ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ದುರ್ಲಭಗಳು

Last Updated 12 ಫೆಬ್ರುವರಿ 2016, 5:32 IST
ಅಕ್ಷರ ಗಾತ್ರ

ಲಚತ್ತಾರಿ ಪರಮಂಗಾಣೀ, ದುಲ್ಲಹಾಣೀಹ ಜಂತುಣೋ |
ಮಾಣುಸತ್ತಂ, ಸುಈ, ಸದ್ಧಾ, ಸಂಜಯಮ್ಮಿ ಯ ವೀರಿಯಂ ||
(ಮನುಷ್ಯತ್ವ, ಶ್ರುತಿ, ಶ್ರದ್ಧೆ ಮತ್ತು ಸಂಯಮದಲ್ಲಿ ಪರಾಕ್ರಮ - ಈ ನಾಲ್ಕು (ಧರ್ಮದ) ಪರಮ ಅಂಗಗಳು ಸಂಸಾರಿ ಪ್ರಾಣಿಗಳಿಗೆ ದುರ್ಲಭವಾಗಿವೆ). ಲೋಕದಲ್ಲಿ ಜೀವಗಳು ಜನಿಸಲು 84 ಲಕ್ಷ ಜನನಸ್ಥಾನಗಳಿವೆ. ತಮ್ಮತಮ್ಮ ಕರ್ಮಗಳಿಗೆ ಅನುಸಾರವಾಗಿ ಏಕೇಂದ್ರಿಯ ಮೊದಲಾದ ಜೀವಗಳಾಗಿ ಜನ್ಮ ಪಡೆಯುತ್ತವೆ. ಒಮ್ಮೊಮ್ಮೆ ದೇವನಾಗಿ, ನಾರಕಿಯಾಗಿ, ತಿರಿಯಂಚಿಯಾಗಿ, ಮಾನುಷನಾಗಿ ಹುಟ್ಟುತ್ತವೆ. ಜೀವನು ದೇವನಾದಾಗ ಭೋಗ ವಿಳಾಸಗಳಲ್ಲೇ ತನ್ಮಯನಾಗಿ ಧರ್ಮಾರಾಧನೆ ಮಾಡಲಾರ; ನಾರಕಿಯಾದಾಗ ದುಃಖದಲ್ಲೇ ಮುಳುಗಿರುವುದರಿಂದಪ್ರಬುದ್ಧ ಧಾರ್ಮಿಕ ವಿವೇಕವಿರುವುದಿಲ್ಲ; ಪ್ರಾಣಿ ಜಗತ್ತಿನಲ್ಲಿ ಹಿಂದಿನ ಸಂಸ್ಕಾರದಿಂದ ಪ್ರೇರಿತ ಧರ್ಮಾರಾಧನೆ ಕೊಂಚವಿದ್ದರೂ, ಅದು ಅಪೂರ್ಣವಾದುದು.

ಜೀವನು ಮನುಷ್ಯನಾದಾಗ ಅತಿಯಾಗಿ ದುಃಖಿಯೂ ಸುಖಿಯೂ ಆಗಿರುವುದಿಲ್ಲ. ಆದ್ದರಿಂದ ಆತ ಪೂರ್ಣ ಧರ್ಮಾಚರಣೆಗೆ ಉಪಯುಕ್ತ ಅಧಿಕಾರಿ. ಆತ್ಮನಿಗೆ ಪರಮಾತ್ಮನಾಗಲು ಏಕಮಾತ್ರ ಸಾಧನಾ ತಾಣವೆಂದರೆ, ಅದು ಮನುಷ್ಯ ಜನ್ಮ ಮಾತ್ರ. ಅದು ದೊರೆತರೂ  ರೋಗಿಯಾಗದೆ, ವಿಕಲಾಂಗನಾಗದೆ, ದರಿದ್ರನಾಗದೆ, ಪ್ರತಿಷ್ಠಿತ ಸಂಸ್ಕಾರಯುಕ್ತ ಕುಟುಂಬದಲ್ಲಿ, ಸುಭಿಕ್ಷ ದೇಶದಲ್ಲಿ, ಅನುಕೂಲ ಕಾಲದಲ್ಲಿ ಜನಿಸುವುದು ಬಹಳ ದುರ್ಲಭ.
ಅಕಸ್ಮಾತ್ ಅಂಥ ಮಾನವ ಜನ್ಮ ಲಭಿಸಿದಾಗ, ಅದನ್ನು  ನಷ್ಟ ಮಾಡಿಕೊಳ್ಳಬಾರದು. ಅದೃಷ್ಟದಿಂದ ಮನುಷ್ಯಜನ್ಮ ದೊರೆತರೂ, ಶ್ರುತಿ ದೊರೆಯುವುದು ದುರ್ಲಭ. ಶ್ರುತಿ ಎಂದರೆ, ಧರ್ಮದ ಮಾತುಗಳನ್ನುಗುರು-ಮುನಿಗಳಿಂದ ಕೇಳುವುದು. ಆದರೆ ಇದರಲ್ಲಿ ಪ್ರತಿಯೊಬ್ಬರಿಗೂ ಅಭಿರುಚಿ ಇರುವುದಿಲ್ಲ. ಯಾರು ಧಾರ್ಮಿಕರೋ ಅಂಥವರು ಮಾತ್ರ ಧರ್ಮಬೋಧೆ ಆಲಿಸುತ್ತಾರೆ. ಆದರೆ ಇದಕ್ಕೆ ಆಲಸ್ಯ, ಅವಜ್ಙೆ, ಕೃಪಣತೆ ಮೊದಲಾದುವು ವಿಘ್ನಗಳಾಗಿವೆ. ಇವುಗಳನ್ನು ನಿವಾರಿಸಿಕೊಂಡುಧರ್ಮ-ಶ್ರುತಿ ಪಡೆಯುವುದು ಕಷ್ಟಸಾಧ್ಯವಾದುದು.

ಸಮ್ಯಕ್ ಶ್ರುತಿ ದೊರೆತ ಮೇಲೆ ಅದರಲ್ಲಿ ‘ಸದ್ಧಾ ಪರಮ ದುಲ್ಲಹಾ’ ಅಂದರೆ ಶ್ರದ್ಧೆ ಪರಮ ದುರ್ಲಭವಾಗಿದೆ. ಯಾರ ದೃಷ್ಟಿಕೋನವು ಸಕಾರಾತ್ಮಕವಾಗಿರುವುದೋ ಅಂಥವರು ಮಾತ್ರ ಧರ್ಮ-ಶ್ರುತಿಯಲ್ಲಿ ಶ್ರದ್ಧೆಯನ್ನು ಹೊಂದುತ್ತಾರೆ. ಸಮ್ಯಕ್ ಶ್ರದ್ಧೆ ಹೊಂದಿದ ಮೇಲೆ, ಸಂಯಮದಲ್ಲಿ ತನ್ನ ಪರಾಕ್ರಮ ತೋರುವುದು ದುರ್ಲಭ. ಇಲ್ಲಿ ಸಂಯಮವೆಂದರೆ ತಪ, ಸಹಿಷ್ಣುತೆ ಮತ್ತು ಅಹಿಂಸೆ. ಇವುಗಳನ್ನು ಸಂಕಲ್ಪ ಶಕ್ತಿಯಿಂದ ಜೀವನದಲ್ಲಿ ಕ್ರಿಯಾನ್ವಿತಗೊಳಿಸಿಕೊಂಡರೆ, ಆತ್ಮನ ಮೇಲೆ ಕುಳಿತಿರುವ ಕರ್ಮರಜಗಳು ಉದುರಿಹೋಗಿ (ನಿರ್ಜರೆಗೊಂಡು) ಅದು ಸ್ವಚ್ಛವಾಗುವುದು. ಸ್ವಚ್ಛ ಆತ್ಮನೇ ಪರಮಾತ್ಮ.

ನಮ್ಮ ದೇಶದಲ್ಲಿ ಜನಿಸುವ ಪ್ರತಿಯೊಂದು ಶಿಶುವಿಗೂ ಸಂಸ್ಕಾರಯುಕ್ತ ಕುಟುಂಬ ಸಿಗುವಂತಾಗಲಿ; ಅದಕ್ಕೆ ಸರ್ವ-ಧರ್ಮ-ಶ್ರುತಿ ದೊರೆಯುವಂತಾಗಲಿ; ಅದರಲ್ಲಿ ಶ್ರದ್ಧೆಯಿಡುವಂತಾಗಲಿ; ಅಲ್ಲದೆ ಸಹಿಷ್ಣುತೆ ಹಾಗೂ ಅಹಿಂಸೆಯ ಪಥದಲ್ಲಿ ಮುನ್ನಡೆಯುವಂತಾಗಲಿ ಎಂದು ಹಾರೈಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT