ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮಲ್ಲಿನ ಪ್ರತಿ ಮನೆಯಲ್ಲೂ ಕಥೆ ಇದೆ...

ವಾರದ ಸಂದರ್ಶನ
Last Updated 29 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಎಂಬತ್ತು ವರ್ಷಗಳ ಕನ್ನಡ ಸಿನಿಮಾದ ವಾಕ್ಚಿತ್ರ ಪರಂಪರೆಯಲ್ಲಿ ‘ಸಂಸ್ಕಾರ’ ಚಿತ್ರದ ನಂತರ ಲೊಕಾರ್ನೊ ಚಿತ್ರೋತ್ಸವದಲ್ಲಿ ಮತ್ತೊಮ್ಮೆ ಕನ್ನಡದ ಛಾಪು ಮೂಡಿಸಿರುವ ರಾಮ್‌ ರೆಡ್ಡಿ ಅವರಿಗೀಗ ಇಪ್ಪತ್ತಾರು ವರ್ಷ! ಕನಸುಕಂಗಳ ಈ ತರುಣ ಕರ್ನಾಟಕದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಮೊಮ್ಮಗ. ವಿಶ್ವದ ಅತ್ಯಂತ ಹಳೆಯ ಸಿನಿಮೋತ್ಸವಗಳಲ್ಲಿ ಒಂದಾದ ಸ್ವಿಟ್ಜರ್ಲೆಂಡ್‌ನ ಪ್ರತಿಷ್ಠಿತ ‘ಲೊಕಾರ್ನೊ ಚಿತ್ರೋತ್ಸವ’ದಲ್ಲಿ ಚೊಚ್ಚಿಲ ನಿರ್ದೇಶನದ ಚಿತ್ರಕ್ಕೆ ಎರಡು ಪ್ರಶಸ್ತಿಗಳನ್ನು ಪಡೆದ ಅಗ್ಗಳಿಕೆ ಅವರದು.

  ಎಂಟು ವರ್ಷಗಳ ಬಳಿಕ ಈ ಚಿತ್ರೋತ್ಸವಕ್ಕೆ ಆಯ್ಕೆಯಾದ ಮೊದಲ ಭಾರತೀಯ ಚಿತ್ರ ಎನ್ನುವುದು ಅವರ ಸಿನಿಮಾದ ಮತ್ತೊಂದು ವಿಶೇಷ. ಅಂತರರಾಷ್ಟ್ರೀಯ ಸಿನಿಮಾ ಆಕರ್ಷಣೆ ನಡುವೆಯೂ ಹಿತ್ತಲ ಪ್ರೀತಿಯನ್ನು ಉಳಿಸಿಕೊಂಡಿರುವ ರಾಮ್‌ ರೆಡ್ಡಿ, ‘ತಿಥಿ’ ಚಿತ್ರದ ಮೂಲಕ ವಿಶ್ವ ಸಿನಿಮಾದ ಗಮನಸೆಳೆದಿದ್ದಾರೆ.

* ಸಿನಿಮೋತ್ಸವದ ಸವಿನೆನಪುಗಳೊಂದಿಗೆ ಬೆಂಗಳೂರಿಗೆ ಬಂದಿದ್ದ ಅವರು ಸಿನಿಮಾ ಕುರಿತ ತಮ್ಮ ಅನುಭವ, ಅನಿಸಿಕೆಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು. ನೀವು ಬೆಳೆದದ್ದು, ಸಿನಿಮಾ ವ್ಯಾಕರಣ ಕಲಿತದ್ದು ಇಂಗ್ಲಿಷ್‌ ವಾತಾವರಣದಲ್ಲಿ. ಹೀಗಿದ್ದೂ ಕನ್ನಡ ಸಿನಿಮಾ ಮಾಡಬೇಕು ಎಂದು ಅನಿಸಿದ್ದು ಏಕೆ?
ಕಾರಣ ಸ್ಪಷ್ಟವಾಗಿ ಗೊತ್ತಿಲ್ಲ. ಆದರೆ ನನ್ನ ಗೆಳೆಯ ಈರೇಗೌಡನೊಂದಿಗೆ ಮಂಡ್ಯ ಜಿಲ್ಲೆಯ ಆತನ ಊರು ನೊದೆಕೊಪ್ಪಲು ಪರಿಸರದಲ್ಲಿ ಓಡಾಡಿದಾಗ ಅಲ್ಲಿಯೇ ಸಿನಿಮಾ ಮಾಡಬೇಕು ಎನ್ನಿಸಿತ್ತು. ಅಲ್ಲಿನ ಜನ, ಸಂಸ್ಕೃತಿಯನ್ನು ಸಿನಿಮಾ ಮೂಲಕ ಅಭಿವ್ಯಕ್ತಿಸಬೇಕು ಎನ್ನಿಸಿತ್ತು. ಈ ಆಸೆಯನ್ನು ಗೆಳೆಯನಿಗೆ ಹೇಳಿದ್ದೆ ಕೂಡ. ಹೀಗೆ ಕನಸನ್ನು ಕಂಡ ನಂತರ ನಾನು ಫಿಲ್ಮ್‌ ಇನ್‌ಸ್ಟಿಟ್ಯೂಟ್‌ ಸೇರಿಕೊಂಡಿದ್ದು. ಒಂದಂತೂ ನಿಜ, ಪ್ರಾದೇಶಿಕ ಕಥೆಯನ್ನು ಇಟ್ಟುಕೊಂಡೇ ಜಾಗತಿಕ ಪರಿವೇಷದಲ್ಲಿ ಸಿನಿಮಾ ಮಾಡುವುದು ಸಾಧ್ಯ ಎನ್ನುವುದು ನನ್ನ ನಂಬಿಕೆ. ಒಳ್ಳೆಯ ಸಿನಿಮಾ ಪ್ರಾದೇಶಿಕವಾಗಿದ್ದೂ ಜಾಗತಿಕ ಪರಿವೇಷವನ್ನು ಒಳಗೊಂಡಿರುತ್ತದೆ.

* ‘ತಿಥಿ’ ಸಿನಿಮಾ ರೂಪುಗೊಂಡಿದ್ದು ಹೇಗೆ?
ನಮ್ಮಲ್ಲಿನ ಪ್ರತಿ ಮನೆಯಲ್ಲೂ ಕಥೆ ಇದೆ. ಅದನ್ನು ಹುಡುಕಬೇಕಷ್ಟೇ. ಗೆಳೆಯ ಈರೇಗೌಡನ ಜೊತೆ ಸಿನಿಮಾಕ್ಕಾಗಿ ಕಥೆಯನ್ನು ಹುಡುಕಿಕೊಂಡು ಮೂರು ತಿಂಗಳು ಅಲೆದಾಡಿದೆ. ಕೊನೆಗೆ ಕಥೆ ಆತನ ಕುಟುಂಬದಲ್ಲೇ ದೊರೆಯಿತು. ಅದನ್ನು ಬರೆಯಲು ಹಿಡಿದದ್ದು ಒಂದು ತಿಂಗಳು ಮಾತ್ರ. ಆದರೆ ಸಿನಿಮಾ ಒಟ್ಟಾರೆ ರೂಪುಗೊಳ್ಳಲು ಮೂರು ವರ್ಷಗಳ ಕಾಲ ಹಿಡಿಯಿತು. ವೃತ್ತಿಪರರಲ್ಲದ ಕಲಾವಿದರು ನಮಗೆ ಬೇಕಿತ್ತು. ಅಂಥವರಿಗಾಗಿ ಎಂಟು ತಿಂಗಳ ಹುಡುಕಾಟ ನಡೆಸಿದೆವು. ಇಡೀ ರಾಜ್ಯವನ್ನು ಸುತ್ತಿದೆವು. ನಮಗೆ ಇಷ್ಟವಾದ ಮುಖಗಳು ಎದುರಾದಾಗಲೆಲ್ಲ, ಆ ವ್ಯಕ್ತಿಗಳನ್ನು ಮಾತನಾಡಿಸುತ್ತಿದ್ದೆವು. ಆ ಪ್ರಯಾಣ ತುಂಬಾ ವಿಶಿಷ್ಟವಾಗಿತ್ತು.

ವಿವಿಧ ರೀತಿಯ ಜನರ ಭೇಟಿ, ಅವರೊಂದಿಗಿನ ನೇರ ಮಾತುಕತೆ ಖುಷಿ ನೀಡಿತು. ಮಂಡ್ಯ ಜಿಲ್ಲೆಯ ನೊದೆಕೊಪ್ಪಲು ಹಾಗೂ ಬ್ಯಾಡರಹಳ್ಳಿ ಗ್ರಾಮಗಳಲ್ಲಿ ಚಿತ್ರೀಕರಣ ನಡೆಸಿದೆವು. ಇನ್ನು ಚಿತ್ರದ ಸೌಂಡ್‌ಗಾಗಿ ಆರು ತಿಂಗಳು ಹಿಡಿಯಿತು. ನಮಗೆ ಏನು ಬೇಕು ಎನ್ನುವುದು ಗೊತ್ತಿತ್ತು; ಆದರೆ, ಅದನ್ನು ಮಾಡುವುದು ಗೊತ್ತಿರಲಿಲ್ಲ. ಆದರೆ, ನಮಗೆ ಬೇಕಾದುದು ಸಿಗುವವರೆಗೂ ಪ್ರಯತ್ನ ನಿಲ್ಲಿಸಲಿಲ್ಲ. ಚಿತ್ರದ ಪ್ರಥಮ ಪ್ರತಿ ಸಿದ್ಧವಾದ ಕೂಡಲೇ ಲೊಕಾರ್ನೊ ಚಿತ್ರೋತ್ಸವಕ್ಕೆ ಕಳಿಸಿದೆವು. ಅಲ್ಲಿ ಪ್ರಶಸ್ತಿಯೂ ದೊರೆಯಿತು. ಈಗ ಸಿನಿಮಾ ಇನ್ನೂ ಮುಗಿದಿಲ್ಲ. ಅದನ್ನು ಮತ್ತಷ್ಟು ಚಂದಗೊಳಿಸಬೇಕು ಅನ್ನಿಸುತ್ತಿದೆ. ಆ ಕೆಲಸ ಇನ್ನೂ ನಡೆಯುತ್ತಿದೆ.

* ಚಿತ್ರದ ‘ಕಥೆ’ ಏನು?
101 ವರ್ಷದ ವೃದ್ಧನೊಬ್ಬ ಸಾವಿಗೀಡಾದಾಗ, 75 ವರ್ಷದ ಆತನ ಮಗ ಅಪರಕರ್ಮಗಳನ್ನು ನಡೆಸುತ್ತಾನೆ. ಹನ್ನೊಂದು ದಿನಗಳ ಈ ಕಾರ್ಯಕ್ರಮದಲ್ಲಿ ಮೂರು ತಲೆಮಾರುಗಳ ಸದಸ್ಯರು ಭಾಗವಹಿಸುತ್ತಾರೆ. ಆ ಸಂದರ್ಭದಲ್ಲಿ ನಡೆಯುವ ಪ್ರಸಂಗಗಳೇ ಚಿತ್ರದ ಕಥೆ. ‘ತಿಥಿ’ ಚಿತ್ರದಲ್ಲಿ ಕಾಮಿಡಿ ಇದೆ ಎಂದು ವರದಿಯಾಗಿದೆ. ಅದು ಹಾಗಲ್ಲ. ಇಲ್ಲಿನ ಹಾಸ್ಯ ಸಂಕೀರ್ಣವಾದುದು. ತಲೆಮಾರುಗಳ ನಡುವಣ ಸ್ಥಿತ್ಯಂತರವನ್ನು ಹೇಳುವ ಪ್ರಯತ್ನ ಚಿತ್ರದಲ್ಲಿದೆ. ಘಟನೆ ಸಂಭವಿಸುವ ರೀತಿ ವಸ್ತುನಿಷ್ಠವಾಗಿದ್ದರೆ, ಅದರ ಪರಿಣಾಮ ಪ್ರಫುಲ್ಲವಾಗಿ (ಪ್ಲೇಫುಲ್‌) ಇರುವ ತಂತ್ರವನ್ನು ಚಿತ್ರದಲ್ಲಿ ಬಳಸಿದ್ದೇನೆ.

* ಚೊಚ್ಚಿಲ ಸಿನಿಮಾಕ್ಕೆ ಅಂತರರಾಷ್ಟ್ರೀಯ ಮನ್ನಣೆ ದೊರಕಿದಾಗ ಏನನ್ನಿಸಿತು?
ಅದು ಮಾತು ಕಳೆದುಕೊಂಡ ಕ್ಷಣ. ‘ಸಮಕಾಲೀನ ಚಿತ್ರ ತಯಾರಕರು’ (ಫಿಲ್ಮ್‌ ಮೇಕರ್ಸ್‌ ಆಫ್‌ ದಿ ಪ್ರೆಸೆಂಟ್) ವಿಭಾಗದಲ್ಲಿ ಪ್ರಶಸ್ತಿ ಪಡೆಯಲು ವೇದಿಕೆಯೇರಿದ ನಾನು ಒಂದು ಕೈಯಲ್ಲಿ ‘ಗೋಲ್ಡನ್‌ ಲೆಪರ್ಡ್‌’ ಪ್ರಶಸ್ತಿ ಹಿಡಿದುಕೊಂಡಿದ್ದೆ. ಆ ರೋಮಾಂಚನದಿಂದ ಹೊರಬರುವ ಮೊದಲೇ, ‘ಚೊಚ್ಚಿಲ ಚಿತ್ರ ವಿಭಾಗ’ (ಫಸ್ಟ್‌ ಫೀಚರ್‌) ವಿಭಾಗದ ಪ್ರಶಸ್ತಿಯನ್ನೂ ಪ್ರಕಟಿಸಿ, ಮತ್ತೊಂದು ಚಿನ್ನದ ಚಿರತೆಯನ್ನು ನನ್ನ ಕೈಗೆ ಕೊಟ್ಟರು. ಆ ಕ್ಷಣಗಳನ್ನು ವಿವರಿಸುವುದು ಕಷ್ಟ.

* ಲೊಕಾರ್ನೊ ಉತ್ಸವದಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿತ್ತು?
ಸಾಮಾನ್ಯವಾಗಿ ಅಲ್ಲಿ ಸಿನಿಮಾ ನೋಡಿದ ನಂತರ ಗಂಭೀರ ವಾತಾವರಣ ಇರುತ್ತದೆ. ಆದರೆ ‘ತಿಥಿ’ ಸಿನಿಮಾ ಪ್ರದರ್ಶನ ಮುಗಿದ ನಂತರ ಶುರುವಾದ ಚಪ್ಪಾಳೆ ಕೆಲವು ನಿಮಿಷಗಳ ಕಾಲ ಸತತವಾಗಿ ಅನುರಣಿಸಿತು. ನಮ್ಮ ಜನ, ನಮ್ಮ ಸಂಸ್ಕೃತಿಯ ಚಿತ್ರವನ್ನು ಅಂತರರಾಷ್ಟ್ರೀಯ ಪ್ರೇಕ್ಷಕರು ಒಪ್ಪಿಕೊಂಡ ಕ್ಷಣ ಅವಿಸ್ಮರಣೀಯವಾದುದು.

* ನಿರ್ದೇಶಕನಾಗಿ ನಿಮ್ಮ ಮೇಲಿನ ಪ್ರೇರಣೆಗಳೇನು?
ನಾನು ಭಾರತೀಯ ಸಿನಿಮಾ ನೋಡಿರುವುದು ಕಡಿಮೆ. ಹಿಂದಿ ಸಿನಿಮಾ ನೋಡುವುದಿಲ್ಲ. ಕನ್ನಡ ಸಿನಿಮಾ ನೋಡಿಲ್ಲ. ವಿಶ್ವ ಸಿನಿಮಾ ನೋಡಿ ಸಾಕಷ್ಟು ಕಲಿತಿದ್ದೇನೆ. ಒಂದು ಬಗೆಯಲ್ಲಿ ನನ್ನದು ಸ್ವಯಂ ಕಲಿಕೆಯ ದಾರಿ. ಇರಾನ್‌, ಟರ್ಕಿ, ಜಪಾನ್‌, ಚೈನಾ ಮುಂತಾದ ದೇಶಗಳ ಸಿನಿಮಾಗಳನ್ನು ನೋಡುತ್ತ ನೋಡುತ್ತ ಕಲಿತಿದ್ದೇನೆ. ಎಷ್ಟೊಂದು ದೇಶಗಳ ಸಿನಿಮಾ, ಅಲ್ಲಿನ ಪ್ರತಿಯೊಬ್ಬ ನಿರ್ದೇಶಕನದೂ ಅವರದೇ ಆದ ಶೈಲಿ– ಇದೆಲ್ಲದರ ಪ್ರೇರಣೆ ಪಡೆದು ನನ್ನದೇ ಶೈಲಿ ಕಂಡುಕೊಳ್ಳಲು ಪ್ರಯತ್ನಿಸಿರುವೆ.

* ಸಿನಿಮಾ ದಾರಿ ಆರಿಸಿಕೊಂಡಿದ್ದು ಯಾವಾಗ? ಏಕೆ?
ನಾನು ಬೆಳೆದದ್ದು, ಓದಿದ್ದು ಬೆಂಗಳೂರಿನಲ್ಲಿ. ಇಲ್ಲಿದ್ದಾಗ ಕವಿತೆಯ ಬಗ್ಗೆ ಸೆಳೆತವಿತ್ತು. ಫೋಟೊಗ್ರಫಿಯಲ್ಲೂ ಆಸಕ್ತಿಯಿತ್ತು. ಆಗ ಸಿನಿಮಾ ನನ್ನ ಕ್ಷೇತ್ರ ಎನ್ನಿಸಿರಲಿಲ್ಲ. ಅರ್ಥಶಾಸ್ತ್ರದಲ್ಲಿ ಪದವಿ ಪಡೆಯಲೆಂದು ದೆಹಲಿಯ ಸೇಂಟ್‌ ಸ್ಟೀಫನ್‌ ಕಾಲೇಜಿಗೆ ಸೇರಿಕೊಂಡೆ. ಅಲ್ಲಿ ನನ್ನ ಯೋಚನೆಯ ಧಾಟಿ ಬದಲಾಯಿತು. ಅಲ್ಲಿದ್ದಾಗಲೇ ‘ಇಟ್ಸ್‌ ರೈನಿಂಗ್‌ ಇನ್ ಮಾಯ’ ಎನ್ನುವ ಕಾದಂಬರಿ ಬರೆಯತೊಡಗಿದೆ. ‘ಮಾಯ’ ಎನ್ನುವ ಕಾಲ್ಪನಿಕ ಭಾರತೀಯ ನಗರದಲ್ಲಿ ನಡೆಯುವ ಈ ಕಥೆಯಲ್ಲಿ ಆಧ್ಯಾತ್ಮಿಕ ಅಂಶಗಳೂ ಇದ್ದವು (ಆ ಕಾದಂಬರಿಯನ್ನು ಮುಂದೊಂದು ದಿನ ಸಿನಿಮಾ ಮಾಡಿದರೂ ಮಾಡಬಹುದು). ಆನಂತರ ಯಾವುದಾದರೂ ವಿಷಯದಲ್ಲಿ ಪರಿಣತಿ ಸಾಧಿಸಬೇಕು ಎನ್ನಿಸಿತು. ಸಾಹಿತ್ಯದ ಬಗ್ಗೆ ಆಸಕ್ತಿಯಿತ್ತು. ಸಂಗೀತದಲ್ಲೂ ಅಭಿರುಚಿ ಇತ್ತು (ರಾಮ್‌ ರೆಡ್ಡಿ ತಬಲಾ ವಾದಕರೂ ಹೌದು). ಸಂಗೀತ, ಸಾಹಿತ್ಯ, ದೃಶ್ಯಗಳು– ಇವೆಲ್ಲವನ್ನೂ ಒಳಗೊಂಡ ವಿಶಿಷ್ಟ ಮಾಧ್ಯಮವಾದ ಸಿನಿಮಾದ ಬಗ್ಗೆ ನನ್ನ ಗಮನ ಹರಿಯಿತು. ಕಾಲೇಜಿನ ನಂತರ ಮತ್ತೆ ಬೆಂಗಳೂರಿಗೆ ಬಂದಾಗ ಸಿನಿಮಾ ಮಾಡುವ ಹಂಬಲ ಮತ್ತಷ್ಟು ಹೆಚ್ಚಾಯಿತು. ಆ ತುಡಿತದಲ್ಲೇ ‘ಇಕಾ’ ಎನ್ನುವ ಕಿರುಚಿತ್ರ ತಯಾರಿಸಿದೆ.

ಅದು ರಾಷ್ಟ್ರೀಯ – ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶನ ಕಂಡಿತು. ಆನಂತರ ಪ್ರಾಗ್‌ನ ‘ಫಿಲ್ಮ್‌ ಇನ್‌ಸ್ಟಿಟ್ಯೂಟ್‌’ಗೆ ಸೇರಿಕೊಂಡೆ. ಅಲ್ಲಿ ಸಿನಿಮಾದ ವ್ಯಾಕರಣವನ್ನು, ನಿರ್ದೇಶನದ ಸೂಕ್ಷ್ಮಗಳನ್ನು ಕಲಿತುಕೊಂಡೆ. ಅಲ್ಲಿದ್ದ ಒಂಬತ್ತು ತಿಂಗಳಲ್ಲಿ ಸುಮಾರು 40 ಕಿರುಚಿತ್ರಗಳ ತಯಾರಿಕೆಯಲ್ಲಿ ಭಾಗಿಯಾಗಿದ್ದೆ. ನನ್ನ ನೇತೃತ್ವದಲ್ಲೇ 5 ಕಿರುಚಿತ್ರಗಳು ರೂಪುಗೊಂಡಿದ್ದವು. ಈ ಕಲಿಕೆ ಸಿನಿಮಾ ಮಾಧ್ಯಮದ ಬಗ್ಗೆ ನನ್ನ ಅರಿವನ್ನು ವಿಸ್ತರಿಸಿತು. ಅಲ್ಲಿಂದ ಕರ್ನಾಟಕಕ್ಕೆ ಬರುವ ವೇಳೆಗೆ ಸಿನಿಮಾ ಮಾಡುವ ಹಂಬಲ ಬಲವಾಗಿತ್ತು. ಗೆಳೆಯ ಈರೇಗೌಡ ನನಗೆ ಬೆಂಬಲವಾಗಿದ್ದ. ಇಬ್ಬರೂ ಕನಸು ಕಾಣುತ್ತ, ಕಥೆ ಹುಡುಕುತ್ತ ನಡೆದಾಗ ಎಡತಾಕಿದ್ದು ‘ತಿಥಿ’.

* ಫಿಲ್ಮ್‌ ಇನ್‌ಸ್ಟಿಟ್ಯೂಟ್‌ ಗೆಳೆಯರೂ ‘ತಿಥಿ’ಯ ತಂಡದಲ್ಲಿ ಇದ್ದಾರಲ್ಲವೇ?
ಹೌದು. ಹಾಲೆಂಡ್‌ನ ಡೊರಾನ್‌ ಟೆಂಪರ್ಟ್‌ ಛಾಯಾಗ್ರಾಹಕರಾಗಿ ಕೆಲಸ ಮಾಡಿದರು. ಅಮೆರಿಕದ ಜಾನ್‌ ಜಿಮ್ಮೆರ್‌ಮನ್‌ ನನ್ನೊಂದಿಗೆ ಸಂಕಲನಕಾರರಾಗಿ ದುಡಿದಿದ್ದಾರೆ. ಇವರಿಬ್ಬರೂ ‘ಪ್ರಾಗ್‌ ಫಿಲ್ಮ್‌ ಇನ್‌ಸ್ಟಿಟ್ಯೂಟ್‌’ನಲ್ಲಿ ನನ್ನ ಸಹಪಾಠಿಗಳಾಗಿದ್ದವರು. ಇನ್ನು, ಸುನ್‌ಮಿನ್‌ ಪಾರ್ಕ್‌ ಎನ್ನುವ ಕೊರಿಯಾ ಮೂಲದ ಅಮೆರಿಕನ್‌ ಗೆಳೆಯರು ನನ್ನ ಸಿನಿಮಾವನ್ನು ತುಂಬಾ ಇಷ್ಟಪಟ್ಟರು. ‘ತಿಥಿ’ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಕಾಣಿಸಿಕೊಳ್ಳುವಲ್ಲಿ ಅವರ ನೆರವು ದೊಡ್ಡದು.

* ಕನ್ನಡ ಚಿತ್ರರಂಗದಲ್ಲೀಗ ಡಬ್ಬಿಂಗ್‌ ಬೇಕು – ಬೇಡ ಎನ್ನುವ ಚರ್ಚೆಗಳು ನಡೆಯುತ್ತಿವೆ. ನಿಮ್ಮ ಅನಿಸಿಕೆ ಏನು?
ವಿದೇಶಿ ಚಿತ್ರಗಳನ್ನು ಉಪ ಶೀರ್ಷಿಕೆಗಳ ಮೂಲಕ ನೋಡುವ ರೂಢಿ ವಿಶ್ವದೆಲ್ಲೆಡೆ ಇದೆ. ಹಾಗೆ ನೋಡುವುದಾದರೆ, ಪ್ರತಿ ಬಿಂಬದಲ್ಲೂ ಶಬ್ದ ಇರುತ್ತದೆ. ಸಂಭಾಷಣೆಗಳನ್ನು ಅರ್ಥ ಮಾಡಿಕೊಳ್ಳಲು ಉಪ ಶೀರ್ಷಿಕೆಗಳನ್ನು ಬಳಸುವುದು ಒಪ್ಪಿತ ಕ್ರಮ. ಕನ್ನಡದಲ್ಲೂ ಇದನ್ನು ಬಳಸಬಹುದು. ಇದರ ಬದಲಾಗಿ, ನೇರವಾಗಿ ಡಬ್‌ ಮಾಡುವುದರಿಂದ ಸಿನಿಮಾದ ಪ್ರಾಮಾಣಿಕತೆ ನಷ್ಟವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT