ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಡಶೇಸಿ ಕೆರೆ ಜಾಗ ಅತಿಕ್ರಮಣ

ತೆರವಿಗೆ ನೀರಾವರಿ ಇಲಾಖೆಗೆ ಪುರಸಭೆ ಸೂಚನೆ
Last Updated 28 ಫೆಬ್ರುವರಿ 2015, 10:57 IST
ಅಕ್ಷರ ಗಾತ್ರ

ಕುಷ್ಟಗಿ: ತಾಲ್ಲೂಕಿನ ಮದಲಗಟ್ಟಿ ಗ್ರಾಮದ ಬಳಿ ನಿಡಶೇಸಿ ನೀರಾವರಿ ಕೆರೆ ಅಂಗಳ ಪ್ರದೇಶವನ್ನು ಅತಿಕ್ರಮಣ ಮಾಡಲಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಈ ಕೆರೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಬರುತ್ತಿದ್ದು, ಸುಮಾರು ಮೂರು ಎಕರೆ ಪ್ರದೇಶದಷ್ಟು ಜಮೀನನ್ನು ವಿಸ್ತರಿಸಿಕೊಂಡಿರುವ ಜಮೀನಿನ ಮಾಲೀಕರು ಕೆರೆಗೆ ಸಂಬಂ­ಧಿಸಿದ ಪ್ರದೇಶವನ್ನು ಅತಿಕ್ರಮಣ ಮಾಡಿ­ಕೊಂಡಿರುವುದು ಮತ್ತು ಕೆರೆಯ ಸುತ್ತಲೂ ನಿರ್ಮಿಸಲಾಗಿದ್ದ ರಸ್ತೆಯನ್ನೂ ಸಹ ಹಾಳು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಸಣ್ಣ ನೀರಾವರಿ ಇಲಾಖೆಗೆ ಸೇರಿದ ಪ್ರದೇಶ ಎಂಬ ಕಾರಣಕ್ಕೆ ಕುಷ್ಟಗಿ ಪುರ­ಸಭೆ ಕೆರೆ ದಂಡೆ ಬಳಿ ಕೊಳವೆ­ಬಾವಿಗಳನ್ನು ತೋಡಿದ್ದು. ಅಲ್ಲಿಂದ ಪಟ್ಟಣಕ್ಕೆ ಕುಡಿಯುವ ನೀರು ಸರಬ­ರಾಜು ಆಗುತ್ತಿದೆ. ಅತಿಕ್ರಮಣದಿಂದ ರಸ್ತೆ ಇಲ್ಲವಾಗಿದೆ. ಅಲ್ಲದೇ ಪುರಸಭೆಗೆ ಸೇರಿದ ಕೊಳವೆಬಾವಿ ಮತ್ತು ವಿದ್ಯುತ್‌ ಕಂಬಗಳೆಲ್ಲ ಅತಿಕ್ರಮಿಸಿಕೊಂಡಿರುವ ಪ್ರದೇಶದಲ್ಲಿ ಉಳಿದುಕೊಂಡಿದ್ದು ನಿರ್ವಹಣೆ ಕೆಲಸಕ್ಕೆ ಅಡ್ಡಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ವಿಷಯ ಕುರಿತಂತೆ ಗುರುವಾರ ಸ್ಥಳಕ್ಕೆ ಭೇಟಿ ನೀಡಿದ್ದ ಪುರಸಭೆ ಮುಖ್ಯಾಧಿಕಾರಿ ಮಹಾದೇವ ಭೀಸೆ, ಸರ್ಕಾರದ ಕೊಳವೆಬಾವಿಗಳಿದ್ದ ಪ್ರದೇಶ­ವನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು ಈ ಬಗ್ಗೆ ಪರಿಶೀಲಿಸುವಂತೆ ಮಾಹಿತಿ ನೀಡಿದ್ದಾರೆ.

ಈ ಕಾರಣಕ್ಕೆ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ ಸಹ ಸ್ಥಳಕ್ಕೆ ಭೇಟಿ ನೀಡಿದ್ದು ಸರ್ವೆ ನಡೆಸಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಭೀಸೆ ವಿವರಿಸಿದರು.

ಕುಡಿಯುವ ನೀರು ಪೂರೈಸುವ ಕೊಳವೆಬಾವಿ ಮತ್ತು ಪಂಪ್‌­ಹೌಸ್‌­ಗಳು ಸಹ ಸದ್ಯ ಒತ್ತುವರಿಯಾಗಿರುವ ಪ್ರದೇಶದಲ್ಲಿದ್ದು ದುರಸ್ತಿ ಮತ್ತಿತರೆ ನಿರ್ವಹಣೆ ಕೆಲಸ ಕಾರ್ಯಗಳಿಗೆ ಅನಾನುಕೂಲವಾಗುತ್ತದೆ. ಬೇಸಿಗೆ­ಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಸಮಸ್ಯೆಯನ್ನು ಶೀಘ್ರದಲ್ಲಿ ಇತ್ಯರ್ಥ­ಪಡಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಮುಖ್ಯಾಧಿಕಾರಿ ಹೇಳಿದರು.

ಈ ವಿಷಯ ಕುರಿತು ತಹಶೀಲ್ದಾರ್‌ ವೇದವ್ಯಾಸ ಮುತಾಲಿಕ್‌ ಅವರನ್ನು ಸಂಪರ್ಕಿಸಿದಾಗ ತಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ತಿಳಿಸಿದರು. ಆದರೆ ಕೆರೆ ಪ್ರದೇಶವನ್ನು ಅತಿಕ್ರಮಣ­ಗೊಳಿಸಲಾಗುತ್ತಿದೆ ಎಂಬುದನ್ನು ಸಣ್ಣ ನೀರಾವರಿ ಇಲಾಖೆ ಗಮನಕ್ಕೆ ತಂದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT