ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಜಾಂಬೊರೇಟ್‌

Last Updated 26 ಜನವರಿ 2015, 19:30 IST
ಅಕ್ಷರ ಗಾತ್ರ

ರಾಜ್ಯದ 33 ಜಿಲ್ಲೆಗಳು, ನಾಲ್ಕೂವರೆ ಸಾವಿರ ಪುಟಾಣಿಗಳು, ಬೆಳಗಿನ ಕೊರೆವ ಚಳಿ ಕಳೆದು ಸೂರ್ಯ ನೆತ್ತಿಯ ಮೇಲೇರಿ ಬಿಸಿಲಿನ ತಾಪ ಹೆಚ್ಚಿಸಿದರೂ ಅದಾವುದನ್ನೂ ಲೆಕ್ಕಿಸದೇ ಮೈನವಿರೇಳಿಸುವಂತೆ ನೂರಾರು ಸಾಹಸ ಕ್ರೀಡೆಯಲ್ಲಿ ತೊಡಗಿಸಿಕೊಂಡ ಸ್ಪರ್ಧಿಗಳು, ಪ್ರತಿ ಜಿಲ್ಲೆಯ ವೈವಿಧ್ಯಮಯ ಸಾಂಸ್ಕೃತಿಕ– ಜನಪದ ಆಚರಣೆ, ಸಾಂಪ್ರದಾಯಿಕ ಉಡುಗೆ– ತೊಡುಗೆಗಳ ಬಿನ್ನಾಣ, ನೂರಾರು ಭಿನ್ನ ಆಹಾರ...

ಐದು ದಿನಗಳ ಕಾಲ ಹೀಗೆ ವಿಭಿನ್ನ ಲೋಕ ಸೃಷ್ಟಿಯಾಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಡಾ. ಆನಿಬೆಸೆಂಟ್ ಪಾರ್ಕ್‌ನಲ್ಲಿ. 120 ಎಕರೆಗಳಷ್ಟು ವಿಶಾಲವಾಗಿರುವ ಈ ಮೈದಾನದಲ್ಲಿ ನಡೆದಿತ್ತು ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ನ 27ನೇ ‘ಜಾಂಬೊರೇಟ್‌’. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ಅಪಾರ ಸೇವೆ ಸಲ್ಲಿಸಿರುವ ಕೊಂಡಜ್ಜಿ ಬಸಪ್ಪನವರ ಜನ್ಮಶತಮಾನೋತ್ಸವದ ನಿಮಿತ್ತ ಇಲ್ಲಿ ಈ ಕ್ರೀಡಾ ಕಾರ್ಯಕ್ರಮ ನಡೆಸಲಾಗಿತ್ತು.

ನಿಬ್ಬೆರಗಾಗಿಸುವ ಪಂದ್ಯಾಟಗಳಲ್ಲಿ ಹಗಲು ಕರಗುತ್ತ ಕತ್ತಲು ಆವರಿಸಿದಂತೆ ಮೈದಾನದ ಇನ್ನೊಂದು ಕಡೆ ಇರುವ ನೂರಾರು ಟೆಂಟ್‌ಗಳಲ್ಲಿ ವಿದ್ಯುದ್ದೀಪಗಳ ಝಗಮಗ. ಪ್ರತಿಯೊಂದು ಟೆಂಟ್‌ಗಳಿಂದ ಒಂದೊಂದು ತೆರನಾದ ಆಹಾರಗಳ ಘಮಲು! ಒಂದೊಂದು ಜಿಲ್ಲೆಯ ವಿದ್ಯಾರ್ಥಿಗಳು ತಂಗಲು ಪ್ರತ್ಯೇಕ ಟೆಂಟ್‌ಗಳು. ಅವರ ಭಾಗದ ಆಹಾರ ತಯಾರಿಕೆಗೆ ಪ್ರತ್ಯೇಕ ಅಡುಗೆಕೋಣೆ. ಸಂಜೆಯಾವರಿಸುತ್ತಲೇ ಟೆಂಟ್‌ ಇರುವ ಭಾಗ ವಿಭಿನ್ನ ಲೋಕ ಸೃಷ್ಟಿಯಾದಂತೆ ಕಂಡುಬಂತು.

ಮಾರನೆಯ ದಿನ ಮತ್ತದೇ ಕಸರತ್ತು. ನೆರೆ ಬಂದಾಗ ಏನು ಮಾಡಬೇಕು, ಸಮುದ್ರವನ್ನು ದಾಟಿ ಬರುವ ಬಗೆ ಹೇಗೆ, ಬೆಂಕಿ ಆಕಸ್ಮಿಕವಾದಾಗ ಹೇಗೆ ತಪ್ಪಿಸಿಕೊಳ್ಳಬೇಕು, ಹಗ್ಗದ ಮೂಲಕ ಕಟ್ಟಡಗಳಿಂದ ಹೊರಬರುವ ಬಗೆ ಹೇಗೆ? ಭೂಕಂಪವಾದರೆ ಬಚಾವಾಗುವುದು ಹೇಗೆ ಎಂಬಿತ್ಯಾದಿ ಪ್ರಾತ್ಯಕ್ಷಿಕೆಗಳ ಜೊತೆಗೆ ಅಪಾಯಕಾರಿ ಎನ್ನಬಹುದಾದ ವಿವಿಧ ಸಾಹಸಕ್ರೀಡೆಗಳನ್ನು ಲೀಲಾಜಾಲವಾಗಿ ಮಕ್ಕಳು ಪ್ರೇಕ್ಷಕರ ಎದುರಿಗಿಟ್ಟರು.  ಹುಡುಗರಿಗಿಂತ ತಾವೇನೂ ಕಮ್ಮಿ ಇಲ್ಲ ಎಂಬುದನ್ನು ವಿದ್ಯಾರ್ಥಿನಿಯರೂ ಸಾಬೀತುಪಡಿಸಿದರು.

ಪ್ರತಿಬಾರಿಯೂ ಒಂದೊಂದು ಪರಿಕಲ್ಪನೆಯೊಂದಿಗೆ ಈ ಕಾರ್ಯಕ್ರಮ ನಡೆಯುತ್ತಿದ್ದು, ಈ ಬಾರಿಯ ವಸ್ತು ವಿಷಯ ‘ನೆಲ ಜಲ ರಕ್ಷಣೆ

ನಮ್ಮ ಹೊಣೆ’. ಆದ್ದರಿಂದ ಈ ವಿಷಯದ ಕುರಿತಾಗಿಯೂ ಸಾಕಷ್ಟು ಮಾಹಿತಿಗಳನ್ನು ಅಲ್ಲಿ ನೀಡಲಾಯಿತು. ಜೀವಭಯ ಬಿಟ್ಟು ಸಾಹಸ ಕ್ರೀಡೆಯಲ್ಲಿ ಮಕ್ಕಳು ಪಾಲ್ಗೊಳ್ಳುವ ಹಿಂದೆಯೂ ಒಂದು ಉದ್ದೇಶವಿದೆ. ಅದೇ ‘ಜಾಂಬೊರೇಟ್‌’ ಪ್ರಶಸ್ತಿ ಪತ್ರ.

ಹೌದು. ಐದು ದಿನಗಳ ಕಾಲ ನಡೆಯುವ ಜಾಂಬೊರೇಟ್‌ನ ಸ್ಪರ್ಧೆಗಳಲ್ಲಿ ಪ್ರತಿಯೊಬ್ಬರೂ ಹತ್ತು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಅಲ್ಲಿ ಉತ್ತಮ ಅಂಕಗಳನ್ನು ಪಡೆದರೆ ಮಾತ್ರ ‘ಜಾಂಬೊರೇಟ್‌’ ಪ್ರಶಸ್ತಿ ಪತ್ರ ಅವರಿಗೆ ದಕ್ಕುತ್ತದೆ. ಇದಕ್ಕಾಗಿಯೇ ಈ ಎಲ್ಲ ಕಸರತ್ತು. ಅಷ್ಟೆಲ್ಲ ಪೂರ್ವಭಾವಿ ತರಬೇತು. ತಾವು ಉಳಿದುಕೊಂಡಿರುವ ಟೆಂಟ್‌ಗಳ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಸಹ ಸ್ಪರ್ಧೆಯ ಒಂದು ಭಾಗವಾಗಿದ್ದರಿಂದ ಅಲ್ಲಿ ಗಲೀಜಿಗೆ ಆಸ್ಪದವೇ ಇರಲಿಲ್ಲ.

ಸ್ಕೌಟ್ಸ್‌ ಮತ್ತು ಗೈಡ್ಸ್‌ ಉದ್ದೇಶ
ಬಹುಸಂಸ್ಕೃತಿಯಲ್ಲೂ ಏಕತೆಯಿಂದ ಬದುಕುವ ಕಲೆ, ಸರ್ವಧರ್ಮ ಪ್ರಾರ್ಥನೆ, ದೇಹ ಮತ್ತು ಪರಿಸರ ಸ್ವಚ್ಛತೆಯನ್ನು ವಿದ್ಯಾರ್ಥಿಗಳಿಗೆ ಕಲಿಸುವ, ಶಾಲಾ ಪಠ್ಯದ ಆಚೆಗೂ ಬದುಕುವ ಕೌಶ್ಯಲದ ನಾನಾ ವಿಧಾನಗಳನ್ನು ಕಲಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಗಳೂ ಅಗತ್ಯವಿವೆ ಎನ್ನುವ ಉದ್ದೇಶಗಳನ್ನು ಹೊಂದಿರುವ ರಾಷ್ಟ್ರೀಯ ಕೆಡೆಟ್‌ ಪಡೆ (ಎನ್‌ಸಿಸಿ)  ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ಹಿಂದೆಲ್ಲ ಶಾಲಾ, ಕಾಲೇಜುಗಳಲ್ಲಿ ಅಧ್ಯಯನದ ಒಂದು ಭಾಗವಾಗಿತ್ತು.

ಆದರೆ ಇಂದು ಬಹುತೇಕ ಶಾಲೆಗಳಲ್ಲಿ ಇದು ಕಾಣೆಯಾಗಿದೆ. ಈ ಉದ್ದೇಶವನ್ನು ಪೂರೈಸುತ್ತಿದೆ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌. ‘ಹೀಗೇ ಮಾಡಬೇಕು’ ಎಂದು ಎನ್‌ಸಿಸಿ ಆಜ್ಞೆ ಮಾಡಿದರೆ ‘ಹೀಗೆ ಮಾಡಿದರೆ ನಿನಗೂ, ಸಮಾಜಕ್ಕೂ ಒಳಿತಾಗಲಿದೆ’ ಎನ್ನುವುದನ್ನು ಸ್ಕೌಟ್ಸ್‌ ಮತ್ತು ಗೈಡ್ಸ್‌ ಕಲಿಸುತ್ತದೆ. ಇದರಿಂದ ಸಾಮಾಜಿಕ ಸೇವಾ ಮನೋಭಾವ, ಶಾಂತಿ, ಸಹಬಾಳ್ವೆ ಬೆಳೆಯಲು ಸಹಕಾರಿಯಾಗಲಿದೆ ಎನ್ನುವುದು ಅದರ ನಿಲುವು.

ಇದರ ತರಬೇತಿಗೆ 5ನೇ ತರಗತಿಯಿಂದ ಕಾಲೇಜು ಹಂತದವರೆಗಿನ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆವರೆಗಿನ ವಿದ್ಯಾರ್ಥಿಗಳನ್ನು ಸ್ಕೌಟ್ಸ್‌ ಮತ್ತು ಗೈಡ್ಸ್‌, ಕಾಲೇಜು ಹಂತದ ವಿದ್ಯಾರ್ಥಿಗಳನ್ನು ‘ರೋವರ್ಸ್‌’ ಮತ್ತು ‘ರೇಂಜರ್ಸ್‌’ ಎಂದು ಕರೆಯಲಾಗುತ್ತದೆ. ರಾಜ್ಯ ಮಟ್ಟದ ಜಾಂಬೊರೇಟ್‌ಗೆ ಪ್ರತಿ ಜಿಲ್ಲೆಯಿಂದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಎರಡು ವಿಭಾಗದಿಂದ 135 ಜನ ಭಾಗವಹಿಸುತ್ತಾರೆ. 

ಕೊಂಡಜ್ಜಿ ಬಸಪ್ಪನವರ ಬಗ್ಗೆ...
ಕೊಂಡಜ್ಜಿ ಬಸಪ್ಪನವರು ದಾವಣಗೆರೆ ಜಿಲ್ಲೆಯವರು. ಸ್ವಾತಂತ್ರ್ಯ ಹೋರಾಟಗಾರರಾಗಿ, ನಂತರ ಶಾಸಕರಾಗಿ, ಸಚಿವರಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಅವರು ಸಲ್ಲಿಸಿರುವ ಸೇವೆ ಅಪಾರ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ನಡೆದ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರದಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದರು. ಕರ್ನಾಟಕ ಮತ್ತು ಭಾರತದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಹೆಸರು ಗಳಿಸಲು  ಇವರ ಸೇವೆ ಅಮೋಘ. 

ಈ ಕಾರಣದಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳೆದುಬಂದಿರುವ ಇತಿಹಾಸದ ಜೊತೆ ಕೊಂಡಜ್ಜಿ ಬಸಪ್ಪ ಅವರ ಜೀವನ ಹಾಗೂ ಅದನ್ನು ಪರಿಚಯಿಸುವ ಛಾಯಾಚಿತ್ರ ಎಲ್ಲರ ಆಕರ್ಷಣೆಯಾಗಿತ್ತು.

ಬೆಸೆಂಟ್‌ಪಾರ್ಕ್‌ ವಿಶೇಷತೆ
ಐದು ದಿನಗಳ ಕಾಲ ಕ್ರೀಡಾ ಜಾತ್ರೆಯನ್ನೇ ಸೃಷ್ಟಿಸಿದ 120 ಎಕರೆಯ ಬೆಸೆಂಟ್‌ಪಾರ್ಕ್‌ ಕುರಿತು ಒಂದಿಷ್ಟು ಇಲ್ಲಿ ಹೇಳಲೇಬೇಕು. ಇಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರವನ್ನು 1936ರಲ್ಲಿ ಸ್ಥಾಪಿಸಲಾಗಿದೆ. ಈ ಪ್ರದೇಶದಲ್ಲಿ ಕಠೀರವ ಭವನ, ಸಿದ್ದವನಹಳ್ಳಿ ನಿಜಲಿಂಗಪ್ಪ ಸ್ವರ್ಣಮಹೋತ್ಸವ ಸಭಾಂಗಣ, ಬೇಡನ್‌ ಪೊವೆಲ್ ಸಮುಚ್ಚಯ ಮತ್ತು ಪ್ರೊ.ಪಿ.ಶಿವಶಂಕರ್‌ ಗ್ರಂಥಾಲಯ, ಜೆ.ಬಿ.ಮಲ್ಲಾರಾಧ್ಯ ಬಯಲು ರಂಗಮಂಟಪ, ಗಾಂಧಿ ಅತಿಥಿ ಗೃಹ, ನಕ್ಷತ್ರಗಳ ವೀಕ್ಷಣೆಯ ಗೋಪುರ, ಕೊಂಡಜ್ಜಿ ಬಸಪ್ಪ ಭವನ,  ವಿಶಾಲ ಆಟದ ಮೈದಾನ, ನೂರಾರು ಬಗೆಯ ಗಿಡ ಮರಗಳಿವೆ. ಆನಿಬೆಸೆಂಟ್ ಪಾರ್ಕ್‌ನಲ್ಲಿ ಪ್ರತಿ ವರ್ಷ ರಾಜ್ಯ ಮತ್ತು ರಾಷ್ಟ್ರಮಟ್ಟದ ಸಮಾವೇಶಗಳು, ಎನ್‌ಸಿಸಿ ಶಿಬಿರಗಳು ನಡೆಯುತ್ತವೆ. ದೇಶ ವಿದೇಶಗಳ ಗಣ್ಯರು ಇಲ್ಲಿ ನಡೆಯುವ ಶಿಬಿರಗಳು ಹಾಗೂ ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT