ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನಾವತಿ ಆಯೋಗದ ಅಂತಿಮ ವರದಿ ಸಲ್ಲಿಕೆ

Last Updated 18 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಗಾಂಧಿನಗರ (ಪಿಟಿಐ): ಗುಜರಾತ್‌ನ  ಗೋಧ್ರಾದಲ್ಲಿ ೨೦೦೨ರಲ್ಲಿ ನಡೆದ ರೈಲು ದುರಂತ ಹಾಗೂ ಅದಕ್ಕೆ ಪ್ರತೀಕಾರವಾಗಿ ನಡೆದ ಕೋಮು ಗಲಭೆಗಳ ತನಿಖೆಗೆ ನೇಮಿಸಲಾಗಿದ್ದ ನ್ಯಾ.ನಾನಾವತಿ ಆಯೋಗವು ಮುಖ್ಯ­ಮಂತ್ರಿ ಆನಂದಿ­ಬೆನ್‌್ ಪಟೇಲ್‌್ ಅವರಿಗೆ ಮಂಗಳವಾರ ಕೊನೆಗೂ ಅಂತಿಮ ವರದಿ ಸಲ್ಲಿಸಿದೆ.

ಈ ಗಲಭೆ ನಡೆದು ೧೨ ವರ್ಷಗಳ ಬಳಿಕ ಅಂತಿಮ ವರದಿ ಸಲ್ಲಿಕೆ­ಯಾ­ಗಿದೆ. ತನಿಖೆ ಪೂರ್ಣಗೊಳಿಸಲು ಆಯೋಗದ ಅವಧಿ­ಯನ್ನು ೨೪ ಬಾರಿ ವಿಸ್ತರಿಸ­ಲಾಗಿತ್ತು. ‘೨,೦೦೦ ಪುಟಗಳ ಅಂತಿಮ ವರದಿ ಸಲ್ಲಿಸಿದ್ದೇವೆ’ ಎಂದು ಸುದ್ದಿಸಂಸ್ಥೆಗೆ ತಿಳಿಸಿ­ರುವ ಆಯೋಗದ ಅಧ್ಯಕ್ಷ ನ್ಯಾ. ಜಿ.ಟಿ.ನಾನಾವತಿ, ವರದಿಯಲ್ಲಿ ಏನಿದೆ ಎನ್ನುವುದನ್ನು ಬಹಿರಂಗಪಡಿಸಿಲ್ಲ.

೨೦೦೨ರ ಫೆಬ್ರುವರಿ ೨೭ರ ರೈಲು ದುರಂತಕ್ಕೆ ಪ್ರತೀಕಾರವಾಗಿ ನಡೆದ    ಗಲಭೆಯಲ್ಲಿ ಅಲ್ಪಸಂಖ್ಯಾತ ಸಮುದಾ­ಯದ ಸಾವಿ­ರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ರೈಲು ದುರಂತದಲ್ಲಿ ೫೯ ಮಂದಿ ಸಾವನ್ನಪ್ಪಿದ್ದರು.   ಗೋಧ್ರಾ ರೈಲು ದುರಂತ ಹಾಗೂ ಆ ಬಳಿಕ ನಡೆದ ಗಲಭೆ ಪ್ರಕರಣಗಳನ್ನು ತನಿಖೆಗೆ ಒಳಪಡಿಸಲು ಗುಜರಾತ್‌್ ಸರ್ಕಾರ ೨೦೦೨ರ ಮಾರ್ಚ್‌್ ೩ರಂದು  ಈ ಆಯೋಗ ರಚಿಸಿತ್ತು. ನ್ಯಾ.ಕೆ.ಜಿ.­ಷಾ ಇದರ ಸದಸ್ಯರಾಗಿ­ದ್ದರು.

ಅದೇ ವರ್ಷ ಮೇ ತಿಂಗಳಿನಲ್ಲಿ ಜಿ.ಟಿ.­­ನಾನಾವತಿ ಅವರನ್ನು ಆಯೋ­ಗದ ಅಧ್ಯಕ್ಷ­ರ­ನ್ನಾಗಿ ಸರ್ಕಾರ ನೇಮಕ ಮಾಡಿತು. ಆರಂಭದಲ್ಲಿ, ಸಬರಮತಿ ಎಕ್ಸ್‌­ಪ್ರೆಸ್‌್ ರೈಲಿನ ಎಸ್‌್–೬ ಬೋಗಿಯಲ್ಲಿ ಸಂಭವಿ­ಸಿದ ಅಗ್ನಿ ದುರಂತಕ್ಕೆ ಕಾರಣ­ವಾದ ಅಂಶಗಳು, ಸನ್ನಿವೇಶ ಹಾಗೂ ಘಟನಾ­ವಳಿಗಳನ್ನು ತನಿಖೆಗೆ ಒಳ­ಪಡಿಸು­ವಂತೆ ಆಯೋಗಕ್ಕೆ ಸೂಚಿಸ­ಲಾಗಿತ್ತು.  ನಂತರ­ದಲ್ಲಿ ವಿಚಾರಣೆಗೆ ಸೂಚಿಸ­­ಲಾದ ವಿಷಯಗಳನ್ನು (ಟಿಒಆರ್‌) ತಿದ್ದುಪಡಿ ಮಾಡ­­ಲಾಯಿತು. ರೈಲು ದುರಂತದ ಬಳಿಕ ನಡೆದ ಗಲಭೆ ಪ್ರಕರಣ­ವನ್ನೂ ತನಿಖೆಗೆ ಒಳಪಡಿಸು­ವಂತೆ ಆಯೋಗಕ್ಕೆ ಸೂಚಿಸಲಾಯಿತು.

೨೦೦೮ರಲ್ಲಿ ಕೆ.ಜಿ.ಷಾ ಮೃತಪಟ್ಟ ಕಾರಣ ಹೈಕೋರ್ಟ್‌್ ನಿವೃತ್ತ ನ್ಯಾಯ­ಮೂರ್ತಿ ಅಕ್ಷಯ್‌್ ಮೆಹ್ತಾ ಅವರನ್ನು ಆಯೋಗಕ್ಕೆ ನೇಮಕ ಮಾಡಲಾಯಿತು. ಆಯೋಗಕ್ಕೆ ನೀಡಲಾಗಿದ್ದ ‘ಟಿಒಆರ್‌’ ಅನ್ನು ೨೦೦೪ರಲ್ಲಿ ತಿದ್ದುಪಡಿ ಮಾಡಿ ಗೋಧ್ರಾ ರೈಲು ದುರಂತ ಮತ್ತು ನಂತರದ ಗಲಭೆಯಲ್ಲಿ  ಅಂದಿನ ಗುಜ­ರಾತ್‌್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಅವರ ಸಂಪುಟದ ಇತರ ಸಚಿವರು ಅಥವಾ ಯಾವುದೇ ಅಧಿ­ಕಾರಿಗಳ ಕೈವಾಡ ಇದೆಯೇ ಎನ್ನು­ವುದನ್ನು ವಿಚಾರಣೆ ಮಾಡು­ವಂತೆಯೂ ಸೂಚಿಸ­ಲಾಗಿತ್ತು.

ಗೋಧ್ರಾ ರೈಲು ದುರಂತದ ಬಗ್ಗೆ  ೨೦೦೮ರಲ್ಲಿ ಆಯೋಗವು ೧೬೮ ಪುಟಗಳ ಮೊದಲ ವರದಿ ಸಲ್ಲಿಸಿತ್ತು. ಗೋಧ್ರಾ ರೈಲು ನಿಲ್ದಾ­ಣದ ಬಳಿ ಸಬರಮತಿ ಎಕ್ಸ್‌­ಪ್ರೆಸ್‌್ ರೈಲಿನ ಎಸ್‌್–೬ ಬೋಗಿಯಲ್ಲಿ ಸಂಭವಿಸಿದ ಅಗ್ನಿ ದುರಂತವು ‘ವ್ಯವಸ್ಥಿತ ಪಿತೂರಿ’ ಎಂದು ವರದಿಯಲ್ಲಿ ಹೇಳಲಾಗಿತ್ತು.

ಆಯೋಗವು ಸುಮಾರು ೪೬,೫೦೦ ದಾಖಲೆಗಳು, ಹಲವು ಪ್ರಮಾಣ­ಪತ್ರಗಳು, ಅಧಿಕಾರಿಗಳ ಮತ್ತು ಸಾರ್ವಜನಿಕರ ಹೇಳಿಕೆಗಳನ್ನು  ಪಡೆದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT