ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಲಕ್ಷ್ಮೀ ರೈ ರ್‍್ಯಾಂಪ್‌ಗೆ ಸದಾ ಸೈ

Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

ಫ್ಯಾಷನ್‌ ಕ್ಷೇತ್ರದಿಂದ ಚಿತ್ರರಂಗ ಪ್ರವೇಶಿಸಿದವರು ಹಲವರು. ಹೀಗಾಗಿಯೇ ಫ್ಯಾಷನ್‌ ಲೋಕವನ್ನು ಚಿತ್ರರಂಗದ ಕಿಟಕಿ ಎಂದೂ ಕರೆಯುತ್ತಾರೆ. ಆದರೆ, ಸಿನಿಮಾರಂಗ ಪ್ರವೇಶಿಸಿದ ನಂತರ ಬಹುತೇಕ ಮಂದಿ ಫ್ಯಾಷನ್‌ ಲೋಕದೊಂದಿಗಿನ ಕೊಂಡಿ ಕಳಚಿ ಕೊಳ್ಳುತ್ತಾರೆ. ಅಪರೂಪಕ್ಕೊಮ್ಮೆ ರ್‍ಯಾಂಪ್‌ ಮೇಲೆ ಕಾಣಿಸಿಕೊಂಡು ಪ್ರತಿಷ್ಠೆ ಕಾಯ್ದುಕೊಳ್ಳುತ್ತಾರೆ. ಆದರೆ, ಕನ್ನಡತಿ ಲಕ್ಷ್ಮೀ ರೈ ಇದಕ್ಕೆ ಅಪವಾದ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದರೂ ಫ್ಯಾಷನ್‌ ಜೊತೆಗಿನ ನಂಟನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ದೇಶ–ವಿದೇಶಗಳ ವಸ್ತ್ರ ವಿನ್ಯಾಸಕರೊಂದಿಗೆ ಒಡನಾಟ ಹೊಂದಿರುವ ಇವರು ಫ್ಯಾಷನ್‌ ಜಗತ್ತಿನ ಲ್ಲಾಗುವ ಪ್ರತಿಯೊಂದು ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಫ್ಯಾಷನ್‌ ಷೋಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಾರೆ. ಅಂದಹಾಗೆ ಅವರು ನಗರದಲ್ಲಿ ಈಚೆಗೆ ನಡೆದ ಪ್ರಥಮ ‘ಸ್ಟೈಲ್‌ ವೀಕ್‌ ಬೆಂಗಳೂರು’ ಫ್ಯಾಷನ್‌ ಷೋನ ಬ್ರಾಂಡ್‌ ಅಂಬಾಸಿಡರ್‌ ಆಗಿದ್ದರು. ಕಾರ್ಯಕ್ರಮದ ಮೊದಲ ದಿನವೇ ಹೆಸರಾಂತ ವಿನ್ಯಾಸಕರಾದ ಮೋನಾಪಾಲಿ ಅವರ ಸಂಗ್ರಹಗಳ (ಕಲೆಕ್ಷನ್‌) ಪ್ರದರ್ಶನದ ಷೋ ಸ್ಟಾಪರ್‌ ಆಗಿ ಭಾಗವಹಿಸಿ ಎಲ್ಲರನ್ನೂ ಬೆರಗುಗೊಳಿಸಿದ್ದರು. ಅವರೊಂದಿಗೆ ‘ಮೆಟ್ರೊ’ ನಡೆಸಿದ ಮಾತುಕತೆ ಇಲ್ಲಿದೆ.

ಸ್ಟೈಲ್‌ ವೀಕ್‌ ಭಾಗವಾಗಿ ಕೆಲಸ ಮಾಡಿದ ಅನುಭವ ಹೇಗಿತ್ತು?
ಬೆಂಗಳೂರಿನಲ್ಲಿ ನಡೆದ ಮೊದಲ ಷೋ ಇದು. ಇದರ ಬ್ರಾಂಡ್‌ ಅಂಬಾಸಿಡರ್‌ ಆಗುವುದು ಪ್ರತಿಷ್ಠೆಯ ವಿಷಯ. ಹೊಸ ಡಿಸೈನರ್‌ಗಳೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು. ಇಷ್ಟೊಂದು ದೊಡ್ಡ ಜವಾಬ್ದಾರಿ ನಿಭಾಯಿಸಿರುವುದಕ್ಕೆ ಬಹಳ ಖುಷಿ, ಹೆಮ್ಮೆಯಾಗುತ್ತಿದೆ.

ಇದಕ್ಕೆ ಹೇಗೆ ಸಿದ್ಧತೆ ಮಾಡಿಕೊಂಡಿರಿ?
ಯಾವುದೇ ರೀತಿಯ ಪೂರ್ವಸಿದ್ಧತೆ ಮಾಡಿಕೊಂಡಿರಲಿಲ್ಲ. ಮೇಲಿಂದ ಮೇಲೆ ಫ್ಯಾಷನ್‌ ಷೋಗಳಲ್ಲಿ ಭಾಗವಹಿಸುತ್ತೇನೆ. ಉತ್ತರ ಮತ್ತು ದಕ್ಷಿಣ ಭಾರತದ ಅನೇಕ ಹೆಸರಾಂತ ವಸ್ತ್ರ ವಿನ್ಯಾಸಕರೊಂದಿಗೆ ಕೆಲಸ ಮಾಡಿರುವುದರಿಂದ ಕಷ್ಟವೇನೂ ಆಗಲಿಲ್ಲ.

ಫ್ಯಾಷನ್‌ ಕುರಿತು ನಿಮಗೆ ಏನನ್ನಿಸುತ್ತದೆ?
ಫ್ಯಾಷನ್‌ ಮತ್ತು ಗ್ಲಾಮರ್‌ನ ಕಾಂಬಿನೇಷನ್‌ ಗೊತ್ತಿರಬೇಕಾದದ್ದು ಅತಿ ಮುಖ್ಯ. ಫ್ಯಾಷನ್‌ ಜಗತ್ತಿನಲ್ಲಿ ಪ್ರತಿದಿನ ಬದಲಾವಣೆ ಆಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಡಿಸೈನರ್‌ಗಳು ಬದಲಾಗುತ್ತಿರಬೇಕು. ನನ್ನ ಪ್ರಕಾರ ಎಲ್ಲಕ್ಕಿಂತ ಮುಖ್ಯವಾದದ್ದು ಎಂದರೆ  ನೀವು ಏನು ಮಾಡುತ್ತೀರಿ ಅದೇ ನಿಜವಾದ ಫ್ಯಾಷನ್‌. ಪ್ರತಿಯೊಬ್ಬರದು ಒಂದು ಸ್ಟೈಲ್‌ ಅಂತ ಇರುತ್ತದೆ. ಯಾವಾಗಲೂ ನಿಮ್ಮದೇ ಆಗಿರುವ ಸ್ಟೈಲ್‌ ಮಾಡಿ ತೋರಿಸಬೇಕು.

ಷೋ ಸ್ಟಾಪರ್‌ ಆಗಿದ್ದಕ್ಕೆ ಹೇಗೆನಿಸುತ್ತಿದೆ?
ಇದರಲ್ಲೇನೂ ವಿಶೇಷ ಇಲ್ಲ. ಪ್ರತಿವಾರ ಒಂದಿಲ್ಲೊಂದು ಫ್ಯಾಷನ್‌ ಷೋ, ಡಿಸೈನರ್‌ಗಳೊಂದಿಗೆ ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕುತ್ತೇನೆ. ಅನೇಕ ಸಲ ಸ್ಟಾಪರ್‌ ಆಗಿ ಪಾಲ್ಗೊಂಡಿದ್ದಿದೆ. ನಾನು ಹುಟ್ಟಿದ ಊರಿನಲ್ಲೇ ಕಾರ್ಯಕ್ರಮ ನಡೆದಿರುವುದಕ್ಕೆ ಖುಷಿಯಾಗುತ್ತಿದೆ.

ಕೋಲ್ಕತ್ತದ ವಿನ್ಯಾಸಕಿಯರಾದ ಮೋನಾಪಾಲಿ ಅವರ ‘ಸ್ವರ್ಣಕಮಲ’ ಕಲೆಕ್ಷನ್‌ ಹೇಗೆನಿಸಿತು? ಅವರ ಜೊತೆ ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿದ ಅನುಭವ ಹೇಗಿತ್ತು?
ಮೋನಾಪಾಲಿ ಅವರೊಂದಿಗೆ ಈ ಹಿಂದೆಯೂ ಅನೇಕ ಸಲ ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿದ್ದೇನೆ. ಆದರೆ, ಈಗ ಅವರು ಜಾಗತಿಕ ಮಟ್ಟದಲ್ಲಿ ಸಾಕಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಹೆಸರು ಮಾಡಿದ್ದಾರೆ. ಅವರ ಜೊತೆ ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕುವುದೇ ದೊಡ್ಡ ಗೌರವ, ಪ್ರತಿಷ್ಠೆಯ ವಿಷಯ. ಅದು ನಮಗೂ ದೊಡ್ಡ ವೇದಿಕೆ ಒದಗಿಸಿಕೊಡುತ್ತದೆ.
 
ಅವರ ಕಲೆಕ್ಷನ್‌ ಇಂಡೊ–ವೆಸ್ಟರ್ನ್‌ ಬಹಳ ಟ್ರೆಂಡಿ, ಎಲಿಗೆಂಟ್‌, ಲವ್ಲಿ ಮತ್ತು ಕಲರ್‌ಫುಲ್‌ ಆಗಿತ್ತು. ಅವರ ದಿರಿಸುಗಳು ಸಾಕಷ್ಟು ಹಗುರವಾಗಿದ್ದವು. ಈ ರೀತಿಯ ಉಡುಪುಗಳನ್ನು ಧರಿಸಲು ಸಾಮಾನ್ಯವಾಗಿ ಯಾವ ಮಹಿಳೆಯೂ ಇಷ್ಟಪಡುವುದಿಲ್ಲ. ಆದರೆ, ವೈಯಕ್ತಿಕವಾಗಿ ನನಗೆ ಆ ರೀತಿಯ ವಸ್ತ್ರಗಳು ಅಚ್ಚುಮೆಚ್ಚು.

ನಿಮ್ಮ ಫೇವರಿಟ್‌ ಔಟ್‌ಫಿಟ್‌ ಯಾವುದು?
ಅನಾರ್ಕಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT