ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿಗೂ ಗುರುಕುಲ

Last Updated 8 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ನಗರದ ನಾಯಿಗಳಿಗೆ ಸನ್ನಡತೆಯ ಪಾಠ ಕಲಿಸುವ ಗುರುಕುಲ ಶಂಕರಮಠದ ಬಳಿ ಇದೆ. ಐದಾರು ತಿಂಗಳಲ್ಲಿ ನಾಯಿಗಳಿಗೆ ಉತ್ತಮ ವರ್ತನೆ ಕಲಿಸುವುದರ ಜೊತೆಗೆ ಅವುಗಳ ಮಾಲೀಕರಿಗೂ ಕೆಲವು ಸೂಕ್ಷ್ಮಗಳನ್ನು ಇಲ್ಲಿ ಕಲಿಸುತ್ತಾರೆ.

ನಿಮ್ಮ ಮನೆಯ ಮುದ್ದಿನ ನಾಯಿ ಪಪ್ಪಿಗೋ, ಟಿಂಕುವಿಗೋ ಹೆದರಿ ನಿಮ್ಮ ಮನೆಗೆ ಸ್ನೇಹಿತರು, ಸಂಬಂಧಿಕರು ಬರಲು ಭಯ ಪಡುತ್ತಾರಾ? ನಿಮ್ಮ ಮನೆ ನಾಯಿಗೂ ಮನುಷ್ಯರಂತೆ ಉತ್ತಮ ನಡತೆ ಹಾಗೂ ಅನ್ಯರೊಡನೆ ಹೇಗೆ ವರ್ತಿಸಬೇಕು ಎಂದು ಕಲಿಸಬೇಕಾ? ಹಾಗಾದರೆ ಬರೀ ಐದಾರು ತಿಂಗಳಲ್ಲಿ ನಾಯಿಗೆ ಸನ್ನಡತೆ ಕಲಿಸುವ ‘ಗುರುಕುಲ’ದ ದಾರಿ ಹಿಡಿದರಾಯಿತು.

ಇಂದು ನಗರದಲ್ಲಿ ನಾಯಿ ಪ್ರೇಮಿಗಳ ಸಂಖ್ಯೆ ಹೆಚ್ಚುತ್ತಿದೆ. ತಮ್ಮ ಮನೆಯ ಮಕ್ಕಳಂತೆ ನಾಯಿಯನ್ನು ನೋಡಿಕೊಳ್ಳುವ ಅನೇಕರು ನಮಮ ನಡುವೆ ಇದ್ದಾರೆ. ನಾಯಿ ಆಸ್ಪತ್ರೆ, ಅನಾಥಾಶ್ರಮ, ನಾಯಿಗಳ ಸ್ಪಾ, ನಾಯಿ ಬೇಕರಿ ಇವೆಲ್ಲವೂ ತಲೆಎತ್ತಿದ್ದಾಯಿತು. ಇವುಗಳ ಸಾಲಿಗೆ ‘ನಾಯಿಗಳ ಗುರುಕುಲ’ ಸೇರ್ಪಡೆಯಾಗಿದೆ.

‘ಕೆ9 ಗುರುಕುಲ–ಎ ಸ್ಕೂಲ್ ಫಾರ್‌ ಪೆಟ್ಸ್‌’ ಎಂಬ ಈ ಸಂಸ್ಥೆ ಆರಂಭವಾದದ್ದು 2011ರಲ್ಲಿ.  ಬಸವನಗುಡಿಯ ಶಂಕರಮಠದ ಸಮೀಪ ಇರುವ ಈ ನಾಯಿ ಗುರುಕುಲದ ರೂವಾರಿ ಶಿವ ಸ್ವಾಮಿ.

ಗುರುಕುಲದ ಸಮೀಪದಲ್ಲೇ ಇರುವ  ಮೈದಾನದಲ್ಲಿ ಪ್ರತಿದಿನ ಬೆಳಿಗ್ಗೆ 5.30ರಿಂದ 7.30ರವರೆಗೆ ಸ್ವಾಮಿ ಎನ್ನುವವರು ನಾಯಿಗಳಿಗೆ ತರಬೇತಿ ನೀಡುತ್ತಾರೆ. ಕೆ9ನಲ್ಲಿ ವಿದೇಶಿ ನಾಯಿಗಳಿಗಷ್ಟೇ ಅಲ್ಲದೆ, ಬೀದಿ ನಾಯಿಗಳಿಗೂ ತರಬೇತಿ ನೀಡಲಾಗುತ್ತದೆ.

ತರಬೇತಿ ವಿಧಾನ
ಸಾಮಾಜಿಕವಾಗಿ ಮನುಷ್ಯನ ನಡತೆ ಹೇಗೆ ಉತ್ತಮವಾಗಿರುತ್ತದೋ, ಮನುಷ್ಯ ಹೇಗೆ ಜನರೊಂದಿಗೆ ಬೆರೆಯುತ್ತಾನೋ ಅಂತೆಯೇ ಪ್ರೀತಿಯ ನಾಯಿ ಇತರ ಪ್ರಾಣಿಗಳೊಂದಿಗೆ ಹಾಗೂ ಮನುಷ್ಯರೊಂದಿಗೆ ಬೆರೆಯಬೇಕು ಎಂಬ ಆಸೆ ನಾಯಿಯ ಮಾಲೀಕರಿಗೆ ಇರುತ್ತದೆ. ಆದರೆ ನಾಯಿಗಳು ಸಾಮಾನ್ಯವಾಗಿ ಅಪರಿಚಿತರು, ಇತರ ಪ್ರಾಣಿಗಳನ್ನು ಕಂಡ ಕೂಡಲೇ ಎಗರಿ, ಕಚ್ಚಲು ಹೋಗುತ್ತದೆ. ಇದನ್ನು ತಪ್ಪಿಸಲು ಸಾಮಾಜಿಕವಾಗಿ ಜನರೊಂದಿಗೆ ಹೇಗೆ ಬೆರೆಯಬೇಕು ಎಂದು ನಾಯಿಗಳಿಗೆ ಕಲಿಸುತ್ತಾರೆ ಸ್ವಾಮಿ.

ಹಲವರಿಗೆ ನಾಯಿ ಮೇಲೆ ವಿಪರೀತ ಪ್ರೀತಿ ಇದ್ದರೂ ಅದಕ್ಕೆ ಹೆದರಿ ಮನೆಗೆ ಅತಿಥಿಗಳು ಬರದೇ ಇರಬಹುದೆಂಬ ಆತಂಕದಿಂದ ಅನೇಕರು ನಾಯಿಗಳನ್ನು ಸಾಕುವುದಿಲ್ಲ.  ಇನ್ನು ಕೆಲವು ನಾಯಿಗಳು ಆಸ್ಪತ್ರೆಗೆ ಕರೆದೊಯ್ದಾಗ ಇತರ ನಾಯಿಗಳೊಂದಿಗೆ ಕಚ್ಚಾಡುವುದು, ಕೂಗಾಡುವುದು ಮಾಡುತ್ತವೆ. ತಾನು, ಸಾಕಿದ ಮನೆಯವರು ಅಷ್ಟೇ ತನ್ನ ಜಗತ್ತು ಎಂಬಂತಿರುವ ನಾಯಿಗಳಿಗೆ ನಡತೆ ಹಾಗೂ ಸಾಮಾಜಿಕ ವರ್ತನೆಯ ತರಬೇತಿ ನೀಡುವುದು ಕೆ9 ಗುರುಕುಲದ ಮುಖ್ಯ ಉದ್ದೇಶ.

ನಾಯಿಗೆ ಮೂಲ ನಡತೆ ಹಾಗೂ ವರ್ತನೆ ಕಲಿಸಲು ನಾಲ್ಕರಿಂದ ಐದು ತಿಂಗಳ ಸಮಯ ತೆಗೆದುಕೊಳ್ಳುತ್ತಾರೆ ಸ್ವಾಮಿ. ಒಮ್ಮೆ ತರಬೇತಿ ಪಡೆದ ನಾಯಿ ತನ್ನ ಮನೆಯಲ್ಲಿ ಮನುಷ್ಯರಂತೆ ವರ್ತಿಸುವುದಲ್ಲದೆ, ಮನೆಗೆ ಯಾರಾದರೂ ನೆಂಟರು ಬಂದಾಗ ಮನುಷ್ಯರಂತೆ ಅವರನ್ನು ಆಹ್ವಾನಿಸುತ್ತದೆ. ಮನೆಯ ಹೊರಗೆ ಹೋಗಿ ಬಹಿರ್ದೆಸೆ ಮಾಡುವುದು, ತನಗೆ ನೀಡಿದ ಹಾಸಿಗೆಯಲ್ಲೇ ಮಲಗುವುದು ಮುಂತಾದ ಉತ್ತಮ ನಡತೆಯನ್ನು ಈ ತರಬೇತಿಯ ನಂತರ ರೂಢಿಸಿಕೊಳ್ಳುತ್ತದೆ.

ಕೆ9 ಗುರುಕುಲದಲ್ಲಿ ಸಿನಿಮಾ ನಟ–ನಟಿಯರು ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳು ತಮ್ಮ ಪ್ರೀತಿಯ ನಾಯಿಗಳನ್ನು ತಂದು ತರಬೇತಿ ಕೊಡಿಸುತ್ತಾರೆ. ನಟ ದರ್ಶನ್‌ ಅವರ ಮನೆಯ ನಾಯಿಗಳಿಗೂ ಸ್ವಾಮಿ ಅವರೇ ತರಬೇತಿ ನೀಡುತ್ತಿದ್ದಾರೆ.

 ‘ಬೆಂಗಳೂರು ಡೇಸ್’ಮಲಯಾಳ ಸಿನಿಮಾದಲ್ಲಿ ಅಭಿನಯಿಸಿದ್ದ ನಾಯಿ ಸಿಂಬಾ ಕೂಡ ಸ್ವಾಮಿ ಅವರ ಕೈಯಲ್ಲೇ ಪಳಗಿದ್ದು ಎನ್ನುವುದು ಇನ್ನೊಂದು ಹಿರಿಮೆ. 

ಕೆ9 ಗುರುಕುಲದಲ್ಲಿ ಸದ್ಯ 40ಕ್ಕೂ ಹೆಚ್ಚು ನಾಯಿಗಳಿವೆ. ಪ್ರತಿ ವಾರಾಂತ್ಯ ಅವುಗಳನ್ನು ಕಬ್ಬನ್‌ ಪಾರ್ಕ್‌ಗೆ ಕರೆದುಕೊಂಡು ಹೋಗಿ, ಅಲ್ಲಿ ಅವುಗಳಿಗೆ ವಾಕಿಂಗ್‌, ಆಟಗಳನ್ನು ಆಡಿಸಲಾಗುತ್ತದೆ.  ಅಷ್ಟೇ ಅಲ್ಲದೆ ನಾಯಿಗಳಿಗೆ ಇರುವ ನೀರಿನ ಭಯವನ್ನು ಹೋಗಲಾಡಿಸಲು ತಿಂಗಳಿಗೊಮ್ಮೆ ಮಾಗಡಿ ಬಳಿಯ ಕೆರೆಯೊಂದಕ್ಕೆ ಕರೆದುಕೊಂಡು ಹೋಗಿ ಈಜು ತರಬೇತಿಯನ್ನು ಕೂಡ ನೀಡಲಾಗುತ್ತದೆ.

ಆರಂಭವಾದ ಬಗೆ
ಸ್ವಾಮಿ ಅವರ ತಂದೆ ಪೊಲೀಸ್‌  ಆಗಿದ್ದರಿಂದ ಪೊಲೀಸ್‌ ಕ್ವಾಟರ್ಸ್‌ನಲ್ಲಿ ಹುಟ್ಟಿ ಬೆಳೆದ ಅವರಿಗೆ ಒಮ್ಮೆ ತಂದೆಯ ಸ್ನೇಹಿತರೊಬ್ಬರು ನಾಯಿಗಳಿಗೆ ತರಬೇತಿ ನೀಡುವುದು ತಿಳಿಯಿತು. ಅದನ್ನು ನೋಡಿ ಆಸಕ್ತಿ ಕೆರಳಿ, ಅವರ ಬಳಿ ನಾಯಿಗಳಿಗೆ ಹೇಗೆ ತರಬೇತಿ ನೀಡುತ್ತಾರೆ ಎನ್ನುವುದನ್ನು ಕಲಿತರು.

2005ರಿಂದ ಇಲ್ಲಿಯವರೆಗೂ ನಾಯಿಗಳಿಗೆ ತರಬೇತಿ ನೀಡುವುದನ್ನೇ ತಮ್ಮ ಪೂರ್ಣ ವೃತ್ತಿಯನ್ನಾಗಿಸಿಕೊಂಡ ಮೂರ್ತಿ ಅವರು ಇಲ್ಲಿಯವರೆಗೆ ಸುಮಾರು 500 ರಿಂದ 600 ನಾಯಿಗಳಿಗೆ ತರಬೇತಿ ನೀಡಿದ್ದಾರೆ. ತರಬೇತಿ ನೀಡಲು ರಾಯಚೂರು, ನವದೆಹಲಿ ಮುಂತಾದ ಕಡೆಗಳಿಂದ ಕೆ9 ಗುರುಕುಲಕ್ಕೆ ತಮ್ಮ ನಾಯಿಗಳನ್ನು ಕರೆದು ತರುತ್ತಾರೆ. 

‘‘ನಾಯಿಗಳಿಗೆ ‘ವ್ಯಾಕ್ಸಿನೇಷನ್‌’ ಆದ ನಂತರದಿಂದ ತರಬೇತಿ ನೀಡಲಾಗುತ್ತದೆ. ತಳಿ ನಾಯಿಗಳಿಗಿಂತ ಬೀದಿ ನಾಯಿಗಳಿಗೆ ಬೇಗ ತರಬೇತಿ ನೀಡಬಹುದು, ಸಾಮಾಜಿಕ ವರ್ತನೆಯನ್ನು ಬೀದಿ ನಾಯಿಗಳೇ ಬೇಗ ಕಲಿಯುತ್ತವೆ’’ ಎನ್ನುವುದು ಸ್ವಾಮಿ ಅವರ ಅಭಿಪ್ರಾಯ.

ನಾಯಿಗಳಿಗೂ ಭಾವನೆಗಳಿವೆ. ಅವುಗಳಿಗೂ ಸ್ನೇಹ–ಸಂಬಂಧದ ಅರಿವಾಗುತ್ತದೆ ಎನ್ನುವ ಸ್ವಾಮಿ, ನಾಯಿಗಳಿಗಾಗಿ ಸ್ನೇಹಿತರ ದಿನಾಚರಣೆ ಹಾಗೂ ಎಥ್ನಿಕ್‌ ಡೇ ಆಚರಿಸಿದರು.

ನಾಯಿಗಳಿಗೆ  ಮೂಲ ತರಬೇತಿ ನೀಡಲು ₹3000ರಿಂದ  ₹5000ವರೆಗೂ ಶುಲ್ಕ ಇರುತ್ತದೆ. ಇನ್ನು ಕೆಲವರಿಗೆ ನಾಯಿಯ ಮೇಲೆ ವಿಪರೀತ ಪ್ರೀತಿ ಇರುತ್ತದೆ. ಆದರೆ ಅವರು ಶುಲ್ಕ ಭರಿಸಲು ಶಕ್ತರಾಗಿರುವುದಿಲ್ಲ. ಅಂತಹ ನಾಯಿಗಳಿಗೆ ಉಚಿತವಾಗಿ ತರಬೇತಿ ನೀಡುತ್ತಾರೆ ಸ್ವಾಮಿ. 

ಮಾಲೀಕರಿಗೂ ತರಬೇತಿ
ನಾಯಿಗಳಿಗೆ ಮಾತ್ರ ತರಬೇತಿ ನೀಡುವುದಲ್ಲದೆ  ಕೆ9ನಲ್ಲಿ ನಾಯಿಯ ಮಾಲೀಕರಿಗೂ ತರಬೇತಿ ನೀಡಲಾಗುತ್ತದೆ. ನಾಯಿಗಳಿಗೆ ತರಬೇತಿ ನೀಡುವುದರಿಂದ ನಾಯಿ ಕೇವಲ ತರಬೇತುದಾರನೊಂದಿಗೆ ಉತ್ತಮವಾಗಿ ವರ್ತಿಸುತ್ತದೆ ಹಾಗೂ ಅವನ ಸೂಚನೆಗಳಿಗೆ ಮಾತ್ರ ಸ್ಪಂದಿಸುತ್ತದೆ. ನಾಯಿಯೊಂದಿಗೆ ಮಾಲೀಕನಿಗೂ ತರಬೇತಿ ನೀಡುವುದರಿಂದ, ಮನೆಯಲ್ಲಿ ಮಾಲೀಕನ ಇಚ್ಛೆಯಂತೆ ನಾಯಿ ವರ್ತಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT