ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮದು ಚುನಾಯಿತ ಸರ್ಕಾರ ಕಾಂಗ್ರೆಸ್‌ ಇದನ್ನು ಸಹಿಸುತ್ತಿಲ್ಲ

‘ವಿಕಾಸ ಪರ್ವ’ ಸಮಾವೇಶದಲ್ಲಿ ಕಾಂಗ್ರೆಸ್‌ ವಿರುದ್ಧ ಟೀಕೆ
Last Updated 30 ಮೇ 2016, 0:30 IST
ಅಕ್ಷರ ಗಾತ್ರ

ದಾವಣಗೆರೆ: ‘ಈ ದೇಶದಲ್ಲಿ ಕೆಲವರು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ ಜನರ ಮೂಲಕ ಚುನಾಯಿತವಾದ ಸರ್ಕಾರವನ್ನು ಸ್ವೀಕರಿಸಲು ಅವರ ಮನಸ್ಸು ಒಪ್ಪುವುದಿಲ್ಲ. ಇವರೆಲ್ಲಿಂದ ಬಂದರೊ ಎಂಬ ದುಗುಡದಲ್ಲೇ ಈಗಲೂ ಇದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಮುಖಂಡರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.

ಎನ್‌ಡಿಎ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಕಾರಣ ಭಾನುವಾರ ಹೈಸ್ಕೂಲ್‌ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿಕಾಸಪರ್ವ ಸಮಾವೇಶದಲ್ಲಿ ಮೋದಿ ಮಾತನಾಡಿದರು.

‘ನಾನು ಬೇರೆಲ್ಲಿಂದಲೋ ಬಂದಿಲ್ಲ. ಇದೇ ನೆಲದಿಂದ ಬಂದವನು. ಜನರ ಮಧ್ಯೆದಿಂದಲೇ ಬಂದವನು. ನನ್ನ ಸರ್ಕಾರ ತನ್ನ ಸಾಮರ್ಥ್ಯವನ್ನು ಜನರ ಒಳಿತಿಗಾಗಿ ಮುಡಿಪಾಗಿಡಲು ನಿಶ್ಚಯಿಸಿದ್ದೇನೆ. ಎರಡು ವರ್ಷಗಳಲ್ಲಿ ಮಾಡಿದ ಕೆಲಸಗಳು ಜನಸಾಮಾನ್ಯರ ಒಳಿತಿಗಾಗಿಯೇ’ ಎಂದು ಮೋದಿ ಹೇಳಿದರು.

‘ಕೆಲವರು ದೆಹಲಿಯ ಎ.ಸಿ. ಕೊಠಡಿಯಲ್ಲಿ ಕುಳಿತು ದೇಶಕ್ಕೆ ಸಲಹೆ ನೀಡುತ್ತಾರೆ. ಈ ಸುಡುಬಿಸಿಲಿನಲ್ಲೂ ಲಕ್ಷಾಂತರ ಜನರು ಆಶೀರ್ವಾದ ನೀಡಲು ಮುಂದೆ ಬಂದಿರುವುದು ಏಕೆಂಬುದು ಅವರಿಗೆ ಅರ್ಥವಾಗುವುದಿಲ್ಲ. ಈಗ ಯಾವುದೇ ಚುನಾವಣೆಯಿಲ್ಲ. ಆಂದೋಲನ ನಡೆಯುತ್ತಿಲ್ಲ. ಬೇಡಿಕೆಯೂ ಇಲ್ಲ. ಕೇವಲ ಪ್ರೀತಿಯಿಂದ ಬಂದಿದ್ದೀರಿ. ನಮಗೆ ವಿಶ್ವಾಸ, ಪ್ರೋತ್ಸಾಹ ನೀಡಲು ಬಂದಿದ್ದೀರಿ. ದೇಶ ಬದಲಾಗುತ್ತಿದ್ದು, ಆ ಪ್ರಕ್ರಿಯೆಗೆ ವೇಗ ನೀಡಲು ಬಂದಿದ್ದೀರಿ. ಇದಕ್ಕೆ ನಾನು ನಿಮಗೆ ತುಂಬಾ ತುಂಬಾ ಅಭಾರಿ’ ಎಂದಾಗ ಅಭಿಮಾನಿಗಳಿಂದ ಹರ್ಷೋದ್ಗಾರದ ಸದ್ದು ಮೊಳಗಿತು.

‘ಮೋದಿ ದೊಡ್ಡ ದೊಡ್ಡ ಕೆಲಸ ಮಾಡಿಲ್ಲ ಎಂದೂ ನನ್ನನ್ನು ಟೀಕಿಸುತ್ತಾರೆ. ಹಿಂದಿನ ಸರ್ಕಾರಗಳು ದೊಡ್ಡ ದೊಡ್ಡ ಕೆಲಸಗಳನ್ನು ಮಾಡಿದವು. ದೊಡ್ಡ ವ್ಯಕ್ತಿಗಳಿಗಾಗಿ ಕೆಲಸ ಮಾಡಿದವು. ದೊಡ್ಡ ದೊಡ್ಡ ಲಾಭವನ್ನೂ ಪಡೆದವು. ನಾನೂ ಅಂಥ ಪಾಪದ ಕೆಲಸ ಮಾಡಬೇಕಾಗಿತ್ತಾ? ತಪ್ಪು ಹಾದಿಯಲ್ಲಿ ನಡೆಯಬೇಕಾಗಿತ್ತಾ?’ ಎಂದು ಜನರನ್ನು ಪ್ರಶ್ನಿಸಿದ ಮೋದಿ, ‘ನಿಮ್ಮಂಥ ಜನರು ಆಶೀರ್ವಾದ, ಪ್ರೀತಿ ತೋರಿಸುವಾಗ ನನಗೆ ಪಾಪದ ಹಾದಿಯಲ್ಲಿ ನಡೆಯಬೇಕಾದ ಅಗತ್ಯವಿಲ್ಲ. ಕೆಲಸ ಕಡಿಮೆಯಾದರೂ ಪರವಾಗಿಲ್ಲ. ದೇಶ ತಪ್ಪು ಹಾದಿಯಲ್ಲಿ ಸಾಗಲು ಬಿಡುವುದಿಲ್ಲ. ಇದು ನನ್ನ ಭರವಸೆ’ ಎಂದು  ಹೇಳಿದರು.

50 ನಿಮಿಷಗಳ ಭಾಷಣದಲ್ಲಿ ಪಕ್ಷದ ಎರಡು ವರ್ಷಗಳ ಸಾಧನೆಗಳನ್ನು ಒಂದು ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ಜನರ ಮುಂದಿಟ್ಟರು.

ಕಾನೂನುಗಳ ಜಂಜಾಟಕ್ಕೆ ತೆರೆ: ಈ ಹಿಂದೆ ದೇಶದ ನಾಗರಿಕರ ತಲೆಯ ಮೇಲೆ ನಿರುಪಯುಕ್ತ ಕಾನೂನುಗಳ ಹೊರೆಯಿತ್ತು. ಜನ ಕಾನೂನುಗಳ ಜಂಜಾಟದಲ್ಲಿ ಹೈರಾಣಾಗುತ್ತಿದ್ದರು. 100–150 ವರ್ಷ ಹಿಂದೆ ರೂಪಿಸಿದ ಕಾನೂನು ಇದ್ದವು. 60 ವರ್ಷಗಳಲ್ಲಿ ಇಳಿಸಲಾಗದ ಕಾನೂನುಗಳ ಹೊರೆಯನ್ನು 2 ವರ್ಷಗಳಲ್ಲಿ ಕಡಿಮೆ ಮಾಡಿದ್ದೇವೆ. 1,200 ನಿರುಪಯುಕ್ತ ಕಾನೂನುತೆಗೆದುಹಾಕಿದ್ದೇವೆ’ ಎಂದರು.

ಕನಸು: ಉಜ್ವಲ್‌ ಯೋಜನೆ ಪ್ರಸ್ತಾಪಿಸಿದ ಮೋದಿ, ಈಗಲೂ 5 ಕೋಟಿ ಕುಟುಂಬಗಳು ಉರುವಲು ಬಳಸಿ ಅಡುಗೆ ಮಾಡುತ್ತಿವೆ. ಮನೆಯೊಡತಿ 400 ಸಿಗರೇಟಿನಿಂದ ಬರುವ ಪ್ರಮಾಣದ ಹೊಗೆಯನ್ನು ನಿತ್ಯ ಕಟ್ಟಿಗೆ ಅಡುಗೆಯಿಂದ ಸೇವಿಸಬೇಕಾಗುತ್ತದೆ. ಬಿಪಿಎಲ್‌ ಕುಟುಂಬದ ಮಹಿಳೆಯರಿಗೆ ಮೂರು      ವರ್ಷಗಳಲ್ಲಿ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಒದಗಿಸಬೇಕೆಂಬುದು ನನ್ನ ಕನಸು. ಇದನ್ನು ಈಡೇರಿಸಲು ನಿಮ್ಮ ಆಶೀರ್ವಾದ ಬೇಕು’ ಎಂದು ಕೋರಿದರು.

‘ನಮ್ಮ ಸರ್ಕಾರ ಒಂದು ವರ್ಷದಲ್ಲಿ ಮೂರು ಕೋಟಿ ಕುಟುಂಬಕ್ಕೆ ಅಡುಗೆ ಅನಿಲ ಸಂಪರ್ಕ ಒದಗಿಸಿದೆ. ಇದರಿಂದ ಬಡ, ಕೆಳಮಧ್ಯಮ ವರ್ಗದವರಿಗೆ ಸಾಕಷ್ಟು ಅನುಕೂಲವಾಗಿದೆ’ ಎಂದರು.

ಈ ಹಿಂದೆ ಅಡುಗೆ ಅನಿಲ ಸಂಪರ್ಕ ಪಡೆಯುವುದೇ ಹರಸಾಹಸವಾಗಿತ್ತು. ಮನೆಯ ಮಗನಿಗೆ ವೈದ್ಯಕೀಯ ಸೀಟು ಪಡೆಯಲು ಪಡಬೇಕಾದ ಕಷ್ಟವನ್ನೇ ಎಲ್‌ಪಿಜಿ ಸಂಪರ್ಕಕ್ಕೂ ಪಡೆಯಬೇಕಾಗಿತ್ತು. ಸಂಸದರಿಗೆ 25 ಕೂಪನ್‌ಗಳನ್ನು ನೀಡಲಾಗುತಿತ್ತು. ಇದಕ್ಕೆ ಅನೇಕರು ಅವರ ಹಿಂದೆ ಬೀಳುತ್ತಿದ್ದರು ಎಂದು ಮೋದಿ ಹೇಳಿದರು.

ಇಬ್ಬರ ವಶ: ವಿಐಪಿ ಗ್ಯಾಲರಿಯಲ್ಲಿ ಕುಳಿತು ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಾಸಪರ್ವ’ ಸಮಾವೇಶ ವೀಕ್ಷಿಸಲು ವಿಐಪಿ ಪಾಸ್‌ಗಳನ್ನು ಕಲರ್‌ ಝೆರಾಕ್ಸ್‌ ಮಾಡಿಸುತ್ತಿದ್ದ ಆರೋಪದ ಮೇಲೆ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು.

*
ಪ್ರಧಾನಿ ವಿರುದ್ಧ ಪ್ರತಿಭಟನೆ
ಹುಬ್ಬಳ್ಳಿ:
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದ ರೈತ ಮುಖಂಡರನ್ನು ಪೊಲೀಸಲು ವಶಕ್ಕೆ ಪಡೆದ ಘಟನೆ ಇಲ್ಲಿನ ವಿಮಾನ ನಿಲ್ದಾಣ ಬಳಿ ಭಾನುವಾರ ಸಂಜೆ ನಡೆಯಿತು. ದಾವಣಗೆರೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮೋದಿ ಬಂದಿಳಿಯುವ ಮುನ್ನ ಈ ಘಟನೆ ನಡೆಯಿತು. ಮಹದಾಯಿ ಮತ್ತು ಕಳಸಾ–ಬಂಡೂರಿ ವಿವಾದ ಬಗೆಹರಿಸಲು ಕೇಂದ್ರ ಸರ್ಕಾರ ಮುಂದಾಗಲಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.

ಇದಕ್ಕೂ ಮುನ್ನ ವಿಮಾನ ನಿಲ್ದಾಣಕ್ಕೆ ಬಂದ ಮನಸೂರಿನ ರೇವಣ್ಣಸಿದ್ದೇಶ್ವರ ಮಠದ ಸ್ವಾಮೀಜಿ ಬಸವರಾಜ ದೇವರು, ಪಕ್ಷಾತೀತ ರೈತ ಹೋರಾಟ ಸಮಿತಿಯ ಮುಖಂಡ ಸುಭಾಶಚಂದ್ರ ಗೌಡ ಪಾಟೀಲ ಸೇರಿದಂತೆ ಹಲವರನ್ನು ಪೊಲೀಸರು ಮುಖ್ಯದ್ವಾರದ ಬಳಿ ತಡೆದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT