ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಜೀವನವೇ ನಟನೆಯ ತಯಾರಿ

Last Updated 19 ಮೇ 2016, 19:32 IST
ಅಕ್ಷರ ಗಾತ್ರ

ಪ್ರತಿಭಾವಂತ ನಟಿ ನಿವೇದಿತಾ ದೊರೆತ ಅವಕಾಶಗಳಲ್ಲಿ ‘ತಮ್ಮತನ’ ಅಭಿವ್ಯಕ್ತಿಸಿರುವ ವಿಶಿಷ್ಟ ನಟಿ. ‘ಪರಾಗಸ್ಪರ್ಶ’ ಕಿರುಚಿತ್ರದಲ್ಲಿ ನಟಿಸುವ ಮೂಲಕ ಕಲಾವಿದೆಯಾಗಿ ಮತ್ತೊಂದು ಮಜಲಿಗೆ ಹೊರಳಿಕೊಂಡಿರುವ ಅವರು, ‘ಚಂದನವನ’ ಪುರವಣಿಗೆ ನೀಡಿದ ಸಂದರ್ಶನ
ಇಲ್ಲಿದೆ.

*‘ಪರಾಗಸ್ಪರ್ಶ’ ಕಿರುಚಿತ್ರದಿಂದ ಮತ್ತೆ ಸಿನಿಮಾ ಅಂಗಳಕ್ಕೆ ಬಂದಾಯ್ತು. ಈ ಕಿರುಚಿತ್ರಕ್ಕೆ ನಿಮ್ಮನ್ನು ಸೆಳೆವಂಥ ಗುಣವೇನಿತ್ತು?
ಇದೊಂದು ವಸ್ತು ಆಧಾರಿತ ಕಿರುಚಿತ್ರ. ಬಾಡಿಗೆ ತಾಯ್ತನ ಅದರ ತಿರುಳು. ಕಿರುಚಿತ್ರವಾದ ಕಾರಣ ನಾನು ನಟಿಸುತ್ತೇನೋ ಇಲ್ಲವೋ ಎಂಬ ಅನುಮಾನದಿಂದಲೇ ಚಿತ್ರತಂಡ ನನಗೆ ಕರೆ ಮಾಡಿತು. ಕಥೆ ಕೇಳಿದೆ. ಒಳ್ಳೆಯ ವಸ್ತು ಆದ ಕಾರಣ ನಾನು ಕಿರುಚಿತ್ರದ ಭಾಗವಾಗುವ ಮನಸು ಮಾಡಿದೆ.

ನನ್ನದು ಹೂ ಮಾರುವವಳ ಪಾತ್ರ. ಗಂಡ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಹಣದ ಅಗತ್ಯಕ್ಕಾಗಿ ಬಾಡಿಗೆ ತಾಯ್ತನದ ಮೊರೆಹೋಗುತ್ತಾಳೆ. ಸಾಮಾನ್ಯವಾಗಿ ಕಿರುಚಿತ್ರ ಮಾಡುವವರು ಸ್ಕ್ರಿಪ್ಟ್ ಕೊಡುವುದಿಲ್ಲ. ಆದರೆ ಇವರು ಕೊಟ್ಟಿದ್ದರು. ನಾನೂ ಒಂದಷ್ಟು ಅಧ್ಯಯನ ನಡೆಸಿದೆ.

*ನಿಮ್ಮ ಅಧ್ಯಯನಕ್ಕೆ ದಕ್ಕಿದ ಸಂಗತಿಗಳೇನು?
ನಾನು ಕಂಡುಕೊಂಡಂತೆ– ವಿವಾಹವಾಗದೇ ಒಂಟಿಯಾಗಿಯೇ ಮಗುವನ್ನು ಬಯಸುವವರು ಹಾಗೂ ಸಲಿಂಗಿಗಳು ಬಾಡಿಗೆ ತಾಯಿಯರ ಮೊರೆ ಹೋಗುತ್ತಾರೆ. ಮದುವೆ ಆದವರಾರೂ ಇಷ್ಟಪಟ್ಟು ಬಾಡಿಗೆ ತಾಯಿಯನ್ನು ಹುಡುಕುವುದಿಲ್ಲ. ತಮಗೆ ಮಗು ಆಗುವುದಿಲ್ಲ ಎಂದಾಗ ಅದು ಅವರ ಅಂತಿಮ ಆಯ್ಕೆಯಾಗಿರುತ್ತದೆ. ದತ್ತು ತೆಗೆದುಕೊಳ್ಳುವ ಕ್ರಮ ಸುದೀರ್ಘವಾದದ್ದು, ಸುಲಭವಲ್ಲ. ಎಷ್ಟೋ ಜನರಿಗೆ ಈ ಆಯ್ಕೆ ಕಷ್ಟವಾಗುತ್ತದೆ.

ಆಗ ವಿಧಿ ಇಲ್ಲದೇ ಬಾಡಿಗೆ ತಾಯಿಯರ ಮೊರೆ ಹೋಗುತ್ತಾರೆ. ಹಾಗೆಯೇ, ಬಾಡಿಗೆ ತಾಯಿ ಆಗಲು ಒಪ್ಪುವವಳಿಗೂ ಅದು ಕೊನೆಯ ಆಯ್ಕೆಯೇ ಆಗಿರುತ್ತದೆ. ಸದ್ಯ ಇದು ದೊಡ್ಡ ಉದ್ಯಮವಾಗಿ ಬೆಳೆದಿದೆ. ಆದರೆ ಅದನ್ನು ಸಮರ್ಪಕವಾಗಿ ನಿಯಂತ್ರಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಸಹಜವಾಗಿಯೇ ತಪ್ಪುಗಳು ನಡೀತಾನೇ ಇವೆ.

*ನಟನೆಯಿಂದ ದೂರವಿದ್ದ ಕಾರಣವೇನು?
ಮುಖ್ಯವಾಗಿ ನನಗೆ ಇಷ್ಟವಾಗುವಂಥ ಅವಕಾಶ ಬಂದಿಲ್ಲ. ತುಂಬಾ ಜನ ಚಿತ್ರಕಥೆ ಕೊಡುವುದಿಲ್ಲ. ಸ್ಕ್ರಿಪ್ಟ್ ಕೊಡದಿದ್ದರೆ ಸಿನಿಮಾ ಮಾಡುವುದನ್ನು ನಾನು ಬಿಟ್ಟುಬಿಟ್ಟಿದ್ದೇನೆ. ಇಂಥದ್ದೇ ಪಾತ್ರವನ್ನೇ ಮಾಡಬೇಕು ಎಂದೇನೂ ಅಂದುಕೊಂಡಿಲ್ಲ. ಯಾವತ್ತೂ ಆ ರೀತಿ ಬದುಕನ್ನು ಪ್ಲಾನ್ ಮಾಡಿದವಳೂ ಅಲ್ಲ. ಆ ದಿನಕ್ಕೆ ನನಗೆ ಏನು ಇಷ್ಟ ಆಗುತ್ತೋ ಅದನ್ನು ಮಾಡುತ್ತೀನಿ.

ನಟಿಯಾಗಿ, ಮುಂದೆಯೂ ಕಿರುಚಿತ್ರಗಳ ಅವಕಾಶ ಬಂದರೆ ಅಭಿನಯಿಸುತ್ತೇನೆ. ಆದರೆ ಧಾರಾವಾಹಿಗಳಲ್ಲಿ ಮನಸಿಲ್ಲ. ಚಿಕ್ಕ ಕಥೆ ಇಟ್ಟುಕೊಂಡು ಸುಮ್ಮನೆ ಟಿಆರ್‌ಪಿಗೋಸ್ಕರ ಎಳೆಯುತ್ತಾರೆ.

ಬೇಗ ಮುಗಿಯುವ ಧಾರಾವಾಹಿಗಳಾದರೆ ಕಥೆಗೆ ಪ್ರಾಮುಖ್ಯತೆ ಇರುತ್ತದೆ. ಅಂದರೆ 13 ಕಂತುಗಳು ಎಂದುಕೊಳ್ಳಬಹುದು. ಕಥೆ ಹೇಳುವಂಥ ಯಾವ ಪ್ರಾಜೆಕ್ಟ್ ಆದರೂ ನಾನು ಕೆಲಸ ಮಾಡುತ್ತೇನೆ. ಪ್ರಯಾಣವನ್ನು ಕೇಂದ್ರವಾಗಿ ಇಟ್ಟುಕೊಂಡ ಟೀವಿ ಷೋಗಳನ್ನೂ ಮಾಡುವ ಉತ್ಸಾಹ ಇದೆ. ಅಂದರೆ ಬೇರೆ ಬೇರೆ ಸ್ಥಳ–ವಿಚಾರಗಳನ್ನು ಗುರ್ತಿಸುವಂಥ ಷೋಗಳು. ಯಾವುದೇ ಪ್ರಾಜೆಕ್ಟಿನ ಥೀಮ್ ನನ್ನ ಯೋಚನೆಗೆ ಹೊಂದುವಂತಿದ್ದರೆ ಏನನ್ನಾದರೂ ಮಾಡುತ್ತೇನೆ.

*ಈ ಕಮ್‌ಬ್ಯಾಕ್ ನಿಮ್ಮ ಸೆಕೆಂಡ್ ಇನಿಂಗ್ಸ್ ಎನ್ನಬಹುದಾ? ಇನ್ನು ಸಕ್ರಿಯವಾಗಿ ಸಿನಿಮಾ ಮಾಡುತ್ತೀರಾ?
ಇದು ನನ್ನ ಸೆಕೆಂಡ್ ಇನಿಂಗ್ಸ್ ಅಲ್ಲ. ಐದನೆಯದೋ ಆರನೆಯದೋ. ಸುಮಾರು ಬಾರಿ ಸೆಕೆಂಡ್ ಇನಿಂಗ್ಸ್ ಎಂದು ನನ್ನ ಬಗ್ಗೆ ಪತ್ರಿಕೆಗಳಲ್ಲಿ ಬಂದುಬಿಟ್ಟಿದೆ. ಹತ್ತು ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿದ್ದೇನೆ. ನನ್ನ ವಿಚಾರದಲ್ಲಿ ಇದೊಂಥರ ಆನ್–ಆಫ್ ಇದ್ದಂತೆ.

*ಸಿನಿಮಾವನ್ನೇ ವೃತ್ತಿಯಾಗಿ ಸ್ವೀಕರಿಸಬೇಕು ಎಂದು ನೌಕರಿ ಬಿಟ್ಟು ಗಾಂಧಿನಗರಕ್ಕೆ ಬಂದಿರಿ. ಆದರೆ ಸಿನಿಮಾದಿಂದ ದೂರವಿರಬೇಕಾದಾಗ ಅದು ಬೇಸರ ತಂದಿಲ್ಲವೇ?
ಖಂಡಿತ ಇಲ್ಲ. ನನಗೆ ಸಿನಿಮಾ ಅಂದರೆ ನಟನೆ. ನಮ್ಮ ಜೀವನವೇ ನಮ್ಮ ನಟನೆಯ ತಯಾರಿ ಆಗಿರುತ್ತದೆ. ಪ್ರತಿ ದಿನವೂ ಕಲಿಯುತ್ತಿರುತ್ತೇವೆ. ಕಸ ಗುಡಿಸುವುದಾದರೆ ಅದನ್ನೂ ಶ್ರದ್ಧೆಯಿಂದ ಮಾಡಬೇಕು. ಮುಂದೆ ಯಾವುದೋ ಸಿನಿಮಾದಲ್ಲಿ ಕಸ ಗುಡಿಸುವ ದೃಶ್ಯ ಬಂದಾಗ ಅದನ್ನು ಚೆನ್ನಾಗಿ ಮಾಡಬಹುದು (ನಗು).

ಸಿನಿಮಾ ಇಲ್ಲ ಎಂದು ಕಸ ಗುಡಿಸುವುದನ್ನೂ ಮಾಡದಿದ್ದರೆ ನಾಳೆ ಸಿನಿಮಾದಲ್ಲಿ ಆ ದೃಶ್ಯವನ್ನೂ ಚೆನ್ನಾಗಿ ಮಾಡಲು ಆಗುವುದಿಲ್ಲ. ಹಾಗಾಗಿ ನಾನು ಉದ್ಯಮದಿಂದ ಹೊರಗಿದ್ದೇನೆ ಎಂದು ಯಾವತ್ತೂ ಅನ್ನಿಸಿಲ್ಲ.

*ಹಾಗಾದರೆ ಬಿಡುವಿನಲ್ಲಿ ಏನು ಮಾಡುತ್ತೀರಿ?
ಬೆಂಗಳೂರು ಜೀವನ ಭಯಂಕರ. ಹಳ್ಳಿಗಳಲ್ಲಾದರೆ ನಮಗೆ ಸಮಯ ಸಿಗುತ್ತದೆ. ಆದರಿಲ್ಲಿ ಏನಾದರೂ ಒಂದಿರುತ್ತದೆ. ಯಾರನ್ನಾದರೂ ಭೇಟಿ ಮಾಡುವುದು, ಕಾರ್ಯಕ್ರಮಕ್ಕೆ ಹೋಗುವುದು, ಸಾಕ್ಷ್ಯಚಿತ್ರಗಳನ್ನ ನೋಡುವುದು, ಚಿತ್ರೋತ್ಸವಗಳಿಗೆ ಹೋಗುವುದು... ಹೀಗೆ. ಪುಸ್ತಕ ಓದುತ್ತೇನೆ, ಸೂರ್ಯೋದಯ–ಸೂರ್ಯಾಸ್ತ ನೋಡುತ್ತೇನೆ. ಕುಟುಂಬದೊಂದಿಗೆ ಸಮಯ ಕಳೆಯುವುದು ನನಗೆ ಎಲ್ಲಕ್ಕಿಂತ ಮುಖ್ಯ.

ಸಂಬಂಧಗಳೇ ಅಂತಿಮ ಸತ್ಯ. ಅಪ್ಪ–ಅಮ್ಮ, ಅಣ್ಣ, ಸಂಬಂಧಿಕರು, ಮದುವೆ ಆಗುವ ಹುಡುಗ– ಹೀಗೆ ಎಲ್ಲರೊಂದಿಗೂ ಕಾಲ ಕಳೆಯುತ್ತೇನೆ. ಯಾವತ್ತೂ ‘ಅಯ್ಯೋ, ಏನಪ್ಪಾ ಮಾಡೋದು’ ಎಂದುಕೊಂಡಿದ್ದೇ ಇಲ್ಲ. ಸಮಯವನ್ನು ನಾವು ಕೊಲ್ಲುವ ಅವಶ್ಯಕತೆ ಇಲ್ಲ. ಸಮಯವೇ ನಮ್ಮನ್ನು ಕೊಲ್ಲುತ್ತಿರುತ್ತದೆ.

*‘ನೀನಾಸಮ್’ಗೆ ಹೋಗಿದ್ದಿರಂತೆ. ಅಲ್ಲೇನು ಮಾಡಿದಿರಿ?
‘ನೀನಾಸಮ್’ನಲ್ಲಿ ನಾಟಕೋತ್ಸವ ನೋಡಲು ಹೋಗಿದ್ದೆ. ಅದಕ್ಕೂ ಮುನ್ನ ಶಿಬಿರ ಸೇರಿ ಒಂದು ವರ್ಷದ ಕೋರ್ಸ್ ಕೂಡ ಮಾಡಿದ್ದೆ. ರಂಗಭೂಮಿಯತ್ತ ಒಲವಿದೆ. ನಾಟಕ ತಂಡಗಳೊಡನೆ ಸೇರುವ ಆಸೆ ಇದೆ. ಆದರೆ ಯಾವ ತಂಡದೊಂದಿಗೂ ಸೇರುವ ಸರಿಯಾದ ಅವಕಾಶವಾಗಿಲ್ಲ.

ನಾನು ಸಿನಿಮಾ ಹಿನ್ನೆಲೆಯಿಂದ ಬಂದವಳಾಗಿರಲಿಲ್ಲ. ಸಿನಿಮಾಕ್ಕೆ ಹೋಗಬೇಕು ಎಂದಷ್ಟೇ ಅಂದುಕೊಂಡಿದ್ದೆ. ಹಾಗಾಗಿ ನನಗೆ ರಂಗಭೂಮಿಯ ಪ್ರಾಮುಖ್ಯತೆ ಗೊತ್ತಿರಲಿಲ್ಲ. ನಿಧನಿಧಾನವಾಗಿ ಮನವರಿಕೆ ಆದಂತೆ ನಾಟಕಗಳನ್ನು ನೋಡಲು ಶುರು ಮಾಡಿದೆ. ನಟನೆಯ ಸಂಪೂರ್ಣ ಖುಷಿ ಅನುಭವಿಸಬೇಕು ಎಂದರೆ ರಂಗಭೂಮಿಯಲ್ಲಿ ಕೆಲಸ ಮಾಡಬೇಕು.

*ಹಾಗಾದರೆ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲವೇ?
ಸದ್ಯ ಯಾವುದೂ ಇಲ್ಲ. ಒಂದೆರಡು ಸಿನಿಮಾ ಮಾತುಕತೆ ಆಗಿದೆ. ಆದರೆ ಅವರಿನ್ನೂ ಸ್ಕ್ರಿಪ್ಟ್ ಕಳಿಸಿಲ್ಲ. ಕನ್ನಡದಲ್ಲಿ ‘ಶುದ್ಧಿ’ ಮತ್ತು ತಮಿಳಿನಲ್ಲಿ ‘ಉಲಾ’ ಎಂಬ ಸಿನಿಮಾ ಬಿಡುಗಡೆ ಆಗಬೇಕಿದೆ.

*ಕನ್ನಡ–ತಮಿಳು ಎರಡೂ ಕಡೆ ಕೆಲಸ ಮಾಡಿದ ಅನುಭವ ಹೇಳಿ.
ಎರಡು ಉದ್ಯಮಗಳಲ್ಲೂ ಒಳ್ಳೆಯ ತಂಡದೊಂದಿಗೆ ಕೆಲಸ ಮಾಡಿದ್ದೇನೆ. ಎರಡೂ ಕಡೆಗಳಲ್ಲೂ ಸಮಸ್ಯೆಗಳನ್ನು ಎದುರಿಸಿದ್ದೇನೆ. ಒಟ್ಟಾರೆ ನೋಡುವುದಾದರೆ ತಮಿಳಿನಲ್ಲಿ ಹೆಚ್ಚು ಒಳ್ಳೆಯ ಚಿತ್ರಗಳು ಬರುತ್ತಿವೆ. ಕನ್ನಡದಲ್ಲೂ ನಿಧಾನಕ್ಕೆ ಈ ಸಂಖ್ಯೆ ಹೆಚ್ಚುತ್ತಿದೆ. ಸ್ವಲ್ಪ ತಾಳ್ಮೆಯಿಂದ ಕಾಯಬೇಕು.

*ಮಾತಿನ ಮಧ್ಯೆ ‘ಮದುವೆ ಆಗುವ ಹುಡುಗ’ ಎಂದಿರಿ? ಸ್ವಲ್ಪ ಬಿಡಿಸಿ ಹೇಳಿ.
ಈ ಪ್ರಶ್ನೆ ಯಾಕೆ ಇನ್ನೂ ಬಂದಿಲ್ಲ ಎಂದು ಆಗಿನಿಂದಲೂ ಅಂದುಕೊಳ್ಳುತ್ತಲೇ ಇದ್ದೆ. ಅಂತೂ ಕೇಳಿಯೇ ಬಿಟ್ಟಿರಲ್ಲ! ಹುಡುಗ ನಾಗರಾಜ್ ಅಂತ. ಹೈಸ್ಕೂಲಿನಿಂದಲೂ ನನ್ನ ಸ್ನೇಹಿತ. ದೀರ್ಘಾವಧಿ ಸ್ನೇಹ. ಸದ್ಯದಲ್ಲೇ ಮದುವೆ ಆಗುವ ಯೋಚನೆಯೂ ಇದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT