ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪತ್ತೆ ವಿಮಾನದಲ್ಲಿ ಕನ್ನಡಿಗ

Last Updated 23 ಜುಲೈ 2016, 22:30 IST
ಅಕ್ಷರ ಗಾತ್ರ

ಉಜಿರೆ: ನಾಪತ್ತೆಯಾದ ವಾಯುಪಡೆ ವಿಮಾನದಲ್ಲಿ ಬೆಳ್ತಂಗಡಿ ತಾಲ್ಲೂಕಿನ ಗುರುವಾಯನಕೆರೆ ನಿವಾಸಿ ಏಕನಾಥ ಶೆಟ್ಟಿ (49) ಅವರೂ ಇದ್ದರು. ಇದೀಗ ಅವರು ಸಂಪರ್ಕಕ್ಕೆ ಸಿಗದೆ ಇಡೀ ಕುಟುಂಬ ಕಂಗಾಲಾಗಿದೆ.

ಅವರ ಪತ್ನಿ ಜಯಂತಿ ಆಘಾತದಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಅವರನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೇನೆಯ ಅಧಿಕಾರಿಗಳು ಮನೆಯವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರೂ, ವಿಮಾನದಲ್ಲಿದ್ದವರ ಸುಳಿವು ಲಭ್ಯ ಇಲ್ಲ ಎಂಬ ಮಾಹಿತಿಯನ್ನಷ್ಟೇ ನೀಡುತ್ತಿದ್ದಾರೆ. ಇದರಿಂದಾಗಿ ಕುಟುಂಬದರ ಆಕ್ರಂದನ ಮುಗಿಲು ಮುಟ್ಟಿದೆ.

ಏಕನಾಥ ಶೆಟ್ಟಿ ಅವರ ಪತ್ನಿ ಜಯಂತಿ ಉಜಿರೆಯಲ್ಲಿ ಎಸ್‌ಡಿಎಂ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿದ್ದರೆ, ಹಿರಿಯ ಮಗಳು ಆಶಿತಾ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿ. ಪುತ್ರ ಅಕ್ಷಯ 10ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ.

3 ದಿನದ ಹಿಂದೆಯಷ್ಟೇ ನಿರ್ಗಮನ: ತಂಗಿಯ ಮನೆಯ ಗೃಹ ಪ್ರವೇಶಕ್ಕೆಂದು ಇದೇ 6ರಂದು ಊರಿಗೆ ಬಂದಿದ್ದ ಏಕನಾಥ ಅವರು 19ರಂದು ಚೆನ್ನೈಗೆ ನಿರ್ಗಮಿಸಿದ್ದರು. ತಾವು ಭಾರತೀಯ ವಾಯುಪಡೆಯ ಎಎನ್‌–32 ವಿಮಾನದಲ್ಲಿ ಪೋರ್ಟ್‌ಬ್ಲೇರ್‌ಗೆ ಹೋಗುವುದಾಗಿ ಏಕನಾಥ ಅವರು ಮನೆಯವರಿಗೆ ತಿಳಿಸಿದ್ದರು. ಆದರೆ ಬಳಿಕ ಕರೆ ಮಾಡಿ ತಾವು ಈ ವಿಮಾನದಲ್ಲಿ ಹೋಗುವುದಿಲ್ಲ ಎಂದಿದ್ದರು. ಮತ್ತೆ ಮನಸ್ಸು ಬದಲಾಯಿಸಿ ಅದೇ ವಿಮಾನದಲ್ಲಿ ತೆರಳಿದ್ದು ಈ ಅಪಘಾತ ಸಂಭವಿಸಿದ ಬಳಿಕ ಗೊತ್ತಾಯಿತು.

‘ಶುಕ್ರವಾರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಸೇನಾ ಅಧಿಕಾರಿಗಳು ಮನೆಗೆ ಕರೆ ಮಾಡಿ ವಿಮಾನ ಕಣ್ಮರೆಯಾಗಿರುವ ಬಗ್ಗೆ ತಿಳಿಸಿದರು. ಶನಿವಾರ ಮತ್ತೆ ಕರೆ ಮಾಡಿ ವಿಮಾನಕ್ಕಾಗಿ ತೀವ್ರ ಶೋಧ ನಡೆಯುತ್ತಿದೆ ಎಂಬ ಮಾಹಿತಿ ನೀಡಿದರು. ಅದರ ಹೊರತಾಗಿ ಬೇರೆ ಯಾವುದೇ ಮಾಹಿತಿಯೂ ನಮಗೆ ಲಭಿಸಿಲ್ಲ’ ಎಂದು ಏಕನಾಥ ಅವರ ಬಾವ ಸತೀಶ್‌ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT