ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ್ತಿಸುವ ಯಂತ್ರಮಾನವ ಆಲ್ಫಾ

Last Updated 12 ಮೇ 2015, 19:30 IST
ಅಕ್ಷರ ಗಾತ್ರ

‘ಐ ಆ್ಯಮ್‌ ಆಲ್ಫಾ.. ಐ ಕ್ಯಾನ್‌ ಸಿಂಗ್‌ ಅಂಡ್‌ ಡ್ಯಾನ್ಸ್‌’ ಎಂದು ತನ್ನನ್ನು ತಾನೇ ಪರಿಚಯಿಸಿದ ಆ ರೋಬೊ‌ ಕೈಗಳನ್ನು ಮೇಲಕ್ಕೆತ್ತಿತು. ಅದರ ಕಾಲುಗಳು ಹಿಂದಕ್ಕೆ–ಮುಂದಕ್ಕೆ ಹಾಗೂ ಅತ್ತಿತ್ತ ಚಲಿಸತೊಡಗಿದವು. ಆ ಬಳಿಕ ಹಾಡಿಗೆ ತಕ್ಕಂತೆ ನೃತ್ಯ ಮಾಡಲಾರಂಭಿಸಿತು. ಅಲ್ಲಿ ಕುತೂಹಲದಿಂದ ನೆರೆದಿದ್ದವರು ರೋಬೊ ನೃತ್ಯ ವೀಕ್ಷಿಸಿ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬೀಜಿಂಗ್‌ನಲ್ಲಿ ಇತ್ತೀಚೆಗೆ ನಡೆದ ಗ್ಲೋಬಲ್‌ ಮೊಬೈಲ್‌ ಇಂಟರ್‌ನೆಟ್‌ ಕಾನ್ಫರೆನ್ಸ್‌ನಲ್ಲಿ ಪ್ರದರ್ಶನಕ್ಕಿಟ್ಟಿದ್ದ ರೋಬೊಗಳಲ್ಲಿ ಎಲ್ಲರ ಗಮನ ಸೆಳೆದದ್ದು ‘ಆಲ್ಫಾ’ ಹೆಸರಿನ ‘ಡ್ಯಾನ್ಸಿಂಗ್‌ ರೋಬೊ’. ಇದು ರೋಬೊಗಳ ಯುಗ. ವಿವಿಧ ದೇಶಗಳ ರೋಬೋಟಿಕ್‌ ತಂತ್ರಜ್ಞರು ಪರಸ್ಪರ ಸ್ಪರ್ಧೆಗೆ ಬಿದ್ದವರಂತೆ ಹೊಸ ಹೊಸ ಯಂತ್ರಮಾನವ ರನ್ನು ಸೃಷ್ಟಿಸುತ್ತಲೇ ಇದ್ದಾರೆ.

ಮನುಷ್ಯನ ಭಾವನೆಗಳನ್ನು ಗ್ರಹಿಸಬಲ್ಲ, ಮಾತು ಹಾಗೂ ಸಂಜ್ಞೆಗಳನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ವರ್ತಿಸಬಲ್ಲ ರೋಬೊಗಳನ್ನು ಈಗಾಗಲೇ ಅವತರಿಸಿವೆ. ಹಕ್ಕಿಯಂತೆ ಹಾರಬಲ್ಲ ಮತ್ತು ಮೀನಿನಂತೆ ಈಜಬಲ್ಲ ರೋಬೊಗಳೂ ಇವೆ. ಚೀನಾದ ಯುಬಿಟೆಕ್‌ (ಯೂನಿಯನ್‌ ಬ್ರದರ್‌  ಟೆಕ್ನಾಲಜಿ ಕಂಪೆನಿ) ಅಭಿವೃದ್ಧಿಪಡಿಸಿರುವ ಈ ‘ಆಲ್ಫಾ’ ರೋಬೊ ಮನುಷ್ಯನ ‘ತದ್ರೂಪಿ’ ಯಂತೆಯೇ ಇದೆ.

ನೃತ್ಯದಲ್ಲಿ ಪಳಗಿರುವ ಇದು ನೋಡುಗರಿಗೆ ಸಾಕಷ್ಟು ಮನರಂಜನೆ ನೀಡಬಲ್ಲದು. ರೋಬೊಗಳನ್ನು ಬಾಹ್ಯಾಕಾಶ, ವಿಜ್ಞಾನ ಕ್ಷೇತ್ರ, ವೈದ್ಯಕೀಯ ಮತ್ತು ಇತರ ಸಂಶೋಧನೆಗಳ ಉದ್ದೇಶದಿಂದಲೂ ಅಭಿವೃದ್ಧಿಪಡಿಸಲಾಗು ತ್ತಿದೆ.  ಮನರಂಜನೆಗಾಗಿ ರೋಬೊಗಳ ಬಳಕೆ ಹೆಚ್ಚು ನಡೆಯುತ್ತಿಲ್ಲ. ಆದರೆ ಯುಬಿಟೆಕ್‌ ಕಂಪೆನಿ ಮನರಂಜನೆ ನೀಡಬಲ್ಲ ರೋಬೊಗಳನ್ನು ಅಭಿವೃದ್ಧಿ ಪಡಿಸುವತ್ತ ಚಿತ್ತಹರಿಸಿದೆ. ‘ಆಲ್ಫಾ’ ರೋಬೊ‌ಸಹ ಅವುಗಳಲ್ಲಿ ಒಂದು.

ಈ ಪುಟ್ಟ ಯಂತ್ರ ಮಾನವ‌ಸಾಮಾನ್ಯ ಜನರ ಕೈಗೂ ದೊರೆಯುವಂತಾ ಗಬೇಕು ಎಂಬುದು ಕಂಪೆನಿಯ ಉದ್ದೇಶ. ಸುಲಭದಲ್ಲಿ ನಿಯಂತ್ರಿಸಲು ಸಾಧ್ಯವಾಗುವ ರೀತಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎನ್ನುತ್ತದೆ ಕಂಪೆನಿ. 

ಮನುಷ್ಯನಂತೆ ನಡೆಯುವ ರೋಬೊ
ಚೀನಾದಲ್ಲಿ ‘ಆಲ್ಫಾ’ ಸುದ್ದಿ ಮಾಡಿದರೆ ದೂರದ ಅಮೆರಿಕದಲ್ಲಿ ವಿಜ್ಞಾನಿಗಳು ಮತ್ತೊಂದು ಹೆಜ್ಜೆ ಮುಂದಿಟ್ಟು ಮನುಷ್ಯನಂತೆಯೇ ನಡೆದಾಡಬಲ್ಲ ರೋಬೊವನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ಸು ಕಂಡಿದ್ದಾರೆ.

ಸರಿಯಾಗಿ ಮನುಷ್ಯನಷ್ಟೇ ಎತ್ತರವಿರುವ ಎರಡು ಕಾಲುಗಳ ರೋಬೊವನ್ನು ವಾಷಿಂಗ್ಟನ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಹುಲ್ಲುಹಾಸು ಒಳಗೊಂಡತೆ ಎಲ್ಲೆಡೆಯೂ ಸಲೀಸಾಗಿ ನಡೆಯಬಲ್ಲ ಇದು, ಏರು ತಗ್ಗು ಪ್ರದೇಶಗಳಲ್ಲಿಯೂ ಸಮತೋಲ ಕಾಪಾಡಿಕೊಂಡು ಹೆಜ್ಜೆ ಹಾಕಬಲ್ಲದು.

ಮನುಷ್ಯ ನಡೆಯುವಷ್ಟೇ ವೇಗದಲ್ಲೇ ಹೆಜ್ಜೆ ಇಡಬಲ್ಲ ಈ ಯಂತ್ರ ಮಾನವ, ಗಂಟೆಗೆ ಮೂರು ಮೈಲಿಯಷ್ಟು ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಅರೆಗಾನ್‌ ಸ್ಟೇಟ್‌ ಯೂನಿವರ್ಸಿಟಿಯಲ್ಲಿ ನಡೆಸಿದ ಈ ರೋಬೊದ ‘ಪರೀಕ್ಷಾರ್ಥ ನಡಿಗೆ’ ಯಶಸ್ವಿಯಾಗಿದೆ.

ಇದರ ನಡುವೆಯೇ ಕೊರಿಯಾದ ಸೋಲ್‌ನಲ್ಲಿ ವಿಜ್ಞಾನಿಗಳ ತಂಡ ವೊಂದು ಅತ್ಯಾಧುನಿಕ ಸೆನ್ಸರ್‌ವೊಂದನ್ನು ಅಭಿವೃದ್ಧಿಪಡಿಸಿದೆ. ಮನುಷ್ಯನ ಮುಖದ ಭಾವಗಳನ್ನು ಅರ್ಥೈಸಿಕೊಳ್ಳಬಲ್ಲ ಸೆನ್ಸರ್‌ ಇದು. ರೋಬೊ‌ ಅಭಿವೃದ್ಧಿಪಡಿಸುವ ತಂತ್ರಜ್ಞರಿಗೆ ಈ ಸೆನ್ಸರ್‌ ಹೊಸ ಅವಕಾಶದ ಬಾಗಿಲು ತೆರೆಯಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಮನುಷ್ಯನ ಮುಖದಲ್ಲಿ ಉಂಟಾಗುವ ಸಣ್ಣ ಬದಲಾವಣೆಗಳನ್ನೂ ಗ್ರಹಿಸಬಲ್ಲ ಸೆನ್ಸರ್‌ ಇದಾಗಿದೆ. ಇದನ್ನು ಅಳವಡಿಸಿದ ರೋಬೊ ಮನುಷ್ಯನ ಮುಖದಲ್ಲಿ  ನಗು ಮೂಡಿದರೆ, ಕಣ್ಣು ಮಿಟುಕಿಸಿದರೆ, ಹಣೆಯಲ್ಲಿ ನೆರಿಗೆ ಮೂಡಿದರೆ ಅದನ್ನು ಗ್ರಹಿಸಬಲ್ಲದು. ಮಾತಿನ ಏರಿಳಿತವನ್ನೂ  ಗುರುತಿಸುವ ಸಾಮರ್ಥ್ಯ ಪಡೆಯಬಹುದು.

ಇದರಿಂದ ರೋಬೊಗಳು ಮನುಷ್ಯನಿಗೆ ಮತ್ತಷ್ಟು ಹತ್ತಿರವಾಗಬಲ್ಲವು. ವಿಶ್ವದ ವಿವಿಧೆಡೆಯ ರೋಬೋಟಿಕ್‌ ತಂತ್ರಜ್ಞಾನ ಕ್ಷೇತ್ರದ ಈ ಎಲ್ಲ ಬೆಳ ವಣಿಗೆಗಳನ್ನು ನೋಡಿದರೆ ರೋಬೊಗಳು ಮನುಷ್ಯನ ಬದುಕಿನ ಅವಿಭಾಜ್ಯ ಅಂಗ ಎನಿಸುವ ಕಾಲವೇನೂ ದೂರವಿಲ್ಲ ಎನಿಸುತ್ತಿದೆ! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT