ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀಕರಣದಿಂದ ವಂಚಿತ ಕಾಲುವೆ!

ಹುಣಸಗಿ ಸಮೀಪದ 10 ಕಿ. ಮೀ ಡಿ.7 ವಿತರಣಾ ಕಾಲುವೆ ; ರೈತರಲ್ಲಿ ಆತಂಕ
Last Updated 24 ಮೇ 2016, 9:39 IST
ಅಕ್ಷರ ಗಾತ್ರ

ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆ ನವೀಕರಣ ಕಳೆದ ನಾಲ್ಕು ವರ್ಷಗಳಿಂದ ನಡೆದಿದ್ದರೂ ಸಹ  ಅತ್ಯಂತ ಹೆಚ್ಚು ಪ್ರದೇಶಕ್ಕೆ ನೀರು ಒದಗಿಸುವ ಡಿ.7 ವಿತರಣಾ ಕಾಲುವೆ ನವೀಕರಣದಿಂದ ವಂಚಿತವಾಗಿದೆ.

ಕೇಂದ್ರದ ಇಆರ್ಎಂ ಯೋಜನೆಯಡಿಯಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಎಡದಂಡೆ ಮುಖ್ಯ ಕಾಲುವೆ ಮತ್ತು ಇದರ ಅಡಿಯಲ್ಲಿ ಬರುವ ವಿತರಣಾ ಕಾಲುವೆಗಳ ನವೀಕರಣ ಈಗಾಗಲೇ ಮುಕ್ತಾಯ ಹಂತಕ್ಕೆ ತಲುಪಿದೆ.

ಆದರೆ, ಡಿ.7 ವಿತರಣಾ ಕಾಲುವೆ ಮಾತ್ರ ಆರಂಭದಿಂದ 10 ಕಿ.ಮೀ. ವರೆಗೆ ನವೀಕರಣದಿಂದ ವಂಚಿತಗೊಂಡಿದೆ. ಇದರಿಂದಾಗಿ ಕಾಲುವೆ ಕೊನೆಯ ಭಾಗದ ತಮ್ಮ ಜಮೀನುಗಳಿಗೆ ನೀರು ಒದಗಿಸುವುದು ಸಾಧ್ಯವಾಗುವಲ್ಲಿ ಕಷ್ಟ ಎಂಬ ಮಾತುಗಳು ರೈತರಿಂದ ಕೇಳಿ ಬರುತ್ತಿವೆ.

ಈ ಕಾಲುವೆಯು ಕೃಷ್ಣಾ ಭಾಗ್ಯಜಲ ನಿಗಮದ 7ನೇ ಉಪ ವಿಭಾಗದ ಅಡಿಯಲ್ಲಿ ಬರುತ್ತಿದ್ದು, ಅಂದಾಜು 10 ಕಿ.ಮೀ. ವರೆಗಿನ ಕಾರ್ಯ ಇಲ್ಲಿಯವರೆಗೂ ಆರಂಭವಾಗಿಲ್ಲ. ಈ ಕಾಲುವೆಯು ಕಲ್ಲು ಅಣಿಯಲ್ಲಿ ಕಟ್ಟಿಂಗ್ ಆಗಿದ್ದರಿಂದಾಗಿ ಇಲ್ಲಿ ನವೀಕರಣ ಕಾಮಗಾರಿಗೆ ತೋಡಕುಂಟಾಗಿದೆ ಎಂಬ ಮಾತುಗಳು ಅಧಿಕಾರಿಗಳ ವಲಯದಿಂದ ಕೇಳಿ ಬಂದಿದೆ.

24 ಕಿ.ಮೀ ಉದ್ದದ ಈ ಕಾಲುವೆ ವಜ್ಜಲ, ಚನ್ನೂರ, ಕಲ್ಲದೇವನಹಳ್ಳಿ, ಕಚಕನೂರ, ಹೆಬ್ಬಾಳ, ಸೇರಿದಂತೆ ಇತರೆ ಗ್ರಾಮಗಳ  4ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ನೀರು ಒದಗಿಸಬೇಕು. ಸದ್ಯ ಸುಮಾರು 2ಸಾವಿರ ಎಕರೆ ಪ್ರದೇಶದಷ್ಟು ಮಾತ್ರ ನೀರಾವರಿಯಿಂದ ವಂಚಿತವಾಗಿದೆ.

ಈ ಕಾಲುವೆ ನವೀಕರಣ ಮಾಡಿ ಎತ್ತರ ಹೆಚ್ಚಿಸಿದಲ್ಲಿ ಕಾಲುವೆ ನೀರು ವಂಚಿತ ರೈತರಿಗೂ ನೀರು ಒದಗಿಸಬಹುದಾಗಿದೆ ಎನ್ನುತ್ತಾರೆ ವಜ್ಜಲದ ರೈತರಾದ ನಾನಾಗೌಡ ಪಾಟೀಲ. ಈಗಲೇ ನವೀಕರಣವಾಗದೇ ಹೋದಲ್ಲಿ ಮತ್ತೆ ಈ ಕಾಲುವೆ ದುರಸ್ತಿಗಾಗಿ ಮತ್ತೆ ಎರಡು ದಶಕಗಳ ಕಾಲ ಕಾಯಬೇಕಾಗುತ್ತದೆ ಎಂದು ಹೆಬ್ಬಾಳ ಗ್ರಾಮದ ವೆಂಕಟೇಶ ಹೇಳುತ್ತಾರೆ.

ಈ ಕುರಿತು ಗುತ್ತಿಗೆದಾರನ್ನು ವಿಚಾರಿಸಿದಾಗ ಡಿ 7 ವಿತರಣಾ ಕಾಲುವೆಯ ಬಂಡೆ (ಹಾರ್ಡ್ ರಾಕ್‌) ಇರುವ 10 ಕಿ.ಮೀ ಟೆಂಡರ್‌ ಪ್ರಕ್ರಿಯೆಯಲ್ಲಿ ಬಂದಿರುವುದಿಲ್ಲ. ಆದ್ದರಿಂದ ಈ ಬಂಡೆ (ಹಾರ್ಡ್‌ ರಾಕ್) ಇರುವ ಪ್ರದೇಶದಲ್ಲಿ ಕಾಲುವೆ ನವೀಕರಣ ಸದ್ಯ ನಡೆಯುವುದಿಲ್ಲ ಎನ್ನುತ್ತಾರೆ.

ಆರಂಭದ ಹಂತದಲ್ಲಿ ಕಾಲುವೆಯನ್ನು ಸರಿಯಾಗಿ ಮಾಡದೇ ಇದ್ದಲ್ಲಿ ಕೊನೆಯ ಭಾಗದ ರೈತರ ಜಮೀನುಗಳಿಗೆ ಹೇಗೆ ಸಮರ್ಪಕವಾಗಿ ನೀರು ಒದಗಿಸಲು ಸಾಧ್ಯವಾಗುತ್ತದೆ. ಅಲ್ಲದೇ ಎಲ್ಲ ಕಾಲುವೆ ಜಾಲದ ದುರಸ್ತಿ ಗೊಳಿಸಿ ಡಿ.7 ಮಾತ್ರ ನವೀಕರಣ ಮಾಡದೇ ಇರುವದು ಎಷ್ಟು ಸರಿ ಎಂದು ಪ್ರಗತಿಪರ ರೈತರಾದ ರುದ್ರಗೌಡ ಗುಳಬಾಳ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಅಧಿಕಾರಿಗಳು ಆಸಕ್ತಿ ವಹಿಸಿ ಡಿ–7 ವಿತರಣಾ ಕಾಲುವೆಯ ಅಂದಾಜು ಪತ್ರಿಕೆ ಸಿದ್ಧಗೊಳಿಸಿ, ಅನುಮೋದನೆ ಪಡೆದು ಕೆಲಸ ಆರಂಭಿಸಲಿ. ಇಲ್ಲದಿದ್ದಲ್ಲಿ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ ಎಂದು ರೈತರಾದ ಮಲ್ಲನಗೌಡ ಮೇಟಿ, ರಾಮನಗೌಡ ಪೊಲೀಸ್‌ಪಾಟೀಲ ಮತ್ತಿತರು ತಿಳಿಸಿದ್ದಾರೆ.

ಕಾರ್ಯನಿರ್ವಾಹಕ ಎಂಜಿನಿಯರ್‌ ಎಚ್‌.ಟಾಟಾ ಶಿವನ್‌ ಮಾತನಾಡಿ, ‘ಈ ಮೊದಲು ಡಿ.7 ವಿತರಣಾ ಕಾಲುವೆ ಹಾರ್ಡ್‌ ರಾಕ್ ಪ್ರದೇಶದಲ್ಲಿ ಕಾಲುವೆ ಗಟ್ಟಿಯಾಗಿದ್ದರಿಂದ ನಿರ್ವಹಿಸಿರಲಿಲ್ಲ. ಆದರೆ, ತಜ್ಞರ ಸಲಹೆಯಂತೆ ಪ್ರಸ್ತಾವ ತಯಾರಿಸಿ ಕಳಿಸಿ ಕೊಡಲಾಗುತ್ತಿದೆ ಎಂದರು.

** *** **
ಡಿ.7 ಕಾಲುವೆಯ ನವೀಕರಣವನ್ನು ಸಾಧ್ಯವಾದಷ್ಟು ಬೇಗ ಆರಂಭಿಸಲಾಗುವುದು. ಈಗಾಗಲೇ ಕ್ರಿಯಾ ಯೋಜನೆ ತಯಾರಿಸಲಾಗಿದ್ದು, ಮುಂದಿನ ಟಿಎಸಿ ಸಭೆಯಲ್ಲಿ ಈ ಕುರಿತು ನಿರ್ಣಯಿಸಲಾಗುತ್ತದೆ.
-ಎಚ್‌. ಟಾಟಾ ಶಿವನ್‌,
ಕಾರ್ಯನಿರ್ವಾಹಕ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT