ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಮತ್ತು ನಿರಂತರತೆ

Last Updated 30 ಜನವರಿ 2015, 19:30 IST
ಅಕ್ಷರ ಗಾತ್ರ

ತಲಿಮ್ಯಾಲೆ ಆಕಾಶನೇ ಉದುರಿ ಬಿದ್ದಂಗ ಗಪ್ಪನ ಕುಂತಿದ್ದೆ. ಬಳಗದವರ ಹಠಾತ್ ಮರಣದ ಅಂತ್ಯಕ್ರಿಯೆಯಲ್ಲಿಯೂ ಭಾಗವಹಿಸಲಾಗಿರಲಿಲ್ಲ. ಕೊನೇಪಕ್ಷ ದಿವಸಕ್ಕಾದರೂ ಆ ದೂರದ ಊರಿಗೆ ಹೋಗೋಣವೆಂದರೆ ಶನಿವಾರ, ಭಾನುವಾರ ಸೇರಿ ಆ ಮೀಟಿಂಗ್ ನಡೆದಿತ್ತು. ಆ ಚಿಂತ್ಯಾಗ ಕುಂತಿದ್ದೆ. ‘ಅಲ್ಲಾ ಭಾನುವಾರ ರಜಾನೂ ಸಿಗಲಿಲ್ಲ. ಮನೆಗೆ ಹೋದ ಕೂಡಲೇ ನನ್ನ ಹೆಂಡ್ತಿಯಾದರೂ ಕೇಳುವಾಕಿ ಇದ್ದಾಳ. ನಿಮಗ ಆ ಭಾಗ್ಯಾನೂ ಇಲ್ಲ. ನಿಮ್ಮನ್ನ ನೋಡಿದ್ರ ಅಯ್ಯೋ ಅನಿಸುತ್ತೆ’ ಎಂದು ಮಗ್ಗಲು ಕುಳಿತು ಶುರುವಿಟ್ಟುಕೊಂಡವರ ಬಾಯಲ್ಲಿ ಇಂಥ ಮಾತುಗಳಲ್ಲದೆ ಇನ್ನೇನು ಬರಲು ಸಾಧ್ಯ?

ವಿರಾಮದ ದಿನ ಕಳೆಯೋದು ಹೇಗೆ? ಒಬ್ಬೊಬ್ಬರದೂ ಒಂದೊಂದು ರೀತಿಯ ಆಲೋಚನೆಗಳು. ನನ್ನ ಪಾಲಿಗೆ ರಜೆ ಸಜೆನೂ ಅಲ್ಲ, ಮಜಾನೂ ಅಲ್ಲ, ಅಥವಾ ನಾನು ಹಾಗೆ ಒಪ್ಪಿಕೊಂಡಿದ್ದೇನೆಯೋ ಅರ್ಥವಾಗ್ತಾ ಇಲ್ಲ. ಒಂಥರಾ ನಿರ್ಲಿಪ್ತ ಸ್ಥಿತಿ. ರಜಾನೇ ಬೇಡ ಎನ್ನುವವಳಿಗೆ ಇನ್ನೆಲ್ಲಿಯ ಮಜಾ?

ಖಾಲಿ ಕುಂತ್ರ ಸಾಕು ಗಂವನ ತಲೆ ತಿನ್ನೋ ವಿಚಾರಗಳು, ಅವು ತಂದೊಡ್ಡುವ ಮಾನಸಿಕ ಆಘಾತಗಳು... ಇವೆಲ್ಲವುಗಳಿಂದ ನಾನು ವಿಮುಖಳಾಗಲೇಬೇಕಿತ್ತು. ಅದು ವಿರಾಮದ ಸದುಪಯೋಗ. ಕೆಲಸ ಯಾವುದಾದರೂ ಸೈ, ಅದರಿಂದ ದೇಹಕ್ಕೆ, ಮನಸ್ಸಿಗೆ ಹಿತವಾಗಿರಬೇಕು. ರಾತ್ರಿ ಆರಾಮವಾಗಿ ಚಿಂತೆಯಿಲ್ಲದೆ ನಿದ್ದೆ ಬರುವಂತೆ ಮಾಡುವುದು ಮೊದಲ ಆದ್ಯತೆಯಾಗಿತ್ತು.

ಒಂಟಿ ಧ್ವನಿ ಗಟ್ಟಿ ಧ್ವನಿಯಾಗಬೇಕಿತ್ತು. ‘ಅಯ್ಯೋ ಪಾಪ’ ಹೀಗಾಗಬಾರದಿತ್ತು ಎಂದೆನ್ನುವ ಅನುಕಂಪದವರಿಂದ, ‘ಅವರೇನು ಉಣ್ಣುದು ಬಿಟ್ಟಾರ, ತೊಡೋದು ಬಿಟ್ಟಾರ? ಸತ್ತವರ ಬಾಯಲ್ಲಿ ಮಾತ್ರ ಮಣ್ಣು ಇವರಿಗೇನಾಗೈತಿ ತಿಂದುಂಡು ಸುಖವಾಗಿ ಅದಾರ’ ಇಂಥವರ ಚುಚ್ಚು ಮಾತನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಸೃಜನಶೀಲವಾಗಿ ಬೆಳೆಯಲು ನಿರಂತರ ಕೆಲಸದಲ್ಲಿ ತೊಡಗಿಸಿಕೊಂಡೆ. ಎಲ್ಲಾ ಕೆಲಸ ಯಾಕ ಮೈಮೇಲೆ ಎಳಕೊತೀರಿ? ಎಂದು ಆಪ್ತರು ಕೇಳುತ್ತಿದ್ದರು. ಪಾಪ..! ಅವರಿಗೇನು ಗೊತ್ತು ಇಲ್ಲದವರ ಪಾಡು?
‘ಈ ವಯಸ್ಸಿನಲ್ಲಿ ಹೀಗ ಆಯ್ತು ಅಂತ ನೊಂದುಕೋಬ್ಯಾಡ ಈ ಲೋಕದೊಳಗ ಹೀಗೂ ಉಂಟು. ಧೈರ್ಯಗೆಡಬೇಡ. ಬದುಕು ನಿಂದು. ಅದು ಉಳಿದವರಿಗೆ ಮಾದರಿಯಾಗಲಿ. ನಿನಗ ಕಷ್ಟ ಆದರೂ ಆ ಮನಸ್ಸನ್ನು ಬೇರೆ ಕಡೆ ಹರಿಸು’ ಎನ್ನುವ ಅವ್ವನ ಮಾತು, ‘ಭಾಷಣದ ತಯಾರಿ ಹೇಗೆ ಮಾಡಿದ್ದಿ? ಬೇರೆ ಬೇರೆ ಪುಸ್ತಕ ಓದಿದ್ದೀಯಾ? ಕಾರ್ಯಕ್ರಮ ಹೇಗಿತ್ತು? ಎನ್ನುವ ಅಪ್ಪ ಹಾಗೂ ಸ್ನೇಹಿತರ, ಹಿತೈಶಿಗಳ ಮಾತುಗಳನ್ನು ಸ್ವೀಕರಿಸಿ ವಿವಿಧ ಜನರ, ವಿವಿಧ ಭಾವನೆಗಳ, ಅನೇಕ ಸಮಸ್ಯೆಗಳ ಜನರೊಂದಿಗೆ ಒಡನಾಟಗಳು ನಾನು ಒಂಟಿ ಎನ್ನುವದನ್ನು ಮರೆಸಿದವು.

ನನಗೆ ವಿರಾಮವೆಂದರೇನೆ ಕೆಲಸದಲ್ಲಿಯ ನಿರಂತರ ಬದಲಾವಣೆ. ಬದಲಾವಣೆ ಎನ್ನುವದು ಕ್ರಿಯಾಶೀಲತೆಯನ್ನು, ಚೈತನ್ಯವನ್ನು ತರುವ ಜಂಗಮಸ್ವರೂಪಿ. ಇದು ಮಾನಸಿಕ ಆರೋಗ್ಯಕ್ಕೆ ರಹದಾರಿ. ಈ ಬಿಡುವಿಲ್ಲದ ನನ್ನ ವೃತ್ತಿ, ಪ್ರವೃತ್ತಿಗಳ ಚೇತೋಹಾರಿಯಾಗಿರಲು ಸಹಕರಿಸಿವೆ. -ದಾನೇಶ್ವರಿ ಬಿ.ಸಾರಂಗಮಠ

‘ಬ್ಲಾಗ್‌ ಬರಹಕ್ಕೆ ಮೊರೆಹೋಗುವೆ’
ವಿರಾಮದ ಸಮಯವು ನನಗೆ ಚೈತನ್ಯ ನೀಡಿ, ಜೀವನ ಪ್ರೀತಿ ಹೆಚ್ಚಿಸುವ ಕ್ಷಣಗಳು. ಈ ಸಮಯದಲ್ಲಿ  ಪತ್ರಿಕೆ, ನಿಯತಕಾಲಿಕೆ, ಪ್ರೇರಣಾದಾಯಕ ಮತ್ತು ಆಧ್ಯಾತ್ಮಿಕ  ಪುಸ್ತಕಗಳ್ನು  ಓದುತ್ತೇನೆ. ಕವನ, ಚುಟುಕುಗಳನ್ನು ಬರೆಯುತ್ತೇನೆ. ವಾಟ್ಸ್ ಅಪ್ ಮತ್ತು ಫೇಸ್ ಬುಕ್ ನಲ್ಲಿ ಸ್ವಲ್ಪ ಹೊತ್ತು ಕಾಲ ಕಳೆಯುವುದರಿಂದ ಮನೆಯಲ್ಲಿ ಒಂಟಿಯಾಗಿರುವ ಭಾವ ಇರುವುದಿಲ್ಲ.

ಜತೆಗೆ ಬಂಧುಮಿತ್ರರ ಅಭಿರುಚಿ ಹವ್ಯಾಸಗಳನ್ನು ಗುರುತಿಸಲು ಮತ್ತು ನನ್ನ ಹವ್ಯಾಸಗಳನ್ನು ವೃದ್ಧಿಸಲು ಸಹಾಯವಾಗುವುದು. ಟಿ.ವಿ.ಯಲ್ಲಿ ಸ್ವಲ್ಪ ಹೊತ್ತು ನ್ಯೂಸ್ ನೋಡುವುದರ ಜತೆಗೆ ಹರಟೆ, ಭಾವಗೀತೆ ಇತರ ನನ್ನ ನೆಚ್ಚಿನ ಕಾರ್ಯಕ್ರಮವನ್ನು ನೋಡುತ್ತೇನೆ.

ಅಂತರ್ಜಾಲದಲ್ಲಿ ಆಸಕ್ತಿದಾಯಕ ವಿಷಯಗಳನ್ನು ಓದುವುದು, ಹಾಡು ಕೇಳುವುದು, ಬ್ಲಾಗ್‌ನಲ್ಲಿ ಬರೆಯುವುದು, ಬೇರೆಯವರ ಬ್ಲಾಗ್ ಓದುವುದು ನನಗಿಷ್ಟ. ಇದರಿಂದ ದಿನವಿಡೀ ಉಲ್ಲಾಸ ಮತ್ತು ಲವಲವಿಕೆಯಿಂದ ಇರಲು ಸಾಧ್ಯವಾಗಿದೆ. ಮನೆಯ ಮುಂದಿರುವ ಪುಟ್ಟ ಹೂದೋಟದಲ್ಲಿ ಸಂಜೆ ಹೊತ್ತು ಕಳೆಯುವುದು, ವಾಕಿಂಗ್ ಹೋಗುವುದು ಅಥವಾ  ಸ್ನೇಹಿತೆಯರೊಡನೆ ಮಾತಾಡುವುದು ಹೀಗೆ ಸಂತೋಷವಾಗಿರುತ್ತೇನೆ.

ವಾರಾಂತ್ಯವೆಂದರೆ ಉದ್ಯೋಗಸ್ಥ ಮಹಿಳೆಯರಂತೆ ನನಗೂ ಖುಷಿ. ಎರಡು ದಿನ ಮೊದಲೇ ವಾರಾಂತ್ಯವನ್ನು ಹೇಗೆ ಕಳೆಯುವುದೆಂದು ಯೋಚಿಸಿ ಪ್ಲಾನ್ ಮಾಡುತ್ತೇನೆ. ಎಲ್ಲರೂ ಒಟ್ಟಿಗೆ ಶಾಪಿಂಗ್ ಹೋಗುವುದಾ, ಉದ್ಯಾನಕ್ಕೆ ಹೋಗುವುದಾ, ಒಳ್ಳೆಯ ಸಿನಿಮಾ ನೋಡುವುದಾ, ಸ್ನೇಹಿತರ ಮನೆಗೆ ಹೋಗುವುದಾ ಅಥವಾ ಅವರನ್ನು ಮನೆಗೆ ಕರೆಯುವುದಾ ಎಂದು ಮೊದಲೇ ನಿರ್ಧರಿಸುತ್ತೇನೆ. ಆ ದಿನ ಬಟ್ಟೆ ಒಗೆಯುವುದು, ಇಸ್ತ್ರಿ ಮಾಡುವುದು ಮುಂತಾದ ಮುಂದೂಡಬಹುದಾದ ಸ್ವಚ್ಚತೆಯ ಹೆಚ್ಚಿನ ಕೆಲಸಗಳನ್ನು ಬದಿಗಿರಿಸಿ ವಿಶೇಷ ತಿಂಡಿ, ಊಟ ತಯಾರಿಸುತ್ತೇನೆ. ಮನೆಯವರು ಕೂಡ ನನ್ನ ಕೆಲಸದಲ್ಲಿ ಸ್ವಲ್ಪ ಸಹಾಯ ಮಾಡುವುದರಿಂದ ಬೇಗನೆ ಕೆಲಸ ಮುಗಿಸಿ ಎಲ್ಲರೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತದೆ. ಸಂಜೆ ಹೊತ್ತಲ್ಲಿ ಮೊದಲೇ ಪ್ಲಾನ್ ಮಾಡಿದಂತೆ ಹೊರಗೆ ಹೋಗುತ್ತೇವೆ ಅಥವಾ ಸ್ನೇಹಿತರನ್ನು ಬರಮಾಡಿಕೊಂಡು ಸಂತೋಷದಿಂದ ಹರಟುತ್ತೇವೆ. ಇದರಿಂದ ಎಲ್ಲರಿಗೂ ಬದಲಾವಣೆ ದೊರೆತು ಮರುದಿನದ ಕೆಲಸಕ್ಕೆ ಹುಮ್ಮಸ್ಸು ತುಂಬುವುದು.

ಹೀಗೆ ವಾರಾಂತ್ಯವನ್ನು ಮತ್ತು ಇತರ ದಿನಗಳ ವಿರಾಮದ ಸಮಯವನ್ನು  ಸಂತಸ ಕಂಡುಕೊಳ್ಳುವ ಹಾಗೂ ಉತ್ಸಾಹ ನೀಡುವ ಕ್ಷಣಗಳನ್ನಾಗಿ ಪರಿವರ್ತಿಸುತ್ತೇನೆ.
–ಪ್ರೇಮಾಶ್ರೀ

ವಾರಾಂತ್ಯದ ಓದಿನ ಸುಖ
ವಾರದ ಕೊನೆಯ ದಿನ ಬಂದರೆ ಸಾಕು, ಪ್ರತಿಯೊಬ್ಬರಿಗೂ ಒಂದೊಂದು ರೀತಿಯಲ್ಲಿ ವಿಶೇಷ ದಿನವೇ. ವಾರವಿಡೀ ಕಚೇರಿ, ಮನೆ, ವ್ಯವಹಾರ ಹಾಗು ಇನ್ನಿತರ ಕೆಲಸ ಕಾರ್ಯಗಳಲ್ಲಿ ನಿರತರಾಗಿ ದಣಿದ ದೇಹ ಹಾಗು ಮನಸ್ಸುಗಳನ್ನು ಹದಗೊಳಿಸಿ ಪುನಶ್ಚೇತನಗೊಳಿಸುವ ಈ ದಿನ ಬರುವಾಗ ಎಷ್ಟು ಸಂತಸವೋ, ಮುಗಿಯುವಾಗ ಅಷ್ಟೇ ಬೇಸರವೂ ಕೂಡ.

ಪ್ರತಿ ಕ್ಷಣವೂ ಬಿಜೀ ಬಿಜೀ... ಎನ್ನುವ ಇಂದಿನ ಧಾವಂತದ ಬದುಕಿನಲ್ಲಿ ಸಿಗುವ ಈ ಅತ್ಯಮೂಲ್ಯ ಸಮಯವನ್ನು ನೆಚ್ಚಿನ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದೇ ಜಾಣತನ.
‘ಸಮಯದ ಹಕ್ಕಿ ಹಾರಿ ಹೋಗುವುದನ್ನು ಅಸಹಾಯಕಳಾಗಿ ನೋಡುವ ಬದಲಾಗಿ ಸಮಯದ ಹಕ್ಕಿಯ ಬೆನ್ನೇರಿ ಹಾರುವ ಮಹದಾಸೆಯನೊತ್ತಿರುವ ನಾನು ಪ್ರತಿವಾರ ಬರುವ ಈ ಸಂತಸದ ದಿನಗಳನ್ನು ನನ್ನ ನೆಚ್ಚಿನ ಹವ್ಯಾಸವಾದ ಓದಿನಲ್ಲಿ ತೊಡಗಿಸಿಕೊಳ್ಳುತ್ತೇನೆ.

ಇದು ಒಂದು ಆರೋಗ್ಯಕರ ಹವ್ಯಾಸವಾಗಿದ್ದು, ಕೆಲಸದ ಒತ್ತಡ ಕಡಿಮೆ ಮಾಡುವುದಲ್ಲದೇ, ದಣಿದ ದೇಹ ಹಾಗು ಮನಸ್ಸಿಗೆ ಮುದ ನೀಡುತ್ತದೆ. ಪತ್ರಿಕೆ, ನಿಯತಕಾಲಿಕೆ, ಪ್ರೇರಣದಾಯಕ ಪುಸ್ತಕಗಳು, ಜೀವನ ಚರಿತ್ರೆಗಳು, ಕಥೆ, ಕಾವ್ಯ.... ಹೀಗೆ ನನಗಿಷ್ಟವಾದ ಪ್ರಕಾರಗಳನ್ನು ಆರಿಸಿಕೊಂಡು ಓದುತ್ತೇನೆ. ಈ ಹವ್ಯಾಸವು ನನ್ನಲ್ಲಿ ಜ್ಞಾನ ಹಾಗು ಕೌಶಲವನ್ನು ಹೆಚ್ಚಿಸುವುದರೊಂದಿಗೆ ನನ್ನ ಭವಿಷ್ಯದ ನಿರ್ಮಾಣಕ್ಕೂ ದಾರಿದೀಪವಾಗುತ್ತಿದೆ. ನನ್ನ ನಿತ್ಯ ಜೀವನಕ್ಕೆ, ಆರೋಗ್ಯಕ್ಕೆ ಹಾಗು ಕೆಲಸ ಕಾರ್ಯಗಳಿಗೆ ಬೇಕಾದ ಮಾಹಿತಿ ಸಿಗುವುದಲ್ಲದೇ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ಒದಗಿಸುತ್ತಿದೆ.

ಓದುವ ಹವ್ಯಾಸವು ನನ್ನ ಭಾಷೆಯನ್ನು ಸುಧಾರಿಸುವುದರ ಜೊತೆಗೆ ಬರೆವಣಿಗೆಗೆ ಸ್ಫೂರ್ತಿ ಹಾಗು ಚೈತನ್ಯ ನೀಡುತ್ತಿದೆ. ಇದರಿಂದ ನನಗೆ ಹಣಕಾಸಿನ ಅನುಕೂಲವೂ ಆಗುವುದ ರೊಂದಿಗೆ ಮನೋಚೈತನ್ಯಕ್ಕೆ ಹಾಗು ಮನೋವಿಕಾಸಕ್ಕೆ ಸಹಕಾರಿಯಾಗಿದೆ. ಇದು ನನ್ನಲ್ಲಿ ಆತ್ಮವಿಶ್ವಾಸ ವೃದ್ದಿಸುವುದರೊಂದಿಗೆ ಹೊಸ ವಿಚಾರಗಳನ್ನು ಕಲಿಯಲು ಹಾಗು ತಿಳಿದುಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದೆ. ಆದ್ದರಿಂದ ಪ್ರತಿವಾರವೂ ಚಾತಕಪಕ್ಷಿಯಂತೆ ವಾರಂತ್ಯ ದಿನ ಬರುವುದನ್ನೇ ಕಾಯುವ ನಾನು ಖುಷಿಯಿಂದಲೇ ಓದು-ಬರಹಗಳಲ್ಲೇ ತಲ್ಲೀನಳಾಗಿರುತ್ತೇನೆ. –ವಿ.ಲತಾ ರಮೇಶ್

ವಿರಾಮ ಕೊಡುವ ಆರಾಮ
ವಿರಾಮ ಅಂದರೆ ನನ್ನ ದೃಷ್ಟಿಯಲ್ಲಿ ಇದೊಂದು ಮನಸ್ಸಿಗೆ ಅನುಗುಣವಾದ ಪರಿಸ್ಥಿತಿ. ವಿರಾಮದ ದಿನ ಯಾವ ಕೆಲಸಗಳ ಜಂಜಡವು ಇಲ್ಲದೆ ಆರಾಮವಾಗಿ ಇರುವವರು ಬಹುತೇಕ ಗಂಡಸರು (ಎಲ್ಲರೂ ಅಲ್ಲ). ಆದರೆ ನಾನು ನೋಡಿದಂತೆ ಮಹಿಳೆಯರಿಗೆ ಇಡೀ ವಾರದ ಯಾಂತ್ರಿಕತೆಯ ಕೆಲಸಗಳಿಂದ, ವಾರಂತ್ಯ ದೊರೆತ ವಿರಾಮದ ಸಮಯವನ್ನು ವಿಭಿನ್ನವಾಗಿ ಸದುಪಯೋಗಿಸಿಕೊಳ್ಳುವ ಸೃಜನಶೀಲ ಮನಸ್ಸುಗಳು, ಈ ಬದಲಾವಣೆಯ ಕೆಲಸಗಳಲ್ಲೇ ವಿರಾಮದ ಸಂತೋಷವನ್ನು ಅನುಭವಿಸುತ್ತವೆ. ಈ ಸಮಯವನ್ನು ಅವರವರ ಅಭಿರುಚಿಗೆ ಅನುಗುಣವಾಗಿ ವಿನಿಯೋಗಿಸುವ ಸದಾವಕಾಶ.

ಕೆಲವರಿಗೆ ಮನೆಯ ಎಲ್ಲ ಸದಸ್ಯರ ಇಷ್ಟವಾದ ಅಡುಗೆ ತಿಂಡಿ ಮಾಡುವುದು ಖುಷಿ ಕೊಟ್ಟರೆ, ಕೆಲವರು ಅಗತ್ಯವಸ್ತುಗಳ ಖರೀದಿ ಮಾಡುವುದಕ್ಕೆ ಆ ದಿನವನ್ನು ಉಪಯೋಗಿಸಿಕೊಂಡರೆ, ಹಲವರು ತಮಗೆ ಇಷ್ಟವಾದ ಪುಸ್ತಕಗಳನ್ನು ಓದುವುದು, ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆ, ಆಪ್ತರ ಬಂಧು ಮಿತ್ರರ ಭೇಟಿ ಅಥವಾ ಅವರುಗಳನ್ನು ಮನೆಗೆ ಆಹ್ವಾನಿಸುವುದು, ದೇವಸ್ಥಾನಗಳಿಗೆ ಹೋಗುವುದು, ಮಧ್ಯಾಹ್ನದ ಲಘು ನಿದ್ದೆ, ಉಪನ್ಯಾಸಕ ಕಾರ್ಯಕ್ರಮವಿದ್ದಲ್ಲಿ ಹೋಗುವುದು ಹೀಗೆ ಅವರವರ ಭಾವಕ್ಕೆ ಅನುಗುಣವಾಗಿ ವಿರಾಮದ ದಿನವನ್ನು ಕೆಲಸದ ಬದಲಾವಣೆಯಲ್ಲೇ ಉತ್ಸಾಹ ತುಂಬಿಕೊಂಡು ಆರಾಮವಾಗಿ ಕಳೆಯುತ್ತಾರೆ.

ಉದ್ಯೋಗಸ್ಥ ಹರೆಯದ ಉತ್ಸಾಹಿ ಜೀವಿಗಳು ವಿರಾಮದ ದಿನ ತಡವಾಗಿ ಏಳುವ ಖುಷಿ ಅನುಭವಿಸುವುದರೊಂದಿಗೆ ತಮ್ಮ ಪ್ರಿಯವಾದ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಸಿನಿಮಾ ವೀಕ್ಷಣೆ, ಸಂಗಾತಿಯೊಡನೆ ಹೋಟೆಲ್ ಇಂತಹ ಸಣ್ಣ ಪುಟ್ಟ ಆಸೆಗಳ ಪೂರೈಕೆ. ಇನ್ನು ಅಭಿರುಚಿಗೆ ತಕ್ಕಂತೆ ಪೇಂಟಿಂಗ್, ಚಾರಣ, ಪುಸ್ತಕಗಳನ್ನು ಓದುವುದು ಇವೆಲ್ಲವೂ ಮಾರನೆ ದಿನದ ಕೆಲಸಕ್ಕೆ ಲವಲವಿಕೆ ತರಿಸುವ ಟಾನಿಕ್.

ನಮ್ಮಂತಹ ಗೃಹಿಣಿಯರಿಗೆ ಇದು ಬೆಳಗ್ಗಿನ ಧಾವಂತದ ಕೆಲಸಗಳಿಗೆ ಬದಲಾಗಿ ನಿಧಾನವಾಗಿ ತೊಡಗಿಸಿಕೊಳ್ಳುವುದು ಒಂದು ರೀತಿಯ ರೀಲಿಫ್ ಕೊಡುತ್ತದೆ. ಗೃಹಿಣಿಯರಿಗೆ ನಿತ್ಯವೂ ಮಧ್ಯಾಹ್ನಗಳಲ್ಲಿ ಸಿಗುವ ಬಿಡುವು ಅವರ ಹವ್ಯಾಸಗಳಿಗೆ, ಉದಾಹರಣೆಗೆ ಇಷ್ಟವಾದ ಪುಸ್ತಕಗಳನ್ನು ಓದುವುದು, ಗೃಹಾಲಂಕಾರ, ಹೊಲಿಯುವುದು ಹೀಗೆ ವಿಭಿನ್ನವಾದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶವಿರುವುದರಿಂದ ವಾರಾಂತ್ಯದಲ್ಲಿ ಮನೆಯ ಇತರ ಸದಸ್ಯರಿಗೆ ಸಿಗುವ ರಜಾ ದಿನದಂದು ಈ ಕೆಲಸಗಳಿಂದ ಭಿನ್ನವಾದ ಕಾರ್ಯಕ್ರಮಗಳಾಗಿ ಬದಲಾಯಿಸುತ್ತವೆ. ಅಂದು ಮನೆಯವರ ಆಸಕ್ತಿ, ಅಭಿರುಚಿಯ ಕಡೆಗೆ ಗಮನ ಕೊಡುವುದು, ಎಲ್ಲರೂ ಸೇರಿ ಹೊರಗಡೆ ಸುತ್ತಾಡಿ ಬರುವುದು, ಸಾಂಸ್ಕೃತಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೋಳ್ಳುವುದು ಇವುಗಳು ಮನಸ್ಸನ್ನು ಉಲ್ಲಾಸಗೊಳಿಸುತ್ತವೆ.

ಒಟ್ಟಿನಲ್ಲಿ ವಾರದ ರಜೆ, ಮಾನಸಿಕ ವಿಕಸನಕ್ಕೆ ಸಹಾಯಕವಾಗುವಂತ ಹವ್ಯಾಸಗಳಿಂದ ಗೃಹಿಣಿಯರಿಗಾಗಲಿ, ಉದ್ಯೋಗಸ್ಥ ಮಹಿಳೆಯರಿಗಾಗಲಿ ಜಡತ್ವವನ್ನು ಓಡಿಸಿ ಮನಸ್ಸಿಗೆ ಆನಂದಕೊಟ್ಟು ಲವಲವಿಕೆಯನ್ನು ರೀಚಾರ್ಚ್ ಮಾಡುವ ಪರಿಣಾಮಕಾರಿ ಸಾಧನ.
-ಮಾಲ ರಾಮಚಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT