ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕಿ ಆಯ್ಕೆಯ ಕಸರತ್ತು

Last Updated 29 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಸಿನಿಮಾಗೆ ನಾಯಕಿಯ ಆಯ್ಕೆ ಕೂಡ ನಾಯಕನಷ್ಟೇ ಮುಖ್ಯವಾದದ್ದು. ಧರ್ಮೇಂದ್ರ–ಹೇಮಾಮಾಲಿನಿ, ರಾಜ್‌ಕುಮಾರ್‌–ಭಾರತಿ, ವಿಷ್ಣುವರ್ಧನ್‌–ಆರತಿ ಹೀಗೆ ಕೆಲವು ಜೋಡಿಗಳನ್ನು ನೋಡಲೆಂದೇ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿದ್ದ ಕಾಲವಿತ್ತು. ಹೊಸ ಕಥೆಯನ್ನು ಹೆಣೆಯುವಾಗ ನಾನು ಸುಹಾಸಿನಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡಿರಲಿಲ್ಲ.

ಸುಹಾಸಿನಿಯನ್ನು ಆ ಪಾತ್ರಕ್ಕೆ ಹಾಕಿಕೊಳ್ಳುವುದು ಬಜೆಟ್‌ ಹಾಗೂ ಅನುಕೂಲದ ದೃಷ್ಟಿಯಿಂದ ಒಳ್ಳೆಯದು ಎಂದು ವಿಷ್ಣು ಸಲಹೆ ನೀಡಿದ. ಅದಕ್ಕೆ ನಾನು ಒಪ್ಪಲಿಲ್ಲ. ಯಾಕೆಂದರೆ, ಕಥೆ ಸಿದ್ಧಪಡಿಸುವ ಯಾವ ಹಂತದಲ್ಲೂ ನಾನು ಸುಹಾಸಿನಿಯ ಕುರಿತು ಯೋಚಿಸಿಯೇ ಇರಲಿಲ್ಲ. ‘ಬೇರೆ ಯಾರನ್ನು ತಲೆಯಲ್ಲಿ ಇಟ್ಟುಕೊಂಡಿದ್ದೀಯ’ ಎಂದು ವಿಷ್ಣು ಪ್ರಶ್ನಿಸಿದ. ‘ಈ ಬಂಧನ’ ಸಿನಿಮಾದಲ್ಲಿ ವಿಷ್ಣುವಿಗೆ ಜೋಡಿಯಾಗಿ ಜಯಪ್ರದ ಅಭಿನಯಿಸಿದ್ದರು. ಚಿತ್ರಕಥೆ ಸಿದ್ಧಪಡಿಸುವಾಗ ಅವರು ನಾಯಕಿಯ ಪಾತ್ರಕ್ಕೆ ಸೂಕ್ತ ಎಂದು ನನಗೆ ಅನಿಸಿತ್ತು. ನಾಯಕ ಪ್ರೊಫೆಸರ್‌. ಅವನನ್ನು ಮದುವೆಯೇ ಆಗದೆ ಅವನ ಹೋರಾಟದ ಉದ್ದಕ್ಕೂ ಜೊತೆಗೆ ಇರುವಂಥ ಗಟ್ಟಿ ಪಾತ್ರ ಅದು. ವಾಗ್ವಾದ, ಪ್ರೇಮ, ಭಾವುಕ ದೃಶ್ಯಗಳ ಭಾಗವಾಗುವಂಥ ಪಾತ್ರ ಅದಾಗಿತ್ತು.

ಮದುವೆಯಾಗದೆ ಒಟ್ಟಿಗೆ ಇರುವ ‘ಲಿವ್‌–ಇನ್‌ ಸಂಬಂಧ’ವನ್ನು ನಾನು ಆಗಲೇ ಯೋಚಿಸಿದ್ದೆ. ಆ ಪಾತ್ರಕ್ಕೆ ಜಯಪ್ರದ ಸೂಕ್ತ ಎಂದೇ ಭಾವಿಸಿದ್ದೆ. ‘ಈ ಬಂಧನ’ ಸಿನಿಮಾ ತೆರೆಕಂಡ ನಂತರ ನನ್ನ ಆಲೋಚನೆಯನ್ನು ಬದಲಿಸಿಕೊಳ್ಳಬೇಕಾಗಿ ಬಂತು. ಆ ಸಿನಿಮಾ ಮೈಸೂರಿನಲ್ಲಿ ಸುಮಾರಾಗಿ ಹೋಗಿತ್ತಷ್ಟೆ. ನಿರೀಕ್ಷಿಸಿದಂಥ ಪ್ರತಿಕ್ರಿಯೆ ಸಿಗಲಿಲ್ಲ. ಆಗ ನಾನು ಜಯಪ್ರದ ಅವರನ್ನು ಹೊರತುಪಡಿಸಿ ಆ ಪಾತ್ರಕ್ಕೆ ಬೇರೆ ಯಾರು ಹೊಂದುತ್ತಾರೆ ಎಂದು ಯೋಚಿಸಲಾರಂಭಿಸಿದೆ. ರಾಧಾ, ಶೋಭನಾ ಹೆಸರುಗಳು ಹೊಳೆದವು. ಆ ಪಾತ್ರಕ್ಕೆ ಯಾರು ಹೊಂದಬಹುದು ಎಂದು ಸುಹಾಸಿನಿಯನ್ನು ವಿಚಾರಿಸಿದ್ದೆ. ಅವಳು ಕೂಡ ಶೋಭನಾ ಹೆಸರನ್ನು ಸೂಚಿಸಿದ್ದಳು. ಆದರೆ, ಆ ಕಾಂಬಿನೇಷನ್‌ ಅಷ್ಟು ಸರಿಹೋಗುವುದಿಲ್ಲ ಎಂದು ವಿಷ್ಣು ಅಭಿಪ್ರಾಯಪಟ್ಟ.

ಆಮೇಲೆ ನನಗೆ ಹೇಮಾಮಾಲಿನಿಯನ್ನೇ ಕನ್ನಡಕ್ಕೆ ತಂದರೆ ಹೇಗೆ ಎಂಬ ಯೋಚನೆ ಬಂತು. ವಿಷ್ಣು ಕೂಡ ಈ ಸಂಗತಿಯನ್ನು ಸ್ವಾಗತಿಸಿದ. ಆಮೇಲೆ ನಾಯಕಿಯ ಪಾತ್ರದ ವಿಶ್ಲೇಷಣೆ ಮಾಡಿದೆ. ದಾರವನ್ನು ಎಷ್ಟು ಹಿಂಜಬಹುದೋ ಅಷ್ಟು ಮಾತ್ರ ಎಳೆಯಲು ಸಾಧ್ಯ. ಇನ್ನೂ ಒತ್ತಡ ಹಾಕಿದರೆ ಅದು ಕಿತ್ತುಹೋಗುತ್ತದೆ. ಹೇಮಾಮಾಲಿನಿ ನನಗೆ ಆಪ್ತರಾಗಿದ್ದರು. ರಮೇಶ್‌ ಸಿಪ್ಪಿ ತರಹದ ದೊಡ್ಡ ನಿರ್ದೇಶಕರನ್ನು ಬಿಟ್ಟು ನನಗೆ ‘ಶರಾರಾ’ ಹಿಂದಿ ಸಿನಿಮಾ ನಿರ್ದೇಶಿಸುವ ಅವಕಾಶ ನೀಡಿದ್ದರು. ಅವರ ಜೊತೆಗಿದ್ದ ಆಪ್ತತೆಯ ಕುರಿತು ನನಗೆ ಭಯವೂ ಇತ್ತು. ಅವರನ್ನು ನಾಯಕಿಯಾಗಿ ಆಯ್ಕೆ ಮಾಡುವುದು ಬಜೆಟ್‌ನ ದೃಷ್ಟಿಯಿಂದ ದುಬಾರಿ. ಪಾತ್ರದ ಭಾವಗಳನ್ನು ಅವರು ಎಷ್ಟು ಅಭಿನಯಿಸಬಲ್ಲರು ಎನ್ನುವುದು ಇನ್ನೊಂದು ಜಿಜ್ಞಾಸೆ. ಅವರ ಜೊತೆಗಿದ್ದ ಆಪ್ತತೆಯೇ ಅಡಚಣೆ ಆದೀತೇನೋ ಎನ್ನುವುದು ನನಗಿದ್ದ  ಗುಮಾನಿ. ಈ ಎಲ್ಲಾ ದೃಷ್ಟಿಯಿಂದ ಹೇಮಾಮಾಲಿನಿ ನಮ್ಮ ಸಿನಿಮಾ ನಾಯಕಿಯ ಪಾತ್ರಕ್ಕೆ ಸೂಕ್ತವಲ್ಲ ಎಂಬ ತೀರ್ಮಾನಕ್ಕೆ ಬಂದೆ. ವಿಷ್ಣು ಮನೆಗೆ ಹೋಗಿ, ಆ ವಿಷಯವನ್ನು ತಿಳಿಸಿದೆ.

ವಿಷ್ಣುವಿಗೆ ಚಿತ್ರಕಥೆಯಲ್ಲಿ ನಾಯಕಿಯ ಪಾತ್ರ ಹೇಗೆ ಇರಬಹುದು ಎಂಬ ಕುತೂಹಲವಿತ್ತು. ಒಮ್ಮೆ ರೀಡಿಂಗ್‌ ಕೊಡು ಎಂದು ಕೇಳಿದ. ಇನ್ನೊಂದು ಸುಧಾರಿತ ಕರಡು ಸಿದ್ಧವಾಗುವವರೆಗೆ ವಿಷ್ಣುವಿಗೆ ರೀಡಿಂಗ್‌ ಕೊಡುವುದು ನನಗೆ ಇಷ್ಟವಿರಲಿಲ್ಲ. ನಾಯಕರಿಗೆ ಚಿತ್ರಕಥೆಯ ರೀಡಿಂಗ್‌ ಕೊಡುವುದು ಒಂದು ಸೂಕ್ಷ್ಮವಾದ ಕೆಲಸ. ಆ ಬಗೆಗೆ ಯೋಚಿಸಿದಾಗಲೆಲ್ಲಾ ನನಗೆ ದಿಲೀಪ್‌ಕುಮಾರ್‌ ಅವರಿಗೆ ರೀಡಿಂಗ್‌ ಕೊಟ್ಟ ಸಂದರ್ಭ ನೆನಪಾಗುತ್ತದೆ.
ಹೇಮಾಮಾಲಿನಿ ನಿರ್ಮಿಸಿದ್ದ ‘ಶರಾರಾ’ ಸಿನಿಮಾ ಚೆನ್ನಾಗಿ ಹೋಗುತ್ತಿತ್ತು. ಆಗ ಮುಂಬೈನಲ್ಲಿ ನನ್ನನ್ನು ಹಾಲಿವುಡ್‌ ಶೈಲಿಯ ನಿರ್ದೇಶಕ ಎಂದು ಅನೇಕರು ಗುರುತಿಸಿದ್ದರು. ದಿಲೀಪ್‌ ಕುಮಾರ್‌ ಅವರಿಗೆ ಹೊಂದುತ್ತದೆ ಎಂದುಕೊಂಡು ‘ಆಗ್‌ ಕಾ ದರಿಯಾ’ ಸಿನಿಮಾದ ಚಿತ್ರಕಥೆ ಸಿದ್ಧಪಡಿಸಿದ್ದೆ. ಅದರ ರೀಡಿಂಗ್‌ ಕೊಡಲು ಅವರ ಅನುಮತಿ ಪಡೆದದ್ದು ಹೇಮಾಮಾಲಿನಿ ಅವರ ಮೂಲಕವೇ.

ವೆಂಕಟರಾಮನ್‌ ಎನ್ನುವವರು ನನಗೆ ಆಗ ಸಿಕ್ಕಿದ್ದ ನಿರ್ಮಾಪಕರು. ಕನ್ನಡ ಸಿನಿಮಾಗಳನ್ನೂ ನಿರ್ಮಿಸಿದ್ದ ಅವರು ‘ಆಗ್‌ ಕಾ ದರಿಯಾ’ಗೆ ಹಣ ಹೂಡಲು ಮುಂದೆ ಬಂದಿದ್ದರು. ದಿಲೀಪ್‌ ಕುಮಾರ್‌ ಒಂದು ಕಥೆಯನ್ನು ಕೇಳಿ, ಅದನ್ನು ಸಿನಿಮಾ ಮಾಡಬೇಕೋ ಬೇಡವೋ ಎಂದು ನಿರ್ಧರಿಸಿಲು ಕೆಲವೊಮ್ಮೆ ಎಂಟು ಒಂಬತ್ತು ತಿಂಗಳು ತೆಗೆದುಕೊಂಡ ಉದಾಹರಣೆಗಳು ಇದ್ದವು. ‘ಶಂಕರಾಭರಣಂ’ ಸಿನಿಮಾವನ್ನು ಹಿಂದಿಯಲ್ಲಿ ಮಾಡೋಣ ಎಂದು ಅವರನ್ನು ಒಬ್ಬರು ಸಂಪರ್ಕಿಸಿದ್ದರಂತೆ. ಅದನ್ನು ನೋಡಿ ಸುಮ್ಮನಾಗಿದ್ದ ಅವರು, ಆ ಸಿನಿಮಾ ಮಾಡುವುದೋ ಬೇಡವೋ ಎಂದು ಹೇಳಲೇ ಇಲ್ಲವಂತೆ.

ಇಂಥ ಉದಾಹರಣೆಗಳನ್ನು ನಾನು ಮುಂಬೈನ ಆಪ್ತರಿಂದ ಕೇಳಿ ತಿಳಿದಿದ್ದೆ. ಒಂದು ಬೆಳಿಗ್ಗೆ ಕಥೆ ಹೇಳಲು ದಿಲೀಪ್‌ ಕುಮಾರ್‌ ನನಗೆ ಅನುಮತಿ ಕೊಟ್ಟರು. ಅವರ ಮನೆಗೆ ಹೋದೆ. ನನ್ನ ಕೈಲಿ ಆಗ ಇದ್ದುದು ಒಂದು ಪುಟದ ಸಾರಾಂಶ ಅಷ್ಟೆ. ಅವರ ಮನೆಗೆ ಹೋದವನೇ ಫೋನ್‌ ರಿಸೀವರ್‌ಗಳನ್ನು ಎತ್ತಿ ಇಡುವಂತೆ ವಿನಂತಿಸಿಕೊಂಡೆ. ಅದಕ್ಕೆ ಅವರೂ ಒಪ್ಪಿದರು. ಸುಮಾರು ಐವತ್ತು ನಿಮಿಷ ಅವರಿಗೆ ಕಥೆಯನ್ನು ಬಿಡಿಸಿ ಹೇಳಿದೆ. ಅವರು ದಿವ್ಯ ಮೌನದಲ್ಲಿ ಇದ್ದರು. ಪ್ರತಿಕ್ರಿಯೆಯನ್ನೇ ನೀಡಲಿಲ್ಲ. ಚಹಾ ಕುಡಿದವರೇ, ಮತ್ತೊಮ್ಮೆ ಸಿಗೋಣ ಎಂದಷ್ಟೇ ಹೇಳಿ ಕಳುಹಿಸಿದರು.

ನನಗೆ ಆಗ ಸಂಜಯ್‌ ದತ್‌ ಪರಿಚಯವಾಗಿತ್ತು. ನಾನು ಕರೆದರೆ ಮರುದಿನವೇ ಕಾಲ್‌ಷೀಟ್‌ ಕೊಡುವಷ್ಟರ ಮಟ್ಟಿಗೆ ಅವರು ಆಪ್ತರಾಗಿದ್ದರು. ಅವರ ಜೊತೆಗೇ ಒಂದು ಸಿನಿಮಾ ಮಾಡೋಣ, ದಿಲೀಪ್‌ ಕುಮಾರ್‌ ಅವರನ್ನು ಒಪ್ಪಿಸುವ ಯೋಚನೆಯನ್ನು ಸದ್ಯಕ್ಕೆ ಕೈಬಿಡೋಣ ಎಂದು ವೆಂಕಟರಾಮನ್‌ ಅವರಿಗೆ ಹೇಳಿದೆ. ಆದರೆ, ಅವರಿಗೆ ದಿಲೀಪ್‌ ಕುಮಾರ್‌ ಸಿನಿಮಾ ಮಾಡುವುದು ದೊಡ್ಡ ಕನಸಾಗಿತ್ತು. ಸನ್‌ ಅಂಡ್‌ ಸ್ಯಾಂಡ್‌ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ನಾವು, ಆ ದಿನ ಸಂಜೆ ನಮ್ಮ ನಮ್ಮ ಊರುಗಳಿಗೆ ಮರಳಲು ನಿರ್ಧರಿಸಿದೆವು. ಅವರು ಚೆನ್ನೈಗೆ, ನಾನು ಬೆಂಗಳೂರಿಗೆ ವಿಮಾನದ ಟಿಕೆಟ್‌ ಮಾಡಿಸಿಕೊಂಡೆವು. ನಾವು ಇನ್ನೇನು ಹೊರಡಬೇಕು, ಅಷ್ಟರಲ್ಲಿ ದಿಲೀಪ್‌ ಕುಮಾರ್‌ ಭೇಟಿ ಮಾಡಲು ಕರೆದಿದ್ದಾರೆ ಎಂಬ ಸಂದೇಶ ಬಂತು. ಮರೀನ್‌ ಡ್ರೈವ್‌ನಲ್ಲಿ ‘ಮಶಾಲ್‌’ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಅಲ್ಲಿಗೆ ದಿಲೀಪ್‌ ಕುಮಾರ್‌ ನಮ್ಮನ್ನು ಕರೆದಿದ್ದರು.

ಜೋರು ಮಳೆಯನ್ನೂ ಲೆಕ್ಕಿಸದೆ ನಾವು ಅಲ್ಲಿಗೆ ಹೊರಟೆವು. ವಿಮಾನದ ಟಿಕೆಟ್‌ಗಳನ್ನು ಕ್ಯಾನ್ಸಲ್‌ ಮಾಡಿಸಿ, ಹೊಸ ಕನಸು ನನಸಾಗುವುದೇನೋ ಎಂದು ಬೇಗನೆ ಮರೀನ್‌ ಡ್ರೈವ್‌ ತಲುಪಿದೆವು. ಅಲ್ಲಿ ಅಮರೀಶ್‌ಪುರಿ ಇದ್ದರು. ನನ್ನ ‘ಸಿಂಹದ ಮರಿ ಸೈನ್ಯ’, ‘ಗಂಡ ಭೇರುಂಡ’ ಸಿನಿಮಾಗಳಲ್ಲಿ ಅಮರೀಶ್‌ಪುರಿ ಅಭಿನಯಿಸಿದ್ದರು. ನನಗೆ ಅವರ ಪರಿಚಯ ಚೆನ್ನಾಗಿಯೇ ಇತ್ತು. ಅವರು ದಿಲೀಪ್‌ ಕುಮಾರ್‌ ಬಳಿ ನನ್ನ ಬಗ್ಗೆ ಕೆಲವು ಒಳ್ಳೆಯ ಮಾತುಗಳನ್ನು ಹೇಳಿದರು. ನಾನು ಬಿಡಿಸಿ ಹೇಳಿದ್ದ ಕಥೆಯನ್ನು ದಿಲೀಪ್‌ ಕುಮಾರ್‌ ಇಷ್ಟಪಟ್ಟಿದ್ದರು. ಮತ್ತೊಂದು ರೀಡಿಂಗ್ ಕೊಡುವಂತೆ ಕೇಳಿದರು.

ಒಂದು ಸಲ ರೀಡಿಂಗ್‌ ಕೊಟ್ಟಿದ್ದೇ ನನಗೆ ದೊಡ್ಡ ವಿಷಯವಾಗಿತ್ತು. ಮತ್ತೊಮ್ಮೆ ಹೇಗಪ್ಪಾ ಎಂದು ಮನಸ್ಸಿನಲ್ಲೇ ಅಳುಕು ಶುರುವಾಯಿತು. ಮರುದಿನ ಇನ್ನೊಂದು ರೀಡಿಂಗ್‌ ಕೊಟ್ಟೆ. ನಿರ್ಮಾಪಕರು ಕೂಡ ಬಂದಿದ್ದರು. ಆ ಸಿನಿಮಾ ಮಾಡೋಣ ಎಂದು ದಿಲೀಪ್‌ ಕುಮಾರ್‌ ಹೇಳಿದ್ದೇ ತಡ, 25 ಲಕ್ಷ ರೂಪಾಯಿ ಮುಂಗಡ ಹಣವನ್ನು ಅವರಿಗೆ ಕೊಟ್ಟು ಬುಕ್‌ ಮಾಡಿಕೊಂಡೆವು.

ಕಥೆ ಕೇಳಬೇಕು ಎಂದು ವಿಷ್ಣು  ಕೇಳಿದಾಗ, ನನಗೆ ರೀಡಿಂಗ್‌ ಕೊಡಲು ಮನಸ್ಸಾಗಲಿಲ್ಲ. ಕೆಲವು ದಿನಗಳ ಕಾಲಾವಕಾಶ ಕೇಳಿಕೊಂಡು ಬಂದವನೇ ಮತ್ತೆ ನಾಯಕಿಯ ಬಗ್ಗೆ ಯೋಚಿಸಲಾರಂಭಿಸಿದೆ. ಹಿಂದಿಯಲ್ಲಿ ರೇಖಾ ಅವರನ್ನು ಹಾಕಿಕೊಂಡು ಒಂದು ಸಿನಿಮಾ ಮಾಡಿದ್ದೆ. ಅವರು ವಿಷ್ಣುವಿಗೆ ಜೋಡಿ ಆಗಬಹುದು ಅನ್ನಿಸಿತು. ಅವರು ಬೆಂಗಳೂರಿಗೆ ಬಂದಾಗಲೆಲ್ಲಾ ನನ್ನನ್ನು ಭೇಟಿ ಮಾಡುತ್ತಿದ್ದರು. ದಿಲೀಪ್‌ ಕುಮಾರ್‌, ರೇಖಾ, ವಿಷ್ಣು, ನಾನು ಒಟ್ಟಾಗಿ ಅನೇಕ ಸಲ ಚರ್ಚೆ ನಡೆಸಿರುವ ಉದಾಹರಣೆಗಳೂ ಇವೆ. ರೇಖಾ ಅವರನ್ನು ಕುರಿತು ಅನೇಕ ಟೀಕೆಗಳು ಇದ್ದವಾದರೂ, ನಾನು ಅವರ ಜೊತೆ ಸಿನಿಮಾ ಮಾಡಿದಾಗ ತೊಂದರೆಯೇನೂ ಆಗಲಿಲ್ಲ. ಎರಡು  ಮೂರು ಟೇಕ್‌ ಚಿತ್ರೀಕರಿಸಿದಾಗಲೂ ಅವರು ಸಹಕರಿಸಿದ್ದರು.

ರೇಖಾ ನಾಯಕಿ ಆಗಬಹುದೇ ಎಂದು ವಿಷ್ಣುವನ್ನು ಕೇಳಲಿಲ್ಲ. ಮೊದಲು ಅವರ ಕಾಲ್‌ಷೀಟ್‌ ಸಿಗುತ್ತದೆಯೇ ಎಂದು ಖಾತರಿಪಡಿಸಿಕೊಳ್ಳಲು ಮುಂದಾದೆ. ಅವರ ಆಪ್ತ ಕಾರ್ಯದರ್ಶಿಗೆ ಫೋನ್‌ ಮಾಡಿದೆ. ನನ್ನ ‘ಹೂವು ಹಣ್ಣು’ ಸಿನಿಮಾ ನೋಡಿ ರೇಖಾ ಮೆಚ್ಚಿಕೊಂಡಿದ್ದರು. ಅಂಥ ಪಾತ್ರವನ್ನು ಹಿಂದಿಯಲ್ಲಿ ಮಾಡುವ ಬಯಕೆ ಅವರಿಗೆ ಇತ್ತು. ನಾನು ಅವರಿಗೆ ಸಿನಿಮಾದ ಪ್ರಸ್ತಾಪ ಮಾಡುತ್ತಿದ್ದಂತೆ, ಹಿಂದಿ ಚಿತ್ರವೇ ಇರಬಹುದು ಎಂದು ಭಾವಿಸಿದರು. ನಾನು ದಕ್ಷಿಣ ಭಾರತದ ಸಿನಿಮಾ ಎಂದು ಹೇಳಿದಾಗ, ಅವರ ಮಾತಿನ ಧಾಟಿ ಬದಲಾಯಿತು. ತಮಿಳು, ತೆಲುಗು ಸಿನಿಮಾಗಳ ಕೆಲವು ಅವಕಾಶಗಳನ್ನು ಅವರು ನಿರಾಕರಿಸಿದ್ದರು. ಈಗ ಕನ್ನಡ ಸಿನಿಮಾ ಮಾಡಿದರೆ ಅದೇ ತಮಗೆ ಮುಳುವಾಗಬಹುದು ಎಂಬ ಅಳುಕು ಅವರಿಗಿತ್ತು. ಯೋಚಿಸಲು ಒಂದಿಷ್ಟು ಕಾಲಾವಕಾಶ ಕೇಳಿದರು. ಕಥೆ ಗಟ್ಟಿಯಾಗಿದ್ದರೆ ಅವರು ನಿರಾಕರಿಸುವುದಿಲ್ಲ ಎಂಬ ಆತ್ಮವಿಶ್ವಾಸ ನನಗಿತ್ತು.

ಮತ್ತೊಮ್ಮೆ ಚಿತ್ರಕಥೆಯ ನಾಲ್ಕನೇ ಕರಡನ್ನು ಓದಿದೆ. ನಾಯಕಿಯ ಪಾತ್ರಕ್ಕೆ ಇನ್ನಷ್ಟು ಕಸುವು ಬೇಕು ಅನ್ನಿಸಿತು. ಆಮೇಲೆ ವಿಷ್ಣುವಿನ ಬಳಿಗೆ ಹೋಗಿ, ರೇಖಾ ನಾಯಕಿಯಾದರೆ ಹೇಗೆ ಎಂದೆ. ಅವನು ಕೂಡ ಅಷ್ಟು ದೊಡ್ಡ ನಾಯಕಿಯನ್ನು ನಿಭಾಯಿಸುವುದು ಕಷ್ಟವಲ್ಲವೇ ಎಂದು ಅಭಿಪ್ರಾಯಪಟ್ಟ.ನಾನು ಹಿಂದೆ ಅವರ ಜೊತೆ ಸಿನಿಮಾ ಮಾಡಿದ ಅನುಭವ ಇದೆ ಎಂದು ಹೇಳಿದ ಮೇಲೆ ಅವನು ಒಪ್ಪಿದ. ಚಿತ್ರಕಥೆಯನ್ನು ಸ್ವಲ್ಪ ತಿದ್ದುವ ಅಗತ್ಯ ಇದೆ ಎಂದೆ. ಅದಕ್ಕೂ ಸಮ್ಮತಿ ನೀಡಿದ. ನಾನು ಹಾಗೂ ಇನ್ನೂ ಮೂವರು ಬರಹಗಾರರು ಚಿತ್ರಕಥೆಯನ್ನು ತಿದ್ದಲೆಂದು ಸಕಲೇಶಪುರದಲ್ಲಿ ಇದ್ದ ಸ್ನೇಹಿತನ ಎಸ್ಟೇಟ್‌ಗೆ ನನ್ನ ಕಾರಿನಲ್ಲಿ ಹೊರಟೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT