ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮಗೆ ಮೆಟ್ರೊ ಬೇಡ, ಮರ ಬೇಕು

ಮಾರ್ಗ ನಿರ್ಮಾಣ: ಬಿಬಿಎಂಪಿ ಏರ್ಪಡಿಸಿದ್ದ ಸಭೆಯಲ್ಲಿ ಸಾರ್ವಜನಿಕರಿಂದ ಭಾರಿ ಪ್ರತಿರೋಧ
Last Updated 24 ನವೆಂಬರ್ 2015, 20:05 IST
ಅಕ್ಷರ ಗಾತ್ರ

ಬೆಂಗಳೂರು: ಮೆಟ್ರೊ ಮಾರ್ಗ ನಿರ್ಮಾಣಕ್ಕಾಗಿ 313 ಮರಗಳನ್ನು ಕಡಿಯಲು ಅನುಮತಿ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಬಿಬಿಎಂಪಿ ಮಂಗಳವಾರ ಕರೆದಿದ್ದ ಸಭೆಗೆ ಸಾರ್ವಜನಿಕರಿಂದ ಭಾರಿ ಪ್ರತಿರೋಧ ವ್ಯಕ್ತವಾಯಿತು. ‘ನಮಗೆ ಮೆಟ್ರೊ ಬೇಡ, ಮರ ಬೇಕು’ ಎಂದು ಸಭಿಕರು ಘೋಷಣೆ ಕೂಗಿದರು.

ಸಾರ್ವಜನಿಕರ ಪ್ರತಿಭಟನೆಗೆ ಮಣಿದ ಬಿಬಿಎಂಪಿಯ ಅರಣ್ಯ ಸಂರಕ್ಷಣಾಧಿಕಾರಿಗಳು, ‘ಕಡಿಯಲು ಉದ್ದೇಶಿಸಿರುವ ಮರಗಳ ಕುರಿತು ಭೌಗೋಳಿಕ ಮಾಹಿತಿ ವ್ಯವಸ್ಥೆಯುಳ್ಳ (ಜಿಐಎಸ್‌) ನಕ್ಷೆ ಜತೆಗೆ ವಿವರವಾದ ವರದಿ ನೀಡಬೇಕು’ ಎಂದು ಮೆಟ್ರೊ ಎಂಜಿನಿಯರ್‌ಗಳಿಗೆ ಸೂಚನೆ ನೀಡಿ,  ಸಭೆಯನ್ನು ಅರ್ಧಕ್ಕೇ ಬರ್ಖಾಸ್ತುಗೊಳಿಸಿದರು.

ಎತ್ತಿನ ಬಂಡಿಯಿಂದ ಮೆಟ್ರೊ ರೈಲಿನವರೆಗೆ ಸಾರಿಗೆ ವ್ಯವಸ್ಥೆ ಬೆಳೆದುಬಂದ ಬಗೆಯನ್ನು ಮೆಟ್ರೊ ಎಂಜಿನಿಯರ್‌ಗಳು ಸಭೆ ಆರಂಭದಲ್ಲಿ ವಿವರಿಸಲು ಶುರು ಮಾಡಿದರು. ‘ಅದೆಲ್ಲ ನಮಗೆ ಗೊತ್ತಿದೆ, ಈ ವಿವರ ನಮಗೆ ಬೇಕಿಲ್ಲ’ ಎಂದು ಸಭಿಕರು ಆಕ್ಷೇಪ ಎತ್ತಿದರು.

‘ಕಳೆದ ಬಾರಿ ಕಡಿದ ಮರಗಳಿಗೆ ಪರ್ಯಾಯವಾಗಿ ಎಲ್ಲಿ ಗಿಡ ಬೆಳೆಸಲಾಗಿದೆ’ ಎಂದು ಎನ್ವಿರಾನ್‌ಮೆಂಟ್‌ ಸಪೋರ್ಟ್‌ ಗ್ರೂಪ್‌ (ಇಎಸ್‌ಜಿ) ಸಂಚಾಲಕ ಲಿಯೊ ಸಲ್ಡಾನ ಕೇಳಿದಾಗ, ನಾಲ್ಕಾರು ಶಾಲಾ ಮಕ್ಕಳು ಸಸಿ ನೆಡುತ್ತಿರುವ ಚಿತ್ರವನ್ನು ಮೆಟ್ರೊ ಅಧಿಕಾರಿಗಳು ತೋರಿಸಿದರು. ಪ್ರಶ್ನೆಗೆ ಸಿಕ್ಕ ಉತ್ತರ ಕಂಡು ಸಭಿಕರು ಗೊಳ್ಳೆಂದು ನಕ್ಕರು.

ಮೆಟ್ರೊ ಯೋಜನೆಗೆ ಮರ ಕಡಿದಿದ್ದರಿಂದ ನಗರ ಪರಿಸರದ ಮೇಲೆ ಉಂಟಾಗಿರುವ ಪ್ರಭಾವದ ಕುರಿತು ಲಿಯೊ ಸಲ್ಡಾನ ಸಭೆಗೆ ಮಾಹಿತಿ ನೀಡಿದರು. ಕಾನೂನು ಹೋರಾಟ, ಹೈಕೋರ್ಟ್‌ ತೀರ್ಪುಗಳ ಮೇಲೂ ಬೆಳಕು ಚೆಲ್ಲಿದರು.

‘ಮೆಟ್ರೊ ಯೋಜನೆ ಆರಂಭಿಸುವಾಗ ಕರ್ನಾಟಕ ನಗರ ಹಾಗೂ ಗ್ರಾಮೀಣ ಯೋಜನಾ ಕಾಯ್ದೆ (ಕೆಟಿಸಿಪಿ) –1961’ರ ಪ್ರಕಾರ ಮೊದಲು ಭೂ ಪರಿವರ್ತನೆ ಮಾಡಬೇಕಿತ್ತು. ಆದರೆ, ಕಾನೂನು ಪ್ರಕ್ರಿಯೆ ಪೂರೈಸದೆ ಮೊದಲ ಹಂತದ ಮಾರ್ಗವನ್ನು ನಿರ್ಮಿಸುವ ಕಾಮಗಾರಿ ಆರಂಭಿಸಲಾಗಿತ್ತು. ಈ ಲೋಪ ಎಸಗಿದ್ದಕ್ಕಾಗಿ ಛೀಮಾರಿ ಹಾಕಿದ್ದ ಹೈಕೋರ್ಟ್‌, 2ನೇ ಹಂತದ ಯೋಜನೆ ಆರಂಭಿಸುವ ಮುನ್ನ ಭೂ ಪರಿವರ್ತನೆ ಪ್ರಕ್ರಿಯೆ ಪೂರೈಸುವಂತೆ ಸೂಚಿಸಿತ್ತು’ ಎಂದು ವಿವರಿಸಿದರು.

‘ಕೆಟಿಸಿಪಿ ಕಾಯ್ದೆಯಂತೆ ಅಗತ್ಯ ಪ್ರಕ್ರಿಯೆಗಳನ್ನು ಇದುವರೆಗೆ ಪೂರೈಸಿಲ್ಲ. ಇದು ನ್ಯಾಯಾಂಗ ನಿಂದನೆ ಆಗುತ್ತದೆ. ಭೂ ಪರಿವರ್ತನೆ ಆಗದ ಹೊರತು ಮರಗಳನ್ನು ಕಡಿಯಲು ಮೆಟ್ರೊ ನೀಡಿರುವ ಪ್ರಸ್ತಾವವನ್ನು ಬಿಬಿಎಂಪಿ ಪರಿಶೀಲಿಸುವಂತಿಲ್ಲ’ ಎಂದು ವಾದಿಸಿದರು.

‘ಮೆಟ್ರೊ ನಿಗಮದಿಂದ ಯಾರಿಗೋ ಅನುಕೂಲ ಮಾಡಿಕೊಡುವ ದುರುದ್ದೇಶದಿಂದ ಪರಿಸರಕ್ಕೆ ಹೆಚ್ಚು ಹಾನಿ ಆಗದಂತಹ ಮಾರ್ಗ ಬಿಟ್ಟು, ಅಧಿಕ ಮರಗಳನ್ನು ಕಡಿಯುವ ಅನಿವಾರ್ಯತೆ ಇದ್ದ ಅನ್ಯಮಾರ್ಗವನ್ನು ಬಳಕೆ ಮಾಡಲಾಗಿದೆ’ ಎಂದು ದೂರಿದರು.  ‘ಮೆಟ್ರೊ ತಾನು ಹಾಕಿಕೊಂಡ ಯೋಜನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಅದರ ನಡೆ ಪಾರದರ್ಶಕ ಆಗಿಲ್ಲ. ಕಾನೂನುಬದ್ಧ ಪ್ರಕ್ರಿಯೆ ಪೂರೈಸಿದ ಬಳಿಕವಷ್ಟೇ ಅದರ ಪ್ರಸ್ತಾವ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್‌) ಮುಖ್ಯ ತಾಂತ್ರಿಕ ಅಧಿಕಾರಿ ಎ.ಭಾನು, ‘ಮೊದಲು 500ಕ್ಕೂ ಅಧಿಕ ಮರಗಳನ್ನು ಕಡಿಯಲು ಉದ್ದೇಶಿಸಲಾಗಿತ್ತು. ಬಳಿಕ ಮಾರ್ಗದಲ್ಲಿ ಅಲ್ಲಲ್ಲಿ ಬದಲಾವಣೆ ಮಾಡಿಕೊಂಡು ಆ ಸಂಖ್ಯೆಯನ್ನು 313ಕ್ಕೆ ಇಳಿಸಲಾಯಿತು ಎಂಬುದು ಮೆಟ್ರೊ ಅಧಿಕಾರಿಗಳ ವಿವರಣೆಯಾಗಿದೆ. ಆ 500 ಮರಗಳು ಯಾವುವು ಎಂಬ ಮಾಹಿತಿಯನ್ನು ಕೊಡಬೇಕು’ ಎಂದು ಕೇಳಿದರು.

‘ಆಂಧ್ರ ಪ್ರದೇಶದಲ್ಲಿ ಜಿಐಎಸ್‌ ಬಳಕೆ ಮಾಡಿ, ವೈಜ್ಞಾನಿಕವಾಗಿ ವಿಶ್ಲೇಷಿಸಿ ಮರ ಕಡಿಯುವ ಸಂಖ್ಯೆಯನ್ನು ಕನಿಷ್ಠ ಮಟ್ಟಕ್ಕೆ ತಗ್ಗಿಸಲಾಗಿದೆ. ಇಲ್ಲಿಯೂ ಅಂತಹ ವ್ಯವಸ್ಥೆಯನ್ನು ಬಳಸಿಕೊಳ್ಳಲು ಏಕೆ ಸಾಧ್ಯವಿಲ್ಲ’ ಎಂದು ಪ್ರಶ್ನಿಸಿದರು. ‘ತಾಂತ್ರಿಕ ನೆರವು ನೀಡಲು ನಮ್ಮಂತಹ ಅನೇಕರು ಸಿದ್ಧರಿದ್ದೇವೆ’ ಎಂದು ಹೇಳಿದರು.

‘ಮರ ಕಡಿಯಲು ಅನುಮತಿ ಸಿಗುವುದು ವಿಳಂಬವಾದರೆ ಯೋಜನಾ ವೆಚ್ಚ ಹೆಚ್ಚಲಿದೆ’ ಎಂದು ಮೆಟ್ರೊ ನಿಗಮದ ಎಂಜಿನಿಯರ್‌ ವಿಜಯಕುಮಾರ್‌ ಮೌರ್ಯ ತಿಳಿಸಿದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ‘ಹಸಿರು ಉಸಿರು’ ಸಂಘಟನೆಯ ವಿನಯ್‌ ಶ್ರೀನಿವಾಸ್‌, ‘ಮೊದಲ ಹಂತದ ಯೋಜನೆಗೆ ₹ 5,000 ಕೋಟಿ ವೆಚ್ಚದ ಅಂದಾಜು ಮಾಡಿ, ಕೊನೆಗೆ ನೀವು ಮಾಡಿದ ಖರ್ಚು ಎಷ್ಟು ಎಂಬುದು ನಮಗೆಲ್ಲ ಗೊತ್ತಿದೆ’ ಎಂದು ವ್ಯಂಗ್ಯವಾಡಿದರು.

‘ಮೆಟ್ರೊ ನಿಗಮ ಪರಿಸರ ತಜ್ಞರಿಂದ ಮಾರ್ಗದರ್ಶನ ಪಡೆಯಬೇಕು’ ಎಂದು ಶೇಷಾದ್ರಿ ಸಲಹೆ ನೀಡಿದರು. ಸಭೆಯಲ್ಲಿ ಮಾತನಾಡಿದ ಉಳಿದವರೂ ಮರ ಕಡಿಯುವುದನ್ನು ವಿರೋಧಿಸಿದರು. ಬಾಧಿತ ಪ್ರದೇಶದಿಂದ 20 ಕಿ.ಮೀ. ದೂರದ ಮಲ್ಲೇಶ್ವರದಲ್ಲಿ ಸಭೆ ಕರೆದಿದ್ದಕ್ಕೂ ಆಕ್ಷೇಪ ವ್ಯಕ್ತಪಡಿಸಿದರು. ‘ಬಾಧಿತ ಪ್ರದೇಶದಲ್ಲೇ ಮತ್ತೆ ಸಭೆ ಕರೆಯಲಾಗುವುದು’ ಎಂದು ಹೇಳಿದ ಎಸಿಎಫ್‌ ರಂಗನಾಥ್‌ಸ್ವಾಮಿ ಸಭೆಯನ್ನು ಮುಂದೂಡಿದರು.
*
ಮೆಟ್ರೊ ರೈಲು ನಿಗಮಕ್ಕೆ ಸಭೆ ಹಾಕಿದ ಷರತ್ತುಗಳು
* ಮೆಟ್ರೊ ಎರಡನೇ ಹಂತದ ಯೋಜನೆಯಲ್ಲಿ ರೈಲು ಮಾರ್ಗ ನಿರ್ಮಾಣ ಮಾಡುವ ಮುಂಚೆ ‘ಕರ್ನಾಟಕ ನಗರ ಹಾಗೂ ಗ್ರಾಮೀಣ ಯೋಜನಾ ಕಾಯ್ದೆ (ಕೆಟಿಸಿಪಿ) –1961’ ಸೆಕ್ಷನ್‌ 29, 30, 31, 32 ಮತ್ತು 34ರ ಅನ್ವಯ ಭೂ ಪರಿವರ್ತನೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ಪೂರೈಸಬೇಕು

*ಮೆಟ್ರೊ ಯೋಜನೆಯ ಮೊದಲ ಹಂತದ ಅನುಷ್ಠಾನ ಮಾಡುವಾಗ ಕಡಿಯಲಾದ ಮರಗಳು ಎಷ್ಟು? ಅದಕ್ಕಾಗಿ ಪರ್ಯಾಯವಾಗಿ ಬೆಳೆಸಲಾದ ಗಿಡಗಳೆಷ್ಟು? ಅವುಗಳ ಸ್ಥಿತಿ ಈಗ ಹೇಗಿದೆ ಎಂಬ ವಿಷಯವಾಗಿ ವಿವರವಾದ ವರದಿ ನೀಡಬೇಕು. ಗಿಡಗಳ ಸ್ಥಿತಿ ಕುರಿತಂತೆ ಚಿತ್ರಗಳ ಸಾಕ್ಷ್ಯ ಒದಗಿಸಬೇಕು.

*  ಮೆಟ್ರೊ ಯೋಜನೆಯ ಎರಡನೇ ಹಂತದ ಅನುಷ್ಠಾನದ ಮಾರ್ಗದ ನಕ್ಷೆಯನ್ನು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ಮೂಲಕ ತೋರಿಸಬೇಕು. ಮಾರ್ಗ ನಿರ್ಮಾಣಕ್ಕೆ ಕಡಿಯಲು ಗುರುತಿಸಲಾದ ಮರಗಳನ್ನು ಅದರಲ್ಲಿ ಸ್ಪಷ್ಟವಾಗಿ ಗುರುತಿಸಬೇಕು.

*  ಕಡಿಯಲು ಗುರುತಿಸಲಾದ ಮರಗಳ ಪ್ರಭೇದಗಳು ಯಾವುವು, ಅವುಗಳು ಪ್ರಾಯ ಎಷ್ಟು ಎಂಬ ವಿವರ ಒದಗಿಸಬೇಕು
*
ಮರ ಕಡಿಯಲು ಪ್ರಸ್ತಾವ? 
ಪೂರ್ವ–ಪಶ್ಚಿಮ ಕಾರಿಡಾರ್‌ನ ಪಶ್ಚಿಮ ಭಾಗ (ಮೈಸೂರು ರಸ್ತೆ)

ಮೈಸೂರು ರಸ್ತೆ ನಿಲ್ದಾಣದಿಂದ ಚಳ್ಳಘಟ್ಟ ನಿಲ್ದಾಣದವರೆಗೆ
ಉದ್ದ:  6.4 ಕಿ.ಮೀ.  ಕಡಿಯಲು ಅನುಮತಿ ಕೇಳಲಾದ ಮರಗಳ ಸಂಖ್ಯೆ: 123

ಉತ್ತರ–ದಕ್ಷಿಣ ಕಾರಿಡಾರ್‌ನ ದಕ್ಷಿಣ ಭಾಗ (ಕನಕಪುರ ರಸ್ತೆ)
ಪುಟ್ಟೇನಹಳ್ಳಿ ಕ್ರಾಸ್‌ ನಿಲ್ದಾಣದಿಂದ ಅಂಜನಾಪುರ ಟೌನ್‌ಷಿಪ್‌ ನಿಲ್ದಾಣದವರೆಗೆ
ಉದ್ದ: 6.5 ಕಿ.ಮೀ. ಕಡಿಯಲು ಅನುಮತಿ ಕೇಳಲಾದ ಮರಗಳ ಸಂಖ್ಯೆ: 190
*
ವಿಶೇಷ ಆಯುಕ್ತರ ಅಧ್ಯಕ್ಷತೆಗೆ ಆಕ್ಷೇಪ
ಮರಗಳನ್ನು ಕಡಿಯುವ ಸಂಬಂಧ ವಿಚಾರಣೆಗಾಗಿ ನಡೆದ ಸಭೆಯ ಅಧ್ಯಕ್ಷತೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ವಹಿಸಬೇಕಿತ್ತು. ಆದರೆ, ಬಿಬಿಎಂಪಿ ವಿಶೇಷ ಆಯುಕ್ತ (ಹಣಕಾಸು) ಕುಮಾರ್‌ ಪುಷ್ಕರ್‌ ಆ ಸ್ಥಾನದಲ್ಲಿ ಕುಳಿತಿದ್ದರು. ಲಿಯೊ ಸಲ್ಡಾನ ಅದಕ್ಕೂ ಆಕ್ಷೇಪ ವ್ಯಕ್ತಪಡಿಸಿದರು.

ಲೋಪವಾಗಿದ್ದನ್ನು ಒಪ್ಪಿಕೊಂಡ ಪುಷ್ಕರ್‌, ‘ವಾಸ್ತವವಾಗಿ ಡಿಸಿಎಫ್‌ ಅವರೇ ಅಧ್ಯಕ್ಷತೆ ವಹಿಸಬೇಕು. ನಾನು ಸಭೆಯಿಂದ ನಿರ್ಗಮಿಸುತ್ತೇನೆ’ ಎಂದು ಹೇಳಿದರು. ‘ಮೆಟ್ರೊ ನಿಗಮ ಕಾನೂನು ಪ್ರಕ್ರಿಯೆ ಪೂರೈಸಿದ ಬಳಿಕವಷ್ಟೇ ಅದರ ಪ್ರಸ್ತಾವ ಪರಿಶೀಲಿಸಬೇಕು’ ಎಂದೂ ಅವರು ಅಭಿಪ್ರಾಯಪಟ್ಟರು.
*
ಭಾರಿ ವಿಳಂಬ ಸಾಧ್ಯತೆ
ಮೆಟ್ರೊ ನಿಗಮವು ಎಲ್ಲ ಕಾನೂನು ಪ್ರಕ್ರಿಯೆ ಪೂರೈಸಿ, ಜಿಐಎಸ್‌ ನಕ್ಷೆಯೊಂದಿಗೆ ಹೊಸ ಪ್ರಸ್ತಾವ ತರಲು ಹಲವು ತಿಂಗಳ ಕಾಲಾವಕಾಶ ಅಗತ್ಯವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಇದರಿಂದ ಯೋಜನೆಯ ಅನುಷ್ಠಾನ ಮತ್ತಷ್ಟು ವಿಳಂಬವಾಗಲಿದೆ ಎಂದು ಹೇಳಿದರು.
*
ಸುಡುಗಾಡಿನ ರಾಜರಿವರು
ಮೆಟ್ರೊ ನಿಗಮದಿಂದ ಮರ ಕಡಿಯುವುದನ್ನು ಆಕ್ಷೇಪಿಸಿ ಎ.ಭಾನು ಅವರು ಓದಿದ ಕವನದ ಸಾಲುಗಳು ಹೀಗಿದ್ದವು:

‘ಮರಗಿಡಗಳ ಕಡಿವರಿವರು
ರಸ್ತೆಯಗಲ ಮೇಲೆರೈಲು
ಬೊಗಳೆಬಿಟ್ಟು ಚಂದ್ರತೋರಿ
ಹಸಿರುಕೊಂದು ನಗರಬೆಳೆಸೊ
ಸುಡುಗಾಡಿನ ರಾಜರಿವರು
ಇವರ ನಾಕ ಬರಡುಭೂಮಿ’
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT