ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಿಲ ಬೀಡು ಚುಂಚನಗಿರಿ

Last Updated 19 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಚುಂಚನಗಿರಿಯಲ್ಲಿ ನವ್ವಾಲೆ ಕುಣಿದಾವೊ
ನೆಲಮುಗಿಲೆಲ್ಲಾ ಬಂಗಾರ / ಭೈರುವಾ  
ಮೂಡಲುಟ್ಟಿ ಗಿರಿ ಬೆಳಗಾದೊ//
ಚುಂಚನಗಿರಿಗೂ ನವಿಲುಗಳಿಗೂ ಅನಾದಿ ನಂಟು. ಗಿರಿಯ ಬಗ್ಗೆ ಜನಪದರು ಕಟ್ಟಿರುವ ಈ ಸಾಲುಗಳಲ್ಲಿ ಚುಂಚನಗಿರಿಗೂ ನವಿಲುಗಳಿಗೂ ಇರುವ ಸಂಬಂಧ ಎಂಥದ್ದು ಎಂಬುದು ಗೊತ್ತಾಗುತ್ತದೆ. ಚುಂಚನಗಿರಿಯು ಭೈರವನ ಭಕ್ತರನ್ನು ಆಕರ್ಷಿಸಿದರೆ, ಇಲ್ಲಿನ ನವಿಲುಧಾಮ ಪ್ರಕೃತಿಪ್ರಿಯ ಪ್ರವಾಸಿಗರನ್ನು ಸೆಳೆಯುತ್ತಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಸಮೀಪದ ಆದಿಚುಂಚನಗಿರಿ ಧಾರ್ಮಿಕ ಕ್ಷೇತ್ರದ ಜತೆಗೆ ನವಿಲುಧಾಮದ ಕಾರಣದಿಂದಲೂ ಹೆಸರಾಗಿದೆ. ಆದಿಚುಂಚನಗಿರಿ ಮಠ ಲಕ್ಷಾಂತರ ವಿದ್ಯಾರ್ಥಿಗಳನ್ನು ಪೋಷಿಸುತ್ತಿದ್ದರೆ, ಚುಂಚನಗಿರಿಯ ಸುತ್ತಮುತ್ತಲಿನ ಗುಡ್ಡಗಳು ಲಕ್ಷಾಂತರ ನವಿಲುಗಳನ್ನು ಸಲಹುತ್ತಿವೆ. ಕುರುಚಲು ಗಿಡಗಳ ಬಯಲು ಹಾಗೂ ಕಲ್ಲುಗುಡ್ಡಗಳ ಚುಂಚನಗಿರಿಯ ಸುತ್ತಲಿನ ಪ್ರದೇಶ ನವಿಲುಗಳ ನೆಚ್ಚಿನ ಬೀಡು.

ಬೆಂಗಳೂರಿನಿಂದ ಸುಮಾರು 120 ಕಿ.ಮೀ. ದೂರವಿರುವ ಚುಂಚನಗಿರಿ ಕಾಲಭೈರವನ ದೇವಾಲಯದಿಂದ ಪ್ರಸಿದ್ಧಿಯಾಗಿದೆ. ಹಿಂದೆ ಚಿಕ್ಕದಾಗಿದ್ದ ಭೈರವನ ಗುಡಿ ಈಗ ಜೀರ್ಣೋದ್ಧಾರಗೊಂಡು ಬೃಹತ್ತಾಗಿದೆ. ಅಪರೂಪದ ವಿನ್ಯಾಸ ಹಾಗೂ ಕೆತ್ತನೆಗಳು ಹೊಸ ದೇವಸ್ಥಾನದ ವೈಶಿಷ್ಟ್ಯ. ಇಲ್ಲಿ ಮೂಲದೇವರ ಜತೆಗೆ ಗರ್ಭಗುಡಿಯ ಹೊರಾಂಗಣದ ಎರಡೂ ಬದಿಯಲ್ಲಿ ಎತ್ತರೆತ್ತರದ ಸಾಲು ಭೈರವರನ್ನು ಪ್ರತಿಷ್ಠಾಪಿಸಿರುವುದು ಮತ್ತೊಂದು ವಿಶೇಷ.

ಬೆಟ್ಟದ ಮುಂಭಾಗದಲ್ಲಿ ಸುಂದರವಾದ ಕಲ್ಯಾಣಿ ಇದೆ. ಮುಂದೆ ಹೋದರೆ ದೊಡ್ಡ ತೇರಿನ ಮನೆ. ಈ ತೇರನ್ನು ಭೈರವ ತಿರುಪತಿಯಿಂದ ಕದ್ದುತಂದನೆಂಬ ಕಥೆಯಿದೆ. ತಿರುಪತಿಯಲ್ಲಿ ತಿಮ್ಮಪ್ಪ ನಿದ್ದೆಗೆ ಜಾರಿದ್ದಾಗ ಭಿಕ್ಷೆಗೆ ಹೋಗಿದ್ದ ಭೈರವ ತೇರನ್ನು ಕದ್ದು ಜೋಳಿಗೆಯಲ್ಲಿ ಮುಚ್ಚಿಕೊಂಡು ಬಂದನೆಂಬುದು ಜನಪದರ ನಂಬಿಕೆ. ಚುಂಚನಗಿರಿಗೆ ಹೋದವರು ಅಪರೂಪದ ಈ ತೇರನ್ನು ನೋಡಿಯೇ ಬರಬೇಕು.

ಭೈರವನ ದೇವಾಲಯದವರೆಗೆ ದೊಡ್ಡ ಮೆಟ್ಟಿಲುಗಳ ಮೂಲಕ ಅಥವಾ ರಸ್ತೆಯ ಮೂಲಕ ತಲುಪಬಹುದು. ಅಲ್ಲಿಂದ ಮುಂದಿನ ಬೆಟ್ಟ ಹತ್ತಲು ಚಿಕ್ಕ ಮೆಟ್ಟಿಲುಗಳೇ ಮಾರ್ಗ. ಬೆಟ್ಟದ ತುದಿಯ ಕೋಡಗಲ್ಲು ತಲುಪುವುದು ಬೆಟ್ಟ ಹತ್ತುವವರ ಗುರಿ. ಮಾರ್ಗ ಮಧ್ಯೆ ಬಸವಣ್ಣನ ಗುಡಿ, ಗುಹೆಯ ಗವಿಗಂಗಾಧರ ಹಾಗೂ ಅಲ್ಲಲ್ಲಿ ಹೊಸದಾಗಿ ನಿಲ್ಲಿಸಿರುವ ಕೋಡಗಲ್ಲುಗಳು ಸಿಗುತ್ತಿವೆ.

ಬೆಟ್ಟ ಹತ್ತುತ್ತಾ ಹೋದಂತೆ ಮೆಟ್ಟಿಲುಗಳ ಗಾತ್ರ ಚಿಕ್ಕದಾಗುತ್ತದೆ. ಕೋಡಗಲ್ಲಿನ ಬಂಡೆಗೆ ಹೋಗುವ ಹೊತ್ತಿಗೆ ಮೆಟ್ಟಿಲುಗಳು ಬಹುತೇಕ ಮುಗಿದಿರುತ್ತವೆ. ಅಲ್ಲಿಂದ ಮುಂದೆ ಕಬ್ಬಿಣದ ದೊಡ್ಡ ಸರಪಳಿ ಹಿಡಿದು ಕೋಡಗಲ್ಲಿನ ಕಡೆಗೆ ತಲುಪಬೇಕು. ಕೋಡಗಲ್ಲು ತಲುಪಿ, ಅಲ್ಲಿನ ನಂದಿಗೆ ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇಂದಿಗೂ ಇದೆ.

ಧಾರ್ಮಿಕ ನಂಬಿಕೆಗಳಿಲ್ಲದವರು ಸಹ ಒಂದು ದಿನದ ಪ್ರವಾಸಕ್ಕೆಂದು ಚುಂಚನಗಿರಿಯನ್ನು ಆರಿಸಿಕೊಳ್ಳಲು ಇರುವ ಮತ್ತೊಂದು ಕಾರಣ ಇಲ್ಲಿನ ನವಿಲುಧಾಮ. ಬೆಟ್ಟದ ರಸ್ತೆಯಲ್ಲಿ ದೇವಾಲಯ ತಲುಪುವ ಮುನ್ನ ಸಿಗುವ ರಸ್ತೆಯಲ್ಲಿ ಸಾಗಿದರೆ ನವಿಲುಧಾಮ ಸಿಗುತ್ತದೆ. ಇದಲ್ಲದೆ ಬೆಳಗ್ಗೆ ಬೇಗನೆ ಬೆಟ್ಟ ಹತ್ತಿ ಬೆಟ್ಟದ ಹಿಂಭಾಗದ ಗುಡ್ಡಗಳ ಕಡೆಗೆ ಮುಖ ಮಾಡಿ ಕುಳಿತರೆ ಎಳೆಬಿಸಿಲಲ್ಲಿ ನವಿಲುಗಳು ಗರಿಬಿಚ್ಚಿ ಕುಣಿಯುವುದನ್ನು ಕಣ್ತುಂಬಿಕೊಳ್ಳಬಹುದು.

ಬೆಟ್ಟದ ಹಿಂದಿರುವ ಕಲ್ಲಿನಗುಡ್ಡಗಳ ಮೇಲೆ ನವಿಲುಗಳು ಕಾಣಿಸಿಕೊಳ್ಳುತ್ತವೆ. ‘ಕ್ಯಾಂವ್ ಕ್ಯಾಂವ್’ ಎಂದು ಕೂಗುತ್ತಾ, ಹಾರುತ್ತಾ, ಕುಣಿಯುತ್ತಾ ಸಾಗುವ ನವಿಲುಗಳನ್ನು ನೋಡುವುದೇ ಚೆಂದ. ಗರಿ ಮೂಡದ ಮರಿಗಳಿಂದ ಹಿಡಿದು ದೊಡ್ಡ ಗರಿಯ ನೆತ್ತಿಯ ಚುಂಚದ ಹೊಳೆಯುವ ದೊಡ್ಡ ನವಿಲುಗಳನ್ನೂ ಇಲ್ಲಿ ಕಣ್ತುಂಬಿಕೊಳ್ಳಬಹುದು. ನವಿಲುಗಳ ನರ್ತನದಿಂದ ಬೆಟ್ಟ ಏರಿದ ಆಯಾಸ ಇನ್ನಿಲ್ಲವಾಗುತ್ತದೆ.

ಬೆಳಿಗ್ಗೆ ಬೇಗನೆ ಹೊರಟರೆ ನವಿಲ ಕುಣಿತ, ಭೈರವನ ದರ್ಶನ ಎರಡನ್ನೂ ಮುಗಿಸಿ ಮಧ್ಯಾಹ್ನದ ವೇಳೆಗೆ ಬೆಂಗಳೂರಿಗೆ ಮರಳಬಹುದು. ಸ್ವಂತ ವಾಹನಗಳಲ್ಲಿ ಹೋಗುವವರು ಯಡಿಯೂರಿನಿಂದ ಮುಂದೆ, ಬೆಳ್ಳೂರು ಕ್ರಾಸ್‌ಗಿಂತ ಸ್ವಲ್ಪ ಹಿಂದೆ ಬಲಕ್ಕೆ ಸಿಗುವ ದಾರಿಯ ಮೂಲಕ ಚುಂಚನಗಿರಿ ತಲುಪಬಹುದು. ಹಾಸನದ ಕಡೆಗೆ ಹೋಗುವ ಬಸ್‌ಗಳೆಲ್ಲ ಬೆಳ್ಳೂರು ಕ್ರಾಸ್‌ನಲ್ಲಿ ನಿಲ್ಲುವುದರಿಂದ ಬಸ್ ಮೂಲಕವೂ ಹೋಗಿ ಬರಬಹುದು. ಬೆಳ್ಳೂರು ಕ್ರಾಸ್‌ನಿಂದ ಮಾಯಸಂದ್ರ ಹಾಗೂ ತುಮಕೂರು ಕಡೆಗೆ ಹೋಗುವ ಬಸ್ಗಳೆಲ್ಲಾ ಚುಂಚನಗಿರಿಯ ಮೂಲಕವೇ ಹೋಗಬೇಕು. ಹೀಗಾಗಿ ಬಸ್ ತೊಂದರೆ ಇಲ್ಲ.

ಚುಂಚನಗಿರಿ ಬೆಟ್ಟ ಸುತ್ತಾಡಿದ ಬಳಿಕ ಇನ್ನೂ ಸಾಕಷ್ಟು ಸಮಯವಿದೆ ಎಂದಾದರೆ ಬೆಳ್ಳೂರಿಗೆ ಹೋಗಿ ಕನ್ನಡದ ಕಣ್ವ ಬಿಎಂಶ್ರೀ ಅವರ ಮನೆಯನ್ನು ನೋಡಿಕೊಂಡು ಬರಬಹುದು. ಶ್ರೀ ಅವರ ಹಳೆಯ ಮನೆ ಈಗ ಸ್ಮಾರಕ ಭವನವಾಗಿದೆ. ಬೆಳ್ಳೂರಿಗೆ ಹೋದಮೇಲೆ ಶ್ರೀ ಅವರ ಮನೆಯ ಸಮೀಪವೇ ಇರುವ ಹಳೆಯದಾದ, ಅಪರೂಪದ ಕುಸುರಿ ಕೆತ್ತನೆಯ ಮಾಧವರಾಯ ದೇವಾಲಯವೂ ನಿಮ್ಮನ್ನು ಸೆಳೆಯದೆ ಇರಲಾರದು.

ಹೀಗೆ ತಲುಪಿ..
ಬೆಂಗಳೂರಿನಿಂದ ಹೊರಟು ನೆಲಮಂಗಲ ಕ್ರಾಸ್ ಬಳಿ ಎಡ ತಿರುವು ಪಡೆದು ಕುಣಿಗಲ್, ಯಡಿಯೂರು ಮಾರ್ಗವಾಗಿ ಸಾಗಿ ಬೆಳ್ಳೂರು ಕ್ರಾಸ್‌ನಲ್ಲಿ ಬಲಕ್ಕೆ ತಿರುಗಿ ಬೆಳ್ಳೂರು ಮಾರ್ಗವಾಗಿ ಆದಿಚುಂಚನಗಿರಿ ತಲುಪಬಹುದು. ಯಡಿಯೂರಿನಿಂದ ಮಾಯಸಂದ್ರಕ್ಕೆ ಹೋಗಿ ಅಲ್ಲಿಂದಲೂ ಗಿರಿಗೆ ಹೋಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT