ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆಮುಂದೆ... ನಡೆ ಮುಂದೆ...

Last Updated 6 ಮಾರ್ಚ್ 2015, 19:30 IST
ಅಕ್ಷರ ಗಾತ್ರ

“ದಪ್ಪ ಆಗ್ತಾನೇ ಇದ್ದೀನಿ. ಆದರೆ ವಾಕಿಂಗ್ ಮಾಡೋಕೇ ಆಗ್ತಾ ಇಲ್ಲ. ಏನು ಮಾಡೋದು? ತೆಳ್ಳಗಾಗೊಕೆ ಏನಾದ್ರೂ ಮಾತ್ರೆ ಇದ್ದರೆ ಕೊಟ್ಬಿಡಿ ಮೇಡಂ”.

“ವೈದ್ಯರನ್ನು ಕಾಣಬೇಕು ಅಂದ್ರೆ ಮೈಲಿಗಟ್ಟಲೆ ದೂರ ಹೋಗಬೇಕು, ಕಾಯಬೇಕು. ಆ ಕಷ್ಟ, ಎಲ್ಲಾ ನೆನೆಸಿಕೊಂಡ್ರೆ ಕಾಯಿಲೇನೇ ಓಡಿ ಹೋಗುತ್ತೆ”.

“ನಲವತ್ತರ ನಂತರ ಪರೀಕ್ಷೆ ಮಾಡಿಸಿಕೊಳ್ಳಿ ಅಂತಾರೆ. ಆದರೆ ಪರೀಕ್ಷೆ ಮಾಡಿಸುವ ಮುನ್ನವೇ ಮನಸ್ಸು ಹೆದರುತ್ತೆ! ಈ ಪರೀಕ್ಷೇಲಿ ಕಾಯಿಲೆ ಇದೆ ಅಂತ ಬಂದ್ರೆ? ಎಲ್ಲರಿಗೂ ಗೊತ್ತಾಗುತ್ತೆ, ತಲೆಗೊಂದು ಮಾತಾಡ್ತಾರೆ, ಆ ಮೇಲೆ  ಚಿಕಿತ್ಸೆ, ಅದರ ಕಷ್ಟ. ಮಾತ್ರೆ ತೊಗೋಬೇಕು. ಇದೆಲ್ಲಾ ರಾಮಾಯಣವೇ ಬೇಡ, ಆದದ್ದಾಗಲಿ ಅಂಥ ಗಟ್ಟಿ ಮನಸ್ಸು ಮಾಡಿ ನಾನಂತೂ ಯಾವ ಪರೀಕ್ಷೆನೂ ಮಾಡಿಸಿಕೊಳ್ಳಲ್ಲ”.

“ನನಗೆ ವೈದ್ಯರು ಹೇಳಿದ್ದಾರೆ, ಸಕ್ಕರೆ ಕಾಯಿಲೆ ನಿಮಗಿದೆ, ಮಾತ್ರೆ ತೊಗೋಬೇಕು ಅಂತ. ತೊಗೋತಾ ಇದೀವಿ ಸರಿ, ಆದರೆ ಸುತ್ತಮುತ್ತಲಿನವರು ಮಾತಾಡೋದನ್ನು ಕೇಳಿದ್ರೆ ತಲೆ ಚಿಟ್ಟು ಹಿಡಿಯತ್ತೆ. ಒಂದು ಪುಡಿ ಇದೆ, ಅದು ಒಂದು ತಿಂಗಳು ಕುಡಿದುಬಿಟ್ರೆ ನಿಮ್ಮ ಸಕ್ಕರೆ ಕಾಯಿಲೆ ಮಂಗಮಾಯ” ಅಂತಾರೆ. ‘ಅಯ್ಯೋ ಪಾಪ ಸಕ್ಕರೆ ಕಾಯಿಲೆನಾ’ ಅಂತಾರೆ. ನನಗೂ ಅಷ್ಟೆ ‘ಸಕ್ಕರೆ ಕಾಯಿಲೆ ನನಗಿದೆ’ ಅಂಥ ಹೇಳುವಾಗ ಒಂಥರಾ ನಾಚಿಕೆ, ಅಪಮಾನ. ಅದಕ್ಕೆ ನನ್ನ ಗಂಡ ಹೇಳೋದು ‘ಕಳ್ಳತನ ಮಾಡಿದ್ರೆ, ಸುಳ್ಳು ಹೇಳಿದ್ರೆ ನಾಚಿಕೆ, ಅಪಮಾನ. ನಮ್ಮ ತಪ್ಪಿಲ್ಲದೆ, ನಮಗೊಂದು ಕಾಯಿಲೆ ಬಂದಿದೆ ಅಂತಾದ್ರೆ ಅದಕ್ಕೆ ಯಾಕೆ ನಾಚಿಕೆ”?.

“ನನಗೆ ಹಾಳು ಮಂಡಿನೋವು. ಪಾದ ಉರಿ. ವೈದ್ಯರು ಹೇಳೋದು ಕೆಳಗೆ ಕೂತ್ಕೋಬೇಡಿ. ಮನೆ ಒಳಗೂ ಎಂ.ಸಿ.ಆರ್. ಚಪ್ಪಲಿ ಹಾಕಿಕೊಂಡೇ ಓಡಾಡಿ ಅಂಥ. ಆದ್ರೆ ‘ಕಮೋಡ್’ ಮಾಡಿಸಿಕೊಳ್ಳೋದು ಹೇಗೆ? ಮನೇಲಿ ಬೇರೆ ಯಾರಿಗೂ ಇಂಥ ಸಮಸ್ಯೆ ಇಲ್ವಲ್ಲ! ಇನ್ನು ಮನೆ ಒಳಗೆ ಚಪ್ಪಲಿ ಹಾಕ್ಕೊಂಡು ಓಡಾಡೋದು ನನ್ನ ಮನಸ್ಸಿಗೇ ಆಗದ ವಿಷಯ”.

ಈ ಮೇಲಿನ ಸಮಸ್ಯೆಗಳು ನಿತ್ಯ ವೈದ್ಯರೆಲ್ಲರೂ ನೋಡುವ ಮಹಿಳೆಯರ ಆರೋಗ್ಯದ ಸಮಸ್ಯೆಗಳು. ಇವು ಮಹಿಳೆಯರ ಮನಸ್ಸಿಗೇ ಸಂಬಂಧಿಸಿದ, ಆದರೆ ‘ಮಾನಸಿಕ ಕಾಯಿಲೆ’ ಎನಿಸಿಕೊಳ್ಳದ ಅಂಶಗಳು. ಈ ಆರೋಗ್ಯದ ಕುರಿತಾದ ಧೋರಣೆಗಳಿಗೂ, ಮಹಿಳೆ ಸ್ವತಃ ತನ್ನ ಮೇಲೆ ಕಲ್ಪಿಸಿಕೊಳ್ಳುವ ‘ಪಾತ್ರ’ಕ್ಕೂ, ಸಮಾಜ ಆಕೆಯಿಂದ ನಿರೀಕ್ಷಿಸುವ ‘ಹೊಣೆಗಾರಿಕೆ’ಗೂ ಸಂಬಂಧವಿದೆ. ಅಂದರೆ ‘ನಡಿಗೆ’ಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ‘ನಡಿಗೆ’ ಎನ್ನುವುದು ಸಾಮಾನ್ಯವಾಗಿ ಎಲ್ಲ ವೈದ್ಯರೂ ಎಲ್ಲ ಕಾಯಿಲೆಗಳಿಗೂ ಮಾಡಬೇಕೆಂದು ಹೇಳುವ ಒಂದು ಸುಲಭ, ಖರ್ಚಿಲ್ಲದ, ಮನಸ್ಸು ವೇಳೆ ಮಾತ್ರ ಬೇಕಾಗುವ ಚಿಕಿತ್ಸೆ.

ಬಿ.ಪಿ./ಸಕ್ಕರೆ ಕಾಯಿಲೆ/ಖಿನ್ನತೆ/ಹೃದಯ ಸಂಬಂಧಿ ಕಾಯಿಲೆಗಳು ಮುಂತಾದ ಸಾಮಾನ್ಯ ಕಾಯಿಲೆಗಳ ಚಿಕಿತ್ಸೆಯ ಪಟ್ಟಿ ‘ನಡಿಗೆ’ಯಿಂದಲೇ ಆರಂಭ. ಪುರುಷರಾಗಲೀ, ಮಹಿಳೆಯರಾಗಲೀ ಇದು ಬೇಕು. ಆದರೆ ಈ ‘ನಡಿಗೆ’ಯನ್ನು ಮಾಡುವಲ್ಲಿ ‘ಮನಸ್ಸು’ ಮಾಡುವುದಿಲ್ಲ. ಕಾರಣ?

ಬೆಳಿಗ್ಗೆ ಎದ್ದು ವಾಕಿಂಗ್ ಹೋದರೆ ತಿಂಡಿ ಮಾಡುವುದು ಹೇಗೆ?
ಬೆಳಕು ಹರಿಯುವ ಮುನ್ನ ಅಥವಾ ಕತ್ತಲಾದ ಮೇಲೆ ವಾಕಿಂಗ್ ಹೊರಟರೆ ನಮ್ಮ ರಕ್ಷಣೆ ಯಾರ ಹೊಣೆ?

ವಾಕಿಂಗ್ ಹೋದಾಗ ಮನೆಗೆ ಯಾರಾದರೂ ಬಂದರೆ?
ನಲ್ಲಿ ರಿಪೇರಿ/ಮನೆಗೆಲಸದವರು/ ಗ್ಯಾಸ್ ಸಿಲಿಂಡರ್/ಪೇಪರ್‌ಬಿಲ್ ಇತ್ಯಾದಿಯವರು ನಾನು ವಾಕಿಂಗ್‌ಗೆ ಹೋದಾಗಲೇ ಬಂದು ಹೋದರೆ ಏನು ಮಾಡುವುದು?
ಮಕ್ಕಳು  ನನ್ನ ವಾಕಿಂಗ್‌ನಿಂದಾಗಿ ಮನೆಯಲ್ಲಿ ಸರಿಯಾಗಿ ಓದದಿದ್ದರೆ?
ಹೀಗೆ ಹಲವು ಕಾರಣಗಳಿಂದ ಹೆದರಿ ನಡಿಗೆ ಮಾಡದೇ, ತೂಕ ಹೆಚ್ಚಿಸಿಕೊಂಡು ಇಲ್ಲವೇ ತೂಕ ಇಳಿಸಲು ರಾತ್ರಿ ಊಟವನ್ನು ಬಿಟ್ಟು, ಆನಂತರವೂ ಕೊರಗುತ್ತಲೇ ಇರುವ ಮಹಿಳೆಯರು ಬಹಳಷ್ಟು.

ನಿಜ, ಮನೆಯ ಗೃಹಿಣಿಗೆ ಹೊರಗೆ ಕೆಲಸ ಮಾಡಲಿ, ಬಿಡಲಿ, ಬೆಳಿಗ್ಗೆ ಎದ್ದು ತಿಂಡಿ ಮಾಡಬೇಕಾದ, ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನಹರಿಸುವ ಜವಾಬ್ದಾರಿ ಇರುವುದು ದಿಟವೇ. ಆದರೆ ಇವುಗಳನ್ನು ಮನೆಯವರೆಲ್ಲರೂ ಕೂಡಿ ಮುಗಿಸಿ ಮಹಿಳೆಗೂ ‘ವಾಕಿಂಗ್’ ಸೌಲಭ್ಯ ಕಲ್ಪಿಸುವುದು ಅಸಾಧ್ಯವಲ್ಲ! ಸುಲಭದ, ಎಲ್ಲರಿಗೂ ಒಟ್ಟಿಗೇ ಆಗುವ ತಿಂಡಿಗಳು, ಅಥವಾ ಸಾಯಂಕಾಲವೇ ಬೆಳಿಗ್ಗೆಯ ತಿಂಡಿಗಾಗಿ ಸ್ವಲ್ಪ ತಯಾರಿ. ನಂತರ ಮಕ್ಕಳು, ಗಂಡ ತಮ್ಮ ತಮ್ಮ ಕೆಲಸಗಳನ್ನು ಮಾಡಿಕೊಳ್ಳುವಂತೆ ಮಾಡುವುದು ಇವು ಮಹಿಳೆಗೆ ಪ್ರತಿ ಬೆಳಿಗ್ಗೆ ಒಂದು ಗಂಟೆಯಷ್ಟು ‘ವಾಕಿಂಗ್ ’ ಅವಧಿ ನೀಡಬಲ್ಲದು. ಅಂದರೆ ‘ಮನಸ್ಸು’ ಇಲ್ಲಿ ಕೆಲಸ ಮಾಡಬೇಕು. ಅಷ್ಟೇ!

ಮಹಿಳೆ ಜೈವಿಕವಾಗಿ ಬಸಿರು-ಬಾಣಂತನ-ಮಧ್ಯವಯಸ್ಸು - ವೃದ್ಧಾಪ್ಯ ಈ ಎಲ್ಲ ಹಂತಗಳಲ್ಲಿಯೂ ಆರೋಗ್ಯದ ಸಮಸ್ಯೆಗಳಿಗೆ ತುತ್ತಾಗುತ್ತಾಳೆ. ಈ ಆರೋಗ್ಯದ ಸಮಸ್ಯೆಗಳಲ್ಲಿ ಬಹಳಷ್ಟು ಪುರುಷನಲ್ಲಿ ಕಾಣಿಸದ, ಮಹಿಳೆಯರಲ್ಲಿ ಮಾತ್ರ ತಲೆದೋರುವ ಆರೋಗ್ಯದ ಸಮಸ್ಯೆಗಳು. ಇನ್ನು ಕೆಲವು ಚಿಕಿತ್ಸೆಯ ಹಂತದಲ್ಲಿ ಮಹಿಳೆಗೆ ಎದುರಾಗುವ ಸವಾಲುಗಳು ಪುರುಷನಿಗೆ ‘ಸಿಲ್ಲಿ’ ವಿಷಯಗಳು. ಹಾಗಾಗಿ ಸಮಾಜದ ಎಲ್ಲರಿಗೆ, ಮಹಿಳೆಯ ಈ ಕಷ್ಟಗಳು ಅರ್ಥವಾಗದಿರುವುದು ಸಹಜವೇ. ಆದರೆ ಇವು ಮಹಿಳೆಯ ಒಟ್ಟು ಆರೋಗ್ಯ  ಹದಗೆಡುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಮಾನಸಿಕವಾಗಿ ಆಕೆಯನ್ನು ದುರ್ಬಲಳನ್ನಾಗಿ ಮಾಡುತ್ತವೆ. ತನ್ನ ಕಷ್ಟಗಳನ್ನು ಸಹಿಸಿಕೊಳ್ಳುವ, ಮುಚ್ಚಿಡುವ ಪ್ರಯತ್ನದಲ್ಲಿ ಆಕೆ ಇತರ ಮಹಿಳೆಯರ ತೊಂದರೆಗಳನ್ನು ನಿರ್ಲಕ್ಷಿಸುವ-ವ್ಯಂಗ್ಯವಾಡುವ-ಟೀಕೆ ಮಾಡುವ ಹಂತಕ್ಕೆ ಹೋಗುತ್ತದೆ. ಅತ್ತೆಗೆ ಆಗುವ ಮಂಡಿ ನೋವನ್ನು ಲಕ್ಷಿಸದ ಸೊಸೆ, ಸೊಸೆಯ ಖಿನ್ನತೆಯನ್ನು ಆಡಿಕೊಳ್ಳುವ ಅತ್ತೆ, ತಾಯಿಯ ರಕ್ತದೊತ್ತಡವನ್ನು ‘ಏನೂ ಅಲ್ಲ’ ಎಂದು ತಳ್ಳಿ ಹಾಕುವ ಮಗಳು ಹೀಗೆ ಈ ಪಟ್ಟಿ ಮುಂದುವರಿಯುತ್ತದೆ.

ಗೆಳತಿಯ ‘ಸಕ್ಕರೆ ಕಾಯಿಲೆ’ಯನ್ನು ಕೆಟ್ಟ ಕುತೂಹಲದಿಂದ ಗಮನಿಸುವ ಮಹಿಳೆ. ಅಂತರರಾಷ್ಟ್ರೀಯ ಮಹಿಳಾ ದಿನದ ಈ ಬಾರಿಯ ಧ್ಯೇಯ ‘Lets make it happen’ - ‘ಸಾಧ್ಯವಾಗಿಸೋಣ’ ಎಂಬ ವಾಕ್ಯ ಮಹಿಳೆಗೆ ಸಂಬಂಧಿಸಿದ ಎಲ್ಲದರಲ್ಲೂ ಪ್ರಾಯೋಗಿಕ ಅನುಷ್ಠಾನವನ್ನು ಎತ್ತಿ ಹಿಡಿಯುತ್ತದೆ. ಆರೋಗ್ಯದ ವಿಷಯದಲ್ಲಂತೂ ಇದು ಅತಿ ಅಗತ್ಯ.

ಮಹಿಳೆಯರಲ್ಲಿ ರಕ್ತಹೀನತೆ, ಏರುತ್ತಿರುವ ಮಾತೃಮರಣ, ಅಪೌಷ್ಟಿಕತೆ, ತಡವಾಗಿ ಬೆಳಕಿಗೆ ಬರುವ ಕ್ಯಾನ್ಸರ್‌, ರಕ್ತದೊತ್ತಡ, ಸಕ್ಕರೆ ಕಾಯಿಲೆ ಈ ಎಲ್ಲವೂ ‘ಅರಿವಿನ’ ಸಮಾನತೆ, ‘ಮನಸ್ಸಿ’ನ ಸಬಲೀಕರಣ, ಯಾವ ಕಾನೂನಿನ ನೆರವಿಲ್ಲದೇ ಸಕಾಲದಲ್ಲಿ ಚಿಕಿತ್ಸೆಗೆ ಒಳಪಡಬೇಕಾದ ಅಗತ್ಯ ಇವುಗಳಿಗೆ ಸಂಬಂಧಿಸಿದವು. ಮಹಿಳೆ-ಪುರುಷರಿಬ್ಬರೂ ‘ಮನಸ್ಸಿ’ನಿಂದ ತಮ್ಮ ಧೋರಣೆಗಳನ್ನು ಬದಲಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ‘ಆರೋಗ್ಯದ ಸಲುವಾಗಿ ಎತ್ತಿ ಹಿಡಿಯುತ್ತವೆ. ವೈಯಕ್ತಿಕವಾಗಿ ನಮ್ಮ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ, ‘ಸಾಧ್ಯವಾಗಿಸುವತ್ತ’ ಮನಸ್ಸು ಮಾಡೋಣವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT