ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮನ್ನು ಕಾಪಾಡುವ ಅಂತರಂಗದ ಎಚ್ಚರವೇ ಬುದ್ಧಿ

Last Updated 28 ಜೂನ್ 2016, 19:30 IST
ಅಕ್ಷರ ಗಾತ್ರ

ರಾಮಾಯಣದ ಕಥೆ ನಮಗೆ ಗೊತ್ತಿದೆ. ಎಷ್ಟೆಲ್ಲ ತಿರುವುಗಳಿಂದ ಶ್ರೀರಾಮನ ಕಥೆ ಸಾಗುತ್ತದೆಯಲ್ಲವೆ!  ರಾಮಾಯಣಕ್ಕೆ ದಿಟವಾದ ತಿರುವನ್ನು ನೀಡಿದ ಘಟನೆ ಯಾವುದು? ಇದನ್ನು ಹೇಳುವುದು ಕಷ್ಟ.

ದಶರಥನ ಮೂರು ಮದುವೆಗಳು, ಶ್ರೀರಾಮನು ಶಿವಧನುಸ್ಸನ್ನು ಮುರಿದದ್ದು, ಲಕ್ಷ್ಮಣನು ಶೂರ್ಪನಖೆಯೆ ಮೂಗನ್ನು ಕೊಯ್ದದ್ದು – ಇವುಗಳಲ್ಲಿ, ಅಥವಾ ಇಂಥವುಗಳಲ್ಲಿ ಯಾವ ಘಟನೆ ‘ರಾಮಾಯಣ’ಕ್ಕೆ ಕಾರಣವಾಯಿತು?

ಒಬೊಬ್ಬರಿಗೆ ಒಂದೊಂದು ಘಟನೆ ಕಾರಣ ಎನಿಸಬಹುದು. ಅದರೆ ರಾಮಯಣದ ಮಹತ್ವದ ತಿರುವಿಗೆ ಮಹಾಭಾರತ ಮಾತ್ರ ಬೇರೆಯದೇ ಕಾರಣವನ್ನು ಹೇಳಿದೆ:

ಅಸಂಭವಂ ಹೇಮಮೃಗಸ್ಯ ಜನ್ಮ
ತಥಾಪಿ ರಾಮೋ ಲುಲುಭೇ ಮೃಗಾಯ|
ಪ್ರಾಯಃ ಸಮಾಸನ್ನಪರಾಭವಾಣಾಂ
ಧಿಯೋ ವಿಪರ್ಯಸ್ತತರಾ ಭವಂತಿ||

ಇದರ ತಾತ್ಪರ್ಯ ಹೀಗೆ: ‘ಚಿನ್ನದ ಜಿಂಕೆಯ ಇರುವಿಕೆ ಅಸಂಭವವಾದುದು. ಹೀಗಿದ್ದರೂ ಶ್ರೀರಾಮ ಅಂಥ ಪ್ರಾಣಿಯನ್ನು ಬಯಸಿ, ಅದನ್ನು ಹಿಂಬಾಲಿಸಿದ. ಸಾಮಾನ್ಯವಾಗಿ ಯಾರಿಗೆ ವಿಪತ್ತು ಹತ್ತಿರವಾಗಿದೆಯೋ ಅಂಥವರ ಬುದ್ಧಿಯು ವ್ಯಾಮೋಹಕ್ಕೆ ತುತ್ತಾಗುತ್ತದೆ.’

ಬುದ್ಧಿಯು ಕೆಡುವುದಕ್ಕೂ ವಿಪತ್ತಿಗೂ ಇರುವ ಸಂಬಂಧವನ್ನು ಈ ಪದ್ಯ ಸ್ಥಾಪಿಸುತ್ತಿದೆ. ಇಲ್ಲಿ ಗಮನಿಸಬೇಕಾದದ್ದು, ವಿಪತ್ತು ಬಂದಾಗ ಬುದ್ಧಿ ಕೆಡುತ್ತದೆಯೊ? ಅಥವಾ ಬುದ್ಧಿ ಕೆಟ್ಟಾಗ ವಿಪತ್ತು ಎದುರಾಗುತ್ತದೆಯೊ? ಇದು ನಾವು ಯೋಚಿಸಬೇಕಾದ ವಿಷಯ.

ಶರೀರ–ಮನಸ್ಸು–ಬುದ್ಧಿ – ಇವು ಮೂರು ಸೇರಿ ಒಬ್ಬ ವ್ಯಕ್ತಿ; ಈ ಮೂರನ್ನು ಆ ವ್ಯಕ್ತಿ ಹೇಗೆ ರೂಪಿಸಿಕೊಳ್ಳುತ್ತಾನೆ, ಅವುಗಳನ್ನು ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳುತ್ತಾನೆ ಎನ್ನುವುದೇ ಅವನ ವ್ಯಕ್ತಿತ್ವ. ಬದುಕಿನಲ್ಲಿ ಬುದ್ಧಿಗಿರುವ ಮಹತ್ವದ ಬಗ್ಗೆ ಮಹಾಭಾರತವು ರಾಮಾಯಣದ ಪ್ರಸಂಗದ ಮೂಲಕ ಹೇಳುತ್ತಿದೆ. ಶ್ರೀರಾಮನನ್ನು ವಾಲ್ಮೀಕಿಗಳು ಆದರ್ಶ ವ್ಯಕ್ತಿಯಾಗಿ ರಾಮಾಯಣದಲ್ಲಿ ಕಂಡರಿಸಿದ್ದಾರೆ.

ಆದರ್ಶ ಎಂದರೆ ಪರಿಪೂರ್ಣನಾದವನು; ಎಲ್ಲರೂ ಅನುಕರಿಸ ಬೇಕಾದಂಥ ವ್ಯಕ್ತಿತ್ವನ್ನು ಹೊಂದಿರುವವನು ಎಂದು ಅರ್ಥ.  ಅವನು ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಗಟ್ಟಿಯಾಗಿದ್ದವನು; ಸದಾ ಎಚ್ಚರದಿಂದಿದ್ದವನು. ವಾಲ್ಮೀಕಿಗಳು ರಾಮನನ್ನು ‘ಪುರುಷೋತ್ತಮ’ ಎಂದೇ ಕರೆದಿದ್ದಾರೆ;

ಮನುಕುಲದಲ್ಲಿಯೇ ಉತ್ತಮನಾದವನು ಅವನು. ಅಂಥ ರಾಮನಿಗೆ ಅವನ ಬುದ್ಧಿಯೇ ಕೈಕೊಟ್ಟ ಪ್ರಸಂಗವನ್ನು ಮಹಾಭಾರತ ಎತ್ತಿತೋರಿಸುತ್ತಿದೆ. ಸೃಷ್ಟಿಯಲ್ಲಿ ಏನೇನೋ ಚಿತ್ರವಿಚಿತ್ರ ಸಂಗತಿಗಳು ಇರುತ್ತವೆ, ದಿಟ. ಆದರೆ ಅಂಥವನ್ನು ಕಾಣುವ ತನಕ ಅವನ್ನು ನಂಬುವುದು ಕಷ್ಟ; ಕಂಡ ಮೇಲೂ ಅವನು ನಿಜವಾಗಿಯೂ ಇವೆಯೆ?  ಇದ್ದಂತೆ ತೋರುತ್ತಿವೆಯೆ? – ಹೀಗೆ ವಿಶ್ಲೇಷಿಸಬೇಕಾದ್ದು ಆವಶ್ಯಕವಲ್ಲವೆ? ಇದನ್ನೇ ವಿವೇಕ ಎನ್ನುವುದು.

ಬುದ್ಧಿಯು ವಿವೇಕವಾಗಿ ಅರಳಬೇಕು ಎಂದರೆ ಸಮಾಧಾನ ಎಂಬ ಭೂಮಿಕೆ ಫಲವತ್ತಾಗಿರಬೇಕು. ಸಮಾಧಾನದ ಮನಸ್ಸು ಮಾತ್ರವೇ ನಮ್ಮ ಹೆಜ್ಜೆಯ ಎಲ್ಲ ದಿಕ್ಕುಗಳ ಗೊತ್ತು–ಗುರಿಗಳನ್ನು ಕಾಣಿಸಬಲ್ಲದು. ಅಂದು ರಾಮನ ಜೀವನದಲ್ಲಿ ನಡೆದದ್ದೇನು?

ರಾಮ, ಸೀತೆ ಮತ್ತು ಲಕ್ಷ್ಮಣ – ಮೂವರೂ ಕಾಡಿನಲ್ಲಿದ್ದಾರೆ. ಅದೊಂದು ದಿನ; ಶ್ರೀರಾಮನ ಕುಟೀರದ ಸಮೀಪದಲ್ಲಿ ಚಿನ್ನದ ಜಿಂಕೆಯೊಂದು ಸುಳಿದಾಡುತ್ತಿತ್ತು; ಅದು ಸೀತೆಯ ಕಣ್ಣಿಗೆ ಬಿದ್ದಿತು. ಸೀತೆಯ ಕಣ್ಣಿಗೆ ಬೀಳಬೇಕೆಂದೇ ಅದು ಅಲ್ಲಿ ಸುಳಿದಾಡುತ್ತಿದ್ದಿತು; ರಾಮನನ್ನು ಮೋಸದಿಂದ ಬೀಳಿಸಬೇಕೆಂಬುದೆ ಆ ಚಿನ್ನದ ಜಿಂಕೆಯ ಗುರಿಯಾಗಿತ್ತೆನ್ನಿ! ಆ ಜಿಂಕೆಯೇ ಮೋಸದ ಜಿಂಕೆಯಾಗಿತ್ತು.

ಎಲ್ಲಾದರೂ ಚಿನ್ನದ ಜಿಂಕೆ ಇರಲು ಸಾಧ್ಯವೆ? ರಾಕ್ಷಸನ ಮಾಯಾಜಾಲದಿಂದ ತೋರಿಕೊಂಡದ್ದು ಆ ಮಾಯಾಮೃಗ; ಹೇಮಮೃಗ. ಚಿನ್ನದ ಜಿಂಕೆ ಎಲ್ಲಾದರೂ ಇರಲು ಸಾಧ್ಯವೆ – ಎಂಬ ಪ್ರಶ್ನೆ ಸೀತೆಗೆ ಬರಲೇ ಇಲ್ಲ. ಅದಕ್ಕೆ ಬದಲಿಗೆ ಆ ಜಿಂಕೆ ತನಗೆ ಬೇಕೆಂದು ಅವಳು ಹಠವನ್ನೇ ಮಾಡಿದಳು.

ಹೋಗಲಿ, ರಾಮನಿಗಾದರೂ ಅಂಥದೊಂದು ಪ್ರಶ್ನೆ ಎದುರಾಗುವುದು ಬೇಡವೆ? ಅವನಿಗೂ ಅಂಥದೊಂದು ಪ್ರಶ್ನೆ ಹುಟ್ಟಲಿಲ್ಲ! ಚಿನ್ನದ ಜಿಂಕೆ ಇರಲು ಸಾಧ್ಯವೆ? – ಎಂಬ ಪ್ರಶ್ನೆ ಆ ಕ್ಷಣದಲ್ಲಿ ರಾಮನಲ್ಲಿ ಹುಟ್ಟದ ಕಾರಣದಿಂದ ಎದುರಾದ ಪ್ರಸಂಗ ಎಂಥದು? ರಾಮನ ಜೀವನವನ್ನೇ ದುಃಖಕ್ಕೆ ತಳ್ಳುವಂಥ ಘಟನೆ ನಡೆದುಹೋಯಿತು. ಮಡದಿಯನ್ನು ಸಂತೋಷಗೊಳಿಸಲು ಚಿನ್ನದ ಜಿಂಕೆಯನ್ನು ತರಲು ಅದರ ಬೆನ್ನು ಹಿಡಿದು ರಾಮ ಹೊರಟ.

ಇದೇ ಸಂದರ್ಭಕ್ಕಾಗಿ ಹೊಂಚು ಹಾಕುತ್ತಿದ್ದ ರಾವಣನು ಸೀತೆಯನ್ನು ಅಪಹರಿಸಿದ.  ರಾಮನ ಸಂಪತ್ತೇ ಅಪಹೃತವಾಯಿತು; ಅವನು ನಿರಾಶ್ರಿತನಾದ; ಹೆಂಡತಿಯನ್ನು ಕಳೆದುಕೊಂಡ ಅವನು ಕಣ್ಣೀರಿಟ್ಟ, ಗೋಳಾಡಿದ. ಅಂದು ಶ್ರೀರಾಮ ಆ ಚಿನ್ನದ ಜಿಂಕೆಯನ್ನು ಹಿಂಬಾಲಿಸದೇ ಇದ್ದಿದ್ದರೆ? ಸೀತೆಯ ಅಪಹರಣ ನಡೆಯುತ್ತಲೇ ಇರಲಿಲ್ಲ; ರಾಮನಂಥವನು ಕಣ್ಣೀರಿಡುವ ಪ್ರಸಂಗವೇ ಬರುತ್ತಿರಲಿಲ್ಲವೆನ್ನಿ!

ಜಾರುವುದಕ್ಕಾಗಿಯೇ ಮನಸ್ಸು ಸರ್ವದಾ ಸನ್ನದ್ಧವಾಗಿರುತ್ತದೆ. ರಾಮನಂಥವನ ಮನಸ್ಸೇ ಅವನ ಬುದ್ಧಿಯನ್ನು ಸೋಲಿಸಲು ತವಕಿಸುತ್ತಿರುತ್ತದೆ ಎಂದ ಮೇಲೆ ಸಾಮಾನ್ಯರ ಪಾಡೇನು? ಆದುದರಿಂದಾಗಿ ಮನಸ್ಸು–ಬುದ್ಧಿಗಳನ್ನು ಸದಾ ಎಚ್ಚರದಿಂದ ಕಾಪಾಡಿಕೊಳ್ಳಿ; ಅಪಾಯದ ದವಡೆಗೆ ಅವನ್ನು ದೂಡಬೇಡಿ – ಎಂದು ಮಹಾಭಾರತ ನಮ್ಮನ್ನು ಉದ್ದೇಶಿಸಿ ಹೇಳುತ್ತಿದೆ.

ಜೀವನದಲ್ಲಿ ನಾವು ತೆಗೆದುಕೊಳ್ಳುವ ತೀರ್ಮಾನಗಳ ಫಲವನ್ನು ಜೀವನದುದಕ್ಕೂ ಅನುಭವಿಸಬೇಕಾಗುತ್ತದೆ. ಹೀಗಾಗಿ ಒಂದು ತೀರ್ಮಾನಕ್ಕೆ ಬರುವ ಮೊದಲು ಅದರ ಸಾಧಕ–ಬಾಧಕಗಳನ್ನು ಕುರಿತು ನಾಲ್ಕಾರು ಸಲ ಆಲೋಚಿಸಬೇಕು; ಹತ್ತು ದಿಕ್ಕುಗಳಿಂದ ಅದರ ಒಳಿತು–ಕೆಡಕುಗಳನ್ನು ವಿಶ್ಲೇಷಿಸಬೇಕು.

ಜೀವನದ ಪ್ರಯಾಣ ಸರಿಯಾಗಿ, ಹಿತವಾಗಿ ಸಾಗಿ ಗುರಿಯನ್ನು ಸೇರಬೇಕು ಎಂದರೆ ನಮ್ಮ ಶರೀರ ಎಂಬ ವಾಹನವೂ ಮನಸ್ಸು ಎಂಬ ಇಂಧನವೂ ಬುದ್ಧಿ ಎಂಬ ದಾರಿಯೂ ಒಂದಾಗಿ ಸಾಮರಸ್ಯದಿಂದ ಜೊತೆಯಾಗಬೇಕು; ಆರೋಗ್ಯಪೂರ್ಣವಾಗಿ ಒಂದು ಇನ್ನೊಂದಕ್ಕೆ ಪೂರಕವಾಗಿ ಸ್ಪಂದಿಸಬೇಕು.

ಅಪಾಯದಲ್ಲಿ ಸಿಲುಕಿರುವಾಗಲೋ ಅಥವಾ ಕಷ್ಟವು ಹೆಗಲೇರಿರುವಾಗಲೋ ನಮ್ಮ ಬುದ್ಧಿ ನಮ್ಮಲ್ಲಿ ಜೋಪಾನವಾಗಿರಬೇಕು; ಕವಿದಿರುವ ಕತ್ತಲೆಯನ್ನು ಓಡಿಸುವ ಬೆಳಕಾಗಿ ಅದು ಒದಗಬೇಕು. ಆಗಲೇ ನಮ್ಮ ಬುದ್ಧಿಗೊಂದು ಘನತೆ, ನಾವು ಬುದ್ಧಿವಂತರು ಎನ್ನುವುದಕ್ಕೊಂದು ಮರ್ಯಾದೆ. ಜೀವನದಲ್ಲಿ ನೂರಾರು ಆಸೆ–ಆಮಿಷಗಳು ನಮ್ಮ ಮನಸ್ಸು–ಬುದ್ಧಿಯನ್ನು ಕೆಡಿಸಲು ಹವಣಿಸುತ್ತಿರುತ್ತವೆ. ಅಂಥ ಸಮಯದಲ್ಲಿಯೇ ನಾವು ಹೆಚ್ಚು ಎಚ್ಚರಿಕೆಯಿಂದ ಇರಬೇಕು, ಅಲ್ಲವೆ? ಡಿವಿಜಿಯವರು ಕಗ್ಗದಲ್ಲಿ ಹೇಳಿರುವ ಈ ಮಾತು ಇಲ್ಲಿ ಉಲ್ಲೇಖಾರ್ಹ:

ಎಲ್ಲರುಂ ಜಿತಮನಸ್ಕರೆ ದೈವ ವಿಧಿ ಮಾಯೆ |
ಚೆಲ್ವುರೂಪಿಂ ಬಂದು ಕಣ್ಕುಕ್ಕುವನಕ ||
ವಲ್ಗುರೂಪೆ ಸುಭದ್ರೆ ಕಣ್ಮುಂದೆ ಸುಳಿವನಕ |
ಫಲ್ಗುಣನು ಸಂನ್ಯಾಸಿ – ಮಂಕುತಿಮ್ಮ ||

ಆಮಿಷಗಳು ನಮ್ಮ ಮುಂದೆ ಇಲ್ಲದಿದ್ದಾಗ ನಾವೆಲ್ಲರೂ ಆರೋಗ್ಯವಂತರೇ, ಸಚ್ಚಾರಿತ್ರ್ಯವಂತರೇ, ಸಂತರೇ; ಆದರೆ ರುಚಿಯಾದ ಆಸೆಗಳು, ಕಣ್ಣುಕುಕ್ಕುವ ಆಮಿಷಗಳ ಮೆರವಣಿಗೆ ನಡೆದಿರುವಾಗ ನಮ್ಮ ಬುದ್ಧಿ ನಮ್ಮಲ್ಲಿಯೇ ಇರಬಲ್ಲುದೆ? ಈ ಆಮಿಷಗಳು ಆನ್ನ, ಅಂತಸ್ತು, ಅಧಿಕಾರ, ಅಬಲೆ, ಅಮಲು, ಅವ್ಯವಹಾರ – ಯಾವುದೂ ಆಗಿರಬಹುದು.

ಈ ಆಮಿಷಗಳಿಂದ ಕೆಡುವ ನಮ್ಮ ಬುದ್ಧಿಯ ಹದವು ಉಂಟುಮಾಡುವ ದುರಂತಗಳೂ ಕೂಡ ನಾಲ್ಕಾರು ರೀತಿಗಳಲ್ಲಿ ಸಂಭವಿಸಬಹುದು; ಆರೋಗ್ಯ ಕೆಡಬಹುದು, ಮನಸ್ಸು ಹುಚ್ಚಾಗಬಹುದು, ವ್ಯಕ್ತಿತ್ವೇ ಕುಸಿಯಬಹುದು; ಕೊನೆಗೆ ಜೀವನವೇ ನರಕವಾಗಬಹುದು. ಹೀಗಾಗಿ ಬುದ್ಧಿ ಎನ್ನುವುದು ಸದಾ ನಾವು ಕಾಪಾಡಿಕೊಳ್ಳಬೇಕಾದ, ನಮ್ಮನ್ನು ಕಾಪಾಡುವ ಅಂತರಂಗದಲ್ಲಿಯ ಎಚ್ಚರವಾಗಬೇಕು. ಇದನ್ನೇ ಸಂಸ್ಕೃತಸುಭಾಷಿತವೊಂದು ಸೊಗಸಾಗಿ ಹೀಗೆಂದಿದೆ:

ನ ದೇವ ದಂಡಮಾದಾಯ ರಕ್ಷಂತಿ ಪಶುಪಾಲವತ್ |
ಯಂ ಹಿ ರಕ್ಷಿತುಮಿಚ್ಛಂತಿ ಬುದ್ಧ್ಯಾ ಸಂಯೋಜಯತಿ ತಮ್‌ ||

(ದನಕಾಯುವವನು ಕೋಲಿನಿಂದ ದನಗಳನ್ನು ನೋಡಿಕೊಳ್ಳುವಂತೆ ದೇವತೆಗಳು ನಮ್ಮನ್ನು ರಕ್ಷಿಸುವುದಕ್ಕೆ ಬರುವುದಿಲ್ಲ; ಯಾರನ್ನು ಅವರು ಕಾಪಾಡಬೇಕೆಂದು ಇಷ್ಟಪಡುತ್ತಾರೋ ಅವರಿಗೆ ಆ ರೀತಿಯು ಬುದ್ಧಿಯನ್ನು ಕೊಡುತ್ತಾರಷ್ಟೆ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT