ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಕನಸು ನನ್ನದು

ಮೊದಲ ಓದು
Last Updated 28 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ನನ್ನ ಕನಸು ನನ್ನದು
ಲೇ: ಸತ್ಯಬೋಧ
ಪು: 128; ಬೆ: ರೂ. 80
ಪ್ರ: ವ್ಯಾಸ ಭಂಡಾರ, ನಂ. 53, 3ನೇ ಕ್ರಾಸ್, ಹೊಸಕೆರೆಹಳ್ಳಿ ಬಡಾವಣೆ, ಬೆಂಗಳೂರು– 85


ಕಥೆಗಾರ ಸತ್ಯಬೋಧ ಅವರ  ಮೂರನೇ ಸಂಕಲನ ‘ನನ್ನ ಕನಸು ನನ್ನದು’. ಸಂಕಲನದ ಶೀರ್ಷಿಕೆಯೇ ಕಥೆಗಾರರ ಮನೋಧರ್ಮವನ್ನು ಹೇಳುವಂತಿದೆ. ಕಥೆಗಾರರಿಗೆ ತಮ್ಮ ಕಥೆಗಳ ಬಗ್ಗೆ ವಿಪರೀತ ಮಮಕಾರ, ಮಹತ್ವಾಕಾಂಕ್ಷೆಯೇನೂ ಇಲ್ಲ. ತಮ್ಮ ಅನುಭವಕ್ಕೆ ದಕ್ಕಿದ್ದನ್ನು ಸಹೃದಯರೊಂದಿಗೆ ಹಂಚಿಕೊಳ್ಳಲು ಕಥನ ಪ್ರಕಾರ ಅವರ ನೆರವಿಗೆ ಬಂದಿದೆ.

ಸರಳ ಹಾಗೂ ನೇರ ಶೈಲಿಯ ಬರವಣಿಗೆಯ ಮೂಲಕ ಓದುಗರನ್ನು ತಲುಪುವಲ್ಲಿ ಇಲ್ಲಿನ ಕಥೆಗಳು ಯಶಸ್ವಿಯಾಗಿವೆ. ದೈನಿಕದ ವಿವರಗಳು ಹಾಗೂ ಕೌಟುಂಬಿಕ ಸಂಬಂಧಗಳ ವಿಶ್ಲೇಷಣೆಯ ಮೂಲಕ ಸತ್ಯಬೋಧ ಅವರು ಓದುಗರೊಂದಿಗೆ ಸುಲಭವಾಗಿ ಸಂವಹನ ಸಾಧಿಸುತ್ತಾರೆ. ಸರಳತೆ ಇಲ್ಲಿನ ಕಥೆಗಳ ಶಕ್ತಿ ಆಗಿರುವಂತೆಯೇ ಮಿತಿಯೂ ಆಗಿದೆ.

ಸತ್ಯಬೋಧ ಅವರ ಕಥೆಗಳು ಕಥೆಗಾರರ ಅನುಭವ, ಕಥೆ ಹೇಳುವ ಉತ್ಸಾಹ ಹಾಗೂ ಜೀವನಪ್ರೀತಿಯಿಂದ ನಳನಳಿಸುತ್ತವೆ. ಇಲ್ಲಿನ ಕಥೆಗಳು ಘಟನಾ ಪ್ರಧಾನವಾದವು ಹಾಗೂ ವಸ್ತು ಪ್ರಧಾನವಾದವು. ಸತ್ಯಬೋಧರ ಕಥನ ಶೈಲಿಗೆ ಉದಾಹರಣೆಯಾಗಿ ಸಂಕಲನದ ಆರಂಭಿಕ ಕಥೆಗಳಾದ ‘ಪೂರ್ವಸಿದ್ಧತೆ ಹಾಗೂ ‘ಇಜ್ಜೋಡು’ ಕಥೆಗಳನ್ನು ಗಮನಿಸಬಹುದು.

ಕಾಲದ ಹೊಳೆಯಲ್ಲಿ ದಾಂಪತ್ಯದ ಪರಿಕಲ್ಪನೆ ಬದಲಾಗುತ್ತಾ ಬಂದಿರಬಹುದಾದ ಸಾಧ್ಯತೆಯನ್ನು ಪರಿಶೀಲಿಸುವ ಮೊದಲ ಕಥೆ, ಹಲವು ವಿವರಗಳ ಜೋಡಣೆಯನ್ನು ಆಧರಿಸಿದೆ. ಸಂಬಂಧಗಳ ಪೊಳ್ಳು ಮತ್ತು ಗಟ್ಟಿತನದ ಬಗ್ಗೆ ಓದುಗರನ್ನು ಯೋಚನೆಗೆ ಹಚ್ಚುವ ಉದ್ದೇಶದ ಈ ಬಿಡಿಬಿಡಿ ಚಿತ್ರಗಳು ಕಥೆಯ ಸೂಕ್ಷ್ಮಕ್ಕಿಂತಲೂ ಸಮಾಜಶಾಸ್ತ್ರದ ವಿವರಗಳನ್ನೇ ಹೆಚ್ಚು ಆಶ್ರಯಿಸಿವೆ.

‘ಇಜ್ಜೋಡು’ ಕಥೆ ಕೂಡ ಈ ಸೂತ್ರವನ್ನೇ ನೆಚ್ಚಿದ್ದರೂ, ಕಥೆಯ ಕೊನೆಯಲ್ಲಿ ಜಗದೀಶನ ಬದುಕಿನ ರಹಸ್ಯವೊಂದರ ಸ್ಫೋಟ ಇಡೀ ಕಥನವನ್ನು ಹೊಸ ನಿಟ್ಟಿನಲ್ಲಿ ನೋಡಲು ಒತ್ತಾಯಿಸುತ್ತದೆ. ಇಂಥ ಚಮತ್ಕಾರಿಕ ಅಂತ್ಯಗಳು ಈ ಸಂಕಲನದ ಅನೇಕ ಕಥೆಗಳಲ್ಲಿದ್ದು, ಓದುಗರನ್ನು ಆಕರ್ಷಿಸಲು ಪ್ರಯತ್ನಿಸುತ್ತಿರುವಂತಿವೆ.

‘ಪೂರ್ವಸಿದ್ಧತೆ’ ಕಥೆಯಲ್ಲಿ ಬರುವ ಒಂದು ಸಾಲು– ‘ಕಥೇಲೇನಿದೆ ಸರ್‌, ಬರೆಯೋದರಲ್ಲಿ ಇರೋದು’ ಎನ್ನುವುದನ್ನು ಸತ್ಯಬೋಧ ಅವರ ಒಟ್ಟು ಕಥೆಗಳಿಗೂ ಅನ್ವಯಿಸಬಹುದು. ಇಲ್ಲಿನ ಇಪ್ಪತ್ತೊಂದು ಕಥೆಗಳಲ್ಲಿ ಅವರು ದಾಟಿಸಲು ಪ್ರಯತ್ನಿಸಿರುವುದು ಕಥೆಗಳನ್ನೇ. ಈ ದಾಟಿಸುವಿಕೆಯ (ಬರವಣಿಗೆಯ) ತಂತ್ರಕ್ಕೆ ಇನ್ನಷ್ಟು ಒತ್ತು ನೀಡಿದಲ್ಲಿ ಕಥೆಗಳು ಹೆಚ್ಚು ಗಟ್ಟಿಯಾಗುತ್ತವೆ. ಈ ಕೊರತೆಯ ಹೊರತಾಗಿಯೂ ಹಿರಿಯರೊಬ್ಬರ ಪ್ರಾಮಾಣಿಕ ಅಭಿವ್ಯಕ್ತಿ ಹಾಗೂ ಕಥೆ ಹೇಳುವ ಹುಮ್ಮಸ್ಸಿನ ಕಾರಣದಿಂದಾಗಿ ‘ನನ್ನ ಕನಸು ನನ್ನದು’ ಇಷ್ಟವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT