ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿಯಲ್ಲ, ಈಜುಕೊಳ!

Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

ನೋಡಿದರೆ ತುಂಬಿದ ನದಿಯಂತೆ ಕಾಣಿಸುತ್ತಿರುವ ಈ ವಿಶಾಲವಾದ ಜಲರಾಶಿ ಒಂದು ಈಜುಕೊಳ ಎಂದು ಹೇಳಿದರೆ ಬೆಕ್ಕಸ ಬೆರಗಾಗುತ್ತೀರಿ. ಆದರೆ ಇದು ಜಗತ್ತಿನ ಅತ್ಯಂತ ದೊಡ್ಡ ಈಜುಕೊಳವಾಗಿದ್ದು ಇದರಲ್ಲಿ ಮನಸ್ಸಿಗೆ ಇಚ್ಛೆಯಿರುವಷ್ಟು ಹೊತ್ತು ಹಾಯಾಗಿ ಈಜಬಹುದು, ಸಣ್ಣ, ದೊಡ್ಡ ಬೇಕಾದ ಗಾತ್ರದ ದೋಣಿಗಳನ್ನು ಆರಿಸಿಕೊಂಡು ನೀರಿನಲ್ಲಿ ತೇಲುತ್ತ ವಿಹರಿಸಬಹುದು. ಪ್ರೇಮಿಗಳಿಗಂತೂ ಇದು ವಿಹಾರಕ್ಕೆ ತುಂಬ ಅನುಕೂಲವಾದ ತಾಣವೆಂದೇ ಹೆಸರು ಗಳಿಸಿದೆ.

ವಿಶ್ವ ದಾಖಲೆಗೆ ಸೇರಿರುವ ಈಜುಕೊಳದ ಉದ್ದ 3323 ಅಡಿಗಳಷ್ಟಿದೆ. ಇಪ್ಪತ್ತು ಎಕರೆ ವಿಸ್ತಾರದಲ್ಲಿ ಎತ್ತೆತ್ತ ಕಣ್ಣು ಹಾಯಿಸಿದರೂ ಕಾಣುವುದು ಸ್ಫಟಿಕ ಶುದ್ಧವಾದ ಇದರ ನೀರು ಮಾತ್ರ. ೧೧೫ ಅಡಿ ಆಳವಿರುವ ಇದರಲ್ಲಿ 250 ದಶಲಕ್ಷ ಲೀಟರ್ ಪ್ರಮಾಣದ ನೀರನ್ನು ತುಂಬಲಾಗಿದೆ.

ಇದು ಎಲ್ಲಿದೆ ಎಂಬ ಕುತೂಹಲವೆ? ಪಶ್ಚಿಮ ಸ್ಯಾಂಟಿಯಾಗೋದ ಚಿಲಿಯಿಂದ 62 ಮೈಲು ದೂರದಲ್ಲಿರುವ ಫೆಸಿಫಿಕ್ ಸಾಗರದ ಕರಾವಳಿಯಲ್ಲಿರುವ ವಿಶ್ವದಲ್ಲಿ ಎರಡನೆಯದೆನಿಸಿದ ಅಲ್ಗಾರೆಬೊ ರೆಸಾರ್ಟ್‌ನಲ್ಲಿ ಈ ಸ್ಯಾನ್ ಅಲ್ಫಾನ್ಸೊ ಡೆಲ್ ಮಾರ್ ಈಜು ಕೊಳವನ್ನು ನಿರ್ಮಾಣ ಮಾಡಲಾಗಿದೆ. ಈಜಿಪ್ಟಿನ ಶರ್ಮ್ ಎಲ್ ಶೇಕ್ ಕಂಪೆನಿ ಇದರ ನಿರ್ಮಾಣದ ಹೊಣೆನಿರ್ವಹಿಸಿದೆ.

ಕೊಳದ ನಿರ್ಮಾಣ ಕಾರ್ಯ 2006ರಲ್ಲಿ ಆರಂಭಗೊಂಡು ಐದು ವರ್ಷಗಳಲ್ಲಿ ಪೂರ್ಣಗೊಂಡಿತು. ಫರ್ನಾಂಡೊ ಪಿಷ್‌ಮನ್ ಎಂಬವನು ಇದರ ನಿರ್ಮಾತೃ. ಮೂರೂವರೆ ದಶಲಕ್ಷ ಅಮೆರಿಕನ್ ಡಾಲರುಗಳು ಇದನ್ನು ನಿರ್ಮಿಸಲು ಖರ್ಚಾಗಿದ್ದರೆ ವರ್ಷಕ್ಕೆ ಎರಡು ಮಿಲಿಯನ್ ಡಾಲರ್ ನಿರ್ವಹಣೆಗೆ ಖರ್ಚಾಗುತ್ತದೆಯಂತೆ. ಫೆಸಿಫಿಕ್ ಸಾಗರದ ನೀರನ್ನು ಉಪ್ಪು ಮತ್ತು ಕ್ಲೋರಿನ್ ವಿರಹಿತವಾಗಿ ಶುದ್ಧಗೊಳಿಸಿ ಈಜುಕೊಳಕ್ಕೆ ತುಂಬುವುದು, ನೀರು ಕೊಳೆಯಾದ ಕೂಡಲೇ ಮೂರು ಬೇರೆ ಬೇರೆ ದ್ವಾರಗಳಲ್ಲಿ ಹೊರಬಿಡುವುದು ಇದಕ್ಕೆ ಕಂಪ್ಯೂಟರೀಕೃತ ವ್ಯವಸ್ಥೆ ಸ್ವಯಂಚಾಲಿತವಾಗಿದೆ.

ಸೌರಶಕ್ತಿಯ ಮೂಲಕ ಇದರಲ್ಲಿರುವ ನೀರು ಸದಾಕಾಲ 28 ಡಿಗ್ರಿಗಳಷ್ಟು ಬೆಚ್ಚಗಿರುವಂತೆ ನೋಡಿಕೊಳ್ಳಲಾಗಿದೆ. ಇಪ್ಪತ್ತು ಒಲಿಂಪಿಕ್ ಕ್ರೀಡಾಂಗಣದ ಈಜುಕೊಳಗಳನ್ನು ಒಟ್ಟು ಸೇರಿಸಿದರೆ ಎಷ್ಟು ದೊಡ್ಡದಾದೀತೆಂದು ಕಲ್ಪಿಸಿಕೊಂಡರೆ ಈ ಕೊಳದ ಗಾತ್ರವನ್ನು ತಿಳಿಯಬಹುದು. ವಿದೇಶಗಳಿಂದ ಕೊಳದ ಸಮೀಪ ದರ್ಶನಕ್ಕಾಗಿ ಅಸಂಖ್ಯಾತ ಪ್ರವಾಸಿಗರು ಬರುತ್ತಾರೆ.
-ಪಿ.ಆರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT