ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಯಾಗರ : ಹನಿಹನಿ ಬರೆದ ಮಹಾಕಾವ್ಯ

ಮರೆಯಲಿ ಹ್ಯಾಂಗ
Last Updated 12 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಹಿಮದ ಹೊದಿಕೆಯನ್ನು ಹೊದ್ದುಕೊಂಡು ನಡುಗುವ ಊರೆಂದರೆ ನನಗೆ ಬಲುಪ್ರೀತಿ. ಸಿನಿಮಾ ಚಿತ್ರೀಕರಣದ ನೆಪದಲ್ಲಿ ಮಾತ್ರವಲ್ಲ, ನನ್ನ ಹಲವಾರು ಓಡಾಟಗಳಲ್ಲಿ ಇಂಥ ಅನೇಕ ಹಿಮದ ತಾಣಗಳನ್ನು ಸುತ್ತಾಡಿದ್ದೇನೆ. ಆದರೆ ನಾನು ಪದೇ ಪದೇ ನೋಡಬೇಕು ಎಂದುಕೊಳ್ಳುತ್ತಿದ್ದ ನಗರ ಅಮೆರಿಕದ ಷಿಕಾಗೊ. ಹಿಮದ ಮುದ್ದೆಗಳನ್ನು ಹೊತ್ತುಕೊಂಡ ಮನೆಗಳನ್ನು ಫೋಟೊಗಳಲ್ಲಿ ನೋಡಿ ಖುಷಿಪಟ್ಟಿದ್ದೆ. ಅದು ನಮ್ಮ ಹಿಮಾಲಯವನ್ನು ನೆನಪಿಸುತ್ತದೆ. ಶಿವನನ್ನು ಆರಾಧಿಸುವವರಿಗೆ ಹಿಮದ ರಾಶಿ ಕೈಲಾಸದ ನೋಟವನ್ನು ಕಣ್ಣಮುಂದೆ ತರುತ್ತದೆ. ಇಂಥ ಇಷ್ಟದ ನಗರವನ್ನು ನಾನು ನೋಡಿದ್ದು 2008ರಲ್ಲಿ ನಡೆದ ‘ಅಕ್ಕ’ ಸಮ್ಮೇಳನದ ವೇಳೆ.

ಆದರೆ ದುರದೃಷ್ಟವಶಾತ್‌ ಅದು ಹಿಮ ಬೀಳುವ ಋತುಮಾನ ಆಗಿರಲಿಲ್ಲ. ಮನೆ ಮೇಲೆ ಬಿದ್ದ ಹಿಮರಾಶಿಯ ಚಿತ್ರಣವನ್ನು ಕಣ್ತುಂಬಿಕೊಳ್ಳುವ ಸಂಭ್ರಮದಲ್ಲಿದ್ದ ನನಗೆ ನಿರಾಸೆಯಾಗಿದ್ದು ಹೌದು. ಆ ನಿರಾಸೆಯನ್ನು ಮರೆಮಾಚಿಸಿದ್ದು ನಯಾಗರದ ಅದ್ಭುತ ಜಲರಾಶಿ.
ನನಗೆ ನೀರೆಂದರೆ ಹೆದರಿಕೆಯೂ ಹೌದು ಇಷ್ಟವೂ ಹೌದು. ಯಾವುದೋ ಒಂದು ಮೂಲೆಯಲ್ಲಿ ಶಾಂತಿಯನ್ನು ಬೋಧಿಸುವ ಮಹಾತ್ಮನಂತೆ, ಇದ್ದಕ್ಕಿದ್ದಂತೆ ಮೈನಡುಗಿಸುವ ರಾಕ್ಷಸನಂತೆ, ಸಮಾಧಾನ ಮಾಡುವ ಗೆಳೆಯನಂತೆ... ಎಷ್ಟೊಂದು ಮುಖಗಳು ಆ ಸುಂದರ ನಯಾಗರಕ್ಕೆ?

ನಯಾಗರ ನನ್ನ ಕಣ್ಣಿಗೆ ಕಂಡದ್ದು ಬರಿಯ ಜಲಪಾತವಾಗಿ ಅಲ್ಲ, ಜೀವನೋತ್ಸಾಹದ ತಾಯಿಯಾಗಿ, ದೇಶಗಳ ನಡುವೆ ಹರಿಯುವ ಜೀವಸೆಲೆಯಾಗಿ. ತನ್ನ ತೀರಕ್ಕೆ ಕಾಲಿಟ್ಟ ಪ್ರವಾಸಿಗನನ್ನು ಅದು ತನ್ನ ತೆಕ್ಕೆಯೊಳಗಿನಿಂದ ಅಷ್ಟು ಸುಲಭವಾಗಿ ಹೊರಗೆ ಕಳುಹಿಸಲಾರದು. ಬಿಡಿಸಿಕೊಳ್ಳುವ ಮನಸ್ಸು ನಮ್ಮಲ್ಲಿಯೂ ಇರುವುದಿಲ್ಲ.

ಹೆಜ್ಜೆಹೆಜ್ಜೆಗೂ ಬೆರಗು

ವಿಶಾಲ ಹರಿವಿನೊಂದಿಗೆ ಎತ್ತರದಿಂದ ಧುಮ್ಮಿಕ್ಕುವ ನೀರಹನಿಗಳ ರಾಶಿ ಉಂಟುಮಾಡುವ ಸದ್ದು ಎದೆಯೊಳಗೆ ನಯಾಗರ ಇಳಿಯುತ್ತಿದೆಯೇನೋ ಎಂಬ ಭಾವನೆ ಮೂಡಿಸುತ್ತದೆ. ಪ್ರವಾಸಿಗರನ್ನು ಸೆಳೆಯಲು ಅಲ್ಲಿ ಕಲ್ಪಿಸಿರುವ ವ್ಯವಸ್ಥೆ, ಜಲಪಾತದ ಸುತ್ತಲೂ ಸೃಷ್ಟಿಸಿರುವ ಆಕರ್ಷಕ ತಾಣಗಳು ನಮ್ಮನ್ನು ಬೆರಗುಗೊಳಿಸುತ್ತವೆ.

ನೀರು ಅಲೆ ಅಲೆಯಾಗಿ ಬಂದು ಅಪ್ಪಳಿಸುವ ಜಾಗದಲ್ಲಿ ಮರಗಳಿಂದ ಕೂಡಿದ ಬೆಟ್ಟವನ್ನು ನಿರ್ಮಿಸಿದ್ದಾರೆ. ಅಲ್ಲಿಗೆ ಹೋಗಲು ರೇನ್‌ಕೋಟ್‌ ನೀಡುತ್ತಾರೆ. ದಪ್ಪನೆಯ ಹನಿಗಳು ಮೇಲಿನಿಂದ ನಮ್ಮ ದೇಹದ ಮೇಲೆ ಸಿಡಿಯುತ್ತಿರುತ್ತವೆ. ಪುಟ್ಟಮಕ್ಕಳು ಅಪ್ಪ ಅಮ್ಮನ ಆಸರೆಯಲ್ಲಿ ಆ ನೀರಿನಡಿ ಸಾಗುತ್ತಾರೆ. ನೀರಿನ ಸಿಂಚನದ ನಡುವೆ ತುದಿ ತಲುಪಬೇಕು. ಒಂದುಕ್ಷಣ ಮೈ ನಡುಗಿದರೂ ಅದು ಮನುಷ್ಯ ಮೆಟ್ಟಿನಿಲ್ಲಬೇಕಾದ ಸವಾಲಿನ ದ್ಯೋತಕವಾಗಿ ಕಾಣಿಸುತ್ತದೆ. ಆ ರೋಚಕ ಅನುಭವವನ್ನೂ ಮೀರುವುದು ನಯಾಗರದ ಮೇಲ್ಭಾಗದಲ್ಲಿನ ಬೋಟ್‌ ಪಯಣ. ಬೋಟ್‌ನಲ್ಲಿ ಕೂರಿಸುವ ಮುನ್ನ ಪುಟ್ಟದೊಂದು ಸಿನಿಮಾ ತೋರಿಸುತ್ತಾರೆ. ನಯಾಗರದಲ್ಲಿ ಒಬ್ಬ ದೇವತೆ ಇದ್ದಾಳೆ. ಆಕೆ ಯಾರನ್ನೂ ಮುಳುಗಲು ಬಿಡುವುದಿಲ್ಲ.

ಪ್ರಾಣ ರಕ್ಷಿಸುವ ಸಲುವಾಗಿಯೇ ಆಕೆ ಅಲ್ಲಿ ನೆಲೆಸಿದ್ದಾಳೆ ಎಂಬ ಕಥೆಯುಳ್ಳ ಸಿನಿಮಾವದು. ನಿಜ. ಅಲೆಗಳ ಸವಾಲಿಗೆ ಅತ್ತಿತ್ತ ಹೊಯ್ದಾಡುವ ಬೋಟ್‌ನಲ್ಲಿ ಕುಳಿತಾಗ, ಎಲ್ಲಾದರೂ ಈ

ಬೋಟ್‌ ಮುಳುಗಿಬಿಟ್ಟರೆ? ಎಂಬ ಭಯ ಅರೆಕ್ಷಣ ಹಾದುಹೋಗದೆ ಇರಲಾರದು. ಅಬ್ಬಾ! ನೀರು ಆಳೆತ್ತರದಿಂದ ಕೆಳಗೆ ಜಿಗಿಯುವ ಜಾಗದಲ್ಲಿ ಸಾಗುವಾಗಲಂತೂ ಹೃದಯಬಡಿತ ಆ ಸದ್ದನ್ನೂ ಅಡಗಿಸುವಂತೆ ನಮಗೇ ಕೇಳಿಸತೊಡಗುತ್ತದೆ. ಅದರ ಬೆನ್ನಲ್ಲಿಯೇ ಆ ದೇವತೆ ಕಣ್ಣಮುಂದೆ ಬರುತ್ತಾಳೆ. ಎಲ್ಲೋ ಕುಳಿತ ಆತ್ಮವಿಶ್ವಾಸ ಪುಟಿಯುತ್ತದೆ. ನನಗೆ ಆರಂಭದಲ್ಲಿ ಇದ್ದ ಭಯ ನಿಧಾನವಾಗಿ ಮರೆಯಾಗಿತ್ತು. ಮರುದಿನ ಮತ್ತೆ ಆ ಬೋಟ್‌ ಏರಿ ಸುತ್ತಾಡುವ ಸ್ಥೈರ್ಯವನ್ನು ನಯಾಗರ ದೇವತೆ ನನ್ನೊಳಗೆ ಹುಟ್ಟುಹಾಕಿದ್ದಳು.

ಕೆನಡಾ ದೇಶದ ಭಾಗದಲ್ಲಿ ಗುಹೆಯೊಂದಿದೆ. ಅದರಿಂದ ಸಾಗಿ ನೀರನ್ನು ಸ್ಪರ್ಶಿಸಬಹುದು. ನೀರಿನ ರಭಸ ಕಂಡಾಗ ಅದರೊಳಗೆ ಕೈ ಇರಿಸಲೂ ಹೆದರಿಕೆಯಾಗುತ್ತದೆ. ಆದರೆ ನೀರಿನ ಶಕ್ತಿ ತಿಳಿಯಲು ನಯಾಗರದ ಆ ಜಲದ ಮೃದುತ್ವವನ್ನು ಒಮ್ಮೆ ಆನಂದಿಸಬೇಕು. ನೀರು ನಿಜಕ್ಕೂ ಇಷ್ಟು ಸುಂದರವೇ ಎನಿಸುತ್ತದೆ. ಕಡಲ ತೀರದ ಕರಾವಳಿಯಲ್ಲಿ ಹುಟ್ಟಿದವಳು ನಾನು. ಅಪ್ಪ ಅಮ್ಮ ರಥಸಪ್ತಮಿಯಂದು ಸಮುದ್ರ ನೀರಿನಲ್ಲಿ ಸ್ನಾನಮಾಡಿಸುತ್ತಿದ್ದರು. ಸಮುದ್ರಕ್ಕೆ ತಳ್ಳಿದಾಗ ಅವರು ನಮ್ಮನ್ನು ರಕ್ಷಿಸುತ್ತಾರೆ ಎಂಬ ನಂಬಿಕೆ ಇರುತ್ತಿತ್ತು.

ಇನ್ನೊಂದು ತೀರವೇ ಕಾಣದ ಸಮುದ್ರ ಎಷ್ಟು ಸುಂದರ ಅಲ್ಲವೇ? ನಯಾಗರದ ಮುಂದೆ ನಿಂತಾಗ ನನಗೆ ಬಾಲ್ಯದ ಆ ದಿನಗಳ ನೆನಪು ಮರುಕಳಿಸಿತ್ತು. ಕಡಲಿನದ್ದೇ ಒಂದು ಅಂದವಾದರೆ, ಹೃದಯದಾಕಾರದಲ್ಲಿ ಬೀಳುವ, ರಭಸದ ಹರಿವಿನ ನಯಾಗರದ ಸೌಂದರ್ಯ ಮತ್ತೊಂದು ಚೆಲುವಿನ ದೃಷ್ಟಾಂತ. ರುದ್ರ ರಮಣೀಯ ಎನ್ನುವ ಪದ ನಯಾಗರಕ್ಕಿಂತ ಮತ್ತೊಂದು ತಾಣಕ್ಕೆ ಅಷ್ಟು ಸೂಕ್ತವೆನಿಸಲಾರದು.

ನಾವು ಕಂಡುಕೊಳ್ಳದ ನಮ್ಮ ಸಂಪತ್ತು
ಇಷ್ಟೆಲ್ಲಾ ಊರು ದೇಶಗಳನ್ನು ಅಲೆದಾಡಿದ್ದರೂ ನಮ್ಮೂರೇ ನಮಗೆ ಮೇಲು ಎಂದು ಅನಿಸುವುದು ಅತಿಶಯೋಕ್ತಿ ಅಲ್ಲ. ಹಿಮವೊಂದನ್ನು ಬಿಟ್ಟು, ಪ್ರಪಂಚದ ಖ್ಯಾತ ಊರುಗಳಲ್ಲಿ ಇರುವ ಪ್ರತಿ ವಿಶಿಷ್ಟಗಳೆಲ್ಲವೂ ನಮ್ಮ ರಾಜ್ಯದಲ್ಲಿಯೇ ಇವೆ. ಸಮುದ್ರವಿದೆ, ದಟ್ಟ ಅರಣ್ಯವಿದೆ, ನದಿ ತೊರೆಗಳು, ಬೆಟ್ಟಗುಡ್ಡಗಳು, ಮರಳು, ಪ್ರಪಾತ. ಒಂದು ಹಿಡಿ ಮಣ್ಣಿಲ್ಲದ ದುಬೈ ಇಂದು ಗಾರ್ಡನ್‌ ಸಿಟಿಯಾಗಿ ಬೆಳೆದಿದೆ.

ರಾಜಸ್ತಾನದಲ್ಲಿ ಬರಿಯ ಮರಳಿನಲ್ಲಿಯೇ ಏನೆಲ್ಲಾ ತೋರಿಸುತ್ತಾರೆ. ಮಳೆಬೀಳುತ್ತಲೇ ಇರುವ ಸಿಂಗಪುರದಲ್ಲಿ ಮಳೆ ಬೆಳಕಿನಾಟದ ಎಷ್ಟೊಂದು ಸುಂದರ ವ್ಯವಸ್ಥೆಗಳಿವೆ. ನಮ್ಮ ಪ್ರತಿ ಜಿಲ್ಲೆಯಲ್ಲಿಯೂ ಇಂಥ ವೈವಿಧ್ಯದ ತಾಣಗಳ ದೊಡ್ಡ ಪಟ್ಟಿಯೇ ಇದೆ. ಮನಸ್ಸು ಮಾಡಿದರೆ ಇಡೀ ಜಗತ್ತನ್ನು ನಮ್ಮೂರಿಗೆ ಕರೆತರಬಹುದು. ಈಗಿನ ಮನುಷ್ಯನಲ್ಲಿ ಹಣವಿದೆ. ಅಪರೂಪದ ತಾಣಗಳನ್ನು ಕಣ್ತುಂಬಿಕೊಳ್ಳುವ ಮಹದಾಸೆಗಳಿವೆ. ನಯಾಗರದಲ್ಲಿನ ಒಬ್ಬ ಸಾಮಾನ್ಯ ವ್ಯಕ್ತಿಗೆ ಇರುವಂತೆ ನಾಗರಿಕ ಪ್ರಜ್ಞೆ ಬೆಳೆಸಿಕೊಂಡರೆ, ಅಲ್ಲಿನ ಅಚ್ಚುಕಟ್ಟು ವ್ಯವಸ್ಥೆ ಇಲ್ಲಿಯೂ ಸೃಷ್ಟಿಯಾದರೆ ಪ್ರಪಂಚದ ಉಳಿದೆಲ್ಲಾ ವಿಸ್ಮಯಗಳು ಗೌಣವೆನಿಸಬಹುದು.

ಪೊಲೀಸರು ಹಿಡಿದರು!
ನಯಾಗರದ ದೇವತೆ ಎಲ್ಲರನ್ನೂ ಕಾಪಾಡುತ್ತಾರೆ ಎನ್ನುವ ನಂಬಿಕೆಯನ್ನು ಅಲ್ಲಿ ಹುಟ್ಟಿಸುತ್ತಾರೆ. ಆದರೆ ನಿಜವಾಗಿಯೂ ಅದು ಸಾಧ್ಯವೇ? ಯಾವುದೋ ಊರಿನ, ಯಾವುದೋ ದೇಶದ ಜನ ಅಲ್ಲಿಗೆ ಬಂದು ಪ್ರಾಣ ಕಳೆದುಕೊಳ್ಳುತ್ತಾರೆ. ನಾವು ಅಲ್ಲಿ ಜೀವನೋತ್ಸಾಹವನ್ನು ಪಡೆದು ಮರಳಿದರೆ, ಜೀವತ್ಯಾಗ ಮಾಡುವ ನಿರ್ಧಾರ ತೆಗೆದುಕೊಂಡವರಿಗೂ ಅದು ನೆಚ್ಚಿನ ತಾಣ! ಅಲ್ಲಿ ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಪೊಲೀಸರ ದೊಡ್ಡ ಸಂಖ್ಯೆಯೇ ಇದೆ. ಆದರೂ ಅವರ ಕಣ್ತಪ್ಪಿಸಿ ದಿನವೂ ಆತ್ಮಹತ್ಯೆಗಳು ನಡೆದೇ ನಡೆಯುತ್ತವೆ. ಅಲ್ಲಿ ಪ್ರವಾಸಿಗರನ್ನು ಸೆಳೆಯುವ ಸೌಂದರ್ಯ, ಅಚ್ಚುಕಟ್ಟು ವ್ಯವಸ್ಥೆಗಳ ನಡುವೆ ವ್ಯಕ್ತಿಯ ಜೀವ ಉಳಿಸುವ ಕೆಲಸಕ್ಕೂ ಅಷ್ಟೇ ಮಹತ್ವ ನೀಡುತ್ತಾರೆ. ಅದು ನನ್ನ ಅನುಭವಕ್ಕೆ ಬಂದಾಗ ಅಲ್ಲಿನ ವ್ಯವಸ್ಥೆ ಮಾತ್ರವಲ್ಲ, ಅಲ್ಲಿನ ಸಾಮಾನ್ಯ ಮನುಷ್ಯನ ಬಗ್ಗೆಯೂ ಗೌರವದ ಭಾವ ಮೂಡಿತು.

ಸೂರ್ಯೋದಯ ಹೊತ್ತಿನಲ್ಲಿ ಪ್ರಾರ್ಥನೆ ಮಾಡುವುದು ನನ್ನ ನಿತ್ಯದ ಅಭ್ಯಾಸ. ಜಲಪಾತಕ್ಕೆ ಸಮೀಪದಲ್ಲಿಯೇ ನಾವು ಉಳಿದುಕೊಂಡಿದ್ದ ಹೋಟೆಲ್‌ ಇತ್ತು. ಸೂರ್ಯ ಇನ್ನೂ ಮೂಡಿರಲಿಲ್ಲ. ಜಲಪಾತದಿಂದ ತುಸು ದೂರದಲ್ಲಿನ ಉದ್ಯಾನದಲ್ಲಿ ಹಾಸಿದ್ದ ಕಲ್ಲುಬೆಂಚಿನಲ್ಲಿ ಒಬ್ಬಳೇ ಕುಳಿತು ಲಲಿತಾ ಸಹಸ್ರನಾಮ ಪಠಿಸುತ್ತಿದ್ದೆ. ಅಲ್ಲಿ ಒಂದೇ ಒಂದು ದೂಳಿನ ಕಣವನ್ನೂ ಬಿಡದಂತೆ ಸ್ವಚ್ಛಗೊಳಿಸುತ್ತಾರೆ. ವ್ಯಾಕ್ಯೂಮ್‌ ಕ್ಲೀನರ್‌ ಹಿಡಿದು ಸ್ವಚ್ಛಗೊಳಿಸುತ್ತಿದ್ದ ವ್ಯಕ್ತಿಯೊಬ್ಬ ನನ್ನ ಬಳಿ ಬಂದು ‘ಮ್ಯಾಮ್‌ ಆರ್‌ ಯೂ ಆಲ್‌ರೈಟ್‌’ ಎಂದು ಪ್ರಶ್ನಿಸಿದ. ಮಂತ್ರ ಜಪಿಸುತ್ತಿದ್ದ ನಾನು ಮಾತನಾಡಲಿಲ್ಲ. ಹತ್ತು ನಿಮಿಷದೊಳಗೆ ಪೊಲೀಸ್‌ ಜೀಪೊಂದು ಬಂದು ನಿಂತಿತು. ನನ್ನ ಸನಿಹ ಸುಳಿದಾಡಿದ ಪೊಲೀಸ್‌ ನನ್ನನ್ನು ಪ್ರಶ್ನಿಸಿದರು. ಆಗಲೂ ನನ್ನ ಪ್ರಾರ್ಥನೆ ಮುಗಿದಿರಲಿಲ್ಲ. ತಲೆ ಅಲ್ಲಾಡಿಸಿ ಮುಂದುವರೆಸಿದ್ದೆ.

ಪೊಲೀಸರ ಬಗ್ಗೆ ನಾನು ಗಮನಹರಿಸಿಯೂ ಇರಲಿಲ್ಲ. ಪ್ರಾರ್ಥನೆ ಮುಗಿಸಿ ನೀರನ್ನು ತಲೆಗೆ ಪ್ರೋಕ್ಷಿಸಿಕೊಳ್ಳಬೇಕು ಎಂದು ನೀರಿನ ಹತ್ತಿರ ಹೋಗಿ ಬಗ್ಗಿದ್ದಷ್ಟೇ, ‘ನೋ ನೋ’ ಎಂದು ಓಡಿಬಂದ ಪೊಲೀಸರು ಹಿಡಿದುಕೊಂಡರು. ನನಗೆ ಏನಾಗುತ್ತಿದೆ ಎಂದು ಅರಿವಾಗುವುದರೊಳಗೆ ಹತ್ತಾರು ಪ್ರಶ್ನೆಗಳು. ನಾನೇನು ತಪ್ಪು ಮಾಡಿದೆ? ನಮ್ಮ ದೇಶದಲ್ಲಿ ದೇವರನ್ನು ಮುಟ್ಟುವುದು ತಪ್ಪು ಎನ್ನುವಂತೆ, ಇಲ್ಲಿ ನೀರನ್ನು ಮುಟ್ಟುವುದು ತಪ್ಪೇ? ಹೋಟೆಲ್‌ ಕೋಣೆಗೆ ಕರೆದೊಯ್ದ ಪೊಲೀಸರಿಗೆ ಅಲ್ಲಿ ನನ್ನ ಪತಿ ನಮ್ಮ ದಾಖಲೆಗಳನ್ನೆಲ್ಲಾ ತೋರಿಸಿದರು. ಪ್ರಾರ್ಥನೆ ಬಗ್ಗೆ ವಿವರಿಸಿದ ಬಳಿಕ ಅವರು ಕ್ಷಮೆ ಕೇಳಿ ಹೊರಟರು.

ನನ್ನಷ್ಟಕ್ಕೆ ನಾನು ಮಾತನಾಡುತ್ತಿದ್ದದ್ದನ್ನು ನೋಡಿ ತೋಟದ ಮಾಲಿ ತಪ್ಪಾಗಿ ಭಾವಿಸಿದ್ದಿರಬಹುದು. ಆದರೆ ಯಾವುದೋ ದೇಶದ ಒಂದು ಜೀವದ ಬಗ್ಗೆ ಆತ ತೋರಿಸಿದ ಕಾಳಜಿ ನಿಜಕ್ಕೂ ವಿಶೇಷ ಎನಿಸಿತು. ಅವರಿಗೆ ಕೃತಜ್ಞತೆ ಸಲ್ಲಿಸಿ ಫೋಟೊ ತೆಗೆಸಿಕೊಳ್ಳಬೇಕು ಎಂದು ಹುಡುಕಾಡಿದೆ. ಅವರು ಸಿಗಲಿಲ್ಲ. ನಯಾಗರ ಪ್ರಪಂಚದ ಅದ್ಭುತಗಳಲ್ಲಿ ಒಂದು ಎನಿಸಿಕೊಳ್ಳಲು ಆ ಜಲಪಾತದ ಸೊಗಡು ಮಾತ್ರ ಕಾರಣವಲ್ಲ, ಜೀವರಕ್ಷಣೆಗೆ ಧಾವಿಸುವ ಇಂಥ ಹೃದಯಗಳೂ ಕಾರಣ. ಆ ಊರಿನ ಜೊತೆಯಲ್ಲಿ ಆ ವ್ಯಕ್ತಿಯೂ ನನ್ನ ನೆನಪಿನಿಂದ ಎಂದಿಗೂ ಮಾಸುವುದಿಲ್ಲ.

(ಜಯಮಾಲಾ ನಟಿಯಾಗಿ, ನಿರ್ಮಾಪಕಿಯಾಗಿ ಜಯಮಾಲಾ ಪ್ರಸಿದ್ಧರು. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT