ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗವೇಣಿಯಾಗುವ ದಾರಿ...

ಚೆಲುವಿನ ಚಿತ್ತಾರ
Last Updated 19 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ನೀಳ ಕೇಶ ರಾಶಿ ಎನ್ನುವುದು ಹೆಣ್ಣಿನ ಸಹಜ ಸೌಂದರ್ಯದ ಭಾಗ. ನಮ್ಮ ಪುರಾಣ ಕಾವ್ಯಗಳಿಂದ ಹಿಡಿದು ಇಂದಿನ ಯುವ ಕವಿಪುಂಗವರಿಗೂ ಹೆಣ್ಣಿನ ಕೇಶರಾಶಿ ಸ್ಫೂರ್ತಿಯ ಸೆಲೆ. ಹೆಣ್ಣಿನ ದೇಹಕ್ಕೊಂದು ವಿಶೇಷ ಮೆರುಗು ನೀಡುವ ಕೂದಲು, ಹಲವು ಕಾರಣಗಳಿಗೆ ಅವಳ ಕೀಳರಿಮೆಗೆ ಕಾರಣವಾಗುವುದೂ ಇದೆ.

ಗಿಡ್ಡ ಕೂದಲು, ಒರಟೊರಟು, ಸೀಳುಕೂದಲು, ಕೂದಲು ಉದುರುವಿಕೆ ಹೀಗೆ ಅವಳ ಕೀಳರಿಮೆಗೆ ಕಾರಣಗಳು ಹಲವು.
ಈ ಸಮಸ್ಯೆಗಳ ಪರಿಹಾರಕ್ಕಾಗಿ ಯಾವ್ಯಾವುದೋ ಔಷಧ, ಪೋಷಣೆಗಳ ಮೊರೆಹೋಗುವ ಸ್ತ್ರೀಯರ ಸಂಖ್ಯೆಯೇನೂ ಕಮ್ಮಿಯಿಲ್ಲ. ಆದರೆ ದಿನದ ಸಾಮಾನ್ಯ ಆಹಾರ ಸೇವನೆಯಲ್ಲಿಯೇ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರ ಮೂಲಕ ಸೊಂಪಾದ ಕೂದಲನ್ನು ಬೆಳೆಸಿಕೊಳ್ಳಬಹುದು ಎನ್ನುವುದು ಬಹುತೇಕ ಮಹಿಳೆಯರಿಗೆ ತಿಳಿದೇ ಇಲ್ಲ.

ಇತ್ತೀಚೆಗೆ ಪ್ರಸಿದ್ಧ ಲೈಫ್‌ಸ್ಟೈಲ್‌ ಜಾಲತಾಣವೊಂದು ಕೂದಲ ಆರೈಕೆಗೆ ಸಂಬಂಧಿಸಿದಂತೆ ಕೆಲವು ಸೂಚನೆಗಳ ವರದಿಯನ್ನು ಬಿಡುಗಡೆ ಮಾಡಿದೆ. ದಿನನಿತ್ಯದ ಆಹಾರದಲ್ಲಿಯೇ ಅಳವಡಿಸಿಕೊಳ್ಳಲಾಗುವ ಈ ಸಲಹೆಗಳನ್ನು ನೀವೂ ಒಮ್ಮೆ ಪ್ರಯತ್ನಿಸಿ ನೋಡಬಹುದು.
‘ಕೂದಲ ಬೆಳವಣಿಗೆ ಮತ್ತು ಆರೋಗ್ಯಕ್ಕೂ ನಾವು ಸೇವಿಸುವ ಆಹಾರಕ್ಕೂ ನೇರ ಸಂಬಂಧವಿದೆ. ಪ್ರೊಟೀನ್‌, ವಿಟಮಿನ್‌, ಮತ್ತು ಕಬ್ಬಿಣದ ಅಂಶ ಹೆಚ್ಚಾಗಿರುವ ಆಹಾರವನ್ನು ಸೇವಿಸುವುದರಿಂದ ನಿಮ್ಮ ಕೂದಲು ದಟ್ಟವಾಗುವುದಲ್ಲದೆ ಹೊಳಪು ಹೆಚ್ಚುತ್ತದೆ’ ಎನ್ನುವುದು ಆ ವರದಿಯಲ್ಲಿ ವ್ಯಕ್ತವಾದ ಅಭಿಪ್ರಾಯ.

ಮೀನು
ಸಾಲ್ಮನ್‌, ಹಾಲಿಬೇಟ್‌ ಜಾತಿಯ ಮೀನುಗಳು ಪ್ರೊಟೀನ್‌ನ ಉತ್ತಮ ಆಗರಗಳು. ಪ್ರೊಟೀನ್‌ ಅಷ್ಟೇ ಅಲ್ಲದೇ ಈ ಮೀನುಗಳಲ್ಲಿ ಕೊಬ್ಬು, ವಿಟಮಿನ್‌ ಬಿ ಮತ್ತು ಕಬ್ಬಿಣದ ಅಂಶಗಳು ಸಾಕಷ್ಟಿರುತ್ತವೆ. ಇವು ಕೂದಲಿನ ಬೆಳವಣಿಗೆಗೆ ತುಂಬಾ ಉಪಯುಕ್ತ.

ಹಸಿರು ಎಲೆ ತರಕಾರಿಗಳು
ಹಸಿರು ಎಲೆಯ ತರಕಾರಿಗಳು ಕೂಡ ಎ ಮತ್ತು ಸಿ ವಿಟಮಿನ್‌ನ ಅತ್ಯುತ್ತಮ ಮೂಲಗಳು. ಇವುಗಳಲ್ಲಿ ತಲೆಕೂದಲ ಬೆಳವಣಿಗೆಗೆ ನೆರವಾಗುವ ಕಬ್ಬಿಣ ಮತ್ತು ಕ್ಯಾಲ್ಸಿಯಂನ ಅಂಶಗಳು ದಟ್ಟವಾಗಿರುತ್ತವೆ. ಶುದ್ಧ ಸಸ್ಯಹಾರಿಗಳಿಗೆ ಇದು ಹೇಳಿ ಮಾಡಿಸಿದ ಆಹಾರ. ಅಲ್ಲದೇ ಇವುಗಳಲ್ಲಿನ ಕಬ್ಬಿಣದ ಅಂಶ ತಲೆಕೂದಲೂ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿನ ರಕ್ತಕಣಗಳಿಗೆ ಆಕ್ಸಿಜನ್‌ ಪೂರೈಕೆಗೂ ಸಹಾಯಕವಾಗುತ್ತದೆ. ಕೋಸುಗಡ್ಡೆ, ಪಾಲಕ್‌ ಮತ್ತು ಲೆಟಿಸ್ ಇವೇ ಮೊದಲಾದ ಹಸಿರು ಎಲೆ ತರಕಾರಿಗಳನ್ನು ಊಟದಲ್ಲಿ ಬಳಸುವುದು ಉಪಯುಕ್ತ.

ಬೀನ್ಸ್
ಬೀನ್ಸ್‌ ಮತ್ತು ಲೆಂಟಿಲ್‌ ಕೂಡ ಸಸ್ಯಹಾರಿಗಳಿಗೆ ಉತ್ತಮ ಪೌಷ್ಟಿಕ ಮೂಲ. ಅಲ್ಲದೇ ಬಯೋಟಿನ್, ಸತು, ಮತ್ತು ಕಬ್ಬಿಣದ ಸತ್ವಗಳೂ ಇವುಗಳಲ್ಲಿ ಸಾಕಷ್ಟಿರುತ್ತವೆ. ಈ ಎಲ್ಲ ಅಂಶಗಳೂ ಕೂದಲ ಬೆಳವಣಿಗೆಯಷ್ಟೇ ಅಲ್ಲ ಆರೋಗ್ಯಕರವಾದ ಕೂದಲ ನಿರ್ವಹಣೆಯಲ್ಲಿಯೂ ಅವಶ್ಯಕ ಅಂಶಗಳು. ಕಿಡ್ನಿ ಬೀನ್ಸ್‌, ಬ್ಲ್ಯಾಕ್‌ ಬೀನ್ಸ್‌, ಬಟಾಣಿ, ಪಿಂಕ್‌ ಲೆಂಟಿನ್‌ಗಳನ್ನು ಸಾಧ್ಯವಾದಷ್ಟೂ ಊಟದಲ್ಲಿ ಬಳಸಿ.

ಹಣ್ಣುಗಳು
ತಲೆಕೂದಲನ್ನು ಸುಸ್ಥಿತಿಯಲ್ಲಿಡಲು ತಾಜಾಹಣ್ಣುಗಳ ಸೇವನೆ ಅತಿ ಅವಶ್ಯ. ಅದರಲ್ಲಿಯೂ ಕಿತ್ತಳೆ, ಕೂದಲ ಪೋಷಣೆಗೆ ಹೇಳಿ ಮಾಡಿಸಿದ ಹಣ್ಣು. ಲಿಂಬು, ಮೂಸಂಬಿ, ದ್ರಾಕ್ಷಿ, ಸ್ಟ್ರಾಬೆರ್ರಿ ಇವೆಲ್ಲವೂ ಕೂದಲ ಬೆಳವಣಿಗೆಗೆ ಅವಶ್ಯವಾದ ವಿಟಮಿನ್‌ ಎ, ಸಿ, ಇ ಗಳನ್ನು ಹೊಂದಿರುತ್ತವೆ.

ಮೊಟ್ಟೆಗಳು
ಮೊಟ್ಟೆಯಿಂದ ಆಗುವ ಉಪಯೋಗಗಳು ಹಲವು. ಕೂದಲ ಆರೈಕೆಯಲ್ಲಂತೂ ಇದಕ್ಕೆ ವಿಶೇಷ ಸ್ಥಾನವಿದೆ. ಇದರಲ್ಲಿನ ಪ್ರೊಟೀನ್‌, ಕಬ್ಬಿಣದ ಅಂಶ, ಸೆಲೆನಿಯಂ, ಸಲ್ಫರ್‌ ಅಂಶಗಳು ಕೇಶರಾಶಿಯ ಬೆಳವಣಿಗೆಯ ಭಾಗಕ್ಕೆ ಆಕ್ಸಿಜನ್‌ ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಈ ಎಲ್ಲ ಆಹಾರಗಳ ಸೇವನೆಯ ಹೊರತಾಗಿಯೂ ಅಧಿಕ ಪ್ರಮಾಣದಲ್ಲಿ ನೀರು ಸೇವಿಸುವುದು ಅವಶ್ಯ. ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಿದಂತೆ ಕೂದಲ ಉದುರುವಿಕೆಗೆ ಕಾರಣವಾಗುವ ಹಾನಿಕಾರಕ ಟಾಕ್ಸಿನ್‌ ಅಂಶಗಳನ್ನು ಹೊರಹಾಕುತ್ತದೆ. ಅಲ್ಲದೇ ತೇವಾಂಶದ ಪ್ರಮಾಣವನ್ನು ಸಮಸ್ಥಿತಿಯಲ್ಲಿಡುತ್ತದೆ.

ಕೂದಲ ಬಗೆಗಿನ ಕೀಳರಿಮೆಯನ್ನು ತೊರೆದು ಈ ಮೇಲಿನ ಅಂಶಗಳನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡು ನೋಡಿ. ಅಚ್ಚರಿಯ ಫಲಿತಾಂಶ ನಿಮ್ಮದಾಗುತ್ತದೆ ಎಂದು ಸಂಶೋಧನೆಯ ವರದಿ ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT