ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕವಾಗಿ ನಲಿಯಿತು ವೀರಗಾಸೆ

ರಂಗಭೂಮಿ
Last Updated 24 ಜನವರಿ 2016, 19:30 IST
ಅಕ್ಷರ ಗಾತ್ರ

‘ಮತ್ಸರ’ ಯಾರ ಮಧ್ಯೆ ಬೇಕಾದರೂ ಉಂಟಾಗಬಹುದು. ಆದರೆ ‘ಸವತಿ ಮತ್ಸರ’ ಲೋಕ ಪ್ರಸಿದ್ಧವಾದುದು. ಅಲ್ಲೋಲ ಕಲ್ಲೋಲ ಉಂಟು ಮಾಡುವ ಶಕ್ತಿ ಅದಕ್ಕಿದೆ! ಗಂಗೆ-ಗೌರಿ ‘ಸವತಿ ಮತ್ಸರ’ ಅಂತಹದೊಂದು ಉತ್ತಮ ಉದಾಹರಣೆ.

ಶಿವನ ಪತ್ನಿಯರಾದ ಈ ಅಕ್ಕತಂಗಿಯರ ಸವತಿ ಮತ್ಸರವನ್ನು ನಮ್ಮ ಜಾನಪದ ಕಲಾವಿದರು ಕತೆಯಾಗಿ, ಕಾವ್ಯವಾಗಿ ಕಟ್ಟಿ ಜನಮಾನಸದಲ್ಲಿ ನೆಲೆಗೊಳಿಸಿದ್ದಾರೆ. ದೊಂಬಿದಾಸರು ಹಾಡಿದ್ದಾರೆ. ವೀರಗಾಸೆ ಕುಣಿತ ಸೊಗಸಾದ ನಾಟ್ಯವಾಗಿಸಿದೆ.

ದೊಂಬಿದಾಸರ ಸಾಹಿತ್ಯವನ್ನು ಕಥಾವಸ್ತುವಾಗಿಸಿ, ವೀರಗಾಸೆಯ ‘ಫಾರ್ಮ್’ಅನ್ನು (ನಿರೂಪಣೆಯ ತಂತ್ರವಿಧಾನ) ಆಧುನಿಕ ರಂಗತಂತ್ರದಲ್ಲಿ ಅಳವಡಿಸಿ ಸಾದರಪಡಿಸಿದ ನಾಟಕ ‘ವೀರಗಾಸೆ- ನೀರ ಒಡಪು’. ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ವಿದ್ಯಾರ್ಥಿಗಳು ಕಲಾಗ್ರಾಮದ ಬಿದಿರುಮೆಳೆ ಬಯಲು ರಂಗಮಂದಿರದಲ್ಲಿ ಈ ನಾಟಕದ ಯಶಸ್ವಿ ಪ್ರಯೋಗವನ್ನು ಇತ್ತೀಚೆಗೆ ನೀಡಿದರು.

ವಸ್ತುವಿನಲ್ಲಿ ಸಮಕಾಲೀನ ಸಂವೇದನೆಯನ್ನು ಶೋಧಿಸಿ, ಫಾರ್ಮ್‌ನ ಏಕತಾನತೆ ಒಡೆಯುತ್ತ ಲವಲವಿಕೆಯಿಂದ ಕಟ್ಟಿಕೊಟ್ಟ ಈ ನಾಟಕ ಭರಪೂರ ಮನರಂಜನೆ ನೀಡಿತು. ರಾಜ್ಯಗಳ ಮಧ್ಯೆ ಉಂಟಾಗಿರುವ ನದಿ ನೀರು ವಿವಾದಗಳಿಗೆ ಪರಿಹಾರೋಪಾಯಗಳನ್ನೂ ಸೂಚಿಸಿತು. ಮೂರು ಪ್ರಕಾರಗಳನ್ನು (ದೊಂಬಿದಾಸರು, ವೀರಗಾಸೆ, ಆಧುನಿಕ ರಂಗತಂತ್ರ) ಹೀಗೆ ಸಮಾಳ (ಸಮ್ಮೇಳ)ಗೊಳಿಸಿ ರಸಪಾಕವಾಗಿಸಿದವರು ದೇಸೀ ಶೈಲಿಗೆ ರಾಷ್ಟ್ರಮಟ್ಟದಲ್ಲಿ ಹೆಸರಾಗಿರುವ ಗೋಪಾಲಕೃಷ್ಣ ನಾಯರಿ ಅವರು.

ಸಮಾಳ ವಾದ್ಯ ಈ ನಾಟಕದ ಕೇಂದ್ರ ಪಾತ್ರವಾದರೆ; ವೀರಗಾಸೆ ಕುಣಿದ ಪುರವಂತರು ಈ ನಾಟಕದ ಇತರ ಪ್ರಮುಖ ಪಾತ್ರಗಳು. ಒಂದೂ ಒಂದೂವರೆ ಗಂಟೆ ಸತತವಾಗಿ ಸಮಾಳ ನುಡಿಸುತ್ತ ನಾಟಕದ ಟೆಂಪೊವನ್ನು ಕ್ಲೈಮ್ಯಾಕ್ಸ್‌ವರೆಗೆ ಕೊಂಡೊಯ್ದವರೆಂದರೆ ಹರಪನಹಳ್ಳಿ ಎಂ.ಮಾರುತಿ. ನಾಯರಿ ಅವರ ಪರಿಕಲ್ಪನೆಗೆ ವೀರಗಾಸೆ ಕುಣಿತವನ್ನು ಜೋಡಿಸುವ ಜತೆಗೆ ಸಹ ನಿರ್ದೇಶನದ ಹೊಣೆಹೊತ್ತವರು ಮೆಳೆಹಳ್ಳಿ ದೇವರಾಜ್.

ಈ ನಾಟಕದ ಪಾತ್ರಧಾರಿಗಳು ರಾಷ್ಟ್ರೀಯ ನಾಟಕ ಶಾಲೆ ವಿದ್ಯಾರ್ಥಿಗಳು. ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಂದ ಪ್ರವೇಶ ಪಡೆದ ವಿವಿಧ ಭಾಷಿಕರು ಇಲ್ಲಿದ್ದಾರೆ. ಕನ್ನಡದಲ್ಲಿ ಸಂಭಾಷಣೆ ಹೇಳುವುದನ್ನು ಹಾಗೂ ವೀರಗಾಸೆ ಕುಣಿತವನ್ನು ದೇವರಾಜ್ ಹಾಗೂ ನಾಯರಿ ಹೇಳಿಕೊಟ್ಟಿದ್ದಾರೆ.

ಗಂಗೆ ಗೌರಿಯರ ಜಗಳದೊಂದಿಗೆ ನಾಟಕ ಶುರುವಾಗುತ್ತದೆ. ಉನ್ನತ ಕುಲದ ಗೌರಿ ಬೆಸ್ತರ ಗಂಗೆಯನ್ನು ಜರಿದು ಮಾತನಾಡುತ್ತಾಳೆ. ‘ನನ್ನ ಮುದಿಗಂಡನ್ನ ಬಂದು ಕೂಡ್ದೆಯಲ್ಲೆ.. ಆಹಾ.. ಏನು ನೋಡಿ ತಂದನೋ ಆ ಮುದಿ ಶಿವ ನಿನ್ನನ್ನ.. ಕರ್ರೆಂಬ ಕಾಗೆ ತಂದವ್ನೆ.. ಉಚ್ಚಳ್ಳ ರಾಗಿ ತಂದವ್ನೆ..’

‘ಕಪ್ಪು ಅಂತ ನನ್ನನ್ನ ಜರೀಬೇಡ ಅಕ್ಕ.. ಕರೀಮಣಿ ಕರಿಯಲ್ಲವಾ.. ಬಾಚಿರೋ ಬೈತಲೆ ಕರಿಯಲ್ಲವಾ.. ಎಂದು ಗಂಗೆ ಪರಿಪರಿಯಾಗಿ ಬೇಡಿಕೊಂಡರೂ ಗೌರಿಯ ಆಟಾಟೋಪ ನಿಲ್ಲುವುದಿಲ್ಲ. ಗಂಗೆಯನ್ನು ಹೊಡೆಯಲು ಹೋಗಿ ಗೌರಿ ಮುಟ್ಟಿನ ಸೂತಕಕ್ಕೆ ಒಳಗಾಗುತ್ತಾಳೆ. ತೊಳೆದು ಸರಿಪಡಿಸಿಕೊಳ್ಳಬೇಕೆನ್ನುವ ಹೊತ್ತಿಗೆ ಇಡೀ ಲೋಕದಿಂದ ಗಂಗೆ ನೀರನ್ನು ಮಾಯ ಮಾಡಿಬಿಡುತ್ತಾಳೆ.

ಮಗ ವೀರಣ್ಣ (ವೀರಭದ್ರ)ನನ್ನು ಕರೆದ ಗೌರಿ, ಎಲ್ಲಿಯಾದರೂ ನೀರು ತರುವಂತೆ ಆಜ್ಞಾಪಿಸುತ್ತಾಳೆ. ಅವರಿವರ ಮನೆ, ನದಿ ಸರೋವರ, ಗುಹೆ ಗುಹ್ವರ, ಕಾಶಿ ಎಲ್ಲಿ ಹುಡುಕಿದರೂ ವೀರಣ್ಣನಿಗೆ ನೀರು ಸಿಗುವುದಿಲ್ಲ. ಕೊನೆಗೆ ಕೈಲಾಸಕ್ಕೆ ಹೋಗಿ (ನರಪೇತಲ) ಶಿವನನ್ನೇ ಕರೆತರುತ್ತಾನೆ. (ಇಬ್ಬರು ಹೆಂಡಿರ ಕಾಟದಿಂದ ಶಿವ ಹೀಗೆ ಕಾಣಿಸಿರಬಹುದೆ..?!)

ಗಂಗೆಯ ಶಪಥದ ಎದುರು ಶಿವ ಅಸಹಾಯಕ. ಶಿವನು ಗೌರಿಗಾಗಿ ಹಾಲು, ಜೇನು, ತುಪ್ಪದ ಮಳೆಗರೆಸುತ್ತಾನೆ. ಅದಾವುದೂ ನೀರಿಗೆ ಸಮವಾಗುವುದಿಲ್ಲ. ನೀರು ಕೊಡು ಎಂದು ಆ ಪ್ರತ್ಯಕ್ಷ ಶಿವನೂ ಗಂಗೆಯ ಬಳಿ ಅಧಿಕಾರಯುತವಾಗಿ ಕೇಳಲಾರ! ನಿಮ್ಮ ಜಗಳ ನೀವೇ ಪರಿಹರಿಸಿಕೊಳ್ಳಿ ಎಂದು ಶಿವ ಪಲಾಯನ ಮಾಡಿಬಿಡುತ್ತಾನೆ!

ಶಿವನನ್ನ ನನಗೆ ಬಿಟ್ಟುಕೊಡು ನೀರು ಕೊಡ್ತೇನೆ ಅಂತಾಳೆ ಗಂಗೆ. ಸಾಧ್ಯವಿಲ್ಲ ಎನ್ನುತ್ತಾಳೆ ಗೌರಿ. ಪ್ರವಾಹ ಉಂಟಾಗಿ ಲೋಕವೇ ಅಲ್ಲೋಲ ಕಲ್ಲೋಲ ಆಗುತ್ತದೆ. ಗಂಗೆಯ ಬಳಿ ಕ್ಷಮೆ ಕೋರುವ ಹೊರತಾಗಿ ಮತ್ತಾವ ದಾರಿಯೂ ಉಳಿದಿರುವುದಿಲ್ಲ. ಸಮಾನ ಅವಕಾಶ ಆಧರಿಸಿದ ಮಾತುಕತೆಯಿಂದ ಎಲ್ಲ ಕಷ್ಟಗಳೂ ಬಗೆಹರಿಯುತ್ತವೆ. ರಾಜ್ಯಗಳ ಮಧ್ಯೆ ಉಂಟಾಗಿರುವ ವಿವಾದಕ್ಕೆ ಮಾತುಕತೆಯೊಂದೇ ಪರಿಹಾರ ಎಂಬುದನ್ನೂ ಕತೆ ಸೂಚಿಸುತ್ತದೆ. ಕತೆಯ ಮೂಲಕ್ಕೆ ಚ್ಯುತಿ ತಾರದೆ, ಎಲ್ಲೂ ಬದಲಾಯಿಸದೆ ಹೊರಡಿಸಿರುವ ಅರ್ಥ ಇದು.

ಪುರವಂತರಾಗಿ ಗಂಡು, ಹೆಣ್ಣು ಇಬ್ಬರೂ ನಟಿಸಿದ್ದಾರೆ. ಈ ಪುರವಂತರನ್ನೇ ನಾಟಕದ ಪರದೆ ಪರಿಕರ(ಯವನಿಕ)ಗಳಾಗಿ ಬಳಸಿಕೊಂಡಿರುವ ಕ್ರಮ ಅನನ್ಯವಾಗಿದೆ. ಪಾತ್ರಗಳ ಪ್ರವೇಶ, ನಿಷ್ಕೃಮಣದ ಹಾದಿ ತೋರಿಸುವವರೂ ಇವರೇ. ವೀರಗಾಸೆಯ ಏಕತಾನತೆಗೆ ಪರ್ಯಾಯ ರೂಪಿಸುವವರೂ ಇವರೇ. ಆರ್ಭಟದ (ಆರಭಟಿ) ಸಂಭಾಷಣೆಯನ್ನೂ ಈ ರೀತಿಯ ರಂಗವಿನ್ಯಾಸ ಸಮತೋಲನ ಗೊಳಿಸಿದೆ.

ವೀರಗಾಸೆ ಕುಣಿತದಲ್ಲೇ ಹೀಗೊಂದು ನಾಟಕವನ್ನು ಕಟ್ಟಿರುವ ಕ್ರಮ ವಿನೂತನವಾಗಿದೆ. ಸಂಸ್ಕೃತ ಅದರಲ್ಲೂ ಭಾಸನ ನಾಟಕಗಳನ್ನು ದೇಸೀ ಶೈಲಿಯಲ್ಲಿ ಅನನ್ಯವಾಗಿ ಕಟ್ಟಿಕೊಟ್ಟಿರುವ ಗೋಪಾಲಕೃಷ್ಣ ನಾಯರಿ ಅವರಿಗೆ ಜಾನಪದ ಪ್ರಕಾರದಲ್ಲೇ ಹೀಗೆ ಮುರಿದು ಕಟ್ಟುವುದೆಂದರೆ ತೀರಾ ಸಲೀಸು. ನೋಡಲು, ಕೇಳಲು ಹಿತಕರ. ಪುರವಂತರ ಕುಣಿತ, ಸಂಭಾಷಣೆ ಆಲಿಸುತ್ತಿದ್ದರೆ ನೋಡುಗರು ಎದ್ದು ನಿಂತು ಅವರೊಂದಿಗೆ ಹೆಜ್ಜೆ ಹಾಕಬೇಕು ಎನಿಸುವಷ್ಟು ಸೊಗಸಾಗಿತ್ತು. ಪ್ರೇಕ್ಷಕರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಕಲಾತ್ಮಕ ಜಾದು ಇದು.

ರಾಮಕೃಷ್ಣ ಬೆಳತೂರು, ನಾಗಾರ್ಜುನ, ಪ್ರಸಾಧನದ ಹೊಣೆ ಹೊತ್ತಿದ್ದರೆ, ವಸ್ತ್ರಾಲಂಕಾರ ಮಾಡಿದವರು ದಾಕ್ಷಾಯಿಣಿ ಭಟ್. ಬೆಳಕಿನ ವಿನ್ಯಾಸ ವಿನಯ್ ಚವಾಣ, ರಂಗಸಜ್ಜಿಕೆ ಶಂಕರ್ ಅವರದು. ಗೌರಿಯಾಗಿ ಕೆ.ಸುಷ್ಮಾ, ಗಂಗೆಯಾಗಿ ತಮಿಳುನಾಡಿನ ಮೆಲೋಡಿ ಡಾರ್ಕಸ್, ವೀರಭದ್ರನಾಗಿ ಗೋಕುಲ್, ಗಣಪತಿಯಾಗಿ ಆಂಧ್ರಪ್ರದೇಶದ ವಿಷ್ಣುಪ್ರಸಾದ್ ನಟಿಸಿದ್ದಾರೆ, ವೀರಗಾಸೆ ಕುಣಿದಿದ್ದಾರೆ. ಇಬ್ಬರು ಹೆಂಡಿರ ಕಾಟದಲ್ಲಿ ನಲುಗುವ ಶಿವನಾಗಿ ಪಾಂಡಿಚೆರಿಯ ಕಂದನಾದನ್ ನಟನೆ ನೈಜವಾಗಿತ್ತು. ಸೂತ್ರಧಾರನಾಗಿ ನಟಿಸಿದ ರಮೇಶ ಬಡಿಗೇರ ಮತ್ತು ಕಂದನಾದನ್ ಅವರು ಪ್ರಸಾಧನದಲ್ಲೂ ಕೈಜೋಡಿಸಿದ್ದರು.

ನಾಗಾರ್ಜುನ, ಸಲ್ಲಪಲ್ಲಿ ಪ್ರಣದೀಪ್, ಗಿರೀಶ್, ತೇಜಸ್, ಎಸ್‌.ಕೆ.ಚೈತ್ರ, ಜಯಸುಧಾ, ಕೀರ್ತಿರಾಜ್, ಗೋಲಿರಾಮು, ಮಂಜುನಾಥ್, ಮಾರ್ತಾಂಡನ್ ಅವರ ಪುರವಂತಿಕೆ ಕುಣಿತ ಸಮರ್ಥವಾಗಿತ್ತು. ಇಂತಹದೊಂದು ವಿಭಿನ್ನ ಪ್ರಯೋಗಕ್ಕೆ ಅವಕಾಶ ನೀಡಿದ ರಾಷ್ಟ್ರೀಯ ನಾಟಕ ಶಾಲೆಯ ಮುಖ್ಯಸ್ಥ ಸಿ.ಬಸವಲಿಂಗಯ್ಯ ಅಭಿನಂದನಾರ್ಹರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT