ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ತಿಂಗಳಿಗೊಬ್ಬ ಅಧ್ಯಕ್ಷ, ಉಪಾಧ್ಯಕ್ಷ

Last Updated 17 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಯವರೆಗೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ‘ಅವಧಿಯ ಹಂಚಿಕೆ ಒಡಂಬಡಿಕೆಯ ರೋಗ’ ಮಂಡ್ಯ ಜಿಲ್ಲೆಯಾದ್ಯಂತ ಹರಡಿಕೊಂಡಿದೆ. ಮಂಡ್ಯ ಜಿಲ್ಲಾ ಪಂಚಾಯಿತಿ ಏಳು ವರ್ಷದ ಅವಧಿಯಲ್ಲಿ ಪ್ರಭಾರ ಅಧ್ಯಕ್ಷರೂ ಸೇರಿ 17 ಮಂದಿ ಅಧ್ಯಕ್ಷರಾಗುವ ಮೂಲಕ ದಾಖಲೆ ಬರೆದಿದ್ದಾರೆ. ಉಪಾಧ್ಯಕ್ಷರ ಸಂಖ್ಯೆಯೂ ಇಷ್ಟೇ ಪ್ರಮಾಣದಲ್ಲಿದೆ.

ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾದ ಪ್ರತಿ ಸದಸ್ಯರೂ ಅಧ್ಯಕ್ಷ, ಉಪಾಧ್ಯಕ್ಷರಾಗಬೇಕು ಎನ್ನುವ ಲಾಲಸೆಯ ಪರಿಣಾಮ ಅಧಿಕಾರ ಹಸ್ತಾಂತರವಾಗುತ್ತಲೇ ಇರುತ್ತದೆ. ಪಕ್ಷದೊಳಗೆ ಒಡಕು ಬರಬಾರದು. ಎಲ್ಲರನ್ನೂ ಹಿಡಿದಿಟ್ಟುಕೊಳ್ಳಬೇಕು ಎಂಬ ಕಾರಣಕ್ಕೆ ನಾಯಕರೂ ಇದಕ್ಕೆ ಸಮ್ಮತಿಸುತ್ತಾರೆ. ಸಾಮಾನ್ಯ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಯಾವುದೇ ವರ್ಗಕ್ಕೆ ಮೀಸಲಾಗಿದ್ದರೂ ಅಧಿಕಾರ ಹಂಚಿಕೆಯ ಒಡಂಬಡಿಕೆ ಆಗಿಯೇ ಇದೆ. ಬಹುತೇಕ ಸದಸ್ಯರದ್ದೂ ಒಂದೇ ರಾಗ ‘ನಮಗೂ ಅಧಿಕಾರದ ಗದ್ದುಗೆ ಬೇಕು’.

ಪರಿಣಾಮ ನಾಲ್ಕಾರು ತಿಂಗಳಿಗೊಬ್ಬರು ಬದಲಾಗುತ್ತಿರುತ್ತಾರೆ. ಅಧಿಕಾರದಲ್ಲಿರುವ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳೆರಡೂ ಇದೇ ಹಾದಿಯನ್ನು ತುಳಿದಿವೆ. 2011ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಈಗಿನ ಜಿಲ್ಲಾ ಪಂಚಾಯಿತಿಯ 36 ತಿಂಗಳ ಅವಧಿಯಲ್ಲಿ ಮೂವರು ಪ್ರಭಾರ ಅಧ್ಯಕ್ಷರೂ ಸೇರಿ ಎಂಟು ಮಂದಿ ಅಧಿಕಾರಿ ನಡೆಸಿದ್ದಾರೆ. ಸರಾಸರಿ ಒಬ್ಬರಿಗೆ ನಾಲ್ಕು ತಿಂಗಳೂ ಬರುವುದಿಲ್ಲ.ಜಿಲ್ಲಾ ಪಂಚಾಯಿತಿಯಲ್ಲಿ ಒಟ್ಟು 40 ಮಂದಿ ಸದಸ್ಯರಿದ್ದಾರೆ. ಅದರಲ್ಲಿ 24 ಮಂದಿ ಜೆಡಿಎಸ್‌ 14 ಮಂದಿ ಕಾಂಗ್ರೆಸ್‌್, ಒಬ್ಬರು ರೈತ ಸಂಘ, ಇನ್ನೊಬ್ಬರು ಪಕ್ಷೇತರರಾಗಿದ್ದಾರೆ.

ಮೊದಲ 20 ತಿಂಗಳ ಅವಧಿಯು ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. 20 ತಿಂಗಳ ಅಧಿಕಾರವಧಿಯು ಮೂವರ ನಡುವೆ ಸಮನಾಗಿ ಹಂಚಿಕೆಯಾಗಿತ್ತು. ಆದರೆ, ಶಿವಣ್ಣ ಎಂಬುವವರು 14 ತಿಂಗಳ ಅಧಿಕಾರ ನಡೆಸಿದರು. ಸುರೇಶ್‌ ಕಂಠಿ 4 ತಿಂಗಳ ಅಧ್ಯಕ್ಷರಾಗಿದ್ದರೆ, ಕೊನೆಗೆ ಬರುವ ಆರ್‌.ಕೆ. ಕುಮಾರ್‌ ಅವರು ಕೇವಲ 40 ದಿನಗಳಿಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾರೆ. ಅಧಿಕಾರ ಬದಲಾವಣೆ ಸಂದರ್ಭದಲ್ಲಿ ಕೆಲ ದಿನಗಳ ಕಾಲ ಅಧಿಕಾರ ನಡೆಸಿದ ಇಬ್ಬರು ಪ್ರಭಾರ ಅಧ್ಯಕ್ಷರೂ ಸೇರಿಕೊಳ್ಳುತ್ತಾರೆ. ಚುನಾವಣೆಗಳ ನೆಪ, ಅಧಿಕಾರದಲ್ಲಿ ಉಳಿಬೇಕು ಎಂಬ ಹಠದಿಂದಾಗಿ ಒಡಂಬಡಿಕೆಯ ಪ್ರಕಾರ ರಾಜೀನಾಮೆಯನ್ನು ಸದಸ್ಯರು ನೀಡುವುದಿಲ್ಲ. ಆಗ ಕೊನೆ ಅವಧಿಗೆ ಬರುವ ಅಧ್ಯಕ್ಷನಿಗೆ ಸಿಕ್ಕಷ್ಟೇ ಕಾಲಾವಧಿ ಎನ್ನುವಂತಾಗಿರುತ್ತದೆ.

ಉಪಾಧ್ಯಕ್ಷ ಸ್ಥಾನದ ಸ್ಥಿತಿಯೂ ವಿಭಿನ್ನವಾಗಿಲ್ಲ. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ 20 ತಿಂಗಳ ಅವಧಿಯಲ್ಲಿ ಜಯಲಕ್ಷ್ಮಮ್ಮ 11 ತಿಂಗಳಾಗಿದ್ದರೆ, ಕೋಮಲಾ ಸ್ವಾಮಿ 6 ತಿಂಗಳು, ಲಲಿತಾ ಪ್ರಕಾಶ್‌ 2 ತಿಂಗಳ ಅವಧಿಗೆ ಉಪಾಧ್ಯಕ್ಷ­ರಾಗಿದ್ದರು. ಈಗ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನ­ವನ್ನು ಡಾ.ಎಸ್‌.ಸಿ. ಶಂಕರೇಗೌಡ 9 ತಿಂಗಳ ಅವಧಿಗೆ ರಾಜೀನಾಮೆ ನೀಡಿದ್ದರೆ, ಕೆ.ಎಸ್‌. ಪ್ರಭಾಕರ್‌ 8 ತಿಂಗಳಿಗೆ ಅವಧಿ ಮುಗಿಸಿದ್ದಾರೆ. ಈಗ ಸುಜಾತಾ ನಾಗೇಂದ್ರ ಉಪಾ­ಧ್ಯಕ್ಷ­ರಾಗಿದ್ದಾರೆ. ಇದೇ ಅವಧಿಯಲ್ಲಿ ಇನ್ನಷ್ಟು ಮಂದಿ ಉಪಾಧ್ಯಕ್ಷರಾಗುವುದರಲ್ಲಿ ಅನುಮಾನವಿಲ್ಲ.

ಮಂಡ್ಯ ತಾಲ್ಲೂಕು ಪಂಚಾಯಿತಿಯಲ್ಲಿಯೂ ಒಡಂಬಡಿಕೆ ಜಾರಿಯಲ್ಲಿದೆ. ಇಲ್ಲಿಯೂ ಎಂಟತ್ತು ತಿಂಗಳಿಗೊಬ್ಬರು ಬದಲಾಗುತ್ತಲೇ ಇರುತ್ತಾರೆ. ನಾಗರತ್ನ ಅವರು 11 ತಿಂಗಳಿದ್ದರೆ, ಎಂ.ಬಿ. ಸುಜಾತಾ ಕೇವಲ 3 ತಿಂಗಳು, ಸುಮಾ ರಾಮ­ಚಂದ್ರ ಎಂಟು ತಿಂಗಳು ಅಧ್ಯಕ್ಷರಾಗಿದ್ದರು. ಹೇಮಲತಾ ಬಸವರಾಜು ಎಂಬು­ವವರ ಕಳೆದ 11 ತಿಂಗಳು ಅಧ್ಯಕ್ಷರಾಗಿದ್ದರು. ಈಗ ಶಂಕರೇಗೌಡ ಅಧ್ಯಕ್ಷ­ರಾಗಿ­ದ್ದಾರೆ. ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯಿತಿಯಲ್ಲಿಯೂ ಇದೇ ಸ್ಥಿತಿ ಇದೆ. ಮೊದಲ 30 ತಿಂಗಳ ಅವಧಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಇಬ್ಬರು ತಲಾ 15 ತಿಂಗಳು ಹಂಚಿಕೊಂಡಿದ್ದಾರೆ. ಇದು ಜಿಲ್ಲೆಯ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ.

ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಆಡಳಿತ ವ್ಯವಸ್ಥೆಯನ್ನು ಅರ್ಥ ಮಾಡಿ­ಕೊಳ್ಳುವುದಕ್ಕೆ ನಾಲ್ಕು ತಿಂಗಳು ಹಿಡಿಯುತ್ತದೆ. ಅಷ್ಟರಲ್ಲಾಗಲೇ ಅಧಿಕಾರ ಬಿಡ­ಬೇಕಲ್ಲ ಎಂಬ ದುಗುಡ ಆರಂಭವಾಗುತ್ತದೆ. ಇದರ ಪರಿಣಾಮ ಆಡಳಿತ ವ್ಯವಸ್ಥೆಯ ಮೇಲೆ ಬೀಳುತ್ತದೆ. ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳುತ್ತವೆ. ಮನಸ್ಸಿಲ್ಲದಿದ್ದರೂ ಪಕ್ಷದ ನಾಯಕರ ಮಾತು ಕೇಳಲೇಬೇಕಲ್ಲ ಎನ್ನುತ್ತಾರೆ ಹಿಂದೆ ಅಧ್ಯಕ್ಷರಾಗಿದ್ದವರೊಬ್ಬರು.

* ಅಧಿಕಾರ ಹಂಚಿಕೆಯ ಒಡಂಬಂಡಿಕೆ ಪ್ರಕಾರ 30 ತಿಂಗಳ ಪೂರ್ಣ ಅವಧಿಯನ್ನು 73 ಗ್ರಾ.ಪಂ.ಗಳಲ್ಲಿ ಪೂರ್ಣಗೊಳಿಸಿದ್ದಾರೆ. 88 ಸಲ

ಒಂದು ಬಾರಿ, 42 ಸಲ ಎರಡು ಬಾರಿ, 17 ಸಲ ಮೂರು ಬಾರಿ ಹಾಗೂ 2 ಸಲ ನಾಲ್ಕು ಬಾರಿ ಅಧ್ಯಕ್ಷರು ಬದಲಾಗಿದ್ದಾರೆ. ಉಪಾಧ್ಯಕ್ಷರ ಬದಲಾವಣೆಯೂ ಇಷ್ಟೇ ಪ್ರಮಾಣದಲ್ಲಿ ಆಗಿದೆ.

* 10 ಗ್ರಾ.ಪಂ. ಗಳಲ್ಲಿ ಒಡಂಬಂಡಿಕೆ ಪ್ರಕಾರ ರಾಜೀನಾಮೆ ನೀಡಲಿಲ್ಲ ಎಂಬ ಕಾರಣಕ್ಕೆ ಅವಿಶ್ವಾಸ ಮಂಡಿಸಲಾಗಿದೆ. ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಪಕ್ಷದ ಶಾಸಕರು ಹಾಗೂ ಮುಖಂಡರು ಸೂಚಿಸುತ್ತಾರೆ. ಅವರನ್ನು ಕೆಳಗೆ ಇಳಿಸಿದ ನಂತರ ಮೊದಲೇ ನಿರ್ಧರಿಸಿದ ಇತರರಿಗೆ ನೀಡಿದ್ದಾರೆ.

* ಪಕ್ಷದ ಸದಸ್ಯರನ್ನು ಸಮಾಧಾನಗೊಳಿಸುವ ಉದ್ದೇಶದಿಂದ ಅಧಿಕಾರ ಹಂಚಿಕೆಯ ಒಡಂಬಡಿಕೆ ಇಲ್ಲಿ ಸಾಮಾನ್ಯವಾಗಿದೆ.

* ಬಹುತೇಕ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಒಡಂಬಡಿಕೆಯ ಜವಾಬ್ದಾರಿಯನ್ನು ಶಾಸಕರು ವಹಿಸಿಕೊಳ್ಳುತ್ತಾರೆ. ಸದಸ್ಯರ ವಿರೋಧ ಕಟ್ಟಿಕೊಳ್ಳದೇ ಸಾಧ್ಯವಾದಷ್ಟು ಸದಸ್ಯರಿಗೆ ಇರುವ ಅವಧಿಯನ್ನೇ ಹಂಚಿ ಸಮಾ­ಧಾ­ನ­ಪಡಿಸುತ್ತಾರೆ. ಜಿಲ್ಲಾ ಪಂಚಾಯ್ತಿಯಲ್ಲಿನ ಒಡಂಬಂಡಿ­ಕೆಯ ಜವಾಬ್ದಾರಿಯನ್ನು ಜಿಲ್ಲೆಯ ಶಾಸಕರು ಹಾಗೂ ರಾಜ್ಯ­ಮಟ್ಟದ ನಾಯಕರು ವಹಿಸಿಕೊಳ್ಳುತ್ತಾರೆ. ಅವರ ಮಧ್ಯಸ್ಥಿಕೆ­ಯಲ್ಲಿಯೇ ಅಧಿಕಾರದ ಹಂಚಿಕೆ ಸೂತ್ರ ನಿರ್ಧಾರವಾಗುತ್ತದೆ.

* ಶ್ರೀರಂಗಪಟ್ಟಣ ತಾಲ್ಲೂಕಿನ ಬೇವಿನಹಳ್ಳಿಯ ಅಧ್ಯಕ್ಷ ಸ್ಥಾನವು  ಹಿಂದುಳಿದ ವರ್ಗ ‘ಎ’ ಮೀಸಲಾಗಿತ್ತು. ನಾಲ್ವರು ಅಭ್ಯರ್ಥಿಗಳಿದ್ದರು. ಆದರೆ, ರಾಜಕೀಯ ಒತ್ತಡ ಹಾಕಿ ಅವರಿಗೆ ನಾಮಪತ್ರ ಸಲ್ಲಿಸಲು ಬಿಡಲಿಲ್ಲ. ಸಾಮಾನ್ಯ ಅಭ್ಯರ್ಥಿಯೇ ನಾಮಪತ್ರ ಸಲ್ಲಿಸಿ, ಅವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT