ ಇದೆ.

ಅನೇಕ ಧಾರಾವಾಹಿ ಹಾಗೂ ಕೆಲವು ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದ ಶಾರದಾ ತುಮಕೂರಿನವರು. ನಟನೆಯನ್ನೇ ನೆಚ್ಚಿಕೊಂಡ ಇವರಿಗೆ ಯಾರದೋ ಕೈಕೆಳಗೆ ದುಡಿಯುವ ಧಾರಾವಾಹಿಗಿಂತ ಸ್ವಂತ ನಾಟಕ ತಂಡವನ್ನು ಕಟ್ಟುವುದರಲ್ಲಿ ಜೀವಂತಿಕೆ ಕಂಡಿದೆ.
‘‘ಅಭಿನಯವನ್ನು ಆಶ್ರಯಿಸಲೇಬೇಕಾದ ಪರಿಸ್ಥಿತಿ ನನಗೆ ಎದುರಾಗಿತ್ತು. ಹೀಗಾಗಿ ಧಾರಾವಾಹಿ ಸೇರೋಕೆ ಹೋದೆ. ಆಗ ಅವರು ಯಾವುದಾದರೂ ರಂಗತಂಡದಲ್ಲಿ ಕಲಿತು ಬಾ ಎಂದು ಕಳಿಸಿದ್ದರು.

ಕಲಿತೆ. ಕೊನೆಗೆ ‘ಬದುಕು’ ಧಾರಾವಾಹಿಯಿಂದ ‘ಅಮ್ಮ ನಾಗಮ್ಮ’ವರೆಗೆ ಸುಮಾರು 70 ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ಸುಮಾರು ಎಂಟು ಸಿನಿಮಾಗಳಲ್ಲಿ ಅಭಿನಯಿಸಿದೆ. ಆದರೆ ಇವೆಲ್ಲಕ್ಕಿಂತ ನನಗೆ ಹೆಚ್ಚು ಆಪ್ತವಾಗಿದ್ದು ರಂಗಭೂಮಿ. ಸ್ವಂತವಾಗಿ ಏನನ್ನಾದರೂ ಮಾಡಬೇಕೆಂದೆನಿಸಿ ನಾಟಕ ತಂಡ ಕಟ್ಟಿದೆವು. ನಾಟಕಗಳಲ್ಲಿ ಆಗಿಂದಾಗ್ಗೆ ಪ್ರತಿಕ್ರಿಯೆ ಸಿಗುವುದರಿಂದ ಬೆಳವಣಿಗೆಗೆ ಹೆಚ್ಚು ಅವಕಾಶ ಸಿಗುತ್ತದೆ’’ ಎನ್ನುತ್ತಾರೆ ಶಾರದಾ.

ರವೀಂದ್ರ ಕಲಾಕ್ಷೇತ್ರದಲ್ಲಿ ನಿರಂತರ ಅಭ್ಯಾಸದಲ್ಲಿ ತೊಡಗಿರುವ ಈ ತಂಡ ರಂಗಭೂಮಿ ತರಬೇತಿಗಳನ್ನೂ ನಡೆಸುತ್ತಿದೆ. ಅಂದಹಾಗೆ ಕಲಾವಿದ ಮಂಜುನಾಥ್‌ ಅವರಿಗೆ ಸಿನಿಮಾಗಳನ್ನು ಮಾಡುವ ಬಯಕೆಯಿದೆ. ಮಾಡುವುದಾದರೆ ಕಲಾತ್ಮಕ ಸಿನಿಮಾ ಮಾತ್ರ ಎನ್ನುವ ಅವರ ಬಳಿ ಕಥಾವಸ್ತು ಈಗಾಗಲೇ ತಯಾರಾಗಿದೆ. ಜನವರಿಯಿಂದ ಸಿನಿಮಾ ನಿರ್ಮಾಣವನ್ನು ಪ್ರಾರಂಭಿಸುವ ಇರಾದೆಯೂ ಇದ್ದು ಡಿಸೆಂಬರ್‌ನಲ್ಲಿ ಆಡಿಶನ್‌ ನಡೆಸಲಾಗುವುದು. ಮಂಜುನಾಥ್‌ ಅವರ ಸಂಪರ್ಕಕ್ಕೆ: 9379711357.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT