ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕೂವರೆ ವರ್ಷಗಳ ಆ ದೀರ್ಘ ಬಂಧನ

Last Updated 22 ಮೇ 2016, 19:30 IST
ಅಕ್ಷರ ಗಾತ್ರ

ನಮ್ಮ ಕಹಿ ಅನುಭವಗಳೆಲ್ಲ ನಮ್ಮ ತಪ್ಪಿನಿಂದ ಆಗಿರುವುದಿಲ್ಲ; ಇನ್ನಾರದೋ ದುರಾಸೆಗೆ, ಕೇಡಿಗೆ, ಕ್ರೌರ್ಯಕ್ಕೆ ನಾವು ಬಲಿಯಾಗಿರುತ್ತೇವೆ

ಪಾಕಿಸ್ತಾನದ ಲಾಹೋರ್‌ನಲ್ಲಿ 2011ರ ಆಗಸ್ಟ್‌ 26 ಒಂದು ಸಾಮಾನ್ಯ ದಿನವಾಗಿತ್ತು. ಎಂದಿನಂತೆ ನಾನು ಕೆಲಸಕ್ಕೆ ಗಾಡಿ ಓಡಿಸಿಕೊಂಡು ಅದೇ ರಸ್ತೆಯಲ್ಲಿಯೇ ಹೋಗುತ್ತಿದ್ದೆ. ನಿತ್ಯದ ಆಲೋಚನೆಗಳಲ್ಲಿ ಮನಸ್ಸು ಮುಳುಗಿತ್ತು.

ಕಾರೊಂದು ಅಡ್ಡ ಬಂತು. ಆದರೂ ಅದರ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.  ಆಗ ಐವರು ಮುಸುಕುಧಾರಿ ಗಂಡಸರು ನನ್ನ ತಲೆಗೆ ಬಂದೂಕು ಹಿಡಿದು ನನ್ನನ್ನು ಕಾರಿನಿಂದ ಹೊರಕ್ಕೆಳೆದರು. ಆಗಿನಿಂದ ನನ್ನ ಬದುಕು ಸಂಪೂರ್ಣ ಹದ ತಪ್ಪಿತು.

ನನ್ನ ಅಪಹರಣ ಅಥವಾ ಬಿಡುಗಡೆಯ ಎಲ್ಲ ವಿವರಗಳನ್ನು ಭದ್ರತೆಯ ಕಾರಣಗಳಿಗಾಗಿ ನಾನೀಗ ಹೇಳಲಾರೆ. ಮುಂದೊಂದು ದಿನ ಪೂರ್ಣ ಕತೆ ಹೇಳಬಹುದೆಂದು ಆಶಿಸುತ್ತೇನೆ. ಆದರೆ ನನ್ನ ಅಪಹರಣ ಮಾಮೂಲಿ ಪ್ರಕರಣವಾಗಿರಲಿಲ್ಲವೆಂದು ಮುಚ್ಚುಮರೆಯಿಲ್ಲದೆ ಹೇಳಬಲ್ಲೆ.

ಪಂಜಾಬ್ ಪ್ರಾಂತ್ಯದ ರಾಜ್ಯಪಾಲರಾಗಿದ್ದ ನನ್ನ ತಂದೆ ಸಲ್ಮಾನ್ ತಾಸೀರ್‌ ಅವರನ್ನು ಕೇವಲ ಏಳು ತಿಂಗಳ ಕೆಳಗೆ ಅವರ ಕಾವಲುಗಾರನೇ ಗುಂಡಿಟ್ಟು ಕೊಂದು ಹಾಕಿದ್ದ.  ಅವರು ಮಾಡಿದ ತಪ್ಪೆಂದರೆ, ಧರ್ಮನಿಂದನೆ ಆರೋಪ ಹೊರಿಸಿ ಆಸಿಯಾ ಬೀಬಿ ಎಂಬ ಕ್ರೈಸ್ತ ಮಹಿಳೆಗೆ ಮರಣದಂಡನೆ ವಿಧಿಸಿದಾಗ ಪಾಕಿಸ್ತಾನದ ಧರ್ಮನಿಂದನೆಯ ಕಾನೂನನ್ನು ಪ್ರಶ್ನಿಸಿದ್ದು. ನನ್ನನ್ನು ಕೇವಲ ಹಣಕ್ಕಾಗಿ ಅಪಹರಿಸಿರಲಿಲ್ಲ. 

ಪಾಕಿಸ್ತಾನದುದ್ದಕ್ಕೂ ಜೈಲುಗಳಲ್ಲಿದ್ದ ತಮ್ಮ ‘ಮುಸ್ಲಿಂ ಸಹೋದರರನ್ನು’ ಬಿಟ್ಟುಬಿಡಬೇಕೆಂಬುದು ನನ್ನ ಅಪಹರಣಕಾರರ ಬೇಡಿಕೆಯಾಗಿತ್ತು. ಇದನ್ನು ಈಡೇರಿಸುವುದು ಸುಲಭವಾಗಿರಲಿಲ್ಲ. ಅವರ ಈ ಅತಿಶಯದ ಬೇಡಿಕೆಯಿಂದಾಗಿ ನನಗೆ ಮುಕ್ತಿ ಸಿಗಲು ಬಹಳ ಸಮಯ ಬೇಕೆಂಬುದು ನನಗೆ ಗೊತ್ತಿತ್ತು.

ಇಂತಹ ಸಂದರ್ಭದಲ್ಲಿ ಮನಸ್ಸಿಗೆ ಕತ್ತಲು ಕವಿದು ಕುಸಿದುಬಿಡುವುದು ಸುಲಭ. ಆದರೆ ನಾನು ನನ್ನ ನಂಬಿಕೆ, ಕುರ್‌ಆನ್‌, ನನ್ನ ಧೈರ್ಯಶಾಲಿ ತಂದೆ ಮತ್ತು ನನ್ನ ಕುಟುಂಬದ ಪ್ರೀತಿಯ ನೆನಪುಗಳನ್ನು ಆಶ್ರಯಿಸಿಕೊಂಡು ನಡೆದೆ.

ನನ್ನ ಅಪಹರಣದ ನಾಲ್ಕನೆಯ ತಿಂಗಳಿನಲ್ಲಿ ನನ್ನನ್ನು ಹಿಂಸಿಸಲು ಆರಂಭಿಸಿದರು. ಪಾಕಿಸ್ತಾನದಲ್ಲಿ ಅತ್ಯಂತ ಭೀತಿ ಹುಟ್ಟಿಸಿದ್ದ ಉಗ್ರರ ಗುಂಪುಗಳಲ್ಲಿ ಒಂದಾಗಿದ್ದ  ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಉಜ್ಬೇಕಿಸ್ತಾನ್ (ಐಎಂಯು) ನನ್ನನ್ನು ಅಪಹರಿಸಿತ್ತು.

ನನ್ನನ್ನು ಹಿಂಸಿಸುವುದರಲ್ಲಿ ಅವರು ವಿಕೃತ ಆನಂದ ಅನುಭವಿಸುತ್ತಿದ್ದರು. ನನಗೆ ಪ್ರಾರ್ಥನೆಯಲ್ಲಿ ಮನಶಾಂತಿ ಸಿಕ್ಕಿತು. ಹಿಂಸಿಸುವವರು ಹಿಂಸೆಯಲ್ಲಿ ವಿಶ್ವಾಸ ಕಳೆದುಕೊಳ್ಳುವಷ್ಟು ನೋವನ್ನು ತಡೆದುಕೊಳ್ಳುವ ಶಕ್ತಿ ಕೊಡು ಎಂದು ನಾನು ಪ್ರಾರ್ಥಿಸುತ್ತಿದ್ದೆ.

1980ರ ದಶಕದಲ್ಲಿ ಜನರಲ್ ಮೊಹಮ್ಮದ್ ಜಿಯಾ ಉಲ್ ಹಕ್‌ ಅವರ ನಿರಂಕುಶ ಪ್ರಭುತ್ವದಲ್ಲಿ ರಾಜಕೀಯ ಬೇಟೆಗೆ ಗುರಿಯಾಗಿ ಸಂಕಷ್ಟ ಅನುಭವಿಸಿದ್ದ ನನ್ನ ತಂದೆಯ ಬಗ್ಗೆ ಯೋಚಿಸುತ್ತಿದ್ದೆ. ದೈಹಿಕ ನೋವು ದೇಹದ ಮೇಲ್ಪದರದಲ್ಲಿ ಮಾತ್ರ ಇರುತ್ತದೆ; ಅದು ಎಂದಿಗೂ ನಿನ್ನನ್ನು ಎದೆಗುಂದಿಸಬಾರದು ಎಂದು ಅವರು ಹೇಳುತ್ತಿದ್ದರು.

ಅವರು ಕೊಟ್ಟ ದೈಹಿಕ ಹಿಂಸೆ ಹೆಚ್ಚು ಕ್ರೂರವೋ ಅಥವಾ ಮಾನಸಿಕವಾಗಿ ಬಗ್ಗಿಸಲು ಅವರು ಹೂಡಿದ ಕ್ರೂರ ಆಟಗಳು ಹೆಚ್ಚು ಕ್ರೂರವೋ ಎಂದರೆ ಉತ್ತರಿಸುವುದು ಕಷ್ಟ. ವಿಶ್ವ ನನ್ನನ್ನು ಮರೆತುಬಿಟ್ಟಿದೆ ಎಂದು ಹೇಳಲು ಟ್ವಿಟರ್‍ ಟಿಪ್ಪಣಿಗಳ ಪ್ರಿಂಟೌಟ್ ತೋರಿಸುತ್ತಿದ್ದರು.

ನನ್ನ ತಾಯಿ ಮತ್ತು ನನ್ನ ಕುಟುಂಬವನ್ನು ಎಷ್ಟು ಸುಲಭವಾಗಿ ಬಲೆಯಲ್ಲಿ ಸಿಕ್ಕಿಹಾಕಿಸಬಹುದು ಎಂದು ಮನಸ್ಸು ಗಾಸಿಗೊಳಿಸುವಂತಹ ವಿವರಗಳನ್ನು ಹೇಳುತ್ತಿದ್ದರು.

ನನ್ನ ಹೆಂಡತಿ ಮೆಕ್ಕಾ ಯಾತ್ರೆ ಮಾಡಿದ ಭಾವಚಿತ್ರ ತೋರಿಸಿ ಆಕೆಯ ಭಯಭಕ್ತಿ ಕಪಟವೆಂದೂ ಹೇಳುತ್ತಿದ್ದರು. ನೆಲ್ಸನ್ ಮಂಡೇಲಾರ ನಿಧನದ ಬಗ್ಗೆ ನನ್ನ ತಂಗಿ ಮಾಡಿದ ಟ್ವೀಟ್ ತೋರಿಸಿ, ಆಕೆ ಧರ್ಮಭ್ರಷ್ಟನೊಬ್ಬನನ್ನು ಬೆಂಬಲಿಸುವುದನ್ನು ಇದು ತೋರಿಸುತ್ತದೆ ಎಂದೂ ಹೇಳಿದರು.

ಸಾಮಾಜಿಕ ಸಮಾರಂಭವೊಂದರಲ್ಲಿ ಭಾಗವಹಿಸಿದ ನನ್ನ ಸಹೋದರನ ಭಾವಚಿತ್ರ ತೋರಿಸಿ, ‘ನಿಮ್ಮ ಕುಟುಂಬ ದಾರಿ ತಪ್ಪಿದೆ’ ಎಂದರು. ಆದರೆ ಅವರು ಕೊಟ್ಟ ಈ ‘ಸಾಕ್ಷ್ಯಗಳು’ ನನ್ನಲ್ಲಿ ಬಲ ತುಂಬಿದವು. ನನ್ನ ಕುಟುಂಬ ಚೆನ್ನಾಗಿದೆ, ಅವರು ಮತ್ತು ಇತರರು ನನ್ನ ಬಗ್ಗೆ ಯೋಚಿಸುತ್ತಿದ್ದಾರಲ್ಲದೆ ನನ್ನ ಸುರಕ್ಷತೆ ಮತ್ತು ಬಿಡುಗಡೆಗಾಗಿ ಪ್ರಾರ್ಥಿಸುತ್ತಿದ್ದಾರೆಂಬುದು ನನಗೆ ಗೊತ್ತಿತ್ತು.

ಏಕಾಂತ ಬಂಧನ, ಜೊತೆಗಾರರಿಲ್ಲದ ಜೀವನ, ಸಂಶಯ ಮತ್ತು ಮಾನಸಿಕ ತುಮುಲಗಳು ಮನಸ್ಸಿನ ಮೇಲೆ ವಿಚಿತ್ರ ಪರಿಣಾಮ ಬೀರಬಲ್ಲವು. ನಿಮ್ಮ ಮಾನಸಿಕ ಸ್ಥಿಮಿತದ ಬಗ್ಗೆಯೇ ನಿಮಗೆ ಪ್ರಶ್ನೆಗಳು ಕಾಡಲಾರಂಭಿಸುತ್ತವೆ. ಇಷ್ಟೂ ವರ್ಷ ನಿಮ್ಮ ಪ್ರೀತಿಗೆ ಪಾತ್ರವಾದ ಮುಖಗಳು ಕತ್ತಲಲ್ಲಿ ಕಳೆದುಹೋಗುತ್ತವೆ, ನೀವು ಸದಾ ಕೇಳುತ್ತಿದ್ದ ಜನರ ಧ್ವನಿ ಕೂಡ.

ಆದರೆ ನೆನಪುಗಳಿಗೆ ಮಾಂತ್ರಿಕ ಶಕ್ತಿ ಇರುತ್ತದೆ. ನಾನು ಮನೆಗೆ ಹೋಗಲು ಆಗದಿರಬಹುದು ಆದರೆ ಅಂತಹದ್ದೊಂದು ಶಕ್ತಿಯ ಮೂಲಕ ಮನೆಯನ್ನೇ ನನ್ನ ಬಳಿ ಕರೆತರಬಹುದಿತ್ತು. ಮನಸ್ಸಿನಲ್ಲೇ ನಾನು ನನ್ನ ಪರಿಚಿತ ಜಾಗಗಳಿಗೆ ಭೇಟಿ ಕೊಟ್ಟೆ.

ನನ್ನ ಕಿಡಿಗೇಡಿ ಮಿತ್ರರನ್ನು ಒಬ್ಬೊಬ್ಬರಾಗಿ ಕಲ್ಪಿಸಿಕೊಂಡು ಪ್ರತಿಯೊಬ್ಬರಿಗೂ ಒಂದೊಂದು  ಪ್ರಹಸನ ಸಿದ್ಧಪಡಿಸಿ, ನಾನೊಬ್ಬ ಏಕ ಪಾತ್ರಧಾರಿ ಕಮೆಡಿಯನ್ ಆಗಿಬಿಟ್ಟೆ. ಈ ರೀತಿ ದಿನಂಪ್ರತಿ ನಾನು ನಡೆಸಿದ ಕಾಮೆಡಿ ಷೋಗಳ ಬಗೆಗಿನ ಪ್ರಸ್ತಾಪ, ಈಗ ನನ್ನ ಗೆಳೆಯರನ್ನು ಭೇಟಿಯಾಗುವಾಗ ಬಹಳ ಮಜಾ ಕೊಡುತ್ತದೆ.

ಹೊರಜಗತ್ತಿನ ಸಂಪರ್ಕ ಪಡೆಯಲು ಆಗಾಗ ಯಾವುದೇ ಹದ್ದುಬಸ್ತಿಲ್ಲದ ಮಾಯಾಲೋಕವೊಂದನ್ನು ನೆನಪಿಸುವಂತಹ ಸನ್ನಿವೇಶಗಳು ಅಲ್ಲಿ ಸುಮಾರು ಮೂವತ್ತು ತಿಂಗಳ ಕಾಲ ನನಗೆ ಸಿಕ್ಕವು. ನನ್ನ ಕಾವಲುಗಾರನೊಬ್ಬ ನನ್ನಂತೆ ಮ್ಯಾಂಚೆಸ್ಟರ್‍ ಯುನೈಟೆಡ್‌ ಅನ್ನು ಬೆಂಬಲಿಸುವವನಾಗಿದ್ದ.

ವಾರ ಬಿಟ್ಟು ವಾರ ರೇಡಿಯೊ ಒಂದನ್ನು ನನ್ನ ಜೈಲುಖಾನೆಯೊಳಗೆ ತೂರಿಸುತ್ತಿದ್ದ. ನಾವಿಬ್ಬರೂ ಫುಟ್‌ಬಾಲ್‌ ವೀಕ್ಷಕ ವಿವರಣೆಯನ್ನು ಆಲಿಸಿ ಆಸ್ವಾದಿಸುತ್ತಿದ್ದೆವು.

ಆತನ ಅಭಿಪ್ರಾಯದಲ್ಲಿ ಅದು ನ್ಯಾಯಬಾಹಿರವಾಗಿ ಪಡೆಯುವ ಆನಂದ. ಫುಟ್‌ಬಾಲ್‌ ಆಡುವುದು ಅಥವಾ ಅದರ ಬಗ್ಗೆ ಕೇಳುವುದು ಕೂಡ ಪಾಪ ಎಂಬುದು ಅವನ ನಂಬಿಕೆಯಾಗಿತ್ತು. ಆದರೆ ನನಗೆ, ಅದು ಹೊರಜಗತ್ತಿಗೆ ತೆರೆದುಕೊಂಡ ಒಂದು ಕಿಟಕಿಯಾಯಿತು.

ಫುಟ್‌ಬಾಲ್‌ ಕುರಿತ ಸುದ್ದಿ ಪಡೆಯುವುದೇ ನನ್ನನ್ನು ಹುಚ್ಚನಾಗದಂತೆ ತಡೆಯಿತು. ‘ಇಂತಹ ಸನ್ನಿವೇಶದಲ್ಲಿ ಯುನೈಟೆಡ್ ತಂಡವನ್ನು ಬೆಂಬಲಿಸುತ್ತಿರುವವನು ನೀನೊಬ್ಬನೇ ಇರಬೇಕು. ಅವರು ಆಡುತ್ತಿರುವುದು ಮತ್ತು ಗೆಲ್ಲುತ್ತಿರುವುದು ನಿನ್ನ ಸಲುವಾಗಿಯೆ’ ಎಂದು ನನಗೆ ನಾನೇ ಹೇಳಿಕೊಂಡೆ. 

ಹಿಂತಿರುಗಿ ನೋಡಿದರೆ, ನಾನು ಸದಾ ಮುಕ್ತವಾಗಿಯೇ ಬದುಕುತ್ತಿದ್ದೆ ಎನಿಸುತ್ತದೆ. ನೀನಲ್ಲದೆ ಬೇರಿನ್ನಾರೂ ನಿನ್ನನ್ನು ಬಂಧಿಸಲಾರರು. ನನ್ನನ್ನು ಅಪಹರಿಸಿದವರು ನಾನಿನ್ನು ತಾಳಲಾರೆ ಎನ್ನುವಂತೆ ಮಾಡಬಹುದು. ಆದರೆ, ನನ್ನ ಸ್ಥಿಮಿತ ಕಾಪಾಡಿಕೊಳ್ಳುವವರೆಗೂ ನಾನು ಮುಕ್ತ ಮನುಷ್ಯನೆ. ನಾನು ದೇವರ ಕೈಯಲ್ಲಿದ್ದೆ, ಅವರ ಕೈಯಲ್ಲಲ್ಲ. ದೇವರು ನನ್ನನ್ನು ರಕ್ಷಿಸಿ ಮನೆಗೆ ಕರೆದೊಯ್ಯುತ್ತಾನೆಂದು ನನಗೆ ಗೊತ್ತಿತ್ತು.

ಅವನು ಹಾಗೆಯೇ ಮಾಡಿದ. ಅವನು ಪವಾಡ ಮಾಡಿದ. ಡ್ರೋನ್‌ ದಾಳಿ ಮತ್ತು ಯುದ್ಧಗಳಿಂದಲೂ ನಾನು ಪಾರಾದೆ. ಯಾವುದೇ ಚಿಕಿತ್ಸೆ ಇಲ್ಲದೆ ಅನೇಕ ರೋಗರುಜಿನಗಳಿಂದ ಪಾರಾದೆ. ನನಗೆ ಗುಂಡು ಬಡಿಯಿತು, ಮಾನಸಿಕ, ದೈಹಿಕ ಹಿಂಸೆ ಕೊಡಲಾಯಿತು, ಹೇಳಬಾರದ ಘೋರ ಸ್ಥಿತಿಯಲ್ಲಿ ಬದುಕಿದೆ. ಆದರೆ, 2015ರ ನವೆಂಬರ್‌ನಲ್ಲಿ ಆಫ್ಘನ್ ತಾಲಿಬಾನ್, ಐಎಂಯುವನ್ನು ಸದೆಬಡಿದಾಗಲೂ ನಾನು ಬದುಕುಳಿದೆ.

ನನಗೇ ಯಾಕೆ ಹೀಗಾಯಿತು ಎಂದು ಕೇಳುತ್ತಾ, ಕಹಿ ಅನುಭವಗಳನ್ನೇ ಮೆಲುಕು ಹಾಕುತ್ತಾ ನಾನು ನನ್ನ ಜೀವಮಾನವನ್ನು ಕಳೆಯಬಹುದು. ನಿಜ ಹೇಳಬೇಕೆಂದರೆ, ನಮ್ಮ ಕಹಿ ಅನುಭವಗಳೆಲ್ಲ ನಮ್ಮ ತಪ್ಪಿನಿಂದ ಆಗಿರುವುದಿಲ್ಲ. ಇನ್ನಾರದೋ ದುರಾಸೆಗೆ, ಕೇಡಿಗೆ, ಕ್ರೌರ್ಯಕ್ಕೆ ನಾವು ಬಲಿಯಾಗಿರುತ್ತೇವೆ. ಆದರೆ ಅತೀತ ಉದ್ದೇಶವೊಂದಿದೆ. ನಿಸರ್ಗದ ಕ್ರಮವೊಂದಿದೆ.

ನಿಮಗೇನಾಗುತ್ತದೋ ಅದಕ್ಕೆ ನೀವು ಸ್ಪಂದಿಸುವ ರೀತಿ, ನಿಮ್ಮ ಅನುಭವಕ್ಕೆ ಬರುವ ದುರದೃಷ್ಟಕರ ಸನ್ನಿವೇಶಗಳನ್ನು ನೀವು ನಿಭಾಯಿಸುವ ರೀತಿ, ಕಷ್ಟಗಳನ್ನು ಎಷ್ಟು ಧೈರ್ಯದಿಂದ ಎದುರಿಸುತ್ತೀರಿ ಎಂಬುದೇ ಮುಖ್ಯ. ದೇವರು ನೋಡುವುದು ಇದನ್ನೆ. ಅವನು ನಿಮ್ಮನ್ನಳೆಯುವುದು ಇದರಿಂದಲೆ.

2016ರ ಫೆಬ್ರುವರಿ 29ರಂದು ನಡೆದದ್ದು ದೈವೀಕೃತ್ಯವೆಂದೇ ಹೇಳಬೇಕು. ಅಂದು ಬೆಳಕು ಹರಿಯುತ್ತಿದ್ದಂತೆ ತಾಲಿಬಾನ್‌ನ ಹಿರಿಯನೊಬ್ಬ ನನ್ನ ಬಂದೀಖಾನೆಯ ಬಾಗಿಲು ತೆಗೆದು ನನ್ನನ್ನು ಮುಕ್ತಗೊಳಿಸುವಾಗ, ನೂರಾರು ಮೈಲಿಗಳ ದೂರದಲ್ಲಿ ಬಹುಶಃ ಅದೇ ಹೊತ್ತಿಗೆ ಸರಿಯಾಗಿ, ನನ್ನ ತಂದೆಯ ಹತ್ಯೆ ಮಾಡಿದ್ದ ಅಪರಾಧಿಯ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಲು ರಾವಲ್ಪಿಂಡಿಯ ಬಂದೀಖಾನೆಯ ಬಾಗಿಲನ್ನು ತೆರೆಯಲಾಗುತ್ತಿತ್ತು. 

ಮುಂದೆ, 2016ರ ಮಾರ್ಚ್‌ 8 ವಿಶೇಷ ದಿನವಾಗಿತ್ತು. ಮಳೆ, ಸುಂಟರಗಾಳಿ, ಬಿರುಬಿಸಿಲು ಎದುರಿಸಿ, ಯಾರ್‍ಯಾರದೋ ವಾಹನದಲ್ಲಿ ಕಾಡಿಬೇಡಿ ಹತ್ತಿಇಳಿದು, ಆಫ್ಘಾನಿಸ್ತಾನದ ಒರುಜ್‌ಗಾನ್‌ನಿಂದ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯ ತಲುಪಲು ಎಂಟು ದಿನ ಹಿಡಿಯಿತು. ಹೇಳಲು ಅನೇಕ ಕತೆಗಳಿವೆ. ನಾನು ಪ್ರಯಾಣಿಸುತ್ತಿದ್ದ ಮೋಟಾರ್‌ಬೈಕ್ ಹೆದ್ದಾರಿಗೆ ಬಂದಾಗ ಅದು ನನ್ನ ಸ್ವಾತಂತ್ರ್ಯದ ದಾರಿಯಾಗಿತ್ತು.

ಮನೆಯ ದಿಕ್ಕಿಗೆ ಗಾಡಿ ತಿರುಗಿಸಿದಾಗ, ನನ್ನ ಬಂಧನವಾಗಿ ಆರು ತಿಂಗಳ ನಂತರ ನನ್ನ ತಾಯಿ ಮತ್ತು ಹೆಂಡತಿಯ ಜೊತೆ ಮೊದಲ ಬಾರಿ ದೂರವಾಣಿಯಲ್ಲಿ ಮಾತನಾಡಿದ ಕ್ಷಣಗಳನ್ನು ನೆನಪಿಸಿಕೊಂಡೆ. ಆ ಕರೆಯ ನಂತರ ನನ್ನನ್ನು ಗುಂಡಿಟ್ಟು ಸಾಯಿಸುವುದಾಗಿ ಹೇಳಿದ್ದರು.

ಆದಕಾರಣ, ನನ್ನ ಮನೆಯವರಿಗೆ ಅಂತಿಮ ವಿದಾಯ ಹೇಳಬೇಕೆಂದು ನನಗೆ ಸೂಚಿಸಲಾಗಿತ್ತು.   ನನ್ನ ತಂದೆ ಹಿಂದೊಮ್ಮೆ ಜೈಲಿನಲ್ಲಿದ್ದಾಗ ನನ್ನ ತಾಯಿಗೆ ಬರೆದಿದ್ದ ಮಾತನ್ನೇ  ದೃಢವಾದ ಧ್ವನಿಯಲ್ಲಿ ನಾನವರಿಗೆ ಹೇಳಿದ್ದೆ. ಅದೆಂದರೆ, ‘ಪುರಪುರನೆ ಉರಿದುಹೋಗಿ ಬಿಡುವ ಕಟ್ಟಿಗೆಯಿಂದ ನಿರ್ಮಾಣಗೊಂಡವನಲ್ಲ ನಾನು’  ಎಂಬುದು.

ನಾನವರಿಗೆ ಹಾಗೆ ಹೇಳಿದ್ದು ಮನಸ್ಸಿಗೆ ಶಾಂತಿ ತಂದಿತು. ಅದೇ ಶಾಂತಿ ನಾಲ್ಕೂವರೆ ವರ್ಷಗಳ ಕಾಲ ನನಗೆ ಶಕ್ತಿ ನೀಡಿತು. ಕಾಲನ ಸವಾರಿ ದೀರ್ಘವೇ ಇತ್ತು. ಆದರೆ, ಗುಡ್‌ಬೈ ಹೇಳಿದ್ದ ನಾನು ಮತ್ತೆ ಹಲೊ ಹೇಳಲು ನಿಮ್ಮ ಬಳಿಯೇ ಇದ್ದೇನೆ.
ಲೇಖಕ ಪಾಕಿಸ್ತಾನದ ಉದ್ಯಮಿ
ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT