ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಕ್ಷೇಪ್‌ ನಿರಾಸೆಯ ನಡುವೆ ಹೊಸ ಭರವಸೆ...

Last Updated 24 ಏಪ್ರಿಲ್ 2016, 19:34 IST
ಅಕ್ಷರ ಗಾತ್ರ

ಟೆನಿಸ್‌ನಲ್ಲಿ ಭಾರತದ ಕ್ರೀಡಾಪಟುಗಳಿಂದ ಡಬಲ್ಸ್‌ನಲ್ಲಿ ಮೂಡಿಬಂದಷ್ಟು ಸಾಧನೆ ಸಿಂಗಲ್ಸ್‌ನಿಂದ ಬಂದಿಲ್ಲ ನಿಜ. ಆದರೆ, ಇತ್ತೀಚಿನ ಕೆಲ ಯುವ ಆಟಗಾರರು ಜೂನಿಯರ್ ಮಟ್ಟದ ಸಿಂಗಲ್ಸ್‌ನಲ್ಲಿ ಭರವಸೆ ಮೂಡಿಸಿದ್ದಾರೆ. ಅವರಲ್ಲಿ ಕರ್ನಾಟಕದ ನಿಕ್ಷೇಪ್‌ ಕೂಡ ಒಬ್ಬರು. ಅವರನ್ನು ಪ್ರಮೋದ್ ಜಿ.ಕೆ. ಸಂದರ್ಶಿಸಿದ್ದಾರೆ

ಭಾರತದ ಟೆನಿಸ್ ವಿಷಯದ ಬಗ್ಗೆ ಮಾತು ಬಂದಾಗಲೆಲ್ಲಾ ಮೊದಲು ನೆನಪಾಗುವುದೇ ಡಬಲ್ಸ್ ವಿಭಾಗ. ಲಿಯಾಂಡರ್‌ ಪೇಸ್‌, ರೋಹನ್ ಬೋಪಣ್ಣ, ವಿಶ್ವ ರ್‍ಯಾಂಕ್‌ನಲ್ಲಿ ಅಗ್ರಸ್ಥಾನ ಹೊಂದಿರುವ ಸಾನಿಯಾ ಮಿರ್ಜಾ ಹೆಸರುಗಳು ಮುಂಚೂಣಿಯಲ್ಲಿ ನಿಲ್ಲುತ್ತವೆ. ಇವರೆಲ್ಲರೂ ಡಬಲ್ಸ್‌ನಲ್ಲಿ ಗಮನಾರ್ಹ ಸಾಮರ್ಥ್ಯ ತೋರಿದ್ದಾರೆ.

ಇವರು ಮಾಡಿರುವ ಸಾಧನೆಯನ್ನು ಭಾರತದ ಸಿಂಗಲ್ಸ್‌ ಆಟಗಾರರಿಂದ ಏಕೆ ಸಾಧ್ಯವಾಗುತ್ತಿಲ್ಲ? ಸೋಮದೇವ್‌ ದೇವವರ್ಮನ್ ಅವರ ಅನುಭವ ಹೆಚ್ಚುತ್ತಾ ಹೋದಂತೆಲ್ಲಾ ನೀರಸ ಪ್ರದರ್ಶನ ಮುಂದುವರಿಯುತ್ತಲೇ ಸಾಗಿದೆ. ಹಿಂದಿನ ಎರಡು ಮೂರು ವರ್ಷಗಳ ಅವಧಿಯಲ್ಲಿ ಆಡಿದ ಬಹುತೇಕ ಟೂರ್ನಿಗಳಲ್ಲಿ ಮೊದಲ ಮತ್ತು ಎರಡನೇ ಸುತ್ತಿನಲ್ಲಿಯೇ ಅವರು ಸೋಲು ಕಂಡಿದ್ದಾರೆ.

ಹೀಗೆಯೇ ಮುಂದುವರಿದರೆ ಭಾರತದ ಸ್ಪರ್ಧಿಗಳು ಸಿಂಗಲ್ಸ್‌ನಲ್ಲಿ ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲುವುದು ಯಾವಾಗ? ಪ್ರತಿಷ್ಠಿತ ಆಸ್ಟ್ರೇಲಿಯಾ, ಫ್ರೆಂಚ್‌, ಅಮೆರಿಕ ಮತ್ತು ವಿಂಬಲ್ಡನ್‌ ನೆಲದಲ್ಲಿ ಚಾಂಪಿಯನ್ ಎನಿಸಿಕೊಳ್ಳುವುದು ಸಾಧ್ಯವಿಲ್ಲವೇ?

ಭಾರತದಲ್ಲಿ ಸಿಂಗಲ್ಸ್‌ ಬೆಳವಣಿಗೆ ತೀರಾ ಕುಂಠಿತವಾಗಿದೆ. ಪ್ರತಿ ಗ್ರ್ಯಾಂಡ್‌ ಸ್ಲಾಮ್ ಟೂರ್ನಿಯಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಚ್‌, ಬ್ರಿಟನ್‌ನ ಆ್ಯಂಡಿ ಮರ್ರೆ, ಅಮೆರಿಕದ ಸೆರೆನಾ ವಿಲಿಯಮ್ಸ್‌, ರಷ್ಯಾದ ಮರಿಯಾ ಶರಪೋವಾ ಅವರ ಯಶಸ್ಸಿನಲ್ಲಿ ಖುಷಿ ಪಡಬೇಕಾದ ಅನಿವಾರ್ಯತೆ ನಮಗೆ ಒದಗಿಬಂದಿದೆ. ಸಿಂಗಲ್ಸ್‌ನಲ್ಲಿ ಭಾರತ ವಿಶ್ವ ಮಟ್ಟದಲ್ಲಿ ಬೆಳೆಯಬೇಕಿದೆ.

ಈ ಎಲ್ಲಾ ನಿರಾಸೆ, ಬೇಸರಗಳ ನಡುವೆಯೂ ಇತ್ತೀಚಿನ ವರ್ಷಗಳಲ್ಲಿ ಕೆಲ ಯುವ ಆಟಗಾರರು ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಗಮನಾರ್ಹ ಸಾಧನೆ ತೋರುತ್ತಿದ್ದಾರೆ. ಅದರಲ್ಲಿ ಕರ್ನಾಟಕದ ಬಿ.ಆರ್‌. ನಿಕ್ಷೇಪ್‌ ಕೂಡ ಒಬ್ಬರು. ರಾಮಕುಮಾರ್‌ ರಾಮನಾಥನ್, ವಿಷ್ಣುವರ್ಧನ್‌, ಯೂಕಿ ಭಾಂಬ್ರಿ ಅವರ ಹೆಸರುಗಳೂ ಈ ಸಾಲಿನಲ್ಲಿ ನಿಲ್ಲುತ್ತವೆ.

ಬೆಂಗಳೂರಿನ ಸುರಾನ ಕಾಲೇಜಿನಲ್ಲಿ ಓದುತ್ತಿರುವ ನಿಕ್ಷೇಪ್‌ 16ನೇ ವಯಸ್ಸಿನಲ್ಲಿ ಜೂನಿಯರ್ ಡೇವಿಸ್‌ ಕಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. ರಾಷ್ಟ್ರಮಟ್ಟದ ಸಿಂಗಲ್ಸ್‌ ವಿಭಾಗದಲ್ಲಿ ನಾಲ್ಕು, ಡಬಲ್ಸ್‌ನಲ್ಲಿ ಮೂರು ಸಲ ಪ್ರಶಸ್ತಿ ಜಯಿಸಿದ್ದಾರೆ. ರಾಜ್ಯ ಮಟ್ಟದ ಟೂರ್ನಿಗಳಲ್ಲಿ ಗೆದ್ದ ಟ್ರೋಫಿಗಳೂ ಸೇರಿದಂತೆ ಒಟ್ಟು 90 ಪ್ರಶಸ್ತಿಗಳು ಅವರ ಸಾಧನೆಗೆ, ಆಟದ ಛಲಕ್ಕೆ ಸಾಕ್ಷಿ.

ಇದೇ ವರ್ಷ ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲಾಮ್‌ ಟೂರ್ನಿಯ ಜೂನಿಯರ್‌ ವಿಭಾಗದಲ್ಲಿ ಆಡಿದ್ದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರದ ಸಾಧನೆ ಮಾಡುವ ಭರವಸೆ ಮೂಡಿಸಿದ್ದಾರೆ. 14 ಮತ್ತು 16 ವರ್ಷದ ಒಳಗಿನವರ ಎಐಟಿಎ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕೂಡ ಹೊಂದಿದ್ದರು. 18 ವರ್ಷದ ಒಳಗಿನವರ ವಿಭಾಗದಲ್ಲಿ ಅವರೇ ಮೊದಲ ಸ್ಥಾನದಲ್ಲಿದ್ದಾರೆ. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.

* ನಿಮ್ಮಲ್ಲಿ ಟೆನಿಸ್‌ ಬಗ್ಗೆ ಆಸಕ್ತಿ ಬೆಳೆದಿದ್ದು ಹೇಗೆ?
2004ರಲ್ಲಿ ಫ್ರೆಂಚ್‌ ಓಪನ್ ಟೂರ್ನಿಯನ್ನು ಟಿವಿಯಲ್ಲಿ ನೋಡುತ್ತಿದ್ದೆ. ಚಾನಲ್‌ ಬದಲಿಸುವಾಗ ಆಕಸ್ಮಿಕವಾಗಿ ಹಾಗೆ ಕಣ್ಣಿಗೆ ಬಿದ್ದ ಟೆನಿಸ್‌ ಇಷ್ಟವಾಯಿತು. ಪಂದ್ಯವನ್ನು ವೀಕ್ಷಿಸುತ್ತಿದ್ದಾಗ ನನಗೂ ಟೆನಿಸ್‌ನಲ್ಲಿ ಸಾಧನೆ ಮಾಡುವ ಆಸೆ ಮೂಡಿತು. ಈ ವಿಷಯವನ್ನು ಅಪ್ಪನ ಜತೆ ಹಂಚಿಕೊಂಡು ತರಬೇತಿ ಪಡೆಯಲು ಆರಂಭಿಸಿದೆ.

* ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಜೂನಿಯರ್ ವಿಭಾಗದಲ್ಲಿ ಹಲವು ಪ್ರಶಸ್ತಿಗಳನ್ನು ಜಯಿಸಿದ್ದೀರಿ. ಈಗ ನಿಮ್ಮ ಮುಂದಿರುವ ಸವಾಲುಗಳೇನು?
ಈ ವರ್ಷ ಪ್ರತಿಷ್ಠಿತ ಏಷ್ಯನ್ ಸರ್ಕಿಟ್‌ ಟೂರ್ನಿ ಇದೆ. ಇದು ಗ್ರ್ಯಾಂಡ್‌ ಸ್ಲಾಮ್‌ಗಿಂತಲು ಒಂದು ಗ್ರೇಡ್‌ ಮಾತ್ರ ಕಡಿಮೆಯಾದ ಟೂರ್ನಿ.  ಆ ಟೂರ್ನಿಯಲ್ಲಿ ಚೆನ್ನಾಗಿ ಆಡಿ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಗೆ ಮತ್ತೊಮ್ಮೆ ಅವಕಾಶ ಪಡೆಯುವುದೇ ಈಗಿನ ಸವಾಲು.

* ಈ ವರ್ಷದ ಜನವರಿಯಲ್ಲಿ ಆಸ್ಟ್ರೇಲಿಯಾ ಓಪನ್‌ ಟೂರ್ನಿಯ ಜೂನಿಯರ್‌ ವಿಭಾಗದಲ್ಲಿ ಆಡಿದ್ದೀರಲ್ಲಾ. ಆ ಅನುಭವದ ಬಗ್ಗೆ ಹೇಳಿ?
ಅನುಭವಿ ಆಟಗಾರರ ಜೊತೆ ಆಡಿದ್ದರಿಂದ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ನಾನಿನ್ನು ಯಾವ ಹಂತದ ಟೆನಿಸ್‌ ಆಡುತ್ತಿದ್ದೇನೆ ಎನ್ನುವುದು ಗೊತ್ತಾಯಿತು.  ಮುಂಬರುವ ವಿಂಬಲ್ಡನ್‌ ಮತ್ತು ಅಮೆರಿಕ ಓಪನ್‌ ಟೂರ್ನಿಗಳಿಗೆ ಹೇಗೆ ಸಜ್ಜಾಗಬೇಕು ಎಂಬುದು ಗೊತ್ತಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಶ್ರೇಷ್ಠ ಆಟಗಾರರಾದ ಕೀ ನಿಶಿಕೋರಿ ಮತ್ತು ವಿಲ್ಫರ್ಡ್‌ ಸೊಂಗಾ ಅವರ ಸೊಗಸಾದ ಆಟವನ್ನು ನೋಡಲು ಅವಕಾಶ ಲಭಿಸಿತು.

* ಅನುಭವಿ ಆಟಗಾರರ ಪಂದ್ಯದಿಂದ ಕಲಿತ ಪಾಠವೇನು?
ಸರ್ವ್‌ ಮಾಡುವಾಗ ಅವರು ತೋರಿಸುತ್ತಿದ್ದ ನಿಖರತೆ, ಚೆಂಡಿನ ಮೇಲೆ ಹೆಚ್ಚು ಹೊತ್ತು ಹೊಂದಿರುತ್ತಿದ್ದ ನಿಯಂತ್ರಣ ಕಂಡು ಅಚ್ಚರಿಯಾಯಿತು. ನನಗೂ ಅವರಂತೆ ಆಗಬೇಕೆನ್ನುವ ಆಸೆ ಮೂಡಿತು. ಜೊತೆಗೆ ನನ್ನ ಆಟದಲ್ಲಿಯೂ ಅನೇಕ ಬದಲಾವಣೆ ಅಗತ್ಯವಿದೆ ಎನಿಸಿತು.

* ಏನು ಬದಲಾವಣೆ ಆಗಬೇಕೆನ್ನಿಸುತ್ತದೆ?
ಸ್ಪೇನ್‌ನಲ್ಲಿ ತರಬೇತಿ ಪಡೆಯಬೇಕು. ಫಿಟ್‌ನೆಸ್‌ ಹೆಚ್ಚಿಸಿಕೊಳ್ಳಬೇಕು. ಉತ್ತಮ ಫಿಟ್‌ನೆಸ್‌ ಹೊಂದಿದ್ದರೆ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ಚೆಂಡಿನ ಮೇಲೆ ಹೆಚ್ಚು ಸಮಯ ನಿಯಂತ್ರಣ ಹೊಂದಿರಲು ನೆರವಾಗುತ್ತದೆ.

* ಭಾರತದ ಕ್ರೀಡಾಪಟುಗಳು ವಿದೇಶಿ ಕೋಚ್‌ಗಳೇ ಬೇಕು ಎನ್ನುತ್ತಾರಲ್ಲ ಏಕೆ?
ವಿದೇಶಿ ಕೋಚ್‌ಗಳಿಗೆ ಅನುಭವ ಮತ್ತು ಕೌಶಲಗಳು ಚೆನ್ನಾಗಿ ತಿಳಿದಿರುತ್ತವೆ. ಅಲ್ಲಿನ ಕೋಚ್‌ಗಳು ಬಹುತೇಕ ಆಟಗಾರರೇ ಆಗಿರುತ್ತಾರೆ. ಹಲವಾರು ಎಟಿಪಿ ಮತ್ತು ಡಬ್ಲ್ಯುಟಿಎ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದರೇ ತರಬೇತಿ ನೀಡುತ್ತಾರೆ. ಅವರಲ್ಲಿ ವೃತ್ತಿಪರತೆ ಇರುತ್ತದೆ. ಇದರಿಂದ ಬೇಗನೆ ಹೆಚ್ಚು ವಿಷಯಗಳನ್ನು ಕಲಿಯಬಹುದು.

* ಹತ್ತು ವರ್ಷಗಳಿಂದ ಟೆನಿಸ್ ಆಡುತ್ತಿದ್ದೀರಿ. ಭಾರತದಲ್ಲಿ ಸಿಂಗಲ್ಸ್ ವಿಭಾಗ ಹಿಂದುಳಿಯಲು ಕಾರಣ ಎನಿರಬಹುದು?
ಸಿಂಗಲ್ಸ್‌ನಲ್ಲಿ ಭಾರತದ ಆಟಗಾರರ ನಡುವೆಯೇ ಸಾಕಷ್ಟು ಪೈಪೋಟಿ ಇದೆ. ಆದರೆ ಹಂತಹಂತವಾಗಿ ಇದು ಕಡಿಯಾಗುತ್ತದೆ. 14 ಮತ್ತು 16 ವರ್ಷದ ಒಳಗಿನವರ ವಿಭಾಗದಲ್ಲಿ ಚೆನ್ನಾಗಿಯೇ ಆಡುತ್ತೇವೆ. ಸಾಕಷ್ಟು ಪ್ರಶಸ್ತಿಗಳನ್ನು ಗೆಲ್ಲುತ್ತೇವೆ. ಅಷ್ಟೇ ಏಕೆ. ಡೇವಿಸ್‌ ಕಪ್‌ನಲ್ಲಿ ವಿಶ್ವ ಗುಂಪಿಗೆ ಅರ್ಹತೆ ಪಡೆಯುತ್ತವೆ. ಆದರೆ ಬರುಬರುತ್ತಾ ಆಟದ ವೇಗ ಹೆಚ್ಚಾಗಬೇಕು. ಫಿಟ್‌ನೆಸ್‌ ಉಳಿಸಿಕೊಳ್ಳಬೇಕಾಗುತ್ತದೆ. ಗುಣಮಟ್ಟದ ಕೋಚ್‌ಗಳೂ ಬೇಕಾಗುತ್ತದೆ. ಆದ್ದರಿಂದ 18 ವರ್ಷದ ಒಳಗಿನವರ ಮತ್ತು ಸೀನಿಯರ್‌ ವಿಭಾಗದಲ್ಲಿ ಹಿಂದಿನಂತೆ ಸಾಧನೆ ಮಾಡಲು ಆಗುವುದಿಲ್ಲ. ನಮಗೆ ಅಗತ್ಯವಿರುವ ಬೆಂಬಲ ಸಿಗುವುದಿಲ್ಲ.

* ಅಖಿಲ ಭಾರತ ಟೆನಿಸ್‌ ಸಂಸ್ಥೆ ಪ್ರೋತ್ಸಾಹ ನೀಡುವುದಿಲ್ಲವೇ?
ಐಟಿಎಫ್‌ ವಿವಿಧ ಗ್ರೇಡ್‌ಗಳ ಟೂರ್ನಿ ಆಡಬೇಕಾದರೆ ನಾವೇ ಹಣ ಹೊಂದಿಸಿಕೊಂಡು ಹೋಗಬೇಕಾಗುತ್ತದೆ. ನನಗೆ ಸುರಾನ ಕಾಲೇಜು ಮತ್ತು ರಾಜ್ಯ ಕ್ರೀಡಾ ಇಲಾಖೆ ನೆರವು ನೀಡುತ್ತಿದೆ. ಆದರೆ, ದೊಡ್ಡ ಮಟ್ಟದ ಟೂರ್ನಿಗಳಿಗೆ ಸಜ್ಜಾಗಲು ಹೆಚ್ಚು ತರಬೇತಿ ಅಗತ್ಯವಿರುತ್ತದೆ. ಅದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಟೆನಿಸ್‌ ಸಂಸ್ಥೆಯಿಂದಲೂ ಹೆಚ್ಚು ನೆರವು ಸಿಗುವುದಿಲ್ಲ. ಆದ್ದರಿಂದ ಪ್ರತಿ ಟೂರ್ನಿಗೆ  ಪ್ರಾಯೋಜಕರನ್ನು ಹುಡುಕುವುದು ಅನಿವಾರ್ಯವಾಗಿದೆ.

* ಈ ವರ್ಷದಲ್ಲಿ ಇನ್ನು ಮೂರು ಗ್ರ್ಯಾಂಡ್‌ ಸ್ಲಾಮ್ ಟೂರ್ನಿಗಳಿವೆ.  ಆ ಟೂರ್ನಿಗಳಲ್ಲಿಯೂ ಆಡಲು ಅವಕಾಶ ಲಭಿಸಿದೆಯೇ?
ಟೂರ್ನಿ ಆರಂಭವಾಗಲು ಕೆಲ ದಿನಗಳು ಇದ್ದಾಗ ಆಡುವ ಬಗ್ಗೆ ಗೊತ್ತಾಗುತ್ತದೆ. ಜೂನಿಯರ್ ಮಟ್ಟದ ಗ್ರ್ಯಾಂಡ್ ಸ್ಲಾಮ್‌ ಟೂರ್ನಿಗಳಲ್ಲಿ ನೇರವಾಗಿ ಆಡಬೇಕಾದರೆ 18 ವರ್ಷದ ಒಳಗಿನವರ ರ್‍ಯಾಂಕಿಂಗ್‌ನಲ್ಲಿ 80ರ ಒಳಗೆ ಸ್ಥಾನ ಹೊಂದಿರಬೇಕು. 120ರಿಂದ 180ರ ಒಳಗೆ ಸ್ಥಾನ ಹೊಂದಿದ್ದರೆ ಅರ್ಹತಾ ಸುತ್ತಿನಲ್ಲಿ ಆಡಬೇಕಾ
ಗುತ್ತದೆ. ಈಗ 180ನೇ ಸ್ಥಾನದಲ್ಲಿದ್ದೇನೆ. ಮುಂಬರುವ ಬಿ–1 ಟೂರ್ನಿಯಲ್ಲಿ ಚೆನ್ನಾಗಿ ಆಡಿ ರ್‍ಯಾಂಕಿಂಗ್ ಸುಧಾರಿಸಿಕೊಂಡರೆ ಅವಕಾಶ ಲಭಿಸುತ್ತದೆ.

* ಕ್ರೀಡಾ ಬದುಕಿನಲ್ಲಿ ತುಂಬಾ ಖುಷಿಕೊಟ್ಟ ಕ್ಷಣ ಯಾವುದು?
ಹೋದ ವರ್ಷ ಚೀನಾದಲ್ಲಿ ನಡೆದ ಗ್ರೇಡ್‌–1 ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದು ತುಂಬಾ ಖುಷಿಕೊಟ್ಟಿದೆ. ಈ ಟೂರ್ನಿ ಗ್ರ್ಯಾಂಡ್‌ ಸ್ಲಾಮ್‌ಗಿಂತಲು ಎರಡು ಗ್ರೇಡ್‌ ಕಡಿಮೆಯಷ್ಟೇ. ಭಾರತದ ಮಟ್ಟಿಗೆ ಜೂನಿಯರ್‌ ವಿಭಾಗದಲ್ಲಿ ಪ್ರತಿಷ್ಠಿತ ಟೂರ್ನಿಯಾಗಿರುವ ಫೆನೆಸ್ತಾ ರಾಷ್ಟ್ರೀಯ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದು ಮರೆಯಲಾಗದ ಸಂದರ್ಭ.

* ಸಿಂಗಲ್ಸ್‌ ಮತ್ತು ಡಬಲ್ಸ್‌ ಎರಡೂ ವಿಭಾಗಗಳಲ್ಲಿ ಆಡುತ್ತಿರಲ್ಲಾ. ಯಾವ ವಿಭಾಗದಲ್ಲಿ ಸಾಧನೆ ಮಾಡುವ ಗುರಿ ನಿಮ್ಮದು?
ಹೆಚ್ಚು ಪಂದ್ಯಗಳನ್ನು ಆಡಿದಷ್ಟು ಅನುಭವವೂ ಹೆಚ್ಚುತ್ತದೆಯಲ್ಲವೆ. ಆದ್ದರಿಂದ ಡಬಲ್ಸ್‌ನಲ್ಲಿಯೂ ಆಡುತ್ತೇನೆ. ಆದರೆ ಸಿಂಗಲ್ಸ್‌ ವಿಭಾಗವೇ  ಮೊದಲ ಆಯ್ಕೆ.

* ಭಾರತದಲ್ಲಿ ನಿಮಗೆ ಪ್ರಬಲ ಸ್ಪರ್ಧಿ ಯಾರು?
18 ವರ್ಷದ ವಿಭಾಗದಲ್ಲಿ ದೆಹಲಿಯ ಅಲೆಕ್ಸ್ ಸೋಲಂಕಿ, ಆರ್ಯನ್‌, ವಶಿಷ್ಠ ಚೆರುಕು ಚೆನ್ನಾಗಿಯೇ ಆಡುತ್ತಿದ್ದಾರೆ. ಸೀನಿಯರ್‌ ವಿಭಾಗದಲ್ಲಿ ವಿಷ್ಣುವರ್ಧನ್‌, ಯೂಕಿ ಭಾಂಬ್ರಿ ಉತ್ತಮ ಸಾಮರ್ಥ್ಯ ತೋರುತ್ತಿದ್ದಾರೆ. ಜೂನಿಯರ್‌ನಲ್ಲಿ ಈ ವರ್ಷ ನನಗೆ ಕೊನೆಯ ಅವಕಾಶ. ಮುಂದಿನ ವರ್ಷದಿಂದ ಸೀನಿಯರ್‌ ವಿಭಾಗದಲ್ಲಿ ಆಡಬೇಕಾಗುತ್ತದೆ. ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟೂ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಬೇಕೆನ್ನುವ ಆಸೆಯಿದೆ. ಅದಕ್ಕೆ ಬೇಕಾದ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದೇನೆ. ಭಾರತ ತಂಡದ ಜೊತೆಗಿದ್ದಾಗ ದೆಹಲಿಯ ಸಿರಿಫೋರ್ಟ್‌ ಕ್ರೀಡಾ ಸಂಕೀರ್ಣದಲ್ಲಿ ಆದಿತ್ಯ ಸಚಿದೇವ್‌ ತರಬೇತಿ ನೀಡುತ್ತಾರೆ. ಅವರು ವೈಯಕ್ತಿಕವಾಗಿಯೂ ತರಬೇತಿ ಕೊಡುತ್ತಾರೆ.
‌‌
* ನಿಮ್ಮ ಈ ಸಾಧನೆಯಲ್ಲಿ ಕುಟುಂಬದವರ ಪಾತ್ರ ಏನು?
ಯಾವುದೇ ಟೂರ್ನಿಯಿರಲಿ ಪ್ರಶಸ್ತಿ ಗೆದ್ದಾಗ ಅದರಲ್ಲಿ ನನ್ನ ಆಟಕ್ಕಿಂತ ಕುಟುಂಬದವರ ಪಾತ್ರವೇ ಮುಖ್ಯವಾಗಿರುತ್ತದೆ. ಎಲ್ಲಿಯೇ ಹೋದರೂ ಅಪ್ಪ ರವಿಕುಮಾರ್‌ ಅಥವಾ ಅಮ್ಮ ಶೋಭಾ ಜೊತೆಗೆ ಬರುತ್ತಾರೆ. ಜೊತೆಗಿದ್ದು ಹುರಿದುಂಬಿಸುತ್ತಾರೆ. ಮನೆಯ ಪ್ರೋತ್ಸಾಹ ಸಿಗದೇ ಹೋಗಿದ್ದರೆ ಟೆನಿಸ್‌ ಆಡುವ ಆಸೆ ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT