ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನನ್ನನ್ನು ನನಗೇ ತೋರಿದ ಬಿಗ್‌ಬಾಸ್'

Last Updated 17 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

‘ಬಿಗ್ ಬಾಸ್’ ಜರ್ನಿ ಹೇಗಿತ್ತು?
ಮನೆಯವರು ಯಾರೂ ಇಲ್ಲದ ಬೇರೆ ಸ್ಥಳದಲ್ಲಿ ನನ್ನ ಶಕ್ತಿ ಏನು   ಎಂಬುದನ್ನು ಕಂಡುಕೊಳ್ಳಲಿಕ್ಕೆ ಇದರಿಂದ ಸಾಧ್ಯವಾಯಿತು. ಇಡೀ ಜರ್ನಿ ಚೆನ್ನಾಗಿತ್ತು.

ಸಿಕ್ರೇಟ್ ರೂಮ್‌ನಲ್ಲಿ ಕುಳಿತು ಇತರ ಸ್ಪರ್ಧಿಗಳು ನಿಮ್ಮನ್ನು ಆಡಿಕೊಂಡಿದ್ದನ್ನು ನೋಡಿದಾಗ ನಿಮಗೆ ಹೇಗೆನಿಸಿತು?
ತುಂಬಾ ಬೇಜಾರಾಯಿತು. ಎದುರಿಗೆ ಮಾತನಾಡಲು ಯಾರಿಗೂ ಧೈರ್ಯ ಇರಲಿಲ್ಲ. ಎಲ್ಲರೂ ನೀತು ತುಂಬಾ ಜಗಳ ಮಾಡುತ್ತಾರೆ ಅಂತ ಹೇಳ್ತಾ ಇದ್ರು. ನಾನು ನೇರವಾಗಿ ಮಾತನಾಡುವ ಸ್ವಭಾವದವಳು. ಹಿಂದೆ ಮಾತನಾಡಿ ಗೊತ್ತಿಲ್ಲ. ಏನೇ ಇದ್ದರೂ ನೇರವಾಗಿ ನನ್ನ ಎದುರೇ ಮಾತನಾಡಬಹುದಿತ್ತು. ಆದರೆ, ಹಾಗೆ ಮಾಡದೇ ಹಿಂದೆ ಆಡಿಕೊಳ್ಳುವುದು ಎಷ್ಟು ಸರಿ?. ಇದರಿಂದ ಯಾರ್‍ಯಾರ ಮನಸ್ಥಿತಿ ಹೇಗಿದೆ ಎನ್ನುವುದು ಗೊತ್ತಾಯಿತು.

‘ಬಿಗ್‌ ಬಾಸ್‌’ಗೆ ಹೋಗುವಾಗ ನಿಮ್ಮ ಮನಸ್ಥಿತಿ ಹೇಗಿತ್ತು? ಈಗ ಹೇಗಿದೆ?
ನಾನು ಯಾವುದನ್ನೂ ವೈಯಕ್ತಿಕವಾಗಿ ತೆಗೆದುಕೊಂಡಿಲ್ಲ. ಹಾಗಾಗಿ ಆರಾಮವಾಗಿದ್ದೇನೆ. ಬಹುಶಃ ವೈಯಕ್ತಿಕವಾಗಿ ತೆಗೆದುಕೊಂಡು ಇತರ ಸ್ಪರ್ಧಿಗಳ ಜೊತೆಗೆ ಕಿತ್ತಾಡಿದ್ದರೆ ಸಮಸ್ಯೆಯಾಗುತ್ತಿತ್ತು. ನಾನು ಅದ್ಯಾವುದನ್ನೂ ಮಾಡಿಲ್ಲ. ಮೊದಲು ನನ್ನ ಮನಸ್ಥಿತಿ ಹೇಗಿತ್ತೋ ಈಗಲೂ ಹಾಗೆಯೇ ಇದೆ. ಜನರ ಮನಸ್ಸು, ಪ್ರೀತಿ ಗೆದ್ದಿದ್ದೇನೆ ಎಂಬ ಸಂತೋಷ ಇದೆ.

ಈ ಕಾರ್ಯಕ್ರಮದಿಂದ ವೈಯಕ್ತಿಕವಾಗಿ ನಿಮಗೆ ಆದ  ಅನುಕೂಲ/ಅನಾನುಕೂಲ ಯಾವುದು?
ಅನಾನುಕೂಲ ಏನೂ ಆಗಲಿಲ್ಲ. ನೀತು ಅಂದರೆ ಬರೀ ಜಗಳ ಮಾಡುತ್ತಾರೆ ಎಂದು ಜನ ಅಂದುಕೊಂಡಿದ್ದರು. ಆದರೆ, ಬರಬರುತ್ತ ನನ್ನ ಬಗ್ಗೆ ಜನರಲ್ಲಿದ್ದ ಆ ಕಲ್ಪನೆ ದೂರವಾಯಿತು. ‘ಮೇಡಂ, ನೀವು ಕೊನೆವರೆಗೆ ಇರಬೇಕಿತ್ತು. ನೀವೇ ಗೆಲ್ಲಬೇಕಿತ್ತು’ ಅಂತ ಸುಮಾರು ಜನ ನನಗೆ ಹೇಳಿದ್ದಾರೆ. ಜನರ ಪ್ರೀತಿ ಸಿಕ್ಕಿದ್ದೇ ನನಗೆ ದೊಡ್ಡ ಅನುಕೂಲ.

ಕಾರ್ಯಕ್ರಮಕ್ಕೆ ಹೋಗುವ ಮುಂಚೆ ನಿಮ್ಮ ತೂಕ ಎಷ್ಟಿತ್ತು? ಈಗ ಎಷ್ಟಿದೆ?
ನನ್ನ ತೂಕ ಬಹಳಷ್ಟು ಇಳಿದಿದೆ. ಬಹಳ ಸಣ್ಣಗಾಗಿದ್ದೇನೆ ಎಂದು ನನ್ನ ಆಪ್ತರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

‘ಬಿಗ್‌ ಬಾಸ್‌’ನಿಂದ ನಿಮ್ಮ ವೃತ್ತಿ ಜೀವನದಲ್ಲಿ ಏನಾದರೂ ಬದಲಾವಣೆ ಆಗಬಹುದಾ?
‘ಬಿಗ್‌ ಬಾಸ್‌’ ಕೂಡ ನನ್ನ ವೃತ್ತಿ ಜೀವನದ ಒಂದು ಭಾಗ ಅಂದುಕೊಂಡಿದ್ದೇನೆ. ಏಕೆಂದರೆ ಇದೊಂದು ರಿಯಾಲಿಟಿ ಷೋ. ಇದರಿಂದ ನನ್ನ ವೃತ್ತಿಗೆ ಸಹಾಯ ಆಗುತ್ತೋ ಇಲ್ಲವೋ ಎಂದು ಯೋಚಿಸಲು ಹೋಗಿಲ್ಲ.

ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ಬಂದಾಗ ನಿಮ್ಮ ಪ್ರತಿಕ್ರಿಯೆ ಹೇಗಿತ್ತು?
ಇದಕ್ಕಿಂತಲೂ ಮೊದಲೇ ಸೀಸನ್‌ ೧ರ ಕಾರ್ಯಕ್ರಮಕ್ಕೆ ಆಹ್ವಾನ ಬಂದಿತ್ತು. ಆದರೆ, ನಮ್ಮ ತಂದೆಗೆ ಕಷ್ಟ ಆಗುತ್ತೆ ಅಂತ ಅವರೊಬ್ಬರನ್ನೇ ಬಿಟ್ಟು ಹೋಗಿರಲಿಲ್ಲ. ಆದರೆ, ಸೀಸನ್‌ ೨ ಕಾರ್ಯಕ್ರಮಕ್ಕೆ ತಯಾರಾಗಿದ್ದೆ. ಇದೊಂದು ಒಳ್ಳೆಯ ಅವಕಾಶ ಅಂದುಕೊಂಡೆ. ಬಹಳ ಖುಷಿಯಾಗಿತ್ತು.

ಎರಡನೇ ಬಾರಿಗೆ ಬಿಗ್‌ಬಾಸ್‌ ಮನೆ ಸೇರಿದಾಗ (ರೀ ಎಂಟ್ರಿ)  ಆದಿ ಸೇರಿದಂತೆ ಇತರರ ಪ್ರತಿಕ್ರಿಯೆ ಯಾವ ರೀತಿ ಇತ್ತು?
ಆದಿ ಮೇಲೆ ಎಲ್ಲೋ ಒಂದು ಕಡೆ ನನಗೆ ಬೇಜಾರಾಗಿತ್ತು. ಅವರು ಗೆಳೆತನವನ್ನು ಕೈ ಬಿಟ್ಟಿದ್ದಾರೆ ಅಂತ ಅನಿಸಿತ್ತು. ಆದರೆ, ನಂತರ ಅವರು ಎಲ್ಲ ವಿಚಾರಗಳನ್ನು ಮುಕ್ತವಾಗಿ ನನ್ನ ಜೊತೆ ಹಂಚಿಕೊಂಡರು. ಹೀಗಾಗಿ ಅವರ ಬಗ್ಗೆ ಇದ್ದ ಅಪನಂಬಿಕೆ ದೂರವಾಯಿತು. ನಮ್ಮ ಗೆಳೆತನ ಇನ್ನಷ್ಟು ಗಟ್ಟಿಯಾಯಿತು.

ನಿಜಕ್ಕೂ ಈ ತರಹದ ಕಾರ್ಯಕ್ರಮಗಳು ಬೇಕಾ?
ಕೆಲವರಿಗೆ ಇಷ್ಟವಾಗುತ್ತೆ, ಇನ್ನು ಕೆಲ ಜನರಿಗೆ ಇಷ್ಟವಾಗದೇ ಇರಬಹುದು. ಇದು ಬಹಳ ಜನಪ್ರಿಯ ಆಗಿದೆ. ಇದರರ್ಥ ಪ್ರೇಕ್ಷಕರಿಗೆ ಇಷ್ಟವಾಗಿದೆ ಎಂದೇ ಅರ್ಥ.

ನೀತು ಅವರಿಗೆ ಯಾವಾಗಲೂ ಮೂಗಿನ ಮೇಲೆ ಸಿಟ್ಟು ಇರುತ್ತದೆ ಎಂಬ ಆರೋಪ ಇದೆಯಲ್ಲ. ಇದಕ್ಕೆ ಏನೆನ್ನುತ್ತೀರಿ?
ಎಲ್ಲರ ಜೊತೆಗೆ ನಾನು ಜಗಳ ಮಾಡುತ್ತೇನೆ ಎಂದು ಕೆಲವರು ಬ್ರಾಂಡ್‌ ಮಾಡಿದ್ದಾರೆ. ನಿಜ ಹೇಳಬೇಕೆಂದರೆ ನಾನು ಸೌಮ್ಯ ಸ್ವಭಾವದವಳು. ಬೇರೆಯವರು ತಪ್ಪು ಮಾಡಿ ಅದನ್ನು ನನ್ನ ಮೇಲೆ ಹೊರಿಸಲು ಪ್ರಯತ್ನಿಸಿದರೆ ಅದಕ್ಕೆ ಪ್ರತಿಕ್ರಿಯಿಸುತ್ತೇನೆ. ಅವರು ಒಪ್ಪಿಕೊಳ್ಳದಿದ್ದರೆ ಸಹಜವಾಗಿಯೇ ಜಗಳ ಆಗುತ್ತದೆ.

‘ಬಿಗ್‌ ಬಾಸ್‌’ ಮನೆಯಲ್ಲಿ ಕಳೆದ ೭೮ ದಿನಗಳ ಅವಧಿಯ ಸಂಪಾದನೆ ಮತ್ತು ಅದರ ಹೊರಗೆ ಗಳಿಸುತ್ತಿದ್ದ ಗಳಿಕೆಯಲ್ಲಿ ಏನಾದರೂ ವ್ಯತ್ಯಾಸ ಉಂಟಾಗಿದೆಯಾ?
ಸುವರ್ಣ ಚಾನೆಲ್‌ ಮತ್ತು ಎಂಡಾಮೋಲ್‌ ಕಂಪೆನಿಯವರು ಗೌರವದಿಂದ ನಡೆಸಿಕೊಂಡಿದ್ದಾರೆ. ನಾನು ಸೇರಿದಂತೆ ಎಲ್ಲರಿಗೂ ಉತ್ತಮ  ರೀತಿಯಲ್ಲಿ ಹಣ ನೀಡಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಈಗಲೂ ನಿಮಗೆ ಆಫರ್‌ಗಳು ಇವೆಯೇ?
ಸುಮಾರು ದಿನಗಳ ನಂತರ ಈಗತಾನೆ ಬೆಂಗಳೂರಿಗೆ ಬಂದಿದ್ದೇನೆ. ಏನು, ಎತ್ತ ಅಂತ ಯಾವುದೂ ಗೊತ್ತಿಲ್ಲ. ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT