ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ಅಕ್ರಮ ತನಿಖೆಯಾಗಲಿ

Last Updated 24 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನರೇಗಾ (ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ) ಯೋಜನೆ ಜಾರಿಯಲ್ಲಿ ಆಗಿರುವ ಹಣಕಾಸಿನ ಅವ್ಯವಹಾರ,ಅಕ್ರಮಗಳಿಗೆ ಕೊನೆ ಎಂಬುದೇ ಇಲ್ಲ. ಹೊಸ ಹೊಸ ಅಕ್ರಮಗಳು ಬೆಳಕಿಗೆ ಬರುತ್ತಲೇ ಇವೆ. ದೇಶದ ಗ್ರಾಮೀಣ ಜನರ ಆರ್ಥಿಕ ಸಬಲೀಕರಣಕ್ಕೆ ನೆರವಾಗುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಈ ಯೋಜನೆ ಭ್ರಷ್ಟರ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ. 2011ರ ಮಾರ್ಚ್ ತಿಂಗಳೊಂದರಲ್ಲೇ ರಾಜ್ಯ ಸರ್ಕಾರ ಈ ಯೋಜನೆಯಡಿ 824 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.

ಈ ಯೋಜನೆಯಡಿ ದೇಶದ ಯಾವುದೇ ರಾಜ್ಯ ಇಷ್ಟು ದೊಡ್ಡ ಮೊತ್ತದ ಹಣವನ್ನು ಒಂದು ತಿಂಗಳ ಅವಧಿಯಲ್ಲಿ ಖರ್ಚು ಮಾಡಿದ ಉದಾ­ಹರಣೆ ಇಲ್ಲ. ಇದಕ್ಕೆ ಅಂದಿನ ಬಿಜೆಪಿ ಸರ್ಕಾರವೇ ಹೊಣೆ ಎಂದು ಗ್ರಾಮೀಣ ಅಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ ಆರೋಪಿಸಿದ್ದಾರೆ. ಹಣಕಾಸು ವರ್ಷದ ಕೊನೆಯ ತಿಂಗಳಲ್ಲಿ 824 ಕೋಟಿ ರೂಗಳಷ್ಟು ದೊಡ್ಡ ಮೊತ್ತವನ್ನು ಗುತ್ತಿಗೆದಾರರಿಗೆ ನೀಡಿದ ಸರ್ಕಾರದ ಕ್ರಮವೇ ಹಲವು ಅನುಮಾನಗಳಿಗೆ ದಾರಿ ಮಾಡಿಕೊಡುತ್ತದೆ. ಒಂದೇ ತಿಂಗಳಲ್ಲಿ 824 ಕೋಟಿ ರೂಪಾಯಿಗಳನ್ನು ಖರ್ಚುಮಾಡಲು ಹೇಗೆ ಸಾಧ್ಯ ಎನ್ನುವುದು ಪಾಟೀಲರ ಪ್ರಶ್ನೆ.

ಈ ವಿಚಾರವನ್ನು ಹಿಂದಿನ ಸರ್ಕಾರವನ್ನು ಟೀಕಿಸಲು ರಾಜಕೀಯವಾಗಿ ಬಳಸಿಕೊಂಡರಷ್ಟೇ ಸಾಲದು. ಉನ್ನತ ಮಟ್ಟದ ತನಿಖೆಗೆ ಒಳಪಡಿಸುವ ಹೊಣೆಗಾರಿಕೆಯೂ ಸರ್ಕಾರದ್ದಾಗಿದೆ ಎಂಬುದನ್ನು  ಮನಗಾಣಬೇಕು. ರಾಜ್ಯ ಸರ್ಕಾರ ತನ್ನ ಅಧಿಕಾರ ಬಳಸಿಕೊಂಡು 2011ರ ನರೇಗಾ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಬೇಕು. ಯೋಜನೆಯ ಜಾರಿಯಲ್ಲಿ ಅಕ್ರಮಗಳಾಗಿದ್ದರೆ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು.

ನರೇಗಾ ಯೋಜನೆಯನ್ನು ಕರ್ನಾಟಕ ಮಾತ್ರವಲ್ಲ, ಹಲವು ರಾಜ್ಯಗಳು ದುರುಪಯೋಗ ಪಡಿಸಿಕೊಂಡಿವೆ. ದೇಶದ ಗ್ರಾಮೀಣ ಪ್ರದೇಶದ ಭೂಹೀನ ಕೃಷಿ ಕಾರ್ಮಿಕರು ನಗರಗಳತ್ತ ವಲಸೆ ಹೋಗುವುದನ್ನು ತಪ್ಪಿಸಿ, ಅವರಿಗೆ ಸ್ಥಳೀಯವಾಗಿ ಉದ್ಯೋಗ ನೀಡುವುದು ಯೋಜನೆಯ ಉದ್ದೇಶ. ಜನರ ಶ್ರಮ ಶಕ್ತಿಯ ಬಳಕೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಅದರ ಇನ್ನೊಂದು ಆಶಯ.

ನರೇಗಾ ಯೋಜನೆ­ಯನ್ನು ಹಿಂದಿನ ಸರ್ಕಾರಗಳು ಸರಿಯಾಗಿ ಬಳಸಿಕೊಂಡಿದ್ದರೆ ಗ್ರಾಮೀಣ ಕರ್ನಾಟ­ಕದ ಚಿತ್ರಣ ಸ್ವಲ್ಪ ಮಟ್ಟಿಗೆ ಬದಲಾಗುತ್ತಿತ್ತು. ದುರ­ದೃಷ್ಟದ ಸಂಗತಿ ಎಂದರೆ ಈ ಯೋಜನೆ ದುರುಪಯೋಗವೇ ಹೆಚ್ಚಾಗಿದೆ. ಕೆಳಹಂತದ ಜನ ಪ್ರತಿ­ನಿಧಿಗಳು ಮತ್ತು ಸರ್ಕಾರಿ ಸಿಬ್ಬಂದಿ ಶಾಮೀಲಾಗಿ ಸುಳ್ಳು ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿಗಳನ್ನು ದೋಚಿದ ಹಲವು ಪ್ರಕರಣಗಳಿಗೆ ಕರ್ನಾ­ಟಕ ಸಾಕ್ಷಿಯಾಗಿದೆ. ಅಕ್ರಮಗಳ ಬಗ್ಗೆ ತನಿಖೆ ಆಗಿದ್ದರೂ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲು ಸಾಧ್ಯವಾಗಿಲ್ಲ.

ಗ್ರಾಮೀಣ ಜನರಿಗೆ ಸ್ಥಳೀಯ­ವಾಗಿ ನೂರು ದಿನಗಳ ಕಾಲ ಕೆಲಸ ಕೊಡುತ್ತೇವೆ ಎನ್ನುವುದು ಹುಸಿ ಭರವಸೆ ಎನ್ನು­ವುದು ಮತ್ತೆ ಮತ್ತೆ ಸಾಬೀತಾಗಿದೆ. ಆದರೆ ಕೇಂದ್ರ ನೀಡಿದ ಹಣ ಮಾತ್ರ ಖರ್ಚಾಗಿದೆ. ಗ್ರಾಮೀಣ ಜನರ ವಲಸೆ ತಪ್ಪಿಲ್ಲ. ಈ ಯೋಜನೆ ಅನು­ಷ್ಠಾನ­ದಲ್ಲೇ ಲೋಪಗಳಿವೆ. ಪಾರದರ್ಶಕತೆ ಎಂಬುದು ಇಲ್ಲವೇ ಇಲ್ಲ. ಇನ್ನಾ­ದರೂ ಈ ಯೋಜನೆಯ ದುರ್ಬಳಕೆ ತಪ್ಪಿಸಲು  ಸರ್ಕಾರ ಮುಂದಾಗ­ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT