ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಮನದ ಹೂ

Last Updated 23 ಮೇ 2016, 19:30 IST
ಅಕ್ಷರ ಗಾತ್ರ

ಆಭರಣ ವಿನ್ಯಾಸಗಾರ್ತಿ ವಿನಿತಾ ಮೈಕೆಲ್‌ ಅವರ ‘ಝೀಬ’ ಆಭರಣ ಸಂಗ್ರಹವು ಭಾರತದ ಪ್ರಮುಖ ಅಂತರ್ಜಾಲ ಜ್ಯುವೆಲ್ಲರಿ ಸಂಸ್ಥೆ ಬ್ಲೂಸ್ಟೋನ್‌ನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಅವರು ರತ್ನಶಾಸ್ತ್ರಜ್ಞೆಯೂ ಹೌದು.

ಪರ್ಷಿಯನ್‌ ಕಲೆಯಿಂದ ಪ್ರೇರಿತಗೊಂಡು ವಿನಿತಾ ಅವರು ಚಿನ್ನ, ವಜ್ರ ಹಾಗೂ ವಿವಿಧ ಬಗೆಯ ಹರಳುಗಳನ್ನು ಜೋಡಿಸಿ ರಚಿಸಿದ ವಿನ್ಯಾಸಗಳ ಸಂಗ್ರಹವು ಸೂಕ್ಷ್ಮ ಕಲೆಗಾರಿಕೆಯಿಂದ ಕೂಡಿದೆ. ಝೀಬ ಸಂಗ್ರಹವು ಸಾಂಪ್ರದಾಯಿಕ ಹಾಗೂ ಸಮಕಾಲೀನ ಶೈಲಿಗಳನ್ನು ವಿಶ್ರಣಗೊಳಿಸಿ ರೂಪಿಸಿದ್ದು, ಆಧುನಿಕ ಮಹಿಳೆಯರಿಗೆ ಒಪ್ಪುವಂತಿದೆ.

ಆಭರಣ ವಿನ್ಯಾಸ ಕ್ಷೇತ್ರದ ಬೆಳವಣಿಗೆಗಳು ಮತ್ತು ತಮ್ಮ ವೈಯಕ್ತಿಕ ಆಸಕ್ತಿಗಳ ಬಗ್ಗೆ ತಮ್ಮ ವಿನಿತಾ ತಮ್ಮ ಅನುಭವವನ್ನು ಇಲ್ಲಿ  ಹಂಚಿಕೊಂಡಿದ್ದಾರೆ.

* ಆಭರಣ ವಿನ್ಯಾಸ ಕ್ಷೇತ್ರದಲ್ಲಿ ಆಸಕ್ತಿ ಮೂಡಿದ್ದು ಹೇಗೆ?
ನಾನು ಸಣ್ಣವಳಿದ್ದಾಗ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದೆ. ಡಾನ್ಸ್ ಕಾರ್ಯಕ್ರಮಗಳಿದ್ದಾಗ ಮುತ್ತಿನ ಸರ, ಕಿವಿಯೋಲೆ, ಚಂದ್ರಹಾರ ಹೀಗೆ ವಿವಿಧ ವಿನ್ಯಾಸ ಆಭರಣಗಳನ್ನು ಧರಿಸುತ್ತಿದ್ದೆ. ನನಗೆ ನೃತ್ಯಕ್ಕಿಂತಲೂ ಆಭರಣದ ಕಡೆಗೆ ಹೆಚ್ಚು ಗಮನ.

ಅದನ್ನು ಹಾಕಿಕೊಳ್ಳುವುದೇ ಹೆಮ್ಮೆಯಾಗಿತ್ತು. ಅಗಲೇ ಆಭರಣದ ಮೇಲೆ ಪ್ರೀತಿ ಆರಂಭವಾಗಿತ್ತು. ಬಳಿಕ ನಾನು ಪದವಿ ವ್ಯಾಸಂಗ ಮಾಡುತ್ತಿರುವಾಗ ಅದನ್ನೇ ವೃತ್ತಿಯನ್ನಾಗಿ ತೆಗೆದುಕೊಳ್ಳಲು ನಿರ್ಧರಿಸಿದೆ. ನಿಫ್ಟ್‌ನಲ್ಲಿ  ಸೇರಿದ ಬಳಿಕ  ಆಭರಣ ಹಾಗೂ ರತ್ನ ವಿನ್ಯಾಸದಲ್ಲಿ ವಿಶೇಷ ಪ್ರಾವಿಣ್ಯ ಪಡೆಯಲು ಯೋಚಿಸಿದೆ.

* ನಿಮ್ಮ ಉದ್ಯೋಗದ ಹಿನ್ನೆಲೆ ಬಗ್ಗೆ ತಿಳಿಸಿ.
ನಾನು 2004ರಲ್ಲಿ  ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (ನಿಫ್ಟ್‌) ಸೇರಿದೆ. ಅಲ್ಲಿ ಡಿಗ್ರಿ ಮುಗಿಸಿದ ಬಳಿಕ ಆಮ್ರಪಾಲಿ, ವರ್ಲ್ಡ್ ಗೋಲ್ಡ್ ಕೌನ್ಸಿಲ್, ಪಿ.ಎನ್.ಗಾಡ್ಗಿಲ್, ಗಂಜಂ, ನಾಗಪ್ಪ ಆ್ಯಂಡ್ ಸನ್ ಹಾಗೂ ಅನ್ಮೊಲ್ ಜ್ಯುವೆಲರ್ಸ್‌ನಲ್ಲಿ ವಿನ್ಯಾಸಗಾರ್ತಿಯಾಗಿ ಕೆಲಸ ಮಾಡಿದೆ.

2012ರಲ್ಲಿ ರತ್ನಶಾಸ್ತ್ರದಲ್ಲಿ ಪರಿಣತಿ ಪಡೆದ ಬಳಿಕ  ಕ್ಯಾಲಿಫೋರ್ನಿಯಾದ ಜೆಮೊಲಾಜಿಕಲ್ ಇನ್‌ಸ್ಟಿಟ್ಯೂಟ್ ಆಫ್ ಅಮೆರಿಕದಲ್ಲಿ ಆಭರಣ ವಿನ್ಯಾಸಗಾರ್ತಿಯಾಗಿ ಸೇರಿದೆ.ಈಗ ದುಬೈನಲ್ಲಿ ನನ್ನದೇ ಹೆಸರಿನಲ್ಲಿ ‘ವಿನಿತಾ ಮೈಕೆಲ್‌ ಜ್ಯುವೆಲ್‌ ಕ್ರಾಫ್ಟ್‌’ ಆರಂಭಿಸಿದ್ದೇನೆ. ಸದ್ಯ ಬ್ಲೂಸ್ಟೋನ್‌ನಲ್ಲಿ ಝೀಬ ಸಂಗ್ರಹವು ಎಲ್ಲರ ಮೆಚ್ಚುಗೆ ಪಡೆಯುತ್ತಿದೆ.

*ನಿಮ್ಮ ವಿನ್ಯಾಸಗಳು ಸರಳವಾಗಿದ್ದರೂ, ವಿಭಿನ್ನವಾಗಿದೆ. ವಿನ್ಯಾಸಕ್ಕೆ ಹೇಗೆ ಪೂರ್ವಸಿದ್ಧತೆ ನಡೆಸುತ್ತೀರಿ?
ನನ್ನ ಸಿಗ್ನೇಚರ್  ವಿನ್ಯಾಸಗಳು ಮನದಲ್ಲಿ ಹುಟ್ಟಿಕೊಂಡ ರೂಪಗಳು.  ಪರ್ಷಿಯನ್‌ ಕಲೆ, ತಾಜ್‌ಮಹಲ್‌ನಲ್ಲಿನ ಪುಷ್ಪ ವಿನ್ಯಾಸಗಳ ಪ್ರೇರಣೆಯನ್ನು ನನ್ನ ವಿನ್ಯಾಸದಲ್ಲಿ ಕಾಣಬಹುದು.  ನಾನು ಎಲ್ಲ ವಿನ್ಯಾಸಗಳನ್ನು ವಿಶಿಷ್ಟವಾಗಿ ರೂಪಿಸಲು ಪ್ರಯತ್ನಿಸುತ್ತೇನೆ.

ನಾನು ನನ್ನ ವಿನ್ಯಾಸ ತರಗತಿಯಲ್ಲಿ ಕಲಿತ ರೀತಿಯಲ್ಲಿಯೇ ಮೊದಲು ನೀಲ ನಕ್ಷೆ ತಯಾರಿಸಿಕೊಳ್ಳುತ್ತೇನೆ. ಆರಂಭ ಹಂತದಲ್ಲಿ ಗ್ರಾಹಕರ ಮನಸ್ಥಿತಿ, ಮಾರುಕಟ್ಟೆಗಳ ಬಗ್ಗೆ ಗಮನ ಹರಿಸುತ್ತೇನೆ. ಬಳಿಕ ಕೆಲವೊಂದು ಕಲಾಕೃತಿಗಳ ಪಟ್ಟಿ ಮಾಡಿ ಅಂತಿಮ ವಿನ್ಯಾಸ ರಚಿಸುತ್ತೇನೆ.

ನಾನು ಕೈಗಳ ಮೂಲಕವೇ ನೀಲನಕ್ಷೆ ತಯಾರಿಸುತ್ತೇನೆ.  ವಿನ್ಯಾಸ ನನ್ನ ಮನಸ್ಸಿಗೆ ಒಪ್ಪಿಗೆ ಆಗುವ ತನಕ ಸಣ್ಣಪುಟ್ಟ ಬದಲಾವಣೆ ಆಗುತ್ತಲೇ ಇರುತ್ತದೆ. ಕೊನೆಗೆ ಅಂತಿಮ ರೂಪ. ಇದಕ್ಕೆ ವಾರದಿಂದ ತಿಂಗಳ ಕಾಲ ಸಮಯ ತೆಗೆದುಕೊಳ್ಳುತ್ತೇನೆ.

* ಫ್ಯಾಶನ್ ಅನ್ನುವುದನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ?
ಫ್ಯಾಶನ್ ಅಂದರೆ ಅಭಿರುಚಿಯನ್ನು ಆಭರಣದ ಮೂಲಕ ತೋರಿಸುವುದು. ಇದು ಸಂಸ್ಕೃತಿ, ಸಂಪ್ರದಾಯ, ವ್ಯಕ್ತಿತ್ವ, ವಸ್ತ್ರ ಅಥವಾ ಆಭರಣಗಳಲ್ಲಿ ನಮ್ಮ ಆಯ್ಕೆಯನ್ನು ತೋರಿಸಿಕೊಳ್ಳುವುದಾಗಿದೆ.

* ಝೀಬ ಕಲೆಕ್ಷನ್ ಹಾಗೂ ಬ್ಲೂಸ್ಟೋನ್ ಬಗ್ಗೆ ಹೇಳಿ?
ಝೀಬ ಸಂಗ್ರಹದ ಪ್ರತಿ ವಿನ್ಯಾಸದ ಹಿಂದೆ ನನ್ನ ಯೋಚನೆ, ಪ್ರೀತಿ, ಬದ್ಧತೆ ಇದೆ. ವಿನ್ಯಾಸದ ಚಿತ್ರವೊಂದು ಕಾಗದದಿಂದ ಆಭರಣ ರೂಪಕ್ಕೆ ಮಾರ್ಪಾಡು ಹೊಂದುವ ಎಲ್ಲ ಹಂತಗಳಲ್ಲಿಯೂ ನಾನು ಭಾಗಿಯಾಗಿದ್ದೀನೆ. ಈ ವಿನ್ಯಾಸಗಳಿಗೆ ಬ್ಲೂಸ್ಟೋನ್‌ ಉತ್ತಮ ಮಾರುಕಟ್ಟೆ ಒದಗಿಸಿದೆ.

ಒಬ್ಬ ವಿನ್ಯಾಸಗಾರ್ತಿಯಾಗಿ ನಾನು ಅತಿ ಸಣ್ಣ ವಿವರಕ್ಕೂ ಪೂರ್ಣ ಗಮನ ನೀಡುತ್ತೇನೆ. ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣ ಸಂಗ್ರಹ ನನ್ನದಾಗಿದೆ.  ಝೀಬ ಸಂಗ್ರಹ  ನನ್ನ ಈ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಬ್ಲೂಸ್ಟೋನ್‌ ಮೂಲಕ ಎಲ್ಲರೂ ಮೆಚ್ಚಿಕೊಂಡಿದ್ದಾರೆ.

* ವೈಯಕ್ತಿಕವಾಗಿ ಯಾವ ಆಭರಣವನ್ನು ಹೆಚ್ಚು ಇಷ್ಟ ಪಡುತ್ತೀರಿ?
ಕಿವಿಯೋಲೆ, ಬ್ರೇಸ್‌ಲೆಟ್‌, ಬಳೆಗಳು, ಮುಂಗೈ ಬ್ರೇಸ್‌ಲೇಟ್‌  ಹೀಗೆ ಎಲ್ಲಾ ರೀತಿಯ ಆಭರಣವನ್ನು ಚಿನ್ನ, ವಜ್ರ ಹಾಗೂ ಹರಳುಗಳನ್ನು ಉಪಯೋಗಿಸಿ ವಿಶೇಷವಾಗಿ ರಚಿಸಿದ್ದೇನೆ.  ಇದೆಲ್ಲವೂ ನನ್ನವೇ ಆಗಿದ್ದರಿಂದ ಎಲ್ಲವೂ ಇಷ್ಟವಾಗುತ್ತವೆ.  ಪ್ರತಿ ಬಾರಿಯೂ ಇನ್ನಷ್ಟು ಅದ್ಭುತ ವಿನ್ಯಾಸ ಮಾಡುವುದು ಹೇಗೆ ಎಂದು ಯೋಚಿಸುತ್ತೇನೆ.   ಮೊದಲ ನೋಟದಲ್ಲೇ ಆಕರ್ಷಿಸುವ ಎಲ್ಲಾ ಆಭರಣ ನನ್ನ ಆಯ್ಕೆ.

* ಭಾರತದಲ್ಲಿ ಆಭರಣ ವಿನ್ಯಾಸಕ್ಕೆ ಅವಕಾಶ ಹೇಗಿದೆ?
ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಆಭರಣ ಗುಣಮಟ್ಟ ಹಾಗೂ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಂಡಲ್ಲಿ ಆಭರಣ ಉತ್ಪಾದನಾ ಕೌಶಲ್ಯಕ್ಕೆ ಭಾರತದಲ್ಲಿ ವಿಶಾಲ ಅವಕಾಶವಿದೆ. ಬಳ್ಳಿ ಕುಸುರಿಯ ಅಲಂಕಾರ, ಉಬ್ಬುಚಿತ್ರದ ಲೋಹಾಕೃತಿ,  ವರ್ಣಚಿತ್ರ, ಕುಂದನ್‌ ಹೀಗೆ ವಿನ್ಯಾಸಕ್ಕೆ ಅನುಕೂಲವಾಗುವ ನೂರಾರು ಅವಕಾಶಗಳು  ಇಲ್ಲಿವೆ.

* ಆಭರಣ ವಿನ್ಯಾಸಕಾರರ ಸವಾಲುಗಳು ಏನು?
ಪರಿಕಲ್ಪನೆ ಹಂತದಲ್ಲಿ ಸ್ಫೂರ್ತಿ ಹಾಗೂ ವಿಷಯದ ನಡುವೆ ಪರಸ್ಪರ ಹೊಂದಾಣಿಕೆ ಮುಖ್ಯ. ವಿನ್ಯಾಸದ ರಚನೆ ಹಂತದಲ್ಲಿ ಆಭರಣ ತಯಾರಿಕೆಗೆ ಸೂಕ್ತ ಪಾಲುದಾರರನ್ನು ಹುಡುಕಿಕೊಳ್ಳುವುದು ಅಗತ್ಯ. ಕೊನೆಯದಾಗಿ ಸಿದ್ಧಗೊಂಡ ಆಭರಣಗಳನ್ನು ಗ್ರಾಹಕರಿಗೆ ತಲುಪಿಸುವ ಸವಾಲು ಎದುರಾಗುತ್ತದೆ. ಈ ಎಲ್ಲಾ ಹಂತಗಳಲ್ಲೂ ವಿನ್ಯಾಸಕಾರರಿಗೆ ಸವಾಲುಗಳು ಎದುರಾಗುತ್ತವೆ. ಅವುಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ವಿನ್ಯಾಸಕಾರನಲ್ಲಿರಬೇಕು.

* ಆಭರಣ ವಿನ್ಯಾಸ ಕ್ಷೇತ್ರದಲ್ಲಿ ಮಹಿಳೆಗೆ ಸಾಕಷ್ಟು ಅವಕಾಶವಿದೆಯೇ?
ಆಭರಣ ತಯಾರಿಕೆಯಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ. ವಿಶ್ವದ ಬಹುತೇಕ ಎಲ್ಲ ದೇಶಗಳಲ್ಲೂ ಇದೇ ಪರಿಸ್ಥಿತಿ ಇದೆ. ಈ ಕ್ಷೇತ್ರ ಮಹಿಳೆಯರಿಗೆ ಸೂಕ್ತವಾದುದೇ ಎಂಬ ಎಂಬ ಬಗ್ಗೆ ನಾನು ಹೆಚ್ಚು ಯೋಚಿಸಿಲ್ಲ. ಮಹಿಳೆ ಅಥವಾ ಪುರುಷ ವಿನ್ಯಾಸಕಾರ ಹೀಗೆ ಯಾರಿಗೇ ಆದರೂ ಇಬ್ಬರಿಗೂ ಪ್ರತಿಭೆ, ಛಲ ಮುಖ್ಯ. ಅವೆರಡೂ ಪರಸ್ಪರ ಬೆಸೆದುಕೊಂಡಾಗ ಯಶಸ್ವಿಯಾಗುವುದು ಸಾಧ್ಯ.

***
ಒಬ್ಬ ವಿನ್ಯಾಸಗಾರ್ತಿಯಾಗಿ ನಾನು ಅತಿ ಸಣ್ಣ ವಿವರಕ್ಕೂ ಪೂರ್ಣ ಗಮನ ನೀಡುತ್ತೇನೆ. ಆಭರಣ ವಿನ್ಯಾಸಕಾರರಿಗೆ ಸ್ಫೂರ್ತಿ, ಪ್ರತಿಭೆ, ಛಲ ಮುಖ್ಯ. ಅವು ಪರಸ್ಪರ ಬೆಸೆದುಕೊಂಡಾಗ ಮಾತ್ರ ನಮ್ಮ ವಿನ್ಯಾಸ ಪರಿಕಲ್ಪನೆ ಯಶಸ್ವಿಯಾಗುವುದು ಸಾಧ್ಯ.
–ವಿನಿತಾ ಮೈಕೆಲ್‌, ಆಭರಣ ವಿನ್ಯಾಸಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT