ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆದಷ್ಟೂ ದಾರಿ: ಕನ್ನಡದ ಪುಣ್ಯ ಜೋಳದರಾಶಿ

Last Updated 29 ಜನವರಿ 2011, 18:30 IST
ಅಕ್ಷರ ಗಾತ್ರ

ಒಂದು ಕಾಲಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕಾವ್ಯವಾಚನ ಇರುತಿತ್ತು. ಈಗ ಅದು ಕಾಣೆಯಾಗಿದೆ. ಪ್ರಾಚೀನ ಕಾವ್ಯಗಳನ್ನು ಗಮಕದ ಮೂಲಕ ಕೇಳಿಸಿಕೊಳ್ಳುವುದು ಈಗ ಕಷ್ಟಕೂಡ. ಆದರೂ ಕಾವ್ಯವನ್ನು ಕೇಳಿಸಿಕೊಳ್ಳುವಾಗ ಓದಿನಲ್ಲಿ ಕಾಣದ ಅರ್ಥದ ಪದರಗಳು ಹೊಳೆಯಬಲ್ಲವು. ಹಾಗೆ ಹೊಸ ಅರ್ಥಗಳನ್ನು ಕಾಣಿಸುವಂತೆ ಹಾಡುತ್ತಿದ್ದವರಲ್ಲಿ ಜೋಳದರಾಶಿಯ ದೊಡ್ಡನಗೌಡರೂ ಒಬ್ಬರು. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಅವರು ಸಾವಿರಾರು ಸಮ್ಮೇಳನ, ಸಾಹಿತ್ಯೋತ್ಸವ, ಜಾತ್ರೆಗಳಲ್ಲಿ ಕಾವ್ಯಗಾಯನ ಮತ್ತು ಪ್ರವಚನ ಮಾಡಿದವರು. ಇವುಗಳಲ್ಲೆಲ್ಲ 1935ರಲ್ಲಿ ಹಂಪಿಯಲ್ಲಿ ಏರ್ಪಟ್ಟಿದ್ದ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ 500ನೇ ವರ್ಷದ ಕಾರ್ಯಕ್ರಮದಲ್ಲಿ, ಉಚ್ಚಕಂಠದಲ್ಲಿ ಹರಿಹರನ ರಚನೆಯನ್ನು ಹಾಡಿ ಸಭೆಯ ಸದ್ದನ್ನಡಗಿಸಿದ ಪ್ರಸಂಗವು ಖ್ಯಾತವಾಗಿದೆ. ತರೀಕೆರೆಯಲ್ಲಿ ನಡೆದ ಪ್ರಥಮ ಜನಪದ ಸಾಹಿತ್ಯ ಸಮ್ಮೇಳನದಲ್ಲಿ, ತಮ್ಮ ಕಾವ್ಯವಾಚನ ಕೇಳಿಸಿಕೊಳ್ಳದೆ ಗದ್ದಲ ಮಾಡುತ್ತಿದ್ದ ಸಭಿಕರತ್ತ ಕೈಲಿದ್ದ ಗ್ರಂಥದಿಂದಲೇ ಬೀಸಿ ಹೊಡೆದ ಪ್ರಸಂಗವೂ ಅಷ್ಟೇ ಖ್ಯಾತವಾಗಿದೆ. ಸುಪ್ರಸಿದ್ಧ ರಂಗನಟರೂ ಆಗಿದ್ದ ಗೌಡರ ಅಭಿನಯ ಪ್ರತಿಭೆ, ನಮ್ಮ ಕಾಲದ ಅನೇಕರಿಗೆ ನೋಡಲು ಸಿಕ್ಕಲಿಲ್ಲ. ಆದರೆ ಅವರ ಗಾಯನ ಪ್ರತಿಭೆಯನ್ನು ಕೊನೆಗಾಲದಲ್ಲಿ ಹೋಗಿ ಕೇಳಿ ಅನುಭವಿಸುವ ಪ್ರಸಂಗ ನನಗೊದಗಿ ಬಂದಿತ್ತು. ಆ ಪ್ರಸಂಗ, ಗೌಡರು ಹುಟ್ಟಿ (1910) ಶತಮಾನ ತುಂಬಿರುವ ಈ ಹೊತ್ತಲ್ಲಿ ನೆನಪಾಗುತ್ತಿದೆ. 

1992ನೇ ಇಸವಿಯಿರಬೇಕು. ಒಂದು ಡಾಕ್ಯುಮೆಂಟರಿಗಾಗಿ ಗೌಡರನ್ನು ನಾನು ಸಂದರ್ಶನ ಮಾಡಬೇಕಿತ್ತು; ಹಿಂದಿನ ದಿನ ಸಂಜೆಯೇ ಜೋಳದರಾಶಿಗೆ ಹೋಗಿ ಬಿಡದಿ ಮಾಡಿದೆ. ಬಳ್ಳಾರಿ ಸೀಮೆಯ ಸಾಂಪ್ರದಾಯಕ ಹಳ್ಳಿಯಾದ ಜೋಳದರಾಶಿಯು, ಕರ್ನಾಟಕ-ಆಂಧ್ರ ಗಡಿಯ ಕೊನೆಯ ಊರು. ಹೆಸರಿಗೆ ತಕ್ಕಂತೆ ಊರ ಸುತ್ತಮುತ್ತ ಮಕ್ಕಳು ಉಸುಕಿನಾಟಕ್ಕೆ ಮಾಡಿಕೊಂಡ ದಿಬ್ಬಗಳಂತೆ ಪುಟ್ಟಪುಟ್ಟ ಬೆಟ್ಟಗಳು. ನಾನೊಂದು ಬೆಟ್ಟ ಹತ್ತಿ ಅದರ ಮೇಲಿಂದ ಮುಳುಗು ಸೂರ್ಯನ ಹೊಂಬೆಳಕಲ್ಲಿ ಊರನ್ನು ಹಕ್ಕಿನೋಟದಲ್ಲಿ ಗಮನಿಸಿದೆ.

ಚಿತ್ರಬಿಡಿಸಿದಂತೆ ಮಣ್ಣಿನ ಮಾಳಿಗೆಯ ಮನೆಗಳು. ಮಾಳಿಗೆ ಮೇಲೆ ಬೆಳಕಿಂಡಿಗೆಂದು ಮಾಡಿದ ಗೂಡುಗಳು ಮನೆತೊಟ್ಟ ಕಿರೀಟಗಳಂತೆ ಕಾಣುತ್ತಿದ್ದವು. ಸಂಜೆ ಅಡುಗೆಗೆ ಒಲೆ ಹಚ್ಚಿದ್ದ ಕಾರಣ, ಬೆಳ್ಳನೆಯ ಹೊಗೆ ಮನೆಗಳಿಂದ ಹೊರಟು ಊರ ತಲೆಯ ಮೇಲೆ ‘ಮಂಜಿನ ಸೆರಗ’ನ್ನು ಹಗುರವಾಗಿ ಹೊದಿಸುತ್ತಿತ್ತು. ಕೆಲವರು ಪುಟ್ಟ ಚಂದ್ರನಂತಿರುವ ಬಿಸಿರೊಟ್ಟಿಯನ್ನು ಕೈಯಲ್ಲಿ ಹಿಡಿದು, ಅದರ ಮೇಲೆ ಚಟ್ನಿ, ಉಳ್ಳಾಗಡ್ಡೆ ಇಟ್ಟುಕೊಂಡು, ರೊಟ್ಟಿಯನ್ನು ಮುರಿದು ತಿನ್ನುತ್ತ, ಮಾಳಿಗೆಯ ಮೇಲಕ್ಕೆ ಏರಿಬಂದಿದ್ದರು. ದನ ಆಡು ಕುರಿ ಕೋಳಿಗಳನ್ನು ಕೊಟ್ಟಿಗೆ-ಗೂಡಿಗೆ ಕೂಡುವ ಶಬ್ದವು ಬೆಟ್ಟದ ಮೇಲಕ್ಕೂ ಹತ್ತಿಬಂದು ಕಿವಿಗೆ ಬಡಿಯುತ್ತಿತ್ತು. ದನಕುರಿಗಳ ಗಂಜಳ-ಹಿಕ್ಕೆಗಳ ಮಧುರವಾದ ಕಟುಗಂಪು ಮೂಗಿಗೆ ಬಂದು ತಿಕ್ಕುತ್ತಿತ್ತು. ಊರ ನಡುವೆ ರಾಮೇಶ್ವರ ಗುಡಿ. ಊರಾಚೆ ಹಸಿರುಹೊಲದ ಹಣೆಗೆ ಬಳಿದ ವಿಭೂತಿ ಪಟ್ಟೆಯಂತೆ ರೈಲುಹಳಿ. ಕಪ್ಪನೆ ಪರದೆ ಹಾಸಿದಂತೆ ಊರೊಳಗೆ ಹಾದುಹೋದ ಅನಂತಪುರ ರಸ್ತೆ. ತೀರ ಕತ್ತಲಾದ ಮೇಲೆ ಬೆಟ್ಟವಿಳಿದು ಬಂದೆ.

ಎಂಬತ್ತೆರಡು ವರ್ಷದ ಗೌಡರು ತಮ್ಮ ದೊಡ್ಡಮನೆಯ ಮಾಳಿಗೆ ಖೋಲಿಯಲ್ಲಿ ವಾಸವಿದ್ದರು. ಅವರ ಪಿಆರ್‌ಒ ತರಹ ಇದ್ದ ಸೋದರಳಿಯ ಚನ್ನವೀರಗೌಡರು, ಗೌಡರ ದಿನಚರಿಯನ್ನೂ ಸ್ವಭಾವವನ್ನೂ ವಿವರಿಸಿದರು. ಅವರ ಪ್ರಕಾರ- ಗೌಡರು ರಾತ್ರಿ ಯಾರನ್ನೂ ಭೇಟಿಯಾಗುವುದಿಲ್ಲ. ಅವರಿಗೆ ಕೆಲವು ದೈಹಿಕ ತೊಂದರೆಗಳಿದ್ದು, ಬೆಳಗಿನ ನಿತ್ಯಕರ್ಮಗಳು ಸಲೀಸಾದರೆ, ಇಡೀ ದಿನ ಲವಲವಿಕೆಯಿಂದ ಇರುತ್ತಾರೆ. ಇಲ್ಲದಿದ್ದರೆ ಸರಿಯಾಗಿ ಯಾರ ಜತೆಯೂ ಮಾತಾಡುವುದಿಲ್ಲ. ಸಿಡುಕುತ್ತಿರುತ್ತಾರೆ. ‘ಅವರ ಮೂಡು ನಮಗೆ ಗೊತ್ತಾಗುವುದು ಹೇಗೆ?’ ಎಂದು ಕೇಳಿದೆ. ‘ಅವರು ನಸುಕಿಗೇ ಎದ್ದು ಹರಿಹರನ ಪಂಪಾಶತಕವನ್ನು ಹಾಡಲು ಆರಂಭಿಸಿದರೆ ಎಲ್ಲ ಆರಾಮು ಎಂದು ತಿಳಿಯಬೇಕು’ ಎಂದರವರು. ನಾವು ಗೌಡರು ಶತಕ ಹಾಡುವಂತಾಗಲೆಂದು ಪಂಪಾಪತಿಯಲ್ಲಿ ಪ್ರಾರ್ಥಿಸುತ್ತ ಮಲಗಿದೆವು. ಉದಯದಲ್ಲಿಯೇ ಎದ್ದು ಬಾಗಿಲ ಬಳಿ ಕ್ಯಾಮರ ಸಜ್ಜಾಗಿಟ್ಟುಕೊಂಡು, ಗೌಡರ ಗಾಯಕಿ ಸೆರೆಹಿಡಿಯಬೇಕು. ಬಳಿಕ ಊರಿನ ಜನ ಸಗಣಿ ಎತ್ತುವ, ಅಂಗಳ ಗುಡಿಸುವ, ರಂಗೋಲಿ ಹಾಕುವ, ಚೊಂಬು ತೆಗೆದುಕೊಂಡು ಊರಾಚೆ ಹೋಗುವ, ಹಾಲುಕರೆವ ಚಟುವಟಿಕೆ ನಡೆಸುತ್ತಿರುವಾಗ, ಗೌಡರನ್ನು ಬೀದಿಯಲ್ಲಿ ನಡೆಸುತ್ತ, ಅವರು ಜನರ ಜತೆ ಮಾತಾಡುವ ದೃಶ್ಯಗಳನ್ನು ಚಿತ್ರೀಕರಿಸಬೇಕು. ಬಳಿಕ ಮನೆಯಲ್ಲಿ ಅವರ ಜತೆ ಮಾತುಕತೆ- ಇದು ನಮ್ಮ ಯೋಜನೆಯಾಗಿತ್ತು. 

ಕೋಳಿಕೂಗುವ ಹೊತ್ತಿಗೆ ಎದ್ದು ಸಿದ್ಧರಾಗಿ ಗೌಡರ ಖೋಲಿಯ ಬಳಿ ನಿಂತೆವು. ನಮ್ಮ ಅದೃಷ್ಟಕ್ಕೆ 6 ಗಂಟೆ ಹೊತ್ತಿಗೆ ಸರಿಯಾಗಿ, ಒಳಗಿಂದ ಪಂಪಾಶತಕದ ಪ್ರಚಂಡ ಸೊಲ್ಲು, ಗ್ರಾಮದ ನೀರವ ಮೌನವನ್ನು ಸೀಳಿಕೊಂಡು ಹೊರಚಿಮ್ಮಿತು. ಚನ್ನವೀರಗೌಡರು ನಿಧಾನವಾಗಿ ಬಾಗಿಲು ತೆಗೆದು, ಮೂಡಣ ದಿಕ್ಕಿನ ಗವಾಕ್ಷವೊಂದನ್ನು ತೆರೆದರು. ಹೊಂಬೆಳಕಿನ ಎರಕವು ಹಾದು ಗೌಡರ ಮುಖದ ಮೇಲೆ ಬಿದ್ದಿತು. ದೊಡ್ಡಕಾಯ. ಬೆಳ್ಳಿಗೂದಲು. ಹಣೆತುಂಬ ಬಳಿದ ವಿಭೂತಿ. ಸಿಡುಕು ಸೂಚಿಸುವಂತಹ ತುಟಿ ಹಾಗೂ ಗಿಣಿಮೂಗು. ಗೌಡರ ಗಾಯನ ಭಂಗಿಯನ್ನು ವಿವಿಧ ಕೋನಗಳಿಂದ ಶೂಟ್ ಮಾಡಲಾಯಿತು. ನಟರಾಗಿದ್ದ ಗೌಡರಿಗೆ ಕ್ಯಾಮೆರಾ ಕೆಲಸ ಮಾಡುತ್ತಿರುವುದು ಗೊತ್ತಾಗುತ್ತಿತ್ತು. ತಮ್ಮ ಪಾಡಿಗೆ ತನ್ಮಯರಾಗಿ ಬಹಳ ಹೊತ್ತು ಹಾಡಿದರು. 

ಊರೆಲ್ಲ ಸುತ್ತಾಡಿ ಬಂದ ಬಳಿಕ ಗೌಡರ ಜತೆ ಮಾತುಕತೆ ಶುರುವಾಯಿತು. ಅವರಿಗೆ ಕಿವಿ ಮಂದ. ಪಕ್ಕದೂರಿಗೆ ಕೇಳಿಸುವಷ್ಟು ದೊಡ್ಡ ದನಿಯಲ್ಲಿ ಒದರುತ್ತ ನಾನು ಪ್ರಶ್ನೆ ಕೇಳುತ್ತಿದ್ದೆ. ಅವರೂ ಅಷ್ಟೇ ರಭಸದಲ್ಲಿ ಉತ್ತರಿಸುತ್ತಿದ್ದರು. ಅವರ ವ್ಯಕ್ತಿತ್ವವನ್ನು ಹಿಡಿಯಲು ನನ್ನ ಪ್ರಶ್ನೆಗಳಿಗೆ ಸಾಧ್ಯವಾಗಲಿಲ್ಲ. ಕೆಲವು ಪ್ರಶ್ನೆಗಳಂತೂ ಅಸಂಬದ್ಧವಾಗಿದ್ದವು. ಉದಾಹರಣೆಗೆ, ‘ನೀವು ಯಾಕೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲಿಲ್ಲ?’ ಎಂದು ಕೇಳಿದೆ. ಅದಕ್ಕವರದು ‘ನಮ್ಮೂರಾಗೆ ಇದ್ದದ್ದೇ ಒಷ್ಟು. ನಾನೇನ್ ಮಾಡನ?’ ಎಂದುತ್ತರಿಸಿದರು. ಕೊನೆಗೆ ಕೊಂಚ ಮುಜುಗರ ಹುಟ್ಟಿಸುವ ಪ್ರಶ್ನೆ ಕೇಳಿದೆ: ‘ಮನೆಯಲ್ಲಿ ಕಾರ್ಲ್‌ಮಾರ್ಕ್ಸ್ ಫೋಟಾ ಹಾಕ್ಕೊಂಡಿದೀರಿ. ನೀವು ನೋಡಿದರೆ ದೊಡ್ಡ ಭೂಮಾಲಿಕರು. ಇದು ವೈರುಧ್ಯ ಅಲ್ಲವಾ?’. ನನ್ನ ಈ ಪ್ರಶ್ನೆ ಸುತ್ತ ನೆರೆದಿದ್ದವರಿಗೆ ಅಷ್ಟು ಹಿಡಿಸಲಿಲ್ಲ. ‘ಏ ಎಂತಹ ಮಾತಾಡ್ತೀರಿ?’ ಎಂದು ಜಬರಿಸಿದರು ಅವರು. ಆದರೆ ಗೌಡರು ತಾಳ್ಮೆ ಕಳೆದುಕೊಳ್ಳದೆ- ‘ಕೇಳಲಿ ಬಿಡ್ರಪ್ಪಾ. ಪಾಪ! ಇನ್ನೂ ಆತ ಸಣ್ಣಾತ. ನೋಡಪ್ಪಾ, ಅದೊಂದು ಪೋಟ. ಅದರ ಜಾಗದಾಗ ಅದೈತಿ. ಜಮೀನಿರೋ ತಾವ ಜಮೀನದಾವೆ. ಇಂದಿರಾಗಾಂಧಿ 400 ಎಕರೆಯೊಳಗೆ ಎಲ್ಲ ಕಿತ್ಕಂಡು ಐವತ್ತೆಕರೆ ಉಳಿಸಿದಾಳೆ. ಅದೂ ಬಿಡು ಅಂತಿಯಾ?’ ಎಂದರು. ಅವರ ಆತ್ಮಕಥೆಯಲ್ಲೂ ಟೆನೆನ್ಸಿ ಆಕ್ಟಿನಲ್ಲಿ ಜಮೀನು ಕಳೆದುಕೊಂಡ ಬಗ್ಗೆ ಒಂದು ಬಗೆಯ ಸಂತಾಪವಿದೆ. ದೊಡ್ಡ ವಾಡೆಯ ಯಜಮಾನನಾಗಿದ್ದರೂ ತನ್ನ ಸಂಪತ್ತಿನ ಬಗ್ಗೆ ಮುಜುಗರ-ತಲ್ಲಣ ಇಟ್ಟುಕೊಂಡು ಬದುಕಿದವರಲ್ಲಿ ಕತೆಗಾರ ಬಿ.ಸಿ.ದೇಸಾಯಿಯವರು ಒಬ್ಬರು ಅನಿಸುತ್ತದೆ.

ಹಾಗೆಂದು ಗೌಡರು ತಮ್ಮ ಗೌಡಕಿಯಿಂದ ದರ್ಬಾರು ನಡೆಸಿದ ಘಟನೆಗಳು ಬಹಳ ಕಡಿಮೆ; ಸಿನಿಮಾ, ನಾಟಕ, ಪ್ರವಚನ ಮತ್ತು ಕಾವ್ಯಗಾಯನಗಳ ಹುಚ್ಚನ್ನು ಹಚ್ಚಿಕೊಂಡು, ಊರೂರು ತಿರುಗುತ್ತ ಅವರು ಪಟ್ಟಪಾಡಿನ ಕತೆಗಳೇ ಅಧಿಕ. ಕರೆದಲ್ಲೆಲ್ಲ ಹೋಗಿ ಹಾಡುತ್ತ ನಟಿಸುತ್ತ ಇಡೀ ಕರ್ನಾಟಕವನ್ನೇ ಸುತ್ತಾಡಿದ ಗೌಡರು, ಕೀರ್ತಿ ಜನಪ್ರಿಯತೆಗಳಷ್ಟೇ ಅಪಮಾನ ಮುಜುಗರಗಳನ್ನೂ ಅನುಭವಿಸಿದರು. ಕಾರ್ಯಕ್ರಮ ಮುಗಿದ ಬಳಿಕ ಕೇಳುವವರಿಲ್ಲದೆ ಅನಾಥಭಾವ ಅನುಭವಿಸುವುದು, ರೈಲ್ವೇ ಸ್ಟೇಶನ್ನುಗಳಲ್ಲಿ ಮಲಗುವುದು, ಗಾಡಿಖರ್ಚು ಇಲ್ಲದೆ ಒದ್ದಾಡುವುದು, ಉಪವಾಸ ಇರುವುದು, ಅಗೌರವವಾದ ಕಡೆ ಕೋಪದಿಂದ ಸಭಾತ್ಯಾಗ ಮಾಡುವುದು, ಕಾವ್ಯಾಸಕ್ತರಿಲ್ಲದ ಕಡೆ ಹಾಡುವಾಗ ಯಾಕಾದರೂ ಬಂದೆ ಎಂದು ಪರಿತಪಿಸುವುದು, ದಣಿದು ಹೈರಾಣಾಗಿ ಊರಿಗೆ ಬಂದು ಬೀಳುವುದು- ಇಂತಹ ಘಟನೆಗಳಿಂದ ಅವರ ಆತ್ಮಚರಿತ್ರೆ ತುಂಬಿಹೋಗಿದೆ. ಅವರೊಮ್ಮೆ ಮಠವೊಂದರಲ್ಲಿ ‘ಶೂನ್ಯಸಂಪಾದನೆ’ಯಲ್ಲಿ ಬರುವ ಮಹಾದೇವಿಯಕ್ಕ ಮನೆ ಬಿಟ್ಟುಹೋಗುವ ಪ್ರಸಂಗವನ್ನು ಹಾಡುತ್ತಾರೆ. ಸಭೆಯ ಅಧ್ಯಕ್ಷತೆ ವಹಿಸಿದ್ದ ಮಠಾಧಿಪತಿಗೆ ಅದು ಹಿಡಿಸುವುದಿಲ್ಲ. ಅವರು ಅಕ್ಕನನ್ನು ಗಂಡನನ್ನು ಬಿಟ್ಟ ಅನೈತಿಕಳೆಂದೂ ಅಂತಹವಳನ್ನು ಹಾಡಿಹೊಗಳುತ್ತಿರುವ ದೊಡ್ಡನಗೌಡರು ಒಬ್ಬ ಅಧರ್ಮಿಯೆಂದೂ ಖಂಡಿಸುತ್ತಾರೆ. ಅಧೋಲೋಕಕ್ಕೆ ಸೇರಿದ ಸಂಗೀತ ಮತ್ತು ರಂಗಭೂಮಿಯಲ್ಲಿ ದುಡಿದ ಬಹುತೇಕರ ಬಾಳಲ್ಲಿ ಇಂತಹ ಅಪಮಾನದ ವಿವರಗಳಿವೆ. ಈ ಕಲೆಗಳ ಬಗ್ಗೆ ನಮ್ಮ ಸಮಾಜದಲ್ಲಿ ವಿಚಿತ್ರವಾದ ಆಕರ್ಷಣೆಯಿದೆ; ಕಲಾವಿದರ ಬಗ್ಗೆ ಅಷ್ಟೇ ಸಸಾರವಾದ ಭಾವವೂ ಇದೆ.

ದೊಡ್ಡನಗೌಡರ ಮಹತ್ವ ಇರುವುದು, ತಮ್ಮ ಹಾಡಿಕೆಯ ಮೂಲಕ ಕನ್ನಡ ಕಾವ್ಯಗಳ ಬಗ್ಗೆ ಜನರಲ್ಲಿ ಆಸಕ್ತಿ-ಅಭಿರುಚಿ ಹುಟ್ಟುವಂತೆ ಮಾಡಿದ್ದು. ಸಾಹಿತ್ಯಾಭಿರುಚಿ ಹುಟ್ಟಿಸುವ ಕೆಲಸವನ್ನು ಅ.ನ.ಕೃಷ್ಣರಾಯರು ತಮ್ಮ ಅಮೋಘ ಭಾಷಣಗಳ ಮೂಲಕ ಮಾಡಿದರೆ, ಅವರ ಆಪ್ತ ಗೆಳೆಯರಾದ ಗೌಡರು ತಮ್ಮ ಗಾಯನದ ಮೂಲಕ ಮಾಡಿದರು. ಗೌಡರ ಕಾವ್ಯಗಾಯನದಲ್ಲಿ ಸಾಹಿತ್ಯಾಭಿರುಚಿ, ಸಂಗೀತ ಪ್ರಜ್ಞೆ ಹಾಗೂ ದೈವಭಕ್ತಿಯ ಆವೇಶ- ಮೂರೂ ಮೇಳೈಸಿದ್ದವು. ಅವರು ಹಾಡುತ್ತಿದ್ದ ಮುಖ್ಯ ಕಾವ್ಯಗಳೆಂದರೆ- ‘ರಾಜಶೇಖರ ವಿಳಾಸ’, ‘ಶೂನ್ಯಸಂಪಾದನೆ’, ‘ಭರತೇಶ ವೈಭವ’, ‘ಪ್ರಭುಲಿಂಗಲೀಲೆ’, ‘ಬಸವಪುರಾಣ’, ‘ಹರಿಹರನ ರಗಳೆಗಳು’, ‘ಗಿರಿಜಾ ಕಲ್ಯಾಣ’, ‘ಹರಿಶ್ಚಂದ್ರಕಾವ್ಯ’, ‘ರಾಮಾಯಣ ದರ್ಶನಂ’, ‘ಜೈಮಿನಿಭಾರತ’. ಹಾಗೆ ಕಂಡರೆ, ಕೊನೆಯ ಮೂರು ಶೈವಕಥನಗಳಲ್ಲ. ಆದರೆ ಗೌಡರಿಗೆ ಕನ್ನಡದ ಎಲ್ಲ ಕಾವ್ಯಗಳ ಮೇಲೆ ಮತಾತೀತ ಪ್ರೀತಿಯಿತ್ತು. ಕುಮಾರವ್ಯಾಸ ಅಥವಾ ಜೈಮಿನಿ ಭಾರತವನ್ನು ಗಮಕ ಮಾಡುವ ಅನೇಕರು ಇತರೆ ‘ಶೈವ’ ಕಾವ್ಯವನ್ನು ಮುಟ್ಟದೆ ಇರುವುದುಂಟು; ದಾಸರ ಕೀರ್ತನೆ ಹಾಡಬಲ್ಲ ಅನೇಕ ಹಿಂದೂಸ್ತಾನಿ ಗಾಯಕರು, ವಚನಗಳನ್ನು ಹಾಡದೆ ತಮ್ಮ ಶಪಥ ಪೂರೈಸಿರುವುದೂ ಉಂಟು. ಈ ಹಿನ್ನೆಲೆಯಲ್ಲಿ ನೋಡುವಾಗ ಗೌಡರ ಕಾವ್ಯದಾಯ್ಕೆಯಲ್ಲಿರುವ ಉದಾರತೆ ಎದ್ದುಕಾಣುತ್ತದೆ. ವಿಶೇಷವೆಂದರೆ, ಅವರ ಹಾಡಿಕೆಯಲ್ಲಿ ಶ್ರೋತೃಗಳು ಬಿಕ್ಕಿಬಿಕ್ಕಿ ಅಳುವ ಪ್ರಸಂಗಗಳು ಸಾಮಾನ್ಯವಾಗಿದ್ದವು. ಎಷ್ಟೋ ಸಲ ಹಾಡುತ್ತಿದ್ದ ಗೌಡರೂ ಭಾವಾವೇಶಕ್ಕೆ ಒಳಗಾಗಿ ಭೋರೆಂದು ಅಳುತ್ತಿದ್ದುದೂ ಇತ್ತು. ಜನರಲ್ಲಿ ಕಾವ್ಯಾಭಿರುಚಿ ಬೆಳೆಸುವ ಗೌಡರ ಕಾಯಕದ ಉತ್ತರಾಧಿಕಾರತ್ವವನ್ನು ನಿಭಾಯಿಸಿದವರು ಕಿ.ರಂ.ನಾಗರಾಜ ಅವರು ಎನ್ನಬಹುದು. 

ದೊಡ್ಡನಗೌಡರು ನಟನೆ ಗಾಯಕನದ ಜತೆ ಕನ್ನಡದ ಒಬ್ಬ ಲೇಖಕರೂ ಆಗಿದ್ದರು. ಆದರೆ ಅವರ ಬರೆಹ ಸಾಮಾನ್ಯ ದರ್ಜೆಯದು. ಅವರ ಕಾವ್ಯ-ನಾಟಕಗಳಿಗೆ ಹೋಲಿಸಿದರೆ, ಅವರ ಆತ್ಮಚರಿತ್ರೆ ‘ನಂದೇನಾನೋದಿದೆ’ ಒಳ್ಳೆಯ ಕೃತಿ. ವಿಶಿಷ್ಟವಾದ ಘಟನೆಗಳಿಂದ ಕೂಡಿದ ಅದು ಕರ್ನಾಟಕ ರಂಗಭೂಮಿಯ ಚರಿತ್ರೆಯ ದೃಷ್ಟಿಯಿಂದ ಮಹತ್ವದ ಆಕರವಾಗಿದೆ. ಅದರ ಗದ್ಯ ಕೂಡ ವಿಶಿಷ್ಟವಾಗಿದೆ. ಅದರ ಆರಂಭದ ಭಾಗ ಹೀಗಿದೆ: ‘ನನ್ನ ವಯಸ್ಸು 6-7 ಇರಬಹುದು. ನಾಟಕ ‘ಕನಕತಾರ’. ಆ ನಾಟಕದ ಕಥೆಯೇನೊ ತಿಳಿಯದು.

ಆದರಲ್ಲಿ ಋಷ್ಯಾಶ್ರಮ. ಅಲ್ಲಿ ಒಬ್ಬ ಋಷಿ. ಆ ಋಷಿಯ ಶಿಷ್ಯರಲ್ಲಿ ನಾನೊಬ್ಬ ಬಾಲಶಿಷ್ಯ. ಪದವನ್ನೇನೊ ಕಲಿತು ಹಾಡುತ್ತಿದ್ದೆ. ಆದರೆ ಆ ಪದದಲ್ಲಿಯ ‘ಪರಮ ಗುರುವರ’ ಎಂದು ಹೇಳುವುದಕ್ಕೆ ಬದಲಾಗಿ ‘ಪಲಮ ಗುಲುವಲ’ ಎಂದು ಹೇಳುತ್ತಿದ್ದೆ. ‘ರ’ಕಾರವನ್ನು ನುಡಿಯದೇ ಇದ್ದ ನಾಲಿಗೆ ಎಷ್ಟು ಸಾರಿ ಹೇಳಿಕೊಟ್ಟರೂ ‘ಲ’ಕಾರವನ್ನೇ ನುಡಿಯುತ್ತಿತ್ತು. ಇದರಿಂದ, ನನ್ನ ಓರಿಗೆಯ ಹುಡುಗರೆಲ್ಲಾ ನನ್ನ ಹೆಸರಿಗೆ ಬದಲಾಗಿ ‘ಏ ಗುಲುವಲಾ ಬಾರೋ’ ಎಂದು ಹಾಸ್ಯ ಮಾಡುತ್ತಿದ್ದರು. ‘ಮೊದಲನೆಯ ಈ ‘ಗುಲು’ಸ್ತೋತ್ರ ನಾಟಕವಾಡಿಸಲೇ ಇಲ್ಲ. ಊರಿಗೆ ಪ್ಲೇಗು ಬಂದು, ಊರವರನ್ನಲ್ಲದೆ ಈ ನಾಟಕದವರಲ್ಲಿ ಕೆಲವರನ್ನು ನುಂಗಿ ನೀರು ಕುಡಿದಿದ್ದರಿಂದ ಆ ನಾಟಕ, ಆ ನನ್ನ ‘ಗುಲುಸ್ತೋತ್ರ’, ಅಲ್ಲಿಗೇ ನಿಂತುಹೋಯಿತು’.

ಗೌಡರ ಬರೆಹ, ನಟನೆ ಮತ್ತು ಗಾಯನಗಳ ವಿಶಿಷ್ಟತೆ ಇರುವುದು ಅವರ ದ್ವಿಭಾಷಿಕತೆಯಲ್ಲಿ. ಎಷ್ಟೋ ಕನ್ನಡ ಚಳವಳಿಗಾರರು ಕನ್ನಡ-ತೆಲುಗುಗಳನ್ನು ಎದುರಾಳಿಗಳೆಂದು ಭಾವಿಸಿರುವುದುಂಟು. ಆದರೆ ಪ್ರಸಿದ್ಧ ತೆಲುಗು ನಟರಾಗಿದ್ದ ಬಳ್ಳಾರಿ ರಾಘವರ ಪರಮ ಶಿಷ್ಯರಾಗಿದ್ದ ದೊಡ್ಡನಗೌಡರು, ಉಭಯಭಾಷಾ ಕವಿಯಾಗಿದ್ದರು. ಕನ್ನಡ-ತೆಲುಗು ಅವರ ಎರಡು ಶ್ವಾಸಕೋಶಗಳಂತೆ ಇದ್ದವು. ‘ವಚನಾಮೃತಮು’, ‘ಅನುಭವಾಲು-ಜ್ಞಾಪಕಾಲು’, ‘ಗೇಯ ಗುಂಜಾರಮು’ ಅವರ ಪ್ರಮುಖ ತೆಲುಗು ಕೃತಿಗಳು. ಎಷ್ಟೋ ಸಲ ಗೌಡರ  ಕನ್ನಡ ರಚನೆಗಳಿಗಿಂತಲೂ ತೆಲುಗು ಪದ್ಯಗಳೇ ಶಕ್ತವಾಗಿವೆ ಅನಿಸುತ್ತದೆ.

ಕರ್ನಾಟಕದಲ್ಲಿ ಹುಟ್ಟಿದೂರನ್ನು ಮರೆತವರಿದ್ದಾರೆ; ಹುಟ್ಟಿದೂರನ್ನು ಬಿಟ್ಟು ನೆಲೆಸಿದೂರನ್ನು ಬೆಳೆಸಿದವರಿದ್ದಾರೆ- ಕಾರಂತರಂತೆ. ಎಷ್ಟೇ ತಿರುಗಾಟ ಮಾಡಿದರೂ, ತಮ್ಮ ಊರುಗಳಿಗೆ ಮರಳಿ ಬಂದು, ಅಲ್ಲೇ ನೆಲೆಸಿ, ಸಾಹಿತ್ಯ ನಾಟಕ ಸಂಗೀತ ಅಧ್ಯಾತ್ಮ ಮುಂತಾದ ಚಟುವಟಿಕೆಗಳ ಮೂಲಕ, ಅವನ್ನು ಸಾಂಸ್ಕೃತಿಕ ತಾಣಗಳಾಗಿಸಿದವರೂ ಇದ್ದಾರೆ- ಹಲಸಂಗಿಯ ಮಧುರಚನ್ನರಂತೆ. ಜೋಳದರಾಶಿಯವರು ನಾಡನ್ನೆಲ್ಲ ತಿರುಗಿದರೂ, ಊರಲ್ಲೇ ನೆಲೆಸಿ ಅದನ್ನು ಸಮೃದ್ಧಗೊಳಿಸಿದವರು. ಏಕೀಕರಣ ಚಳವಳಿಗಾರ, ರೈತ, ನಟ, ಗಾಯಕ, ಗ್ರಾಮಪಂಚಾಯತಿ ಅಧ್ಯಕ್ಷ- ಹೀಗೆ ಹಲವು ಪಾತ್ರಗಳಲ್ಲಿ ಕೆಲಸ ಮಾಡಿದ ಗೌಡರದು ಬಹುಮುಖೀ ವ್ಯಕ್ತಿತ್ವ. ಒಮ್ಮೊಮ್ಮೆ ಅನಿಸುತ್ತದೆ: ಕರ್ನಾಟಕ ಸಂಸ್ಕೃತಿಯನ್ನು ಸಾಹಿತ್ಯ ಕೇಂದ್ರಿತವಾಗಿ ನೋಡುತ್ತ ನಾವು ಕಟ್ಟಿಕೊಂಡಿರುವ ಚಿತ್ರವೇ ಅರೆಬರೆಯದು ಎಂದು. ಅದನ್ನು ಗಮಕ, ರಂಗಭೂಮಿ, ಸಿನಿಮಾ, ಭಾವಗೀತೆ ಹಾಡಿಕೆಗಳ ಮೂಲಕವೂ ನೋಡತೊಡಗಬೇಕು. ಆಗ ನಲವಡಿ ಶ್ರೀಕಂಠಶಾಸ್ತ್ರಿ, ಕಂದಗಲ್ ಹಣಮಂತರಾಯ, ಮಹಮದ್ ಪೀರ್, ಗುಬ್ಬಿ ವೀರಣ್ಣ, ಜೋಳದರಾಶಿ, ಲಕ್ಷ್ಮೇಶ್ವರ ಬಚ್ಚಾಸಾನಿ, ಗುಳೇದಗುಡ್ಡದ ಗಂಗೂಬಾಯಿ, ಕಾಳಿಂಗರಾವ್, ಹಂದಿಗನೂರ ಸಿದ್ಧರಾಮಪ್ಪ- ಮುಂತಾದ ತಾರೆಗಳು ಕಾಣತೊಡಗುವವು.

ದೊಡ್ಡನಗೌಡರು ಸಾಹಿತ್ಯ, ಸಂಗೀತ ಮತ್ತು ರಂಗಭೂಮಿಯ ನಡುವಣ ಕೊಂಡಿಯಂತೆ ಕೆಲಸ ಮಾಡಿದವರು. ಅವರಿಗೆ ಕಾವ್ಯಗಾಯನದ ಬಗೆಗಿನ ಬದ್ಧತೆ ಎಷ್ಟಿತ್ತೆಂದರೆ, ಹರಿಶ್ಚಂದ್ರಕಾವ್ಯವನ್ನೋ ಶೂನ್ಯಸಂಪಾದನೆಯನ್ನೋ ಹಾಡುತ್ತಿರುವಾಗ ಅಥವಾ ನಟನೆ ಮಾಡುತ್ತಿರುವಾಗಲೇ ರಂಗಭೂಮಿಯಲ್ಲಿ ತಮಗೆ ಸಾವು ಬರಬೇಕೆಂದು ಅವರು ಬಯಸಿದ್ದರು; ತಮ್ಮ ಶವಸಂಸ್ಕಾರದ ವೇಳೆ ಅಪಸ್ವರದಲ್ಲಿ ಹಾಡುವ ಭಜನೆಯವರನ್ನು ಕರೆಸಬಾರದು ಎಂದು ಅವರ ಸಂಬಂಧಿಕರಿಗೆ ತಾಕೀತು ಸಹ ಮಾಡಿದ್ದರು!  

ನಮ್ಮ ಮಾತುಕತೆ ಮುಗಿದ ಬಳಿಕ, ಗೌಡರು ನಮ್ಮನ್ನು ತಮ್ಮ ಹೊಲಕ್ಕೆ ಕರೆದುಕೊಂಡು ಹೋದರು. ಚೆಳ್ಳಗುರ್ಕಿ ರಸ್ತೆಯಲ್ಲಿರುವ ಅವರ ಎರೆಯ ಹೊಲಗಳು ಮೈಲಿಯುದ್ದಕ್ಕೆ ಕಪ್ಪುಸಮುದ್ರದಂತೆ ಹಬ್ಬಿದ್ದವು. ಅವುಗಳಲ್ಲಿ ಹಚ್ಚಗೆ ಕೊತ್ತಂಬರಿ ಬೆಳೆದಿತ್ತು. ಗರಗಸದಂತೆ ಕೋಚುಕೋಚಾದ ಎಲೆಗಳ ನಡುವೆ ಅದು ಬೆಳ್ಳನೆಯ ನೊರೆಯಂತೆ ಹೂವನ್ನೂ ಬಿಟ್ಟಿತ್ತು. ಅದರ ಕಟುವಾದ ಗಮಲು ಬಹುದೂರದವರೆಗೆ ಹಬ್ಬಿತ್ತು. ಸಂಜೆಯಾಗುತ್ತಿತ್ತು. ಗೌಡರು ಹೊಲದಲ್ಲಿ ತೆಗೆದಿದ್ದ ಒಂದು ಕುಳಿಯನ್ನು ತೋರಿಸಿ ‘ನೋಡ್ರಪ್ಪಾ ಇದೇ ನನ್ನ ಖಾಯಂ ಮನೆ. ಮುಂದಿನ ಸರತಿ ಬಂದರೆ ಇಲ್ಲಿಗೂ ಬಂದು ಹೋಗ್ರಿ’ ಎಂದು ಹೇಳಿದರು. ಮುಂದೊಂದು ವರ್ಷಕ್ಕೆ (1994) ಅವರು ನಿಧನರಾದರು.

ನನಗೆ ಅವರ ಎರಡನೇ ಮನೆಗೆ ಹೋಗಲು ಸಾಧ್ಯವಾಗಲಿಲ್ಲ. ಆದರೆ ಈಗಲೂ ಗುಂತಕಲ್ಲಿಗೊ ಅನಂತಪುರಕ್ಕೊ ಹೋಗುವಾಗ ಆ ಹೊಲಗಳತ್ತ ಕಣ್ಣುಹಾಯಿಸುತ್ತೇನೆ. ಸಮಾಧಿ ಕಾಣುವುದಿಲ್ಲ. ಬದಲಿಗೆ ಬೆಳ್ಳನೆಯ ಹೂಬಿಟ್ಟ ಹತ್ತಿ; ತೆನೆಯ ಕಿರೀಟಹೊತ್ತು ತಲೆದೂಗುವ ಜೋಳದಬೆಳೆ; ಮುಳ್ಳುಹೂವನ್ನು ಬಿಟ್ಟ ಕುಸುಬೆ ಕಾಣುತ್ತವೆ. ಈ ಬಹುಪೀಕಿನ ಹೊಲಗಳು, ನಟನೆ ಗಾಯನ ಬರೆಹ ಪ್ರವಚನ ಮುಂತಾಗಿ ಹಲವು ಕ್ಷೇತ್ರದಲ್ಲಿ ತೊಡಗಿಕೊಂಡಿದ್ದ; ಸಿಡುಕು ಭಾವಾವೇಶ ಅಳು ಮುಂತಾಗಿ ಹಲವು ಭಾವಗಳನ್ನು ಪ್ರಕಟಿಸುತ್ತಿದ್ದ, ಗೌಡರ ಬಣ್ಣರಂಜಿತ ವ್ಯಕ್ತಿತ್ವದ ರೂಪಕದಂತೆಯೇ ತೋರುವವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT