ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಸ್ಥಿತಿ ಅಂಚೆ ಡಬ್ಬಿಯಂತಿಲ್ಲಪ್ಪಾ!

ಪ್ರಕಾಶ್ ಶೆಟ್ಟಿ ಕಂಡ ಸಿಟಿ ಜನ್ರು
Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಹಾಗೇ ಸುಮ್ಮನೆ ಮಾತಿಗೆ ಸಿಗುವ ಮಂದಿಗೆ ಕೊರತೆ ಇಲ್ಲ. ಕೆಲವೇ ನಿಮಿಷಗಳಲ್ಲಿ ಉಭಯಕುಶಲೋಪರಿಯನ್ನೂ ಮೀರಿ ಅವರವರ ಆಸಕ್ತಿ, ಒಲವು–ನಿಲುವು, ವಿಚಾರಗಳವರೆಗೆ ಮಾತುಕತೆ ವಿಸ್ತರಿಸುವುದುಂಟು. ಹಾಗೆ ಮಾತಿಗೆ ಸಿಗುವವರಲ್ಲಿ ಕೆಲವು ಚಹರೆಗಳು ‘ಕ್ಯಾರಿಕೇಚರ್‌’ಗೆ ಯೋಗ್ಯ ಅನಿಸಿಬಿಡುತ್ತದೆ. ಹಾಗೆ ತಮ್ಮ ಮಾತು, ಚಹರೆ ಎರಡರ ಮೂಲಕ ದಕ್ಕುವ ಸಾಮಾನ್ಯರ ಮನದನಿ ಇದು. ಇಂದು ಹಿರಿಯ ನಾಗರಿಕರ ದಿನಾಚರಣೆಯ ವಿಶೇಷ ಸಂಚಿಕೆಯಲ್ಲಿ ರಾಜರಾಜೇಶ್ವರಿನಗರದ ಎಂ. ಸುಬ್ರಾಯ ಭಟ್‌ ‘ಕ್ಯಾರಿಕೇಚರ್‌’ ಆಗಿದ್ದಾರೆ.

ಕೆಲವು  ವೃದ್ಧರು ಹೇರ್ ಡೈ ಮಾಡಿಕೊಂಡು ತಮ್ಮ ವಯಸ್ಸನ್ನು ಬೇಕಂತಲೇ ಮರೆತು ಬಿಡುತ್ತಾರೆ. ಇನ್ನು ಕೆಲವರು ಪ್ರಾಯದ ದೋಷದಿಂದಾಗಿ ಮರೆತಿರುತ್ತಾರೆ. ನೀವು?
ನನಗೆ ಎಂಬತ್ತೇಳಾಗಿದೆ. ಜೀವನೋತ್ಸಾಹಕ್ಕೆ ಬ್ರೇಕು ಬೀಳಬಾರದೂಂತ ಯಾವತ್ತೂ ಅದನ್ನು ನೆನಪು ಮಾಡಿಕೊಳ್ಳಲ್ಲ. ಆದರೆ ಏನ್ಮಾಡೋಣ... ಇಲ್ಲಿ ಎಲ್ಲರೂ ನನ್ನನ್ನು ‘ಅಜ್ಜ ಅಜ್ಜ’ ಅಂತಲೇ ಕರೆಯೋದು.
ಸರಿ, ವಯಸ್ಸು ಹೇಳಿದ ಮೇಲೆ ನಿಮ್ಮ ನೆನಪಿನ ಶಕ್ತಿ ಸಖತ್ತಾಗಿರಬೇಕೆಂಬ ನಂಬಿಕೆ. ಬೆಂಗಳೂರಿನ ನಿಮ್ಮ ಹಳೆಯ ದಿನಗಳತ್ತ ಒಮ್ಮೆ ಹೋಗಿ. ಅಜ್ಜನ ’ಒಂದಾನೊಂದು ಕಾಲದಲ್ಲಿ...’ ಕತೆ ಕೇಳಬೇಕೆಂದೆನಿಸಿದೆಯಲ್ಲ!
ನನ್ನ ಕತೆ ಶುರುವಾಗುವುದು ಬೆಂಗಳೂರಿನಲ್ಲಲ್ಲ... ಬೊಂಬಾಯಿಯಲ್ಲಿ. ಆಗ ಕುಡ್ಲದಿಂದ (ಮಂಗಳೂರು)  ಬೊಂಬಾಯಿಗೆ ಓಡುವ ಹುಡುಗರು ಸಂಖ್ಯೆ ಜಾಸ್ತಿ. ಅಂತಹವರಲ್ಲಿ ನಾನೂ ಒಬ್ಬನಾಗಿದ್ದೆ. ಬರೀ ಹತ್ತರ ಹುಡುಗ. ಚಿಕ್ಕ ಪುಟ್ಟ ಕೆಲಸ ಮಾಡಿ ಬದುಕಿದೆ. ಬ್ರಿಟಿಷರ ಕಾಲ.

ಗಾಂಧೀಜಿ ಅವರ ಹಿಂದೆ ಹೋಗಿದ್ದೀರಾ?
ಇಲ್ಲ. ಆಗ ಭಗತ್ ಸಿಂಗ್ ನನ್ನಂತಹ ಕೆಲ ಯುವಕರಿಗೆ ಆರಾಧ್ಯ ದೈವ ಆಗಿಬಿಟ್ಟಿದ್ದರು. ಭಗತ್ ಜೀಯ ಮರಣಾನಂತರ ನಮ್ಮನ್ನೆಲ್ಲಾ ಹುರಿದುಂಬಿಸುವುದಕ್ಕೆ  ಮಾತಾಜೀ ಅಂದರೆ ಅವರ ತಾಯಿ ಇದ್ದರು.

ಅಲ್ಲ ಭಟ್ರೆ, ಗಾಂಧೀಜಿ ಅವರಂತೆ ಉಪವಾಸ ಕೂರೋದು ನಿಮಗೆ ಇಷ್ಟವಾಗಲಿಲ್ಲ ಎಂಬ ಕಾರಣಕ್ಕೆ ‘ಎಂ.ಜಿ.ರೋಡ್‌ನಲ್ಲಿ’ ಹೋಗಲಿಲ್ಲವೇ?
ನಿಜ, ನಮ್ಮದು ಬಿಸಿರಕ್ತದವರ ಚಳವಳಿ! ಅದಕ್ಕೇ ನೋಡಿ... ನನ್ನ ಈ ಕೈ ಕಾಲುಗಳು  ಪೆಟ್ಟು ತಿಂದು ಜಡ್ಡು ಹಿಡಿದಿವೆ!

ಸ್ವಾತಂತ್ರ್ಯ ಹೋರಾಟದ ಆ ಕಾಲಘಟ್ಟದ ನಂತರ.... ಮೀನಾಕುಮಾರಿಯನ್ನು ನೋಡೋಕೆ ಹೋಗುತ್ತಿರಲಿಲ್ಲವೇ?
ಮೀನಾಕುಮಾರಿ? ಓಹ್! ಸಿನಿಮಾ ನಟಿ! ಸಿನಿಮಾಗಳಲ್ಲಿ ನನಗೆ ಆಸಕ್ತಿಯೇ ಇರಲಿಲ್ಲ. ನೀವು ಕಾಲಘಟ್ಟ ಅಂದ್ರಲ್ಲಾ.. ಬೊಂಬಾಯಿಯಿಂದ ನೇರ ಘಟ್ಟ ಹತ್ತಿದೆ (ಘಟ್ಟ ಅಂದರೆ ಕೊಡಗು).  ಅಲ್ಲಿ ತೋಟದ ಮ್ಯಾನೇಜರ್ ಕೆಲಸ. ಜತೆಗೆ ಆರೆಸ್ಸೆಸ್‌ನಲ್ಲಿ ಸಕ್ರಿಯನಾದೆ. ಇಂದಿಗೂ ನಾನೊಬ್ಬ ಸ್ವಯಂಸೇವಕನಾಗಿಯೇ ಇದ್ದೇನೆ.

ಮೋದಿಜೀ ಪ್ರಧಾನಿ ಆದಮೇಲೂ ತಾನೊಬ್ಬ ‘ಪ್ರಧಾನ ಸೇವಕ’ ಅನ್ನುತ್ತಿದ್ದಾರಲ್ಲ. ಇನ್ನೂ ಅವರು ಆರೆಸ್ಸೆಸ್‌ನಿಂದ ಹೊರಬಂದಿಲ್ಲವೇ?
ಪ್ರಧಾನಿಯೋ, ಸೇವಕನೋ ಒಟ್ಟಾರೆ ಕೆಲಸ ಮಾಡಿ ತೋರಿಸುವ ಒಳ್ಳೆಯ ಅವಕಾಶ ಸಿಕ್ಕಿದೆ... ನೋಡೋಣ.

ವಯಸ್ಸಾದ ಹಾಗೆಯೇ ತಿನ್ನುವ ಆಹಾರದಲ್ಲಿ ಬದಲಾವಣೆಯಾಗುತ್ತದೆಯಲ್ಲ? ಕೆಲವರು ಮನೆಯವರ ತಲೆ ತಿನ್ನುತ್ತಿರುತ್ತಾರೆ.
ರಾತ್ರಿ  ತಿನ್ನುವುದನ್ನು ಬಿಟ್ಟಿದ್ದೇನೆ. ಇನ್ನು ಯಾರ ತಲೆ ತಿನ್ನುವ ಅಭ್ಯಾಸವೂ ಇಲ್ಲ.

ಹಳೇ ಬೆಂಗಳೂರು ಅನುಭವಿಸಿದ ನಿಮಗೆ ಈಗಿನ ಬೆಂಗಳೂರು ಮಹಾನಗರ ಕಂಡಾಗ ಹೇಗನಿಸುತ್ತದೆ?
ರಾತ್ರಿ- ಹಗಲಿನಷ್ಟು ವ್ಯತ್ಯಾಸವಿದೆ. ಸಂತೋಷವೆಂದರೆ ವಿಧಾನಸೌಧ, ಕಬ್ಬನ್ ಪಾರ್ಕ್, ಲಾಲ್‌ಬಾಗ್ ಇನ್ನೂ ಹಾಗೇ ಇದೆ!  ಹಿಂದೆ ‘ಗಾರ್ಡನ್ ಸಿಟಿ’ ಎಂಬ ಒಂದೇ ಹೆಸರಿತ್ತು. ಈಗ ಹಾಗಲ್ಲ.. ಅನೇಕ ಹೆಸರುಗಳಿವೆ. ಗಾರ್ಬೆಜ್ ಸಿಟಿಯಂತೆ...ರೇಪ್ ಸಿಟಿಯಂತೆ!

ಸರಿ, ನೀವು ಇಲ್ಲಿ ಎಲ್ಲಾದರೂ ಅಂಚೆ ಡಬ್ಬಿ ನೋಡಿದಾಗ ನೀವು ಅದೇ ಸ್ಥಿತಿಯಲ್ಲಿದ್ದೀರಿ ಎಂದು ನಿಮಗನಿಸಬಹುದೇ?
ರಾಜರಾಜೇಶ್ವರಿ ನಗರದಲ್ಲಿ ಅಂಚೆ ಡಬ್ಬಿ ನೋಡಿದಾಗಲೆಲ್ಲಾ ನನಗೆ ಅನಿಸುವುದು ಒಂದೇ... ನನ್ನಿಂದಾಗಿ ಅದು ಅಲ್ಲಿದೆ ಅಂತ! ಇಲ್ಲಿ ಬಹಳ ಸಮಯ ಅಂಚೆ ಡಬ್ಬಿಗಳೇ ಇರಲಿಲ್ಲ! ಕಂಪ್ಯೂಟರ್ ಬಂದರೂ ಅದು ಬೇಕಾಗುತ್ತೆ ಅಂತ ನಾನೇ ಮುತುವರ್ಜಿ ವಹಿಸಿ ಏಳು ಕಡೆ ಡಬ್ಬಿಗಳನ್ನು ಹಾಕಿಸಿದ್ದೆ. ಇಲ್ಲ, ನನ್ನ ಸ್ಥಿತಿ ಅಂಚೆ ಡಬ್ಬಿಯಂತಿಲ್ಲಪ್ಪಾ! ಮನೆಯಲ್ಲಿ ಎಲ್ಲರೂ ಗೌರವ ಕೊಡುತ್ತಾರೆ. ಮಾತನಾಡಿಸುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT