ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನನ್ನು ಅರ್ಥೈಸಿಕೊಳ್ಳಲು ಜನ ವಿಫಲ

ರಾಮನಗರದಲ್ಲಿ ಎಚ್‌.ಡಿ ಕುಮಾರಸ್ವಾಮಿ ಬೇಸರ
Last Updated 23 ಸೆಪ್ಟೆಂಬರ್ 2014, 9:23 IST
ಅಕ್ಷರ ಗಾತ್ರ

ರಾಮನಗರ:  ‘ಅಭಿವೃದ್ಧಿ ಕುರಿತು ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡಿದ ನನ್ನ ಬಗ್ಗೆ ಅರ್ಥ ಮಾಡಿ ಕೊಳ್ಳುವಲ್ಲಿ ರಾಮನಗರದ ಜನ ದಾರಿ ತಪ್ಪಿದ್ದಾರೆ. ಇದರಿಂದ ಜನರಿಗೇ ಹೆಚ್ಚು ನಷ್ಟ. ಈ ವಿಷಯ ಅವರಿಗೆ ನನ್ನನ್ನು ಕಳೆದುಕೊಂಡ ನಂತರ ಗೊತ್ತಾಗುತ್ತದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.

ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ 2014–15ನೇ ಸಾಲಿನ ವಿದ್ಯಾರ್ಥಿ ಸಂಘ, ಕ್ರಿಡಾ ಸಂಘದ ಉದ್ಘಾಟನೆ ಹಾಗೂ ಶಿಕ್ಷಕರ ಮತ್ತು ಎಂಜಿನಿಯರ್‌ಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ನಾನು ಎಂದೂ ಸಣ್ಣತನ ಮತ್ತು ದ್ವೇಷದ ರಾಜಕೀಯ ಮಾಡಿಲ್ಲ. ಅಲ್ಲದೆ ಕಾಲಾಹರಣವನ್ನೂ ಮಾಡಿಲ್ಲ. ರಾಮ ನಗರ ಮತ್ತು ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ದೂರದೃಷ್ಟಿ ಇಟ್ಟು ಕೊಂಡು ಕೆಲಸ ಮಾಡಿದ್ದೇನೆ’ ಎಂದು ಅವರು ತಿಳಿಸಿದರು. ‘ಇದು ಸತ್ಯವಂತರಿಗೆ ಮತ್ತು ಪ್ರಾಮಾಣಿಕರಿಗೆ ಅಲ್ಲದ ಕಾಲ. ಹಾಗಾಗಿ ರಾಜಕೀಯದಿಂದ ದೂರ ಸರಿಯಬೇಕು ಎನ್ನಿಸುತ್ತಿದೆ’ ಎಂದು ಅವರು ಬೇಸರದಿಂದ ಹೇಳಿದರು.

‘ನನ್ನ ದುಡಿಮೆಗೆ ತಕ್ಕ ಫಲ ದೊರೆಯಲಿಲ್ಲ ಎಂಬ ನೋವು ಇದೆ. ನನ್ನ ದುಡಿಮೆ ರಾಮನಗರದ ಜನರಿಗೂ ಅರ್ಥವಾಗಲಿಲ್ಲ ಎಂಬ ದುಃಖವೂ ಇದೆ. ಅವರೇ ನನ್ನನ್ನು ತಲೆ ತಗ್ಗಿಸುವಂತೆ ಮಾಡಿದ್ದಾರಲ್ಲ ಎಂಬ ಬೇಸರವೂ ಅತಿಯಾಗಿ ಕಾಡುತ್ತಿದೆ’ ಎಂದು ಅಸಮಾಧಾನ ಹೊರಹಾಕಿದರು.

ಮುಖ್ಯಮಂತ್ರಿ ಹೇಳಿಕೆಗೆ ವಿರೋಧ

ಉತ್ತರ ಕರ್ನಾಟಕದ ಕಲೆವೆಡೆ ಅತಿವೃಷ್ಟಿಯಿಂದ ಹಾರೂ ರಾಜ್ಯದ ಉಳಿದ ಭಾಗದಲ್ಲಿ ಅನಾವೃಷ್ಟಿಯಿಂದ ಜನ ತತ್ತರಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲೆಗಳಿಗೆ ಹೋಗಿ ಜನ ಸಾಮಾನ್ಯರ ಕಷ್ಟ ನಿವಾರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚಿಸಬೇಕಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾಂಗ್ರೆಸ್‌ ಕಾರ್ಯಕಾರಿ ಸಭೆಯಲ್ಲಿ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ ಎಂದು ಶಾಸಕ ಎಚ್‌.ಡಿ.ಕುಮಾರಸ್ವಾಮಿ ದೂರಿದರು.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮತ್ತು ಗ್ರಾಮ ಪಂಚಾಯಿತಿ ಚುನಾವಣೆ ಸಮೀಪಿಸುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮಗಳಿಗೆ, ವಾರ್ಡ್‌ಗಳಿಗೆ ತೆರಳಿ ಪಕ್ಷ ಸಂಘಟನೆ ಮಾಡಿ ಎಂದು ಮುಖ್ಯಮಂತ್ರಿ ಸೂಚಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಟೀಕಿಸಿದರು.

ಕೆಲವರೊಂದಿಗೆ ವೇದಿಕೆಗೆ ಏರೊಲ್ಲ: ‘ರಾಮನಗರದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ನಾನು ಬರುವು ದಕ್ಕೆ ಆಗುವುದಿಲ್ಲ. ಅದರಲ್ಲೂ ಪ್ರಮುಖವಾಗಿ ಕೆಲವರ ಜತೆ ವೇದಿಕೆ ಹಂಚಿಕೊಳ್ಳಲು ನಾನು ಬಯಸುವು ದಿಲ್ಲ’ ಎಂದು ಅವರು ಹೇಳಿದರು.

‘ನಾನು ಯಾರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಾಗಿ ಅವರ ಹೆಸರನ್ನು ಹೇಳುವ ಅಗತ್ಯವಿಲ್ಲ. ಅವರೆಲ್ಲ ನನಗಿಂತ ದೊಡ್ಡವರು. ಸಣ್ಣವನಾದ ನಾನು ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದು ಸರಿಯಲ್ಲ’ ಎಂದು ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

25 ವರ್ಷದಿಂದ ಅದೇ ಕೆಲಸ: ‘ಕನಕಪುರದ ಡಿ.ಕೆ ಸಹೋದರರು 25 ವರ್ಷದಿಂದ ಅರಣ್ಯ ಲೂಟಿ, ಗಣಿಗಾರಿಕೆ ಯಲ್ಲಿ ತೊಡಗಿದ್ದಾರೆ. ಅವರ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಇದ್ದರೂ, ಆ ಆರೋಪಗಳಿಂದ ಮುಕ್ತರಾಗುವುದು ಹೇಗೆ ಎಂಬುದು ಅವರಿಗೆ ಗೊತ್ತಿದೆ. ಹಾಗಾಗಿ ಕಾನೂನಿನಿಂದ ಅವರು ಸಲೀಸಾಗಿ ತಪ್ಪಿಸಿಕೊಳ್ಳುತ್ತಾರೆ’ ಎಂದು ಕುಮಾರಸ್ವಾಮಿ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT