ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಸುಕಿನಲ್ಲೂ ನಡೆದ ವಿಚಾರಣೆ

ಸುಪ್ರೀಂಕೋರ್ಟ್‌ ಇತಿಹಾಸದಲ್ಲಿ ಅಪರೂಪದ ಪ್ರಕರಣ
Last Updated 30 ಜುಲೈ 2015, 19:34 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಯಾಕೂಬ್‌ ಗಲ್ಲು ಶಿಕ್ಷೆ ಜಾರಿ ತಡೆಗೆ  ಬುಧವಾರ ರಾತ್ರಿ ಇಡೀ  ಆತನ ವಕೀಲರು ಕಸರತ್ತು ನಡೆಸಿದರು. ಅಪರಾಧಿಯ ಅರ್ಜಿಯನ್ನು ತಡರಾತ್ರಿಯಿಂದ ಬೆಳಗಿನ ಜಾವದವರೆಗೆ ವಿಚಾರಣೆ ನಡೆಸಿದ ಅಪರೂಪದ ಪ್ರಕರಣಕ್ಕೆ ‘ಸುಪ್ರೀಂ’ ಸಾಕ್ಷಿಯಾಯಿತು.

ಗಲ್ಲುಶಿಕ್ಷೆಗೆ ಗುರಿಯಾದ ಅಪರಾಧಿಗೆ  ತನ್ನ ಮನವಿಯನ್ನು ತಿರಸ್ಕರಿಸಿ ಕೋರ್ಟ್‌ ನೀಡಿದ ಆದೇಶವನ್ನು ಪ್ರಶ್ನಿಸುವುದಕ್ಕೆ ಅವಕಾಶ ನೀಡಬೇಕು. ಇದಕ್ಕಾಗಿ ಆತನ ಗಲ್ಲು ಶಿಕ್ಷೆ ಜಾರಿಯನ್ನು  14 ದಿನಗಳ ವರೆಗೆ ತಡೆಹಿಡಿಯಬೇಕೆಂದು ಮನವಿ ಮಾಡಿಕೊಳ್ಳುವುದಕ್ಕಾಗಿ ಯಾಕೂಬ್‌ ಪರವಾಗಿ   ವಕೀಲ ಪ್ರಶಾಂತ್‌ ಭೂಷಣ್‌ ಹಾಗೂ ಮೂವರು ಹಿರಿಯ ವಕೀಲರು ರಾತ್ರೋರಾತ್ರಿ ಮುಖ್ಯ ನ್ಯಾಯಮೂರ್ತಿ ಎಚ್‌.ಎಲ್‌.ದತ್ತು ನಿವಾಸಕ್ಕೆ ತೆರಳಿದರು.   ತುರ್ತಾಗಿ ಅರ್ಜಿ ವಿಚಾರಣೆ ನಡೆಸುವಂತೆ ಕೋರಿಕೊಂಡರು.

ಸಾಕಷ್ಟು ಸಮಾಲೋಚನೆ ಬಳಿಕ ದತ್ತು ಅವರು ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದಲ್ಲಿ ತ್ರಿಸದಸ್ಯ ಪೀಠ ರಚಿಸಿದರು. ಕೋರ್ಟ್‌ ಕೊಠಡಿ ಸಂಖ್ಯೆ 4ರಲ್ಲಿ ನಸುಕಿನ 3.20ರ ಸಮಯದಲ್ಲಿ ವಿಚಾರಣೆ ಶುರುವಾಗಿ ಬೆಳಿಗ್ಗೆ 4.50ಕ್ಕೆ ಪೂರ್ಣಗೊಂಡಿತು. 
‘ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿ ರಾಷ್ಟ್ರಪತಿ ನೀಡಿದ ಆದೇಶವನ್ನು ಪ್ರಶ್ನಿಸುವುದಕ್ಕೆ ಯಾಕೂಬ್‌ಗೆ ಅವಕಾಶ ನೀಡದೇ ಅಧಿಕಾರಿಗಳು ಆತನನ್ನು ಗಲ್ಲಿಗೇರಿಸುವುದಕ್ಕೆ ದೃಢಸಂಕಲ್ಪ ಮಾಡಿದ್ದಾರೆ’ ಎಂದು  ಮೆಮನ್‌ ಪರ ಹಿರಿಯ ವಕೀಲರಾದ ಆನಂದ್‌ ಗ್ರೋವರ್‌ ಹಾಗೂ ಯುಗ್‌ ಚೌಧರಿ  ವಾದಿಸಿದರು.

ಯಾಕೂಬ್‌  ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ, ‘ಯಾಕೂಬ್‌ ಮತ್ತೆ ಅರ್ಜಿ ಸಲ್ಲಿಸಿ ನ್ಯಾಯಾಂಗವನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ’ ಎಂದರು. ‘ಇಡೀ ಪ್ರಯತ್ನವು ಯಾಕೂಬ್‌ ಶಿಕ್ಷೆಯನ್ನು  ಜೀವಾವಧಿಗೆ ಇಳಿಸುವ ಪ್ರಯತ್ನವಾಗಿದೆ.  ಹತ್ತು ತಾಸುಗಳ ಹಿಂದೆಯಷ್ಟೇ ತ್ರಿಸದಸ್ಯ ಪೀಠ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿದಿದೆ. ಈಗ ಅದನ್ನು ವಜಾ ಮಾಡಲು ಸಾಧ್ಯವಿಲ್ಲ’ ಎಂದು ರೋಹಟಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT