ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಕಲಾಕೋಸ್ಟ್ ಸಂಗೀತ ಉತ್ಸವ

Last Updated 30 ಜನವರಿ 2015, 10:57 IST
ಅಕ್ಷರ ಗಾತ್ರ

ಬ್ರಹ್ಮಾವರ: ಕರ್ಜೆ ಗ್ರಾಮ ಪಂಚಾಯಿತಿ ಹಳುವಳ್ಳಿ ಗ್ರಾಮದ ಕಲಾಕೋಸ್ಟ್‌ನಲ್ಲಿ ಸಂಗೀತ, ನೃತ್ಯ, ಕಲೆಯನ್ನೊಳಗೊಂಡ ಕಲಾಕೋಸ್ಟ್ ಸಂಗೀತ ಉತ್ಸವ ಕಾರ್ಯಕ್ರಮ ಇದೇ 31 ಮತ್ತು ಫೆ.1ರಂದು ನಡೆಯಲಿದ್ದು, ಎರಡು ದಿನಗಳ ಕಾಲ ಸಹಸ್ರಾರು ಕಲಾಭಿಮಾನಿಗಳಿಗೆ ಸಂಗೀತ ಖ್ಯಾತ ಕಲಾವಿದರ ಸಂಗೀತ ರಸದೌತಣ ಉಣಬಡಿಸಲಿದೆ.

ಕಲಾಕೋಸ್ಟ್‌ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಉತ್ಸವ ಸಮಿತಿಯ ನಿರ್ದೇಶಕ ಪಂ.ಸುಧೀರ್‌ ನಾಯಕ್‌ ಮಾತನಾಡಿ, ಸುಮಾರು 5 ಎಕರೆ  ಜಾಗದಲ್ಲಿ ಈ ಅಪರೂಪದ ಕಲಾಕೋಸ್ಟ್ ನಿರ್ಮಿಸಲಾಗಿದ್ದು, ಕಲಾವಿದರಿಗೆ ಉಳಿದುಕೊಳ್ಳಲು ಅಪಾರ್ಟ್‌ ಮೆಂಟ್‌, ಸುಸಜ್ಜಿತ ವೇದಿಕೆ ಮತ್ತು ಸ್ಟುಡಿಯೋ, ಗುರುಕುಲ, ಕಲೆಯ ಬಗ್ಗೆ ವಾಚನಾಲಯ ಮುಂತಾದ ಅನೇಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.

ದೇಶದ ವಿವಿಧೆಡೆಯ ವಿವಿಧ ಕಲಾವಿದರು, ಕಲಾಪ್ರೇಮಿಗಳು ಇಲ್ಲಿಗೆ ಬಂದು ಸಂಗೀತ ಕಲೆಯ ಬಗ್ಗೆ ಅನೇಕ ಚಿಂತನೆ, ಹೊಸ ಆಯಾಮಗಳನ್ನು ಮುಕ್ತವಾಗಿ  ಚರ್ಚಿಸಬಹುದಾಗಿದೆ. ಕಲೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಕಲೆಯ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಅವಕಾಶವನ್ನು ಒದಗಿಸಲಾಗುತ್ತದೆ. ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಈ ಕಲಾಕೋಸ್ಟ್ ಇಲ್ಲಿ ಸಿದ್ಧವಾಗಿದೆ ಎಂದು ತಿಳಿಸಿದರು.

ಶುಭ ಮುದ್ಗಲ್‌ ಚಾಲನೆ
ಹಿರಿಯ ಕಲಾವಿದರನ್ನು ಸ್ಮರಿಸುವ ಸಲುವಾಗಿ ಎರಡು ದಿನಗಳ ಕಾಲ ಸಂಗೀತ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದ ಅವರು ಇದೇ 31ರಂದು ಸಂಜೆ 3ಗಂಟೆಗೆ ಖ್ಯಾತ ಗಾಯಕಿ ಶುಭಾ ಮುದ್ಗಲ್‌ ಮತ್ತು ಡಾ.ಅನೀಶ್‌ ಪ್ರಧಾನ್ ಕಾರ್ಯಕ್ರಮವನ್ನು ಉದ್ಘಾಟಿಸುವರು. 4.30ಕ್ಕೆ ಮಹಾರಾಷ್ಟ್ರದ ಅವದೂತ್‌ ಗಾಂಧಿ ಮತ್ತು ಸದಸ್ಯರಿಂದ ಮಹಾರಾಷ್ಟ್ರದ ಜಾನಪದ ಸಂಗೀತ, ನೃತ್ಯ ಕಾರ್ಯಕ್ರಮ, 6.30ಕ್ಕೆ ಭಾಸ್ಕರ ಕೊಗ್ಗ ಕಾಮತ್‌ ಅವರಿಂದ ಯಕ್ಷಗಾನ ಗೊಂಬೆಯಾಟ  ನಡೆಯಲಿದೆ.

ಫೆ.1ರ ಬೆಳಿಗ್ಗೆ 7ಗಂಟೆಗೆ ಭದ್ರಗಿರಿ ಅಚ್ಯುತದಾಸ ಅವರ ನೆನಪಿನಲ್ಲಿ ಡಾ.ಪವನ್‌ ಭಟ್‌ ಅವರಿಂದ ಕೃಷ್ಣ ಬಾಲಲೀಲೆಯ ಬಗ್ಗೆ ಭಾಗವತ ಪುರಾಣ, 8.15ಕ್ಕೆ ಚಿಂತನ್‌ ಉಪಾಧ್ಯಾಯ ಮತ್ತು  ಸುಖದ್‌ ಮುಂಡೆ ಅವರಿಂದ ದ್ರುಪದ ಧಾಮರ್‌, 9.30ಕ್ಕೆ ಸಿದ್ಧೇಶ್‌ ಬಿಕೋಲ್‌ಕರ್‌ ಅವರಿಂದ ಜಲತರಂಗ ವಾದನ, 10 ಗಂಟೆಗೆ ಸಿದ್ಧಾರ್ಥ ಪಡಿಯಾರ್‌, ದಾವತ್‌ ಮೆಹತಾ ಅವರಿಂದ ತಬಲಾ ಜುಗಲ್‌ಬಂದಿ, 11 ಗಂಟೆಗೆ ಸಹನಾ ಬ್ಯಾನರ್ಜಿ ಅವರಿಂದ ಸಿತಾರ್‌, 12.30ಕ್ಕೆ ಪಂಡಿತ್‌ ಉಲ್ಲಾಸ್‌ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, 3.30ಕ್ಕೆ ಉನ್ಮೇಶ್‌ ಅವರಿಂದ ಹಾರ್ಮೋನಿಯಂ, 4.30ಕ್ಕೆ ಖ್ಯಾತ ಗಾಯಕರಿಂದ ಸುಗಮ ಸಂಗೀತ, 6.30ಕ್ಕೆ ಬೆಂಗಳೂರಿನ ಕರ್ನಾಟಕ ಕಲಾ ದರ್ಶಿನಿ ಅವರಿಂದ ಯಕ್ಷಗಾನ ಬ್ಯಾಲೆ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಇದಲ್ಲದೇ ಸಾಲಿಗ್ರಾಮ ಮಕ್ಕಳ ಮೇಳದವರಿಂದ ಯಕ್ಷಗಾನ, ಮ್ಯಾಂಡೊಲಿನ್‌ ವಾದನ, ಮುಂಬಯಿಯ ಪ್ರಭಾಕರ ವಾಯಿರ್‌ಕರ್‌ ಅವರ ಚಿತ್ರಕಲೆ, ಕನ್ನಾರು ಪ್ರದೀಶ್ ಅವರಿಂದ ಥ್ರೆಡ್‌ ಆರ್ಟ್, ಆರೂರು ಆಲುಂಜೆಯ ರಘು ಕುಲಾಲ ಅವರಿಂದ ಮಡಿಕೆ ತಯಾರಿ ಬಗ್ಗೆ ಪ್ರಾತ್ಯಕ್ಷಿಕೆ, ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಸುಭಾಷ್‌ ಮಲ್ಯ, ಪಂ.ಓಂಕಾರ್‌ನಾಥ್‌ ಗುಲ್ವಾಡಿ, ಭಾರತಿ ಸುಧೀರ್ ನಾಯಕ್‌, ರಾಘವೇಂದ್ರ ಮಲ್ಯ, ರಂಗ ಪೈ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT