ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಮುಖ್ಯಮಂತ್ರಿಗಳ ಸಭೆ

ಮೂರು ರಾಜ್ಯಗಳ ಬರ ಪರಿಸ್ಥಿತಿ ಅರಿಯಲು ಮುಂದಾದ ಪ್ರಧಾನಿ
Last Updated 5 ಮೇ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಕರ್ನಾಟಕ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶವೂ ಒಳಗೊಂಡಂತೆ ಭೀಕರ ಬರಗಾಲಕ್ಕೆ ತುತ್ತಾಗಿರುವ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ.

ಪ್ರಧಾನಿ ಅವರ ಆಹ್ವಾನದ ಮೇಲೆ ಶನಿವಾರ ದೆಹಲಿಗೆ ಬರಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಬರಗಾಲ ಪರಿಸ್ಥಿತಿ ಕುರಿತು ಮನವರಿಕೆ ಮಾಡಿಕೊಡಲಿದ್ದಾರೆ.

ಮೂರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಪ್ರತ್ಯೇಕವಾಗಿ ಭೇಟಿಯಾಗುವ ಮೋದಿ ಕೃಷಿ– ಕುಡಿಯುವ ನೀರಿನ ಸ್ಥಿತಿಗತಿ, ಮೇವಿನ ಅಭಾವ ಕುರಿತು ಸಮಗ್ರ ಮಾಹಿತಿ ಪಡೆಯಲಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

ಕೇಂದ್ರ ಕೃಷಿ, ಗ್ರಾಮೀಣ ಅಭಿವೃದ್ಧಿ ಮತ್ತಿತರ ಸಚಿವರು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ವಿವಿಧ ಇಲಾಖೆ ಅಧಿಕಾರಿಗಳು ಧಾವಿಸಲಿದ್ದಾರೆ. ಸಂಪೂರ್ಣ ಮಾಹಿತಿಯೊಂದಿಗೆ ದೆಹಲಿಗೆ ಬರುವಂತೆ ರಾಜ್ಯಗಳಿಗೆ ತಿಳಿಸಲಾಗಿದೆ.

ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು, ಮುಖ್ಯಮಂತ್ರಿಗಳು ಇತ್ತೀಚೆಗೆ ಬರಗಾಲ ಪರಿಸ್ಥಿತಿ ವೀಕ್ಷಣೆಗೆ ವಿವಿಧ ಜಿಲ್ಲೆಗಳಿಗೆ ತೆರಳಿದ್ದ ಸಮಯದಲ್ಲಿ ಪ್ರತಿಭಟನೆಗಳೂ ನಡೆದಿವೆ.

ಹಿಂಗಾರು ಮಳೆ ಅಭಾವದಿಂದ ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ₹ 6733 ಕೋಟಿ ಮೊತ್ತದ ಬೆಳೆ ಹಾನಿಯಾಗಿದೆ. ಬರಗಾಲ ಪರಿಹಾರ ನಿಧಿಯಿಂದ ತಕ್ಷಣ ₹ 1417 ಕೋಟಿ ಬಿಡುಗಡೆ ಮಾಡುವಂತೆ ಆಗ್ರಹಿಸಿ ರಾಜ್ಯ ಸರ್ಕಾರ ಇತ್ತೀಚೆಗೆ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಆದರೆ, ಬಿಡುಗಡೆ ಆದ ಹಣ ಕೇವಲ ₹ 723 ಕೋಟಿ. ಇದರಿಂದ ರಾಜ್ಯ ಸರ್ಕಾರ ಅಸಮಾಧಾನಗೊಂಡಿದೆ.

ಉತ್ತರ ಕರ್ನಾಟಕದ 62 ತಾಲ್ಲೂಕುಗಳ 22.38 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಬೆಳೆ ಹಾಳಾಗಿದೆ ಎಂದು ಕರ್ನಾಟಕ ಮನವಿ ಸಲ್ಲಿಸಿದ್ದರಿಂದ ಕೃಷಿ ಸಚಿವಾಲಯದ ಹಿರಿಯ ಅಧಿಕಾರಿ ದಿನೇಶ್‌ ಕುಮಾರ್‌ ನೇತೃತ್ವದ ಕೇಂದ್ರ ತಂಡ ರಾಜ್ಯಕ್ಕೆ ಭೇಟಿ ಕೊಟ್ಟು ಬರಗಾಲ ಸ್ಥಿತಿ ವೀಕ್ಷಿಸಿ ವರದಿ ಸಲ್ಲಿಸಿತ್ತು. ವರದಿ ಆಧಾರದಲ್ಲಿ ಈ ಹಣ ಬಿಡುಗಡೆ ಮಾಡಲಾಗಿದೆ.

ಇದಕ್ಕೂ ಮುನ್ನ ಮುಂಗಾರು ಮಳೆ ವೈಫಲ್ಯದಿಂದಲೂ 27 ಜಿಲ್ಲೆಗಳಲ್ಲಿ ಬರಗಾಲ ಕಾಣಿಸಿಕೊಂಡಿತ್ತು. ಆಗ ರಾಜ್ಯ ₹ 3840 ಕೋಟಿ ನೆರವು ಕೇಳಿತ್ತು. ಆದರೆ ಸಿಕ್ಕಿದ್ದು ಮಾತ್ರ  ₹ 1540 ಕೋಟಿ ಎಂದು ಆಗಲೂ ರಾಜ್ಯ ಅಸಹನೆ ಹೊರಹಾಕಿತ್ತು. ಕೇಂದ್ರ ಸರ್ಕಾರ ಮುಂಗಾರು ಹಂಗಾಮಿನ ಸಂಬಂಧ ಬಿಡುಗಡೆ ಮಾಡಿರುವ ಹಣದಲ್ಲಿ ಇನ್ನೂ ಸುಮಾರು ₹ 300 ಕೋಟಿ ವಿತರಣೆ ಆಗಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರು ದೂರಿದ್ದಾರೆ.

ಕಳಸಾ– ಬಂಡೂರಿ ಬಗ್ಗೆಯೂ ಚರ್ಚೆ(ಚಿಕ್ಕಬಳ್ಳಾಪುರ ವರದಿ): ‘ರಾಜ್ಯದೆಲ್ಲೆಡೆ ತೀವ್ರ ಸ್ವರೂಪದ ಬರಗಾಲವಿದ್ದು, ಒಂದೊಂದು ಜಿಲ್ಲೆಯಲ್ಲಿ ಒಂದೊಂದು ರೀತಿಯ ಸಮಸ್ಯೆಯಿದೆ.

ಪ್ರಧಾನಿ ಮೋದಿ ಅವರನ್ನು ಶನಿವಾರ ಭೇಟಿ ಮಾಡಿ ರಾಜ್ಯದ ಬರ ಪರಿಸ್ಥಿತಿ ಮತ್ತು ಇನ್ನಿತರ ಸಮಸ್ಯೆಗಳ ಕುರಿತು ಚರ್ಚಿಸುತ್ತೇನೆ. ಹೆಚ್ಚಿನ ಅನುದಾನ ಮತ್ತು ನೆರವು ನೀಡುವಂತೆ ಕೋರುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬರಗಾಲ, ನೀರಿನ ಸಮಸ್ಯೆ ಜತೆ ಕಳಸಾ–ಬಂಡೂರಿ ಯೋಜನೆ ಬಗ್ಗೆಯೂ ಪ್ರಸ್ತಾಪಿಸುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT