ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆಯಬೇಕಿದೆ ‘ಪರೀಕ್ಷೆ’ಗಳ ಸತ್ವಪರೀಕ್ಷೆ

ಪರೀಕ್ಷೆಗಳ ಹಂಗನ್ನು ತೊರೆದು ಪಾಠ ಮಾಡುವ ವಾತಾವರಣ ಕಲ್ಪಿಸಬೇಕಾಗಿದೆ
Last Updated 3 ಫೆಬ್ರುವರಿ 2016, 19:51 IST
ಅಕ್ಷರ ಗಾತ್ರ

ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ನಕಲು ಮಾಡುವ ಕುರಿತು ಶೈಕ್ಷಣಿಕ ವಲಯದಲ್ಲಿರುವ ಆತಂಕ ಮತ್ತು ನೈತಿಕತೆಯ ಪ್ರಶ್ನೆಗಿಂತ, ನಾವು ಅನುಸರಿಸುವ ಪರೀಕ್ಷಾ ನೀತಿ ಮತ್ತು ಪದ್ಧತಿಗಳು ಹೇಗಿವೆ ಎಂಬ ಆತ್ಮಾವಲೋಕನ ಮಾಡುವುದಕ್ಕೆ ಇದು ಸೂಕ್ತ ಸಮಯ.

ಶೈಕ್ಷಣಿಕ ಪರೀಕ್ಷೆಗಳಲ್ಲಿ ಫೇಲಾದರೆ ಜೀವನದಲ್ಲಿಯೇ ಫೇಲಾದಂತೆ ಎನ್ನುವ ನಂಬಿಕೆಯನ್ನು ಸೃಷ್ಟಿಸಿರುವ ನಾವು, ಇನ್ನುಳಿದ ಕ್ಷೇತ್ರಗಳಲ್ಲಿ ನಮಗಿರುವ ಪ್ರಾವೀಣ್ಯ ಮತ್ತು ಪರಿಣತಿಗಳ ಬಗ್ಗೆ ಕುರುಡರಾಗುತ್ತೇವೆ. ಪರೀಕ್ಷೆಯಲ್ಲಿ ನಾವು ಗಿಟ್ಟಿಸಿಕೊಳ್ಳುವ ಸ್ಥಾನಮಾನವೇ ನಮ್ಮ ಸಾಮಾಜಿಕ ಹಾಗೂ ಆರ್ಥಿಕ ಸ್ಥಾನಮಾನಗಳನ್ನು ನಿರ್ಧರಿಸುವುದರಿಂದ ಇಲ್ಲಿಯ ವೈಫಲ್ಯ ಅದೆಷ್ಟೋ ವಿದ್ಯಾರ್ಥಿಗಳ ಆತ್ಮಹತ್ಯೆಗೂ ಕಾರಣವಾಗುತ್ತಿದೆ.

ದೇಶದಲ್ಲಿ ವಿವಿಧ ರೀತಿಯ ಪರೀಕ್ಷೆಗಳನ್ನು ನಡೆಸುವುದಕ್ಕಾಗಿಯೇ ಸ್ವತಂತ್ರವಾದ ಪರೀಕ್ಷಾ ಪ್ರಾಧಿಕಾರ ಸ್ಥಾಪನೆಯಾಗಿದೆ. ಈ ಕ್ಷೇತ್ರದಲ್ಲಿ ಅದು ಏನೆಲ್ಲ ಬದಲಾವಣೆ ತಂದಿದ್ದರೂ, ಪರೀಕ್ಷೆಗಳ ಸಂಖ್ಯೆ ವೃದ್ಧಿಯಾಗಿದ್ದನ್ನಂತೂ ಅದು ಸೂಚಿಸುತ್ತದೆ. ಹೆಚ್ಚುತ್ತಿರುವ ಪರೀಕ್ಷೆಗಳು ನಮ್ಮ ಕಲಿಕೆ ಮತ್ತು ಶೈಕ್ಷಣಿಕ ತರಬೇತಿಗಳ ಸಮಯವನ್ನು ಆವರಿಸಿಕೊಂಡಿರುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ನಮ್ಮ ಹೊಸ ಶಿಕ್ಷಣ ನೀತಿಯು ಪರೀಕ್ಷೆಗಳಿಗೆ ಸಂಬಂಧಿಸಿ ಸುಧಾರಣೆಗಳನ್ನು ತರುವ ಜರೂರಿದೆ.

ನಮ್ಮ ಪ್ರಸ್ತುತ ಪರೀಕ್ಷಾ ಪದ್ಧತಿ ಅಮೆರಿಕದ ಶೈಕ್ಷಣಿಕ ಮಾದರಿಯ ನಕಲು ರೂಪವಾಗಿದೆ. ಅಲ್ಲಿಯ ಸೆಮಿಸ್ಟರ್ ಪದ್ಧತಿಯನ್ನು ಅನುಕರಣೆ ಮಾಡುತ್ತಿರುವ ನಾವು, ಆ ಶೈಕ್ಷಣಿಕ ರೂಢಿ ಮತ್ತು ಅಭ್ಯಾಸಗಳ ಮರ್ಮವನ್ನು ಅರ್ಥಪೂರ್ಣವಾಗಿ ಅರಗಿಸಿಕೊಳ್ಳದೆ, ಅದರ ಟೊಳ್ಳು ರೂಪಗಳನ್ನಷ್ಟೇ ಪುನರುತ್ಪಾದಿಸುತ್ತಿದ್ದೇವೆ. ಪ್ರಬಲವಾದ ಚಿಂತನೆಗಳಿಂದ ರೂಪಿತಗೊಂಡ ಶೈಕ್ಷಣಿಕ ಇತಿಹಾಸವನ್ನು ಹೊಂದಿದ ಆ ದೇಶದಲ್ಲಿ, ‘ಸತತ ಮತ್ತು ಸಮಗ್ರ ಮೌಲ್ಯಮಾಪನ’ ಅರ್ಥಪೂರ್ಣವಾಗಿ ಕಾಣುತ್ತದೆ. ಅಲ್ಲಿ ಕಲಿಕೆ ಮತ್ತು ಪರೀಕ್ಷೆಯ ನಡುವೆ ಸಮನ್ವಯವಿದೆ. ಎಷ್ಟೋ ವರ್ಷಗಳ ಅನುಭವ ಮತ್ತು ಚಿಂತನೆಯಿಂದ ಮಾರ್ಪಾಡುಗಳನ್ನು ಕಂಡುಕೊಂಡ ಅಲ್ಲಿಯ ಪರೀಕ್ಷಾ ಪದ್ಧತಿ ನಮ್ಮಲ್ಲಿ ಕೇವಲ ಅನುಕರಣೆಯ ಅಣಕ! ಇಲ್ಲಿ ಕಲಿಕೆಗೂ ಮತ್ತು ಪರೀಕ್ಷೆಗಳ ನಡುವೆ ದೊಡ್ಡ ಕಂದಕ. ಆ ದೇಶದ ಹಿನ್ನೆಲೆಗೆ ಅಂತಹ ಚಟುವಟಿಕೆಗಳು ಒಪ್ಪುತ್ತಿದ್ದರೆ, ನಮ್ಮಲ್ಲಿ ಅವು ವಿಡಂಬನಾತ್ಮಕವಾಗಿ ಕಾಣಿಸಿಕೊಂಡು ಸೋಲುತ್ತಿರುವುದನ್ನು ಗಮನಿಸಲೇಬೇಕು.

ಪರೀಕ್ಷಿಸುವುದು ಕಲಿಕೆಯನ್ನು ವೃದ್ಧಿಸಲಿಕ್ಕೆ ಎಂಬ ಮೂಲತತ್ವವನ್ನು ನಮ್ಮ ವ್ಯವಸ್ಥೆ ಇನ್ನೂ ಮನಗಂಡಿಲ್ಲ. ನಾನು ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದ ವಿದ್ಯಾರ್ಥಿಯಾಗಿದ್ದಾಗ,  ನಮ್ಮ ಎಲ್ಲ ಚಟುವಟಿಕೆಗಳ ಕಣ್ಣು ಪರೀಕ್ಷೆಯೆಂಬ ‘ಬಾಕ್ಸ್ ಆಫೀಸ್’ ಮೇಲೆ ಇದ್ದುದನ್ನು ನೋಡಿ, ಪ್ರೊಫೆಸರ್ ರಾಜಶೇಖರ ಮನ್ಸೂರ್ ಹತಾಶೆಯಿಂದ ‘ದ ಗ್ರೇಟೆಸ್ಟ್ ಹರ್ಡಲ್ ಫಾರ್ ಅವರ್ ಕ್ಲಾಸ್‌ರೂಮ್ ಈಸ್‌ ಎಗ್ಸಾಮಿನೇಷನ್. ಆ್ಯಸ್‌ ಲಾಂಗ್ ಆ್ಯಸ್‌ ಟೀಚಿಂಗ್ ಅಂಡ್ ಲರ್ನಿಂಗ್‌ ಆರ್ ಟೈಡ್ ಅಪ್ ವಿತ್ ಎಗ್ಸಾಮಿನೇಷನ್ಸ್, ಯೂ ರಿಯಲಿ ಕಾಂಟ್ ಇಂಪ್ರೂವ್‌ ದಿಸ್ ಸಿಸ್ಟಮ್’ ಎಂದು ಹೇಳುತ್ತಿದ್ದರು. ಪರೀಕ್ಷೆಗಳ ಹಂಗನ್ನು ತೊರೆದು ಪಾಠ ಮಾಡುವ ಮತ್ತು ಕಲಿಯುವ ವಾತಾವರಣ ಕಲ್ಪಿಸುವುದು ತುರ್ತು ಅಗತ್ಯ.

ಸ್ನಾತಕೋತ್ತರ ಶೈಕ್ಷಣಿಕ ವಿಷಯಕ್ಕೆ ಸಂಬಂಧಪಟ್ಟಂತೆ ಇನ್ನೊಂದು ಸೋಜಿಗದ ವಿಷಯವೇನೆಂದರೆ ‘ನೆಟ್’ ಮತ್ತು ‘ಸ್ಲೆಟ್’ ಪರೀಕ್ಷೆಗಳು. ಅವು ಆಯಾ ವಿಷಯಗಳ ಶಿಕ್ಷಕ ಹುದ್ದೆಗೆ ಬೇಕಾದ ಸಾಮರ್ಥ್ಯವನ್ನು ಪರೀಕ್ಷಿಸದೆ, ಆಯಾ ವಿಷಯಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಪರೀಕ್ಷಿಸುತ್ತವೆ. ವಿಷಯ ಪರಿಕಲ್ಪನೆಗಳ ಆಳವಾದ ಅರಿವಿಲ್ಲದೆ, ಈ ಪರೀಕ್ಷೆಗಳನ್ನು ಪಾಸು ಮಾಡಲು ಕೇವಲ ಒಂದಿಷ್ಟು ಮಾಹಿತಿ ಕಲೆಹಾಕಿದರೆ ಸಾಕು. ಅದರಲ್ಲೂ ಇವು ‘ಟಿಕ್ ಮಾಡುವ ಪರೀಕ್ಷೆ’ಗಳಾದ್ದರಿಂದ ವಿದ್ಯಾರ್ಥಿಗಳ ಹಣೆಬರಹವು ಚೆನ್ನಾಗಿರಬೇಕಾಗುತ್ತದೆ.

ಇಂಗ್ಲಿಷ್‌ ಅಧ್ಯಯನದಲ್ಲಿ ಇನ್ನೊಂದು ವಿಪರ್ಯಾಸವನ್ನು ಕಾಣುತ್ತೇವೆ.  ಭಾರತದ ವಿಶ್ವವಿದ್ಯಾಲಯಗಳಲ್ಲಿ ಬಹುತೇಕ ಇಂಗ್ಲಿಷ್‌ ವಿಭಾಗಗಳು ತಮ್ಮ ಪಠ್ಯಕ್ರಮವನ್ನು ಮೂಲಭೂತವಾಗಿ ಬದಲಾವಣೆ ಮಾಡಿದ್ದರೆ, ನೆಟ್–ಸ್ಲೆಟ್‌ಗಳ ಪಠ್ಯಕ್ರಮಗಳು ಮಾತ್ರ ಹಾಗೆಯೇ ಉಳಿದಿವೆ. ಉದ್ಯೋಗಕ್ಕೆ ಅನುವು ಮಾಡಿಕೊಡುವ ನೆಟ್–ಸ್ಲೆಟ್‌ಗಾಗಿ ಓದಬೇಕೇ? ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಪಾಸಾದರಷ್ಟೇ ಸಾಲದು  ನೆಟ್–ಸ್ಲೆಟ್ ಬೇಕು ಎನ್ನುವುದಾದರೆ, ವಿಶ್ವವಿದ್ಯಾಲಯಗಳು ನಡೆಸುವ ಪರೀಕ್ಷೆಗಳು ಅಷ್ಟು ಮಹತ್ವದವಲ್ಲ ಎಂಬ ಅರ್ಥವೇ? ಇಷ್ಟು  ಸಾಲದೆಂದು ಇತ್ತೀಚೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಶಿಕ್ಷಕರನ್ನು ಭರ್ತಿ ಮಾಡಲು ಮತ್ತೊಂದು ಸಿಇಟಿ. ಅಬ್ಬಾ! ಶಿಕ್ಷಣ ಕ್ಷೇತ್ರವೇ ಸಿಇಟಿಮಯವಾಗಿ, ಒಂದು ವ್ಯವಸ್ಥೆಯನ್ನು ಇನ್ನೊಂದು ಅಲ್ಲಗಳೆಯುವಂತಾಗಿದೆ. ಜಗತ್ತಿನ ಅತ್ಯುತ್ತಮ ವಿಶ್ವವಿದ್ಯಾಲಯವೊಂದರಲ್ಲಿ ಕಲಿತರೂ ಈ ದೇಶದಲ್ಲಿ ಸಿಇಟಿ ಎಂಬ ಅದೃಷ್ಟ ಪರೀಕ್ಷೆಯನ್ನು ಎದುರಿಸಲೇಬೇಕು.

ನಮ್ಮ ಹೆಚ್ಚಿನ ಪರೀಕ್ಷೆಗಳು ವಿಜ್ಞಾನ ಹಾಗೂ ತಾಂತ್ರಿಕ ಜ್ಞಾನಶಿಸ್ತುಗಳಿಗೆ ಒಪ್ಪುವ ಮಾದರಿಗಳಾಗಿವೆ. ಆದರೆ ಸಮಾಜ ಹಾಗೂ ಮಾನವಿಕ ಅಧ್ಯಯನಗಳಲ್ಲೂ  ಇದೇ ಮಾದರಿ ಅನುಸರಿಸಲಾಗುತ್ತದೆ. ಬಹುತೇಕ ವಿಶ್ವವಿದ್ಯಾಲಯಗಳು ಪಿಎಚ್.ಡಿ. ಸಂಶೋಧನೆಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಾಗ ಬಹುಆಯ್ಕೆ ಪ್ರಶ್ನೆ ಮಾದರಿಯ ಸಿಇಟಿ ಪರೀಕ್ಷೆಗಳನ್ನು ನಡೆಸುತ್ತವೆ. ಸಂಶೋಧನೆಗೆ ಬೇಕಾದ ಮನೋಭಾವ, ಕೌಶಲಗಳನ್ನು ಈ ಮಾದರಿಯಲ್ಲಿ ಪರೀಕ್ಷಿಸುವುದು ತುಂಬಾ ಕಷ್ಟ!

ಸ್ನಾತಕ ಹಾಗೂ ಸ್ನಾತಕೋತ್ತರ ಸೆಮಿಸ್ಟರ್ ಪರೀಕ್ಷೆಗಳಿಗೆ ಸಂಬಂಧಪಟ್ಟಂತೆ ಸದ್ಯದ ನಮ್ಮ ಪರೀಕ್ಷಾ ಪದ್ಧತಿಯು ಹೆಚ್ಚಾಗಿ ಬರವಣಿಗೆಯನ್ನೇ ಆಧರಿಸಿದೆ. ಉದಾಹರಣೆಗೆ, ಸಾಮಾನ್ಯ ಇಂಗ್ಲಿಷ್‌ ಪ್ರಶ್ನೆಪತ್ರಿಕೆಯಲ್ಲಿ ಸಂಭಾಷಣೆ ಕೌಶಲ ಕುರಿತ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆದು ತೋರಿಸಬೇಕಾಗುತ್ತದೆ. ಸಂದರ್ಶನದಲ್ಲಿ ಹೇಗೆ ಸಂಭಾಷಿಸಬೇಕು, ರೈಲು ನಿಲ್ದಾಣದಲ್ಲಿ ಹೇಗೆ ಮಾತನಾಡಬೇಕೆಂಬ ಮೌಖಿಕ ಕೌಶಲಗಳನ್ನೂ ಲಿಖಿತ ರೂಪದಲ್ಲಿಯೇ ಪರೀಕ್ಷಿಸಲಾಗುತ್ತದೆ. ವಿವರಣಾತ್ಮಕ ಪ್ರಶ್ನೆಗಳಿಗೆ ಸಂಬಂಧಪಟ್ಟಂತೆ, ಪ್ರಶ್ನೆಪತ್ರಿಕೆಗಳಲ್ಲಿರುವ ಪ್ರಶ್ನೆಗಳಿಗೂ ಉತ್ತರಗಳಿಗೂ ನೇರ ಸಂಬಂಧ ಇರುವುದು ತೀರಾ ವಿರಳ. ನಿರ್ದಿಷ್ಟ ವಿಷಯವೊಂದರ ಕುರಿತು ಒಂದು ಉತ್ತರವನ್ನು ಮೊದಲೇ ತಯಾರಿ ಮಾಡಿಟ್ಟುಕೊಂಡರೆ ಸಾಕು, ಆ ವಿಷಯಕ್ಕೆ ಸಂಬಂಧಪಟ್ಟ ಯಾವುದೇ ಪ್ರಶ್ನೆ ಬಂದರೂ ಅದೇ ಉತ್ತರ. ಅಂಕಗಳಿಗೆ ಯಾವುದೇ ತೊಂದರೆ ಇಲ್ಲ! ಈ ಕುರಿತು ಚಂಪಾ ಅವರು ಹೇಳುತ್ತಿದ್ದ ಮಾತು ನೆನಪಿಗೆ ಬರುತ್ತದೆ: ‘ನಾವು ಪ್ರತಿ ವರ್ಷ ಬೇರೆ, ಬೇರೆ ಪ್ರಶ್ನೆಗಳನ್ನು ಪ್ರಶ್ನೆಪತ್ರಿಕೆಗಳಲ್ಲಿ ಕೇಳುತ್ತೇವೆ, ಆದರೆ ಪ್ರತಿ ವರ್ಷ ಉತ್ತರಗಳು ಮಾತ್ರ ಒಂದೇ ಇರುತ್ತವೆ’.

ಪರೀಕ್ಷೆಗಳು ನಾವು ತಿಳಿದಂತೆ ಸರಳವಾದ ಶೈಕ್ಷಣಿಕ ಪ್ರಕ್ರಿಯೆಗಳಷ್ಟೇ ಅಲ್ಲ. ಅವುಗಳ ಇತಿಹಾಸ ತುಂಬಾ ಕುತೂಹಲಕಾರಿಯಾಗಿದೆ. ಮಿಶೆಲ್ ಫುಕೊ ತನ್ನ ‘ಡಿಸಿಪ್ಲಿನ್ ಅಂಡ್ ಪನಿಶ್’ (1975) ಎಂಬ ಪುಸ್ತಕದಲ್ಲಿ, ಆಸ್ಪತ್ರೆಗಳಲ್ಲಿ ರೋಗಿಗಳನ್ನು ಪರೀಕ್ಷಿಸುವ ಮಾದರಿ
ಗಳನ್ನೇ ಶಾಲಾ-ಕಾಲೇಜುಗಳು ಒಂದು ಕಾಲಘಟ್ಟದಲ್ಲಿ ಅನುಕರಿಸಿರುವುದನ್ನು ವಿವರಿಸುತ್ತಾನೆ. ಈ ರೀತಿಯ ತಾತ್ವಿಕ ಹಾಗೂ ಐತಿಹಾಸಿಕ ವಿಶ್ಲೇಷಣೆಯ ಮೂಲಕ ಈ ಹೊತ್ತು ನಾವು ನಮ್ಮ ದೇಶ- ಕಾಲದ ‘ಪರೀಕ್ಷೆ’ಗಳನ್ನು ‘ಸತ್ವಪರೀಕ್ಷೆ’ ಮತ್ತು ‘ಸಮಯ ಪರೀಕ್ಷೆ’ಗೆ ಒಳಪಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT