ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜ ಅರ್ಥದ ಸ್ಥಳೀಯ ಸರ್ಕಾರಗಳತ್ತ

Last Updated 23 ನವೆಂಬರ್ 2014, 19:04 IST
ಅಕ್ಷರ ಗಾತ್ರ

ಪಂಚಾಯತ್ ವ್ಯವಸ್ಥೆ ವಿಚಾರದಲ್ಲಿ ಕರ್ನಾಟಕ ಯಾವತ್ತೂ ಮುಂಚೂಣಿ­ಯಲ್ಲಿತ್ತು. 1987ರಲ್ಲಿ ಕರ್ನಾಟಕದಲ್ಲಿ ಜಾರಿಗೆ ಬಂದ ಪಂಚಾಯತ್ ರಾಜ್ ವ್ಯವಸ್ಥೆ ದೇಶಕ್ಕೆ ಮಾದರಿಯಾಗಿತ್ತು. ಈಗ ಇಡೀ ದೇಶದಲ್ಲೇ ಅತ್ಯುತ್ತಮ ಪಂಚಾಯತ್ ವ್ಯವಸ್ಥೆ ಹೊಂದಿರುವ ರಾಜ್ಯಗಳಲ್ಲಿ ಕೇರಳ ಮೊದಲ ಸ್ಥಾನ ಪಡೆದರೆ ಕರ್ನಾಟಕ ಮೂರನೇ ಸ್ಥಾನ ಪಡೆದಿದೆ. ಸಂವಿಧಾನ 73ನೇ ತಿದ್ದುಪಡಿ ಅಂಶಗಳನ್ನು ಅಳವಡಿಸಲು 1987ರ ಪಂಚಾಯತ್ ಕಾಯ್ದೆ ತಿದ್ದುಪಡಿಗೊಂಡು 1993ರ ಪಂಚಾಯತ್ ಕಾಯ್ದೆ ಜಾರಿಗೆ ಬಂದಿದೆ.

ಕಳೆದ ಇಪ್ಪತ್ತು ವರ್ಷಗಳಲ್ಲಿ ಈ ಕಾಯ್ದೆಯ ಅನೇಕ ಮಿತಿಗಳೇನು ಎಂಬುದು ಹೆಚ್ಚು ಕಡಿಮೆ ಸುಸ್ಪಷ್ಟ. ಈ ಕಾರಣದಿಂದಲೇ ಸರ್ಕಾರ ಕಾಯ್ದೆಯನ್ನು ಹೊಸ ಕಾಲಕ್ಕೆ ಅನುಗುಣವಾಗಿ ಮಾರ್ಪಡಿಸಲು ಹೊರಟಿದೆ. ಇದು ಕನಿಷ್ಠ ಸರ್ಕಾರ ಗರಿಷ್ಠ ಆಡಳಿತದ ಕಾಲ. ಇದರ ಅರ್ಥ ತುಂಬಾ ಸರಳ. ವಿವಿಧ ಭಾಷೆ, ಜಾತಿ, ಧರ್ಮಗಳಿರುವ ನಮ್ಮಂತಹ ದೇಶದಲ್ಲಿ ಜನರ ಬೇಕು ಬೇಡಗಳನ್ನು ಸರ್ಕಾರವೊಂದೇ ಅರ್ಥ ಮಾಡಿಕೊಂಡು ಪೂರೈಸುವುದು ಕಷ್ಟ. ಆದುದರಿಂದ ಸರ್ಕಾರದ ಕೆಲಸದಲ್ಲಿ ಮಂತ್ರಿ, ಅಧಿಕಾರಿಗಳ ಗಾತ್ರ ಮತ್ತು ಪಾತ್ರ ಕಡಿಮೆಗೊಂಡು ಇತರರ ಪಾತ್ರ ಹೆಚ್ಚಾಗಬೇಕೆನ್ನುವುದು ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ ಘೋಷಣೆಯ ಅರ್ಥ.

ಕನಿಷ್ಠ ಸರ್ಕಾರ ಗರಿಷ್ಠ ಆಡಳಿತದ ಎರಡು ಮೂರು ಮಾದರಿಗಳಿವೆ. ಒಂದು, ಉದ್ದಿಮೆಗಳು ಅಭಿವೃದ್ಧಿ ಆಡಳಿತದಲ್ಲಿ ಪಾಲ್ಗೊಳ್ಳುವುದು, ಎರಡು, ಸಿವಿಲ್ ಸೊಸೈಟಿಗಳು ಸದ್ಯದ ಅರ್ಥದಲ್ಲಿ ಸರ್ಕಾರೇತರ ಸಂಸ್ಥೆಗಳು ಆಡಳಿತದಲ್ಲಿ ಪಾಲ್ಗೊಳ್ಳುವುದು ಮತ್ತು ಮೂರು ಆಡಳಿತದ ವಿಕೇಂದ್ರೀಕರಣ. ಮೊದಲ ಮಾದರಿಯಲ್ಲಿ ಉದ್ದಿಮೆಗಳು ಪ್ರತ್ಯೇಕವಾಗಿ ಅಥವಾ ಸರ್ಕಾರದೊಂದಿಗೆ ಜಂಟಿಯಾಗಿ (ಸಾರ್ವಜನಿಕ ಖಾಸಗಿ ಪಾಲುಗೊಳ್ಳುವಿಕೆ)  ಅಭಿವೃದ್ಧಿ ಕೆಲಸಗಳಲ್ಲಿ ಕೈಜೋಡಿಸುವುದು ಸೇರಿದೆ. ಆದುದರಿಂದ ಒಂದು ಕಾಲದಲ್ಲಿ ಸಾಮಾಜಿಕ (ಶಿಕ್ಷಣ, ಆರೋಗ್ಯ, ವಸತಿ, ಕುಡಿಯುವ ನೀರು ಇತ್ಯಾದಿಗಳನ್ನು) ಹಾಗೂ ಆರ್ಥಿಕ (ಸಾರಿಗೆ ಸಂಪರ್ಕ, ಬಂದರು, ವಿಮಾನ ನಿಲ್ದಾಣ, ವಿಮೆ, ಬ್ಯಾಂಕ್ ಇತ್ಯಾದಿಗಳನ್ನು) ಮೂಲಸೌಕರ್ಯಗಳನ್ನು ಸೃಷ್ಟಿಸಿ ಪೂರೈಕೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿತ್ತು.

ಆದರೆ ಕನಿಷ್ಠ ಸರ್ಕಾರ ಗರಿಷ್ಠ ಆಡಳಿತದಲ್ಲಿ ಇವನ್ನು ಉತ್ಪಾದಿಸಿ ಪೂರೈಕೆ ಮಾಡುವುದು ಉದ್ದಿಮೆಗಳ ಜವಾಬ್ದಾರಿಯಾಗಿದೆ.
ಈ ಜವಾಬ್ದಾರಿಗಳನ್ನು ನಿಭಾಯಿಸುವ ಉದ್ದಿಮೆಗಳಿಗೆ ನೀರು, ಭೂಮಿ, ಹಣಕಾಸು, ಮಾನವ ಸಂಪನ್ಮೂಲ, ಪ್ರಾಕೃತಿಕ ಸಂಪನ್ಮೂಲಗಳನ್ನು ಪೂರೈಕೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈಗಿನ ಕೇಂದ್ರ ಸರ್ಕಾರದ ಕನಿಷ್ಠ ಸರ್ಕಾರ ಗರಿಷ್ಠ ಆಡಳಿತದ ಘೋಷಣೆಯಲ್ಲಿ ಮೊದಲನೇ ಮಾದರಿ (ಉದ್ದಿಮೆಗಳ ಪಾಲುಗೊಳ್ಳುವಿಕೆ) ಮಾತ್ರ ಹೆಚ್ಚು ಮನ್ನಣೆ ಪಡೆದಿದ್ದು ಎರಡನೇ ಮಾದರಿ (ಸಿವಿಲ್ ಸೊಸೈಟಿ ಪಾಲುಗೊಳ್ಳುವಿಕೆ) ಸ್ವಲ್ಪ ಕಡಿಮೆ ಮತ್ತು ಮೂರನೇ ಮಾದರಿ (ಆಡಳಿತದ ವಿಕೇಂದ್ರೀಕರಣ) ಏನೇನೂ ಮನ್ನಣೆ ಪಡೆದಿಲ್ಲ. 

ರಸ್ತೆ, ಆಸ್ಪತ್ರೆ, ಕಾಲೇಜು, ವಸತಿ, ಬ್ಯಾಂಕ್, ವಿಮೆ, ಸಂಪರ್ಕ ಇತ್ಯಾದಿಗಳನ್ನು ಉದ್ದಿಮೆಗಳು ಪೂರೈಸುತ್ತವೆ. ಈ ಮೂಲ ಸೌಕರ್ಯಗಳು ಅತ್ಯಂತ ಹೆಚ್ಚು ಅವಶ್ಯವಿರುವ ಗ್ರಾಮೀಣ ಪ್ರದೇಶಗಳಲ್ಲಿ ಈ ಸವಲತ್ತುಗಳನ್ನು ನಿರ್ಮಿಸಿ ಸೇವೆ ಒದಗಿಸಲು ಉದ್ದಿಮೆಗಳು ಮುಂದಾಗುತ್ತಿಲ್ಲ. ಹಳ್ಳಿಗಳಲ್ಲಿ ರಸ್ತೆ ಇಲ್ಲವೆಂದು ಪಿಪಿಪಿ ಮಾದರಿಯಲ್ಲಿ ಹಳ್ಳಿಯಲ್ಲಿ ರಸ್ತೆ ಮಾಡುವುದಿಲ್ಲ. ಆಸ್ಪತ್ರೆ ಇಲ್ಲವೆಂದು ಆರೋಗ್ಯೋದ್ಯಮಿಗಳು ಹಳ್ಳಿಗಳಲ್ಲಿ ಆಸ್ಪತ್ರೆ ಸ್ಥಾಪಿಸುವುದಿಲ್ಲ. ಶಾಲೆ ಇಲ್ಲವೆಂದು ಶಿಕ್ಷಣೋದ್ಯಮಿಗಳು ಹಳ್ಳಿಯಲ್ಲಿ ಶಾಲೆ ಆರಂಭಿಸುವುದಿಲ್ಲ.

ಹಾಗಾದರೆ ಗ್ರಾಮೀಣ ಜನರಿಗೆ ಸಾಮಾಜಿಕ, ಆರ್ಥಿಕ ಮೂಲಸೌಕರ್ಯಗಳನ್ನು ಪೂರೈಸುವವರು ಯಾರು? ದೇಶದಲ್ಲಿ ಶೇಕಡಾ ಎಪ್ಪತ್ತರಷ್ಟಿರುವ ಮತ್ತು ನಮ್ಮ ರಾಜ್ಯದಲ್ಲಿ ಶೇಕಡಾ ಅರವತ್ತೆರಡರಷ್ಟಿರುವ ಗ್ರಾಮೀಣ ಜನರ ಬೇಕುಬೇಡಗಳನ್ನು ಪೂರೈಸಲು ಸ್ಥಳೀಯ ಸರ್ಕಾರಗಳನ್ನು ಬಲಪಡಿಸುವುದು ಬಿಟ್ಟರೆ ಬೇರೆ ದಾರಿಯೇ ಇಲ್ಲ.   ಇದೇ ಉದ್ದೇಶದಿಂದಲೇ ಸಂವಿಧಾನದ (73,74ನೇ) ತಿದ್ದುಪಡಿ ನಡೆದಿದೆ. ಸ್ಥಳೀಯರ ಆದ್ಯತೆಗಳನ್ನು ಪೂರೈಸಲು ಸ್ಥಳೀಯ ಸರ್ಕಾರಗಳನ್ನು ರೂಪಿಸುವುದು ಸಂವಿಧಾನ ತಿದ್ದುಪಡಿಯ ಮುಖ್ಯ ಆಶಯ. 

ಸ್ಥಳೀಯ ಸರ್ಕಾರಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗ, ರಾಜ್ಯ ಹಣಕಾಸು ಸಮಿತಿ, ಜಿಲ್ಲಾ ಯೋಜನಾ ಸಮಿತಿಗಳ ರಚನೆ ಹಾಗೂ 29 ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಣಕಾಸು, ಸಿಬ್ಬಂದಿಗಳೊಂದಿಗೆ ಸ್ಥಳೀಯ ಸರ್ಕಾರಗಳಿಗೆ ವರ್ಗಾಯಿಸಲು ಸಂವಿಧಾನ ಆದೇಶಿಸಿದೆ. ಸಂವಿಧಾನದ ಆಶಯಗಳನ್ನು ಅಳವಡಿಸುವ ಉದ್ದೇಶದಿಂದ 1987ರ ಕರ್ನಾಟಕ ಜಿಲ್ಲಾ ಪರಿಷತ್, ತಾಲ್ಲೂಕು ಪಂಚಾಯಿತಿ ಸಮಿತಿ, ಮಂಡಲ ಪಂಚಾಯಿತಿ ಮತ್ತು ನ್ಯಾಯ ಪಂಚಾಯತ್‌ಗಳ ಕಾಯ್ದೆ ತಿದ್ದುಪಡಿಗೊಂಡು 1993ರ ಕರ್ನಾಟಕ ಪಂಚಾಯಿತಿ ರಾಜ್ ಕಾಯ್ದೆ ಜಾರಿಗೆ ಬಂದಿದೆ.

ತಾಂತ್ರಿಕವಾಗಿ ಈ ಕಾಯ್ದೆ ಸಂವಿಧಾನ ಸೂಚಿಸಿದ ಎಲ್ಲ ಬದಲಾವಣೆಗಳನ್ನು ಒಳಗೊಂಡಿದೆ. ಆದರೆ ಸಂವಿಧಾನ ತಿದ್ದುಪಡಿಯ ಮುಖ್ಯ ಆಶಯವನ್ನು - ಸ್ಥಳೀಯ ಸರ್ಕಾರವನ್ನು ರೂಪಿಸುವ ಆಶಯವನ್ನು - 1993ರ ಪಂಚಾಯತ್ ಕಾಯ್ದೆ ಒಳಗೊಂಡಿರಲಿಲ್ಲ. 1993ರ ಕಾಯ್ದೆಯ ಅನುಸಾರ ನಮ್ಮಲ್ಲೂ ರಾಜ್ಯ ಹಣಕಾಸು ಆಯೋಗ ರಚನೆಯಾಗಿದೆ. ಇದು ನೀಡುವ ಶೇಕಡಾವಾರು ಲೆಕ್ಕಾಚಾರ ನೋಡಿದರೆ ನಮ್ಮಲ್ಲೂ ಕೇರಳದಂತೆ ಸಾಕಷ್ಟು ಅನುದಾನ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹರಿದು ಬರುತ್ತಿದೆ ಎನ್ನುವ ಚಿತ್ರಣ ಇದೆ.  ಆದರೆ ಈ ಮೊತ್ತ ಯಾವುದೇ ಹಂಗಿಲ್ಲದೆ ನೇರ ಅನುದಾನ ರೂಪದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಬರುವುದಿಲ್ಲ.

ಒಂದಲ್ಲ ಒಂದು ಯೋಜನೆಯೊಂದಿಗೆ ತಳುಕು ಹಾಕಿಯೇ ಈ ಅನುದಾನವನ್ನು ನೀಡಲಾಗುತ್ತದೆ. ಆದ್ದರಿಂದ ಸ್ಥಳೀಯ ಪಂಚಾಯಿತಿಗಳು ತಮ್ಮ ಬೇಕು ಬೇಡಗಳಿಗನುಸಾರ ಈ ಅನುದಾನವನ್ನು ಬಳಸುವಂತಿಲ್ಲ. ಯಾವುದೇ ಯೋಜನೆಯ ಭಾಗವಲ್ಲದೇ ಸ್ಥಳೀಯ ಸಂಸ್ಥೆಗಳು ತಮ್ಮ ವಿವೇಚನಾನುಸಾರ ಬಳಸಲು ಸಾಧ್ಯವಾಗುವ ಮೊತ್ತ ಕೇವಲ ಹತ್ತು ಲಕ್ಷಗಳು ಮಾತ್ರ. 1993ರ ಕಾಯ್ದೆ ಜಾರಿಗೆ ಬರುವುದರೊಂದಿಗೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಯೋಜನಾ ಸಮಿತಿ ನೇಮಕವಾಯಿತು. ಆದರೆ ಯೋಜನಾ ಪ್ರಕ್ರಿಯೆ ಆರಂಭವಾಗಿದ್ದು 2003ರಲ್ಲಿ. ಆದರೆ ಅದು ಮೇಲಿನಿಂದ ಕೆಳಕ್ಕೆ ಇಳಿಯುವ ಯೋಜನಾ ಪ್ರಕ್ರಿಯೆ.

ಜಿಲ್ಲಾ ಯೋಜನಾ ಸಮಿತಿ ಸಿದ್ಧಪಡಿಸಿದ ಜಿಲ್ಲಾ ಅಭಿವೃದ್ಧಿ ಮುನ್ನೋಟ ತಾಲ್ಲೂಕು ಹಾಗೂ ಪಂಚಾಯತ್‌ವಾರು ವಿಂಗಡನೆಗೊಂಡು ಗ್ರಾಮಸಭೆಗಳಲ್ಲಿ ಜನರ ಮುಂದೆ ಬರುತ್ತಿತ್ತು. ಜನರ ಅಭಿಪ್ರಾಯದೊಂದಿಗೆ ಪುನಃ ಅದು ತಾಲ್ಲೂಕು ಪಂಚಾಯಿತಿಗೆ ಮತ್ತು ಅಲ್ಲಿಂದ ಜಿಲ್ಲಾ ಪಂಚಾಯಿತಿಗೆ ಹಿಂತಿರುಗುತ್ತಿತ್ತು. ಜನರ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ಯೋಜನಾ ಸಮಿತಿ ಜಿಲ್ಲಾ ಅಭಿವೃದ್ಧಿ ಮುನ್ನೋಟವನ್ನು ಪರಿಷ್ಕರಿಸುತ್ತಿತ್ತು. ಇದು ಜಾರಿಯಲ್ಲಿರುವ ಜನಾಯೋಜನೆಯ ಕ್ರಮ. ಈ ಯೋಜನಾ ಕ್ರಮದಲ್ಲಿ ಸ್ಥಳೀಯ ಜನರ ಆದ್ಯತೆಗಳನ್ನು ಪರಿಗಣಿಸುವುದಕ್ಕಿಂತ ಹೆಚ್ಚು ಮೇಲಿನವರ ಆದ್ಯತೆಗಳಿಗೆ ಜನರ ಒಪ್ಪಿಗೆ ಪಡೆಯುವ ಶಾಸ್ತ್ರ ನಡೆಯತ್ತಿದೆ.

ತನ್ನ ಆದ್ಯತೆಗಳನ್ನು ಕಾರ್ಯರೂಪಕ್ಕೆ ತರಲು ಪಂಚಾಯತ್‌ಗಳಿಗೆ ತಮ್ಮದೇ ಆಡಳಿತ ಸಿಬ್ಬಂದಿಗಳ ಅಗತ್ಯವಿದೆ. ಈಗ ಚಾಲ್ತಿಯಲ್ಲಿರುವ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುವ ಒಟ್ಟು ಸಿಬ್ಬಂದಿಗಳಲ್ಲಿ ಶೇಕಡಾ ಹತ್ತರಷ್ಟು ಸಿಬ್ಬಂದಿಗಳೂ ಪಂಚಾಯತ್ ರಾಜ್ ಇಲಾಖೆಯವರಲ್ಲ. ಇವರೆಲ್ಲಾ ಇತರ ಇಲಾಖೆಗಳಲ್ಲಿ ( ಶಿಕ್ಷಣ, ಆರೋಗ್ಯ, ನೀರಾವರಿ, ಕೃಷಿ ಇತ್ಯಾದಿ) ನೇಮಕಗೊಂಡ ಸಿಬ್ಬಂದಿಗಳು.  ಇತರ ಇಲಾಖೆಯ ಸಿಬ್ಬಂದಿಗಳು  ನಿಯೋಜನೆ ಮೇಲೆ ಪಂಚಾಯತಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಪಂಚಾಯತ್ ರಾಜ್ ಸಂಸ್ಥೆಗಳ ಆಶಯಕ್ಕೆ  ಅನುಗುಣವಾಗಿ ಕೆಲಸ ಮಾಡದಿದ್ದರೆ ಮಾಡಿಸುವ ಅಧಿಕಾರ ಪಂಚಾಯತಿಗಳಿಗಿಲ್ಲ.

1993 ಮತ್ತು 2014ರ ಅವಧಿಯಲ್ಲಿ ಗ್ರಾಮೀಣ ಕರ್ನಾಟಕ ತುಂಬಾ ಬದಲಾಗಿದೆ. ಇಂದು ರಾಜ್ಯದ ಒಟ್ಟು ಉತ್ಪನ್ನದಲ್ಲಿ ಕೃಷಿಯ ಪಾಲು ಶೇ 13ಕ್ಕೆ ಕುಸಿದಿದೆ. ಆದರೆ ರಾಜ್ಯದ ಅರ್ಧಕ್ಕಿಂತಲೂ ಹೆಚ್ಚಿನ ಕುಟುಂಬಗಳು ಗ್ರಾಮೀಣ ಪ್ರದೇಶದಲ್ಲೇ ಇವೆ. ಕೃಷಿ ಮೂಲದ ಆದಾಯ ಕಡಿಮೆಯಾದ ಕಾರಣ ಹೆಚ್ಚು ಜನ ವಲಸೆ ಹೋಗುತ್ತಿದ್ದಾರೆ. ಮೊಬೈಲ್, ಟಿವಿ ಮತ್ತು ಇತರ ಸಂಪರ್ಕ ಮಾಧ್ಯಮಗಳು ಗ್ರಾಮೀಣ ಜನರ ಬೇಕು ಬೇಡಗಳನ್ನು ಗಣನೀಯವಾಗಿ ಪ್ರಭಾವಿಸುತ್ತಿವೆ. ಜಾತಿ, ಲಿಂಗ ಮತ್ತು ಹಳ್ಳಿ ಪೇಟೆಗಳ ಗಡಿಗಳಿಂದು ಮಸುಕಾಗಿವೆ. ಈ ಬದಲಾವಣೆಗಳನ್ನು ಜೀರ್ಣಿಸಿಕೊಂಡು ಒಂದು ಸುಸ್ಥಿರ ಬದುಕನ್ನು ಕಟ್ಟಿಕೊಳ್ಳಲು ಗ್ರಾಮೀಣ ಜನರಿಗೆ  ಹೊಸ ಸಾಂಸ್ಥಿಕ ವ್ಯವಸ್ಥೆಯ ಅಗತ್ಯವಿದೆ. ಈ ದೃಷ್ಟಿಯಿಂದಲೂ 1993ರ ಪಂಚಾಯತ್ ಕಾಯ್ದೆಗೆ ತಿದ್ದುಪಡಿ ತರುವುದು ಅವಶ್ಯವಾಗಿತ್ತು.

1993ರ ಕಾಯ್ದೆಯಲ್ಲಿದ್ದ ಕೊರತೆಗಳನ್ನು ೨೦೧೪ರ ಉದ್ದೇಶಿತ ತಿದ್ದುಪಡಿ ಸರಿಪಡಿಸಿದೆಯೇ? ಎಂದು ಕೇಳಿದರೆ ನನ್ನ ಉತ್ತರ, ಹೌದು. ಹಣಕಾಸು, ಆಡಳಿತ ಹಾಗೂ ಸಾಂಸ್ಥಿಕ ವಿಕೇಂದ್ರೀಕರಣದ ಕೊರತೆಗಳು ಹಿಂದಿನ ಕಾಯ್ದೆಯ ಬಹುದೊಡ್ಡ ಕೊರತೆಗಳು. ಹಣಕಾಸಿನ ವಿಕೇಂದ್ರೀಕರಣ ಕುರಿತಂತೆ ಹೊಸ ತಿದ್ದುಪಡಿ ಸಮಿತಿ ಈ ಕೆಳಗಿನ ಬದಲಾವಣೆಗಳನ್ನು ಸೂಚಿಸಿದೆ.  ರಾಜ್ಯ ಸರ್ಕಾರದ ವಾರ್ಷಿಕ ಬಜೆಟ್‌ನ ಕನಿಷ್ಠ ಶೇ 30ನ್ನು ಸ್ಥಳೀಯ ಸರ್ಕಾರಗಳಿಗೆ ನೀಡಬೇಕು. ಈ ಶೇ 30ರಲ್ಲಿ ಶೇ50ರಷ್ಟನ್ನು ಪಂಚಾಯತಿಗಳಿಗೆ ನೇರ ಅಭಿವೃದ್ದಿ ಅನುದಾನ ರೂಪದಲ್ಲಿ ನೀಡಬೇಕು. ಅಂದರೆ ಯಾವುದೇ ಇಲಾಖೆಯ ಯೋಜನೆಯ ಭಾಗವಾಗಿ ಅಲ್ಲ.

ಈ ತಿದ್ದುಪಡಿಯ ಪರಿಣಾಮ  ಅರ್ಥವಾಗಬೇಕಾದರೆ  ರಾಜ್ಯದ ಬಜೆಟ್ ಮತ್ತು ಅದರಲ್ಲಿ ಸ್ಥಳೀಯ ಸಂಸ್ಥೆಗಳು ಮುಂದೆ ಪಡೆಯಬಹುದಾದ ಹಣಕಾಸಿನ ಅಂದಾಜು ಲೆಕ್ಕಚಾರವನ್ನು ನೋಡಬೇಕು. ಕೆಲವು ವರ್ಷದಿಂದ ರಾಜ್ಯದ ವಾರ್ಷಿಕ ಬಜೆಟ್ ಒಂದು ಲಕ್ಷ ಕೋಟಿ ಮೀರುತ್ತಿದೆ. ಒಂದು ಲಕ್ಷವೆಂದು ಪರಿಗಣಿಸಿದರೂ ಅದರಲ್ಲಿ ಸುಮಾರು ಮೂವತ್ತು ಸಾವಿರ ಕೋಟಿ ರೂಪಾಯಿಗಳನ್ನು (ಶೇ 30) ಸ್ಥಳೀಯ ಸರ್ಕಾರಗಳಿಗೆ ನೀಡಬೇಕಾಗುತ್ತದೆ. ಸ್ಥಳೀಯ ಸರ್ಕಾರಗಳಿಗೆ ನೀಡುವ ಅಭಿವೃದ್ಧಿ ಅನುದಾನವನ್ನು ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತಿಗಳ ನಡುವೆ  50:25:25 ಅನುಪಾತದಲ್ಲಿ ಹಂಚಿದರೆ ಗ್ರಾಮ ಪಂಚಾಯಿತಿಗೆ ಹದಿನೈದು ಸಾವಿರ ಕೋಟಿ, ತಾಲ್ಲೂಕು ಪಂಚಾಯಿತಿಗೆ ಏಳೂವರೆ ಸಾವಿರ ಕೋಟಿ ಮತ್ತು ಜಿಲ್ಲಾ ಪಂಚಾಯಿತಿಗೆ ಏಳೂವರೆ ಸಾವಿರ ಕೋಟಿ ರೂಪಾಯಿ ಅಭಿವೃದ್ಧಿ ಅನುದಾನ ಲಭ್ಯವಾಗಬಹುದು.

ರಾಜ್ಯದಲ್ಲಿ ಈಗ ಒಟ್ಟು 5629 ಗ್ರಾಮ ಪಂಚಾಯಿತಿಗಳಿವೆ. ಹದಿನೈದು ಸಾವಿರ ಕೋಟಿ ರೂಗಳನ್ನು ಎಲ್ಲಾ ಪಂಚಾಯಿತಿಗಳಿಗೆ ಸಮಾನಾಗಿ ಹಂಚಿದರೆ ಪ್ರತೀ ಗ್ರಾಮಪಂಚಾಯಿತಿ ವಾರ್ಷಿಕ ಎರಡು ಕೋಟಿ ಅರವತ್ತಾರು ಲಕ್ಷ ರೂಪಾಯಿಗಳ ಅಭಿವೃದ್ಧಿ ಅನುದಾನ ಪಡೆಯಬಹುದು. ಇದರ ಅರ್ಧದಷ್ಟನ್ನು ನೇರ ಅನುದಾನ ರೂಪದಲ್ಲಿ ನೀಡಬೇಕಾಗಿರುವುದರಿಂದ ಪ್ರತಿ ಪಂಚಾಯಿತಿ ಪ್ರತಿ ವರ್ಷ ಒಂದು ಕೋಟಿ ಮೂವತ್ತಮೂರು ಲಕ್ಷ ರೂಪಾಯಿ ನೇರ ಅಭಿವೃದ್ಧಿ ಅನುದಾನ ಪಡೆಯಬಹುದು.

ಪಂಚಾಯಿತಿ ಗಾತ್ರವನ್ನು ಹೆಚ್ಚಿಸಲು  (ಹನ್ನೆರಡು ಸಾವಿರದಿಂದ ಹದಿನೈದು ಸಾವಿರ ಜನಸಂಖ್ಯೆಗೆ ಒಂದು ಪಂಚಾಯಿತಿ) ತಿದ್ದುಪಡಿ ಸಮಿತಿ ಸೂಚಿಸಿದೆ. ಈ ಶಿಫಾರಸ್ಸು ಜಾರಿಗೊಂಡರೆ ಪಂಚಾಯಿತಿಗಳ ಸಂಖ್ಯೆ ಕಡಿಮೆಯಾಗುತ್ತದೆ ಮತ್ತು ಪ್ರತಿ ಪಂಚಾಯಿತಿ ಪಡೆಯುವ ವಾರ್ಷಿಕ ಅಭಿವೃದ್ಧಿ ಅನುದಾನ ಹಾಗೂ ನೇರ ಅನುದಾನಗಳು ಹೆಚ್ಚಾಗುತ್ತವೆ. ಇದರ ಜೊತೆಗೆ ಈಗ ಚಾಲ್ತಿಯಲ್ಲಿರುವ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಸಮಾನ ಮೊತ್ತವನ್ನು ನೀಡುವ ಕ್ರಮವನ್ನು ಬಿಟ್ಟು ಪಂಚಾಯಿತಿಯೊಂದರ ಅಭಿವೃದ್ಧಿಯ ಸ್ಥಿತಿಗತಿಗಳ ನೆಲೆಯಲ್ಲಿ ಅನುದಾನ ನೀಡಬೇಕೆಂದು ತಿದ್ದುಪಡಿ ಸಮಿತಿ ಶಿಫಾರಸ್ಸು ಮಾಡಿದೆ.

ಹಣಕಾಸು ಪಂಚಾಯಿತಿ ಮಟ್ಟಕ್ಕೆ ಬಂದ ಕೂಡಲೇ ಸ್ಥಳೀಯ ಸರ್ಕಾರ ನಿರ್ಮಾಣವಾಗುವುದಿಲ್ಲ. ಸಂಪನ್ಮೂಲವನ್ನು ಬಳಸಿಕೊಂಡು ಜನರಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕಾದರೆ ಪಂಚಾಯಿತಿಗಳಿಗೆ ತಮ್ಮದೇ ಸಿಬ್ಬಂದಿ ಬೇಕು. ಈಗ ಪಂಚಾಯಿತಿಯಲ್ಲಿ ದುಡಿಯುವ ಬಹುತೇಕರು ಬೇರೆ ಇಲಾಖೆಗಳ ನೌಕರರು. ಇವರು ಯಾವುದೇ ಸಂದರ್ಭದಲ್ಲೂ ತಮ್ಮ ಮಾತೃ ಇಲಾಖೆಗೆ ಹೋಗಬಹುದು. ಪಂಚಾಯಿತಿಗಳ ಈ ಸ್ಥಿತಿಯನ್ನು ಬದಲಾಯಿಸಿ ಅವು ತಮ್ಮದೇ ಸಿಬ್ಬಂದಿ ಹೊಂದಲು ಕರ್ನಾಟಕ ಪಂಚಾಯತ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್‌ ಅನ್ನು (ಕೆಪಿಎಎಸ್) ಸೃಷ್ಟಿಸಬೇಕೆಂದು ಸಮಿತಿ ಸಲಹೆ ನೀಡಿದೆ. 

ಪಂಚಾಯಿತಿಗಳು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಬೇಕಾಗಿರುವ ಒಟ್ಟು ಸಿಬ್ಬಂದಿ, ಈಗಾಗಲೇ ಕೆಲಸ ಮಾಡುತ್ತಿರುವ ಸಿಬ್ಬಂದಿ, ಇವರಲ್ಲಿ ಮೂಲ ಸಂಸ್ಥೆಗಳಿಗೆ ಹೋಗುವವರು, ಉಳಿಯುವವರು ಈ ಎಲ್ಲ ಅಂಶಗಳನ್ನು ಪರಿಗಣಿಸಿ ಪಂಚಾಯಿತಿಗಳ ಸಿಬ್ಬಂದಿ ಕೊರತೆಯನ್ನು ಕೆಪಿಎಎಸ್ ಗುರುತಿಸಬೇಕು. ಸಿಬ್ಬಂದಿಗಳ ಕೊರತೆ ತೀರ್ಮಾನವಾದ ನಂತರ ಸಿಬ್ಬಂದಿಗಳ ನೇಮಕಾತಿಗೆ ಕೆಪಿಎಎಸ್ ಕ್ರಮವಹಿಸಬೇಕು. ಇದರ ಜೊತೆಗೆ ಕರ್ನಾಟಕ ಪಂಚಾಯತ್ ಆಡಳಿತ ಮತ್ತು ತಾಂತ್ರಿಕ ಸೇವಾ ಮಂಡಳಿಯನ್ನು ಸ್ಥಾಪಿಸಲು ಸಮಿತಿ ಸಲಹೆ ನೀಡಿದೆ. ಈ ಮಂಡಳಿಯ ಮೂಲಕ ಪಂಚಾಯಿತಿ ಪ್ರತಿನಿಧಿಗಳು, ಅಧ್ಯಕ್ಷ ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಸದಸ್ಯರು, ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿಯ ಸಾಮರ್ಥ್ಯ ಅಭಿವೃದ್ಧಿ ನಿರಂತರವಾಗಿ ನಡೆಯುವುದು.

1993ರ ಕಾಯ್ದೆಯಲ್ಲಿ ಗ್ರಾಮ ಪಂಚಾಯಿತಿ, ತಾಲ್ಲೂಕು  ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳು ಶ್ರೇಣಿಕೃತವಾಗಿ ಜೋಡಿಸಲ್ಪಟ್ಟಿದ್ದವು. ಮೇಲಿನ ಸ್ತರದ ಪಂಚಾಯಿತಿಗಳು ಮತ್ತು ಅದರ ಪದಾಧಿಕಾರಿಗಳು ಹೆಚ್ಚಿನ ಮಾನ ಸಮ್ಮಾನ, ಅಧಿಕಾರ, ವೇತನ ಹೊಂದಿದ್ದರೆ ಕೆಳಗೆ ಬಂದಂತೆ ಇವೆಲ್ಲವೂ ಕಡಿಮೆಯಾಗುತ್ತಿತ್ತು. ಈ ಸ್ಥಿತಿಯನ್ನು ತಪ್ಪಿಸಿ ಮೂರು ಸ್ತರದ ಪಂಚಾಯಿತಿಗಳನ್ನು ಸಮಾನವಾಗಿ ರಚಿಸಲಾಗಿದೆ. ಎಲ್ಲ ಪಂಚಾಯಿತಿ ಪದಾಧಿಕಾರಿಗಳ ವೇತನ ಸಮಾನವಾಗಿರುತ್ತದೆ. ಆದರೆ ಅವರ ಪ್ರಯಾಣ ಮತ್ತು ಇತರ ಭತ್ಯೆಗಳು ಆಯಾಯ ಪಂಚಾಯಿತಿಗಳ ನೋಡಿಕೊಳ್ಳಬೇಕಾದ ಪ್ರದೇಶದ ವಿಸ್ತೀರ್ಣಕ್ಕೆ ಅನುಗುಣವಾಗಿ ಬದಲಾಗುತ್ತದೆ.

ಇಷ್ಟೇ ಅಲ್ಲ ಹಿಂದಿನ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿಯ ಮುಖ್ಯ ಅಧಿಕಾರಿಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ತಾಲ್ಲೂಕು ಪಂಚಾಯಿತಿಯ ಅಧಿಕಾರಿಯನ್ನು ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿಯ ಅಧಿಕಾರಿಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂದು ಕರೆಯಲಾಗುತ್ತಿದೆ. ಈ ಸಮಿತಿ ಸೂಚಿಸಿದ ಬದಲಾವಣೆ ಪ್ರಕಾರ ಎಲ್ಲ ಹಂತದ ಪಂಚಾಯತ್‌ಗಳ ಮುಖ್ಯ ಅಧಿಕಾರಿಗಳನ್ನು ಮುಖ್ಯ ಕಾರ್ಯದರ್ಶಿಗಳೆಂದು ಕರೆಯಲಾಗುವುದು.

ಹಿಂದಿನ, ಮೇಲಿನಿಂದ ಕೆಳಗೆ ಇಳಿಯುವ ಯೋಜನೆಯ ಬದಲು ಕೆಳಗಿನಿಂದ ಮೇಲೆ ಏರುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಪೂರಕವಾಗುವ ಸಾಂಸ್ಥಿಕ ಚೌಕಟ್ಟನ್ನು ತಿದ್ದುಪಡಿ ಸಮಿತಿ ಸೂಚಿಸಿದೆ. ವಾರ್ಡ್ ಸಭೆ ಜನರ ಬೇಕು ಬೇಡಗಳನ್ನು, ಆದ್ಯತೆಗಳನ್ನು ಪಟ್ಟಿ ಮಾಡುತ್ತದೆ. ವಿವಿಧ ವಾರ್ಡ್‌ಗಳ ಆದ್ಯತೆಗಳನ್ನು ಒಟ್ಟು ಸೇರಿಸಿ ಗ್ರಾಮದ ಯೋಜನೆಯನ್ನು ಸಿದ್ಧಪಡಿಸಲಾಗುವುದು. ಗ್ರಾಮದ ಯೋಜನೆಗಳನ್ನು ಒಟ್ಟು ಮಾಡಿ ಪಂಚಾಯಿತಿ ಯೋಜನೆ, ಪಂಚಾಯಿತಿಗಳ ಯೋಜನೆಗಳನ್ನು ಒಟ್ಟು ಮಾಡಿ ತಾಲ್ಲೂಕು ಯೋಜನೆ, ತಾಲ್ಲೂಕುಗಳ ಯೋಜನೆಗಳನ್ನು ಒಟ್ಟು ಮಾಡಿ ಜಿಲ್ಲಾ ಯೋಜನೆ ಹಾಗೂ ಜಿಲ್ಲಾ ಯೋಜನೆಗಳನ್ನು ಒಟ್ಟು ಮಾಡಿ ರಾಜ್ಯದ ಯೋಜನೆ ಸಿದ್ದಪಡಿಸಲಾಗುವುದು.

ವಿವಿಧ ಹಂತದ ಯೋಜನೆಗಳನ್ನು ಕ್ರೋಡೀಕರಿಸಲು ಹಿಂದೆ ಜಿಲ್ಲಾ ಯೋಜನಾ ಸಮಿತಿ ಮಾತ್ರ ಇತ್ತು. ಆದರೆ ತಾಲ್ಲೂಕು ಹಾಗು ರಾಜ್ಯ ಮಟ್ಟದಲ್ಲಿ ಯೋಜನೆಗಳನ್ನು ಕ್ರೋಡೀಕರಿಸಲು ಸಾಂಸ್ಥಿಕ ಚೌಕಟ್ಟು ಇರಲಿಲ್ಲ. ಈ ಕೊರತೆಯನ್ನು ನಿವಾರಿಸಲು ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಯನ್ನು ಮತ್ತು ರಾಜ್ಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಮಂಡಳಿಯನ್ನು ರಚಿಸಲು ಸಮಿತಿ ಸಲಹೆ ನೀಡಿದೆ.

ಇವುಗಳ ಜೊತೆಗೆ ಜನರ ಜಗಳಗಳನ್ನು ಪರಿಹರಿಸಲು ಗ್ರಾಮ ನ್ಯಾಯಾಲಯಗಳನ್ನು, ಜನರು ಮತ್ತು ಸ್ಥಳೀಯ ಸರ್ಕಾರಗಳ ನಡುವಿನ ಬಿಕ್ಕಟ್ಟನ್ನು ನಿವಾರಿಸಲು ಟ್ರಿಬ್ಯೂನಲ್‌ಗಳನ್ನು, ಪಂಚಾಯಿತಿ ಪ್ರತಿನಿಧಿಗಳು, ಪದಾಧಿಕಾರಿಗಳು ಮತ್ತು ಅಧಿಕಾರಿಗಳ ಅಧಿಕಾರ ದುರುಪಯೋಗ, ಭ್ರಷ್ಟಾಚಾರವನ್ನು ತನಿಖೆ ನಡೆಸಿ ನ್ಯಾಯ ನೀಡಲು ಒಂಬುಡ್ಸಮನ್‌ಗಳನ್ನು ನೇಮಿಸಲು ಸಮಿತಿ ಸಲಹೆ ನೀಡಿದೆ. 
ತಿದ್ದುಪಡಿ ಸಮಿತಿ  ನೀಡಿದ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಯಥಾರೂಪದಲ್ಲಿ ಜಾರಿಗೊಳಿಸಿದರೆ ಸ್ಥಳೀಯ ಸರ್ಕಾರ ನಿರ್ಮಾಣವಾಗುವುದು ಮಾತ್ರವಲ್ಲ ಇಡೀ ದೇಶಕ್ಕೆ ಕನಿಷ್ಠ ಸರ್ಕಾರ ಗರಿಷ್ಠ ಆಡಳಿತದ ಪರ್ಯಾಯ ಮಾದರಿ ಅಥವಾ ಅಭಿವೃದ್ಧಿಯ ಜನಪರ ಮಾದರಿಯನ್ನು ಕರ್ನಾಟಕ ಪರಿಚಯಿಸಿದಂತಾಗುತ್ತದೆ.

(ಜಾನಪದ ವಿಶ್ವವಿದ್ಯಾಲಯದ ಗ್ರಾಮೀಣಾಭಿವೃದ್ಧಿ ನಿರ್ವಹಣಾ ವಿಭಾಗದ ಮುಖ್ಯಸ್ಥರಾಗಿರುವ ಲೇಖಕರು ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ಸಮಿತಿಯ ಸದಸ್ಯರಲ್ಲೊಬ್ಬರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT