ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮೋ 3ಡಿ ವರ್ಸಸ್ ಅಳುಗಿರಿ ಎಚ್‌ಡಿ!

Last Updated 5 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಗುಳಿಗೆ ಸಿದ್ದೇಶ್ವರರು ಪೊಗದಸ್ತಾಗಿ ಗೋಡಂಬಿ ಕತ್ತರಿಸಿ ಕೇಸರಿ ಹಾಲು ಭುಂಜಿಸಿ ತೇಗಿ ಗಾದಿಗೆ ಒರಗಿ ಸೊಯ್ ಸೊಯ್ ಗೊರಕೆ ತೆಗೆಯುತ್ತಿದ್ದರು. ಅಷ್ಟರಲ್ಲಿ ಶಿಷ್ಯ ಮಡೆಯ ‘ಗುರುಗಳೇ, ಗುರುಗಳೇ! ಅಳುಗಿರಿ ಬರ್ತಿದ್ದಾರೆ’ ಕೂಗಿದ. ದಿಗ್ಗನೆ ಮೇಲೆದ್ದು ಕೂತರು ವೈರಾಗ್ಯ ಮೂರ್ತಿ. ‘ಅಳಗಿರಿ ಅಂದ್ರೆ ಯಾರೋ? ನಮ್ ಕರುಣಾ ಮಗನಾ?’

‘ಅಲ್ಲ ಗುರುಗಳೇ ಕರ್ನಾಟಕದ ಅಳುಗಿರಿ, ಕಂಡ ಕಂಡಲ್ಲೆಲ್ಲಾ ಅಳ್ತಾರಲ್ಲ, ಜೋಕುಮಾರ, ಅವರು ಬಂದಿದ್ದಾರೆ’.
ಸಿದ್ದೇಶ್ವರು ಪಂಚೆ ಸರಿಪಡಿಸಿಕೊಂಡು ಮೇಲೆದ್ದು ಪದ್ಮಾಸನ ಹಾಕಿ ಧ್ಯಾನ ಮಾಡುವವರಂತೆ ಕಣ್ಮುಚ್ಚಿದರು.
‘ಗುರುಗಳೇ, ನೀವೇ ಕಾಪಾಡ್ಬೇಕು’ ಜೊತೆಯಲ್ಲಿದ್ದ ಉಷ್ಣಪ್ಪ ಸಮೇತ ಕಾಲಿಗೆ ಬಿದ್ದರು ಜೋಕುಮಾರರು.
‘ಪುನರಪಿ ಮುಖ್ಯಮಂತ್ರೀ ಭವ ’ಆಶೀರ್ವದಿಸಿದರು ಗುಳಿಗೆ ಗುರುಗಳು.

‘ದೊಡ್ ಚುನಾವಣೆ, ದೊಡ್ ಆಶೀರ್ವಾದ ಮಾಡ್ಬೇಕು’ ಅಂತ ಕೈ ಹೊಸಕಿದರು ಜೋಕುಮಾರರು. ‘ಅದಕ್ಕೇನಂತೆ! ಥರ್ಡ್ ಫ್ರಂಟ್ ಅಧಿಕಾರಕ್ಕೆ ಬಂದು ಮುದ್ದೇಗೌಡರು ಮತ್ತೆ ಪ್ರಧಾನ ಮಂತ್ರಿಯಾಗಲಿ...’ಆಶೀರ್ವದಿಸಿದರು ಗುಳಿಗೆ ಗುರುಗಳು.
ಜೋಕುಮಾರರು ಗಳ ಗಳ ಅಳೋಕೆ ಶುರು ಹಚ್ಕಂಡ್ರು.

‘ಮಗು, ಹಾದಿಬೀದೀಲೆಲ್ಲಾ ಟವಲ್ ಒದ್ದೆ ಆಗೋ ತನಕ ಗೋಳೋ ಅಂತ ಅತ್ತಿದೀಯ. ಇನ್ನೂ ನಿನ್ ಕಣ್ಣೀರು ಖಾಲಿಯಾಗಲಿಲ್ವಾ?’ಸಂತೈಸಿದರು ಗುರುಗಳು.

‘ಅದು ಹೇಗೆ ಸಾಧ್ಯ ಬುದ್ದಿ? ಈ ಘೋರ ದ್ರೋಹಗಳನ್ನ ನೆನೆಸಿಕೊಂಡ್ರೆ ತಲಕಾವೇರಿ ತರ ಭುಗಿಲ್ ಅಂತ ಕಣ್ಣೀರು ಉಕ್ತಾನೇ ಇರುತ್ತೆ’
‘ಏನಾಯ್ತು ಅಂತ ದ್ರೋಹ?’

‘ಅಯ್ಯೋ ಅದನ್ನ ಏನಂತ ಹೇಳ್ಳಿ ಬುದ್ದಿ. ಶಕುನಿ, ಮೀರ್‌ಸಾದಕ್ ತರ ನಮ್ಮೋರೇ ನಮ್ಗೆ ಕೈ ಕೊಟ್ ಬಿಟ್ರು. ನಮ್ಮ ಕಚೇರಿ ಕಾಂಗ್ರೆಸ್ ಪಾಲಾಗೋಯ್ತು. ಈಗ ಒಬ್ಬೊಬ್ರೇ ಕಳಚ್ಕೊಂಡು ಹೋಗ್ತಿದಾರೆ. ೫-೬ ಕ್ಷೇತ್ರಗಳಲ್ಲಿ ಗೂಟಕ್ಕೆ ಕಟ್ಟಕ್ಕೂ ಒಂದು ಗೂಳಿ ಸಿಕ್ತಿಲ್ಲ. ಆ ಆನಂದಪ್ಪ ಕೊನೇ ಕ್ಷಣದಲ್ಲಿ ಕೈ ಎತ್ ಬಿಟ್ಟ. ಅಳ್ದೇ ಇನ್ನೇನು ಮಾಡ್ಲಿ?’

‘ಸುಖ, ದುಃಖಗಳು ಇದ್ದದ್ದೇ ಕುಮಾರ, ಮುಂದಿನ ಎಲೆಕ್ಷನ್‌ಗೆ ನಿಮ್ ಕುಟುಂಬದಿಂದಲೇ ೨೮ ಕ್ಯಾಂಡಿಡೇಟೂ ಹಾಕುವಿಯಂತೆ. ಸಮಾಧಾನ ಮಾಡ್ಕೊ... ಸಮಚಿತ್ತತೆಯಿಂದ ಎಲ್ಲವನ್ನು ಸ್ವೀಕರಿಸ್ಬೇಕು...’

‘ಎರಡು ಮೂರು ಕ್ವಾಟ್ರು ಹಾಕುದ್ರೂ ಚಿತ್ತೇ ಆಗ್ತಿಲ್ಲ, ಇನ್ ಸಮಚಿತ್ತ ಎಲ್ಲಿಂದ ಬರ್ಬೇಕು ಬುದ್ದಿ’ ಅವಲತ್ತುಕೊಂಡರು ಉಷ್ಣಪ್ಪ.
‘ನಮ್ಗೆ ಬಂದಿರೋ ಕಷ್ಟ ಪರಂಪರೆ ಒಂದಾ ಎರಡಾ ಬುದ್ದಿ? ನಮ್ ಗರಡೀಲೇ ಬೆಳೆದ ಮುದ್ರಾಮಯ್ಯ ನಮ್ ಪಟ್ಟನ್ನ ನಮ್ಗೇ ಹಾಕಿ ತಿರುಮಂತ್ರ ಹಾಕಿದ್ದಾರೆ. ನಾವು ಹಾಕಿದ್ ಗಾಳಕ್ಕೆ ಸೂಪರ್ ಷರೀಪ್ ತಿಮಿಂಗ್ಲ, ಮೋಂಗ್ಲಿ ಮೀನು ಯಾವ್ದೂ ಬೀಳ್ಳಿಲ್ಲ ಬುದ್ದಿ. ಕಟ್ಟೆಲಿದ್ದ ಚಿಕ್ ಪುಟ್ ಮೀನೂ ಬೇರೆ ಕಡೆ ಹೋಗ್ತಿವೆ..

‘ಒಂದ್ಕಡೆ ನಮೋ ಅಲೆ, ಇನ್ನೊಂದ್ ಕಡೆ ಅಯ್ಯ ಅವರ ಬಲೆ. ಸಾಕಾಗೋಗಿದೆ ಬುದ್ದಿ’

‘ಆ ನಮೋ ಅಲೆ ಅಲ್ಲ, ಅದೊಂದು ಸುನಾಮಿ ಆಗಿಬಿಟ್ಟಿದೆ. ೩ ಏಕೆನ ಕಮಲ್‌ದೋರು ಒಂದು ಓಕೆ, ೨ ಯಾಕೆ? ಅಂತ ನಂಗೇ ಶೂಟ್ ಮಾಡಕ್ಕೆ ಶುರು ಹಚ್ಕೊಂಡಿದಾರೆ. ಕರ್ನಾಟಕಕ್ಕೆ ಇದ್ದದ್ದು ಒಂದೇ ಏಕೆ..! ಅದೇ ನಮ್ ಏ.ಕೆ.ರುಬ್ಬಯ್ಯ! ಸಿ.ಕೆ ಸೂಪರ್ ರೈಲು ಮಿಸ್ಸಾಗೋಯ್ತು, ಇಲ್ಲ ಅಂದಿದ್ರೆ  ನಾವೂ ತೋರುಸ್ತಿದ್ವಿ? ನಮ್ ಅಧ್ಯಕ್ಷರೇ ಎ.ಕೆ.! ನಾವು ಬಿಡ್ತೀವಾ? ನಾವೂ ಶೂಟ್ ಮಾಡ್ತೀವಿ...’

‘ಇದ್ ಸಾಲ್ದು ಅಂತ ಆ ನಮೋ ಅದೇನೋ ನಮ್ಮ ಹತ್ರ ತ್ರಿಡಿ ಇದೆ, ತೋರುಸ್ತೀನಿ ಅಂತ ಹೊರ್ಟಿದ್ದಾರೆ. ಸದನದಲ್ಲಿ ಕಮಲ್‌ದೋರು ೨ಡಿ ನೋಡೇ ದೊಡ್ಡ ರಾದ್ಧಾಂತ ಆಗಿತ್ತು. ಇನ್ನೂ ೩ಡಿ ತೋರ್ಸುದ್ರೆ ಉದ್ಧಾರ ಆದ ಹಂಗೇ..! ಸ್ವಲ್ಪನಾದ್ರೂ ಸಂಸ್ಕೃತಿ, ಸಂಸ್ಕಾರ ಬೇಡ್ವಾ ಬುದ್ದಿ?’ ಉಷ್ಣಪ್ಪ ಉರಿದು ಬಿದ್ರು

‘ನಾವು ದೊಡ್ ಸಿನಿಮಾ ಮಾಡ್ದೋರು. ಅವರ್ದು ೩ಡಿ ಆದ್ರೆ ನಮ್ದು ಎಚ್‌ಡಿ. ಹೈ ಡೆಫ್ನಿಶನ್. ನಾವೂ ಸಕತ್ತಾಗೇ ಎಲ್ಲಾ ಬಾಡಿ ತೋರುಸ್ತೀವಿ’ಆರ್ಭಟಿಸಿದ್ರು ಜೋಕುಮಾರರು.

‘ಅಲ್ಲ ಬುದ್ದಿ, ಹೊರೆ ಹೊರಕ್ಕೆ ಒಂದು ಸ್ಟಾರ್ ಮಹಿಳೆನಾದ್ರೂ ಬೇಡ್ವಾ? ಪೂಜಮ್ಮ ಹೋದ್ಮೇಲೆ ಎಲ್ಲಾ ಬಣ ಬಣ ಅನ್ನಕ್ಕೆ ಶುರುವಾಗಿದೆ’ ಅವಲತ್ತುಕೊಂಡರು ಉಷ್ಣಪ್ಪ.

‘ಹೊರೆ ಬೀದೀಲಿ ಬಿದ್ದು ಕಂಡ್  ಕಂಡೋರು ಮೇದಂಗಾಗಿದೆ. ನಾನು ಅಪ್ಪಾಜಿ ಇಬ್ರೇ ಉಳಿದಿರೋ ಪುರಲೆ ಹೊತ್ಕೊಂಡು ಒದ್ದಾಡ್ತಿದೀವಿ. ಅದರ ಜೊತೆಗೆ ಆ ಮೂರನೇ ಎಕೆ ಕಾಟ ಬೇರೆ. ಅವರು ನಮ್ ಹೊರೇಲೇ ಕಡ್ಡಿ ಹಿರಿದು ಪೊರಕೆ ಮಾಡಿ ನಮ್ಮನ್ನೇ ಗುಡಿಸ್ ಹಾಕ್ತೀವಿ ಅಂತ ಹೊರಟಿದಾರೆ...’

‘ಇದು ಮುದ್ದೆ ಗೌಡ್ರದು ಕೊನೇ ಎಲೆಕ್ಷನ್. ಆಮೇಲೆ ಅವರು ರಾಮ ಕೃಷ್ಣ ಅಂತ ಕಾಶಿ ಕಡೆ ಹೋಗ್ತಾರೆ...’ ಅಂದ್ರು ಉಷ್ಣಪ್ಪ.
‘ಹೌದು ಬುದ್ದಿ, ಕಾಶಿ ಜನ ಒತ್ತಾಯಿಸುದ್ರೆ ಅಲ್ಲೇ ಎಲೆಕ್ಷನ್‌ಗೆ ನಿಂತಾರೇ ಹೊರ್ತು ಕರುನಾಡಿಂದ ದೇವ್ರಾಣೆ ನಿಲ್ಲಲ್ಲ. ಎಂಗಾರಾ ಮಾಡಿ ಅವ್ರನ್ನ ಈ ಸಾರಿ ಸೆಂಟರ್‌ಗೆ ಕಳಿಸ್ಬೇಕು’.

‘ಈಗ ನಾವ್ ಏನ್ಮಾಡ್ಬೇಕು ಹೇಳು...’

  ‘ಏನಾರಾ ಮಾಡ್ಬೇಕು ಬುದ್ದಿ, ಆ ವೇದಾಂತ ಕಂಪನಿಯೋರು ನಮ್ಗೂ ದೇಣಿಗೆ ಕೊಡೋ ಅಂಗಾಗ್ಬೇಕು. ಅಂಬಾನಿಯೋರು ನಮ್ ಎಲೆಕ್ಷನ್ ಖರ್ಚೂ ಕೊಡ್ಬೇಕು. ನ್ಯಾಶನಲ್ ಲೆವೆಲ್ಲಲ್ಲಿ ನಾವೂ ರೆಕಗ್ನೈಸ್ ಆಗ್ಬೇಕು. ಆ ನಮೋ ನಮ್ ಪಕ್ಷದ್ ಬಗ್ಗೆನೂ ಮಾತಾಡ್ಬೇಕು. ಆಗ ನಾವೂ ಇದೀವಿ ಅಂತ ಜನಕ್ಕೆ ಗೊತ್ತಾಗುತ್ತೆ. ಅಂಗ್ ಏನಾರಾ ಮಾಡ್ಬೇಕು...’ ಉಷ್ಣಪ್ಪ ಹೇಳಿದ.

‘ಇದೆಲ್ಲಾ ನಮ್ಮಿಂದ ಹೇಗೆ ಸಾಧ್ಯ?’

‘ಬುದ್ದಿ, ಬೇರೆ ಸ್ವಾಮ್‌ಗಳೂ ನಮ್ಮನ್ನ ದೂರ ಮಡಗವ್ರೆ. ಪೋಟೋನೂ ತೆಗುಸ್ಕಳಲ್ಲ ಅಂತಾರೆ. ಇನ್ ಕೆಲವ್ರು ಅವ್ರೇ ಎಲೆಕ್ಷನ್‌ಗೆ ನಿಂತವ್ರೆ. ನೀವೂ ಕೈ ಬಿಟ್ರೆ ಎಂಗ್ ಬುದ್ದಿ?’ ಜೋಕುಮಾರರು ಮತ್ತೆ ಸೊರ ಸೊರ ಅಂದ್ರು.

‘ಈ ಸಾರಿ ಸೆಂಟರ್ರಲ್ಲಿ ನಮ್ ಫ್ರಂಟು ಅಧಿಕಾರಕ್ಕೆ ಬಂದ್ರೆ ಸರ್ಕಾರಿ ಆಸ್ಪತ್ರೆನೆಲ್ಲಾ ಮಠಕ್ಕೇ ವಹಿಸಿಬಿಡ್ತೀವಿ. ನೀವು ತೇದಿದ್ದೇ ಮುಲಾಮು, ಕೊಟ್ಟಿದ್ದೇ ಗುಳಿಗೆ. ಬೇರು, ನಾರು, ಭಸ್ಮ, ಅಸ್ಥಿ ಎಲ್ಲಾ ಪುಡಿಮಾಡಿ ಪಿಂಡ ಕಟ್ಟುದ್ರೂ ನಾವು ನಿಮ್ಮನ್ನ ಯಾಕೆ ಅಂತ ಕೇಳಕ್ಕೆ ಬರಲ್ಲ. ಅಷ್ಟೇ ಅಲ್ಲ ಬುದ್ದಿ, ನಿಮ್ಮನ್ನ ರಾಜ್ಯ ಸಭೆಗೂ ನಾಮಿನೇಟ್ ಮಾಡುಸ್ತೀವಿ’

ಉಷ್ಣಪ್ಪ ಆಶ್ವಾಸನೆ ಇತ್ರು.


ಗುಳಿಗೆ ಗುರುಗಳು ಉಬ್ಬಿ ಹೋದರು. ‘ಸರಿ, ನೀವು ಇಷ್ಟು ಕೇಳ್ಕೊತಿದೀರ ಅಂತ ಒಪ್ಕೊತಿದೀವಿ. ಈಗ ಹೇಳಿ ನಾವು ಏನು ಮಾಡಬೇಕು?’

‘ನಮ್ ಜಾತಿಯೋರೆಲ್ಲಾ ನಮ್ ಪಕ್ಷಕ್ಕೇ ಓಟು ಹಾಕಬೇಕು ಅಂತ ಈ ಪೀಠದಿಂದ ಒಂದು ಅಪ್ಪಣೆ ಕೊಡಿಸಿಬಿಟ್ಟರೆ ಸಾಕು ಬುದ್ದಿ. ನಾನು ಅರ್ಧ ಗೆದ್ದಂಗೇ ಲೆಕ್ಕ...’

‘ಸರಿ! ಒಂದು ಧಾರ್ಮಿಕ ಸಮಾವೇಶ ಅಂತ ಜನ ಸೇರ್ಸು...’

‘ಧಾರ್ಮಿಕ ಸಮಾವೇಶನಾ? ಕಡ್ಡಿ ಅಲ್ಲಾಡುದ್ರೂ ಎಲೆಕ್ಷನ್ ಸ್ಕ್ವಾಡ್‌ನೋರು ಬಂದು ಅಮರಿಕೊಳ್ತಾರೆ. ಅಲ್ಲಿ ರಾಜಕೀಯ ಮಾತಾಡೋ ಹಾಗಿಲ್ಲ. ಸೀರೆ, ಪಂಚೆ, ತೀರ್ಥ, ಪ್ರಸಾದ ಹಂಚೋ ಹಾಗಿಲ್ಲ ಬುದ್ದಿ’ ಆತಂಕ ಪಟ್ರು ಜೋಕುಮಾರರು.

‘ನಾವು ಹೇಳಿದಷ್ಟು ಮಾಡು. ಮುಂದಿನದ್ದು ನಾವು ನೋಡ್ಕೊತೀವಿ...’

ಜೋಕುಮಾರ್ ತಲೆಯಾಡಿಸಿ ಎದ್ದು ಹೋದರು. ನಾಕೇ ದಿನದಲ್ಲಿ ಮಠದಲ್ಲಿ ಬೃಹತ್ ಧಾರ್ಮಿಕ ಸಮಾವೇಶಕ್ಕೆ ಏರ್ಪಾಟಾಯ್ತು. ಗುಳಿಗೆ ಸ್ವಾಮಿಗಳು  ಮುಖ, ಮೈ ತುಂಬಾ ವಿಭೂತಿ ಬಳಿದುಕೊಂಡು ಅವತಾರ ಪುರುಷರಂತೆ ಪೀಠವನ್ನು ಅಲಂಕರಿಸಿದ್ರು. ಗುರುಗಳ ಧ್ವನಿ ಗಡುಸಾಗಿ ಗೊರ ಗೊರ ಶುರುವಾಯಿತು. ಇಡೀ ಜನಸ್ತೋಮ ಮಂತ್ರಮುಗ್ಧವಾಯಿತು. ‘ನಾನು ಅಖಿಲಾಂಡಕೋಟಿ, ಬ್ರಹ್ಮಾಂಡನಾಯಕ ಗಾಂಪಾನಂದ ಮಹಾರಾಜ್  ಹೇಳ್ತಿದೀನಿ...’

‘ಅಯ್ಯಯ್ಯೋ! ಶಿವೈಕ್ಯ ಗಾಂಪಾನಂದ್ರು ಮೈ ಮೇಲೆ ಬಂದವ್ರೆ...’ ಶಿಷ್ಯ ಜೋರಾಗಿ ಕಿರುಚಿದ.

‘ಧರ್ಮೋ ರಕ್ಷತಿ ರಕ್ಷಿತಃ! ಹಾಗೇ ಮಠೋ ರಕ್ಷತಿ ರಕ್ಷಿತಃ... ಮಠವನ್ನು ರಕ್ಷಿಸಿದವರನ್ನು ರಕ್ಷಿಸಬೇಕಾದ್ದು ನಮ್ಮ ಕರ್ತವ್ಯ... ನಾವು ಹೇಳ್ತಿದೀವಿ, ನಮ್ಮ ಮಠವನ್ನು ರಕ್ಷಿಸಿದವರಿಗೆ ನಮ್ ಜಾತಿಯವರೆಲ್ಲಾ ಓಟು ಹಾಕಬೇಕು... ಎಲ್ಲಾ ಹೇಳಿ ನಮೋ ಲಕ್ಷ್ಮೀ ನರಸಿಂಹ...’ ಜೋಕುಮಾರರಿಗೆ ಎದೆಗೆ ಒದ್ದಂತಾಯ್ತು, ಹಿಂದಿನಿಂದ ದಬದಬ  ಓಡಿ ಬಂದ್ರು. ‘ಮುಳುಗಿಸಿಬುಟ್ರಲ್ಲ ಬುದ್ದಿ, ನಮೋ ನರಸಿಂಹ ಅಲ್ಲ ಬುದ್ದಿ’ ತುಂಗೆಯ ತೆನೆ ಬಳುಕಿನಲ್ಲಿ ಹೇಳಿ ಕಿವಿಲಿ ಪಿಸುಗುಟ್ಟುದ್ರು.

  ‘ನಾನು ಗುಳಿಗೆ  ಸಿದ್ದೇಶ್ವರ ಅಲ್ಲ, ಅವರ ಶಿಷ್ಯ ಅಳಲೆ ಅಮುಕೇಶ್ವರ. ದೊಡ್ ಬುದ್ದಿಯೋರು  ಕಮಲ ಕಿವಿಗೆ ಸಿಕ್ಕಿಸಿಕೊಂಡು ಲಕ್ಷ್ಮಿ ಡೀಲ್ ಮುಗಿಸಿ ರಾತ್ರಿನೇ ಕಾಶಿಗೆ ಹೋದ್ರು...’ ಶಿಷ್ಯ ವಿಭೂತಿ ತೆಗೆದು ಕಣ್ಣಿಗೆ ಊದಿದ. ಮಹಾದ್ರೋಹ ಎಂದು ಜೋಕುಮಾರರು ಅಳುತ್ತಾ ಮೂರ್ಛೆ ಹೋದ್ರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT