ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ್ತನದ ಅಂತರಂಗದಲ್ಲಿ ನೋವು-ನಲಿವು!

Last Updated 29 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಎಲ್ಲ ಕ್ಷೇತ್ರಗಳಂತೆ ನೃತ್ಯ ಕ್ಷೇತ್ರವೂ ಬದಲಾಗುತ್ತಿದೆ. ಪರಸ್ಪರ ವೈಷಮ್ಯ ಕಲಾವಿದೆಯರಲ್ಲಿ ಕಡಿಮೆಯಾಗಿ ಕಲಾವಿದರ ಸ್ನೇಹ ಕೂಟಗಳು, ಪರಸ್ಪರ ಪ್ರೋತ್ಸಾಹ ಕಾಣತೊಡಗುತ್ತಿವೆ. ಮಹಿಳೆಯರು ಕೇವಲ ಪ್ರದರ್ಶನಕ್ಕಾಗಿ ನೃತ್ಯ ಕಲಿಯದೆ ಸಾಮಾಜಿಕ ಬಾಂಧವ್ಯಕ್ಕಾಗಿ, ಇತರ ಮಹಿಳೆಯರನ್ನು ಸೇರುವ ಸಲುವಾಗಿ, ಆರೋಗ್ಯದ ಹಂಬಲದಿಂದ ನೃತ್ಯ ಕಲಿಯತೊಡಗಿದ್ದಾರೆ.

ಭ ಭರತನಾಟ್ಯ, ಮೋಹಿನಿಯಾಟ್ಟಂ, ಕಥಕ್ಕಳಿ ನೃತ್ಯದಲ್ಲಿ ಪರಿಣತೆಯಾಗಿದ್ದ ಮೃಣಾಲಿನಿ ಸಾರಾಭಾಯ್ ತಮ್ಮ 98ನೇ ವಯಸ್ಸಿನಲ್ಲಿ ಇತ್ತೀಚೆಗೆ ನಿಧನ ಹೊಂದಿದರು.

‘ನನ್ನ ತಾಯಿ ಮೃಣಾಲಿನಿ ತನ್ನ ನಿರಂತರ ನೃತ್ಯಕ್ಕಾಗಿ ಚಿರಪಯಣ ಬೆಳೆಸಿದರು’ ಎಂದು ಅವರ ಸಾವಿನ ಬಗ್ಗೆ ವಿವರಿಸಿದ ಅವರ ಮಗಳು ಮಲ್ಲಿಕಾ, ಸ್ವತಃ ನೃತ್ಯ ಕಲಾವಿದೆ, ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು ವಿಶೇಷವಾಗಿ.

ಮೃತದೇಹಕ್ಕೆ ಕಾಲಿಗೆರಗುತ್ತೇವೆ, ಹೂವು ಇಟ್ಟು ನಮ್ಮ ಗೌರವ ಸಲ್ಲಿಸುತ್ತೇವೆ. ಆದರೆ ಮಲ್ಲಿಕಾ ಪ್ರಸಿದ್ಧ ದೇವರನಾಮ ‘ಕೃಷ್ಣಾ ನೀ ಬೇಗನೆ ಬಾರೋ’ ಎಂದು ನರ್ತಿಸುವ ಮೂಲಕ ನೃತ್ಯಗಾತಿ ತಾಯಿಗೆ ತಮ್ಮ ನಮನ ಸಲ್ಲಿಸಿದರು.

ಕೂಚಿಪುಡಿ ಮತ್ತು ಭರತನಾಟ್ಯದ ಪ್ರಸಿದ್ಧ ನೃತ್ಯಕಲಾವಿದೆ ಆನಂದ ಶಂಕರ್ ಜಯಂತ್. ತಾನು ಕ್ಯಾನ್ಸರ್‌ನಿಂದ ಗುಣಮುಖಳಾಗಿ ಹೊರಬಂದ ಕಥೆಯನ್ನು ವಿವರಿಸುತ್ತ ಆನಂದ ಹೇಳಿದ ಮಾತುಗಳಿವು, ‘ಸಿಂಹನಂದಿನಿ ನೃತ್ಯ ಮಾಡುವಾಗ  ನಾನು ಮಹಿಷಾಸುರ ಮರ್ಧಿನಿ. ನೃತ್ಯದ ಮುಖಾಂತರ ನನ್ನ ಅಂತರಂಗದ ಶಕ್ತಿ ವರ್ಧಿಸುತ್ತದೆ.

ದುರ್ಗೆ ಸಿಂಹದ ಮೇಲೇರುವಂತೆ ನಾನು ವೈದ್ಯಕೀಯ ಔಷಧಿ-ಚಿಕಿತ್ಸೆಗಳ - ಆತ್ಮಶಕ್ತಿಯ ಹಲವು ಕೈಗಳಿಂದ ಕ್ಯಾನ್ಸರ್‌ನಿಂದ, ಉಳಿದುಕೊಂಡವಳಾಗದೆ, ಕ್ಯಾನ್ಸರ್ ಗೆದ್ದವಳಾಗುತ್ತೇನೆ’.

ಅವರ ನೃತ್ಯ ಈಗ ಆನಂದದ, ಆರೋಗ್ಯದ ನರ್ತನ. ಇನ್ನೊಬ್ಬ ಪ್ರಸಿದ್ಧ ಭರತನಾಟ್ಯ ಕಲಾವಿದೆ ಅಲರ್‌ಮೇಲರ್‌ವಳ್ಳಿ. ನೃತ್ಯ ತನ್ನ ಜೀವನದುದ್ದಕ್ಕೂ ಹೇಗೆ ನದಿಯಂತೆ ಹರಿಯುತ್ತಾ ಬಂತು ಎಂಬುದನ್ನು ವಿವರಿಸುತ್ತಾ ‘ಮೊದಲು ನಾನು ನೃತ್ಯ ಕಲಿತಾಗ ನಾನು ನಿಯಮಗಳನ್ನು ಕಲಿತೆ.

ವರುಷಗಳ ತರಬೇತಿ-ಅಭ್ಯಾಸದಿಂದ ಅವುಗಳನ್ನು ಅಂತರ್ಗತವಾಗಿಸಿಕೊಂಡೆ. ಈಗ ನನ್ನದೇ ನಿಯಮಗಳನ್ನು ಮಾಡಿಕೊಳ್ಳುತ್ತಿರುವುದನ್ನು ಕಂಡುಕೊಂಡೆ. ಆದರೆ ಇದರ ಅಂತಿಮ ಹಂತ -ನಾನು ನನ್ನ ನೃತ್ಯದೊಂದಿಗೇ ನನ್ನನ್ನು ಸಂಪೂರ್ಣವಾಗಿ ಗುರುತಿಸಿಕೊಳ್ಳುವುದು. ನಾನು ಮತ್ತು ನನ್ನ ನೃತ್ಯ ಇವೆರಡೂ ಒಂದೇ ಆದಾಗ!’ ಎನ್ನುತ್ತಾರೆ.

ಇಂಥ ಮೇಲಿನ ಅನುಭವಗಳು ನೃತ್ಯವನ್ನು ವಿವಿಧ ಹಂತಗಳಲ್ಲಿ ಅಭ್ಯಸಿಸುವ ಎಲ್ಲರದ್ದೂ ಆಗಿರಲು ಸಹಜವಾಗಿ ಸಾಧ್ಯವಿಲ್ಲವಷ್ಟೆ. ಏಕೆಂದರೆ ನೃತ್ಯ ಕಲಿಕೆಯ ಹಾದಿಯೇನೂ ಸುಲಭವಲ್ಲ.

‘ನಮ್ಮ ಮಕ್ಕಳು ಟಿ.ವಿ.ಯಲ್ಲಿ ಬರುವ ಹಾಡುಗಳಿಗೆ ಎಷ್ಟು ಚೆನ್ನಾಗಿ ಕುಣಿಯುತ್ತಾರೆ, ಇವಳಿಗೆ ‘ಡಾನ್ಸ್’ ಎಂದರೆ ತುಂಬಾ ಇಂಟರೆಸ್ಟ್ ಮೇಡಂ’ ಎಂದು ಪುಟ್ಟ ಮಕ್ಕಳನ್ನು ನೃತ್ಯ ತರಗತಿಗಳಿಗೆ ಸೇರಿಸಲು ಕರೆದುಕೊಂಡು ಬರುವ ತಂದೆ-ತಾಯಿಗಳ ಸಂಖ್ಯೆ ಬಹಳಷ್ಟು. ಆದರೆ ಸೇರಿದ ಒಂದೆರಡು ತಿಂಗಳಿಗೆ ನೃತ್ಯ ಕಲಿಯುವುದೆಂದರೆ ಸುಮ್ಮನೆ ‘ಕುಣಿ’ ಯುವುದಲ್ಲ ಎಂಬ ಅರಿವು ತಂದೆ-ತಾಯಿ -ಮಕ್ಕಳು ಇಬ್ಬರಿಗೂ ಉಂಟಾಗುತ್ತದೆ.

ಶಾಸ್ತ್ರೀಯ ನೃತ್ಯ ಕಲಿಕೆಗೆ ಇದು ಹೆಚ್ಚು ಅನ್ವಯಿಸಬಹುದಾದರೂ, ಬೇರೆ ತರಹದ ಯಾವುದೇ ನೃತ್ಯಕ್ಕೂ ಇದು ಒಪ್ಪತಕ್ಕ ಮಾತೇ. ಇಲ್ಲಿ ಕಲಿಕೆಯ ಗುರಿಯೇ ಪ್ರದರ್ಶನ!.

ಇತ್ತೀಚೆಗೆ ಪ್ರದರ್ಶನವನ್ನೇ ಗುರಿಯಾಗಿಸಿಕೊಳ್ಳದೆ, ತಮ್ಮ ಸಂತೋಷಕ್ಕಾಗಿ, ವ್ಯಾಯಾಮಕ್ಕಾಗಿ, ನಿಜವಾದ ಅರ್ಥದಲ್ಲಿ ‘ಆತ್ಮ’ವನ್ನರಳಿಸಿಕೊಳ್ಳಲು ನೃತ್ಯವನ್ನು ಕಲಿಯುವ ಮಹಿಳೆಯರ ಸಂಖ್ಯೆ ಹೆಚ್ಚತೊಡಗಿದೆ.

ಇವರೆಲ್ಲ ಈ ಮೊದಲಲ್ಲಿ ಹೇಳಿದ ಮೃಣಾಲಿನಿ-ಮಲ್ಲಿಕಾ ಸಾರಾಭಾಯ್‌ರ, ಆನಂದ ಶಂಕರ್‌ಜಯಂತ್-ಅಲರ್‌ಮೇಲರ್‌ವಲ್ಲಿಯಂಥವರ ಅನುಭವವನ್ನು ಅರ್ಥ ಮಾಡಿಕೊಳ್ಳ ಬಲ್ಲಂತಹವರು. ‘ನೃತ್ಯ’ ಎನ್ನುವುದು ಬರೀ ‘ಕುಣಿತ’ ಎಂದು ಭಾವಿಸದೆ ಅದರ ‘ಸತ್ತ್ವ’ಕ್ಕಾಗಿ ಅದನ್ನು ಕಲಿಯುವವರು.

ಈ ಮಹಿಳೆಯರು ‘ಸತ್ತ್ವ’ಕ್ಕಾಗಿಯೇ ನೃತ್ಯ ಕಲಿಯುತ್ತಾರೆಂದರೂ, ‘ಪ್ರದರ್ಶನ’ ಅವರಲ್ಲಿಯೂ ಉತ್ಸಾಹ-ಸಂತೋಷ ತರುತ್ತದೆ. ಆಗ ಥಟ್ಟೆಂದು ಎದ್ದು ನಿಲ್ಲುವ ಒಂದು ಪ್ರಶ್ನೆ “ನೃತ್ಯದಂಥ ಪ್ರದರ್ಶಕ ಕಲೆಗೆ ವಯಸ್ಸು -ಮೈ ಮಾಟದ ಅವಶ್ಯಕತೆ”ಯ ಬಗ್ಗೆ. ಇಬ್ಬರು ‘ಹಿರಿಯ’ ನರ್ತಕಿಯರು ಈ ಬಗ್ಗೆ ಹೇಳಿದ ಮಾತು ಆಸಕ್ತಿಕರ.

ಯಾಮಿನಿ ಕೃಷ್ಣಮೂರ್ತಿ “ನನ್ನ ನೃತ್ಯ ವಯಸ್ಸನ್ನು ಮೀರಿದ್ದು, ಏಕೆಂದರೆ ನಾನೊಬ್ಬ ಸೃಜನಶೀಲ ವ್ಯಕ್ತಿ. ನನ್ನೊಳಗೆ ಹಲವು ಜೀವಗಳಿವೆ. ಪ್ರತಿ ಬಾರಿಯೂ ಹೊಸದೊಂದು ಕಲ್ಪನೆ ಮನಸ್ಸಿಗೆ ಬಂದಾಗ ಹೊಸ ಶಕ್ತಿ ಅದರೊಂದಿಗೆ ಹರಿಯುತ್ತದೆ. ಹಾಗಾಗಿ ಕಲೆಯಾಗಲೀ, ಕಲಾವಿದೆಯಾಗಲೀ ವಯಸ್ಸನ್ನು ಮೀರಿದವರು!” ಎಂದರು!.

ಇನ್ನೊಬ್ಬರು ಪ್ರಸಿದ್ಧ ನಟಿಯೂ, ಅಷ್ಟೇ ಪರಿಣತ ಶಾಸ್ತ್ರೀಯ ನೃತ್ಯ ಪಟುವೂ ಆದ ವೈಜಯಂತಿಮಾಲಾ ಬಾಲಿ, ತನ್ನ 80ರ ವಯಸ್ಸಿನಲ್ಲಿಯೂ ಪ್ರದರ್ಶನ ನೀಡುತ್ತಿರುವ ಕಲಾವಿದೆ. ಅವರು ಹೇಳಿದ್ದು “ನನಗೆ ವಯಸ್ಸಾಗಿದೆ, ನಿಜ. ಆದರೆ ನಾನು ನೃತ್ಯ ಮಾಡುತ್ತೇನೆ. ಅದನ್ನು ನೋಡಲೇಬೇಕೆಂದು ನಾನು ಯಾರನ್ನೂ ಒತ್ತಾಯಿಸಿಲ್ಲ! ನನಗೆ ನರ್ತಿಸಬೇಕೆನಿಸುತ್ತದೆ. ನಾನು ನರ್ತಿಸುತ್ತೇನೆ!”. ಅಂದರೆ ನೃತ್ಯಾಂಗನೆ, ಚಿರಯೌವ್ವನೆ!

ನೃತ್ಯದ ಅಧಿದೇವತೆ ಪುರುಷ ನಟರಾಜನಾದರೂ, ಇಂದಿಗೂ ನೃತ್ಯವನ್ನು  ಕಲಿಯುವವರಲ್ಲಿ ಹೆಚ್ಚಿನವರು ಬಾಲಕಿ/ಯುವತಿ/ಮಹಿಳೆಯರೇ. 1930ರ ಸದಿರ್‌ನಾಚ್ ಚಳುವಳಿಯ ನಂತರ ನೃತ್ಯದ ಸ್ಥಾನಮಾನ ಬದಲಾಯಿತಷ್ಟೆ. ಇಂದು ನೃತ್ಯ ಕಲಿಕೆ ಪ್ರತಿಷ್ಠೆಯ ಗುರುತೇ ಆಗಿದೆ. ಆದರೆ ಕಲಾವಿದೆಯರು ಎದುರಿಸುವ ಸವಾಲುಗಳೂ ಬೇರೆಯದೇ ರೀತಿಯಲ್ಲಿ ಬದಲಾಗಿವೆ.

ಅಂದರೆ ಹೆಚ್ಚಿನ ಮಹಿಳೆಯರಿಗೆ/ ಯುವತಿಯರಿಗೆ ಕುಟುಂಬದಿಂದ  ‘ನೃತ್ಯ ಕಲಿಯಬೇಡ’ ಎಂಬ ನಿರ್ಬಂಧವಿರದಿರಬಹುದು. ಆದರೆ ನೃತ್ಯ ಕಾರ್ಯಕ್ರಮಗಳಿಗೆ ಪ್ರೇಕ್ಷಕಳಾಗಿಯೋ / ಸ್ವತಃ ಕಲಾವಿದೆಯಾಗಿಯೋ ಹೋಗಿ ರಾತ್ರಿ ಬಂದಾಗ ಆಕೆಯ ಕಲೆಯ ಗುಂಗಿನ ಮನಃಸ್ಥಿತಿಯನ್ನು ಅರ್ಥಮಾಡಿಕೊಳ್ಳುವವರು ಕಡಿಮೆಯೇ.

ಹೀಗಿದ್ದೂ ಮಹಿಳೆಯರಿಗೆ ನೃತ್ಯ ಕಲೆ ಹಲವು ಜೀವನಕ್ಕೆ ಉಪಯುಕ್ತ ಅಂಶಗಳನ್ನು ಕಲಿಸುತ್ತದೆ. ಒತ್ತಡಗಳನ್ನು ಎದುರಿಸುವ, ನಿಭಾಯಿಸುವ, ಧೈರ್ಯದಿಂದ ಮುನ್ನುಗ್ಗುವ, ‘ಸಾಹಸೀ’ ಪ್ರವೃತ್ತಿಯನ್ನು ಒಂದಲ್ಲ ಒಂದು ಹಂತದಲ್ಲಿ ಎಂಥ ವ್ಯಕ್ತಿತ್ವದವರೂ ನೃತ್ಯರಂಗದಲ್ಲಿ ಕಲಿಯಲೇಬೇಕಾಗುತ್ತದೆ.

‘ಪರಿಪೂರ್ಣ’ವೆನಿಸದ ನಮ್ಮ ದೇಹದೊಂದಿಗೆ ಮೈತ್ರಿ ಮಾಡಿಕೊಂಡು, ದಿನನಿತ್ಯ ತರಗತಿಯಲ್ಲಿ ಎಲ್ಲರೊಂದಿಗೆ, ಎಲ್ಲರೆದುರು ನೃತ್ಯವನ್ನು ಅಭ್ಯಸಿಸುವಾಗ ತನ್ನಿಂದ ತಾನೇ ದೇಹದ-ಮನಸ್ಸಿನ ಭಾವನೆಗಳ ಅರಿವು, ಮಿತಿ, ಬುದ್ಧಿಗೆ ಅರಿವಾಗತೊಡಗುತ್ತದೆ. ಹಾಗಾಗಿಯೇ ನೃತ್ಯದಿಂದ ಬೇರೆಯವರೊಡನೆ ಸಂವಹನದ ಸಾಧ್ಯ ಹೇಗೋ, ಅದಕ್ಕಿಂತ ಮುಖ್ಯ ನೃತ್ಯದಿಂದ ನಮ್ಮೊಳಗಿನ ಅರಿವು, ನಮ್ಮ ದೈಹಿಕ-ಮಾನಸಿಕ ವ್ಯಕ್ತಿತ್ವದ ಬಗೆಗಿನ ತಿಳಿವು ಮೂಡತೊಡಗುತ್ತದೆ.

ಒಬ್ಬ ವಿಮರ್ಶಕರು ಒಮ್ಮೆ ಕೇಳಿದ್ದರು, “ಸಾಮಾನ್ಯ ಮಹಿಳೆಯರಲ್ಲಿ ಕಂಡು ಬರುವುದಕ್ಕಿಂತ ನೃತ್ಯ ಕಲಾವಿದೆಯರಲ್ಲಿ ಸಣ್ಣ ಬುದ್ಧಿ-ಕೆಟ್ಟ ಬುದ್ಧಿ ಏಕೆ ಕಂಡುಬರುತ್ತದೆ ಎಂಬ ಬಗ್ಗೆ ನೀವೊಂದು ಅಧ್ಯಯನ ಮಾಡಬೇಕು” ಎಂದು! ನೃತ್ಯ ಕ್ಷೇತ್ರ ಸ್ಪರ್ಧಾತ್ಮಕವಾದದ್ದು, ಕಲಾವಿದರ ಸಂಖ್ಯೆಗೆ ಹೋಲಿಸಿದರೆ ಅವಕಾಶಗಳು ಕಡಿಮೆ.

ಅದರ ಮೇಲೆ ಮಹಿಳೆಯರ ಎಲ್ಲ ಕೆಲಸಗಳಿಗೆ ದೊರೆಯುವಂತೆ ಸಹಜವಾಗಿ ಕಡಿಮೆ ಮನ್ನಣೆ, ಕನಿಷ್ಠ ಆರ್ಥಿಕತೆ-ಕುಟುಂಬದ ಅಸಹಕಾರ, ಆರ್ಥಿಕ ಅಭದ್ರತೆಗಳ ಮಧ್ಯೆ, ಕಲೆಯನ್ನು ಕಲಿಯುವ ಕಷ್ಟದ ಹಾದಿಯನ್ನು ಅರ್ಥ ಮಾಡಿಕೊಳ್ಳದ ಸಮಾಜದ ನಡುವೆ ಹೊಟ್ಟೆಕಿಚ್ಚು-ಅಸೂಯೆಗಳಿರದ, ಸ್ಪರ್ಧಾತ್ಮಕ ಮನೋಭಾವವಿಲ್ಲದ ಆತ್ಮಸಂತೋಷಕ್ಕಾಗಿ, ನರ್ತನವನ್ನೇ ಆರಾಧಿಸುವ ಕಲಾವಿದೆ ಹೇಗೆ ಹುಟ್ಟಲು ಸಾಧ್ಯ?

ಎಲ್ಲ ಕ್ಷೇತ್ರಗಳಂತೆ ನೃತ್ಯ ಕ್ಷೇತ್ರವೂ ಬದಲಾಗುತ್ತಿದೆ. ಪರಸ್ಪರ ವೈಷಮ್ಯ ಕಲಾವಿದೆಯರಲ್ಲಿ ಕಡಿಮೆಯಾಗಿ ಕಲಾವಿದರ ಸ್ನೇಹ ಕೂಟಗಳು, ಪರಸ್ಪರ ಪ್ರೋತ್ಸಾಹ ಕಾಣತೊಡಗುತ್ತಿವೆ. ಮಹಿಳೆಯರು ಕೇವಲ ಪ್ರದರ್ಶನಕ್ಕಾಗಿ ನೃತ್ಯ ಕಲಿಯದೆ ಸಾಮಾಜಿಕ ಬಾಂಧವ್ಯಕ್ಕಾಗಿ, ಇತರ ಮಹಿಳೆಯರನ್ನು ಸೇರುವ ಸಲುವಾಗಿ, ಆರೋಗ್ಯದ ಹಂಬಲದಿಂದ ನೃತ್ಯ ಕಲಿಯತೊಡಗಿದ್ದಾರೆ.

ಪರಿಣತ ಕಲಾವಿದೆಯರಿಗೆ ಕುಟುಂಬದ-ಸಮಾಜದ ಬೆಂಬಲ ಹೆಚ್ಚಬೇಕಾಗಿದೆ. ಅವರ ಕಷ್ಟದ ಕಲಿಕೆಯ ಹಾದಿಗೆ ಮನ್ನಣೆ ದೊರೆಯಬೇಕಿದೆ. ಅದೇ ಪ್ರತಿಯೊಂದು ಮಹಿಳೆಗೆ ನೃತ್ಯ ಕಲಿಯುವ ಅವಕಾಶ ಮುಕ್ತವಾಗಿದೆ.

ಅದು ಒಂದರ್ಥದಲ್ಲಿ ಕೇವಲ ನೃತ್ಯ ಕಲಿಯುವುದಷ್ಟೇ ಆಗದೆ, ಜೀವನಕಲೆ ಕಲಿಯುವ, ಒತ್ತಡ-ಸಾಮಾಜಿಕ ಭಯದಿಂದ, ತನ್ನದೇ ದೇಹದ ಮೇಲಿನ ಕೀಳರಿಮೆಯಿಂದ  ಮುಕ್ತಳಾಗುವ ಅವಕಾಶ ಎಂಬುದನ್ನು ಪ್ರತಿ ಮಹಿಳೆ ಮನಗಾಣಬೇಕು.

ನೃತ್ಯಗಾತಿ ಮಲ್ಲಿಕಾ ಸಾರಾಭಾಯ್ ಹೇಳಿದ ಈ ಮಾತುಗಳು ಮತ್ತೆ ಮತ್ತೆ ಅನುರಣಿಸುತ್ತವೆ “ನೃತ್ಯ ಎಲ್ಲ ಅಡ್ಡಗೋಡೆಗಳನ್ನೂ ಒಡೆಯುತ್ತದೆ. ಬೇರ್‌್ಯಾವುದೂ ತಲುಪದ ಜಾಗಗಳನ್ನೂ ಅದು ಮುಟ್ಟುತ್ತದೆ. ಧೋರಣೆಗಳನ್ನು ಬದಲಿಸಲು ಕಷ್ಟಸಾಧ್ಯವಾದ ಈ ಜಗತ್ತಿನಲ್ಲಿ ನಮಗೊಂದು ಶಕ್ತಿಯುತ ಭಾಷೆ ಬೇಕು. ಅದು ‘ನೃತ್ಯಕಲೆ’! ”.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT