ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವೂ ಹಿಂದುಳಿದವರೇ...!

ರವೀಂದ್ರ ಕೊಟಕಿ
Last Updated 7 ಅಕ್ಟೋಬರ್ 2015, 19:54 IST
ಅಕ್ಷರ ಗಾತ್ರ

ಸ್ವಾತಂತ್ರ್ಯಾ ನಂತರದ ದಿನಗಳು...

ಶೂದ್ರಾದಿ ಶೂದ್ರ ಸಮುದಾಯಗಳು ಕೂಡ ತಮ್ಮನ್ನು ತಾವು ಮೇಲ್ವರ್ಗವಾಗಿ ಗುರುತಿಸಿಕೊಳ್ಳಲು ಹವಣಿಸುತ್ತಿದ್ದವು. ಆ ದಿನಗಳಲ್ಲಿ ಮೇಲ್ವರ್ಗವಾಗುವುದು ಹೆಚ್ಚುಗಾರಿಕೆ ಕೂಡ ಆಗಿತ್ತು. ಅದೇ ಆರು ದಶಕಗಳ ನಂತರ ತದ್ವಿರುದ್ಧ. ಎಲ್ಲ ವರ್ಗಗಳಿಗೂ ಈಗ ತುರ್ತಾಗಿ ‘ಹಿಂದುಳಿದ’ ಹಣೆಪಟ್ಟಿ ಬೇಕಾಗಿದೆ. ಅದರಲ್ಲೂ ಬಲಾಢ್ಯ ಭೂಮಾಲೀಕ ವರ್ಗಗಳಾದ ಗುಜರಾತಿನ ಪಟೇಲರು, ಉತ್ತರ ಭಾರತದ ಜಾಟರು, ರಾಜಸ್ತಾನದ ಗುಜ್ಜರರು, ಮಹಾರಾಷ್ಟ್ರದ ಮರಾಠರು ಹೀಗೆ ಎಲ್ಲರೂ ಹಿಂದುಳಿದ ವರ್ಗದವರಾಗಿ ಪರಿವರ್ತಿತರಾಗಲು ಹೋರಾಟದ ಹಾದಿ ಹಿಡಿದಿದ್ದಾರೆ. ರಾಜಕೀಯ ಒತ್ತಡಗಳಿಂದ ಈಗಾಗಲೇ ಈ ಸಮುದಾಯಗಳಲ್ಲಿ ಹಲವು ಹಿಂದುಳಿದಿದ್ದೂ ಆಗಿದೆ.

ಈಗ ಮುಂದುವರಿದ ವರ್ಗಗಳನ್ನು ಭೂತಗನ್ನಡಿ ಹಿಡಿದು ಹುಡುಕುವಂಥ ಸ್ಥಿತಿ ನಿರ್ಮಾಣವಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಬ್ರಾಹ್ಮಣರು, ಬನಿಯಾಗಳು (ಆರ್ಯವೈಶ್ಯರು) ಹೊರತುಪಡಿಸಿ ಬಹುತೇಕ ಎಲ್ಲರೂ ಒಂದಲ್ಲ ಒಂದು ರೀತಿ ಹಿಂದುಳಿದ ವರ್ಗದ ವ್ಯಾಪ್ತಿಗೆ ಸೇರಿದ್ದಾರೆ. ‘ಮಂಡಲ್’ ರಾಜಕೀಯವು ರಾಷ್ಟ್ರ ರಾಜಕೀಯವನ್ನು ಬದಲಾಯಿಸಿತು. ಲಾಲೂ ಪ್ರಸಾದ್, ನಿತೀಶ್ ಕುಮಾರ್, ಶರದ್ ಯಾದವ್, ಮುಲಾಯಂ ಸಿಂಗ್ ಯಾದವ್‌ರಂಥ ಹಲವು ಮುಖಗಳು ರಾಷ್ಟ್ರ ಮಟ್ಟದಲ್ಲಿ ಪ್ರವರ್ಧಮಾನಕ್ಕೆ ಬಂದವು. ಇದಕ್ಕೆ ಮೊದಲು ಅಧಿಕಾರ ಸ್ತರದಲ್ಲಿ ಎರಡು ವರ್ಗಗಳು ಕಾಣುತ್ತಿದ್ದವು.

ಒಂದು ದಲಿತ ವರ್ಗ (ಮೀಸಲಾತಿ ಕಾರಣದಿಂದ ಕೆಲವು ಸ್ಥಾನಗಳು ಅವರಿಗೆ ಸಿಗುತ್ತಿದ್ದವು) ಇನ್ನೊಂದು ಮೇಲ್ವರ್ಗ. ಮೇಲ್ವರ್ಗದವರ ಕೈಯಲ್ಲಿ ಬಹುತೇಕ ಆಡಳಿತ ಬೀಗದ ಕೈ ಇರುತ್ತಿತ್ತು. ಆದರೆ ಮಂಡಲ್ ಹೋರಾಟದ ನಂತರ ದೇಶದ ಬಹುಸಂಖ್ಯಾತ ವರ್ಗವಾದ ಹಿಂದುಳಿದ ವರ್ಗಗಳಲ್ಲಿ ರಾಜಕೀಯ ಸಂಚಲನ ಮೂಡಿತು. ನೇರಾನೇರವಾಗಿ ಆಡಳಿತವನ್ನು ಈ ವರ್ಗಗಳು ಪಡೆಯಲು ಯಶಸ್ವಿಯಾದವು. ಇದರ ಪರಿಣಾಮ ರಾಜಕೀಯದ ಜೊತೆಯಾಗಿ ಆರ್ಥಿಕ, ಶೈಕ್ಷಣಿಕ ಪ್ರಗತಿ ರಥ ಚಕ್ರದಲ್ಲಿ ಇವರ ಪಾಲುದಾರಿಕೆ ಬಲಗೊಂಡಿತು. ಬಹುತೇಕ ದಲಿತ ವರ್ಗಕ್ಕೆ ಸಿಗುವಷ್ಟೇ ಸೌಲಭ್ಯಗಳು ಅತಿ ಹಿಂದುಳಿದ ವರ್ಗಗಳಿಗೂ ಈಗ ಸಿಗುತ್ತಿವೆ. 

ಇಂದು ಹಿಂದುಳಿದ ವರ್ಗಗಳನ್ನು ಓಲೈಸುವುದು ಕೂಡ ರಾಜಕೀಯ ಅನಿವಾರ್ಯವಾಗಿ ಬದಲಾಗಿದೆ. ಅದಕ್ಕೇ ಅಂಬೇಡ್ಕರ್, ಬಸವಣ್ಣ ಜಯಂತಿಗಳನ್ನು ಆಚರಿಸುತ್ತಿದ್ದ ರಾಜ್ಯ ಸರ್ಕಾರ ಈಗ ಅದರ ಮುಂದುವರಿದ ಭಾಗವಾಗಿ ಕನಕದಾಸರು, ವಾಲ್ಮೀಕಿ ಜಯಂತಿಗಳನ್ನೂ ಸರ್ಕಾರಿ ರಜೆಯೊಂದಿಗೆ ಆಚರಿಸುತ್ತಿದೆ. ತಮ್ಮ ಸಮುದಾಯದ ಮಹಾಪುರುಷರ ಹೆಸರಿನಲ್ಲಿ ನಡೆಯುವ ಜಯಂತಿಗೆ ರಜೆ ಪಡೆಯುವುದನ್ನು ಕೂಡ ತಮ್ಮ ರಾಜಕೀಯ ಶಕ್ತಿಯ ಅನಾವರಣವಾಗಿ ಇತ್ತೀಚೆಗೆ ಕೆಲವರು ಭಾವಿಸಿದ್ದು ಇದೆ. ಹೀಗಾಗಿಯೇ ವಿಶ್ವಕರ್ಮ ಜಯಂತಿ, ಕೆಂಪೇಗೌಡ ಜಯಂತಿಗೆ ಸರ್ಕಾರಿ ರಜೆ ನೀಡಬೇಕೆಂದು ಆ ಮಹಾಪುರುಷರ ಜಯಂತಿಯ ಪ್ರತಿ ಸಂದರ್ಭದಲ್ಲೂ ಸಮಾಜದ ಮುಖಂಡರು ಒತ್ತಾಯಿಸುತ್ತಿರುತ್ತಾರೆ.

ಈಗಂತೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಜಯಂತಿಗಳನ್ನು ನಿರ್ವಹಿಸುವುದೇ ದೊಡ್ಡ ಕೆಲಸವಾಗಿದೆ. ಯಾವ ಮಹಾಪುರುಷರನ್ನೂ ಕಡೆಗಣಿಸುವಂತಿಲ್ಲ. ಪ್ರತಿಯೊಬ್ಬರ ಹಿಂದೆಯೂ ಒಂದೊಂದು ಜಾತಿಯಿದೆ, ವೋಟ್‌ಬ್ಯಾಂಕ್‌ ಇದೆ. ಹೀಗಾಗಿ ಮಹಾಪುರುಷರ ವಿಚಾರಧಾರೆಯನ್ನು ಬಲಪಡಿಸುವುದಕ್ಕಿಂತ ಅವರ ಹೆಸರುಗಳನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿರುವುದೇ ಈ ದಿನದ ಹೆಚ್ಚುಗಾರಿಕೆ.

ಹಿಂದುಳಿದ ವರ್ಗಗಳು ಪಡೆಯುತ್ತಿರುವ ಸರ್ಕಾರಿ ಸೌಲಭ್ಯಗಳು ಇತರ ವರ್ಗಗಳ ಕಣ್ಣು ಕುಕ್ಕುತ್ತಿವೆ. ಅದಕ್ಕೇ ಹೀಗೆ ತಾವು ಕೂಡ ಅವನ್ನು ಪಡೆಯಬೇಕಾದರೆ ಮೇಲ್ವರ್ಗದ ಅಹಂ ಅನ್ನು ಬಿಟ್ಟು ಹಿಂದುಳಿದ ವರ್ಗಕ್ಕೆ ಹಿಂಬಡ್ತಿ ಪಡೆಯಲು ಪೈಪೋಟಿ ಆರಂಭವಾಗಿದೆ. ಕೇರಳದಲ್ಲಿ ನಂಬೂದಿರಿ ಬ್ರಾಹ್ಮಣರು ಅಲ್ಪಸಂಖ್ಯಾತ ಸ್ಥಾನಕ್ಕೆ ಬೇಡಿಕೆ ಇಟ್ಟರೆ, ಗುಜರಾತ್, ರಾಜಸ್ತಾನದಲ್ಲಿ ಬ್ರಾಹ್ಮಣರು ಮೀಸಲಾತಿಗಾಗಿ ಹೋರಾಟದ ಹಾದಿ ತುಳಿದಿದ್ದಾರೆ. ಆಂಧ್ರ ಪ್ರದೇಶ ಸರ್ಕಾರ ಬ್ರಾಹ್ಮಣರಿಗೆ ‘ಬ್ರಾಹ್ಮಣ ಅಭಿವೃದ್ಧಿ ನಿಗಮ’ವನ್ನು ಸ್ಥಾಪಿಸಿ ಬ್ರಾಹ್ಮಣರಲ್ಲಿನ ಬಡವರ ಕಲ್ಯಾಣಕ್ಕೆ ಮುಂದಾಗಿದೆ.

ಬದಲಾದ ಕಾಲಘಟ್ಟದಲ್ಲಿ ಎಲ್ಲ ಸಮುದಾಯಗಳು ಮೀಸಲಾತಿಗಾಗಿ ಹೋರಾಟದ ಹಾದಿ ತುಳಿಯುತ್ತಿವೆ. ಎಲ್ಲ ಸಮುದಾಯಗಳಲ್ಲಿನ ಬಡತನ, ಆರ್ಥಿಕ ಅಸಹಾಯಕತೆ ಪ್ರತಿ ಜಾತಿ, ಪಂಗಡವನ್ನೂ ಸರ್ಕಾರಗಳ ಮುಂದೆ ‘ಭಿಕ್ಷಾಂ ದೇಹಿ’ ಎನ್ನುವಂತೆ ಮಾಡಿದೆ. ಉದಾರೀಕರಣ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಒಂದು ವರ್ಗವನ್ನು ಸೃಷ್ಟಿಸಿದೆ. ಆದರೆ ಒಬ್ಬ ಸರ್ಕಾರಿ ಜವಾನನಿಗಿರುವಂತಹ ಉದ್ಯೋಗ ಭದ್ರತೆಯನ್ನು ಮಾತ್ರ ನೀಡಲು ಅದು ವಿಫಲವಾಗಿದೆ. ಉದಾರೀಕರಣ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸಿದೆ. ಆದರೆ ಬಡ, ಮಧ್ಯಮ ವರ್ಗದ ಬದುಕು ಮಾತ್ರ ದುಸ್ತರವಾಗಿದೆ.

ನಮ್ಮನ್ನು ಆಳುವವರೆಲ್ಲ ‘ನಾನು ರೈತನ ಮಗ... ರೈತನ ಮಗ...’ ಎಂದು  ಹೇಳಿಕೊಳ್ಳುತ್ತಿದ್ದಾರೆ. ಆದರೆ ಯಾರೂ ‘ನಾನು ರೈತ...’ ಎಂದು ಹೇಳಿಕೊಂಡಿದ್ದೇ ಇಲ್ಲ. ಅದಕ್ಕೇ ರೈತರ ಸಮಸ್ಯೆಗಳನ್ನು ಕೇಳುವವರಿಲ್ಲವಾಗಿದೆ. ಬಡತನಕ್ಕೆ ‘ಜಾತಿ’ ಎಂಬುದಿಲ್ಲ.

ರಾಜಕೀಯ ಹೊರತಾದ, ಆದರೆ ಆರ್ಥಿಕ ಮೀಸಲಾತಿ (ಸಹಾಯ) ಎಲ್ಲ ಜಾತಿಯ ಬಡವರಿಗೂ ತುರ್ತಾಗಿ ಬೇಕಾಗಿದೆ. ಕೇಂದ್ರದ ‘ಡಿಜಿಟಲ್ ಇಂಡಿಯಾ’ ಆಗಲಿ ಇಲ್ಲವೇ ರಾಜ್ಯ ಸರ್ಕಾರದ ‘ಭಾಗ್ಯ’ಗಳಿಂದಾಗಲಿ ಸಮಾಜದಲ್ಲಿ ಬದಲಾವಣೆ ಸಾಧ್ಯವಿಲ್ಲ. ಬದಲಾವಣೆಯೆಂದರೆ ಸಮಾಜದ ಕಟ್ಟ ಕಡೆಯ ಕಡು ಬಡವನಲ್ಲೂ ಭರವಸೆ ಮೂಡಿಸುವುದು. ಇದರ ಕಡೆ ಸಮಾಜ, ಸರ್ಕಾರ
ಚಿಂತಿಸುವುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT