ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೆಂಬರ್‌ನಿಂದ ಜಾತಿ ಆಧಾರಿತ ಜನಗಣತಿ

Last Updated 24 ಅಕ್ಟೋಬರ್ 2014, 19:42 IST
ಅಕ್ಷರ ಗಾತ್ರ

ಬೆಂಗಳೂರು: ಬಹುನಿರೀಕ್ಷಿತ ಜಾತಿ ಆಧಾರಿತ ಜನಗಣತಿ ಕಾರ್ಯವು ರಾಜ್ಯದಾದ್ಯಂತ ಮುಂದಿನ ತಿಂಗಳ ಎರಡನೇ ವಾರದಲ್ಲಿ ಆರಂಭವಾಗಲಿದೆ.

‘ದೇಶದಲ್ಲಿ 1931ರ ನಂತರ ನಡೆಯುತ್ತಿರುವ ಮೊದಲ ಸಮಗ್ರ ಜಾತಿ ಆಧಾರಿತ ಜನಗಣತಿ ಇದಾಗಿದೆ.  ರಾಜ್ಯದ 6.30 ಕೋಟಿ ಜನರು ಈ ಗಣತಿಯ ವ್ಯಾಪ್ತಿಗೆ ಒಳಪಡಲಿದ್ದಾರೆ’ ಎಂದು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಎಚ್.ಕಾಂತರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇತ್ತೀಚೆಗಷ್ಟೇ ತೆಲಂಗಾಣ ಮತ್ತು ಸೀಮಾಂಧ್ರ­ದಲ್ಲಿ ಇದೇ ರೀತಿಯ ಜಾತಿ ಜನಗಣತಿ ನಡೆಸಲಾಗಿದೆ. ನಾವು ಈ ಸರ್ವೇ ಕಾರ್ಯವನ್ನು ಖುದ್ದಾಗಿ ವೀಕ್ಷಿಸಿ ಬಂದಿದ್ದೇವೆ. ಆದರೆ ಕರ್ನಾಟಕ ಇವರೆಲ್ಲರಿಗಿಂತಲೂ ಸಮಗ್ರವಾದ ಗಣತಿ ಕಾರ್ಯವನ್ನು ನಡೆಸುತ್ತಿ­ರುವುದು ವಿಶೇಷ’ ಎಂದು ಅವರು ಹೇಳಿದ್ದಾರೆ.

ಎಲ್ಲ ವಿವರಗಳ ಕಲೆ: ಪೈಲಟ್‌ಯೋಜನೆಯ ಅಂದಾಜಿ­ನಂತೆ ಪ್ರತಿ ಕುಟುಂಬಕ್ಕೆ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಕನಿಷ್ಠ 45 ನಿಮಿಷ ತಗಲುವುದು. ಮೊದಲಿಗೆ  ಮನೆಯ ವಿಳಾಸ, ಮನೆ ಇರುವ ಭೌಗೋಳಿಕ ಸ್ಥಿತಿಗತಿ, ಕುಟುಂಬದವರ ವೈಯಕ್ತಿಕ ವಿವರ, ಶೈಕ್ಷಣಿಕ ಮಟ್ಟ, ಕುಟುಂಬದ ಸದಸ್ಯರ ಉದ್ಯೋಗಗಳ ವಿವರ, ಮಾತೃಭಾಷೆ, ಮದುವೆಯಾ­ದವರಿದ್ದರೆ ಯಾವಾಗ ಮದುವೆ ಆದದ್ದು? ಯಾರಾ­­ದರೂ ಮತಾಂತರಗೊಂಡವರು ಇದ್ದಾರೆಯೇ? ಸದಸ್ಯರು ಶಿಕ್ಷಣವನ್ನು ಅಪೂರ್ಣಗೊಳಿಸಿದ್ದರೆ ಅದಕ್ಕೆ ಕಾರಣಗಳೇನು? ವ್ಯಾಪಾರ, ಉದ್ದಿಮೆ ನಡೆಸುತ್ತಿದ್ದರೆ ಅವುಗಳ ಅಂಕಿ ಅಂಶ, ವಲಸೆ ಬಂದಿದ್ದರೆ ಅದರ ವಿವರ, ಕೃಷಿ ಜಮೀನಿನ ವಿವರ, ಕುಡಿಯುವ ನೀರಿನ ಮೂಲ ಹೇಗೆ ? ವಿದ್ಯುತ್ ಸೌಕರ್ಯಕ್ಕೆ ಹೊಂದಿರುವ ಆಶ್ರಯ ಏನು... ಎಂಬಿತ್ಯಾದಿ ವಿವರಗಳನ್ನೂ ಗಣತಿ­ಯಲ್ಲಿ ದಾಖಲಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ನಿರಾಶ್ರಿತರೂ ಪರಿಗಣನೆಗೆ: ‘ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ 1.25 ಕೋಟಿ ಮನೆಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಪ್ರತಿ ಕುಟುಂಬದಲ್ಲಿ ಐವರು ಸದಸ್ಯರು ಇರಬಹುದೆಂಬ ಆಧಾರದಲ್ಲಿ ಈ ಊಹೆ ಮಾಡಲಾಗಿದೆ. ಆದರೆ ಮನೆ ಇಲ್ಲದವರನ್ನೂ ಗುರುತಿಸುವುದು ಈ ಗಣತಿಯ ಮುಖ್ಯ ಉದ್ದೇಶಗಳಲ್ಲಿ ಒಂದು. ಬಸ್, ರೈಲ್ವೆ ನಿಲ್ದಾಣ, ಮಾರುಕಟ್ಟೆ... ಹೀಗೆ ನಿರಾಶ್ರಿತರು, ಅಲೆಮಾರಿಗಳು ಎಲ್ಲೆಲ್ಲಿ ಇರುತ್ತಾರೋ ಅಲ್ಲೆಲ್ಲಾ ಸಿಬ್ಬಂದಿ ಸರ್ವೇ ಕಾರ್ಯ ನಡೆಸಲಿದ್ದಾರೆೆ. ಅಂಥವರ ವಿವರಗಳನ್ನೂ ಕಲೆ ಹಾಕಲಿದ್ದಾರೆ.

ಯಾರಾದರೂ ಜನಪ್ರತಿನಿಧಿಗಳು ಇದ್ದಾರೆಯೇ ಅಥವಾ ಇದ್ದರೇ?: ‘ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಆಯಾಮಗಳನ್ನೂ ಈ ಗಣತಿಯಲ್ಲಿ ಪ್ರಮುಖವಾಗಿ ಪರಿಗಣಿಸಲಾಗುತ್ತಿದೆ. ವಿಶೇಷವಾಗಿ ಕುಟುಂಬದ ಸದಸ್ಯರು ಯಾರಾದರೂ ಈ ಹಿಂದೆ ಜನಪ್ರತಿನಿಧಿ­ಗಳಾಗಿದ್ದರೇ ಹೇಗೆ ಎಂಬುದನ್ನು  ದಾಖ­ಲಿ­ಸಿ­ಕೊಳ್ಳ­ಲಾಗುವುದು. ಅತ್ಯಂತ ಕಡಿಮೆ ಸಂಖ್ಯೆ­ಯುಳ್ಳ ಜನರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ಅಂಕಿ ಅಂಶ ನೆರವಿಗೆ ಬರಲಿದೆ’ ಎಂಬುದು ಎಚ್. ಕಾಂತರಾಜ್‌ ಅವರ ಅನಿಸಿಕೆ.

‘ಪ್ರತಿ ಕುಟುಂಬವೂ ಸಿಬ್ಬಂದಿ ಕೇಳುವ ಎಲ್ಲ ವಿವರಗಳನ್ನು ಪುರುಸೊತ್ತು ಮಾಡಿಕೊಂಡು ಒದಗಿಸಬೇಕು. ಇದರಿಂದ ಸರ್ಕಾರಿ ಉದ್ಯೋಗ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿನ ಮೀಸಲಾತಿ ವಿವರಗಳ ಸಮಗ್ರ ಚಿತ್ರಣ ದೊರೆಯಲಿದೆ. ಮಾಧ್ಯಮಗಳೂ ನಮ್ಮ ಪ್ರಯತ್ನಕ್ಕೆ ಮುಕ್ತ ಸಹಾಯ ಹಸ್ತ ಚಾಚಬೇಕು’ ಎಂದು ಅವರು ಕೋರಿದರು.

ರೂ 117 ಕೋಟಿ: 83 ವರ್ಷಗಳ ನಂತರ ದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಈ ಗಣತಿ ಕಾರ್ಯಕ್ಕೆ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ರೂ 117 ಕೋಟಿ  ತೆಗೆದಿರಿಸಿದೆ. ಸದ್ಯದ ದಾಖಲೆಗಳ ಅನುಸಾರ ರಾಜ್ಯದಲ್ಲಿ 1076 ಜಾತಿಗಳಿವೆ.

‘ಶಿಕ್ಷಕರನ್ನು ಬಳಸಿಕೊಳ್ಳುವುದಿಲ್ಲ’
‘2011ರ ಜನಗಣತಿಯ ಆಧಾರದಲ್ಲಿ ಕರ್ನಾಟಕದ ಜನಸಂಖ್ಯೆ 6.11 ಕೋಟಿ. ಈಗ ಅದು 6.30 ಕೋಟಿ ತಲುಪಿರಬಹುದು. ಇಷ್ಟೂ ಜನರ ಜಾತಿ ಆಧಾರಿತ ಜನಗಣತಿ ನಡೆಸಲು 1.25 ಲಕ್ಷ  ಸಿಬ್ಬಂದಿ ಅಗತ್ಯವಿದೆ. ಇದಕ್ಕಾಗಿ ಸರ್ಕಾರಿ ನೌಕರರನ್ನೇ ಬಳಸಿಕೊಳ್ಳಲಾಗುವುದು. ಆದರೆ ಈ ಬಾರಿ ಶಿಕ್ಷಕರನ್ನು ಬಳಸಿಕೊಳ್ಳ­ಬಾ­ರದು ಎಂದು ನಿರ್ಧರಿಸಲಾಗಿದೆ. ಶಿಕ್ಷಣ ಹಕ್ಕು ಕಾಯ್ದೆ ಅಡಿ ಮಕ್ಕಳ ಶಿಕ್ಷಣಕ್ಕೆ ಯಾವುದೇ ವ್ಯತ್ಯಯ ಆಗಬಾರದು ಎಂಬುದೇ ನಮ್ಮ ಉದ್ದೇಶ’ ಎಂದು ಆಯೋಗದ ಅಧ್ಯಕ್ಷರು ತಿಳಿಸಿದ್ದಾರೆ.

‘ಸಿಬ್ಬಂದಿ ಕೊರತೆ ಕಂಡು ಬಂದರೆ ನಿರುದ್ಯೋಗಿ ಪದವೀಧರರನ್ನು ಗಣತಿ ಕಾರ್ಯಕ್ಕೆ ಪರಿಗಣಿಸಲಾಗುವುದು. ಸೂಕ್ತ ತರಬೇತಿ ನೀಡಿ ಅವರನ್ನು ಬಳಸಿಕೊಳ್ಳುವ ಚಿಂತನೆ ಇದೆ. ಅವರಿಗೆ ತಕ್ಕ ಗೌರವಧನವನ್ನೂ ನೀಡಲಾಗುವುದು. ಹಾಗೊಂದು ವೇಳೆ ಪೂರ್ಣ ಪ್ರಮಾಣದ ಸಿಬ್ಬಂದಿ ದೊರೆಯದೇ ಹೋದರೆ ಎರಡು ಹಂತದಲ್ಲಿ ಈ ಗಣತಿ ಕಾರ್ಯ ನಡೆಯಲಿದೆ. 2 ತಿಂಗಳಿನಲ್ಲಿ ಈ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ಕಾಂತರಾಜ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT