ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ಮಂದಿ ರೋಗಿಗಳ ಸಾವು

ಮುಷ್ಕರ ನಡೆಸುತ್ತಿರುವ ವೈದ್ಯರು
Last Updated 3 ಸೆಪ್ಟೆಂಬರ್ 2015, 19:55 IST
ಅಕ್ಷರ ಗಾತ್ರ

ಬೀದರ್: ವೈದ್ಯರ ಮುಷ್ಕರದಿಂದಾಗಿ ನಾಲ್ಕು ರೋಗಿಗಳು ಮೃತಪಟ್ಟಿದ್ದು, ಇದರಿಂದ ಆಕ್ರೋಶಗೊಂಡ ರೋಗಿಗಳ ಸಂಬಂಧಿಗಳು ಹಾಗೂ ಸಾರ್ವಜನಿಕರು ನಗರದ ಅಂಬೇಡ್ಕರ್‌ ವೃತ್ತದಲ್ಲಿ ಶವವನ್ನು ಇಟ್ಟು ಗುರುವಾರ ಎರಡು ತಾಸು ಪ್ರತಿಭಟನೆ ನಡೆಸಿದರು.

24 ಗಂಟೆಗಳಲ್ಲಿ ಬೀದರ್ ತಾಲ್ಲೂಕಿನ ಬಗದಲ್‌ ಗ್ರಾಮದ ಸಂಗೀತಾ ಬಾಬುರಾವ್‌ ಅಲಿಯಂಬರ್‌(16), ತೆಲಂಗಾಣದ ಮೇದಕ ಜಿಲ್ಲೆಯ ನಾರಾಯಣಖೇಡದ ನಾಗಮ್ಮ ಶಿರೋಮಣಿ(55) ಹಾಗೂ ಜನವಾಡದ ಮಾರುತಿ ಸಿದ್ದರಾಮಪ್ಪ(65) ಜಿಲ್ಲಾ ಆಸ್ಪತ್ರೆಯಲ್ಲಿಯೂ, ಹುಮನಾಬಾದ್‌ ತಾಲ್ಲೂಕಿನ  ಹಳ್ಳಿಖೇಡ(ಬಿ) ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗೌಸೋದ್ದೀನ್‌ ಬಾಬರ್(60) ಮೃತಪಟ್ಟರು.

ಮಧ್ಯಾಹ್ನ ಜಿಲ್ಲಾಸ್ಪತ್ರೆಯ ಒಳ ರೋಗಿಯ ವಿಭಾಗದಲ್ಲಿ ಯುವತಿ ಸಾವಿಗೀಡಾಗುತ್ತಿದ್ದಂತೆಯೇ ಪಾಲಕರು  ಶವವನ್ನು ಸ್ಟ್ರಚರ್‌ ಮೇಲಿಟ್ಟು ಅಂಬೇಡ್ಕರ್‌ ವೃತ್ತದವರೆಗೂ ತಳ್ಳಿಕೊಂಡು ಬಂದರು. ವೃತ್ತದಲ್ಲಿ ಶವವಿಟ್ಟು ವೈದ್ಯರ ವಿರುದ್ಧ ಘೋಷಣೆ ಕೂಗಿದರು. ಕೆಲ ಹೊತ್ತಿನಲ್ಲೇ  ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ವೃತ್ತದಲ್ಲಿ ನೂರಾರು ಜನರು ಸೇರುತ್ತಿದ್ದಂತೆಯೇ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಅರಿತ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರಕುಮಾರ ರೆಡ್ಡಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಜಿಲ್ಲಾ ಸಶಸ್ತ್ರಪಡೆ ಹಾಗೂ ಕೆಎಸ್‌ಆರ್‌ಪಿ ಸಿಬ್ಬಂದಿ ಸಹ ಸ್ಥಳಕ್ಕೆ ಬಂದರು.

ವೈದ್ಯರು ತಕ್ಷಣ ಸೇವೆಗೆ ಹಾಜರಾಗಬೇಕು. ಜಿಲ್ಲಾಸ್ಪತ್ರೆಯಲ್ಲಿ ತೊಂದರೆ ಅನುಭವಿಸುತ್ತಿರುವ ರೋಗಿಗಳಿಗೆ ತ್ವರಿತ ಚಿಕಿತ್ಸೆ ಒದಗಿಸಬೇಕು. ತಪ್ಪಿತಸ್ಥ ವೈದ್ಯರ ವಿರುದ್ಧ ಕ್ರಮಕೈಗೊಳ್ಳಬೇಕು. ವೈದ್ಯರ ಮುಷ್ಕರ ಸಂದರ್ಭದಲ್ಲಿ ಸಾವಿಗೀಡಾದ ರೋಗಿಗಳ ಕುಟುಂಬಕ್ಕೆ ಪರಿಹಾರ ಕೊಡಬೇಕು  ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಒಂದು ಗಂಟೆ ಒಳಗೆ ಸೇವೆಗೆ ಹಾಜರಾಗುವಂತೆ ಕ್ರಮಕೈಗೊಳ್ಳಬೇಕು ಎಂದು ಬ್ರೀಮ್ಸ್‌ ನಿರ್ದೇಶಕರಿಗೆ ಸ್ಥಳದಲ್ಲೇ ಆದೇಶಿಸಿದ ಜಿಲ್ಲಾಧಿಕಾರಿ, ಪರಿಹಾರಕ್ಕಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಭರವಸೆ ನೀಡಿದರು. ಬ್ರೀಮ್ಸ್‌ ನಿರ್ದೇಶಕರು ಜಿಲ್ಲಾಧಿಕಾರಿ ಆದೇಶ ಒಪ್ಪಿಕೊಂಡು ವೈದ್ಯರಿಗೆ ನಿರ್ದೇಶನ ನೀಡಿದರು. ಆದರೆ ವೈದ್ಯರು ಸೇವೆಗೆ  ಹಾಜರಾಗುವ ಬದಲು ಸಾಮೂಹಿಕವಾಗಿ ರಾಜೀನಾಮೆ ಬರೆದುಕೊಟ್ಟರು. ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಸಂಜೆಯವರೆಗೂ ವೈದ್ಯರು ಸೇವೆಗೆ ಹಾಜರಾಗಲಿಲ್ಲ.

*
ಪ್ರಕರಣದ ತನಿಖೆಗೆ ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಜಿಲ್ಲಾ ಶಸ್ತ್ರಚಿಕಿತ್ಸಕರು, ಬ್ರೀಮ್ಸ್‌ ನಿರ್ದೇಶಕರು ಸೇರಿ ನಾಲ್ವರು ಅಧಿಕಾರಿಗಳು ಸಮಿತಿಯಲ್ಲಿದ್ದಾರೆ.
-ಅನುರಾಗ ತಿವಾರಿ, 
ಜಿಲ್ಲಾಧಿಕಾರಿ​

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT