ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಅಭಿಮಾನದ ರಾವಣ

ಅಭಿನಯಕ್ಕೆ ಸವಾಲು ಎಸೆಯುವಂಥ ಪಾತ್ರವನ್ನು ಹಂಬಲಿಸುವ ಕಲಾವಿದರು ಈ ತಲೆಮಾರಿನಲ್ಲಿ ವಿರಳ. ನೆರೆ ಭಾಷೆಯ ಯಶಸ್ವಿ ಚಿತ್ರವನ್ನು ಯಥಾವತ್‌ ರೀಮೇಕ್‌ ಮಾಡಿ, ಅದನ್ನು ಸಾಧನೆಯೆಂದು ಬಣ್ಣಿಸಿಕೊಳ್ಳುವ ನಟರ ಸಂದರ್ಭ ಇಂದಿನದು. ಹಳೆಯ ತಲೆಮಾರಿನ ಕಲಾವಿದರ ನಟನೆಯ ಹಸಿವಿಗೆ ಉದಾಹರಣೆ ‘ನನ್ನ ಅಭಿಮಾನದ ರಾವಣ’.

ತೆಲುಗಿನ ಅಪ್ರತಿಮ ನಟರಲ್ಲಿ ಒಬ್ಬರಾದ ಎನ್‌.ಟಿ. ರಾಮರಾವ್‌ (ಮೇ 28, 1923 – ಜ. 18, 1996) ಅವರ ಈ ಬರಹ ಕಲೆಯ ಬಗೆಗಿನ ಅವರ ತುಡಿತದ ಅಭಿವ್ಯಕ್ತಿಯಂತಿದೆ. ಇದು ರಾವಣನ ವ್ಯಕ್ತಿತ್ವದ ಬಗ್ಗೆ ಕಲಾ ರಸಿಕನೊಬ್ಬನ ವಿಮರ್ಶೆಯ ಟಿಪ್ಪಣಿಗಳಂತೆಯೂ ಮುಖ್ಯವಾದುದು. ಸುಮಾರು ಐವತ್ತೈದು ವರ್ಷಗಳ ಹಿಂದೆ ಎನ್‌.ಟಿ. ರಾಮರಾವ್‌ ಅವರು ಬರೆದ ಈ ಬರಹವನ್ನು ಕನ್ನಡಕ್ಕೆ ಅನುವಾದಿಸಲಾಗಿದೆ.

ಸರೋವರದ ಕಮಲ ಪುಷ್ಪದಂತೆ, ದಿಗ್ಗಜದ ಸೊಂಡಿಲಿನ ತುದಿಯಂತೆ, ಹರಿತವಾದ ಖಡ್ಗದ ಅಲಗಿನಂತೆ ನಾನು ನಟನಾಗಿ ನಿಮ್ಮೆಲ್ಲರ ಅಭಿಮಾನವನ್ನು ಸೂರೆಗೊಂಡಿದ್ದೇನೆ. ಬೆಳ್ಳಿತೆರೆಯ ಮೇಲೆ ನಾನು ಹೀಗೆ ನಿಂತು ಉಳಿಯಲು, ನಿಮ್ಮ ಅಭಿಮಾನವನ್ನು ಸಂಪಾದಿಸಲು ಮೂಲ ಕಾರಣವೆಂದರೆ ನಾನು ಧರಿಸಿದ ಪಾತ್ರಗಳೇ ಎಂದು ನನ್ನ ವಿಶ್ವಾಸ.

ಅಭಿಮಾನದ ಪಾತ್ರವನ್ನು ಧರಿಸಿ, ಅಭಿಲಾಷೆಯನ್ನು ಪೂರೈಸಿಕೊಳ್ಳುವುದಕ್ಕಿಂತಲೂ ಮಿಗಿಲಾದುದನ್ನು ಯಾವ ನಟನೂ ಆಶಿಸುವುದಿಲ್ಲ. ನಟನೆಗೆ ಅವಕಾಶವುಳ್ಳ ಬಲಿಷ್ಠವಾದ ಪಾತ್ರಗಳೆಂದರೆ ನನಗೆ ಬಹಳ ಅಭಿಮಾನ. ಕಾಲೇಜು ದಿನಗಳಲ್ಲಿ ನಾಟಕಗಳನ್ನಾಡುವಾಗ ಕೂಡ ಅಷ್ಟೆ. ಸ್ತ್ರೀ ವೇಷ ಹಾಕೆಂದರೆ ನನಗೆ ಎಲ್ಲಿಲ್ಲದ ಪೌರುಷ ಹುಟ್ಟುತ್ತಿತ್ತು. ಬಿಸಿಯಾದ, ಭವ್ಯವಾದ ಪಾತ್ರಗಳೆಂದರೆ ನನಗೆ ಬಹಳ ಇಷ್ಟ.
ಬೆಜವಾಡ ಕಾಲೇಜಿನಲ್ಲಿ ನನ್ನ ಮೇಷ್ಟ್ರು ಕವಿ ಸಾಮ್ರಾಟ್‌ ವಿಶ್ವನಾಥ ಸತ್ಯನಾರಾಯಣ ಅವರು ನನ್ನ ಕೈಯಲ್ಲಿ ಸ್ತ್ರೀವೇಷ ಹಾಕಿಸಬೇಕೆಂದು ಹಟ ಹಿಡಿದದ್ದು... ಅದೊಂದು ಗಮ್ಮತ್ತು ಕತೆ! ರಾಚಮಲ್ಲನ ಯುದ್ಧ ಶಾಸನದಲ್ಲಿ ನಾಗಮ್ಮ ಪಾತ್ರವನ್ನು ನನಗೆ ಕೊಟ್ಟರು. ಪೌರುಷ ಪ್ರಣಯದಿಂದ, ಬೇಕಾದರೆ ಮೀಸೆ ತೆಗೆಯದೆ ಆ ಪಾತ್ರವನ್ನು ಧರಿಸುತ್ತೇನೆಂದು ನಾನು ಭೀಷ್ಮಿಸಿದೆನು.

ಹಾಗೆ ಭೀಷ್ಮಿಸಿಕೊಳ್ಳುವ ಪ್ರವೃತ್ತಿ ಅಂದಿಗೂ ಇಂದಿಗೂ ನನ್ನಲ್ಲಿದೆ. ಭೀಷ್ಮನ ರೀತಿಯ ಗಂಭೀರ ಪಾತ್ರಗಳೆಂದರೂ, ವೀರಗಾಂಭೀರ್ಯ ರಸಗಳು, ಔದಾರ್ಯಭಾವಗಳು ಉಕ್ಕಿಬರುವ ಪಾತ್ರಗಳೆಂದರೆ ಅಂದು, ಇಂದು ನನಗೆ ಬಲು ಅಕ್ಕರೆ. ‘ಭೂ ಕೈಲಾಸ್‌’ ಚಿತ್ರದಲ್ಲಿ ಮೊದಲ ಸಲ ರಾವಣನ ಪಾತ್ರ ಧರಿಸಿದಾಗಿನಿಂದಲು ನನಗೆ ಅದೊಂದು ವಿಶಿಷ್ಟ ಪಾತ್ರವಾಗಿ ಗೋಚರಿಸಿದೆ.

‘ರಾವಣ’ ಎಂದೊಡನೆ ಸ್ಫುರಿಸುವುದು ವಿಕೃತವಾದ ಯಾವುದೋ ಒಂದು ಭಯಂಕರ ಸ್ವರೂಪ – ಸ್ವಭಾವ. ಸಾಮಾನ್ಯ ದೃಷ್ಟಿಗೆ ‘ರಾವಣ’ ಉಗ್ರಕೋಪಿ, ಕ್ರೂರನಾದ ರಾಕ್ಷಸನಾಗಿ ಕಾಣುವನು. ಆದರೆ, ರಾಮಾಯಣವನ್ನು ತೆರೆದು ನೋಡಿದರೂ, ಪೂರ್ಣವಾಗಿ ಅರ್ಥ ಮಾಡಿಕೊಂಡರೂ ಕಾಣುವ ಆಕೃತಿ ಬೇರೆ! ಶ್ರೀ ಮಹಾವಿಷ್ಣುವೇ ಅವನನ್ನು ಕೊನೆಗೊಳಿಸಲು ಅವತಾರ ಎತ್ತಬೇಕಾಯಿತೆಂದರೆ, ಆ ಪಾತ್ರದಲ್ಲಿ ಎಷ್ಟೋ ಅಸಾಮಾನ್ಯವಾದ ಔನ್ನತ್ಯ ಇದ್ದೇ ಇರಬೇಕು. ಅದಕ್ಕೆ ಜೊತೆಯಾಗಿ ಆತನ ವಂಶ ಮಹಿಮೆ, ಸಾಕ್ಷಾತ್ತು ಬ್ರಹ್ಮವಂಶ. ಪುಲಸ್ತ್ಯ ಬ್ರಹ್ಮದೇವನ ಮೊಮ್ಮಗ. ವಿಶ್ವ ವಸುವಿನ ಮಗ. ಹುಟ್ಟಿನಿಂದಲೇ ಈತನು, ಪುಣ್ಯಾತ್ಮ. ಅಷ್ಟೆ ತಾನೆ, ಎಂದು ಹೊಡೆದುರುಳಿಸಲು ಸಾಧ್ಯವಿಲ್ಲ. ದಶಕಂಠನು ಪುನೀತವಾದ ಜೀವನವನ್ನು ನಡೆಸಿದವನು.

ಸೂರ್ಯೋದಯಕ್ಕೂ ಮೊದಲೇ ನವಕೋಟಿ ಶಿವಲಿಂಗಗಳನ್ನು ಸ್ವವಿರಚಿತ ಮಂತ್ರೋಚ್ಛಾರಣೆ­ಯಿಂದ ಪೂಜಿಸುತ್ತಿದ್ದ ಶಿವಪೂಜಾ ದುರಂಧರನು ರಾವಣ. ನೆನೆದೊಡನೆ ಕೈಲಾಸವಾಸಿಯಾದ ಶಿವನನ್ನು ಪ್ರತ್ಯಕ್ಷಗೊಳಿಸಿಕೊಳ್ಳಬಲ್ಲ ಮಹಾ ತಪಸ್ವಿ. ಇದಕ್ಕೆ ತಕ್ಕಷ್ಟು ಪುರಾಣಕಾವ್ಯ ನಿದರ್ಶನಗಳು, ಮೌಖಿಕ ಪರಂಪರೆಯ ಜನಶ್ರುತಿಗಳು ಎಷ್ಟೋ ಇವೆ. ದಶಕಂಠ ರಾವಣ ವಿರಚಿತವಾದ ‘ಮಹಾನ್ಯಾಸ’ವನ್ನು ಹೊದಿಕೆಯಾಗಿ ಅರ್ಪಿಸದಿದ್ದರೆ, ಮಹಾದೇವನ ಅರ್ಚನೆ ಪೂರ್ಣವಾಗುವುದಿಲ್ಲ. ಅವನೆಷ್ಟು ಸಂಸ್ಕೃತಿ ಪರಿಜ್ಞಾನವುಳ್ಳವನೋ ನೋಡಿರಿ.

ಆತನ ಪಾಂಡಿತ್ಯದಲ್ಲಿರುವ ಲೌಕಿಕ – ಪಾರ ಲೌಕಿಕ ಶಿಖರಗಳು ಮಹೋನ್ನತವಾದುವು. ಆಧ್ಯಾತ್ಮಿಕ ಚಿಂತನೆ, ತನಗೆ ಅತೀತವಾದ ದೈವತ್ವದ ಬಗ್ಗೆ ಭಕ್ತಿ–ವಿಶ್ವಾಸಗಳು ಆತನಲ್ಲಿವೆ. ರಸಜ್ಞನಾಗಿ, ಕಳಾ ಪ್ರಪೂರ್ಣನಾಗಿ ರಾವಣನು ಅದ್ವಿತೀಯನು. ಮೂರು ಲೋಕಗಳಿಗೆಲ್ಲ ಸರಿಸಾಟಿಯಿಲ್ಲದ ವೈಣಿಕನು. ಸಾಮವೇದದ ಕರ್ತೃ. ತನ್ನ ಮೇಲೆ ಮುನಿಸಿಕೊಂಡ ಶಂಕರನ ಪ್ರೀತಿಗಾಗಿ ಹೊಟ್ಟೆಯನ್ನು ಬಗೆದುಕೊಂಡು ಕರುಳಮಾಲೆಯಲ್ಲಿ ರುದ್ರವೀಣೆ ಕಟ್ಟಿ, ಜೀವನಾದದಿಂದ ಪಾರ್ವತೀಶನನ್ನು ತನ್ನ ಎದುರು ಬರಮಾಡಿಕೊಳ್ಳುವಷ್ಟು ಸಂಗೀತ ಕಳಾ ತಪಸ್ವಿ.

ಇನ್ನು ವಿಜ್ಞಾನಿಯಾಗಿ ಮಾತ್ರ ರಾವಣನೇನು ಸಾಮಾನ್ಯನೇ? ನವೀನ ಕಾಲದಲ್ಲಿ ನಮ್ಮ ವಿಜ್ಞಾನಿಗಳು ಸೇರಬೇಕೆಂದು ಕನಸು ಕಾಣುತ್ತಿರುವ ನಭೋ ಮಂಡಲಗಳನ್ನು ಬಹು ಹಿಂದೆಯೇ ದರ್ಶಿಸಿದ ಮಹಾವಿಜ್ಞಾನಿ. ವಾತಾವರಣವನ್ನು, ಋತುಚಕ್ರವನ್ನು ಕೈವಶ ಮಾಡಿಕೊಂಡು ತನ್ನ ರಾಜ್ಯವನ್ನು ಸುಭಿಕ್ಷಗೊಳಿಸಿದ ಸ್ಥಿತಪ್ರಜ್ಞ. ಅನೇಕ ಮಾರಣಾ­ಯುಧಗಳು, ಮಂತ್ರ ತಂತ್ರಗಳು, ಕ್ರಿಯಾ ಕಲ್ಪಾದಿ ವಿದ್ಯೆಗಳನ್ನು ಸಿದ್ಧಿಸಿಕೊಂಡ ಸುಜ್ಞಾನಿ. ಮಹಾ ಕಾವ್ಯಗಳ ಪ್ರಕಾರ ಪುಷ್ಪಕ ವಿಮಾನದಲ್ಲಿ ವಾಯುಗಮನ ಮಾಡಿದನೆಂದು, ದಿವಿಜಲೋಕಗಳ ಮೇಲೆ ದಂಡೆತ್ತಿ ಅಷ್ಟ ದಿಕ್ಪಾಲಕರನ್ನು ಗೆದ್ದು ತನ್ನ ಪಾದಗಳ ಕೆಳಗೆ ಬೀಳಿಸಿಕೊಂಡನೆಂದು ವರ್ಣಿಸಲಾಗಿದೆ.

ಮಗನಾದ ಮೇಘನಾದನ ಜನನ ಕಾಲದಲ್ಲಿ ವಕ್ರಿಸಿದ ಶನಿ ಮಹಾತ್ಮನ ಮೇಲೆ ಮುನಿದು, ಗದಾಘಾತದಿಂದ ಕುಂಟನನ್ನಾಗಿ ಮಾಡಿದ್ದೇ ರಾವಣನ ಜ್ಯೋತಿಷ್ಯಶಾಸ್ತ್ರ ಪ್ರಜ್ಞೆಗೆ ನಿದರ್ಶನ.

ಆವೇಶದಲ್ಲಿ ಆರು ಕೋಟಿ ಆಂಧ್ರ ಜನತೆಯನ್ನು ನೆನಪಿಸುವ ಈ ರಾವಣ, ಬ್ರಹ್ಮ ಐರಾವತವನ್ನೆ ಡಿಕ್ಕಿ ಹೊಡೆದವನು. ಕೆರಳಿದಾಗ ಕೈಲಾಸ ಪರ್ವತವನ್ನೆ ಹತ್ತು ತಲೆಗಳಲ್ಲಿ ಹೊತ್ತು ನಿಂತದ್ದು ಆತನ ಭುಜಬಲ ದರ್ಪಕ್ಕೆ ಹೆಗ್ಗುರುತು. ರಾವಣನು ಕಾರಣ ಜನ್ಮನಾದ ಮಹನೀಯನು. ಹಿಡಿದ ಛಲವನ್ನು ಬಿಡದ ಕಾರ್ಯಸಾಧಕನು. ಅಭಿಮಾನವನ್ನು ಆರಾಧಿಸುವ ಆತ್ಮಾಭಿಮಾನಿ. ಎಂಥ ಪರಿಸ್ಥಿತಿಯಲ್ಲು ತಲೆ ತಗ್ಗಿಸದ ಮಹಾಧೀರ. ಆತನನ್ನು ಈ ಪಾತ್ರದ ಮೂಲಕ ಧ್ಯಾನಿಸುವುದೊಂದು ಪುಣ್ಯ ಸಂಸ್ಕರಣೆ.

ಈ ರಾಮಾಯಣಸ್ಥವಾದ ನಿದರ್ಶನಗಳಿಂದ ನಮಗೆ ಕಾಣಿಸುವ ವ್ಯಕ್ತಿ ಯಾರು? ಆ ಕಾಣಿಸುವ ರಾವಣನು ಎಂಥವನು? ಬ್ರಹ್ಮತೇಜಸ್ಸಿನಿಂದ ಕೂಡಿ, ವಕ್ರವಿಲ್ಲದ ಪರಾಕ್ರಮ ಬಲದರ್ಪಿತನಾಗಿ ಮಹಾಪಂಡಿತ ಪ್ರಕಾಂಡನಾಗಿ, ಶಿವಪೂಜಾ ದುರಂಧರನಾಗಿ, ಮಹಾವಿಜ್ಞಾನಿಯಾದ ಮಹಾತಪಸ್ವಿ. ಆದರೆ... ಇಷ್ಟೊಂದು ಮಹಾ ಉದಾತ್ತನಾದವನು ರಾಕ್ಷಸನಾಗಿ ಪರಿಗಣಿತವಾಗಲು ಕಾರಣವೇನು?

ಅವನ ವೈಷ್ಣವ ದ್ವೇಷ ಮುಖ್ಯವಾದ ಒಂದು ಕಾರಣ. ತಾನು ಶೈವನಾಗಿರುವುದು ದೋಷವಲ್ಲ. ಇಷ್ಟದೈವವನ್ನು ನಂಬಿ ಓಲೈಸುವುದರಲ್ಲಿ ಅಪಚಾರವಿಲ್ಲ. ಆದರೆ, ತನ್ನ ಮತವನ್ನು ಇತರರ ಮೇಲೆ ಹೇರುವುದು, ಪರಮತ ದ್ವೇಷದಿಂದ ವೈಷ್ಣವ ಪೂಜೆಗಳಿಗೆ ಅಡ್ಡಿಗಳನ್ನೊಡ್ಡಿ, ವಿಷ್ಣುದ್ವೇಷಿಯಾಗಿ ಹಿಂಸೆಗೆ ತೊಡಗಿದ್ದೇ ಆತನೆಂದರೆ ನಮಗೆ ಭಯಭ್ರಾಂತಗೊಳ್ಳುವಂತೆ ಮಾಡಿದೆ. ಪರನಾರಿ ವ್ಯಾಮೋಹವೇ ನಳಕೂಬರನ ಶಾಪಕ್ಕೆ ದಾರಿಯಾಗಿ, ರಾವಣನನ್ನು ಅಧಃಪತನಕ್ಕೆ ತಳ್ಳಿದೆ. ಇವೆರಡು ಆತನನ್ನು ಹೊಡೆದುರುಳಿಸಿದಷ್ಟು ಮತ್ತಾವುದೂ ಬೀಳಿಸಿಲ್ಲ. ಸ್ವಾಭಿಮಾನದಲ್ಲಿ ಕೂಡಾ ಆತನಿಗೆ ಆತನೇ ಸರಿಸಾಟಿ. ತನ್ನಲ್ಲಿ ತನಗೆ ಎಷ್ಟೇ ನಂಬಿಕೆ ಇದ್ದರೂ ಇತರರೆಂದರೆ ಅಷ್ಟೇ ನಿರ್ಲಕ್ಷ್ಯ. ಕೀಳಾಗಿ ಕಾಣುವುದರಿಂದಲೇ ನಂದೀಶ್ವರನ ಶಾಪಕ್ಕೆ ತುತ್ತಾಗಬೇಕಾಯ್ತು. ಆತನ ವಂಶವೆಲ್ಲ ವಾನರ ಸೈನ್ಯದಿಂದ ಹತವಾಯಿತು.

ಮಹಾಲಕ್ಷ್ಮಿಯ ಅವತಾರ ಮೂರ್ತಿಯಾದ ಮಾತಲುಂಗಿಯನ್ನು ಸೆರೆ ಹಿಡಿಯಲು ಹೋದಾಗ ಪರಾಭವಗೊಂಡಿದ್ದು, ವೇದವತಿಯಾಗಿದ್ದ ಆಕೆಯನ್ನು ತಾನು ದಕ್ಕಿಸಿಕೊಳ್ಳಲಾಗದೆ ಹೋದದ್ದು, ಸೀತೆಯಾಗಿ ಜನಿಸಿದ ಆಕೆಯನ್ನು ಸ್ವಯಂವರದಲ್ಲಿ ವರಿಸಲೆಳಸಿ ಭಂಗಿತನಾದದ್ದು, ಕೊನೆಗೆ ಸೀತೆಯನ್ನು ಲಂಕೆಯಲ್ಲಿ ಬಂಧಿಸಿಟ್ಟು ಮೂರ್ಖನಾದದ್ದು– ಇವೆಲ್ಲವೂ ಮೇಲ್ಕಂಡ ಮಹತ್ತರ ಗುಣಗಳೊಂದಿಗೆ ಜೋಡಿಸಿ ನೋಡಿದರೆ ರಾವಣನು ಎಂಥವನಾಗಿ ನಮಗೆ ಕಾಣಿಸುವನು?

ನನ್ನ ಕಣ್ಣಿಗೆ ಆತನು ದುರ್ಮಾರ್ಗಿಯಾಗಿ ಕಾಣನು, ಛಲದಂಕಮಲ್ಲನಾಗಿ ಕಾಣುವನು. ಅವನಲ್ಲಿ ಇಲ್ಲದ ರಸವಿಲ್ಲ. ಬೇಕಾದಷ್ಟು ಸರಸ, ಇರಬಾರದಷ್ಟು ವಿರಸ ಅವನಲ್ಲಿದೆ. ಇಂಥ ಪಾತ್ರ ಅಸದಳವಾದದ್ದು ಎಂದು ನನ್ನ ನಂಬಿಕೆ. ಇಂಥ ಪಾತ್ರ ಧರಿಸಬೇಕೆಂದು ನನ್ನ ಅಭಿಲಾಷೆ. ಇದೇ ನನ್ನನ್ನು ಈ ಪಾತ್ರಧಾರಣೆಗೆ ಪ್ರೋತ್ಸಾಹಿಸಿದೆ.

ರಾವಣನು ವಿಕೃತಾಕಾರನಲ್ಲ. ದೊಡ್ಡಹೊಟ್ಟೆಯಿಂದ, ಗಿರಿಜಾ ಮೀಸೆಗಳಿಂದ, ಅನಗತ್ಯ ವಿಕಟಾಟ್ಟಹಾಸಗಳಿಂದ ಬೊಬ್ಬಿರಿಯುವ, ದುಷ್ಟ ಪ್ರವೃತ್ತಿಗಳಿಂದ ಕೂಡಿದ ಮದೋನ್ಮತ್ತನೂ, ವಿಲಕ್ಷಣ ಸ್ವರೂಪಿಯೂ ಅಲ್ಲ. ಸಾಮಾನ್ಯ ಮಾನವಾತೀತನಾದ ಒಂದು ಮಹತ್ತಮ ವ್ಯಕ್ತಿ – ಶಕ್ತಿ. ಹಾಲು ತುಂಬಿದ ಕೊಡದಲ್ಲಿ ಒಂದೇ ಒಂದು ವಿಷದ ಹನಿ ಬಿದ್ದರೂ, ಅಮೃತ ವಿಷವಾಗುವಂತೆಯೇ ಏನೆಲ್ಲ ಸದ್ಗುಣಗಳಿದ್ದರೂ, ರಾವಣನಲ್ಲಿರುವ ಒಂದು ದುರ್ಗುಣವೇ (= ಪರನಾರಿ ವ್ಯಾಮೋಹ) ಆತನ ನಾಶಕ್ಕೆ ಹೇತುವಾಯಿತು.

‘ರಾವಣ ಪಾತ್ರ’ ಸರ್ವಾವೇಶ ಸಂಕಲಿತ. ಆನಂದ – ಆವೇಶ, ಅನುಗ್ರಹ – ಆಗ್ರಹ, ಸಹನೆ – ಅಸೂಯೆ, ಭಕ್ತಿ – ಧಿಕ್ಕಾರ... ಇಷ್ಟೊಂದು ವೈರುಧ್ಯಗಳು, ವೈವಿಧ್ಯಗಳು ರಾವಣನನ್ನು ಕಡೆದು ನಿಲ್ಲಿಸಿವೆ. ಈ ಪಾತ್ರದ ಸಜೀವತೆಯೇ ನನ್ನನ್ನು ಇಷ್ಟೊಂದು ಆಕರ್ಷಿಸಿದೆ. ಈ ಮಹಾಪಾತ್ರವನ್ನು ಧರಿಸಬೇಕಾಗಿ ಬಂದುದಕ್ಕೆ ನಾನು ಧನ್ಯ ಜೀವಿಯಾಗಿದ್ದೇನೆ. ರಾವಣನ ಪರಸ್ಪರ ವಿರುದ್ಧ ಪ್ರವೃತ್ತಿಗಳನ್ನು ಅಭಿವ್ಯಕ್ತಗೊಳಿಸಲು ಪ್ರಯತ್ನಿಸಿದ್ದೇನೆ. ಎಷ್ಟರ ಮಟ್ಟಿಗೆ ಸಫಲನಾಗಿದ್ದೇನೆಂಬುದು ಅಭಿಮಾನಿಗಳು, ಸಹೃದಯ ಓದುಗರು ನನಗೆ ತಿಳಿಯಪಡಿಸಿದರೆ ಸಂತೋಷಿಸುತ್ತೇನೆ.

ಪೌರಾಣಿಕ ಕಥನಗಳಲ್ಲಿ ಕಾಣಿಸುವ ಅದ್ಭುತವಾದ ಸಜೀವ ಪಾತ್ರಗಳಲ್ಲಿ ರಾವಣ ಪಾತ್ರವು ಅತಿಮುಖ್ಯವಾದುದು. ಇದು ನನ್ನ ಅಭಿಮಾನದ ಪಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT