ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮೊಳಗಿನ ಎಚ್ಚರ ಕಾಯಬೇಕು...

ಮಿದು ಮಾತು; ಹೆಣ್ಣೊಬ್ಬಳ ಒಡಲಾಳದ ದನಿ
Last Updated 6 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

‘ಸುಡ್ಲಿ... ಏನ್‌ ಪೇಪರ ತಂಗಿ, ತಗಿ ಅಕಡೆ... ಸಂತೃಪ್ತಿ, ಸುಖ ಅನ್ನೂದೇನು ಔಷಧಿಯಿಂದ ಬರ್ತದೇನು?’ ಅಂತ ಬೈಕೊಂತ ಬಂದು ಕುಂತ್ರು ಮಾಮಿ. ಅವರ ಕೈಯ್ಯಾಗ ಇದ್ದ ಜಾಹೀರಾತು ನೋಡ್ದಾಗಲೆ ಗೊತ್ತಾಗಿತ್ತು. ಅವರ ಅಸಮಾಧಾನ ಯಾವ ಸುಖ ಸಂತೃಪ್ತಿಯ ಬಗ್ಗೆ ಇತ್ತು ಅಂತ.

‘ಅಲ್ಲ, ಹೆಣ್ಮಕ್ಕಳ ಸುಖದ ಕಲ್ಪನೆ ಇವರಿಗೇನು ಗೊತ್ತು? ಎಲ್ಲಿ ನೋಡಿದ್ರೂ ಈಗೀಗ ಇವೇ ಜಾಹೀರಾತು ನೋಡ್ರಿ. ಅದೆಷ್ಟರೆ ಹಸದಿರಬೇಕು ಮನಷಾ? ಅದೆಷ್ಟರ ತೃಷೆ ಇರಬೇಕು?

ಇಷ್ಟಕ್ಕೂ ಒಂದು ಸಾಂಗತ್ಯದೊಳಗ ಇರೋರಿಗೆ ಇವೆಲ್ಲಾ ಬ್ಯಾಡಬ್ಯಾಡ. ಸುಮ್ನ ಪ್ರಯೋಗಕ್ಕ ಇಳಿಯೋರಿಗೆ, ಅನುಭವ ಅಂತ ತೆರಕೊಳ್ಳೋರಿಗೆ ಮಾತ್ರ ಇಂಥ ಶಬ್ದಗಳು ಸೆಳೀಬಹುದು.

ಕೂಡೂದು ಅಂದ್ರ ಬರೇ ದೇಹ ಅಲ್ಲವೇ ಅಲ್ಲ. ಕೂಡೂದು ಅಂದ್ರ ಶೃಂಗಾರನೂ ಅಲ್ಲ. ಕೂಡೂದು ಅಂದ್ರ ಜೀವ ಭಾವ ಕೂಡಬೇಕು. ಅವಾಗ ಅಲ್ಲಿ ಜೀವ ಹುಟ್ತದ.

ರಮಿಸುವುದರೊಳಗ ವಾತ್ಸಲ್ಯದ ಭಾವ ಇರಬೇಕು. ಅದು ಸಂಗಾತಿ ಹತ್ರ ಬೆಚ್ಚನೆಯ ಭದ್ರತೆಯ ಭಾವ ನೀಡೂಹಂಗಿರಬೇಕು. ತನಗ, ಅಗ್ದೀ ತನಗಂತೇ ಇರುವ ಜೀವ ಇದು ಅನ್ನುವ ಭಾವ ಅದರೊಳಗ ಇರಬೇಕು. ಯಾವುದೇ ಪ್ರೀತಿ ಅರಳೂದೆ ಇಂಥ ಮಮಕಾರದೊಳಗ. ವಾತ್ಸಲ್ಯದೊಳಗ. ಇದೇ ಕಾರಣಕ್ಕೇ ಯಾವುದೂ ‘ಬ್ಯಾಡ್‌ ಟಚ್‌’ ಅನಸೂದಿಲ್ಲ. ಅಂತಃಕರಣ ನಮ್ಮ ಮೈ ಮುಟ್ಟೂದಿಲ್ಲ, ಮನಸು ಮುಟ್ತದ. ದೇಹ ಸ್ಪಂದಸ್ತದ. ಈ ಹಂತದೊಳಗ ಪರಸ್ಪರ ಮಕ್ಕಳಾಗಿರಬೇಕು. ಪರಸ್ಪರ ಪೊರೆಯುವ ಹಂಗಿರಬೇಕು. ಅಲ್ಲಿ ತುಂಟತನ, ಮುಗ್ಧತನ ಎರಡೂ ಇರಬೇಕು.

ಆಮ್ಯಾಲಿಂದ ಕೊಡುವ, ಕೊಳ್ಳುವ ಚಾಂಚಲ್ಯ ನಮ್ಮನ್ನ ಆಳಾಕ ಬಿಡಬೇಕು. ಇಲ್ಲಿ ಇಬ್ಬರೂ ಸಮನ್ವಿತರಾಗುವುದೇ ರಾಗರತಿಯ ಬಣ್ಣದೊಳಗ. ಪ್ರೀತಿ ಬಿಟ್ರ ಮತ್ತೇನೂ ಇರಬಾರದು. ಒಬ್ಬರೊಳಗ ಕೊಡುವ ತವಕ ಇದ್ದಷ್ಟೂ ಇನ್ನೊಬ್ಬರೊಳಗ ನೀಡುವ ಹುಕಿ ಇರಬೇಕು.

ಮುಂದಿನ ಹಂತದೊಳಗ ಇಬ್ಬರೂ ಒಂದಾಗಿರ್ತಾರ. ಆ ಏಕ ಅನ್ನೂ ಭಾವ ಅವರಿಬ್ಬರನ್ನು ಬೆಸೀತದ. ಕೊನೀತನಕ.
ಈ ಉಸಿರು ಒಂದಾಗಿಸುವುದು ಬರೇ ಕಾಮ ಅಲ್ಲ. ಕಾಮನೆಗಳಲ್ಲ. ಅದು ಕ್ರಿಯೆನೂ ಅಲ್ಲ, ಪ್ರಕ್ರಿಯೆನೂ ಅಲ್ಲ. ಅದು ಅವರವರ ಪ್ರೀತಿ’
ಹಿಂಗ ಒಂದೇ ಉಸುರಿನಾಗ ಮಿಲನದ ಮಾತೆಲ್ಲ ಹೇಳಿ ಸುಮ್ನಾದ್ರು.

ಮಾತಾಡಾಕ ಏನೂ ಉಳದೇ ಇಲ್ಲ ಅನ್ನೂಹಂಗ ಮಾರಿ ಮಾಡ್ಕೊಂಡು ಕುಂತಿದ್ರು. ಮಾತು ಮುಂದುವರಿಸುವ ಯಾವ ಲಕ್ಷಣಾನೂ ಇರಲಿಲ್ಲ. ಅದಕ್ಕ ಏನು ಹೇಳಬೇಕಂತ ಗೊತ್ತಾಗದೇ ಅವರಷ್ಟಕ್ಕ ಅವರೇ ತಿಳಿಯಾಗಲಿ ಅಂತ ಸುಮ್ನಿದ್ದೆ.

‘ಅಲ್ಲಬೇ, ನೀವೆಲ್ಲ ಇಷ್ಟು ಓದ್ಕೊಂಡು, ತಿಳಕೊಂಡು ಮತ್ತೂ ಸಮಾಧಾನ ಇಲ್ಲ, ಒಬ್ರೇ ಅದೀವಿ, ಸಂತೋಷ ಇಲ್ಲ ಅಂತೆಲ್ಲ ಹೇಳ್ತೀರಿ, ನಮಗೇನು ಗೊತ್ತಿತ್ತು ಹೇಳು? ‘ಖುದ್‌ ಮರೇತಕ್‌ ಖುದಾ ನಹಿ ದಿಖ್ತಾ’ ಅನ್ನೂಹಂಗ ನಮಗ ಅನುಭವ ಆಗೂತನಾನೂ ಯಾರೂ ಏನಂತ ಹೇಳ್ತಿರಲಿಲ್ಲ.

ಈಗ ಲೈಂಗಿಕ ಶಿಕ್ಷಣ ಅಂತ, ಎಚ್ಚರ ಇರಲಿ ಅಂತ ಸಂತಾನೋತ್ಪತ್ತಿ ಪ್ರಕ್ರಿಯೆ ಬಗ್ಗೆ ಜ್ಞಾನ ಹೆಚ್ಚಸ್ತಾರಂತ...’ ಆದ್ರ ಇದು ಜ್ಞಾನದ ಮಟ್ಟದೊಳಗಿದ್ರ ಇಷ್ಟೆಲ್ಲ ಅನಾಚಾರ, ಅತ್ಯಾಚಾರಗಳು ಆಗ್ತಿದ್ದುವಾ? ಕಲಸೂದು ಕೆಟ್ಟಂತ ಹೇಳೂದಿಲ್ಲ. ಇವೊತ್ತಿನ ಹೆಣ್ಮಕ್ಕಳಿಗೆ ಇದೆಲ್ಲ ಗೊತ್ತಿರೂದು ಭಾಳ ಛೊಲೊ. ಆದ್ರ ಹುಡುಗೂರು ಯಾಕ ಅದನ್ನು ಜ್ಞಾನದ ಬದಲು ಪ್ರಯೋಗಕ್ಕ ಮುಂದಾಗ್ತಾರ? ಇಬ್ಬರಿಗೂ ಒಂದೇ ವಯಸ್ಸಿನಾಗ ಕಲಸೂಮುಂದ ಅವರಲ್ಲಿ ಎಚ್ಚರಿಕಿ ಬದಲು ಕುತೂಹಲ ಮೂಡ್ತದ ಅಂದ್ರ ಕಲಸಾಂವ ತಪ್ಪೋ? ಕಲಿಯೋರ್ದು ತಪ್ಪೋ?’
ಏನರೆ ಹೇಳು, ಕಾಲಮಾನ ಬದಲಾಗೇದ... ನಮ್ಮಕ್ಕಳಿಗೆ ಏನು ಹೇಳಬೇಕು? ಅವಕ್ಕೆಷ್ಟು ಗೊತ್ತದ? ನಮಗಿಂತ ಜಾಸ್ತಿ ಗೊತ್ತಿದ್ರ ಏನು ಮಾಡೂದು?’ 

ಇಡೀ ಶಿಕ್ಷಣ ವ್ಯವಸ್ಥೆ, ಮಾನವನ ವರ್ತನೆಯ ಪ್ರಶ್ನೆಗಳೇ ಇಲ್ಲಿ ಜುಗಲ್‌ಬಂದಿಗೆ ಇಳಿದಿದ್ವು.
ಸಾಂಸಾರಿಕ ಸುಖ ಅನ್ನೂದು ದೇಹಕ್ಕ ಸಂಬಂಧಿಸಿದ್ದು ಅಲ್ಲವೇ ಅಲ್ಲ. ಅದು ದೈವಿಕ ಕ್ರಿಯೆ. ಸೃಷ್ಟಿ ಕ್ರಿಯೆ ಅಂದ್ರ ಪುರುಷ ಮತ್ತು ಪ್ರಕೃತಿಯ ಮಿಲನ ಅದು. ದೈವಾರಾಧನೆಯ ಹಂತದೊಳಗ ಇರಬೇಕು. ಹಸಿವು ನೀಗಿಸುವ ‘ಅರ್ಜ್‌’ ಆಗಬಾರದು. ದೇಹಾರಾಧನೆ ಆಗಬಾರದು. ಒಂದು ಹಂತಕ್ಕ ದೇಹಾರಾಧನೆ ಆದರೂ ಚಿಂತಿಲ್ಲ, ವಾಂಛೆಯ ಬದಲು ಪ್ರೀತಿ, ಮಮಕಾರ ಅದರೊಳಗ ಸಮ್ಮಿಳಿತ ಆಗಬೇಕು ನೋಡವಾ... ಅವಾಗ ಈ ಅತೃಪ್ತಿ, ಸಂತೃಪ್ತಿ ಅನ್ನೂ ಶಬ್ದಗಳೆಲ್ಲ ಗೌಣ ಅನ್ನಸ್ತಾವ’ ಇಷ್ಟು ಹೇಳ್ಕೊಂತ, ಮತ್ತದೇ ಪೇಪರ್‌ ಎತ್ಕೊಂಡು ಒಳಗೆದ್ದು ಹೋದರು.

ಧಾರವಾಡದ ಮಳಿ ಧೋ ಅಂತ ಸುರದು, ಬಿಸಿಲು ಬಿದ್ದಂಗಿತ್ತು ಅವರ ಮಾತು.
ಇಷ್ಟಕ್ಕೂ ತೃಪ್ತಿ, ತಹತಹಕಿ ಇವೆರಡೂ ಮನಸಿಗೆ ಸಂಬಂಧಿಸಿದ್ದು. ಅದನ್ನ ಖರೇನೆ ಔಷಧಿಯಿಂದ ಖರೀದಿ ಮಾಡಾಕ ಆಗೂದಿಲ್ಲ. ಇಷ್ಟು ಸಣ್ಣ ವಿಷಯ ಯಾಕ ಉಳದೋರಿಗೆ ಅರ್ಥ ಆಗೂದಿಲ್ಲ? ಎಲ್ಲಾರಿಗೆ ಅರ್ಥ ಆದ್ರ ಇಂಥಾ ಔಷಧಿ ಮಾಡೋರು, ಮಾರೋರು ಎಲ್ಲಾರೂ ಹೊಸ ಕೆಲಸಾ ಹುಡುಕ ಬೇಕಾಗ್ತದ.

ಎಲ್ಲಾ ಕಡೇನೂ ವಾಂಛೆಯ ವಿಜೃಂಭಣೆ ಯಾಕ ಮಾಡ್ಲಿಕತ್ಹಾರ?

ಯಾಕಂದ್ರ ಇಲ್ಲಿ ಪುರುಷನ ಅಹಂಕಾರವನ್ನ ರೊಕ್ಕಾಗಳಸೂ ತಂತ್ರ ಮಾಡ್ಕೊಂಡಾರ. ಗಣ್ಮಕ್ಕಳಾಗಲೀ, ಹೆಣ್ಮಕ್ಕಳಾಗಲೀ ಈ ವಿಷಯ ಬಂದು ಕೂಡಲೇ ತಮ್ಮ ಅಹಂಕಾರದ ಕೋಟಿಯೊಳಗಿನ ಸಾಮ್ರಾಟರು ಆಗ್ತಾರ. ಇವರ ಹೆಣ್ತನ ಪ್ರಶ್ನಿಸೂಹಂಗಿಲ್ಲ. ಅವರ ಗಂಡಸ್ತನದ ಬಗ್ಗೆಯಂತೂ ಮಾತಾಡೂಹಂಗೇ ಇಲ್ಲ. ಇಂಥ ಜಾಹೀರಾತುಗಳಿಗೆ ಮರಳಾಗೂ ಮೊದಲು  ಕುಟುಂಬ ವೈದ್ಯರ ಜೊತಿಗೆ ಸಮಾಲೋಚನೆ ಆಗಬೇಕು. ಖರೇನೆ ತೊಂದರೆ ಏನು ಅನ್ನೂದು ಅರೀಬೇಕು. ಆಪ್ತ ಸಮಾಲೋಚನೆಯ ಅಗತ್ಯವಿದ್ದರ, ಸಂಕೋಚದ ಪರದೆ ಸರಿಸಿ ಮುಂದ ಹೋಗಬೇಕು.

ಇಂಥ ಛೊಲೊ ಕೆಲಸಗಳಿಗೆ ಮನಸು ತಡೀತದ. ಪ್ರಯೋಗಗಳಿಗೆ ಯಾಕ ಮುಂದಾಗ್ತದ? ನಮ್ಮೊಳಗಿನ ಎಚ್ಚರ ಯಾಕ ನಮ್ಮನ್ನು ಕಾಯವಲ್ದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT