ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣ ಲಹರಿ!

Last Updated 18 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ವಾದ್ಯಗಳಿಲ್ಲದೇ ಸಂಗೀತ ಸಂಯೋಜಿಸುವುದು ಸಾಧ್ಯವೇ? ‘ಯಾಕೆ ಸಾಧ್ಯವಿಲ್ಲ?’ ಎಂಬ ಮರು ಪ್ರಶ್ನೆ ಎಸೆದವರು ಸಂಗೀತ ನಿರ್ದೇಶಕ ಗಣೇಶ ನಾರಾಯಣ್. ಅದನ್ನು ಅವರು ವೇದಿಕೆ ಮೇಲೆ ಸಾಬೀತು ಮಾಡಿ ತೋರಿಸಿಯೇ ಬಿಟ್ಟರು. ಇದು ನಡೆದಿದ್ದು ‘ಪೈಪೋಟಿ’ ಸಿನಿಮಾದ ಹಾಡುಗಳ ಸಿ.ಡಿ ಬಿಡುಗಡೆ ಸಮಾರಂಭದಲ್ಲಿ. ತೆರೆಯ ಮೇಲೆ ಹಾಡುಗಳನ್ನು ತೋರಿಸುವ ಜತೆಗೇ, ಗಣೇಶ ಅವರು ಈ ವಿಶಿಷ್ಟ ಪ್ರಯೋಗದ ಪ್ರಾತ್ಯಕ್ಷಿತೆ ನಡೆಸಿಕೊಟ್ಟರು. ಬಾಯಿಯಿಂದಲೇ ಬಗೆಬಗೆಯ ವಾದ್ಯ ಸಂಗೀತದ ಅಲೆ ಸೃಷ್ಟಿಸಿ, ತಾವು ಅದಕ್ಕೆ ಹಿನ್ನೆಲೆ ದನಿ ನೀಡಿದರು.

ಜಗ್ಗೇಶ್‌ ಪುತ್ರ ಗುರುರಾಜ್‌ ನಾಯಕನಾಗಿ ನಟಿಸಿರುವ ‘ಪೈಪೋಟಿ’ ಚಿತ್ರದಲ್ಲಿ ಈ ಪ್ರಯೋಗಕ್ಕೆ ಅವಕಾಶ ನೀಡಿದ್ದು ನಿರ್ದೇಶಕ ರಾಮನಾರಾಯಣ್. ಅವರ ಪ್ರಕಾರ ಸತತ ನಗುತ್ತಲೇ ಇರುವಂತೆ ಮಾಡುವ ಸಿನಿಮಾ ಇದು. ಗುರುರಾಜ್‌ ಜತೆಗೆ ಇನ್ನೊಬ್ಬ ನಾಯಕನಾಗಿ ನಿರಂಜನ ಶೆಟ್ಟಿ ಇದ್ದಾರೆ. ಒಬ್ಬರಿಗೊಬ್ಬರು ಪೈಪೋಟಿ ಎಂಬಂತೆ ಅಭಿನಯಿಸಿದ್ದಾರೆ ಎಂದರು ರಾಮ್‌ನಾರಾಯಣ್.

ಸಿ.ಡಿ. ಬಿಡುಗಡೆ ಮಾಡಿದ ನಟ ಜಗ್ಗೇಶ್, ಪೈಪೋಟಿ ಕೊಡುವವರು ಗೆಲ್ಲುತ್ತಾರೆಯೇ ಹೊರತೂ ಷೋ ಕೊಡುವವರು ಅಲ್ಲ ಎಂದು ವ್ಯಾಖ್ಯಾನಿಸಿದರು. ಚಿತ್ರರಂಗದಲ್ಲಿ ಪೈಪೋಟಿಯನ್ನು ಎದುರಿಸಿ, ಈಗ ಒಂದು ಹಂತ ತಲುಪಿದ್ದನ್ನು ಅವರು ನೆನಪಿಸಿಕೊಂಡರು. ‘ಈಗ ನಡೆಯುತ್ತಿರುವ ಪರಭಾಷಾ ಚಿತ್ರಗಳ ಪೈಪೋಟಿಯನ್ನು ಎದುರಿಸಲು ಯುವ ಚಿತ್ರಪ್ರೇಮಿಗಳ ತಂಡ ಮುಂದೆ ಬರಬೇಕು’ ಎಂದು ಸಲಹೆ ಮಾಡಿದರು.

ಬೆಳಗಾವಿ ಮೂಲದ ಲಕ್ಷ್‌ ಒಬೆದ್ ‘ಪೈಪೋಟಿ’ಗೆ ಹಣ ಹಾಕಿದ್ದಾರೆ. ಸಿನಿಮಾದಲ್ಲೊಂದು ಚಿಕ್ಕ ಪಾತ್ರವನ್ನೂ ಅವರು ಮಾಡಿದ್ದಾರೆ. ಚಿತ್ರರಂಗದಲ್ಲಿ ಸ್ವಲ್ಪ ಅನುಭವ ತಮಗಿದ್ದು, ಈಗ ಅದೃಷ್ಟ ಜತೆಯಾದರೆ ಈ ಸಿನಿಮಾ ಗೆಲ್ಲುವುದು ಖಚಿತ ಎಂಬ ಆಶಾವಾದ ಅವರದು. ನಾಲ್ಕು ಹಾಡುಗಳ ಪೈಕಿ ಮೂರನ್ನು ಪ್ರದರ್ಶಿಸಲಾಯಿತು. ನಾಲ್ಕನೇ ಹಾಡಿಗೆ ಗಣೇಶ ನಾರಾಯಣ್‌ ಅವರು ಹತ್ತು ಕಲಾವಿದರ ಜತೆ ವೇದಿಕೆಗೆ ಬಂದರು. ಅವರೆಲ್ಲ ಬಾಯಿಯಿಂದ ಸಂಗೀತ ನೀಡಿದರೆ, ಗಣೇಶ ಹಾಡು ಹಾಡಿದರು. ‘ಇದಕ್ಕಾಗಿ ಎರಡು ತಿಂಗಳು ಪ್ರಾಕ್ಟೀಸ್‌ ಮಾಡಲಾಗಿದೆ’ ಎಂಬ ವಿವರವನ್ನು ಅವರು ನೀಡಿದರು.

ತಮಗೆ ಈವರೆಗೆ ಸಿಕ್ಕದಿದ್ದ ಕಾಮಿಡಿ ಪಾತ್ರ ‘ಪೈಪೋಟಿ’ಯಲ್ಲಿ ದೊರಕಿದೆ ಎಂದು ಗುರುರಾಜ್‌ ಸಂತಸ ಹಂಚಿಕೊಂಡರೆ, ‘ಸೆಂಟಿಮೆಂಟ್‌, ಪ್ರೀತಿ, ಸಸ್ಪೆನ್ಸ್‌ ಎಲ್ಲವೂ ಇರುವ ಶುದ್ಧ ಮನೋರಂಜನೆಯ ಸಿನಿಮಾ ಇದು’ ಎಂದು ನಿರಂಜನ ಶೆಟ್ಟಿ ಹೇಳಿದರು. ಎಚ್‌.ಡಿ.ಗಂಗರಾಜು, ವಿತರಕ ಪ್ರಸಾದ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT