ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಭೂಮಿಗೆ ಅಪ್ಪಳಿಸಲಿದೆ ರಷ್ಯಾ ನೌಕೆ

Last Updated 6 ಮೇ 2015, 19:39 IST
ಅಕ್ಷರ ಗಾತ್ರ

ಮಾಸ್ಕೊ (ಎಎಫ್‌ಪಿ): ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸರಕು ಸರಂಜಾಮುಗಳನ್ನು ಒಯ್ಯುತ್ತಿದ್ದ, ರಷ್ಯಾದ ಮಾನವ ರಹಿತ ನೌಕೆ ಸಂಪರ್ಕ ಕಳೆದುಕೊಂಡ ಕಾರಣ ಶುಕ್ರವಾರ ಭೂಮಿಗೆ ಅಪ್ಪಳಿಸುವ ಮಾರ್ಗ ಮಧ್ಯದಲ್ಲಿಯೇ ಸುಟ್ಟು ಹೋಗಲಿದೆ.

ಪ್ರೋಗ್ರೆಸ್ ಎಂ27ಎಂ ಮಾನವ ರಹಿತ ಬಾಹ್ಯಾಕಾಶ ನೌಕೆ ಮೇ 8ರ ಬೆಳಿಗ್ಗೆ 1.23 ಮತ್ತು ರಾತ್ರಿ 9.55 ಗಂಟೆ ನಡುವೆ ಇದರ ಅಸ್ತಿತ್ವ ಅಂತ್ಯಗೊಳ್ಳಲಿದೆ ಎಂದು ರಷ್ಯಾ ಬಾಹ್ಯಾಕಾಶ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಬಾಹ್ಯಾಕಾಶದಲ್ಲೇ ನೌಕೆ ಸುಟ್ಟು ಹೋಗಲಿದ್ದು, ಕೆಲವೊಂದು ಭಾಗಗಳು ಮಾತ್ರ ಪೆಸಿಫಿಕ್‌ ಸಾಗರದಲ್ಲಿ ಬೀಳಲಿವೆ.
ಸೂಯೇಜ್ ರಾಕೆಟ್‌ ಮೂಲಕ ಮಂಗಳವಾರ ರಷ್ಯಾದ ಬೈಕನೂರ್ ಉಡಾವಣಾ ಕೇಂದ್ರದಿಂದ ಉಡಾಯಿಸಲಾದ ಈ ನೌಕೆ ಕೆಲವೇ ಗಂಟೆಗಳಲ್ಲಿ ತನ್ನ ನಿಯಂತ್ರಣ ಮತ್ತು ಸಂಪರ್ಕ ಕಳೆದುಕೊಂಡಿತ್ತು.

ಯಶಸ್ವಿಯಾಗಿ ಉಡಾವಣೆಗೊಂಡರೂ ಭೂಸ್ಥಿರ ಕಕ್ಷೆ ತಲುಪಿದ ನಂತರ ಪ್ರೋಗ್ರೆಸ್ ಎಂ27ಎಂ ಸಂಪರ್ಕ ಕಳೆದುಕೊಂಡಿತ್ತು. ಹೀಗಾಗಿ ಆರು ತಾಸು ಅವಧಿಯ ಪಯಣವನ್ನು ಎರಡು ದಿನಗಳ ಅವಧಿಗೆ ಹಿಗ್ಗಿಸಿ ಕಾರ್ಯಾಚರಣೆಯನ್ನು ಮಾರ್ಪಾಡು ಮಾಡಲಾಗಿತ್ತು. ಮಾರ್ಪಾಡಿನಂತೆ ಪ್ರೋಗ್ರೆಸ್ ಏಪ್ರಿಲ್ 30ರಂದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಬೇಕಿತ್ತು. ಆದರೆ ಇಲ್ಲಿಂದ ರವಾನಿಸಿದ ಆಜ್ಞೆಗಳನ್ನು ಸ್ವೀಕರಿಸುವಲ್ಲಿ ನೌಕೆ ವಿಫಲವಾಗಿದ್ದು, ನಿಯಂತ್ರಣ ಕಳೆದುಕೊಂಡು ಭೂಮಿಗೆ ಬೀಳುತ್ತಿದೆ.

ಪರ್ಯಾಯ ವ್ಯವಸ್ಥೆ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಆರು ಗಗನಯಾತ್ರಿಗಳು ಈ ನೌಕೆ ಹೊತ್ತು ತರಬೇಕಿದ್ದ ಸರಕು ಸರಂಜಾಮುಗಳಿಗಾಗಿ ಕಾಯುತ್ತಿದ್ದರು. ನೌಕೆ ತಲುಪದ ಕಾರಣ ಪರ್ಯಾಯ ವ್ಯವಸ್ಥೆಯಾಗಿ ಅಮೆರಿಕದ ಸರಕು ನೌಕೆಯನ್ನು ಜೂನ್‌ 19ಕ್ಕೆ ಕಳುಹಿಸಲು ಯೋಜಿಸಲಾಗಿದೆ. ನೌಕೆ ವಿಫಲವಾಗಿದ್ದರಿಂದ ಗಗನಯಾತ್ರಿಗಳಿಗೆ ಸಾಮಗ್ರಿ ಕೊರತೆ ಇಲ್ಲ. ಅಲ್ಲಿ ಸಾಕಷ್ಟು ಪ್ರಮಾಣದ ಸಂಗ್ರಹ ಇದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT