ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನೂ ಮೂರ್ಖನಾದೆ

Last Updated 1 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಮೂರ್ಖತನಕ್ಕೆ ಮಿತಿ ಎಂಬುದಿಲ್ಲವಂತೆ. ಗೊತ್ತೋ ಗೊತ್ತಿಲ್ಲದೋ ಮೂರ್ಖರಾದ ಅಥವಾ ಮತ್ತೊಬ್ಬರನ್ನು ಮೂರ್ಖರನ್ನಾಗಿಸಿ ನಕ್ಕಿದ ಕೆಲ ನೆನಪುಗಳನ್ನು ಹಂಚಿಕೊಳ್ಳುವ ಅವಕಾಶವನ್ನು ‘ಕಾಮನಬಿಲ್ಲು’ ಓದುಗರ ಮುಂದಿಟ್ಟಿತ್ತು. ‘ನಾನೂ ಮೂರ್ಖನಾದೆ’ ಶೀರ್ಷಿಕೆಯಲ್ಲಿ ನೂರಾರು ಪತ್ರಗಳು ಬಂದವು. ಮೂರ್ಖರಾಗಿ ಇಂಗು ತಿಂದ ಮಂಗನಂತಾದ ಅನುಭವಗಳೊಂದಿಗೆ ಮತ್ತೊಬ್ಬರ ಕಾಲೆಳೆದ ಹಲವು ಘಟನೆಗಳನ್ನೂ ಹಂಚಿಕೊಂಡಿದ್ದರು. ಅಂಥ ಕೆಲವು ಅನುಭವಗಳು ಈ ಬಾರಿ... 

ನಾಗನ ಹೆಡೆ ನೋಡಿ ನಕ್ಕಿದ್ದು
ದು ಐದಾರು ಮನೆಗಳಿದ್ದ ವಠಾರ.  ಸಾಲು ಮನೆಗಳು. ಎಲ್ಲ ಮನೆಯಲ್ಲೂ ಒಂದೆರಡು ಪುಟ್ಟ ಮಕ್ಕಳು. ಸಾಧಾರಣವಾಗಿ ಎಲ್ಲ ಮನೆಯವರೂ ಶಿಕ್ಷಕ ವೃತ್ತಿಯವರಾದ್ದರಿಂದ ಅದು ಟೀಚರ್ಸ್ ಕಾಲೊನಿ ಥರವೇ ಇತ್ತು. ಚಿಕ್ಕ ಅಂಗಳವೇ ಮಕ್ಕಳ ಆಟದ ಮೈದಾನ. ಸಂಜೆಗತ್ತಲಿನವರೆಗೂ ಆಡುವುದು, ಮನೆಯಲ್ಲಿ ಕರೆದೊಡನೆ ತಮ್ಮ ಕೈಯಲ್ಲಿದ್ದ ಚೆಂಡು, ಬ್ಯಾಟು, ಕೈಗಾಡಿಗಳನ್ನು ಅಲ್ಲಿಯೇ ಬಿಟ್ಟೋಡುವುದು ಮಾಮೂಲು. ಅದರ ಬಗ್ಗೆ ಮಕ್ಕಳಿಗೆ ಚಿಂತೆಯಿಲ್ಲ, ದೊಡ್ಡವರಿಗೆ ಭಯವಿಲ್ಲ. ಇಲ್ಲಿ ಹೇಳಹೊರಟಿರುವುದೂ ಅದೇ ವಿಚಾರ.

ಮನೆಗಳ ನಡುವೆ ಬಾವಿಕಟ್ಟೆಯ ಸಂದಿ ಓಣಿಯೊಂದಿದೆ. ನಮ್ಮ ನೆರೆಯವರಾದ ಗುರುಸಿದ್ದಯ್ಯ ಆಗಷ್ಟೇ ಮನೆಗೆ ಬಂದಿದ್ದರು. ಸಮಯ ರಾತ್ರಿ 8.30 ಇರಬೇಕು. ಇಡೀ ವಠಾರದಲ್ಲಿ ಕತ್ತಲು. ಎಲ್ಲ ಮನೆಗಳ ಕಿಟಕಿಯ ಮೂಲಕ ಹೊಮ್ಮುವ ಮಂದ ಬೆಳಕು ಮಾತ್ರ ಇತ್ತು. ಗುರುಸಿದ್ದಯ್ಯ, ಬಾವಿ ಕಟ್ಟೆಯ ನಾಲ್ಕು ಮನೆಗಳ ಆಚೆ, ಮೆಟ್ಟಿಲು ಹತ್ತಿ ಹೋಗುವಾಗ ಕಟ್ಟೆಯ ಮೇಲೆ ಹೆಡೆಯೆತ್ತಿದ ಕರಿನಾಗನ ದರ್ಶನಕ್ಕೆ ಬೆಚ್ಚಿ ಬಿದ್ದರು. ಎಲ್ಲರನ್ನೂ ಕೂಗಿ ಕರೆದರು. ಆಶ್ಚರ್ಯವೆಂದರೆ ಅದು ಈ ಕಡೆಯೇ ತಿರುಗಿದಂತಿದೆ.

ಒಮ್ಮೊಮ್ಮೆ ಹಗುರವಾಗಿ ಎಂಬಂತೆ ಕಪ್ಪುಹೆಡೆ ಅಲುಗಾಡುತ್ತಿದೆ. ಅದನ್ನು ಕಂಡವರಿಗೆ ಗಾಬರಿಯಾಗುವ ಬದಲು ಭಕ್ತಿಭಾವ ಉಕ್ಕುತ್ತಿದೆ. ಮಕ್ಕಳನ್ನೂ ಎಬ್ಬಿಸಿ ನೋಡಲು ಕರೆದುಕೊಂಡು ಬಂದರು. ಕೈ ಜೋಡಿಸಿದರು. ಆಚೆ ಈಚೆ ಮನೆಯವರಿಗೆಲ್ಲಾ ಎಚ್ಚರವಾಯಿತು. ಎಲ್ಲರೂ ಬಂದು ಸೇರಿ ಆ ಕತ್ತಲಿನಲ್ಲಿ ಕರಿನಾಗನ ದರ್ಶನ ಪಡೆದು ಧನ್ಯರಾದರು. ಅದು ಪ್ರದೀಪನ ಮನೆಯ ಮುಂದೆ ನಿಂತಿದೆ. ಪ್ರದೀಪನ ಮನೆ ಅಂದು ಬೀಗ. ಅವರು ಮನೆಯಲ್ಲಿ ಇದ್ದ ಪಕ್ಷದಲ್ಲಿ ಕಿಟಕಿಯ ಬೆಳಕಲ್ಲಿ ‘ನಾಗದರ್ಶನ’ ಸರಿಯಾಗೇ ಆಗುತ್ತಿತ್ತು.

ಆದರೆ  ಯಾರಿಗೂ ಬ್ಯಾಟರಿ ತಂದು ನೋಡುವ ಧೈರ್ಯವಿಲ್ಲ.  ಕೆಲವರು ಭಯದಿಂದ, ಕೆಲವರು ಭಕ್ತಿಯಿಂದ ಇನ್ನೂ ಕೆಲವರು ಕುತೂಹಲದಿಂದ ನೋಡುತ್ತಿದ್ದರು. ಕೈ ಮುಗಿದು ಕೆನ್ನೆ ತಟ್ಟಿಕೊಂಡರು. ಆದರೇನು ಆ ನಾಗರಾಜ  ಮೆಲ್ಲಗೆ ತನ್ನ ಹೆಡೆ ಅಲ್ಲಾಡಿಸುವುದನ್ನು ಬಿಟ್ಟು ಬೇರೆನೂ ಚಲನೆ ಇಲ್ಲ. ಇದ್ದಕ್ಕಿದ್ದಂತೆ ಆ ಬಾಗಿಲಿನ ಉಣುಗೇಲಿನ ಸಂದಿಯಿಂದ ಒಂದು ಬಿಡಾಡಿ ನಾಯಿ ಓಡಿ ಬಂದದ್ದೇ, ಅದರ ಹೆಡೆಗೇ ಕಾಲೆತ್ತಿದೆ. ಎಲ್ಲರೂ, ಏನು ಅಭಾಸವಾಯಿತು, ಇನ್ನೇನು ಆಗುತ್ತೋ ಎಂಬ ಆತಂಕದಲ್ಲಿರುವಾಗಲೇ... ಎಲ್ಲರೂ ಅಚ್ಚರಿಗೊಳ್ಳುವಂತೆ ನಾಗನ ಹೆಡೆಯ ಅನಾವರಣವಾಗಬೇಕೇ? ಜೊತೆಗೆ ಎಲ್ಲರ ಭ್ರಮೆಯದ್ದೂ...

ನಂತರ ಒಬ್ಬೊಬ್ಬರೇ ತಮ್ಮ ಮೌಢ್ಯಕ್ಕೆ ತಾವೇ ನಾಚುತ್ತಾ, ‘ನನಗೆ ಅನುಮಾನವಿತ್ತು, ಆದರೆ ಧೈರ್ಯ ಬರಲಿಲ್ಲ’ ಎಂದು ಸಮರ್ಥಿಸಿಕೊಳ್ಳುತ್ತಾ ಹತ್ತಿರ ಬಂದು ನೋಡಿದರು. ಪ್ರದೀಪನ ಮೂರು ಗಾಲಿಯ ಚಕ್ರಕ್ಕೆ ಅಲ್ಲಿ ಹರವಿದ್ದ ರಾಧಿಕಾಳ ಕರಿ ವೇಲು ನೇತು ಬಿದ್ದಿದೆ. ಅದರ ಅಂಚಿಗೆ ಅಜಿತೇಶನ ಗಾಳಿಪಟದ ಬಾಲಂಗೋಚಿ ಉದ್ದ ನಾಗನ ಹೆಡೆಯಾಗಿ ಮಲಗಿದೆ. ನಮ್ಮನ್ನೆಲ್ಲ ಫೂಲ್ ಮಾಡಿದ್ದು ಯಾರು? ತನ್ನ ಅಭ್ಯಾಸಬಲದಿಂದ ಬಂದು ರಹಸ್ಯ ಅನಾವರಣಗೊಳಿಸಿದ್ದ ನಾಯಿಯೇ? ಅಥವಾ ನಾಗನ ರೂಪ ತಾಳಿದ್ದ ಆಟಿಕೆಗಳೇ? ಅಂತೂ ನಾವು ಮೂರ್ಖರಾದೆವು ಎಂದು ಈಗಲೂ ನೆನೆಸಿಕೊಂಡು ನಗುತ್ತೇವೆ.
ತಾರಾ ಭಟ್, ಶಿವಮೊಗ್ಗ.
*

ಅವಳ ತಪ್ಪಲ್ಲ, ನಾನೇ ಮೂರ್ಖ
ಮೂರ್ಖತನದಲ್ಲಿ ಎರಡು ದಾರಿಗಳಿವೆ. ಒಂದು, ಸುಳ್ಳನ್ನು ಅತಿಯಾಗಿ ನಂಬುವುದು, ಮತ್ತೊಂದು ಸತ್ಯವನ್ನು ಕಡೆಗಣಿಸುವುದು. ಹೀಗೆ ಒಬ್ಬ ಮನುಷ್ಯ ಕನಿಷ್ಠ ದಿನಕ್ಕೆ ನಾಲ್ಕು ಸಾರಿ ಮೂರ್ಖನಾಗುತ್ತಾನೆ. ಇನ್ನು ನನ್ನ ಮೂರ್ಖತನವಂತೂ ಸಾಗುತ್ತಲೇ ಇದೆ.  ಹೀಗೆ ಮೂರ್ಖತನದ ದಿನಚರಿ ತೆಗೆದರೆ ನನ್ನ ಮೇಲೆ ನನಗೇ ನಗು ಬರೋ ಒಂದು ಪ್ರಸಂಗ ನೆನಪಿಗೆ ಬರುತ್ತೆ.  ಒಂದಿನ ಸ್ನೇಹಿತರ ಜೊತೆ ಊಟಕ್ಕೆಂದು ಹೋಟೆಲ್‌ಗೆ ಹೋಗಿದ್ವಿ. ಮೂಲೆಯಲ್ಲಿರೋ ಟೇಬಲ್ ಹಿಡಿದು ಕುಳಿತು ನಾನೇ ಆರ್ಡರ್ ಮಾಡಿದೆ.

ಅದು ಫೇಮಸ್ ಹೋಟೆಲ್ ಆಗಿದ್ದರಿಂದ ಪ್ರತಿದಿನ ತುಂಬಿತುಳುಕುತ್ತಿತ್ತು. ಆ ಹೋಟೆಲ್ ಹೇಗಿತ್ತು ಅಂದರೆ ಯಾವುದೇ ಜಾಗದಲ್ಲಿ ಕುಳಿತುಕೊಂಡರು ಅಡುಗೆ ಮನೆ ಕಾಣಿಸುತ್ತಿತ್ತು. ಅಲ್ಲಿ ಒಂದು ಹುಡುಗಿ ಚಪಾತಿ ಮಾಡುತ್ತಿದ್ದಳು. ಮೊದಲ ದಿನ ಅವಳು ನನ್ನನ್ನೇ ನೋಡುತ್ತಿದ್ದಾಳೆ ಅಂತ ಖುಷಿಯಾಗಿ ಮಾರನೇ ದಿನಾನೂ ಹೋದೆ. ದಿನಾ ರಾತ್ರಿ ಊಟ ಅಲ್ಲೇ ಫಿಕ್ಸ್‌ ಆಯಿತು. ಜೊತೆಗೆ ಸ್ನೇಹಿತರನ್ನು ತರುತ್ತಿದ್ದೆ. ಅವರು ಹೇಳೋರು, ಅವಳು ನಿನ್ನೆ ನೋಡ್ತಿದ್ದಾಳೆ ಅಂತ.

ಒಂದು ವಾರ ಕಳೆದುಹೋಯಿತು. ಆದರೆ ಅವಳು ಮೊದಲು ಹೇಗೆ ನೋಡುತ್ತಿದ್ದಳೋ ಹಾಗೇ ನೋಡುತ್ತಿದ್ದಳು. ನನ್ನ ತಲೇಲಿ ಅವಳನ್ನ ಮಾತನಾಡಿಸಲೇಬೇಕು ಅಂತ ಅನಿಸೋದು. ಒಂದಿನ ಗಟ್ಟಿ ಮನಸು ಮಾಡಿ ಡೈರೆಕ್ಟ್ ಆಗಿ ‘ನೀವು ನನ್ನ ನೋಡುತ್ತಿರುವುದು ನಂಗೆ ಗೊತ್ತು ನೀವು ನನ್ನ ಲವ್ ಮಾಡ್ತಿದೀರಾ’ ಅಂತ ಕೇಳಿದೆ. ಅವಳು ಕೊಟ್ಟ ಉತ್ತರ ಹೀಗಿತ್ತು.

‘ಅಯ್ಯೋ ನೀವೂ ನನ್ನ ತಪ್ಪಾಗಿ ತಿಳ್ಕೊಂಡಿದಿರಿ ನಾನು ನಿಮ್ಮನ್ನಷ್ಟೇ ಅಲ್ಲ, ಬರೋ ಎಲ್ಲಾರನ್ನು ಹಾಗೇ ನೋಡ್ತಿನಿ ಅವರ ಆರ್ಡರ್ ಮೇಲೆ ರೊಟ್ಟಿ ಮಾಡ್ಬೇಕಾ ಚಪಾತಿ ಮಾಡ್ಬೇಕಾ ಅಂತ ತಿಳ್ಕೋತಿನಿ’ ಅಂದಳು. ಇದು ನನ್ನ ಸ್ನೇಹಿತರಿಗೂ ಅನುಭವ ಆಗಿತ್ತು. ಆದರೆ ಆಕೆ ನೆಪದಲ್ಲಿ ದಿನಾಲೂ ಹೋಟೆಲ್ ಊಟ ಅವರನ್ನು ನನಗೆ ಹೇಳದಂತೆ ತಡೆದಿತ್ತು. ಆಮೇಲೆ ಅದರ ಬಗ್ಗೆ ವಿಚಾರ ಮಾಡಿದಾಗ ನಾನು ಎಂಥಾ ಮೂರ್ಖತನ ಮಾಡಿದೆ ಅಂತ ಒಂದು ಸಣ್ಣ ಮುಗುಳ್ನಗೆ ತಾನಾಗೇ ಮೂಡಿತು.
ಪ್ರದೀಪ ಬಿಸಲನಾಯಿಕ, ಧಾರವಾಡ
*

ಬಣ್ಣ ಬಣ್ಣದ ಗುಲಾಬಿ ಇಟ್ಟವರು
ಸ್ವಾಮೀ ಐಯ್ನೋರಾ, ಗುಲಾಬಿ ಗಿಡ ಬೇಕ್ರಾ ಅಂದಗಾಯ್ತಂತೆ. ಸಬ್ದಾ ಕೇಳ್ದೇಟ್‌ಗೆ ದಾಪ್‌ಗಾಲಾಕ್ಕೊಂಡು ಓಡೋದನಂತೆ ಒಂದೇ ಉಸ್ರಿಗೆ ಆ ದಿಕ್ಕಿಗೆ; ಏನಪ್ಪಾ ಯಾವ್ಯಾವ ಬಣ್ಣದ ಗುಲಾಬಿ ಐತೆ? ಅಳ್ದಿ ಗುಲಾಬಿ ಐತಾ? ನೀಲಿ ಗುಲಾಬಿ ಐತಾ? ಅಂತೆಲ್ಲಾ ಕೇಳೋಕ್ಸುರುಮಾಡ್ದ... ಮಾರೋಕ್ ಬಂದವ್ನು ಬಲೇ ಪಾಕ್‌ಡಾ ನನ್ಮಗಾ. ನೀವು ಏನೇನ್ಕೇಳ್ತೀರೋ ಅಳದೀ, ಅಸಿರು, ಕೆಂಪು, ಕಪ್ಪು ಎಲ್ಲಾ ಬಣ್ಣದ ಹೂಬಿಡೋ ಕಸೀಮಾಡಿದ ಒಂದುಗಿಡ, ನಂಡಿಪಾರ್ಟ್‌ಮೆಂಟಿನೋರು ಬೆಳೆಸಿರೋದು ನನ್ತಾವಐತೆ.

ಬಲು ಉಸಾರಾಗಿ ನೆಡ್ಬೇಕು, ಅಸನ್ ಗೊಬ್ರ ಆಕ್ಬೇಕು. ನೀವು ಅವ್ರಿವ್ರ ಮಾತ್ಕೇಳಿ ಅತ್ಗಿಡ ಆಕೋದೂ ಒಂದೆ, ನಾನ್ಕೊಡೋ ಒಂದು ಗಿಡಾ ಆಕೋದೂ ಒಂದೇಯಾ ಅಂತೆಲ್ಲಾ ಬಂಡಲ್‌ಬಿಟ್ಟ.  ನಮ್ ಪಟ್ಣದವ್ರ ಬುದ್‌ವಂತ್ರ ಕಿವೀಮ್ಯಾಕೆ ಎಂತಾ ಊ ಮಡಗ್ಬಹುದು ಅನ್ನೋದು ಇವನ್ಗೆ ಗೊತ್ತಿತ್ತು. ಆಡ್ದಾ ಆಡ್ದಾ ಮಾತಾಡ್ತಾನೇ ಓದ, ಇವ್ರಿಬ್ರೂ ಅವನ್ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸ್ತಾನೇ ಓದ್ರು. ಅವನ್ಗಿಡ ಕೊಂಡ್ಕೊಳ್ಳೋಕ್ಕೂ ತಯಾರಾಗ್ಬಿಟ್ವು... ನನ್ನ ಬುದ್ವಂತ ಬಾಮೈದ, ಒಸಿತಡ್ಕಳ್ಳಿ ಅಂದು, ಅವನ್ಗೆ ಮೊದ್ಲು ಗಿಡ ತಕ್ಕಂಬಂದು ತೋರ್ಸು

ಅಂತ ಪಟ್ಟಿಡ್ದಾ. ಕಾಲ್ಗಂಟೆ ತಡ್ಕಳ್ಳಿ, ಇಂಗೋಗಿ ಅಂಗ್ಬಂದೆ ಅಂತ ಓದವ್ನೆ ಕೈನಾಗೆ ಮೇಲೆ ಎರಡಡಿ ಕಡ್ಡಿ, ಕೆಳ್ಗೆ ಅರ್ಧಡಿ ಬೇರು ಒಟ್ಟು ಎರಡೂವರಡಿ ಗಿಡದ ಸೊಂಟಕ್ಕೆ ಅರ್ಧಡಿ ಕೆಸರು ಮೆತ್ತಿದ್ದು ಇಡ್ಕೊಂಡು ಬಂದ. ಆ ಕಡೆ ಈ ಕಡೆ ನೋಡ್ತಾ ಬೇಗ ಪಾಟ್ತನ್ನಿ, ಡಿಪಾರ್ಟಮೆಂಟಿನವರ ಕಣ್ಣಿಗೆ ಬಿದ್ರೆ ನನ್ಕತೆ ಮುಗಿದೋಯ್ತದೆ ಅಂತ ಅವಸರಿಸಿದ.  ನಾನೇ ಸರಿಯಾಗಿ ನೆಟ್ಕೊಡ್ತೀನಿ, ನೀವು ನೀರಾಕಿದ್ರಾಯ್ತು, ಒಂದ್ವಾರದಲ್ಲಿ ಮೊಗ್ ಕಚ್ತಾವೆ ಅಂತೇಳಿ ಅರವತ್ತು ರೂಪಾಯ್ಕಿತ್ತು ಕಾಲಿಗೆ ಬುದ್ದಿ ಏಳಿದ.

ಗಂಡಾಎಂಡ್ತಿ ಖುಸ್ಕುಸಿಯಾಗಿ ದಿನಾ ಅವನ್ಕೊಟ್ಟಿದ್ದ ಗಿಡಕ್ಕೆ ಒಂದ್ಚವರಿಗೆ ನೀರ್‌ ಸುರೀತಾ ಮೊಗ್ಕಚ್ತಾ ಅಂತಾ ಬಗ್‌ಬಗ್ಗಿ ನೋಡ್ತಾ ಇದ್ರಂತೆ. ಮೂರ್ನಾಕು ದಿವ್ಸಕ್ಕೆ ಎಲೆ ಒಣಗ್ತಾ, ಗಿಡ ಕೊಳೀತಾ ಬಂತಂತೆ. ಇದ್ಯಾಕೆ ಅಂತ ಗಿಡಾನಾ ಮೇಕೆ ಎಳಿದ್ರೆ ಎರಡಡಿ ಪೀಸ್ ಕೈಗೆ ಬಂತಂತೆ. ಯಾರೋ ಕಟ್‌ ಮಾಡಿ ಬಿಸಾಕಿದ ಎರಡ್ಮೂರು ಗಿಡದ ಮೇಲ್ಭಾಗದ ಜೊತೆಗೆ ಇನ್ಯಾವುದೋ ಗಿಡದ ಬೇರು ಎರಡನ್ನೂ ಕೆಸರು ಮಣ್ಣಲ್ಲಿ ಕಟ್ಟಿ ನಮಗೇ ನಾಮ ಹಾಕಿದ್ದ. ಒಡ್ಕೋಬೇಕು ನಮ್ ಬುದ್ವಂತ್ಗೇಗೆ, ಕೆಸರು ಮೆಟ್ಟಿದ ಮೆಟ್ನಲ್ಲಿ ಅಂತಾ ಒಬ್ಬರಿಗೊಬ್ಬರು ಬಯ್ಕೊಂಡ್ರಂತೆ ಈ ಬುದ್ವಂತ್ರು. 
ಆರ್.ಎ.ಕುಮಾರ್, ಮೈಸೂರು
*
ಬಿಡದ ದೆವ್ವದ ಚೇಷ್ಟೆ
ನಾನಾಗ ಪಿಯುಸಿ. ನನ್ನ ತಂಗಿ ಎಂಟೋ ಒಂಬತ್ತೋ ತರಗತಿ ಓದುತ್ತಿದ್ದಿರಬಹುದು. ಆಗ ಬೇಸಿಗೆ ರಜಾಕಾಲ. ಮಧ್ಯಾಹ್ನ 2 ಗಂಟೆ ಇರಬಹುದು. ಮನೆಯಲ್ಲಿ ಸುಮ್ಮನೆ ಕೂತಿದ್ದೆವು. ಅವಳು ಇದ್ದಕ್ಕಿದ್ದಂತೆ ನನ್ನನ್ನು ದುರುಗುಟ್ಟಿಕೊಂಡು ನೋಡಲು ಶುರು ಮಾಡಿದಳು. ನನಗೆ ಭಯವಾಯಿತು. ದೊಡ್ಡಪ್ಪನ ಮಗಳು ಅಕ್ಕನನ್ನು ಕರೆದೆ. ಅವಳು ಬಂದರೆ ಅವಳನ್ನೂ ಹಾಗೇ ನೋಡಲು ಶುರುಮಾಡಿದಳು. ಆಗ ಅಕ್ಕನಿಗೆ ಹೊಳೆದದ್ದು ಇದ್ಯಾವುದೋ ದೆವ್ವ ಮೆಟ್ಟಿರಬಹುದೆಂದು. ಆಗೆಲ್ಲಾ ಊರಲ್ಲಿ ದೆವ್ವ ಭೂತವನ್ನು ನಂಬಿ ಮಾತನಾಡುವ ಕಾಲ.

ಆಗ ಅಕ್ಕ ‘ನೀನು ಯಾರು?’ ಎಂದು ಪ್ರಶ್ನಿಸಿದಳು. ಅದಕ್ಕೆ ತಂಗಿ, ಅಮ್ಮನ ಸ್ನೇಹಿತೆಯೊಬ್ಬರು ದೊಡ್ಡಮ್ಮನ ಊರಲ್ಲಿ ಬಾವಿಗೆ ಹಾರಿ ಸತ್ತಿದ್ದರು. ಅವರ ಹೆಸರು ಹೇಳಿದಳು. ಇಲ್ಲಿಗ್ಯಾಕೆ ಬಂದೆ ಎಂದರೆ ಅಮ್ಮನನ್ನು ನೋಡಲು ಬಂದೆ ಎಂದಳು. ಅಷ್ಟಕ್ಕೇ ಭಯ ಬಿದ್ದ ನಾವು, ನೀ ಹೋಗು ಇಲ್ಲದಿದ್ದರೆ ಅಪ್ಪ, ಅಮ್ಮ ಬಂದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದೆವು. ಅದಕ್ಕವಳು ‘ನನಗೆ ಮೊಸರನ್ನ ಕೊಡಿ, ನಾನು ಹೋಗುತ್ತೇನೆ’ ಎಂದಳು. ಕೊಟ್ಟೆವು. ಗಬಗಬನೆ ತಿಂದು ನಮ್ಮನ್ನು ಮತ್ತೆ ದುರುಗುಟ್ಟಿ ನೋಡತೊಡಗಿದಳು.

ಅಷ್ಟರಲ್ಲಿ ಅಪ್ಪ ಬರುವ ವೇಳೆಯಾಯಿತು. ಅವಳು ನಾನು ಹೋಗುತ್ತೇನೆ ಎಂದು ಹೊರಗೆ ಬಂದು ಸುತ್ತಲೂ ಒಮ್ಮೆ ನೋಡಿ ಹೋಗುತ್ತೇನೆ ಎಂದಳು. ನಾವೆಲ್ಲಾ ಇದನ್ನು ಕೆಲವು ತಿಂಗಳುಗಳು ನಂಬಿದ್ದೆವು. ಆಮೇಲೆ ತಂಗಿಯನ್ನು ಕೇಳಿದರೆ, ಇಲ್ಲ, ಅಂದು ನನಗೆ ಕೆಲಸ ಮಾಡಲು ಬೇಜಾರಾಗಿತ್ತು. ಜೊತೆಗೆ ಮನೆಯಲ್ಲಿ ಅಪ್ಪ ಅಮ್ಮ ಇರಲಿಲ್ಲ, ನಿಮ್ಮನ್ನು ಹೆದರಿಸಲು ಹಾಗೆ ಮಾಡಿದೆ ಎಂದು ಜೋರಾಗಿ ನಕ್ಕಳು.
ದಾಕ್ಷಾಯಿಣಿ ಟಿ. ಚಿಕ್ಕಮಗಳೂರು.
*
ಚಿಕ್ಕಮ್ಮ ಬದುಕಿ ಬಂದದ್ದು
ಆಗ ನಾನು 7ನೇ ತರಗತಿ ಓದುತ್ತಿದ್ದೆ. ಅಂದು ಶಾಲೆಯಲ್ಲಿ ಎಲ್ಲರನ್ನೂ ಫೂಲ್ ಮಾಡಿದ ಸಂಭ್ರಮ ಹೊತ್ತು ಮಧ್ಯಾಹ್ನದ ಊಟಕ್ಕೆಂದು ಮನೆಗೆ ಬಂದಾಗ, ನಮ್ಮಜ್ಜಿ ನನಗೆ ಆಗ ತಾನೇ ಬಂದ ಟಪಾಲನ್ನು ಓದು ಎಂದು ಕೊಟ್ಟರು. ಅಜ್ಜಿಯನ್ನು ಮೂರ್ಖಳನ್ನಾಗಿ ಮಾಡಬೇಕೆಂಬ ಭಂಡ ಧೈರ್ಯದಿಂದ ಬಂದ ವಿಷಯವನ್ನು ತಿರುಚಿ, ‘ಊರಿಗೆ ಹೋಗಿರುವ ಚಿಕ್ಕಮ್ಮ ಸತ್ತುಹೋದರು’ ಎಂದು ಓದಿಬಿಟ್ಟೆ. ಅಷ್ಟು ಹೇಳಿ ಪತ್ರ ಬ್ಯಾಗಿಗಿರಿಸಿ ಶಾಲೆಗೆ ಹೋಗಿಬಿಟ್ಟೆ. ನಮ್ಮ ಅಜ್ಜಿ ಮನೆಮನೆಗೆಲ್ಲಾ ಸಾವಿನ ಸುದ್ದಿ ತಿಳಿಸಿ, ಸೊಸೆಯ ನೆನೆದು ಅಳೋದು, ಕರೆಯೋದು ಎಲ್ಲಾ ಸುಸೂತ್ರವಾಗಿ ನಡೆದಿತ್ತು. ಸಂಜೆ ಮನೆಗೆ ಹೋದೆ. ಹೆಣ ನೋಡಲು ಬಾಗಲಕೋಟೆಗೆ ಹೋಗುವ ತಯಾರಿ ನಡೆದಿತ್ತು. ತಲೆ ತಲೆ ಸೇರಿ ಸತ್ತವರ ಮುತ್ತೈದೆತನವನ್ನು ಹೊಗಳೋ ಕಾರ್ಯ ನಡೆಸಿದ್ದರು.

ನಮ್ಮ ಕುಡುಕ ಚಿಕ್ಕಪ್ಪನ ಬೈಯ್ಯೋ ಕಾರ್ಯವೂ ಜೊತೆಗಿತ್ತು. ಕೆಲಸಕ್ಕೆ ಹೋಗಿದ್ದ ಅಪ್ಪ ಸುದ್ದಿ ತಿಳಿದು ಮನೆಗೆ ಬಂದವರೇ ನನ್ನನ್ನು ಓದಲು ಪತ್ರ ಕೇಳಿದರು. ಪತ್ರ ಕೊಟ್ಟು ಅಜ್ಜಿಯನ್ನು ಒಳಕರೆದು ಸಂಭ್ರಮದಿಂದ ‘ನೀನು ಏಪ್ರಿಲ್ ಫೂಲ್ ಯಾರೂ ಸತ್ತಿಲ್ಲ’ ಎಂದು ಜಿಗಿಜಿಗಿದು ಹೇಳೋ ಹೊತ್ತಲ್ಲಿ ಪತ್ರ ಓದಿದ ನಮ್ಮಪ್ಪ ದುಶ್ಯಾಸನನಂತೆ ನನ್ನನ್ನು ಹಿಡಿದು ಹೊರತಂದು ಆಗೋವಷ್ಟು ಉಡುಗೊರೆ ಕೊಟ್ರು. ಮನೆಗೆ ಬಂದವರಿಗೆ ಅಳಬೇಕೋ ನಗಬೇಕೋ ತಿಳಿಯದೆ ನಮ್ಮ ಮುಖ ನೋಡುತ್ತಿದ್ದರು. ಯಾರು ಹೇಳಿದ್ರೂ ಹೊಡೆಯೋದು ನಿಲ್ಲಲಿಲ್ಲ. ಭಾರೀ ಸೀನ್ ಕ್ರಿಯೇಟ್ ಆಯ್ತು. ಆ ಹೆಂಗಸು ಸತ್ರೆ ಈ ಹುಡುಗಿಗ್ಯಾಕೆ ಹೊಡೀತಿದ್ದೀರಾ? ಬಿಡ್ರಿ ಅಂತಿದ್ದರು ಹಿರಿಯರು. ಪುಣ್ಯಾತ್ಗಿತ್ತಿ ನಮ್ಮಜ್ಜಿ,

‘ಮಕ್ಕಳು ಬಿಡಪ್ಪ, ಆಕಿದು ಆಯಸ್ಸು ಗಟ್ಟಿಯಾಯ್ತು’ ಅಂತ ಹೇಳಿ ಬಂದವರಿಗೆಲ್ಲಾ ವಿಷಯ ಹೇಳಿ ನಮ್ಮಜ್ಜಿ ಫೂಲ್ ಮಾಡಿದ್ರು. ಎಲ್ಲರೂ ‘ಛಲೋ ಮಗಳನ್ನೇ ಹಡಿದಿದ್ದೀಯಾ ಬಿಡಪ್ಪ ತಮ್ಮಾ’ ಎಂದು ಬೈದು ಬೆಪ್ಪಾಗಿ ಮನೆಗೆ ಹೋದ್ರು. ನಮ್ಮ ಚಿಕ್ಕಮ್ಮ ಈಗಲೂ ಗಟ್ಟಿಮುಟ್ಟಾಗಿದ್ದಾರೆ. ಫೂಲ್ ಮಾಡೋ ನನ್ನ ಚಾಳಿ ಈಗಲೂ ಮುಂದುವರೆದಿದೆ.
ಜ್ಯೋತಿ, ತುಮಕೂರು.
*
ಫೇಸ್‌ಬುಕ್ ಮೂರ್ಖ ನಾ
ಈ ಜಗತ್ತೊಂದು ಮೂರ್ಖರ ಸಂತೆ. ಹಾಗೆ ನೋಡಿದ್ರೆ ನಾವು, ನೀವು ಎಲ್ರೂ ಒಂದಲ್ಲ ಒಂದರ್ಥದಲ್ಲಿ ಮೂರ್ಖ ಶಿಖಾಮಣಿಗಳೇ. ತಾನೇ ಬುದ್ಧಿವಂತ ಅಂತೆಂದುಕೊಳ್ಳುವವನೇ ಈ ಜಗತ್ತಿನ ಮಹಾಮೂರ್ಖ. ನಿಜವಾದ ಜಾಣರು ನಿಮ್ಹಾನ್ಸ್‌ನಲ್ಲಿ ಅಡ್ಮಿಟ್ ಆಗಿದ್ದಾರೆ. ಅಲ್ಲಿರದಿರೋ ನಾವೇ ನಿಜವಾದ ಮೂರ್ಖರು, ಹುಚ್ಚರು. ಇರ್ಲಿ ಬಿಡಿ.

ನಾವೆಷ್ಟೇ ಜಾಣ್ರು, ಬುದ್ದಿವಂತ್ರು, ಮೀನು ತಿಂದು ಮಿದುಳು ಹುರಿಮಾಡ್ಕೊಂಡೋರು, ಪುಸ್ತಕವನ್ನು ಮಸ್ತಕಕ್ಕೇರಿಸಿಕೊಂಡು ನಮ್ಮ ಮಸ್ತಕವನ್ನೇ ಒಂದು ಪುಸ್ತಕವನ್ನಾಗಿಸಿ ಕೊಂಡವರಾದರೂ ನಾವು ನಮ್ಮ ಜೀವನದ ಒಂದಲ್ಲ ಒಂದು ಹಂತದಲ್ಲಿ ಮೂರ್ಖರಾಗಿ ಬಿಟ್ಟಿರುತ್ತೀವಿ. ಅದಕ್ಕೆ ಯಾರೂ ಹೊರತಲ್ಲ. ಆ ಸಂಗತಿಯನ್ನೇ ನಿಮಗೆ ವಿವರಿಸಿ ಹೇಳ್ತೀನಿ ಕೇಳಿ.

ಹೀಗೆ ಒಮ್ಮೆ ಫೇಸ್‌ಬುಕ್‌ಲ್ಲಿ ಭೇಟಿಯಾದ ಸುಂದರವಾದ ಗೆಳತಿಯೊಬ್ಬಳಿಗೆ ನಾನು ರೆಗ್ಯುಲರ್ ಆಗಿ ಕೊಡುತ್ತಿದ್ದ ನನ್ನ ಕಾಮೆಂಟ್, ಶೇರ್, ಲೈಕ್‌ಗಳಿಂದ ಅವಳಿಗೆ ಹೆಚ್ಚು ಹತ್ತಿರವಾಗುತ್ತಾ ಹೋಗಿ, ಕೊನೆಗೆ  ನಾನವಳಿಗೆ ನೀನು ಈಗಾಗಲೇ ಯಾರನ್ನಾದ್ರೂ ಲವ್ ಮಾಡ್ತಿದ್ದೀಯಾ? ಎಂದು ಕೇಳುವವರೆಗೂ ಬಂದು, ಒಂದು ದಿನ ನಾನವಳಿಗೆ ಆ ಪ್ರಶ್ನೆ ಕೇಳಿಯೇ ಬಿಟ್ಟೆ. ಅದಕ್ಕವಳು ನೋ ವೇಟಿಂಗ್ ಎಂದು ಉತ್ತರ ಕೊಟ್ಟಳು.

ಅದನ್ನು ಕೇಳಿದ ನನ್ನ ಮನಸ್ಸಿಗೆ ಹತ್ತು ಫರ್ಲಾಂಗ್ ದೂರವನ್ನು ಒಮ್ಮೆಲೇ ಜಿಗಿದ ಖುಷಿ. ಆಮೇಲೆ ನಾನವಳಿಗೆ ವಿಚ್ ಟೈಪ್ ಆಫ್ ಗೈ ಯೂ ವಿಶ್, ಹೌ ಈಸ್ ಯೂವರ್ ಡ್ರೀಮ್ ಬಾಯ್ ಎಂದು ಕೇಳಿದೆ. ಅದಕ್ಕವಳು ಟಾಲ್, ಹ್ಯಾಂಡ್‌ಸಮ್ ಯಾಸ್ ವೆಲ್ ಯಾಸ್ ಸೆನ್ಸಿಟಿವ್ ಆಂಡ್ ಕೇರಿಂಗ್ ಅಂತಾ ಉತ್ತರ ಕೊಟ್ಳು. ಇದನ್ನು ಕೇಳಿದ ಮೇಲಂತೂ ಇನ್ನು ಆ ಸೀಟ್‌ಲ್ಲಿ ನಾನೇ ಬಿಡು ಅಂತಂದುಕೊಂಡೆ.

ಏಕೆಂದರೆ ಅವಳು ಹೇಳಿದ ಎಲ್ಲಾ ಕ್ವಾಲಿಟಿ ನನ್ನಲಿದ್ದು. ಅದನ್ನವಳಿಗೆ ತಿಳಿಸಿ ಐ ಲವ್ ಯೂ ಎಂದು ಹೇಳಿ, ನನ್ನದೊಂದು ಫೋಟೊ ಕೂಡ ಅಪ್‌ಲೋಡ್ ಮಾಡಿದೆ. ಆದರೆ ಇದೆಲ್ಲ ಆದ ಎರಡು ದಿನಕ್ಕೆ ಅವಳ ಕಡೆಯಿಂದ ದಿಸ್ ಇಸ್ ನಾಟ್ ಇಂಪಾಸಿಬಲ್ ಎಟ್ ಏನೀ ಕಾಸ್ಟ್ (ಈ ಜನ್ಮದಲ್ಲಿ ಅದು ಸಾಧ್ಯವಿಲ್ಲ)ಅಂತ ಉತ್ತರಿಸಿದಳು. ನಾನು ಆಶ್ಚರ್ಯ ಹಾಗೂ ಕುಸಿದ ಮನಸ್ಥಿತಿಯಲ್ಲಿ ಬಟ್ ವೈ ಎಂದು ಮರುಪ್ರಶ್ನೆ ಕೇಳಿದೆ.

ಆಗ ಅದಕ್ಕವನು (ಯೆಸ್ ನಿಜವಾಗಿ ಅವಳು ಅವನಾಗಿದ್ದ) ನಾನು ಹುಡುಗಿ ಅಲ್ಲ ಕಣೋ, ನಾನೂ ನಿನ್ನಂತೆ ಒಬ್ಬ ಟಾಲ್, ಹ್ಯಾಂಡ್‌ಸಮ್ ಗೈ ಅಂತಂದು ಮಾತು ಮುಂದುವರೆಸಿದ. ಅವನು ಫೇಸ್‌ಬುಕ್‌ನಲ್ಲಿ ಹೀಗೆ ಹುಡುಗಿ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡ್ಕೊಂಡು ತಮಾಷೆಗೆ ಹುಡುಗರೊಂದಿಗೆ ಥೇಟ್ ಹುಡುಗಿಯರಂತೆಯೇ ಚಾಟ್, ಫ್ಲರ್ಟ್ ಮಾಡ್ತಿರ್ತೀನಿ ಅಂದಾಗ ನನಗೆ ಆ ಕ್ಷಣ ಫೇಸ್‌ಬುಕ್‌ನಲ್ಲೇ ಅವನನ್ನ ಮರ್ಡರ್ ಮಾಡಬೇಕೆನಿಸುವಷ್ಟು ಸಿಟ್ಟು ಬಂದದ್ದು ಸುಳ್ಳಲ್ಲ.

ಹಾಗೆ ಅವನು ನಾನು ಅವನ ಬಕ್ರಾ (ಮೂರ್ಖ ಕುರಿ)ನಂ 127 ಅಂತೆ, ಇಲ್ಲಿವರೆಗೂ ಅವನು ಹೀಗೆ ಅವಳಾಗಿ ನನ್ನಂತೆಯೇ ಈಗಾಗಲೇ 126 ಹುಡುಗರಿಗೆ ಬಕ್ರಾ ಮಾಡಿದ್ದಾನಂತೆ. ಆ ಲಿಸ್ಟಿಗೆ ನಾನು ಹೊಸ ಸೇರ್ಪಡೆ ಅಂದ. ಒಮ್ಮೆ ನಾನು ಅವಳಾದ ಅವನೊಬ್ಬನ ಕೈಗೆ ಸಿಕ್ಕು ಮೂರ್ಖನಾಗಿದ್ದೆ. ನೀವೂ ಹೀಗೆ ಅವಳಾಗುವ ಅವನಂತಹವರಿಂದ ಎಚ್ಚರವಾಗಿರಿ. ಇಲ್ಲದಿದ್ದರೆ ಮೂರ್ಖಶಿಖಾಮಣಿಗಳಾದೀರಿ. ನನ್ನಂತೆ.
ಮಂಜುನಾಥ,ಎಸ್,ಕಟ್ಟಿಮನಿ, ವಿಜಯಪೂರ
*

ನಾಮ ಹಾಕಿಸಿಕೊಂಡಿದ್ದು
ನಾನು ಯಾವಾಗಲೂ ಜಾಗ್ರತೆಯಿಂದಲೇ ಇರುತ್ತೇನೆ. ಮನೆಗೆ ಹೊಸಬರು ಬಂದರೆ ಹುಷಾರಾಗೇ ವ್ಯವಹರಿಸುವುದರಲ್ಲಿ ನಾನು ಚಾಲಾಕಿ. ಆದರೂ, ಕೆಲವೊಮ್ಮೆ ಬುದ್ಧಿವಂತಿಕೆ ಇದ್ದರೂ ಸಣ್ಣ ಮೂರ್ಖತನದಿಂದ ಯಡವಟ್ಟು ಮಾಡಿಕೊಳ್ಳುತ್ತೇವೆ. ಅದಕ್ಕೆ ಉದಾಹರಣೆ ಈ ಘಟನೆ.

ಟಿವಿ ಕೇಬಲ್‌ನ ತಿಂಗಳ ಬಾಡಿಗೆಯನ್ನು ನಾವು ಆರು ತಿಂಗಳಿಗೊಮ್ಮೆ ಪಾವತಿಸುವ ಪರಿಪಾಠ ಇಟ್ಟುಕೊಂಡಿದ್ದೇವೆ. ಪದೇ ಪದೇ ನಮ್ಮ ಮನೆಯ ಬಾಗಿಲಿಗೆ ಕೇಬಲ್‌ನವರು ಬರುವುದು ಬೇಡವೆಂದು ಹೀಗೆ ಮಾಡುತ್ತೇವೆ. ಒಮ್ಮೆ ಮೂರ್ನಾಲ್ಕು ಜನ ಹುಡುಗರು ಕೈಯಲ್ಲಿ ಒಂದು ರಸೀತಿ ಹಿಡಿದು ಬಂದು ಗೇಟ್ ತೆಗೆದರು. ನಮ್ಮ ಯಜಮಾನರು ಕಿಟಕಿಯಿಂದ ನೋಡಿ, ಕೇಬಲ್‌ನವರು ಇರಬೇಕು ಎಂದು ಒಳಗೇನೋ ಕೆಲಸದಲ್ಲಿದ್ದ ನನಗೆ ಕೂಗಿ ಹೇಳಿದರು.

ನಾನೂ ಇರಬಹುದೇನೋ ಎಂದು ಕೇಬಲ್ ಕಾರ್ಡ್  ತೆಗೆದುಕೊಂಡು ಎಂಟ್ರಿ ಮಾಡಿಸಿ ದುಡ್ಡು ಕೊಡುವ ಸಲುವಾಗಿ ಮುಂಬಾಗಿಲಿಗೆ ಬಂದೆ. ನನ್ನ ಉದ್ದೇಶ ಅವರಿಗೆ ಅರಿವಿರಲಿಲ್ಲ. ಬಂದವರು ದೈನ್ಯತೆಯಿಂದಲೋ ದೇಶಾವರಿ ನಗೆ ಬೀರುತ್ತಲೋ ದುಡ್ಡಿಗಾಗಿ ಬೇಡಿಕೆ ಮುಂದಿಟ್ಟರು. ನನ್ನ ತಲೆ ಅಂದು ಬಹುಶಃ ಖಾಲಿಯಿತ್ತೋ ಅಥವಾ ಬಂದವರು ಕೇಬಲ್ ದುಡ್ಡಿನವರೇ ಎಂದುಕೊಂಡೋ ಕೈಯಲ್ಲಿದ್ದ ಆರು ತಿಂಗಳ ಬಾಡಿಗೆ, ₹1,200 ಕೊಟ್ಟು, ಕಾರ್ಡ್‌ನಲ್ಲಿ ಎಂಟ್ರಿ ಮಾಡಿಸಿಕೊಳ್ಳಲು ಅವರಿಗೆ ಕಾರ್ಡ್‌ ಕಾರ್ಡ್‌ ಕೊಟ್ಟೆ.

ಅವರಿಗೆ ಕನ್‌ಫ್ಯೂಸ್ ಆಯಿತೇನೋ, ಆದರೂ ಚಾಲಾಕಿ, ಕ್ಷಣದಲ್ಲೇ ನನ್ನಿಂದ ಕಾರ್ಡ್ ತೆಗೆದುಕೊಂಡು ಏನೋ ಬರೆದು ವಾಪಸ್ ಕೊಟ್ಟ. ಏನು ಬರೆದರು ಎಂಬುದನ್ನು ನೋಡದೆ ನಾನು ತೆಗೆದು ಇಟ್ಟೆ. ಐದು ಹತ್ತು ನಿಮಿಷ ಆಯಿತು, ಇದ್ದಕ್ಕಿದ್ದಂತೆ ನನಗೆ ಅನುಮಾನ ಶುರವಾಯ್ತು. ಯಾವಾಗಲೂ ಬರುವ ಹುಡುಗ ಬಂದಿರಲಿಲ್ಲವಲ್ಲ, ಹೊಸಬನನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದಾರಾ ಎಂಬ ಆಲೋಚನೆ ಬರುತ್ತಿದ್ದಂತೆ ನನ್ನ ಯಜಮಾನರಿಗೆ ಕೇಳಿದೆ. ‘ಅವರು ಕೇಬಲ್ ಹುಡುಗರು ಎಂದು ನಿಮಗೆ ಹೇಗೆ ತಿಳಿಯಿತು’ ಎಂದು. ವಿಚಾರಿಸಿದಿರಾ ಎಂದೆ. ಅವರು ಕಕ್ಕಾಬಿಕ್ಕಿ. ಇಲ್ಲ, ನಿನಗೆ ಗೊತ್ತಾಗಬಹುದು ಎಂದು ಸುಮ್ಮನಾದೆ ಎಂದರು.

ಯಾಕೋ ನನ್ನ ಮನಸ್ಸಿಗೆ ತಕ್ಷಣ ಹೊಳೆಯಿತು. ಕೇಬಲ್ ಅವರಿಗೆ ಫೋನ್ ಮಾಡಿದೆ. ಅವರು ಇಲ್ಲ, ಕಲೆಕ್ಷನ್‌ಗೆ ಕಳಿಸಿಲ್ಲ ಎಂದರು. ಬಹುಶಃ ನನ್ನಿಂದ ಹತ್ತು ರೂಪಾಯಿ ಕೂಡ ನಿರೀಕ್ಷೆ ಮಾಡದಿದ್ದ ಅವರು ಸಾವಿರದಿನ್ನೂರು ರೂಪಾಯಿ ಅವರ ಕೈ ಸೇರಿದ ತಕ್ಷಣ ಹುಸಿನಗೆ ನಗುತ್ತಾ ಜಾಗ ಖಾಲಿ ಮಾಡಿದ ಕ್ಷಣ ಕಣ್ಣ ಮುಂದೆ ಬಂತು. ಕಾರ್ಡ್‌ ತೆಗೆದು ಏನು ಎಂಟ್ರಿಯಾಗಿರಬಹುದೆಂದು ನೋಡಿದೆ. ಜಿಲೇಬಿಯಂತೆ ಅಕ್ಷರಗಳನ್ನು ಸುತ್ತಿ ಸುತ್ತಿ ಬರೆದು ಕೊಟ್ಟಿದ್ದರು.
ಶ್ಯಾಮಲಾ ಎಚ್‌.ಎನ್‌. ಬೆಂಗಳೂರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT