ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮೊಳಗಿನ ರಾಜ್ಕುಮಾರ್

Last Updated 23 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಕನ್ನಡಿಗರ ನೂರಾರು ಕನಸು – ಬೇಡಿಕೆಗಳನ್ನು ಸುಮಾರು ಅರ್ಧ ಶತಮಾನದ ಕಾಲ ನಿರಂತರವಾಗಿ ಆರೋಪಿಸಲು ರೂಪುಗೊಂಡ ಒಂದು ಅದ್ಭುತ ರೂಪಕ ರಾಜಕುಮಾರ್! ಸಾಂಸ್ಕೃತಿಕ – ಸಾಮಾಜಿಕ ಪಠ್ಯಗಳಂತೆ ಒದಗಿಬಂದ ಸಿನಿಮಾಗಳ ಮೂಲಕ ಕನ್ನಡದ ಜನಸಮುದಾಯಗಳಿಗೆ ‘ಅವರವರ ರಾಜಕುಮಾರ್‌’ ಆಗಿ ಮುತ್ತುರಾಜ್ ದೊರೆತದ್ದು ಒಂದು ಅಪೂರ್ವ ಸಾಮಾಜಿಕ ವಿದ್ಯಮಾನ. ರಾಜ್‌ ಹುಟ್ಟುಹಬ್ಬ (ಏ. 24) ಮತ್ತು ಅವರು ನಿಧನರಾಗಿ ಹತ್ತು ವರ್ಷಗಳಾದ ಸಂದರ್ಭದಲ್ಲಿ, ಕ್ಲೀಷೆಗಳು ಹಾಗೂ ಹೊಗಳಿಕೆಯ ಪುನರಾವರ್ತನೆಗಳ ಆಚೆಗೆ ಅವರನ್ನು ನೋಡಬೇಕಿದೆ.

ಹದಿನೈದು ವರ್ಷದ ಹಿಂದೆ ಫಿನ್ಲೆಂಡಿನ ಹೆಲ್ಸಿಂಕಿಯಲ್ಲಿ ಮೂರು ತಿಂಗಳು ಕಲಾ ರೆಸಿಡೆನ್ಸಿಯಲ್ಲಿದ್ದೆ. ಹಿಂದಿರುಗುವ ಮುಂಚಿನ ದಿನವಷ್ಟೇ ಆಕಸ್ಮಿಕವಾಗಿ ಮಿಕ್ಕೋ ಜಿಂಗರ್ ಎನ್ನುವ ಪತ್ರಕರ್ತನ ಪರಿಚವಾಯಿತು. ಫಿನ್ಲೆಂಡಿನ ರಾಜಧಾನಿಯಲ್ಲಿ ‘ನೈ ಟಿಡ್’ ಎಂಬ ಸ್ವೀಡಿಷ್ ಪತ್ರಿಕೆಯ ಸಂಪಾದಕನಾಗಿದ್ದ ಈತನ ವೃತ್ತಿ ಬೆಂಗಳೂರಿನಲ್ಲಿ ತಮಿಳು ಪತ್ರಿಕೆಯೊಂದನ್ನು ನಡೆಸುವಂತಿತ್ತು. ಆತನ ಆಫೀಸಿನಲ್ಲಿ ಮೌಸ್ ಪ್ಯಾಡ್ ಮೇಲೆ ರಜನೀಕಾಂತ್ ಚಿತ್ರವಿತ್ತು. ವರ್ಷಕ್ಕೊಂದಾವರ್ತಿ ಭಾರತಕ್ಕೆ ವಿದ್ಯಾರ್ಥಿಗಳನ್ನು ಕರೆತರುತ್ತಿದ್ದ ಆತ ‘ಗಣೇಶ ಬೀಡಿ’ ಸೇದುತ್ತಿದ್ದ.

ಭಾರತಕ್ಕೆ ಬಂದಾಗಲೆಲ್ಲ ತನ್ನ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ ಕಾರಣಕ್ಕೆ ಆತ ಹೆಂಗಸೊಬ್ಬಳಿಗೆ ಕೇರಳದಲ್ಲಿ ಎಮ್ಮೆಯೊಂದನ್ನು ಕೊಡಿಸಿದ್ದ. ಮರುದಿನ ಬೆಳಗಿನ ವಿಮಾನದಲ್ಲಿ ನಾನು ಭಾರತಕ್ಕೆ ಹಿಂದಿರುಗಬೇಕಿತ್ತು. ರಾತ್ರಿಯೆಲ್ಲ ಆತ ನನ್ನನ್ನು ವಿಚಾರಿಸುತ್ತಿದ್ದುದು ಆಗಿನ್ನೂ ವೀರಪ್ಪನ್ ಬಂಧನದಲ್ಲಿದ್ದ ಅಣ್ಣಾವ್ರ ಬಗ್ಗೆಯೇ. ಭಾರತೀಯ ಸುದ್ದಿ ಮಾಧ್ಯಮದ ಅಧಿಕೃತತೆಯ ಬಗ್ಗೆ ಆತನಿಗೆ ಕಿಂಚಿತ್ತೂ ನಂಬಿಕೆ ಇರಲಿಲ್ಲ. ಆತನಿಗೆ ಮೈಯೆಲ್ಲ ಕಣ್ಣು, ಕಿವಿ. ಕೈಗೆ ಸಿಕ್ಕಿದ ಸೀಸದ ಕಡ್ಡಿಯಲ್ಲೇ ನೋಟ್ಸ್ ಮಾಡುತ್ತಿದ್ದ. ನಾನು ನನಗೆ ತಿಳಿದ ಹಾಗೂ ನನ್ನ ಬಾಲ್ಯದ ‘ರಾಜ್ಕುಮಾರ್’ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದೆ.

‘ಕಮಲಹಾಸನ್ (ಸ್ವಾತಿಮುತ್ಯಂ) ಮತ್ತು ರಾಜಣ್ಣನವರ (ಬಂಗಾರದ ಪಂಜರ) ನಡುವೆ ಯಾರು ಬೆಟರ್ ನಟ’ ಎಂದಾತ ಕೇಳಿದ್ದಕ್ಕೆ ನಾನು ನೀಡಿದ ಸಮಾಧಾನಕರವೂ ಅಯೋಮಯವೂ ಆದ ಉತ್ತರ ನೀಡುವುದರ ಜೊತೆಗೆ ಅಣ್ಣಾವ್ರ ಸಿನಿಮಾಗಳನ್ನು ನೋಡಿಯೇ ನಾನು ಎಲ್ಲವನ್ನೂ ಕಲಿತದ್ದೆಂದು ಆತನನ್ನು ಒಪ್ಪಿಸಿಬಿಟ್ಟೆ! ಮತ್ತೊಮ್ಮೆ ನಾನು ಹೆಲ್ಸಿಂಕಿಗೆ ಹಿಂದಿರುಗಿದಾಗ ತಿಳಿದದ್ದೇನೆಂದರೆ, ನನ್ನ ಸಂದರ್ಶನವು ಆತನ ಪತ್ರಿಕೆಯಲ್ಲಿ, ದೊಡ್ಡ ಪುಟವೊಂದರಲ್ಲಿ ಮೂರು ವರ್ಷದ ಹಿಂದೆಯೇ ಪ್ರಕಟವಾಗಿತ್ತಂತೆ.

ರಾಜ್ ಅವರ ಕಥನವು, ಫಿನ್ನಿಶ್ ದೇಶದಲ್ಲಿ, ಆ ದೇಶವನ್ನು ವಸಾಹತಾಗಿಸಿಕೊಂಡಿದ್ದ ಸ್ವೀಡನ್‌ನ ಭಾಷೆಯಲ್ಲಿ, ಭಾರತದ ಅಭಿಮಾನಿಯಾದ ಯುರೋಪಿಯನ್ ಒಬ್ಬನ ಬರವಣಿಗೆಯಲ್ಲಿ, ಅಣ್ಣಾವ್ರ ದೊಡ್ಡ ಫೋಟೋ ಜೊತೆಗೆ ಪ್ರಕಟವಾಗಿತ್ತಂತೆ. ನಾನು ನೆಪಮಾತ್ರವಾಗಿದ್ದ, ರಾಜಕುಮಾರರ ಕುರಿತ ಆತನ ವಿಕ್ಷಿಪ್ತ ಬರಹದ ಪ್ರತಿ ಮಾತ್ರ ನನಗೆ ದೊರಕಲೇ ಇಲ್ಲ. ದೇವರ ಚಿತ್ರವನ್ನು ಬದಲಿಸಿ ರಾಜ್ ಚಿತ್ರವನ್ನು ಕುತ್ತಿಗೆಯ ದಾರಕ್ಕೆ ಅಳವಡಿಸಿ ಓಡಾಡುತ್ತಿದ್ದ ನನ್ನ ಬಾಲ್ಯದ ಅಭಿಮಾನದ ಘಟನೆಯ ವಿವರ ಓದಿದ್ದನ್ನು ಮಾತ್ರ ಅಲ್ಲಿನ ಕೆಲವರು ನೆನಪಿಟ್ಟುಕೊಂಡಿದ್ದರು. ಅವರು ನನ್ನಲ್ಲಿ ಕೇಳಿದ್ದೇನೆಂದರೆ, ‘ಈಗಲೂ ನೀವು ಹಾಗೆಯೇ?’ ಎಂದು.

ರಾಜ್ ಸಮಾಧಿಯ ನಿರ್ಮಾಣ, ಈ ವರ್ಷ ರಾಷ್ಟ್ರಪ್ರಶಸ್ತಿ ಪಡೆದ ದೊಡ್ಡಹುಲ್ಲೂರು ರುಕ್ಕೋಜಿ ಅವರ ‘ಡಾ. ರಾಜ್ಕುಮಾರ್ ಸಮಗ್ರ ಚರಿತ್ರೆ’ ಎಂಬ ಬೃಹತ್ ಪುಸ್ತಕ, ರಾಜಕುಮಾರ್ ಅವರ ಆಯ್ದ ಕಪ್ಪುಬಿಳುಪಿನ ಚಲನಚಿತ್ರಗಳ ‘ಡಿಜಿಟಲ್ ವರ್ಣಾವತಾರ’ಗಳ ತೆರೆಗಾಣುವಿಕೆ, ರಾಜ್ ಸಂಶೋಧನಾ ಕೇಂದ್ರದ ಅಪರಿಚಿತತೆ, ಅವರನ್ನು ಕುರಿತಾದ ವಿದ್ವತ್ ಪ್ರಬಂಧಗಳಲ್ಲಿ ಒಳನೋಟಗಳನ್ನೊಲ್ಲದ ಆತಂಕಿತ ಮೆಚ್ಚುಗೆಯ ಧ್ವನಿ ಇತ್ಯಾದಿಗಳನ್ನೆಲ್ಲಾ ನೋಡಿದರೆ ‘ರಾಜ್ಕುಮಾರ್’ ಅವರ ಮರಣೋತ್ತರದಲ್ಲಿ ಅವರ ಅಭಿಮಾನಿಗಳ ಚಟುವಟಿಕೆಗಳಲ್ಲಿ ಅಭಿನಂದನೆಗಳ ಅಲೆಯ ಪುನರಾವರ್ತನೆಯೇ ಹೆಚ್ಚು. 

ಇದನ್ನೇ ‘ಮೌನದ ಪರಿಧಿಯ ಒಳಗೆ ಪ್ರತಿಭೆಯನ್ನು ಅಭಿಮಾನವು ಸ್ಥಳಾಂತರಿಸುವ ಹುನ್ನಾರ’ ಎನ್ನುವುದು. ಒಂದು ಕಾಲಘಟ್ಟದ, ಜನಾಂಗದ ಅಭಿಮಾನಕ್ಕೆ ಮಾತ್ರ ಪಾತ್ರವಾಗದೆ, ‘ಅಭಿಮಾನ’ವೆಂಬುದರ ರೂಪುರೇಷೆಯನ್ನು, ಅಸ್ತಿತ್ವವನ್ನು ಹಲವು ಬಗೆಗಳಲ್ಲಿ ನಿರೂಪಿಸಿದ ವ್ಯಕ್ತಿತ್ವಗಳು ಹಲವು: ಸಾಂತಾ ಕ್ಲಾಸ್, ಶರ್ಲಾಕ್ ಹೋಮ್ಸ್, ಗಾಂಧೀಜಿ ಪ್ರತಿಮೆಗಳು, ವಾಲ್ಟ್ ಡಿಸ್ನಿಯ ಟಾಮ್ ಅಂಡ್ ಜೆರ್ರಿ, ಕೌಬಾಯ್ ಸಿನಿಮಾಗಳ ಜಾನ್ ಸೋನ್ ಮತ್ತು ನಮ್ಮ ಸ್ಯಾಂಡಲ್‌ವುಡ್ಡಿನ ರಾಜ್ಕುಮಾರ್!

** *** **
ಹೆಗ್ಗೋಡಿನ ಸಂಸ್ಕೃತಿ ಶಿಬಿರವೊಂದರಲ್ಲಿ ಸಿನಿಮಾ ಇತಿಹಾಸಕಾರ ಮಾಧವ್ ಪ್ರಸಾದ್ ಅವರು ಕನ್ನಡ ಸಿನಿಮಾ ಬಗ್ಗೆ, ಮೊದಲು ಸುಲಲಿತ ಇಂಗ್ಲಿಷ್ ಹಾಗೂ ನಂತರ ಅದಕ್ಕಿಂತಲೂ ನಿಗೂಢವಾದ ಕನ್ನಡದಲ್ಲಿ ಮಾತನಾಡಿದ್ದು ಇಲ್ಲಿ ನೆನಪಾಗುತ್ತಿದೆ. ಅವರು ಸಾಂದರ್ಭಿಕವಾಗಿ, ‘ಅರವತ್ತರ ದಶಕದಲ್ಲಿ ರಾಜ್ ಸಿನಿಮಾಗಳಿಗಿಂತಲೂ ಕಲ್ಯಾಣ್ ಕುಮಾರರ ಸಿನಿಮಾಗಳು ಹೆಚ್ಚು ಜನಪ್ರಿಯವಾಗಿದ್ದವು ಎಂದು ಆಗಿನ ಪತ್ರಿಕೆಗಳು ಹೇಳುತ್ತವೆ’ ಎಂದರು. ಸಭೆಯಲ್ಲಿದ್ದ ‘ಮಣ್ಣಿನ ದೋಣಿ’ಯ ನಿರ್ದೇಶಕರು ಎದ್ದು ನಿಂತು, ಕೈ ಮುಗಿದು, ಮಾಧವರ ಮಾತನ್ನು ಅರ್ಧಕ್ಕೆ ನಿಲ್ಲಿಸಿ ಹೇಳಿದ್ದು ಹೀಗೆ:

‘ದಯವಿಟ್ಟು ಅಣ್ಣಾವ್ರ ಬಗ್ಗೆ ಹಾಗೆಲ್ಲ ಮಾತನಾಡಬೇಡಿ, ನಮಗೆಲ್ಲ ನೋವಾಗುತ್ತದೆ’. ಪ್ರೇಕ್ಷಕರಲ್ಲಿ ಅನೇಕರು ಇದನ್ನು ಅನುಮೋದಿಸಿದರೇ ಹೊರತು ಯಾರೂ ಆ ಮಾತನ್ನಾಗಲೀ ಅದನ್ನು ಆಡಿದವರನ್ನಾಗಲೀ ವಿರೋಧಿಸಲಿಲ್ಲ. ಆಗ ಶಿಬಿರದ ನಿರ್ದೇಶಕರಾಗಿದ್ದ ಯು.ಆರ್. ಅನಂತಮೂರ್ತಿ ತಮ್ಮ ಪ್ರತಿಕ್ರಿಯೆಯಲ್ಲಿ ‘ರಾಜಕುಮಾರರ ಬಗ್ಗೆ ಬರೆವಾಗ, ಮಾತನಾಡುವಾಗ ಮತ್ತು ಸಂಶೋಧನೆಗಳಲ್ಲಿ, ಇಂತಹ ಪ್ರತಿಕ್ರಿಯೆ ರೂಪದ ಪ್ರತಿರೋಧವನ್ನೂ ಪರಿಗಣಿಸಬೇಕಾಗುತ್ತದೆ’ ಎಂದು ಮಾಧವರಿಗೆ ಸಲಹೆ ನೀಡಿದ್ದರು. ಮಾಧವರ ಮಾತಿನಲ್ಲಿ ಸತ್ಯವಿತ್ತೋ ಇಲ್ಲವೋ ಎಂಬುದು ವಿರೋಧದ ಕಾರಣವಾಗಿರಲಿಲ್ಲ.

ಇಲ್ಲಿದ್ದದ್ದು  ಅಭಿಪ್ರಾಯವೊಂದರ ಆಯ್ಕೆ ಹಾಗೂ ಔಚಿತ್ಯದ್ದು. ದಾಖಲಾಗದ ಅಭಿಮಾನದ ವಿರುದ್ಧ ದಾಖಲಿತ ಅಂಶಗಳ ಸತ್ಯಾಂಶವನ್ನು ಸಂಘರ್ಷಕ್ಕೆ ಇಳಿಸುವುದೆಂದರೆ, ಸಾಕ್ರೆಟಿಸನ ನುಡಿಗಳನ್ನು ಪ್ಲೇಟೋನ ಪದಗಳಲ್ಲಿ ಮಾತ್ರ ಗ್ರಹಿಸಬೇಕಾದ ಅನಿವಾರ್ಯತೆಯನ್ನು ಒಡ್ಡಿದಂತಾಗುತ್ತದೆ. ಏಕೆಂದರೆ ದಾಖಲಾಗದ ಮಾತುಗಳನ್ನು ಸುಲಭಕ್ಕೆ ಕಳೆದುಕೊಂಡುಬಿಡುವ ಸಂಸ್ಕೃತಿ ನಮ್ಮದು. ರಾಜಕುಮಾರರ ಶರೀರ ಮತ್ತು ಶಾರೀರ ಮೌಖಿಕ ಸಂಪ್ರದಾಯಕ್ಕೆ ಸೇರಿದ್ದೇ ಹೊರತು ಬರಹ, ದಾಖಲೆಗಳಿಗಲ್ಲ.

** *** **
ಈಗ ‘ರಾಜ್ಕುಮಾರ್’ ಇಲ್ಲದೆ ದಶಕ ಕಳೆದಿದೆ, ದಶಕಗಳೇ ಕಳೆದಂತಾಗಿದೆ. ಅಭಿಮಾನಿಗಳ ಒತ್ತಾಯದ ಪ್ರಕಾರವೇ, ಸಹವರ್ತಿಗಳ ಸಹಯೋಗದೊಂದಿಗೆ ಅರ್ಧ ಶತಮಾನಗಳ ಕಾಲ ಮುತ್ತುರಾಜ್ ಅವರು ತಮ್ಮ ಶರೀರ–ಶಾರೀರವನ್ನು ರೂಪಿಸಿಕೊಂಡು ಸೃಷ್ಟಿಸಿದ ವ್ಯಕ್ತಿತ್ವವೇ ‘ರಾಜ್ಕುಮಾರ್’. ಸ್ವತಃ ಅಣ್ಣಾವ್ರಿಗೇ ಇದರ ಬಗ್ಗೆ ಅರಿವಿತ್ತು. ಕ್ಯಾಮೆರಾವನ್ನು ಎದುರಿಸುವಾಗ, ಮುತ್ತುರಾಜರು ತಮ್ಮೊಳಗೆ ರಾಜಕುಮಾರನನ್ನು ಆವಾಹಿಸಿಕೊಂಡು, ಆತನ ಮೂಲಕ ಬೇಕಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಎಂದೂ ಅವರು ಎರಡನ್ನೂ ಬೆಸೆದಿದ್ದಿಲ್ಲ. ಆದ್ದರಿಂದ ನಿಜಜೀವನದಲ್ಲಿ ಅವರು ಎಂಜಿಆರ್ ಮಾಡಿದಂತೆ ಕನ್ನಡಕ–ಟೋಪಿ, ಬಚ್ಚನ್‌ರಂತೆ ವಿಗ್, ಅಶೋಕ್ ಕುಮಾರರಂತೆ ಕಪ್ಪು ಕನ್ನಡಕ ಧರಿಸುವ ಸಂಪ್ರದಾಯವನ್ನೇ ತೊರೆದಿದ್ದರು.

ಅಷ್ಟೇ ಏಕೆ, ಮೈಸೂರು ರಾಜ್ಯದ ನಮ್ಮ ರಾಜಕುಮಾರ ಮೈಸೂರು ಪೇಟ ಹಾಗೂ ಸೂಟುಬೂಟನ್ನು ಒಟ್ಟಿಗೇ ತೊಟ್ಟ ಚಿತ್ರವೇನಾದರೂ ಯಾರಿಗಾದರೂ ನೆನಪಿದೆಯೇ? ನಿಜಜೀವನದಲ್ಲಿ ಮಹಾರಾಜರು, ಸರ್ ಎಂ. ವಿಶ್ವೇಶ್ವರಯ್ಯ ಅವರಂಥವರು ತೊಡುತ್ತಿದ್ದ ಪೋಷಾಕಿನ ಹಿಂದಿನ ಗಾಂಭೀರ್ಯವೋ ಅಥವಾ ಅದಕ್ಕೂ  ವಸಾಹತುಶಾಹಿ ಆಡಳಿತಕ್ಕೂ ಇದ್ದ ಸಂಬಂಧವೇನಾದರೂ ಅಣ್ಣಾವ್ರನ್ನು ಇದರಿಂದ ದೂರವಿಟ್ಟಿತ್ತೇ? ಹೀಗೆ ಅರ್ಥ ಮಾಡಿಕೊಳ್ಳುವುದಾದರೆ ನಾವು ಕನವರಿಸಿದ ರಾಜಕುಮಾರ ನಮ್ಮ ಅಕ್ಷರಗಳು ಸೆರೆಹಿಡಿಯಲಾಗದ ದೃಶ್ಯ ಚಿಂತನೆಗಳ ಸಾರರೂಪವೂ ಆಗಿರಬಹುದೇ?

ಸಾಧಾರಣವಾಗಿ ರಾಜ್ ಸ್ಥಿರಚಿತ್ರಗಳಲ್ಲಿ ಗ್ಯಾಡ್ಜೆಟ್‌ಗಳು, ಅಂದರೆ ದೂರವಾಣಿ, ರೇಡಿಯೋ, ಪುಸ್ತಕ, ಬೈಕು, ಕಾರು, ಪ್ಲೇನುಗಳು ಇತ್ಯಾದಿಗಳನ್ನು ಹಿಡಿದು, ಆತು ನಿಂತ ಆಂಗಿಕ ಪ್ರದರ್ಶನಗಳಿರುವುದಿಲ್ಲ. ಅವ್ಯಾವುವೂ ಇಲ್ಲದೆಯೂ ಕೇವಲ ಅವರ ಭಾವಚಿತ್ರಗಳನ್ನು ನೋಡುತ್ತಲೇ, ಅವು ಯಾವ ಚಲನಚಿತ್ರಗಳ ಸ್ಟಿಲ್ಲು ಎಂದು ನಿರ್ದಿಷ್ಟವಾಗಿ ಹೇಳಿಬಿಡುವ ಅಭಿಮಾನಿಗಳಿದ್ದಾರೆ. ‘ತಾಯಿಗೆ ತಕ್ಕ ಮಗ’, ‘ಬಹದ್ದೂರ್ ಗಂಡು’ ಹಾಗೂ ‘ಶಂಕರ್ ಗುರು’ ಸಿನಿಮಾಗಳ ನಡುವೆ ದಶಕಗಳಷ್ಟು ವ್ಯತ್ಯಾಸಗಳಿದ್ದರೂ ಆ ಮೂರರಲ್ಲಿಯೂ ಒಂದೇ ತೆರನಾದ ವಿಗ್ ಧರಿಸಿದ್ದರೂ ಆ ಪಾತ್ರಗಳ ಭಾವಚಿತ್ರಗಳನ್ನು ನೋಡಿದಾಗ ಸ್ಪಷ್ಟವಾಗಿ ವಿಭಿನ್ನ ವ್ಯಕ್ತಿತ್ವಗಳ ವ್ಯತ್ಯಾಸಗಳನ್ನು ಗುರುತಿಸಿಬಿಡುವ ನಿಪುಣ ‘ಅಭಿಮಾನಿ ದೇವರು’ಗಳಿದ್ದಾರೆ.

ರಾಜ್ ಎಂದರೆ ಅದು ಶರೀರ–ಶಾರೀರ ಬೆರೆತ ಒಂದು ದೃಶ್ಯಕುಲದ ಅಹ್ಲಾದಕರ ಐಚ್ಛಿಕ ಸ್ಮೃತಿ. ಬಚ್ಚನ್ ಕೇವಲ ಶಾರೀರ, ದಿಲೀಪ್ ಕುಮಾರ್ ಮೌನಿ, ಎನ್‌ಟಿಆರ್ ಶಂಖನಾದದ ರಾಜಕಾರಣಿ ಬೆರೆತ ದೈವೀಕ ಹಾಗೂ ಎಂ.ಜಿ.ಆರ್. ಪಾಳೇಗಾರನ ದೈಹಿಕ ಕಸರತ್ತುಗಳ ರೂಪಗಳಲ್ಲಿ, ‘ಸ್ಮೃತಿ’ಗಳಾಗಿ ಅವರವರ ಪ್ರಭಾವಿ ವಲಯಗಳಲ್ಲಿ ಇನ್ನೂ ಜೀವಂತರಿದ್ದಾರೆ. ನಾವು ನೆನಪುಗಳನ್ನು ಉಳಿಸಿಕೊಳ್ಳುವುದರ ಜೊತೆಗೇ, ಅದರ ರೂಪುರೇಷೆ ಹೇಗಿರಬೇಕೆಂದೂ ನಿರ್ಧರಿಸುತ್ತಿರುತ್ತೇವೆ. ನಮ್ಮ ಕುಲದ ಸಾಮೂಹಿಕ ಅನುಭವದ ‘ಕಾಲ್ಪನಿಕ ವ್ಯಕ್ತಿತ್ವ’ವೊಂದನ್ನು ಸಾಧ್ಯವಾದಲ್ಲೆಲ್ಲ ಅದು ಹೇಗಿರಬೇಕೆಂಬ ರೂಪುರೇಷೆಯನ್ನು ಬಯಸುತ್ತೇವೆ, ಪಡೆಯುತ್ತೇವೆ ಹಾಗೂ ಉಳಿಸಿಕೊಳ್ಳಲು ಯತ್ನಿಸುತ್ತೇವೆ.

ಮುತ್ತು–ರಾಜ್ಕುಮಾರ್ ಬದುಕಿರುವವರೆಗೂ ಅಂತಹ ಒಂದು ಬೃಹತ್ ವ್ಯಕ್ತಿತ್ವವನ್ನು ಬಯಸಿದಾಗಲೆಲ್ಲ ಚಂದಗಾಣಿಸಿಕೊಂಡು ಮುದ ಪಡೆಯುತ್ತಿದ್ದೆವು. ಈಗ ರಾಜ್ ಕರ್ತೃ ಮುತ್ತುರಾಜ್ ಇಲ್ಲದಾದ ಮೇಲೆ ಹೇಗೆ ಅದನ್ನು ಉಳಿಸಿಕೊಂಡಿದ್ದೇವೆ ಎಂಬುದೇ ಒಂದು ಸಾಂಸ್ಕೃತಿಕ ಕುತೂಹಲ. ಅಮೃತಶಿಲೆಯಲ್ಲಿ ಮೂಡಿಬಂದ ರಾಜ್ ಭಾವಶಿಲ್ಪಗಳಲ್ಲಿ ತಲೆಗೂದಲು ಹಾಗೂ ಮೀಸೆಗೆ ಕಪ್ಪುಬಣ್ಣ ಬಳಿದಿದ್ದಿದೆ. ಇದು ಪಕ್ಕಾ ಟಪ್ಪಾಂಗುಚ್ಚಿ ಟೇಸ್ಟು. ಶಿವಕುಮಾರ್ ಎಂಬ ಶಿಲ್ಪಿ ಪಂಚಲೋಹದಲ್ಲಿ ಕೃಷ್ಣದೇವರಾಯನ ಅವತಾರದಲ್ಲಿ ಕ್ಲಾಸಿಕ್ ರಾಜ್ಕುಮಾರರನ್ನು ಹಲವೆಡೆ ನಿರೂಪಿಸಿದ್ದಿದೆ. ಆಟೋಗಳ ಹಿಂದೆ ಸಾಬಣ್ಣ ಬರೆದ, ಬೆನ್ನ ಮೇಲೆ ಪಾರಿವಾಳ ಹೊತ್ತ ‘ಕಸ್ತೂರಿ ನಿವಾಸ’ದ ಪ್ಲಾಸ್ಟಿಕ್ ಅನುಭವದ ರಾಜ್ ಇದ್ದಾರೆ.

ಅನಾಮಿಕರು ಅಣ್ಣಾವ್ರೊಂದಿಗೆ ತೆಗೆಸಿಕೊಂಡ ಗುಂಪು ಚಿತ್ರಗಳು ಡಿಜಿಟಲ್ ಅವತಾರದಲ್ಲಿ ಫೇಸ್ಬುಕ್ ತುಂಬ ರಾರಾಜಿಸುತ್ತಿವೆ. ಎಲ್ಲ ಕನ್ನಡ ಹಾಡುಗಳನ್ನು ಬದಿಗೆ ಸರಿಸಿ, ‘ಇಫ್ ಯು ಕಮ್ ಟುಡೆ’ ಎಂದು ಹಾಡುವ ಜೇಮ್ಸ್ ಬಾಂಡ್ ಅವತಾರದ ರಾಜ್ ಬಗ್ಗೆ ಯೂಟ್ಯೂಬ್‌ನ ತುಂಬ ಅಭಿಮಾನದ ಮಹಾಪೂರದೊಂದಿಗೆ, ವಿರೋಧದ ಸಿನಿಕ ವಿಶ್ಲೇಷಣೆಗಳೂ ಇವೆ. ‘ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು’ ಹಾಡಿಗೆ ಯಾಕೋ ಎರಡನೇ ಸ್ಥಾನವೇ ಗಟ್ಟಿಯಾದಂತೆ ಭ್ರಮೆಯಾಗುತ್ತಿದೆ.

ತಥಾಕಥಿತ ವಿದ್ವತ್‌ಪೂರ್ಣ ಅಧ್ಯಯನಗಳಲ್ಲಿ ಮುಗ್ಧಾಭಿಮಾನದ ಸರಳ ಹೊಗಳಿಕೆಯಲ್ಲಿ ರಾಜಕುಮಾರ ಮರಣೋತ್ತರವಾಗಿ ಮೂಡಿಬಂದಿದ್ದರೆ, ಅದರ ಹೊರಗಿನ ಜನಸಾಮಾನ್ಯರ ನಡುವಣ ಅಣ್ಣಾವ್ರು ಹೆಚ್ಚು ವೈವಿಧ್ಯಮಯವಾಗಿ, ವರ್ಣಮಯವಾಗಿ ನಮ್ಮ ನಡುವೆ, ನಮಗೆ ಬೇಕಾದಂತೆ ಬದಲಾಗುತ್ತ ಹೋಗುತ್ತಾರೆ. ತಮ್ಮ ಇರುವಿಕೆ ಹಾಗೂ ತೋರುವಿಕೆಯನ್ನು ಪುನಃ ಪುನಃ ನವೀಕರಿಸಿಕೊಳ್ಳುತ್ತಿರುವಂತೆ ಎನಿಸಿದರೂ, ರಿಮೋಟ್ ಮಾತ್ರ ನಮ್ಮದೇ ಆಗಿರುತ್ತದೆ. ಇವಿಷ್ಟೂ ರಾಜ್ ಅವರ ದೇಹಾಂತ್ಯದ ನಂತರ ‘ರಾಜ್ಕುಮಾರ್’ ಎಂಬ ಒಂದು ಕನ್ನಡದ ಸಾಂಸ್ಕೃತಿಕ ಪರಿಕಲ್ಪನೆಯ ಮೂರ್ತರೂಪಕ್ಕೆ ಒದಗಿದ ಸ್ಥಿತಿಗತಿ.

** *** **
‘ಬೈಪೋಲಾರ್ ಐಡೆಂಟಿಟೀಸ್’ ಎಂಬ ಕನ್ನಡ ಸಿನಿಮಾವನ್ನು ಕುರಿತಾದ ಇಂಗ್ಲಿಷ್ ಪುಸ್ತಕದಲ್ಲಿ ಲೇಖಕ ಎಂ.ಕೆ. ರಾಘವೇಂದ್ರ ಅಣ್ಣಾವ್ರು ‘ರಾಜಕುಮಾರ’ನಾಗಿ ನಮ್ಮ ನಡುವೆ ಉಳಿದುಕೊಂಡಿರುವ ಬಗ್ಗೆ ಸೂಕ್ಷ್ಮ ಹಾಗೂ ಅರ್ಥಪೂರ್ಣ ಹೋಲಿಕೆಯೊಂದನ್ನು ನೀಡಿದ್ದಾರೆ. ರಾಜ್ಕುಮಾರ್ ಮೈಸೂರು ಪ್ರಾಂತ್ಯದ ಬ್ರಾಹ್ಮಣರ ಹುಡುಗನಾಗಿಯೇ ಎಲ್ಲೆಡೆ, ಅಂದರೆ ಸಿನಿಮಾಗಳಲ್ಲಿ ಪ್ರಕಟಗೊಳ್ಳುವುದು ಎಂಬ ಅರ್ಥಕ್ಕೆ ಅತ್ಯಂತ ಹತ್ತಿರವಾಗಿ ಅವರು ಭಾವಿಸುತ್ತಾರೆ.

‘ಮುತ್ತುರಾಜ್ ಬ್ರಾಹ್ಮಣರಾಗಿ ಇದ್ದಿದ್ದಲ್ಲಿ ಕನ್ನಡ ಸಿನಿಮಾವೇ ವಿಭಿನ್ನವಾಗಿರುತ್ತಿತ್ತೇನೋ, ಅವರಿಗೆ ಸಿಕ್ಕ ಅಥವಾ ಸಿಗದೇ ಹೋದ ಮನ್ನಣೆಗಳು ವಿಭಿನ್ನವಾಗಿರುತ್ತಿದ್ದವೇನೋ’ ಎಂದು ಶಾಬ್ದಿಕ–ಇತಿಹಾಸಕಾರ ಬಿ.ಗಣಪತಿ ರೇಡಿಯೋದಲ್ಲಿ ನುಡಿದದ್ದಿದೆ. ಸತ್ಯ ಇವೆರಡರ ನಡುವೆ ಎಲ್ಲಿಯೋ, ಆದರೆ ಖಂಡಿತವಾಗಿಯೂ ತನ್ನ ‘ಎಳೆ’ಯನ್ನು ಉಳಿಸಿಕೊಳ್ಳುತ್ತಿದೆ. ಶೆಟ್ಟರಿಗೆ ಶೆಟ್ಟರ ಹುಡುಗನಂತೆ, ಗೌಡರಿಗೆ ಗೌಡಿಕೆ ಮಾಡುವಂತೆ ಭಾಸವಾಗುತ್ತಿದ್ದ ರಾಜ್ಕುಮಾರ, ಲಿಂಗಾಯಿತರಿಗೆ ಅಯ್ಯಂಗಾರಿಯಾಗಿ, ಶೂದ್ರನಿಗೆ ಮೇಲ್ಜಾತಿಯವನಾಗಿ ಎಂದೂ ಅನ್ನಿಸಿದ್ದಿಲ್ಲ.

ಅವರು ‘ನಮ್ಮ ಮನೆ’ಯವನೇ ಆಗಿಬಿಟ್ಟಿದ್ದರು ಎಂದು ರಾಘವೇಂದ್ರ ಅವರು ‘ರಾಜ್ಕುಮಾರ’ನ ಕುರಿತು ನೀಡಿರುವ ‘ಬ್ರಾಂಬ್ರ ಹುಡ್ಗ’ನ ಪರಿಕಲ್ಪನೆಯ ಸೂಚನೆ ಇದೇ ಇರಬಹುದೆ? ಇಲ್ಲದಿದ್ದಲ್ಲಿ ಅದೊಂದು ಮತಾಂತರದ ಆಶಯದ ಸೂಚನೆಯೇ ಹೌದು. ರಾಜಕುಮಾರನನ್ನು ಮುತ್ತುರಾಜನನ್ನಾಗಿ ಪರಿವರ್ತಿಸಿಬಿಡುವ, ಕುಲವೊಂದರ ಪರಿಕಲ್ಪನೆಯ ಪಾತ್ರವನ್ನು ಅದನ್ನು ವಹಿಸುತ್ತಿರುವ ಪಾತ್ರಧಾರಿಗೇ ಆರೋಪಿಸಿಬಿಡುವ ಮತಾಂತರವದು! ಯಾರೀ ರಾಜಕುಮಾರ? ಯಾವುದೇ ಒಂದು ಜಾತಿ, ವರ್ಗ, ಅಂತಸ್ತು, ರಾಜಕೀಯ ಒಲವುಗಳಿಗೆ ಸಿಕ್ಕಿಕೊಳ್ಳದ ಮುಖ ಅದಾಗಿತ್ತು, ಹಾಗೆ ಉಳಿದುಕೊಂಡಿದೆ ಕೂಡ.

ಬಹಳ ಹಿಂದೆಯೇ ಇದನ್ನರಿತಂತೆ, ‘ನಿನ್ನ ಮುಖ ಕಂಡ ಜನ ಹಿಗ್ಗಿ ನೂತನ’ ಎಂದು ಲೀಲಾವತಿ ಹಾಡುವ ಸಾಲನ್ನು ಬರೆದವರಿಗೆ ಇದು ತಿಳಿದಿತ್ತು ಎಂದು ಕಾಣುತ್ತದೆ. ಹೀರೋಗಳ ಮುಖಗಳನ್ನು ವರ್ಣಿಸುವುದು ಕನ್ನಡ ಸಿನಿಮಾದ ಹಾಡುಗಳ ಇತಿಹಾಸದಲ್ಲೇ ನಿಷಿದ್ಧವಾದ ಅಂಶವೆಂಬ ಹಿನ್ನೆಲೆಯಲ್ಲಿ ಈ ಹಾಡಿನ ಸಾಲಿನ ಹಿಂದಿನ ಒತ್ತಾಯವನ್ನು ಅರ್ಥೈಸಬೇಕಾಗುತ್ತದೆ. ಇದರರ್ಥ ಏನೆಂದರೆ, ರಾಜ್ಕುಮಾರ್ ನಮ್ಮನ್ನು ಯಾವುದೋ ಒಂದಷ್ಟು ರೀತಿಗಳಲ್ಲಿ ಪ್ರತಿನಿಧಿಸಿದರು ಎಂದಲ್ಲ.

ಬದಲಿಗೆ, ಭಾರತ ಸ್ವಾತಂತ್ರ್ಯಗೊಂಡ ದಶಕವೊಂದರಲ್ಲಿ ಚಲನಚಿತ್ರ ಮಾಧ್ಯಮದ ಮೂಲಕ, ನಮಗೆ ಬೇಕಾದಂತೆ ಬಾಗಿಸಿಕೊಳ್ಳಬಲ್ಲ ಮೇಣದಬೊಂಬೆಯಾಗಿ ದಕ್ಕಿ, ಕರ್ನಾಟಕದ ಸಮಾಜ, ಸಂಸ್ಕೃತಿಯೊಂದರ ಒಂದು ಆದರ್ಶಮಯ ಇರುವಿಕೆಯ ಮೂರ್ತರೂಪವೇ ರಾಜ್ಕುಮಾರ್. ಮೂರು ದಶಕಗಳ ಬಳಿಕವಷ್ಟೇ, ಈಗ ಇದನ್ನು ನಾವು ಕನ್ನಡಕ್ಕೆ ಸೀಮಿತಗೊಳಿಸಿಬಿಟ್ಟೆವೇ ಎಂಬ ಅನುಮಾನ ಪ್ರಸ್ತುತ ಕಾಡತೊಡಗಿರುವುದು ಸುಳ್ಳಲ್ಲ.   

** *** **
ರಾಜಕುಮಾರ್ ಏಳೆಂಟು ವಯಸ್ಸಿನವರಾಗಿದ್ದಾಗ ಜರ್ಮನ್ ಬರಹಗಾರ ಬೆಂಜಮಿನ್ ತಮ್ಮ ಲೇಖನವೊಂದರಲ್ಲಿ (1936)– ‘‘ಚಿತ್ರ/ದೃಶ್ಯದ ಮೂಲಕ ಅಸಲಿಯಾದ ಪರಿಕಲ್ಪನೆಯೊಂದನ್ನು ನಕಲು ಮಾಡುತ್ತಾ ಹೋದಷ್ಟೂ ಅಸಲಿ ‘ಪ್ರಭೆ’ ತನ್ನ ಪ್ರಖರತೆಯನ್ನು ಕಳೆದುಕೊಳ್ಳುತ್ತದೆ’’ ಎನ್ನುತ್ತಾರೆ. ಡಿಜಿಟಲ್ ಯುಗಕ್ಕೆ ಮುನ್ನ ಛಾಯಾಚಿತ್ರಗಳ ಸಿದ್ಧಾಂತವನ್ನಿರಿಸಿಕೊಂಡು ಹುಟ್ಟುಹಾಕಿದ ‘ಪುನರಾವರ್ತನೆಗೊಳ್ಳುವ ದೃಶ್ಯ’ಗಳ (ಅಂದರೆ ಸಿನಿಮಾ ಎಂದರ್ಥ) ಬಗೆಗಿನ ತತ್ವವಿದು. ಅಣ್ಣಾವ್ರ ಅಭಿಮಾನಿಗಳ ಭಾಷೆಯಲ್ಲಿ ಹೇಳುವುದಾದರೆ, ಹತ್ತಾರು ಸಲ ಅವರ ಸಿನಿಮಾ ನೋಡಿದರೆ ಅವರ ಹಾಗೂ ಅದರ ಪ್ರಭಾವ ಕಡಿಮೆಯಾಗುತ್ತದೆ ಎಂಬರ್ಥವಿದು. ಬೆಂಜಮಿನ್‌ನ ‘ಆರಾ’ ಅಥವಾ ಪ್ರಭೆಯನ್ನೇ ಮುರಿದದ್ದು ರಾಜ್ ಎಂಬ ಪರಿಕಲ್ಪನೆಯ ಸಾಧನೆ.

ಏಕೆಂದರೆ ಆಗೆಲ್ಲ ಯಾವುದೇ ನಾಯಕನ ಕನ್ನಡ ಸಿನಿಮಾ ಇರಲಿ, ಅದನ್ನು ನಾವು ನೋಡಿದ್ದಲ್ಲಿ, ಗೆಳೆಯರೊಂದಿಗೆ ಹೇಳುತ್ತಿದ್ದುದು, ‘ರಾಜ್ಕುಮಾರ್ ಪಿಚ್ಚರ್’ ನೋಡಿದೆ ಅಂತಲೇ! ಈ ಪ್ರಭೆಯಲ್ಲಿಯೂ ಒಳ್ಳೆಯ ಹಾಗೂ ಕೆಟ್ಟ ಪ್ರಭೆಗಳೆಂಬುದಿರುತ್ತವೆ. ಆದರೆ ರಾಜ್ ಪ್ರತಿಭೆಯು ಛಾಯಾಚಿತ್ರ ಮತ್ತು ಡಿಜಿಟಲ್ ಯುಗದ ನಡುವಿನ ಸ್ಥಿತ್ಯಂತರವಾಗಿ ವಸಾಹುತೋತ್ತರ ಪ್ರತಿಭೆಯಾಗಿ ಮೂಡಿಬಂತು. ಪ್ರತಿಕೃತಿಯೇ ಅಸಲಿಯಾಗುವ, ಸಿಮ್ಯುಲೇಷನ್ ಎಂದು ಕರೆವ ಸ್ಥಿತಿಯದು. ಮೇಲ್ವರ್ಗದವರಿಗೆ ಮೇಲುವರ್ಗದವರಾಗಿ, ಶೂದ್ರರಿಗೆ ಶೂದ್ರರಾಗಿ ರಾಜಕುಮಾರ ಗೋಚರಿಸುವ ಬಗೆಯನ್ನೂ ನಮ್ಮ ರೀತಿಯ ಸಿಮ್ಯುಲೇಷನ್ ಎನ್ನಬಹುದು.

ಈಗ ರಾಜ್ ಸಿನಿಮಾಗಳು ಬಿಡುಗಡೆ ಅಥವಾ ಮರುಬಿಡುಗಡೆಯಾಗುವ ರೂಢಿ ಇನ್ನೂ ಒಂದು ಸಂಪ್ರದಾಯವಾಗಿಲ್ಲ. ಆದರೂ ಆನ್‌ಲೈನಿನಲ್ಲಿ ಬೇಕಾದಾಗ, ಬೇಕಾದಂತೆ, ಬೇಕಾದಷ್ಟು ರಾಜ್ ಸಿನಿಮಾಗಳನ್ನು ನೋಡಬಹುದಾಗಿದೆ. ಇಷ್ಟಾದರೂ ಹೆಚ್ಚು ವೀಕ್ಷಕರಿರುವುದು ಮುತ್ತುರಾಜ್ ನಿಜಜೀವನದಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವ, ತನ್ನ ಮನದಾಳದ ಮಾತುಗಳನ್ನಾಡುತ್ತಿರುವ ವಿಡಿಯೋಗಳಿಗೇ ಎಂಬುದು ಅಷ್ಟೇನೂ ಅಚ್ಚರಿಯ ವಿಷಯವಲ್ಲ. ಮುತ್ತುರಾಜರ ಅಂತ್ಯದೊಂದಿಗೇ ಬೆಂಜಮಿನ್‌ನ ‘ಪುನರಾವರ್ತನೆಯ ಸಾಧ್ಯತೆ’ಯು ಐತಿಹಾಸಿಕವಾಗಿ ಕನ್ನಡ ನಾಡಿನಲ್ಲಿ ಅಂತ್ಯಗೊಂಡದ್ದು ಹೀಗೆ!

ಇಂದು ರಾಜಕುಮಾರ್ ಎಂದಿಗಿಂತಲೂ ಪ್ರಖರವಾಗಿ ಹೊಳೆಯಬೇಕಾಗಿರುವುದಕ್ಕೆ ಕಾರಣ, ಅವರ ನಂತರದ ಅವರದೇ ರಂಗದ ಜನಪ್ರಿಯ ಆಯಾಮದ ಇಳಿಜಾರಿರಬಹುದು, ಅಥವಾ ಅಂತಹ ನೆಹರೂವಿಯನ್ ತಾರಾಮೌಲ್ಯದ ದಿನಗಳ ಅಂತ್ಯವೂ ಇರಬಹುದು. ಇನ್ನು ತಾರೆಗಳಿಗೆ ತಾಣವಿಲ್ಲದ, ರಾತ್ರಿಯೂ ನಿದ್ರಿಸದ ‘ಇನ್ಸೋಮ್ನಿಯ’ದಿಂದ ನರಳುವ ಜನರ ಯುಗವಿದು. ಐತಿಹಾಸಿಕವಾಗಿ ನಾವು ಮರೆಯಲು ಇಚ್ಛಿಸುವವರಿಗಿಂತಲೂ ಸ್ಮರಿಸಲಿಚ್ಛಿಸುವವರ ಪಟ್ಟಿ ಯಾವಾಗಲೂ ಚಿಕ್ಕದೇ.

ಅದರಲ್ಲಿ ವರ್ಗ ಪಂಗಡಗಳ ಚಿತಾವಣೆಯ ಸುಪರ್ದಿನೊಳಗೆ ಸಿಲುಕಿ ಅರ್ಧಕ್ಕಿಂತಲೂ ಹೆಚ್ಚು ಎಲ್ಲ ರಂಗದ (ಧರ್ಮ, ರಾಜಕಾರಣ ಇತ್ಯಾದಿ) ತಾರೆಯರು ಹುದುಗಿಹೋಗುತ್ತಾರೆ. ಗಾಂಧಿ ತಾತ, ಗಣಪರಂತಹ ಕೆಲವರು ಮಾತ್ರ ವ್ಯಂಗ್ಯಚಿತ್ರಗಳಾಗಲೂ ಯೋಗ್ಯರಾಗುವ ಪ್ರಜಾಪ್ರಭುತ್ವವಾದಿ ಉತ್ತುಂಗ ಸ್ಥಿತಿ ತಲುಪಿಬಿಡುತ್ತಾರೆ. ರಾಜ್ ಈ ಶ್ರೇಣೀಕರಣದಲ್ಲಿ ಈಗ ಎಲ್ಲಿ ನಿಲ್ಲುತ್ತಾರೆ? ಒಂದು ಉದಾಹರಣೆ ಗಮನಿಸಿ: ‘ಬಂದೂಕು ಹಿಡಿಯಲೂ ಬರುವುದಿಲ್ಲ ನಿಮ್ಮ ಗುರೂಗೆ’ ಎಂದಿದ್ದ ಸೇಠು ಸಹಪಾಠಿ ಹುಡುಗನನ್ನು ಎಲ್ಲರೂ ಒಟ್ಟಾಗಿ ದೂಡಿಕೊಂಡೇ, ನಮ್ಮಗಳ ಖರ್ಚಿನಲ್ಲೇ ಕಾವೇರಿ ಥಿಯೇಟರಿಗೆ ಕರೆದೊಯ್ದಿದ್ದೆವು.

‘ಶಂಕರ್‌ಗುರು’ ಸಿನಿಮಾ ತೋರಿಸಲಿಕ್ಕೆ, 1979–80ರ ಸುಮಾರಿಗೆ. ಇಡಿಯ ಸಿನಿಮಾದ ತಿರುವು ಇರುವುದೇ ಅಣ್ಣಾವ್ರು ಟ್ರಿಗರ್ ಮುಟ್ಟದೆ ಪಿಸ್ತೂಲು ಹಿಡಿದಿರುವ ಚಿತ್ರವಿರುವ ಪೋಸ್ಟರಿನಲ್ಲಿ ಎಂದು ಆತನಿಗೆ ಮನವರಿಕೆ ಮಾಡಬೇಕಿತ್ತು ನಮಗೆ. ಬಿಟ್ಟಿ ಸಿನಿಮಾ ನೋಡಲು ಸಿಕ್ಕಿದ್ದಕ್ಕೋ ಏನೋ ಆತನೂ ಖುಷಿಯಾಗಿಯೇ ಒಪ್ಪಿಕೊಂಡಿದ್ದ. ‘ಉಲ್ಲಾಸ್’ ಥಿಯೇಟರಿನಲ್ಲಿ ತಮಿಳು ಸಿನಿಮಾದ ರೀಲು ಬರದಿದ್ದರಿಂದ, ಮಧ್ಯಂತರದ ನಂತರ ‘ಕೆರಳಿದ ಸಿಂಹ’ ಸಿನಿಮಾದ ’ತಿಳಿಯದೇ ನನಗೇ ತಿಳಿಯದೇ’ ಹಾಡು ಹಾಕಿ ಸಿಳ್ಳೆಗಿಟ್ಟಿಸಿದಾಗ, ಕನ್ನಡ–ತಮಿಳು ಎಂದು ಚಾಲ್ತಿಯಲ್ಲಿದ್ದ ವೈರ ಅಂದಿನ ಮಟ್ಟಿಗೆ ತಿಳಿಗೊಂಡಿತ್ತು.

ಇಂತಹ ಸಣ್ಣ ಸಣ್ಣ ಖುಷಿಗಳ ಸಾವಿರಾರು ಗೂಡುಗಳ ಗುಚ್ಛವೊಂದನ್ನು ನಾಲ್ಕಾರು ತಲೆಮಾರುಗಳಿಗೆ ಕಟ್ಟಿಕೊಟ್ಟ ನಾಯಕ ರಾಜಕುಮಾರ್ ನವವಸಾಹತು ಶಾಹಿ ಐ.ಟಿ – ಬಿ.ಟಿ, ಕಾರ್ಪೊರೇಟ್ ಜಗತ್ತು, ಡಬ್ಬಿಂಗ್ ಮುಂತಾದ ಇಪ್ಪತ್ತೊಂದನೇ ಶತಮಾನಕ್ಕೆ ಹೇಗೆ ಪ್ರತಿಕ್ರಿಯಿಸುತ್ತಿದ್ದರೋ ಎಂಬ ಕುತೂಹಲ ಹಾಗೆಯೇ ನಮ್ಮಲ್ಲಿ ಉಳಿದುಕೊಳ್ಳಲಿದೆ. ಏಕೆಂದರೆ ರಾಜಕುಮಾರರಿರಲಿ, ಆ ಪಾತ್ರವನ್ನಾಡಿಸುತ್ತಿದ್ದ ಎಸ್.ಪಿ. ಮುತ್ತುರಾಜ್ ಇರಲಿ ಒಂದು ಕೈ ಮೇಲೆತ್ತಿದ್ದಲ್ಲಿ ಇಡಿಯ ನಗರವೇ ಉಸಿರು ಬಿಗಿ ಹಿಡಿಯುತ್ತಿತ್ತು. ಅವರ ಕೊನೆಯ ದಿನದವರೆಗೂ ಈ ಮಾತು ಸತ್ಯವೇ ಆಗಿತ್ತು. ಇಂತಹ ರಾಜಕುಮಾರನನ್ನು ಭವಿಷ್ಯವಾದಿ ನೆಲೆಯಲ್ಲಿರಿಸಿ, ಕ್ಲೀಷೆಗಳಿಂದ ಉಳಿಸುವ, ತನ್ಮೂಲಕ ಅವರ ಜೀವಂತಿಕೆಯನ್ನು ಪುನರ್ ಸಂಪಾದಿಸುವ ಶೈಕ್ಷಣಿಕ ಸಂರಕ್ಷಣೆ ಈಗ ಎಂದಿಗಿಂತಲೂ ತುರ್ತಿನದಾಗಿದೆ.

** *** **
ಒಂದು ಭೌಗೋಳಿಕ ಜಾಗಕ್ಕೆ ನಾವು ಸೇರಿದ್ದೇವೆಂದು ಜನಸಾಮಾನ್ಯರು ಭಾವಿಸಲು ಅವರಿಗೊಬ್ಬ ನಾಯಕ ಬೇಕು. ನಾಯಕಿ ಏನಿದ್ದರೂ ಇನ್ನೂ ಆ ನಾಯಕನ ನೆರಳೇ. ಆತ ಸೋಲಬಾರದು, ಆದ್ದರಿಂದ ರಾಜಕೀಯ ಸೇರುವಂತಿಲ್ಲ. ಆತ ವಾಚಾಳಿಯಾಗಿರಬೇಕು, ನಮ್ಮ ಭಾಷೆಯನ್ನು ನಮ್ಮೆಲ್ಲರಿಗಿಂತಲೂ ಆಪ್ಯಾಯಮಾನವಾಗುವಂತೆ ಮಾತನಾಡಬೇಕು.

ಬಡವರಿಗೆ ಸ್ವಲ್ಪ ಶ್ರೀಮಂತನೂ, ಸಿರಿವಂತರಿಗೆ ಸ್ವಲ್ಪ ಬಡವರ ಪರವೂ ಆಗಿರಬೇಕು. ನಮ್ಮ ಹತ್ತಿರವಿದ್ದಂತಿದ್ದೂ ತುಂಬ ಸಲಿಗೆ ಸದರವೂ ಇರಬಾರದು. ಹೀಗೆ ಕರುನಾಡಿನ ನೂರಾರು ಬೇಡಿಕೆಗಳನ್ನು ಅರ್ಧ ಶತಮಾನದ ಕಾಲ ನಿರಂತರವಾಗಿ ಆರೋಪಿಸಲು ಒಂದು ವ್ಯಕ್ತಿತ್ವದ ಪರಿಕಲ್ಪನೆ (ಪರ್ಸಾನಿಫಿಕೇಷನ್) ರಾಜ್ಕುಮಾರ್ ರೂಪದಲ್ಲಿ ನಮಗೆ ದಕ್ಕಿ, ಅಹ್ಲಾದ ನೀಡಿತ್ತು.

ನಮಗಷ್ಟು ಬದುಕನ್ನು ಚೇತೋಹಾರಿಯಾಗಿಸಿದ ಈ ಪರಿಕಲ್ಪನೆಯನ್ನು ನೈಜ ವ್ಯಕ್ತಿತ್ವಗಳನ್ನಾಗಿ ಭಾವಿಸುವ ಬದಲು, ಅದರ ಸ್ಮೃತಿಯನ್ನು ಕ್ಲೀಷೆಗಳು ಹಾಗೂ ಕೇವಲ ಹೊಗಳಿಕೆಯ ಪುನರಾವರ್ತನೆಗಳೆಂಬ ಅವಘಡಗಳಿಂದ ರಕ್ಷಿಸಬೇಕಿದೆ. ಅವುಗಳಿಗೆ ಅರ್ಥಪೂರ್ಣ ಸ್ಮಾರಕ ಅಥವಾ ಸ್ಮಾರಕವು ಈಗಾಗಲೇ ಇದ್ದಲ್ಲಿ ಅವುಗಳ ಪ್ರಸ್ತುತಿಯನ್ನು ಹೆಚ್ಚಿಸಬೇಕಿದೆ. ಈ ಎರಡೂ ಕೆಲಸವು ಈಗಲೇ ಸರ್ವಸಮ್ಮತವಾಗಿ ಆಗಲೂ ಬೇಕಿದೆ, ಪಕ್ಕಾ ರಾಜ್ಕುಮಾರರ ಸಿನಿಮಾಗಳ ಚೇತೋಹಾರಿ ಶೈಲಿಯಲ್ಲೇ.

ಲೇಖಕರು ಕಲಾ ಇತಿಹಾಸಕಾರ, ವಿಮರ್ಶಕ ಹಾಗೂ ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT