ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ‘ಯಕ್ಷ ಪರ್ಯಟನ’

Last Updated 23 ಜುಲೈ 2014, 19:30 IST
ಅಕ್ಷರ ಗಾತ್ರ

ಕರಾವಳಿ ಹಾಗೂ ಮಲೆನಾಡ ಭಾಗಗಳನ್ನು ಹೊರತುಪಡಿಸಿ ಇತರೆಡೆ ಬಹುತೇಕ ಅಪರಿಚಿತವಾಗಿಯೇ ಉಳಿದಿರುವ ಕಲೆ ಯಕ್ಷಗಾನ ಹಾಗೂ ತಾಳಮದ್ದಲೆ. ಇದನ್ನು ಮೆಟ್ರೊ ಮಂದಿಯ ಮನಕ್ಕೂ ಮುಟ್ಟಿಸುವ ನಿಟ್ಟಿನಲ್ಲಿ ಯಕ್ಷ ಕೌಮುದೀ ಟ್ರಸ್ಟ್ ಹೆಜ್ಜೆ ಇಟ್ಟಿದೆ.
ಇದೇ 25ರಿಂದ 29ರವರಗೆ ನಗರದ ವಿವಿಧ ಬಡಾವಣೆಗಳಲ್ಲಿ ಐದು ದಿನಗಳ ‘ಅಖಿಲ ಕರ್ನಾಟಕ ಯಕ್ಷ ಪರ್ಯಟನ–1’ ಏರ್ಪಡಿಸಲಾಗಿದೆ. ಯಕ್ಷಗಾನದ ಸಾಂಪ್ರದಾಯಿಕ ಪ್ರೇಕ್ಷಕರನ್ನಷ್ಟೇ ಅಲ್ಲದೇ, ಹೊಸಬರನ್ನೂ ಈ ಕಲೆಯತ್ತ ಸೆಳೆಯುವುದಕ್ಕೆ ಸುಮಾರು 250 ಜನರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ.

ಯಕ್ಷಗಾನವನ್ನು ಲಘುವಾಗಿ ಕಾಣುವ ಕಾಲವೊಂದಿತ್ತು. ಆದರೆ ಈಗಿನ ಸಂದರ್ಭ ಹಾಗಿಲ್ಲ, ಯಕ್ಷಗಾನ ಕಲೆಗೂ, ಕಲಾವಿದನಿಗೂ ಒಂದು ಪ್ರತಿಷ್ಠೆ ಬಂದಿದೆ. ಸಮಾಜದಲ್ಲಿ ಇದೊಂದು ವಿಶೇಷ ಕಲೆ ಎಂಬ ಗೌರವವೂ ದೊರೆತಿದೆ. ಇಲ್ಲಿಯೂ ತಾರಾ ಮೌಲ್ಯವಿರುವ ಕಲಾವಿದರಿದ್ದಾರೆ. ಅಂಥವರಿಗಂತೂ ರಾಜಮರ್ಯಾದೆ ಇದೆ. ಕೈತುಂಬಾ ಸಂಭಾವನೆ ಸಿಗುತ್ತಿದೆ. ಆದರೆ ಕೇವಲ ಬೇಸಿಕ್ ಕುಣಿತವೊಂದು ಗೊತ್ತಿದ್ದು, ಭಾಗವತನಿಗೆ ಕಂಠತ್ರಾಣವೊಂದಿದ್ದು, ಕಣ್ಣಿಗೆ–ಕಿವಿಗೆ ಹಿತಾನುಭವ ನೀಡುವಂತಿದ್ದರೆ ಸಾಕು. ಅದೊಂದು ಅದ್ಭುತ ಆಟ ಎನ್ನುವ ವರ್ಗವೂ ಬೆಳೆಯುತ್ತಿದೆ.

ಅಂತೆಯೇ ಯಾಂತ್ರಿಕವಾಗಿ ಕುಣಿಯುತ್ತ ಈ ಕಲೆಯನ್ನೊಂದು ಬದುಕುವ ಮಾರ್ಗವನ್ನಾಗಿ ಮಾಡಿಕೊಂಡ ಕಲಾವಿದರ ಸಂಖ್ಯೆಗೂ ಕೊರತೆ ಏನಿಲ್ಲ. ತಾಳಮದ್ದಲೆಯಲ್ಲಿ ಗೊತ್ತಿರುವುದನ್ನೆಲ್ಲ ವಮನ ಮಾಡುವ ಕಲಾವಿದರಿಗೂ ಬರವಿಲ್ಲ. ಆದರೆ ಕೊರತೆ ಇರುವುದು ಪಾತ್ರವಾಗಿ, ಪಾತ್ರದಲ್ಲಿ ತುಂಬಿಕೊಳ್ಳುವ  ಮತ್ತು ಪುರಾಣ ಕಥನಗಳನ್ನು ಮರುಸೃಷ್ಟಿ ಮಾಡುವ ನಿಜವಾದ ಕಲಾವಿದರದು.
ದಶಕಗಳ ಹಿಂದೆ ವಾರಕ್ಕೆ ಒಂದೆರಡು ಆಟಗಳು ಆಗುತ್ತಿದ್ದರೆ ಅದೇ ಹೆಚ್ಚು. ಆಮೇಲೆ ಆರು ತಿಂಗಳು ಆಟ, ಆರು ತಿಂಗಳ ವಿರಾಮ ಅಂತಾಯಿತು. ಆದರೆ ಈಗ ವರ್ಷವಿಡಿ ಆಟ, ತಾಳಮದ್ದಲೆಗಳು ಜರುಗುತ್ತಲೇ ಇರುತ್ತವೆ.

ಬೇಸರದ ಸಂಗತಿ ಎಂದರೆ ಇಷ್ಟೆಲ್ಲ ಬದಲಾವಣೆಗಳು ಆಗುತ್ತಿದ್ದರೂ ಈ ಕಲೆ ಕೇವಲ ಕರಾವಳಿ, ಮಲೆನಾಡಿನ ಕೆಲ ಜಿಲ್ಲೆಗಳಿಗಷ್ಟೇ ಸೀಮಿತವಾಗಿ ಉಳಿದಿದ್ದು, ಇತರ ಭಾಗಗಳಿಗೆ ಬಹುತೇಕ ಅಪರಿಚಿತ ಆಟವೇ ಆಗಿದೆ.

ಇದನ್ನರಿತ ಯಕ್ಷ ಕೌಮುದೀ ಟ್ರಸ್ಟ್ ಕಳೆದ 18 ವರ್ಷಗಳಿಂದ ರಾಜ್ಯದ ಇತರೆಡೆ ಯಕ್ಷಗಾನ, ತಾಳಮದ್ದಲೆ ಆಟಗಳನ್ನು ಪ್ರದರ್ಶಿಸುತ್ತ ಸಾಗಿದೆ. ಮನೋಹರತೆ, ಸೊಬಗು, ಸೌಂದರ್ಯ, ವೇಷ ಭೂಷಣ ವೈಭವ, ಮಾತಿನ ಚಮತ್ಕಾರ, ವಾದ ವಿವಾದ, ಸಂವಾದ, ಪಾತ್ರ ಸ್ವಭಾವ, ರೂಪಕ ಶಕ್ತಿ, ಪಾತ್ರಗಳ ನಿಚೋಚ್ಚ ಗುಣಗಳು ಸೇರಿದಂತೆ ಅನೇಕ ಸಂಗತಿಗಳನ್ನು ಮೆಟ್ರೊ ನಗರದ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಬೆಂಗಳೂರಿನ ವಿವಿಧೆಡೆ ಯಕ್ಷ ಪರ್ಯಟನ ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ ಅಧ್ಯಕ್ಷ ಗ.ನಾ.ಭಟ್ಟ.

ಮಾಹಿತಿಗೆ: 94821 13818

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT